ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಆಗಸದಲ್ಲೊಬ್ಬ ಹೊಸ ಅತಿಥಿ!
ಆಗಸದಲ್ಲೊಬ್ಬ ಹೊಸ ಅತಿಥಿ ಕಾಣಿಸಿಕೊಂಡಿದ್ದಾನೆ! ಹೋಮ್ಸ್ ಧೂಮಕೇತು ಒಂದೆರಡು ದಿವಸದಲ್ಲಿ ಪ್ರಕಾಶದಲ್ಲಿ ಸುಮಾರು ಹತ್ತುಲಕ್ಷ ಪಟ್ಟು ಹೆಚ್ಚಾಗಿ, ಬರಿಕಣ್ಣಿಗೆ ಸುಲಭವಾಗಿ ಕಾಣುವ ನಕ್ಷತ್ರದಂತಾಗಿದೆ. ಇನ್ನೂ ಮುಂದೆ ಇದರ ಬೆಳವಣಿಗೆ ಹೇಗಾಗಿತ್ತೋ ಕಾದು ನೋಡಬೇಕಾದ ಸಂಗತಿ.
ಇನ್ನೂ ಸದ್ಯಕ್ಕೆ ಬಾಲ ಏನೂ ಕಾಣದಿದ್ದರೂ, ಸುಮಾರು ಇಪ್ಪತ್ತೈದು ವರ್ಷಗಳಿಂದ ಬಂದಿರುವ ಧೂಮಕೇತುಗಳಲ್ಲೆಲ್ಲ ಇದು ಅತೀ ಪ್ರಕಾಶಮಾನವಾದದ್ದು ಅನ್ನುವುದು ಮಹತ್ವದ ಸಂಗತಿ.
ಇದು ಈಗ ಪರ್ಸಿಯಸ್ ತಾರಾಪುಂಜದಲ್ಲಿದೆ. ಆಕಾಶದ ರಾಶಿಗಳ ಪರಿಚಯವಿದ್ದವರಿಗೆ, ಇದು ಒಂದು ಹೊಸ ಹಳದಿ ಬಣ್ಣದ ನಕ್ಷತ್ರದಂತೆ ತೋರುತ್ತದೆ. ಇಲ್ಲದವರಿಗೆ ಇದರಲ್ಲೇಪ್ಪ ಹೆಚ್ಚುಗಾರಿಕೆ ಎನ್ನಿಸಬಹುದು. ಆದರೆ, ಮುಂಬರುವ ದಿನಗಳಲ್ಲಿ ಇದು ಯಾವ ರೀತಿ ಬದಲಾಗಬಹುದು ಎನ್ನುವುದರ ಮೇಲೆ, ಇದು ಜನಮನದಲ್ಲಿ ಉಳಿಯುತ್ತೋ ಇಲ್ಲವೋ ಅನ್ನೋದು ನಿರ್ಧಾರವಾಗುತ್ತೆ.
ಬೆಂಗಳೂರಿನಿಂದ (ಅಥವಾ ಭಾರತದಲ್ಲಿ ಸುಮಾರು ಎಲ್ಲೇ ಆಗಲಿ) ನೋಡುವವರಿಗೆ, ಪರ್ಸಿಯಸ್ ಈಗ ಸಂಜೆ ಸೂರ್ಯ ಮುಳುಗಿ ಎರಡು ಮೂರು ಗಂಟೆಗಳಲ್ಲಿ ಉತ್ತರ-ವಾಯುವ್ಯ ದಿಸೆಯಲ್ಲಿ ಹುಟ್ಟುತ್ತೆ. ನಡು ರಾತ್ರಿಯ ಹೊತ್ತಿಗೆ ಉತ್ತರಾಕಾಶದಲ್ಲಿ, ಧ್ರುವ ನಕ್ಷತ್ರದ ಮೇಲೆ ನೋಡಲು ಅನುಕೂಲವಾದ ಸ್ಥಾನದಲ್ಲಿರುತ್ತೆ. (ಇದು ನನ್ನ ಅಂದಾಜು).
ನೆನ್ನೆ ರಾತ್ರಿ ಚಂದ್ರನ ಅಬ್ಬರದ ಬೆಳಕಿನಲ್ಲೇ ಇದು ಸೊಗಸಾಗಿ ಬರಿಗಣ್ಣಿಗೇ ಕಂಡಿತು. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ಇದರಿಂದ ಒಳ್ಳೇ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇನೆ. ಕಳೆದ ೪೮ ಗಂಟೆಗಳಲ್ಲಾದ ಬದಲಾವಣೆ ಮುಂದುವರೆದರೆ, ಇದು ಬಹಳ ಪ್ರಕಾಶಮಾನ ಧೂಮಕೇತುವಾಗಬಹುದೆಂಬ ಊಹೆ ಇದೆ.
ಆಸಕ್ತರು ಇದರ ಮೇಲಿರುವ ಅಂತರ್ಜಾಲ ಕೊಂಡಿಗಳನ್ನು ನೋಡಿ, ಓದಿ. ನಮ್ಮ ಕಣ್ಣ ಮುಂದಿರುವ ಸೋಜಿಗವನ್ನು ನೋಡಲು ಮರೆಯದಿರಿ!
-ಹಂಸಾನಂದಿ
ಕೆಳಗಿರುವುದು ಸ್ಕೈ ಅಂಡ್ ಟೆಲಿಸ್ಕೋಪ್ ಪತ್ರಿಕೆಯಿಂದ, ಈ ಧೂಮಕೇತುವನ್ನು ಎಲ್ಲಿ ನೋಡಬಹುದೆಂದು ನೋಡಲು ಅನುಕೂಲವಾಗುವ ಉತ್ತರಾಕಾಶದ ಪಟ.


- hamsanandi ರವರ ಬ್ಲಾಗ್
- Login or register to post comments
- 464 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಆಗಸದಲ್ಲೊಬ್ಬ ಹೊಸ ಅತಿಥಿ!
ಒಳ್ಳೆಯ ಮಾಹಿತಿ! ನಾನು ಗೂಗಲ್ ನ್ಯೂಸ್ ಆಗಾಗ ಓದುತ್ತಿದ್ದರೂ ಈ ಸುದ್ದಿ ತಪ್ಪಿ ಹೋಯ್ತು.
ಧನ್ಯವಾದಗಳು ಹಂಸಾನಂದಿಯವರೆ.
ಅಂತರಿಕ್ಷದಲ್ಲಿ ಕಾಣಿಸಿಕೊಂಡ ನೂರಾರು ಅತಿಥಿಗಳು
ಈ ಲೇಖನ ಓದುತ್ತಿರುವಂತೆಯೇ ಇಂದು ನಾನು ಓದಿದ ಇನ್ನೊಂದು ಸುದ್ದಿಯ ನೆನಪಾಯಿತು. 'ನಾಸಾ'ದ "ಸ್ಪಿಟ್ಸರ್" ಮತ್ತು "ಚಂದ್ರ" (ಭಾರತೀಯ ಚಂದ್ರಶೇಖರ್ ಅವರ ನೆನಪಿಗೆ ಹೆಸರು ಪಡೆದ) ಟೆಲಿಸ್ಕೋಪುಗಳನ್ನು ಬಳಸಿ ನೂರಾರು ಹೊಸ ಬ್ಲಾಕ್ ಹೋಲ್ ಗಳನ್ನು ಕಂಡುಹಿಡಿದಿದ್ದಾರಂತೆ. ಕಣ್ಣಿಗೆ ಕಾಣಿಸದ ಅಂತರಿಕ್ಷದ ನೂರಾರು ಹೊಸ ಅತಿಥಿಗಳು - ಸ್ವಾಗತಿಸಿ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಆಗಸದಲ್ಲೊಬ್ಬ ಹೊಸ ಅತಿಥಿ!
ಇವತ್ತು ಏಕೋ ಹೋಮ್ಸ್ ಧೂಮಕೇತು ನೆನ್ನೆಗಿಂತ ಕಡಿಮೆ ಪ್ರಕಾಶಮಾನವಾಗಿ ಕಂಡಿತು.
ಇದೇ ರೀತಿ ಮುಂದುವರೆದರೆ, ಇನ್ನು ಹೆಚ್ಗು ದಿನ ನೋಡುವ ಅವಕಾಶ ದೊರೆಯಲಾರದು! ಬೇಗ ನೋಡಿಬಿಡಿ.
-ಹಂಸಾನಂದಿ
ಉ: ಆಗಸದಲ್ಲೊಬ್ಬ ಹೊಸ ಅತಿಥಿ!
ಏನು ನೋಡೋದ್ರೀ? ಬೆಂಗಳೂರಿನ ರಾತ್ರಿಯ ಬೆಳಕಿನ ಪರದೇಲಿ ಆಗಸದಲ್ಲಿರೋದು ಏನೂ ಕಾಣಲ್ಲ. ಟೆಲಿಸ್ಕೋಪು ಹಿಡಿದು ನೋಡಬೇಕಷ್ಟೆ - ನಮ್ಮ ಹೊಸ ಟೆಲಿಸ್ಕೋಪು ಇನ್ನೂ ಬ್ಯುಲ್ಡ್ ಆಗ್ತಾ ಇದೆ. ಜನವರಿಯಷ್ಟರಲ್ಲಿ ಬಹುಶಃ ರೆಡಿಯಾಗಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಆಗಸದಲ್ಲೊಬ್ಬ ಹೊಸ ಅತಿಥಿ!
ಇಲ್ಲ ರೀ - ಬೆಳಕು ಇದ್ದರೂ ಕಾಣಬೇಕು ೨-೩ ನೇ ಮ್ಯಾಗ್ನಿಟ್ಯೂಡ್ ನಲ್ಲಿದೆ ಇನ್ನೂವೇ. ನಿಮಗೆ ಸಪ್ತರ್ಷಿ ಮಂಡಲ ಕಾಣೋ ಹಾಗಿದ್ದರೆ, ಕೃತ್ತಿಕಾ ನಕ್ಷತ್ರ ಕಾಣೋ ಹಾಗಿದ್ರೆ, ಇದೂ ಕಾಣಬೇಕು.
ನೀವು ಸರಿಯಾದ ಜಾಗದಲ್ಲಿ ನೋಡಿದಿರಾ
?
-ಹಂಸಾನಂದಿ
ಉ: ಆಗಸದಲ್ಲೊಬ್ಬ ಹೊಸ ಅತಿಥಿ!
ಆಕಾಶ ನೋಡ್ದೆ ಬಾಳಾ ದಿನ ಆಯ್ತು. ಇವತ್ತು ನೋಡಕ್ಕೆ ಟ್ರೈ ಮಾಡ್ತೀನಿ. ಈ ದೇಸದಾಗೆ ಯಾವ ನಕ್ಷತ್ರ ಎಲ್ಲಿರುತ್ತೋ .. ...ಹುಡುಕತೀನಿ!
ನಮ್ಮ ಗಮನವನ್ನು ಈ ಕಡೆ ಸೆಳೆದಿದ್ದಕ್ಕೆ ವಂದನೆಗಳು!
ಸವಿತೃ
ಉ: ಆಗಸದಲ್ಲೊಬ್ಬ ಹೊಸ ಅತಿಥಿ!
ಹೋಮ್ಸ್ ಧೂಮಕೇತುವಿನ ವೈಭವ ಮೂರುವಾರಗಳ ಬಳಿಕ ಮುಗಿದಿದೆ. ಕಳೆದ ರಾತ್ರಿ ಅದು ಬರಿಗಣ್ಣಿಗೆ ಕಾಣಲಿಲ್ಲ. ಅದಕ್ಕೆ ಮೊದಲು ಮೂರು ನಾಕು ದಿನ ಮೋಡಗಳ ಗದ್ದಲದಲ್ಲಿ ಕಂಡಿರಲಿಲ್ಲ. ಬೈನಾಕುಲರ್ ನಲ್ಲಿ ಸ್ವಲ್ಪ ಮಸುಕಾಗಿ ಕಂಡಿತಾದರೂ, ಇನ್ನು ಹೋಮ್ಸ್ ಧೂಮಕೇತುವನ್ನು ಮರೆಯುವುದೇ ಸರಿ. ಏನಿದ್ದರೂ ದೊಡ್ಡ ದೂರದರ್ಶಕವಿದ್ದವರು ಇನ್ನು ಮುಂದೆ ಅದನ್ನು ವೀಕ್ಷಿಸುವುದನ್ನು ಮುಂದುವರಿಸಬಹುದಷ್ಟೇ.
-ಹಂಸಾನಂದಿ