ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಸರ್ವಶುಕ್ಲಾ ಸರಸ್ವತೀ!

September 29, 2007 - 5:36am — hamsanandi

ದಂಡಿ ಸುಮಾರು ೬-೭ ಶತಮಾನದಲ್ಲಿದ್ದ ಸಂಸ್ಕೃತ ಕವಿ. ಅವನದಾಗಿ ಸಿಕ್ಕಿರುವುದು ಎರಡು ರಚನೆಗಳು. ಒಂದು ದಶಕುಮಾರ ಚರಿತೆ ಅನ್ನುವ ಕಾಲ್ಪನಿಕ ಕಥೆ, ಮತ್ತೆ ಕಾವ್ಯಾದರ್ಶ ಎಂಬ ಕಾವ್ಯ ಲಕ್ಷಣ ಗ್ರಂಥ.

ಕಾವ್ಯಾದರ್ಶದ ಮೊದಲ ಶ್ಲೋಕ ಹೀಗಿದೆ:

ಚತುರ್ಮುಖ ಮುಖಾಂಬೋಜ ವನಹಂಸ ವಧೂರ್ಮಮ |

ಮಾನಸೇ ರಮತಾಂ ದೀರ್ಘಮ್ ಸರ್ವಶುಕ್ಲಾ ಸರಸ್ವತೀ ||

ಇದರ ಸಾರಾಂಶ ಸುಮಾರಾಗಿ ಹೀಗೆ:

ನಾಲ್ಮೊಗದವನ ಮಡದಿ ನೀನೆನ್ನ ಮನದಲಿ

ಹಂಸದೊಲು ಸದಾ ನಲಿ! ಬಿಳಿಮೈಯ ಸರಸ್ವತೀ!

ಸರಸ್ವತಿಯನ್ನು ಸರ್ವಶುಕ್ಲಾ ಎಂದು ಕರೆದಿರುವುದನ್ನು ಗಮನಿಸಿ.

ಈ ಶ್ಲೋಕ ನಮಗೆ ಏಕೆ ಮುಖ್ಯವಾಗುತ್ತೆ? ಕನ್ನಡದಲ್ಲಿ ದೊರೆತ ಮೊದಲ ಹೊತ್ತಿಗೆ - ಕವಿರಾಜಮಾರ್ಗ. ಅದು ದಂಡಿಯ ಕಾವ್ಯಾದರ್ಶದ ರೂಪಾಂತರವೇ ಆಗಿದೆ.

ಕಾವ್ಯಾದರ್ಶದ ಮೊದಲ ಶ್ಲೋಕ, ಕವಿರಾಜಮಾರ್ಗದಲ್ಲಿ ಮೂರನೇ ಕಂದವಾಗಿದೆ. ಕವಿ ಬಹುಶಃ ಜೈನನಾದದ್ದರಿಂದ, ಬ್ರಹ್ಮ (ನಾಲ್ಮೊಗದ)ನ ವಿಷಯವನ್ನು ಅದು ಎತ್ತುವುದಿಲ್ಲ ಎಂದು ತಿಳಿದವರು ಹೇಳಿದ್ದಾರೆ.

ಶ್ರೀ ವಿಶದವರ್ಣೆ ಮಧುರಾ

ರಾವೋಚಿತೆ ಚತುರ ರುಚಿರ ಪದರಚನೆ ಚಿರಂ

ದೇವಿ ಸರಸ್ವತಿ ಹಂಸೀ

ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನದದೊಳ್

ಎಂದಿದ್ದಾನೆ ಕವಿರಾಜಮಾರ್ಗಕಾರ. ಸರಸ್ವತಿಗೆ ಬಿಳಿಮೈಯವಳು ಎಂಬುದರ ಜೊತೆಗೆ ಇನ್ನೊಂದೆರಡು ವಿಶೇಷಣಗಳನ್ನು ಕೂಡಾ ಸೇರಿಸಿದ್ದಾನೆ.

ಇವರಿಬ್ಬರ ನಂತರ ಕಲ್ಯಾಣಿ ಚಾಲುಕ್ಯ ರಾಜರ ಕಾಲದಲ್ಲಿ ಒಬ್ಬ ರಾಜನ ಹೆಂಡತಿ ವಿಜ್ಜಿಕೆ ಎಂಬುವಳಿದ್ದಳು. ಅವಳು ಒಬ್ಬ ಕವಯಿತ್ರಿ. ಸುಮಾರು ಮೊದಮೊದಲಾಗಿ ಕಾವ್ಯ ರಚನೆಗೆ ತೊಡಗಿದ ಮಹಿಳೆಯರಲ್ಲಿ ಮುಂಚೂಣಿಯಲ್ಲಿದ್ದವಳು ಎಂದು ತೋರುತ್ತೆ. ಅವಳು ತನ್ನ ಬಗ್ಗೆ ಹೇಳಿಕೊಂಡಿರುವ ಪರಿಚಯ ಹೀಗಿದೆ.

ನೀಲೋತ್ಪಲ ಶ್ಯಾಮಾಂ ವಿಜ್ಜಿಕಾಂ ಮಾಮಜಾನತ |

ವ್ಯರ್ಥೇನ ದಂಡಿನಾ ಪ್ರೋಕ್ತಾ ಸರ್ವಶುಕ್ಲಾ ಸರಸ್ವತೀ ||

ಇದರ ಭಾವಾನುವಾದ ಹೀಗಿದೆ:

ಕನ್ನೈದಿಲೆಯೋಲ್ವ ಈ ವಿಜ್ಜಿಕೆಯನರಿಯದೆಯೆ

ದಂಡಿ ನುಡಿದುದು ದಂಡ- ಸರಸ್ವತಿ ಬಿಳುಪೆಂದು!

 

ಈಕೆಯ ಆತ್ಮವಿಶ್ವಾಸ ಅಚ್ಚರಿಯನ್ನು ತರುವಂತಹದ್ದು, ಅಲ್ಲವೇ?

-ಹಂಸಾನಂದಿ

 

 

 

 

 

  • ಅನುವಾದ
  • ಕನ್ನಡ
  • ಕವನ
  • ಸಂಸ್ಜೃತ
~.~
  • hamsanandi ರವರ ಬ್ಲಾಗ್
  • Login or register to post comments
  • 691 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 29, 2007 - 9:16pm — mahesha

ಉ: ಸರ್ವಶುಕ್ಲಾ ಸರಸ್ವತೀ!

mahesha's picture

ನನ್ನಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 10:32am — savithru

ಉ: ಸರ್ವಶುಕ್ಲಾ ಸರಸ್ವತೀ!

savithru's picture

ವಿಜ್ಜಿಕೆಯ ಆತ್ಮವಿಶ್ವಾಸ ನಿಜವಾಗಲೂ ಮೆಚ್ಚಬೇಕಾದದ್ದೆ. ಈ ನಾಡು ಅದೆಷ್ಟು ಸರಸ್ವತಿಯರಿಗೆ , ದುರ್ಗೆಯರಿಗೆ , ಅನ್ನಪೂರ್ಣೆಯರಿಗೆ ಜನ್ಮ ನೀಡಿದೆಯೋ !
ಈ ಲೇಖನ ಕ್ಕೆ ತುಂಬಾ ಧನ್ಯವಾದಗಳು.

ಸುಮ್ನೇ ನನ್ನ ತಿಳುವಳಿಕೆ ಗೆ ಈ ಪ್ರಶ್ನ.....

ಈ ದೇವತೆಗಳ ಬಣ್ಣ ವನ್ನು ಈ ಕವಿಗಳು ಅಶ್ಟು ಆತ್ಮವಿಶ್ವಾಸದಿನ್ದ ಹೇಳ್ತಾರಲ್ಲಾ... ಇವರೇನು ದೇವತೆಗಳನು ನೋಡಿದ್ರಾ? ಇವರಿಗೆ ಆಯಾ ದೈವಗಳ ಸಾಕ್ಷಾತ್ಕಾರ ಆಗಿತ್ಟಾ?..

ಈ ದೇವರ ಬಣ್ಣಗಳನ್ನು ಮೂಲ ಕೃತಿಗಳಲ್ಲಿ ಯಾವ ಆಧಾರದಿನ್ದ ನಿರ್ಣಯಿಸಿದ್ದಾರೆ

ಉದಾಹರಣೆಗೆ... ಸರಸ್ವತಿ.... ಬಿಳಿ...
ವಿಶ್ಣು ಅತ್ವ ಅವನ ಅವತಾರಗಳು.... ಕಪ್ಪು ( ನೀಲಿ?)
ಶಿವ ...ಶಂಕದಂತಾ ಬಿಳಿ..

ಈ ಬಣ್ನಗಳಿಗೆಲ್ಲ ಏನು ಅರ್ಥ/ ಆಧಾರ?

ತಿಳಿದವರು ಯಾರಾದ್ರೂ ಬರೀತೀರಾ...

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 10:37am — mahesha

ಉ: ಸರ್ವಶುಕ್ಲಾ ಸರಸ್ವತೀ!

mahesha's picture

ಸವಿತ್ರು..

ನನಗೆ ಅನ್ನಿಸುವಂತೆ ಅರಿವು/ಜ್ನಾನಕ್ಕೆ ನಂಟಾದ ದೇವತೆಗಳೆಲ್ಲ ಬಿಳಿ...

ಬೊಮ್ಮ, ಸರಸತಿ, ಶಿವ ಇವರೆಲ್ಲ ಅರಿವಿಗೆ ನಂಟಾದವರು..

ಆರ್ಪು/ಶಕುತಿಗೆ ನಂಟಾದವರು ಕರ್ಪು/ಕೆಂಪು/ನೀಲಿ... ಕಾಳಿ, ವಿಷ್ಟು, ......

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 2:19pm — savithru

ಉ: ಸರ್ವಶುಕ್ಲಾ ಸರಸ್ವತೀ!

savithru's picture

ಪ್ರತಿಕ್ರಿಯೆಗೆ ನನ್ನಿ!

ಒಂದು ದ್ರಿಷ್ಟಿಕೋನದಲ್ಲಿ ನೀವಿ ಹೇಳಿದ್ದು ಸರಿ.

ಇನ್ನೊಂದು ದೃಷ್ಟಿಯಿಂದ ನೋಡಿದರೆ... ಆ ದೇವತೆಗಳ ಮೂಲ ಸಂಸ್ಕೃತಿ ಯೂ ಅವರ ಬಣ್ಣಕ್ಕೆ ಕಾರಣವಾಗಿರಬಹುದು. ಏಕೆಂದರೆ ನಮ್ಮಲ್ಲಿನ ದೇವತೆಗಳು ಬೇರೆ ಬೇರೆ ಸಂಸ್ಕೃತಿಯಲ್ಲಿ ಹುಟ್ಟಿದವರು!

ಅಂದಹಾಗೆ ಆರ್ಪು ಅಂದ್ರೆ ಏನು?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 3:02pm — mahesha

ಉ: ಸರ್ವಶುಕ್ಲಾ ಸರಸ್ವತೀ!

mahesha's picture

"ಆ ದೇವತೆಗಳ ಮೂಲ ಸಂಸ್ಕೃತಿ ಯೂ ಅವರ ಬಣ್ಣಕ್ಕೆ ಕಾರಣವಾಗಿರಬಹುದು"

Smiling ಆರ್ಯ ದೇವತೆಗಳು ಮತ್ತು ದ್ರಾವಿಡ ದೇವತೆಗಳು ಅಂತ ಇವೆ( ಇದು ಸಿಕ್ಕಾಪಟ್ಟೆ ಗೊಡವೆ.. ಜೋಕೆ )

ನೋಡಿ ಬಂಗಾಳಿಗಳು, ನಾವು ತೆಂಕಣ ಇಂಡಿಯದೋರು ಹೆಚ್ಚು ಅಮ್ಮನವರ ಪೂಜೆ ಮಾಡೋದು.. ಬಡಗಣದಲ್ಲಿ ಹೆಣ್ಣುದೇವರುಗಳು ಕಡಮೆಯಂತೆ.

ಅದಕ್ಕೆ ನಮ್ಮ ಕಡೆಯ ಅಮ್ಮನವರು, ಬಂಗಾಳಿಯ ಕಾಳಿ ಇವರೆಲ್ಲ ಕರ್ಪು.
ಹಾಗೇ... ಹಿಮಾಲಯದ ಶಿವ ಬಿಳಿ, ಕಡಲ ವಿಷ್ಟು ಕಪ್ಪು...( ಗಮನಿಸಿರಿ, ಇಂದಿನ ಇಂಡಿಯದಲ್ಲಿ ಹೆಚ್ಚು ಕರ್ಪು ಮಂದಿ ಕಡಲದಡದಲ್ಲಿ ಇದ್ದಾರೆ )

ಸುಮ್ನೆ ಇದೆಲ್ಲ ಯಾಕೆ....

ಇನ್ನು ಆರ್ಪು ಅಂದ್ರೆ..
ಮಾಡಲಾರನು = ಮಾಡಲು + ಆರನು( ಆರುವನು X ಆರನು )( ಶಕ್ತಿಯುಳ್ಳವನು X ಶಕ್ತಿಯುಳ್ಳದವನು ).
ಆರ್‍ = ಶಕ್ತಿಯುಳ್ಳು
ಆರ್ಪರ್‍ = ಶಕ್ತಿಯುಳ್ಳವರು
ಆರ್ಪನ್ = ಶಕ್ತಿವಂತ
ಆರ್ಪು = ಶಕ್ತಿ

ತಮಿಳಲ್ಲಿ ಮಿಂಚಾರಂ/ಮಿನ್ಸಾರಂ = electricity. ಆದ್ರೆ ಆರ್‍ ಇದು ಕನ್ನಡದ ಒರೆ/ಪದವೇ!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 3:08pm — Sunil Jayaprakash

ಉ: ಸರ್ವಶುಕ್ಲಾ ಸರಸ್ವತೀ!

Sunil Jayaprakash's picture

ಹಂಸ ನುಡಿದರೆ ಹಂಸನಾದ ಎಂಬ ನಿಮ್ಮ ಬ್ಲಾಗಿನ ವಿವರಣೆ ನಿಜಕ್ಕೂ ಉತ್ಪ್ರೇಕ್ಷೆಯೇನಲ್ಲ, ಹಂಸಾನಂದಿಗಳೇ. ಈ ವಿಜ್ಜಿಕೆ ಯಾರು ? ಅವಳು ಯಾವ ಕಾವ್ಯ ರಚಿಸಿದ್ದಳು. ಈ "...ವ್ಯರ್ಥೇನ ದಂಡಿನಾ ಪ್ರೋಕ್ತಾ.." ಯಾವುದರಲ್ಲಿ ಬರುತ್ತದೆ ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2007 - 10:12pm — hamsanandi

ಉ: ಸರ್ವಶುಕ್ಲಾ ಸರಸ್ವತೀ!

hamsanandi's picture

ಸುನಿಲರೆ,

ನಿಮ್ಮ ಅಭಿಮಾನಕ್ಕೆ, ಮೆಚ್ಚುಗೆಗೆ ಬಹಳ ಧನ್ಯವಾದಗಳು.

ವಿಜ್ಜಿಕೆ ಪುಲಿಕೇಶಿಯ ನಂತರದಲ್ಲಿ ಬಂದ ಚಾಲುಕ್ಯ ರಾಜನೊಬ್ಬನ ರಾಣಿ - ಯಾವ ರಾಜನೆಂದು ನೆನಪಿಲ್ಲ. ಈಕೆ ದಂಡಿಯ ನಂತರ ಬಂದವಳಿರಬೇಕು. ದಂಡಿಯು ಬಾಣಭಟ್ಟನ ಸಮಕಾಲೀನ. ಇವರಿಬ್ಬರೂ ಹರ್ಷವರ್ಧನ-ಪುಲಿಕೇಶಿಯ ಕಾಲದವರು. ವಿಜ್ಜಿಕೆಯ ಈ ಶ್ಲೋಕ ಎಲ್ಲಿ ಬಂದಿದೆ ಎಂದು ನನಗೆ ಸರಿಯಾಗಿ ತಿಳಿಯದು.

ಜ್ಯೋತ್ಸ್ನಾ ಕಾಮ್ತತರ ಬರಹವೊಂದರ ಪ್ರಕಾರ (http://www.kamat.com/database/books/kareducation/education_of_women.htm) , ಒಂಬತ್ತನೇ ಶತಮಾನದಲ್ಲೇ ರಾಜಶೇಖರನೆಂಬ ಕವಿ, ತನ್ನ ಕಾವ್ಯಮೀಮಾಂಸೆ ಎಂಬ ಪುಸ್ತಕದಲ್ಲಿ ಈ ವಿಜ್ಜಿಕೆಯನ್ನು ನೆನೆದು, ಅವಳ ಕೆಲವು ಪದ್ಯಗಳನ್ನೂ ಉದಾಹರಿಸಿದ್ದಾನಂತೆ.

ಹಾಗಾಗಿ ವಿಜ್ಜಿಕೆಯ ಕಾಲ ಸುಮಾರು ಕ್ರಿ.ಶ. ೬೫೦ ರಿಂದ ಕ್ರಿ.ಶ. ೮೦೦ ರ ಒಳಗೆ ( ಇನ್ನೂ ಹತ್ತಿರವಾಗಿ ಹೇಳಬೇಕೆಂದರೆ, ಸುಮಾರು ಕ್ರಿ.ಶ.೭೫೦ಕ್ಕೆ ಮೊದಲೇ - ಏಕೆಂದರೆ ದಂತಿದುರ್ಗ ಆ ವೇಳೆಗಾಗಲೇ ಚಾಲುಕ್ಯರನ್ನು ಸೋಲಿಸಿ, ರಾಷ್ಟ್ರಕೂಟ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದ) ಇರಬೇಕು.

-ಹಂಸಾನಂದಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 11, 2007 - 6:06am — hamsanandi

ಉ: ಸರ್ವಶುಕ್ಲಾ ಸರಸ್ವತೀ!

hamsanandi's picture

ಗೂಗಲ್ ಪುಸ್ತಕಗಳಲ್ಲಿ ಹುಡುಕಿದಾಗ, ಈ ಕೆಳಗಿನ ಕೊಂಡಿ ಸಿಕ್ಕಿತು:
http://books.google.com/books?id=_UhEvnIZjT4C&pg=PA33&dq=Vijjika&as_brr=...

ಇದರ ಪ್ರಕಾರ ವಿಜ್ಜಿಕೆ, ಎರಡನೆ ಪುಲಿಕೇಶಿಯ ಸೊಸೆ; ಇವಳ ಕಾಲ ಸುಮಾರು ಕ್ರಿ.ಶ.೬೬೦ ಎನ್ನಲಾಗಿದೆ.

-ಹಂಸಾನಂದಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 11, 2007 - 9:45am — Sunil Jayaprakash

ಉ: ಸರ್ವಶುಕ್ಲಾ ಸರಸ್ವತೀ!

Sunil Jayaprakash's picture

ಅರೆ, ಎಂಥ ಪುಸ್ತಕ ಮತ್ತು ಮಾಹಿತಿ ಹುಡುಕಿ ಕೊಟ್ಟಿದ್ದೀರಾ, ಹಂಸಾನಂದಿಗಳೇ. ನಿಜಕ್ಕೂ ನಾನಷ್ಟೇ ಅಲ್ಲ, ನಮ್ಮ ಕನ್ನಡ ನಾಡಿನ ಎಲ್ಲ ಹೆಂಗಳೆಯರೂ ನಿಮಗೆ ನನ್ನಿಗಳನ್ನರ್ಪಿಸಬೇಕು. ಎರಡು ಕಾರಣಕ್ಕೆ ನಿಮಗೆ ನನ್ನ ನನ್ನಿಗಳು.

೧. "ನನಗೆ ದಂಡಿ ದಾಕ್ಷಿಣಾತ್ಯ" ಎಂಬ ಮಾತಿದೆ ಎಂಬುದು ತಿಳಿದಿತ್ತು. ಆದರೆ ಅದರ ಹಿನ್ನೆಲೆ ಏನು ಎಂಬುದು ತಿಳಿದಿರಲಿಲ್ಲ. ನೀವು ನೀಡಿದ ಗೂಗಲ್ ಬುಕ್ಕಿನ ತಾಣದಲ್ಲಿ ಇದರ ಪ್ರಸ್ತಾಪ ಆಗಿದೆ.
೨. ವಿಜ್ಜಿಕೆಯ ಬಗ್ಗೆ ತಿಳಿಸಿದ್ದಕ್ಕಾಗಿ.

ಇದೇ ರೀತಿ, "ಕಾಳಿದಾಸ ಆರಂಭಶೂರಾಃ ಖಲು ದಾಕ್ಷಿಣಾತ್ಯಾಃ" ಅಂತ ಎಲ್ಲೋ ಹೇಳಿದ್ದಾನಂತೆ. ಅದು ಎಲ್ಲಿ, ಯಾವಾಗ, ಯಾರನ್ನು ಕುರಿತು ಹೇಳಿದ್ದಾನೆ ಎಂಬುದೇನಾದರೂ ತಿಳಿದಿದ್ದರೆ ಎಲ್ಲರೊಡನೆ ಹಂಚಿಕೊಳ್ಳಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2007 - 3:23am — turanga

ಉ: ಸರ್ವಶುಕ್ಲಾ ಸರಸ್ವತೀ!

turanga's picture

ಗೂಗಲ್ಲಿನ ಕೊಂಡಿ ಸಿಕ್ಕಿಸಿರುವುದು, ತೀ. ನಂ. ಶ್ರೀಕಂಠಯ್ಯನವರ "ಭಾರತೀಯ ಕಾವ್ಯ ಮೀಮಾಂಸೆ"ಯ ಇಂಗ್ಲೀಷು ಭಾಷಾಂತರಕ್ಕೆ ಎನ್ನುವುದನ್ನು ಸ್ಕ್ರೋಲ್ ಬಾರಿನ ಮೇಲಿನ ತುದಿಗೆ ಹೋಗಿ ನೋಡಬಹುದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2007 - 5:17am — hamsanandi

ಉ: ಸರ್ವಶುಕ್ಲಾ ಸರಸ್ವತೀ!

hamsanandi's picture

ತುರಂಗರೆ,

"ಆರಂಭ ಶೂರಾಃ ಖಲು ದಾಕ್ಷಿಣಾತ್ಯಾಃ" ಎನ್ನುವುದು ಎಲ್ಲಿ ಉಕ್ತವಾಗಿದೆ ಎನ್ನುವುದು ಗೊತ್ತೇ ಇರುತ್ತೆ ಎಂದುಕೊಂಡಿದ್ದೇನೆ; ತಿಳಿಸಿ.

-ಹಂಸಾನಂದಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2007 - 9:20am — mahesha

ಉ: ಸರ್ವಶುಕ್ಲಾ ಸರಸ್ವತೀ!

mahesha's picture

ಎಲ್ಲಿದೆ? ಇದು ಕಾಳಿದಾಸ ಹೇಳಿದ್ದು ಅಂತ ಗೊತ್ತು!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 19, 2008 - 6:04pm — Sunil Jayaprakash

ಉ: ಸರ್ವಶುಕ್ಲಾ ಸರಸ್ವತೀ!

Sunil Jayaprakash's picture

ಹಂಸಾನಂದಿಗಳೇ,
೧.

ಈ ಶ್ಲೋಕ ನಮಗೆ ಏಕೆ ಮುಖ್ಯವಾಗುತ್ತೆ? ಕನ್ನಡದಲ್ಲಿ ದೊರೆತ ಮೊದಲ ಹೊತ್ತಿಗೆ - ಕವಿರಾಜಮಾರ್ಗ. ಅದು ದಂಡಿಯ ಕಾವ್ಯಾದರ್ಶದ ರೂಪಾಂತರವೇ ಆಗಿದೆ.

೨.

ಕಾವ್ಯಾದರ್ಶದ ಮೊದಲ ಶ್ಲೋಕ, ಕವಿರಾಜಮಾರ್ಗದಲ್ಲಿ ಮೂರನೇ ಕಂದವಾಗಿದೆ. ಕವಿ ಬಹುಶಃ ಜೈನನಾದದ್ದರಿಂದ, ಬ್ರಹ್ಮ (ನಾಲ್ಮೊಗದ)ನ ವಿಷಯವನ್ನು ಅದು ಎತ್ತುವುದಿಲ್ಲ ಎಂದು ತಿಳಿದವರು ಹೇಳಿದ್ದಾರೆ.

ಈ ೧ನೇ ಮಾತು ಹೆಚ್ಚಿನ ಮಟ್ಟಿಗೆ ಪ್ರಮಾಣಿತವೂ ಆಗಿದೆ. ಆದರೆ ಇದಕ್ಕೂ "ಸರ್ವಶುಕ್ಲಾ ಸರಸ್ವತಿ" ಪದ್ಯಕ್ಕೂ ನಂಟು ಬೆಸೆಯಲಾಗದು.
ಭರತೇಶ ವೈಭವದಲ್ಲಿಯೂ (ಒಂದು ಜೈನ ಸಾಂಗತ್ಯ) ಈ ಹಂಸದ ಬಗ್ಗೆ ಸಾಕಷ್ಟು ಪದ್ಯಗಳು ಬಂದಿದೆ. "ಇಲ್ಲಿ ಹಂಸ ಎಂದರೆ ಬಿಳಿ ಎಂಬುದಕ್ಕಿಂತ ಶ್ರೇಷ್ಠ ಎನ್ನುವ ಅರ್ಥವನ್ನು ತೆಗೆದುಕೊಳ್ಳಬೇಕು" ಅಂತ ನನ್ನ ಅಂಬೋಣ. ಏಕೆಂದರೆ ನೋಡಿ, "ಹಂಸ" ಪದವನ್ನು ಜೈನರು ಮತ್ತು ವೈದಿಕರು ಇಬ್ಬರೂ ಬಳಸುತ್ತಾರಂತೆ. ರಾಮಕೃಷ್ಣ ಪರಮಹಂಸ ನೆನಪಿಗೆ ತಂದುಕೊಳ್ಳಿ. ದಂಡಿ ನೋಡಿ, "ಶುಕ್ಲ" ಎಂಬ ಬಿಳುಪನ್ನು ಸೂಚಿಸುವ ಪದವನ್ನು ಎಕ್ಸಪ್ಲಿಸಿಟ್ಟಾಗಿ ಬಳಸಿದ್ದಾನೆ. ಆದರೆ ಶ್ರೀವಿಜಯ "ಹಂಸೀಭಾವ" ಬಳಸುತ್ತಾನೆ.

ಶ್ರೀವಿಜಯನು ದಂಡಿಯ ಕಾವ್ಯದರ್ಶವನ್ನು ನೋಡಲು ಪ್ರಯತ್ನಪಟ್ಟಿದ್ದರೂ, "ಸರ್ವಶುಕ್ಲಾ ಸರಸ್ವತೀ" ಹಾಗು "ಶ್ರೀವಿಶದವರ್ಣೇ.." ಬೇರೆ ಬೇರೆ ನೆಲೆಗಟ್ಟನ್ನೇ ವಿವರಿಸುತ್ತಿವೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 19, 2008 - 6:28pm — savithru

ಉ: ಸರ್ವಶುಕ್ಲಾ ಸರಸ್ವತೀ!

savithru's picture

>>ಹಂಸೀ ಭಾವದಿ ಕೂರ್ತು

ಈ ಹಂಸೀ ಭಾವ ಅಂದ್ರೆ ಏನು?

ಸವಿತೃ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 19, 2008 - 8:15pm — Sunil Jayaprakash

ಉ: ಸರ್ವಶುಕ್ಲಾ ಸರಸ್ವತೀ!

Sunil Jayaprakash's picture

ಸವಿತೃ, ಪಂಡಿತ ಕವಲಿಯವರ ಕಸ್ತೂರೀ ಕೋಶದಲ್ಲಿ ಇದಕ್ಕೆ ಒಳ್ಳೆಯ ವಿವರಣೆಯಿದೆ.

ಹಂಸ(ಸಂ) - ವಿ. ಶ್ರೇಷ್ಠ (ಹಸ್ ಧಾತುವಿನಿಂದ ಹುಟ್ಟಿದ ಶಬ್ದ. ಅಕ್ಷರಗಳ ಆಗಮದಿಂದ ಹಂಸ ಎಂದಾಗಿದೆ. ಭವೇತ್ ವರ್ಣಾಗಮಾತ್ ಹಂಸಃ)
ನಾ - ಹಂಸಪಕ್ಷಿ; ಸೂರ್ಯ; ಪರಮಾತ್ಮ ; ಜೀವಾತ್ಮ ; ಯತಿ ; ವಿಷ್ಣು ; ಮಹತ್ವಾಕಾಂಕ್ಷೆಯಿಲ್ಲದ ಮಹಾರಾಜ, ಶುದ್ಧಾತ್ಮ ಪುರುಷ, ಪರ್ವತ, ವಾಯು, ಕಾಮ, ಒಂದು ಮಂತ್ರ.

ಹಂಸೀ ಭಾವದಿ - ಶ್ರೇಷ್ಠವಾದ, ಭಾವದೊಡಗೂಡಿ ಪ್ರೀತಿ, ಮಮತೆಯಿಂದ ನನ್ನ ಮನದಲಿ ನಿಲ್ಲು.
ಕೂರ್ತು - ಪ್ರೀತಿಯಿರುವವಳಾಗಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 19, 2008 - 7:09pm — rameshbalaganchi

ಉ: ಸರ್ವಶುಕ್ಲಾ ಸರಸ್ವತೀ!

rameshbalaganchi's picture

ಸರ್ವಶುಕ್ಲಾ ಸರಸ್ವತೀ...... ಮೂಲಶ್ಲೋಕ

ಚತುರ್ಮುಖಮುಖಾಂಭೋಜವನಹಂಸವಧೂರ್ಮಮ
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ

ನಾಲ್ಮೊಗನ ಮೊಗದಾವರೆಕೊಳದಿ ವಿಹರಿಸುವಂಚೆ
ಎಲ್ಲ ಬಿಳುಪಿನ ಸರಸತಿ ನನ್ನ ಬಗೆಗೊಳದಿ ಸಂತಸವಡಲಿ

ದಂಡಿಯ ಕಾವ್ಯಾದರ್ಶದ ಮೊದಲ ಶ್ಲೋಕದಲ್ಲಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 8:21am — ವೈಭವ

ಉ: ಸರ್ವಶುಕ್ಲಾ ಸರಸ್ವತೀ!

ವೈಭವ's picture

ಹಂಸಾನಂದಿಗಳೇ,
".. ಕನ್ನಡದಲ್ಲಿ ದೊರೆತ ಮೊದಲ ಹೊತ್ತಿಗೆ - ಕವಿರಾಜಮಾರ್ಗ. ಅದು ದಂಡಿಯ ಕಾವ್ಯಾದರ್ಶದ ರೂಪಾಂತರವೇ ಆಗಿದೆ..."
ಹೀಗಂದರೆ ಕವಿರಾಜಮಾರ್ಗದ ಮೇಲ್ಮೆಗೆ ಸಯ್ಪು/ನ್ಯಾಯ ಕೊಟ್ಟಂತಾಗುವುದಿಲ್ಲವೇನೋ ಅನ್ಸುತ್ತೆ ಯಾಕಂದ್ರೆ ಕ.ರಾ.ಮಾ ದಲ್ಲಿ 'ಕಾವ್ಯಾದರ್ಶ'ದಲ್ಲಿ ಇಲ್ಲದೇ ಇರುವ ಅನೇಕ ಸರಕು/ಅರಿಮೆಗೆಳಿವೆ.
ಮಾದರಿ: ದ್ವನ್ಯಾಲಂಕಾರ

ಅದರಲ್ಲೂ ಪರಿಚ್ಚೇದ -೧ ರಲ್ಲಿ 'ಕಾವ್ಯಾದರ್ಶ' ದ ನೆರಳು ಕಡಿಮೆ.. ಪರಿಚ್ಚೇದ-೨, ಪರಿಚ್ಚೇದ-೩ ರಲ್ಲಿ ಕಾವ್ಯಾದರ್ಶದ ನೆರಳು ಹೆಚ್ಚಾದರೂ ಕ.ರಾ.ಮಾ ಕನ್ನಡದ ಜಾಯಮಾನಕ್ಕೆ ಹೊಂದಿಕೆಯಾಗುವಂತೆ ಇದೆ.

ನಾನು ಕ.ರಾ.ಮ ಬಗ್ಗೆ ಓದಿದ ಹೊತ್ತಿಗೆಯ ಬರಹಗಾರರು(ಸೀತಾರಾಮಯ್ಯನವರು) ಹೀಗೆ ಹೇಳಿದ್ದಾರೆ. "ಸಿರಿವಿಜಯನ ಸೊಂತಿಕೆ, ಹೆಚ್ಚುಗಾರಿಕೆ ಪರಿಚ್ಚೇದ ೧ ರಲ್ಲಿ ಹೆಚ್ಚು ಎದ್ದು ಕಾಣುತ್ತದೆ"
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 10:19am — mahesha

ಉ: ಸರ್ವಶುಕ್ಲಾ ಸರಸ್ವತೀ!

mahesha's picture

ವಯ್ವವ..

ಗಮನಿಸಿರಿ ಹಂಸಾನಂದಿ ’ರೂಪಾಂತರ’ ಎನ್ನವ ಒರೆಬಳಕೆ ಮಾಡಿದ್ದಾರೆ...

ರೂಪಾಂತರ ಅಂತ ಒಪ್ಪಬೋದು.. ಓಸುಗರ ಕವಿರಾಜಮಾರ್ಗದ ರೂಪ ದಂಡಿಯ ಕಾವ್ಯಾದರ್ಶದ ರೂಪ/ಹರವವಂತೆ ಇದೆ.

ಅವರು ’ಭಾವಾಂತರ’ ಅಂದಿದ್ರೆ ತಪ್ಪಾಗ್ತಿತ್ತು.. ಸಿರಿವಿಜಯ ದಂಡಿ ಹೇಳಿದ್ದರಲ್ಲಿ ಸರಿಯಾದುದನ್ನು + ತಪ್ಪಾದದುನ್ನು ತಿದ್ದಿ + ತನ್ನ ಸೊಂತದ ವಿಚಾರಗಳನ್ನು ಸೇರಿಸಿ ಹೇಳಿದ್ದಾನೆ.

ರೂಪಾಂತರ ಎಂದಾಗ ಹಂಸಾನಂದಿವರ ಅನಿಸಿಕೆ ’ಕರಾಮಾಕ್ಕೆ ದಂಡಿಯ ಕಾವ್ಯಾದರ್ಶವು ಆಧಾರವಾಗಿದೆ" ಎಂದು ಹೊರತು, "ಕರಾಮಾ ಕಾವ್ಯಾದರ್ಶದ ಅನುವಾದವೆಂದಲ್ಲ" ಎಂದು ನನ್ನ ತಿಳಿವು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 10:59am — mahesha

ಉ: ಸರ್ವಶುಕ್ಲಾ ಸರಸ್ವತೀ!

mahesha's picture

ಇನ್ನೊಂದು ಸಂಗತಿ...

ಶ್ರೀವಿಜಯನು ದಂಡಿಯ ಕಾವ್ಯಾದರ್ಶವನ್ನು ಆದಾರವಾಗಿ ಇಟ್ಟುಕೊಂಡಿದ್ದರಿಂದ ಕರಾಮಾ ಏನು ಕೀಳಾಗಲಿಲ್ಲ.. ಇನ್ನೂ ಮೇಲಾಯಿತು...

ಯಾವಾಗಲೂ ಹೊಸತು ಹಳತಿನ ಬೇರು ಹೊಂದಿ, ಅದರಲ್ಲಿ ಹೊಸ ಹೂವಣ್ಣು ಕೊಡುವುದು. ಯಾವುದೇ ಹೊಸ ಆರಯ್ಯು ಹಳೆಯ ತಪ್ಪುಒಪ್ಪು-ಆರಯ್ಯ-ಅನುಬವಗಳ ಮೇಲೇ ಬರುವುದು..

ಬಾವಿಗಪ್ಪೆ ಸಕ್ಕದ ಪಂಡಿತರು ಇಶ್ಟಕ್ಕೇ ಕರಾಮಾ ಎಂಜಲು, ಬರಿಯ ತರ್ಜುಮೆ ಅಂದ್ರೆ, ಅದೊಂದು ಹುಚ್ಚು ಅಶ್ಟೆ... ದಂಡಿಯೂ ಕೂಡ ಅವನ ಹಿಂದನವರ ಅನುಬವವನ್ನೂ, ಅವನ ಗುರುಗಳ ಮಾತನ್ನು ಕೇಳೇ ಕಾವ್ಯಾದರ್ಶ ಬರೆದಿರುತ್ತಾರೆ, ಏನು ಅಕ್ಶರ ಅಕ್ಶರ ಅವನ ಸೊಂತದ್ದೇ ಇರಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 11:09am — Sunil Jayaprakash

ಉ: ಸರ್ವಶುಕ್ಲಾ ಸರಸ್ವತೀ!

Sunil Jayaprakash's picture

ವೈಭವ,

೧. ದಂಡಿಯೂ ಕೂಡ ದಾಕ್ಷಿಣಾತ್ಯನೇ ಎಂಬುದರ ಬಗ್ಗೆ ತುಂಬಾ ಚರ್ಚೆಗಳಾಗಿದೆ.
೨. ಯಾರೂ ಕೂಡ ಕವಿರಾಜಮಾರ್ಗವು ದಂಡಿಯ ಕಾವ್ಯಾದರ್ಶದ ಡೈರೆಕ್ಟ್ ಅನುವಾದ ಎಂದು ಹೇಳಿಲ್ಲ. ಆದ್ದರಿಂದ ದಂಡಿ ಮತ್ತು ಶ್ರೀವಿಜಯ ಇವರಿಬ್ಬರಿಗೂ ಸಮಾನ ಮರ್ಯಾದೆ ಇದ್ದೇ ಇದೆ.
೩. ವೀಸೀ ಅವರ ಸಂಪಾದನೆಯಲ್ಲಿ, ಅವರು, "ಕವಿರಾಜಮಾರ್ಗಕ್ಕೂ" ಹಾಗು ದಂಡಿಯ "ಕಾವ್ಯಾದರ್ಶಕ್ಕೂ" ಇರುವ ಹೋಲಿಕೆಗಳನ್ನು ತೋರಿಸಿದ್ದಾರೆ. ಇದನ್ನು ನೀನೂ ಕೂಡ ಚೆನ್ನಾಗಿ ಬಲ್ಲೆ.

ಆದರೆ ನನ್ನ ಅನುಮಾನ ಇದ್ದದ್ದು, "ಹಂಸ" ಪದವನ್ನು "ಬಿಳಿ" ಎಂಬುದರ ನೆಲೆಗಟ್ಟಿಗೆ ಸೀಮಿತಗೊಳಿಸುವುದು ಅಷ್ಟು ಸಮಂಜಸ ಅಲ್ಲವೆಂಬುದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 12:30pm — mahesha

ಉ: ಸರ್ವಶುಕ್ಲಾ ಸರಸ್ವತೀ!

mahesha's picture

ಹಂಸ ಅಂದ್ರೆ ಬಿಳಿ ಎಂದು ತಿಳಿಯುವುದರಲ್ಲಿ ತಪ್ಪಿಲ್ಲ...

ಪದದ ಅರಿತವನ್ನು ’ಸೀಮಿತ’ಗೊಳಿಸೋದು ಅಂತ ಅಲ್ಲ.. ಕೆಲವೆಡೆ ಅದರ ಹರವನ್ನು ಹಿಗ್ಗುಮುಗ್ಗು ಮಾಡುವುದುಂಟು.. ಅದು ತಪ್ಪಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2008 - 1:41pm — ವೈಭವ

ಉ: ಸರ್ವಶುಕ್ಲಾ ಸರಸ್ವತೀ!

ವೈಭವ's picture

ಸುನಿಲ,

ಕವಿರಾಜಮಾರ್ಗ ಕಾವ್ಯಾದರ್ಶದ ರೂಪಾಂತರ ಅತ್ವ ಅನುವಾದವಲ್ಲ. ಅದು ಕಾವ್ಯಾದರ್ಶವನ್ನು ತಿದ್ದಿ ದೊಡ್ಡದು/ಸರಿ ಪಡಿಸಿರುವ ಹೆಬ್ಬೊತ್ತಿಗೆ/ಹೆಗ್ಗಬ್ಬ.

ಇವಕ್ಕೆ ಪುರಾವೆಗಳು
೧) ಹಲವು ಲಕ್ಕಣ ಪದ್ಯಗಳು ಸಿರಿವಿಜಯನ ಸೊಂತದ್ದೆ
೨) ಹಲವು ಕಡೆ ಕನ್ನಡಕ್ಕೆ ನಿಬ್ಬರವಾದ ಅಂಶಗಳನ್ನು ಅವನು ಗುರುತಿಸಿರುವುದು.
೩) ಹಲವು ಕಡೆ ಸಿರಿವಿಜಯ ದಂಡಿಯನ್ನು ತಿದ್ದಿರುವುದು ಕಂಡುಬರುತ್ತದೆ.
೪) ಹಲವು ಕಡೆ ಸಿರಿವಿಜಯ ಕಬ್ಬದ ಬಣ್ಣಿಕೆಯಲ್ಲಿ ದಂಡಿಯನ್ನು ಮೀರಿಸಿರುವುದು ಕಂಡು ಬರುತ್ತದೆ.
ಹೆಚ್ಚಿಗೆ ತಿಳಿಯಬೇಕಾದರೆ ಸೀತಾರಾಮಯ್ಯನವರ ಕವಿರಾಜಮಾರ್ಗಂ' ಹೊತ್ತಿಗೆ ಓದಿರಿ.

ದಂಡಿ ತೆಂಕುದೇಸದವನೇ ಆಗಿರಬಹುದು. ಕೇಳ್ಮೆ ಅದಲ್ಲ.
ಸಿರಿವಿಜಯ ದಂಡಿಯ ಮಕ್ಕಿಕಾಮಕ್ಕಿ ಮಾಡಿಲ್ಲ. ಇದು ೧೦೦% ದಿಟ.
ನಾವು ಸಿರಿವಿಜಯನಿಗೆ ಅವನಿಗೆ ತಕ್ಕುದಾದ ಓಸುಗರಳಿಗೆ ಮರ್ವಾದೆ ಕೊಡಲೇಬೇಕು.

ಕ.ರಾ.ಮಾದಲ್ಲಿ ಒಂದು ಜನಾಂಗದ/ನಾಡಿನ/ಜನಪದದ(ಕನ್ನಡ) ಗುಣಲಕ್ಕಣಗಳನ್ನು/ಎಲ್ಲೆಗಳನ್ನು ಗುರುತಿಸಲಾಗಿದೆ. ಕಾವ್ಯಾದರ್ಶದಲ್ಲಿ ಇಂತಹ ಅರಿಮೆಗಳು ಇಲ್ಲ ಅನ್ಸುತ್ತೆ.
ಕವಿರಾಜಮಾರ್ಗ ಬರೀ ಆಲಂಕಾರಿಕ ಕಬ್ಬವಲ್ಲ ಅದ್ರಲ್ಲಿ ಜನಪದ, ರಾಜಕೀಯವಾಗಿ ಹಲವು ತಲೆಮೆಯ ವಿಶ್ಯಗಳು ಇವೆ ಅಂತ ಕೆ.ವಿ.ಸುಬ್ಬಣ್ಣ ಹೇಳಿದ್ದಾರೆ.
ಇನ್ನು ಹಂಸ= ಬಿಳಿ ಯ ಬಗ್ಗೆ ನಾನೇನೂ ಹೇಳಲಾರೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವರಾತ್ರಿಯ ಏಳನೇ ದಿನ
  • ಕಾಳಿದಾಸನು ಸರಸ್ವತಿಗೆ ಬೈದನೇ ? ಅದೂ ಏನೆಂದು?
  • ಭರ್ತೃಹರಿಯ ಶೃಂಗಾರ-ಶತಕದ ಮೊದಲನೆ ಶ್ಲೋಕ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
  • ಲೀಲಾವತಿ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
  • ಸ್ಯಾರಿ....ಸ್ಯಾಲರಿ (ಶಾಯರಿ )
  • ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
  • ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
  • nanna kiru parichaya
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಹಂಸನಾದ
    January 9, 2009 - 4:27am
  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 181 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator