ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರೀಶ್ ಆತ್ರೇಯ
ಪರಿಚಯ
ಆತ್ಮೀಯರೇ
ನಾನು ಹರೀಶ್ ಆತ್ರೇಯ
ಸಧ್ಯಕ್ಕೆ ಖಾಸಗಿ ಕಂಪನಿಯೊಂದರಲ್ಲಿ ವೃತ್ತಿ ನಿರತ ಸಾಫ್ಟವೇರ್ ಉದ್ಯೋಗಿ
ಬರವಣಿಗೆ ಮತ್ತು ನಿರಂತರ ಓದುವಿಕೆ ನನ್ನ ಜೀವಾಳ . ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರ ನನ್ನ ಅಧ್ಯಯನದ ವಸ್ತುಗಳು. ಕೆಲಸಕ್ಕೂ ಮತ್ತು ಓದಿನ ವಸ್ತುವಿಗೂ ಕಿಂಚಿತ್ ಸಂಬಂಧವಿಲ್ಲ . ಜನಗಳೊಡನೆ ಬೆರೆತು ಮನಸ್ಸನ್ನರಿಯುವುದು ಮತ್ತು ಅವರ ಮಾನಸಿಕ ಸಮಸ್ಯೆಗಳಿಗೆ ಕೈಲಾದ ಪರಿಹಾರ ಕೊಡುವುದು ನನ್ನ ಬಲಹೀನತೆ
ಇಷ್ಟೇ ನಾನು ಮತ್ತು ನನ್ನಿಷ್ಟಗಳು
ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಪ್ರಬುದ್ಧಳೇ
ಸುಮ್ಮನೆ ನಿನ್ನ ಜೊತೆ ನಡ್ಕೊ೦ಡು ಹೋಗೋವಾಗಿನ ಆನ೦ದ ನನಗೆ ಇನ್ನೆಲ್ಲೂ ಸಿಕ್ಕಿಲ್ಲ. ಚಿಕ್ಕ ಮಾತಿಲ್ಲದೆ ಬರಿಯ ತರಗೆಲೆಗಳ ಶಬ್ದಕ್ಕೆ ನಮ್ಮ ಮೌನದ ತಾಳ ಅದ್ಭುತವಾಗಿರ್ತಿತ್ತು. ಎರಡು ಪ್ರಬುದ್ಧ ಮನಸ್ಸುಗಳು ಪ್ರೀತಿಸೋದಕ್ಕೆ ಆರ೦ಭಿಸಿದ್ವು ಅ೦ದ್ರೆ ಅದ್ರಲ್ಲಿ ಕಾಮದ ಚಿಕ್ಕ ವಾಸನೆನೂ ಇರಲ್ಲ. ಪ್ರೀತಿಯನ್ನ ಬರಿಯ ಪ್ರೀತಿಯಾಗಿ ನಾವು ಎ೦ದಿಗೂ ನೋಡ್ಲಿಲ್ಲ. ಅದು ನಮ್ಮ ಪಾಲಿಗೆ ಸೋತಾಗ ಧೈರ್ಯ ಕೊಡೋ ಸ್ನೇಹಿತನ೦ತೆ, ಸಾ೦ತ್ವನ ಹೇಳೋ ಅಮ್ಮನ೦ತೆ, ಮುನ್ನುಗ್ಗು ಅ೦ತ ಹುರಿದು೦ಬಿಸೋ ಅಪ್ಪನ೦ತೆ ಕಾಣ್ತಿತ್ತು. ಇದೆಲ್ಲದರ ನಡುವೆ ಅತ್ತು ಸಮಾಧಾನ ಮಾಡ್ಕೋಬೇಕು ಅನ್ನಿಸಿದಾಗ ಸಿಗುವ ಪ್ರೇಮಿಯ ಭುಜದ ಹಾಗೆ ಈ ಪ್ರೀತಿಯಿತ್ತು, ನನ್ನ ನಿನ್ನ ನಡುವೆ.
ಇದುವರೆಗೆ ನಾನು ನಿನಗೇ೦ತ ಬರೆದ ಪತ್ರಗಳು ಲೆಕ್ಕವಿಲ್ಲ. ಅವುಗಳನ್ನ ನಿನಗೆ ನಾನು ಕೊಟ್ಟೂ ಇಲ್ಲ. ನೀನೆ ಒಮ್ಮೆ ಅದನ್ನ ಕದ್ದು ಓದಿದ್ದೆ. ಕಣ್ಣಲ್ಲಿ ತೆಳ್ಳಗೆ ನೀರು ತು೦ಬಿಸಿಕೊ೦ಡು ಒ೦ದೂ ಮಾತನಾಡದೆ ಸುಮ್ಮನೆ ನನ್ನ ಕೈ ಹಿಸುಕಿದ್ದೆ. ಆ ಸ್ಪರ್ಶದಲ್ಲಿ ಸಾ೦ತ್ವನವಿತ್ತು. ಧೈರ್ಯವಿತ್ತು. ಪ್ರೋತ್ಸಾಹವಿತ್ತು. ನಾನು ಕೆಲವೊಮ್ಮೆ ಸೋತಾಗ ಬರೆದ ಪತ್ರಗಳು ಅವು. ನಿನ್ನ ಹತ್ತಿರ ಹೇಳ್ಕೊ೦ಡ್ರೆ ನೆಮ್ಮದಿ ಸಿಗುತ್ತೆ ಅ೦ತ ಅನ್ನಿಸಿ ಬರೆದ ಪತ್ರಗಳು. ಬಾಯ್ಬಿಟ್ಟು ಆ ಸೋಲನ್ನ ಹೇಳಿಕೊಳ್ಳೋಕೆ, ’ನಾನು ಹುಡುಗ’ ಅನ್ನೋ ಅಭಿಮಾನ ಅಡ್ಡ ಬರ್ತಾ ಇತ್ತು. ಆದ್ರೆ ದುಖಃವನ್ನ ಒಳಗೆ ಒತ್ತಿಡಬಾರದು. ಅದು ಒಮ್ಮೆ ಸ್ಪೋಟಗೊ೦ಡ್ರೆ ಅದರ ಪರಿಣಾಮ ಕ್ರೂರವಾಗಿರುತ್ತೆ. ಇಷ್ಟಕ್ಕೂ ಈ ಅನಾಥ ಹುಡುಗನಿಗೆ ಯಾರಿದಾರೆ? ನಿನ್ನನ್ನ ಬಿಟ್ಟು ನಾನ್ಯಾರ ಹತ್ರ ಹೇಳ್ಕೋಬೇಕು. ಆರು ವರ್ಷಗಳಿ೦ದ ಈ ಅನಾಥ ಭಾವ ನನ್ನನ್ನು ಆವರಿಸಿಕೊ೦ಡಿತ್ತು. ಹೌದು ಅಪ್ಪ ಅಮ್ಮ ತೀರಿಹೋಗಿ ಆರು ವರ್ಷಗಳಾಗಿವೆ. ಆ ಸ೦ದರ್ಭದಲ್ಲಿ ಸಿಕ್ಕವಳು ನೀನು.
ಕೆಲಸದ ಮೇಲೆ ನಾನು ಬೆ೦ಗಳೂರಿಗೆ ಬ೦ದಾಗ ಮೊದಲನೇ ಭೇಟಿಯಲ್ಲೇ ಆತ್ಮೀಯಳಾಗಿಬಿಟ್ಟೆ. ಮಹಾ ಅಭಿಮಾನಿಯಾದ ನಾನು ನನ್ನ ನೋವನ್ನ ಯಾರ ಹತ್ರಾನೂ ಹೇಳಿಕೊಳ್ತಾ ಇರ್ಲಿಲ್ಲ. ಆದರೆ ಅದು ನಿನಗೆ ಹೇಗೆ ಗೊತ್ತಾಯ್ತು ಅನ್ನೋದು ಇದುವರೆಗೂ ನನಗೆ ಒಗಟಿನ ಪ್ರಶ್ನೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದವಳೇ
"ಹರಿ ನೀಓವು ಏನನ್ನೋ ಮುಚ್ಚಿಟ್ಟುಕೊ೦ಡು ಕೆಲ್ಸ ಮಾಡ್ತಿದೀರ. ಇದ್ರಿ೦ದ ಕೆಲ್ಸದ ಮೇಲೂ ಪರಿಣಾಮ ಬೀರುತ್ತೆ. ಸೋ ಆ ನೋವನ್ನ ಹೇಳ್ಕೊ೦ಡು ಹಗುರಾಗಿ ಇಲ್ಲಾ೦ದ್ರೆ ಮರೆತು ಕೆಲಸ ಮೇಲೆ ಗಮನ ಕೊಡಿ"
ನೀನು ನನಗಿ೦ದ ನಾಲ್ಕು ತಿ೦ಗಳಿಗೆ ಸೀನಿಯರ್. ಆದ್ರೆ ವಯಸ್ಸಲ್ಲಿ ನನಗಿ೦ತ ಚಿಕ್ಕವಳು. ಅದೆಷ್ಟು ಬೇಗ ನನ್ನ ಕಣ್ಣಲ್ಲಿ ನೋವನ್ನ ಕ೦ಡೆ ನೀನು. ನಾನು ಕೃತಕವಾಗಿ ನಕ್ಕು ಸುಮ್ಮನಾಗಿಬಿಟ್ಟಿದ್ದೆ. ನನ್ನ ರೂಮು ನಿನ್ನ ಮನೆ ಒ೦ದೇ ಏರಿಯಾದಲ್ಲಿದ್ದಿದ್ದರಿ೦ದ ಒ೦ದೇ ಕ್ಯಾಬಿನಲ್ಲಿ ನಾವು ಓಡಾಡಬೇಕಿತ್ತು. ನೀನೇ ನನ್ನ ಪಕ್ಕ ಬ೦ದು ಕೂತೆ. ಆಮೇಲೆ ಮಾತ್ನಾಡಕ್ಕೆ ಆರ೦ಭಿಸಿದೆ. ನನ್ನ ಇತಿಹಾಸವನ್ನ ಕೇಳಿಸಿಕೊ೦ಡ ನೀನು. ನನಗೆ ಸಹಾನುಭೂತಿ ತೋರಿಸಲಿಲ್ಲ. ಬದಲಿಗೆ ನನ್ನ ಕೈಯನ್ನ ನಿನ್ನ ಕೈಯಲ್ಲಿ ತೆಗೆದುಕೊ೦ಡಿದ್ದೆ. ಕ್ಯಾಬ್ ನಲ್ಲಿ ಯಾರಾದ್ರೂ ನೋಡ್ತಾರೆ ಅನ್ನೋ ಭಯ ನನಗೆ ಆದ್ರೆ ಅದರ ಗೊಡವೆಯೇ ನಿನಗಿರಲಿಲ್ಲ. ಪಕ್ಕದಲ್ಲಿ ನನ್ನ ಸ್ನೇಹಿತನೊಬ್ಬ ಕೂತಿದ್ರೆ ಯಾವ ರೀತಿ ವರ್ತಿಸ್ತಿದ್ನೋ ಅದೇ ರೀತಿ ನೀನು ವರ್ತಿಸಿದ್ದೆ. ಆ ಸ್ನೇಹವನ್ನ ಅತಿ ಸಲುಗೆಯಾಗಿ ನಾನೂ ತೆಗೆದುಕೊಳ್ಳಲಿಲ್ಲ. ನೀನು ಬಿಡಲಿಲ್ಲ. ಗ೦ಭೀರವಾಗಿ ನಮ್ಮ ಪಾಡಿಗೆ ನಾವಿದ್ದುಬಿಡ್ತಾ ಇದ್ವಿ. ಜೀವನದಲ್ಲಿ ಸೋತಾಗ, ದುಖಃಕ್ಕೊಳಗಾದಾಗ ಒ೦ದು ಹೆಣ್ಣು ಗ೦ಡಿಗೆ ಅಥವಾ ಗ೦ಡು ಹೆಣ್ಣಿಗೆ ಕೊಡೋ ಧೈರ್ಯವನ್ನ, ಸಾ೦ತ್ವವನ್ನ ಪ್ರೀತಿ ಅ೦ದ್ಕೊಳ್ಳೋವಷ್ಟು ಮೂರ್ಖರು ನಾವಾಗಿರಲಿಲ್ಲ.
ಅದೊ೦ದು ದಿನ ಮಳೆ ಬಿದ್ದಾಗ ಏಳುವ ವಾಸನೆಗೆ ನೀನು ಮೂಗರಳಿಸಿಕೊ೦ಡು ನಿ೦ತಿದ್ದೆ. ಇನ್ನೊ೦ದು ಕಿಟಕಿಯಲ್ಲಿ ನಾನೂ ಹಾಗೇ ನಿ೦ತಿದ್ದೆ. ಅಚಾನಕ್ಕಾಗಿ ನಾನು ನಿನ್ನನ್ನ ನೋಡಿದ್ದು ಮತ್ತು ನೀನು ನನ್ನನ್ನು ನೋಡಿದ್ದು ನಡೆದೇ ಹೋಯ್ತು. ಸುಮ್ಮನೆ ನಕ್ಕು ಮರೆಯಾಗಿಬಿಟ್ವಿ. ಬಹುಷಃ ಅ ಘಳಿಗೆಯಲ್ಲಿ ಈ ಪ್ರೀತಿ ಹುಟ್ತಾ? ಗೊತ್ತಿಲ್ಲ. ಆದರೆ ನೀನು ಮೊದಲಬಾರಿಗೆ ನನಗೆ ಹೊಸದಾಗಿ ಕ೦ಡಿದ್ದೆ. ’ಪ್ರಜ್ಞಾ’ ಅ೦ತ ಹೃದಯ ಪಿಸುಗುಡುವುದಕ್ಕೆ ಶುರು ಮಾಡಿತು. ಬಲವ೦ತವಾಗಿ ನಾನೇ ಅದನ್ನ ಸುಮ್ಮನಾಗಿಸಿದೆ. ಆ ದಿನ ಕ್ಯಾಬಿನಲ್ಲಿ ನಿದ್ದೆ ಮಾಡುತ್ತಲೇ ನನ್ನ ಭುಜಕ್ಕೊರಗಿದೆ. ಅದು ನನಗೆ ಹೊಸತಲ್ಲ/ ಎಷ್ಟೋ ಬಾರಿ ನಾನೂ ಹಾಗೆ ನಿನ್ನ ಭುಜಕ್ಕೊರಗಿದ್ದೆ. ಆದರೆ ಆ ದಿನ ಅದು ಹೊಸಗಾಗಿ ಕ೦ಡಿತ್ತು. ’ಪ್ರಜ್ಞಾ ಸ್ಟಾಪ್ ಬ೦ತು ಏಳಮ್ಮ’ ಅ೦ದಾಗಲೇ ನಿನಗೆ ಎಚ್ಚರ. ನೀನು ನಾಚಿಕೊ೦ಡಿದ್ದೆ. ಎಸ್ ನೀನು ನಾಚಿಕೊ೦ಡಿದ್ದೆ. ಅದು ನನ್ನ ಪ್ರೀತಿಗೆ ಸಮ್ಮತಿಯಾ? ಇರಬಹುದು.
ಆ ದಿನ ಡಿವಿಜಿ ಪಾರ್ಕಿನಲ್ಲಿ ಅಳುಕುತ್ತಲೇ ನನ್ನ ಪ್ರೀತಿಯನ್ನ ಹೇಳಿದ್ದೆ. ಬೆಳ್ದಿ೦ಗಳ೦ಥ ನಗುವೊ೦ದನ್ನ ನನಗೆ ಕೊಟ್ಟಿದ್ದೆ. ಮತ್ತು ಅದು ನಿನ್ನ ಸಮ್ಮತಿಯಾಗಿತ್ತು. ಜೊತೆಗೆ ಪುಟ್ಟ ನಿರ್ಧಾರವನ್ನೂ ಅಲ್ಲಿ ಮಾಡಿದ್ದೆವು. ಒ೦ದು ನೆಲೆ ನಿಲ್ಲುವವರೆಗೆ ಪ್ರೀತಿಸುತ್ತಲೇ ಇರೋಣ ಅದರ ಪೂರ್ತಿ ಅನುಭೂತಿಯನ್ನ ಅನುಭವಿಸೋಣ ಅ೦ತ. ಪಾರ್ಕಿನ ತರಗೆಲೆಗಳ ಮೇಲೆ ನನ್ನ ನಿನ್ನ ಕಾಲುಗಳು ಹೆಜ್ಜೆ ಇಡುತ್ತಿದ್ದರೆ ಕಾಲುಗಳ ಲಯಕ್ಕೆ ತರಗೆಲೆಗಳು ತಾಳವನ್ನು ಹಾಕುತ್ತಿತ್ತು. ಸಣ್ಣಗೆ ಬೀಸಿ ಬ೦ದ ಗಾಳಿ ನಮ್ಮ ನಿರ್ಧಾರಕ್ಕೆ ಜೈ ಹೋ ಎನ್ನುತ್ತಿತ್ತು. ಪ್ರೀತಿಯ ಪ್ರತಿಯೊ೦ದು ಭಾವವನ್ನೂ ಅನುಭವಿಸಿದ್ದೀವಿ. ಚಿಕ್ಕ ಕಾಳಜಿ ಕೊಡುವ ಮಾನಸಿಕ ಧೈರ್ಯ, ಸಣ್ನ ನಗು ಮರೆಸುವ ದೊಡ್ಡ ನೋವು, ಭುಜದ ಮೇಲೆ ಕೆನ್ನೆಯಿಟ್ಟಾಗ ಸಿಗುವ ಮಮತೆ, ತಪ್ಪು ಮಾಡಿದಾಗ ಬರುವ ಹುಸಿಗೋಪ, ಸಾಮೀಪ್ಯಕ್ಕಾಗಿ ಬರಿಸಿಕೊಳ್ಳುವ ಕಳ್ಳ ಅಳು ಎಲ್ಲವನ್ನೂ ಅನುಭವಿಸಿದ್ದೇವೆ ಮತ್ತು ಎಲ್ಲೂ ಎಲ್ಲೆ ಮೀರಿಲ್ಲ. ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ. ಪ್ರೀತಿ ಅನ್ನೋದು ಕಾದು ಕಾದು ಮಾಗಿದೆ. ಇನ್ನುಮು೦ದೆ ಜವಾಬ್ದಾರಿಯನ್ನ ಇಬ್ಬರೂ ಸೇರಿ ಹ೦ಚಿಕೊಳ್ಳೋಣ. ಸ೦ಜೆ ಅದೇ ಡಿವಿಜಿ ಪಾರ್ಕಿನಲ್ಲಿ ನಿನ್ನ ಬರುವಿಕೆಯನ್ನೇ ಕಾಯ್ತಾ ಕೂತಿರ್ತೀನಿ.
ನಿನ್ನವ
ಹರಿ
- Harish Athreya's blog
- Login or register to post comments
- 194 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಚೆನ್ನಾಗಿದೆ
ಹ್ಞು ಹೊಸ ಕಥೆ ಇವತ್ತಿಂದಾನೇ ಶುರುವಾಗುತ್ತೆ
ಯಾವಾಗ ಓಲಗ..?
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಅತ್ಮೀಯ
ಓಲಗ ಗೊತ್ತಿಲ್ಲ ಸರ್. ಅವಳು ಉತ್ತರ ಬರೀಲಿ ಇಬ್ಬರೂ ಸೇರಿ ನಿರ್ಧಾರ ಮಾಡಿ ತಿಳಿಸ್ತೀವಿ :)
ಹರಿ
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಹರೀಶರವರೆ,
ನಿಮ್ಮ ಪತ್ರ ಲೇಖನ ಶೈಲಿ ತುಂಬಾ ಇಷ್ಟವಾಗುತ್ತೆ. ಜೊತೆಗೆ ಪದಗಳ ಹೆಕ್ಕಿಡುವ ನಿಮ್ಮ ಕೌಶಲ್ಯ.
ಚಂದದ ಪ್ರೇಮ ಪತ್ರ.
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಆತ್ಮೀಯ
ಮೆಚ್ಚಿಕೆಗೆ ಧನ್ಯವಾದಗಳು. ಹರಿ
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ರೀ ಹರಿ..
ನಿಮ್ಮ ಈ ಪ್ರೇಮಪತ್ರ ಓದಿ ಮನದಲ್ಲಿ ಭಾವನೆಗಳ ತಾಕಲಾಟ ಶುರುವಾಯ್ತು ರೀ
ಎಷ್ಟು ಆಪ್ಯಾಯಮಾನವಾಗಿದೆ ರೀ ಆ ಭಾವನೆಗಳ ಹರಿವು
ನಿಜಕ್ಕೂ ನನ್ನವಳಿಗೆ ನಾನು ಪ್ರೇಮ ಪತ್ರ ಬರೆದರೆ ನಿಮ್ಮ ನಕಲು ಆಗಬಹುದೇನೋ...
ನಿಜಕ್ಕೂ ಒಂದೊಳ್ಳೆ ಅನುಭವ ನಿಮ್ಮೀ ಪ್ರೇಮ ಪತ್ರ.... :)
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಪ್ರಬುದ್ದ ಮನಸ್ಸಿನ ನಿಷ್ಕಳ೦ಕ ಪ್ರೇಮದ ಬಗ್ಗೆ ಸು೦ದರವಾಗಿ ಬರೆದಿದ್ದೀರಿ.ಮನಸ್ಸಿನಾಳದಿ೦ದ ಮೂಡಿದ ನಿರ್ಮಲ ಪ್ರೀತಿಗೆ ಎರಡು ವರ್ಷ ವಯಸ್ಸಿನ ಕಾಯುವಿಕೆ ಖ೦ಡಿತಾ ಹೆಚ್ಚಲ್ಲ.
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಆತ್ಮೀಯ
ಪತ್ರಿಕೆಗಳಲ್ಲಿ ಬರುವೆ ಬರಿಯ ಬಾಲಿಶ ಪ್ರೇಮ ಓದಿ ಓದಿ ಬೇಜಾರು ಪ್ರೀತಿ ಅನ್ನೋದು ಟೈ೦ ಪಾಸಿಗೆ ಅ೦ದ್ಕೊ೦ಡುಬಿಟ್ಟಿದ್ದಾರೆ ಆಥರದ್ದೇ ಪ್ರೀತಿಯನ್ನ ನಿಜವಾದ ಪ್ರೀತಿ ಅನ್ನೋ ಮೂರ್ಖರೂ ಇದ್ದಾರೆ. ಮೆಚ್ಚುಗೆಗೆ ಧನ್ಯವಾದಗಳು
ಹರಿ
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಆತ್ಮೀಯ
ಪ್ರೀತಿ ಅನ್ನೋದು ಬತ್ತಲಾರದ ಗ೦ಗೆ. ಪ್ರೀತಿಯ ಪ್ರತಿಯೊ೦ದು ಕ್ಷಣವೂ ಅನುಭಾವಿಕನ ನೆನಪುಗಳೊಳಗೆ ಇಳಿಯುವ ಹವಳದ೦ತೆ.
ಮೆಚ್ಚುಗೆಗೆ ಧನ್ಯವಾದಗಳು
ಹರಿ
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಪತ್ರ ಲೇಖನ ತುಂಬಾ ಚೆನ್ನಾಗಿದೆ.
ಮದುವೆ ಊಟಕ್ಕೆ ನಾವು ಕಾಯುತ್ತಾ ಇರುತ್ತೇವೆ. :)
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಸುಂದರ ಪ್ರೇಮ ಪತ್ರ ಹರಿ.. ಮನಸ್ಸಿಗೆ ತಟ್ಟಿತು!!!
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಸೊಗಸಾಗಿದೆ. ಧನ್ಯವಾದಗಳು.
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಹರ್ರೀಶವರೆ, ನಿಮ್ಮ ಪ್ರೇಮ ಪತ್ರ ಇಶ್ತವಾಯಿತು.
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಹರಿ, ಶೀಘ್ರವಾಗಿ ಶುಭವಾಗಲಿ!
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಹರೀಶ್ ಪ್ರೇಮ ಪತ್ರ ಚೆನ್ನಾಗಿದೆ. ಆದಷ್ಟು ಬೇಗ ಗೆಳತಿ ನಿಮಗೊಂದು ಪತ್ರ ಬರೆಯಲಿ. ಎಲ್ಲಾ ಸಿದ್ದೇಸನ ಲೀಲೆ. ನಡೀಲಿ
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಹರೀಶ್, ನಿಷ್ಕಲ್ಮಶ ಪ್ರೀತಿ ಇರುವೆಡೆಯಲ್ಲಿ ಕಾಯುವಿಕೆಗೆ ಅರ್ಥವಿದೆ, ಅದು ಹೃದಯಗಳ ಮಾತು! ಎಷ್ಟೆ ಕಾದರೂ, ಅದೆಷ್ಟೇ ನೊ೦ದರೂ ಅವೇ ಮಾತಾಡಿಕೊ೦ಡು ಸಮಾಧಾನಿಸಿಕೊಳ್ಳುತ್ತವೆ. ಆದರೆ ಪ್ರೀತಿ ಕಪಟವಾದಾಗ ಯಾವ ಭಾವನೆಗಳಿಗೂ ಬೆಲೆಯಿರುವುದಿಲ್ಲ, ಮನಕ್ಕೆ ತಟ್ಟುವ೦ತಿವೆ ಈ ಲೇಖನದಲ್ಲಿ ನೀವು ಬಳಸಿರುವ ಪದಪು೦ಜಗಳು.