"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಸಂಪದ ಆರ್ಕೈವಿನಿಂದ

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ನಿಮ್ಮೆಲ್ಲರಂತೆ ನಾನೊಬ್ಬ ಕನ್ನಡಿಗ. ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wo...

ಬ್ರೋಚೇವಾರೆವರುರಾ ನಿನುವಿನಾ?

ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು, ಬ್ರೋಚೇವಾರೆವರುರಾ, ಸಾಮಜವರಗಮನ ಮೊದಲಾದ ಕೃತಿಗಳು ಎಲ್ಲರ ಬಾಯಲ್ಲೂ ನಲಿದಾಡಿದ್ದು ೮೦ರ ದಶಕದ ಸಂಗತಿ.

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.

ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ.

ವಾಸುದೇವಾಚಾರ್ಯರು ಸುಮಾರು ೨೦೦ಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ವರ್ಣ,ಕೃತಿ,ಜಾವಳಿ, ರಾಗಮಾಲಿಕೆಗಳು, ತಿಲ್ಲಾನ ಮೊದಲಾದ ಎಲ್ಲ ಪ್ರಕಾರಗಳೂ ಸೇರಿವೆ. ಅವರ ಎಲ್ಲ ರಚನೆಗಳ ಪಟ್ಟಿಯನ್ನು ಇಲ್ಲಿ ಚಿಟಕಿಸಿ ನೋಡಬಹುದು. ಕರುಣಿಸೌ ತಾಯೇ ಎಂಬ ಸರಸ್ವತಿ ಮನೋಹರಿ ರಾಗದ ರಚನೆಯನ್ನುಳಿದು, ಇನ್ನೆಲ್ಲಕ್ಕೂ ಅವರು ತೆಲುಗು ಅಥವಾ ಸಂಸ್ಕೃತ ಭಾಷೆಯನ್ನು ಉಪಯೋಗಿಸಿದ್ದಾರೆ.

ಹೇಗೆ ತ್ಯಾಗರಾಜರು ತಮ್ಮ ಕಾಲದಲ್ಲಿ ಇನ್ನೂ ಹೆಚ್ಚು ಬಳಕೆಯಲ್ಲಿಲ್ಲದ ಖರಹರಪ್ರಿಯ, ಹರಿಕಾಂಭೋಜಿ, ವಾಗಧೀಶ್ವರಿ ಮೊದಲಾದ ಮೇಳಕರ್ತ ರಾಗಗಳಲ್ಲಿ ರಚನೆಗಳನ್ನು ಮಾಡಿ ಅವುಗಳನ್ನು ಪ್ರಚಲಿತಕ್ಕೆ ತಂದರೋ, ಹಾಗೆಯೇ ವಾಸುದೇವಾಚಾರ್ಯರು ತ್ಯಾಗರಾಜರು ಕೈಹಾಕದಿದ್ದ ಸಿಂಹೇಂದ್ರ ಮಧ್ಯಮ,ಧರ್ಮವತಿ, ನಾಟಕಪ್ರಿಯ, ರಿಷಭಪ್ರಿಯ ಮೊದಲಾದ ಮೇಳರಾಗಗಳಲ್ಲಿ ರಚನೆಗಳನ್ನು ಮಾಡಿ, ಆ ರಾಗಗಳಿಗೆ ಒಳ್ಳೆ ಲಕ್ಷ್ಯವನ್ನು ಕಲ್ಪಿಸಿಕೊಟ್ಟರು.

ಅದೇ ರೀತಿ, ಹೇಗೆ ತ್ಯಾಗರಾಜರು ಜನ್ಯ ರಾಗಗಳಲ್ಲಿ ಹೊಸ ಸಾಧ್ಯತೆಗಳನ್ನು ಊಹಿಸಿಕೊಂಡು ಅದರಲ್ಲೆಲ್ಲ ರಚನೆಗಳನ್ನು ಮಾಡಿದರೋ, ಅದೇ ರೀತಿ ವಾಸುದೇವಾಚಾರ್ಯರೂ ಸುನಾದವಿನೋದಿನಿ ಎಂಬೊಂದು ಹೊಸರಾಗದಲ್ಲಿ ದೇವಾದಿದೇವ ಶ್ರೀವಾಸುದೇವ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರ ಅರ್ಥವನ್ನು ಡಾ.ಎಮ್.ಬಾಲಮುರಳಿಕೃಷ್ಣ ಅವರು ವಿವರಿಸುವುದನ್ನು ಇಲ್ಲಿ ನೋಡಬಹುದು.

 

ಹಾಗೇ ತಮ್ಮ ಗುರು ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರು ಕಲ್ಪಿಸಿದ ಕದನಕುತೂಹಲ ರಾಗದಲ್ಲೂ, ನೀವೇ ರಕ್ಷಕುಡನಿ ಎನ್ನುವ ವರ್ಣವನ್ನೂ, ನೀಕೇಲ ದಯರಾದು ಎನ್ನುವ ಕೃತಿಯನ್ನೂ ರಚಿಸಿದ್ದಾರೆ. ಈ ರಚನೆಯನ್ನು ನೀವು ಎಮ್.ಎಸ್.ಶೀಲಾ ಅವರ ಕಂಠದಲ್ಲಿ ಇಲ್ಲಿ ಚಿಟಕಿಸಿ ಕೇಳಬಹುದು. ಚಿತ್ತಾಕರ್ಷಕ ಚಿಟ್ಟೆಸ್ವರವನ್ನೂ, ಕಡೆಯಲ್ಲಿರುವ ವಾಸುದೇವ ಎನ್ನುವ ಅಂಕಿತವನ್ನೂ ಗಮನಿಸಿ.

ವಾಸುದೇವಾಚಾರ್ಯರು ಮೈಸೂರಿನ ಅರಮನೆಯಲ್ಲಿ ದೀರ್ಘಕಾಲ ಆಸ್ಥಾನ ವಿದ್ವಾಂಸರಾಗಿದ್ದವರು. ಕಡೆಯ ಅರಸರಾದ ಜಯಚಾಮರಾಜೇಂದ್ರ ಒಡೆಯರಿಗೆ ಸಂಗೀತಗುರುಗಳೂ ಆಗಿದ್ದರು. ನಂತರ, ಒಡೆಯರು ತಾವೇ ಸಂಗೀತರಚನೆಗಳನ್ನು ಮಾಡುವಾಗ,ಮೊದಲಿಗೆ ಅವರು ಅದನ್ನು ಕೇಳಿಸುತ್ತಿದ್ದುದ್ದೇ ವಾಸುದೇವಾಚಾರ್ಯರಿಗೆ. ನಂತರ,ಅವರ ಅಭಿಪ್ರಾಯವನ್ನು ಕೇಳಿ ಅಗತ್ಯವಿದ್ದರೆ ರಚನೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುತ್ತಿದ್ದರಂತೆ. ಮೈಸೂರು ಅರಮನೆಯಲ್ಲಿ, ಮತ್ತೆ ಬೇರೆಡೆಯಲ್ಲೆಲ್ಲ ಅವರು ಕಂಡ ಕಲಾವಿದರ ಬಗ್ಗೆ, "ನಾ ಕಂಡ ಕಲಾವಿದರು" ಎಂಬ ಪುಸ್ತಕವೊಂದನ್ನು ಕೂಡ ಬರೆದಿದ್ದರೆ. ಆಸಕ್ತರು ಇದನ್ನು ಓದಿ ಅನ್ನುವ ಶಿಫಾರಸ್ಸು ನನ್ನದು. ಇನ್ನು. ಕೃತಿಗಳ ಬಗ್ಗೆ ಬರೀ ಮಾತಾಡಿ, ಹೆಚ್ಚಿಗೆ ಕೇಳಿಸಲಿಲ್ಲ ಎನ್ನುವ ದೂರು ನಿಮ್ಮದಾಗಿದ್ದರೆ, ಈ ಕೆಳಗಿನ ಕೊಂಡಿಯನ್ನು ಚಿಟಕಿಸಿ.

ವಾಸುದೇವಾಚಾರ್ಯರ ಕೃತಿಗಳು - ನನ್ನ ಮೆಚ್ಚಿನ ಐದು ರಚನೆಗಳು.

-ಹಂಸಾನಂದಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬ್ರೋಚೇವಾರೆವರುರಾ ನಿನುವಿನಾ?

rameshbalaganchi's picture

ಹಂಸಾನಂದಿಯವರೆ,

"ತಮ್ಮ ಗುರು ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರು ಕಲ್ಪಿಸಿದ ಕದನಕುತೂಹಲ ರಾಗದಲ್ಲೂ,"

ನಾನು ಇದನ್ನು "ಕಥನಕುತೂಹಲ" ಎಂಬ ಹೆಸರಿನಲ್ಲಿ ಕೇಳಿದ್ದೆನಲ್ಲ! ಇವೆರಡರಲ್ಲೆ ಯಾವುದು ಸರಿಯಾದ ಹೆಸರು?
"ಯೂ ಟ್ಯೂಬ್"ನಲ್ಲಿ ಮಾತಾಡಿರುವ ಶ್ರೀ ಬಾಲಮುರಳಿಕೃಷ್ಣ ಅವರು "ದೇವಾಧಿದೇವ ಶ್ರೀವಾಸುದೇವ.........ಕಾವುಮಯ್ಯ ನನ್ನು ಕರುಣಾಸಮುದ್ರ" ಎಂದಿದ್ದು ಕೇಳಿಸಿತು.
ನಾನು ಕೇಳಿದ ಹಾಡಿನಲ್ಲಿ . . . . . . . "ಕಾವುಮಯ್ಯ ನನ್ನು ಕರುಣಾಲವಾಲ" ಅಂತ ಇತ್ತು. ಈ ಪಾಠಾಂತರವೂ ಇದೆಯೆ?

ಬ್ರೋಚೇವಾರೆವರುರಾ ನನ್ನ ಮೆಚ್ಚಿನ ಹಾಡು. ನಿಮಗೆ ಗೊತ್ತಿಲ್ಲದೆ ಇರುವುದಿಲ್ಲ ಅಂದುಕೊಂಡಿದ್ದೀನಿ. Music India online ನವರು ಇತ್ತೀಚೆಗೆ ಪರೀಕ್ಷಾರ್ಥ ಬಿಡುಗಡೆ ಮಾಡಿದ (Beta version) Rhydhun ಎಂಬ playerನಲ್ಲಿ ಕರ್ನಾಟಕ ಮತ್ತು ದಕ್ಷಿಣಾದಿ ಶಾಸ್ತ್ರೀಯ ಸಂಗೀತದ ಸುಗ್ಗಿಯೇ ಇದೆ. ನನ್ನ ಬೆಳಗು ಮತ್ತು ಸಂಜೆಯ ಸ್ವಲ್ಪ ಸಮಯ ಇದರಲ್ಲಿ "ಬ್ರೋಚೇವಾರೆವರು ರಾ" ಮತ್ತು "ನಗುಮೋಮು"
ಕೇಳುವುದರಲ್ಲಿಯೇ ಕಳೆಯುತ್ತದೆ.
ಒಂದು ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು

"ಏರಿದವನು ಚಿಕ್ಕವನಿರಬೇಕು"

ಉ: ಬ್ರೋಚೇವಾರೆವರುರಾ ನಿನುವಿನಾ?

hamsanandi's picture

ರಮೇಶ ಅವರೆ,

ನೀವು ಹೇಳುವ ಹಾಗೆ, ಕಥನ ಕುತೂಹಲ ಎನ್ನುವ ಹೆಸರನ್ನೂ ನಾನು ಕೇಳಿದ್ದೇನೆ. ರಾಗಗಳ ಹೆಸರುಗಳಲ್ಲಿ ಹೀಗೆ ಸ್ವಲ್ಪ ಬದಲಾವಣೆ ದೇಶ-ಕಾಲಗಳಲ್ಲಿ ಆಗುವುದೂ ಸಹಜವೇ ( ಉದಾ: ಶಹನ- ಸಹಾನ, ದರ್ಬಾರು- ದರಬಾರು, ಕಾಂಭೋಜಿ- ಕಾಂಬೋದಿ-ಕಾಮೋದರಿ, ಝಂಝೂಟಿ- ಸೆಂಚುರುಟಿ ಇತ್ಯಾದಿ). ಕುತೂಹಲ ಎಂಬ ಮೊದಲೇ ಇದ್ದ ರಾಗದಿಂದ ಪ್ರೇರಿತರಾಗಿ ಕಥನ (ಅಥವಾ ಕದನ) ಕುತೂಹಲ ರಾಗವನ್ನು ಪಟ್ಟಣಂ ಅವರು ಕಲ್ಪಿಸಿಕೊಂಡಿದ್ದಾಗಿ ಹೇಳಲಾಗಿದೆ.

ಇನ್ನು ಕರುಣಾಲವಾಲ ಎಂಬ ಪಾಠವನ್ನೇ ನಾನೂ ಹೆಚ್ಚಾಗಿ ಕೇಳಿರುವುದು. ಪುಸ್ತಕಗಳಲ್ಲಿ ಹೇಗಿದೆಯೋ ನೋಡಬೇಕು. ಆದರೆ, ಕರುಣಾಲವಾಲ ಮತ್ತು ಕರುಣಾ ಸಮುದ್ರ ಇವುಗಳಲ್ಲಿ ಅರ್ಥ ವ್ಯತ್ಯಾಸ ಹೆಚ್ಚಿರುವಂತೆ ಕಾಣದು. ಆದರೂ, ವಾಗ್ಗೇಯಕಾರರು ಬರೆದಂತೆ ಹಾಡುವುದು ಅವರಿಗೆ ನಾವು ಸಲ್ಲಿಸಬೇಕಾದ ಗೌರವಗಳಲ್ಲೊಂದು.

Rhydhun ವಿಷಯ ತಿಳಿಸಿದ್ದಕ್ಕೆ , ಮತ್ತೆ ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು :) ನಾನು ಕೊಟ್ಟಿರುವ ಇನ್ನೊಂದು ಬರಹದ ಕೊಂಡಿಯಲ್ಲಿ, ಬ್ರೋಚೇವಾರೆವರುರಾ ಕೃತಿಯನ್ನೂ ಇನ್ನೂ ನಾಲ್ಕು ಇತರ ರಚನೆಗಳ್ಳೊಂದಿಗೆ ಕೇಳಬಹುದು.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wor...

ಉ: ಬ್ರೋಚೇವಾರೆವರುರಾ ನಿನುವಿನಾ?

srivathsajoshi's picture

"ಇದನ್ನು ಕಥನಕುತೂಹಲ ಎಂಬ ಹೆಸರಿನಲ್ಲಿ ಕೇಳಿದ್ದೆನಲ್ಲ! ಇವೆರಡರಲ್ಲೆ ಯಾವುದು ಸರಿಯಾದ ಹೆಸರು?"

’ಕದನಕುತೂಹಲ’ ಸರಿ. ಈ ರಾಗವು ಎಷ್ಟೊಂದು dynamic ಎಂದರೆ ಯುದ್ಧಕ್ಕೆ ಹೊರಟಿರುವ ಸೈನಿಕರಲ್ಲಿರುವ ಉತ್ಸಾಹ (ಕೌತುಕ ಸಹ)ದಂತೆ.

ಕದನಕುತೂಹಲ, ರವಿಚಂದ್ರಿಕಾ ಮುಂತಾದುವು ಬಹುಶಃ fast pace ಲಯಕ್ಕೆ ಹೇಳಿಮಾಡಿಸಿದಂತಹ ರಾಗಗಳು. ’ರಘುವಂಶಸುಧಾಂಬುಧಿ...’, ’ನೀರವದಿಸುಖದ...’ ಮುಂತಾದ ಕೃತಿಗಳಿದ್ದರೆ ಕರ್ನಾಟಕಸಂಗೀತಕಚೇರಿ ಬಹಳ ಇಷ್ಟವಾಗುತ್ತದೆ!

ಉ: ಬ್ರೋಚೇವಾರೆವರುರಾ ನಿನುವಿನಾ?

Prabhu Murthy's picture

ಸಕಾಲಿಕವಾದ ಲೇಖನ. ಧನ್ಯವಾದಗಳು.

ವಾಸುದೇವಾಚಾರ್ಯರ ಅನೇಕ ಕೃತಿಗಳ ಪಟ್ಟಿ ಇಲ್ಲಿದೆ:
http://www.medieval....

ಅವರು ಟೈಗರ್ ವರದಾಚಾರ್ ಬಗ್ಗೆ ಬರೆದಿರುವ ಲೇಖನದ ಇಂಗ್ಲಿಶ್ ತರ್ಜುಮೆ ಇಲ್ಲಿದೆ:
http://www.carnaticm...

ಪ್ರಭು ಮೂರ್ತಿ