ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

[ಸಂಪದ ಕಾರ್ಯಕ್ರಮ]

ಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿಯೇ ನಾವುಗಳು ಇಲ್ಲಿದ್ದೇವೆ, ನಮ್ಮ ಕೆಲಸಗಳಲ್ಲಿ ಬಳಸುವ ಭಾಷೆ ಬೇರೆಯದ್ದಾದರೇನು, ನಮ್ಮ ಭಾಷೆಯ ನಂಟು ಬಿಟ್ಟಿಲ್ಲ! ಸೂಕ್ಷ್ಮ ರೇಖೆಯಂತಿರುವ ಈ "ಭಾಷೆ" ಎಂಬ ಬಂಧ ಬೇರೆ ಬೇರೆ ಆಸಕ್ತಿ, ಬೇರೆ ಬೇರೆ ಅಭಿಪ್ರಾಯಗಳ ಬುತ್ತಿಯನ್ನು ಕಟ್ಟಿ ತರುವ ನಮ್ಮನ್ನೆಲ್ಲ ಅದು ಹೇಗೆ ಹಿಡಿದಿಟ್ಟಿದೆ ಎಂಬುದು ಒಮ್ಮೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.
ಕಾರ್ಯಕ್ರಮದ ದಿನದಂದು ಕಂಡುಬಂದ ಮುಖಗಳು ಸಂಖ್ಯೆಯ ಲೆಕ್ಕದಲ್ಲಿ ನಮಗೆ ಕೊಂಚ ಬೇಸರ ಮೂಡಿಸಿದರೂ, ಆ ದಿನ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ"ಯ ಸುತ್ತ ಒಂದು ಉತ್ತಮ ಚರ್ಚೆ ನಡೆದದ್ದು ಖುಷಿ ಕೊಟ್ಟಿತು. ಉದ್ದೇಶ ಇದ್ದದ್ದು ಹೀಗೆ ಬರೆಯಲು ಇಂಟರ್ನೆಟ್ ಬಳಸುವುದು ಹೇಗೆ? ಮತ್ತು ತದನಂತರ ಇಂಟರ್ನೆಟ್ಟಿನಿಂದ ಹೊರಗೆ, ಇಂಟರ್ನೆಟ್ ವ್ಯಾಪ್ತಿಯಿಲ್ಲದೆಡೆಗೆ ಅದನ್ನು ವಿಸ್ತರಿಸುವುದು ಹೇಗೆ ಎನ್ನುವುದರ ಸುತ್ತ. ಚರ್ಚೆ ನಡೆದದ್ದು ಭಾನುವಾರ ೨೯, ೨೦೦೯, ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ, ಕನ್ನಿಂಗ್ಹಾಮ್ ರೋಡಿನಲ್ಲಿ.

ಅಂದು ನಾವು ಕನ್ನಿಂಗ್ಹಾಮ್ ರೋಡಿಗೆ ಹೊರಟು ನಿಂತಾಗ ನಮಗದು 'ಮತ್ತೊಂದು ಭಾನುವಾರ'. ಆದರೂ ಎಷ್ಟು ಜನ ಬರುತ್ತಾರೋ, ಯಾರು ಯಾರು ಬರುವರು ಎಂಬ ಕುತೂಹಲ ನಮಗೆ! ನಾವುಗಳು ಎಲ್ಲರಿಗೂ ಆಮಂತ್ರಣ ಕಳುಹಿಸಿದ್ದೇ ಕೊಂಚ ತಡವಾಗಿ! ಕಾರ್ಯಕ್ರಮದ ಬಗ್ಗೆ ತಿಳಿಸಲು ಒಂದು ವಾರ ಕೂಡ ಇರಲಿಲ್ಲ. ಅದಕ್ಕೆ ಸೇರಿಕೊಂಡಂತೆ ಮೂರು ದಿನ ರಜೆ ಬೇರೆ - ಯುಗಾದಿ, ಶನಿವಾರ ಮತ್ತು ಭಾನುವಾರ!

ಆದರೆ ಆ ಭಾನುವಾರ ವಿಶೇಷ ದಿನವೆನಿಸಿದ್ದು ಹೌದು. ನಮ್ಮ ನೆಚ್ಚಿನ ವಿಷಯಗಳು - ತಂತ್ರಜ್ಞಾನ, ಕನ್ನಡ ಇವುಗಳೊಡನೆ - ಅಂತರ್ಜಾಲ ಕೂಡ ಬೆರೆತದ್ದಲ್ಲದೆ ಅವುಗಳ ಕುರಿತು ಉತ್ತಮ ಚರ್ಚೆ ನಡೆದದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ನಿಮಿಷಗಳು. ಮೊದಲ ಅವಧಿ ಕನ್ನಡದಲ್ಲಿ ತಂತ್ರಾಂಶಗಳು ಹಾಗು ಅದರ ಸುತ್ತ ಇರುವ ತಂತ್ರಜ್ಞಾನದ ಕುರಿತು ಬರೆಯುವ ಬಗ್ಗೆ ಮಾತುಕತೆ ಎಂಬುದಾಗಿತ್ತು ನಮ್ಮ ಉದ್ದೇಶ. ನಾನು ಕೊಟ್ಟ ಒಂದು ಪುಟ್ಟ ಪೀಠಿಕೆಯ ನಂತರ ಪತ್ರಕರ್ತ ಗೆಳೆಯರಾದ ಇಸ್ಮಾಯಿಲ್ ಚರ್ಚೆ ಪ್ರಾರಂಭಿಸಿದರು, ಚರ್ಚೆ ತಂತ್ರಾಂಶಗಳ ಕುರಿತು ಹೇಗೆ ಬರೆಯುವುದು ಎಂಬುದರ ಸುತ್ತ ನಡೆಯಿತು. ಹಲವು ವಿಷಯಗಳು ಚರ್ಚೆಗೆ ಬಂದವು. ತೀರ ಗ್ರಾಂಥಿಕವಾದ ಅನುವಾದ ಮಾಡಬೇಕಿಲ್ಲ ಎಂಬ ವಿಷಯವನ್ನು ಇಸ್ಮಾಯಿಲ್ ಕೂಡಲೆ ಪ್ರಸ್ತಾಪಿಸಿದರು. ಈಗಾಗಲೇ ಬಳಕೆಯಲ್ಲಿರುವ ಕೆಲವು ಪದಗಳು ಅವು ಇದ್ದಂತೆಯೇ ಬಳಸಬಹುದು ಎಂಬ ವಿಷಯವನ್ನು ಮುಂದಿಟ್ಟರು. ಅತಿಯಾದ ಸಂಸ್ಕೃತ ಬಳಸಿ ತಂತ್ರಜ್ಞಾನದ ಪದಗಳನ್ನು ಅನುವಾದ ಮಾಡುವ, ಹೊಸ ಹೊಸ ಪದಗಳನ್ನು ರಚಿಸುವ ಮನೋಭಾವ ಪ್ರಶ್ನಿಸಿದರು. ಅದೇ ಸಮಯ ಹಳೆಗನ್ನಡ ಬಳಸಿಯೂ ಹೀಗೆಯೇ ಮಾಡಲಾಗುತ್ತಿರುವ ಮತ್ತೊಂದು extreme ಕುರಿತು ಗಮನ ಸೆಳೆಯುವ ಎಂದಿದ್ದೆ - ಅಷ್ಟರೊಳಗೆ ಚರ್ಚೆಯಲ್ಲಿ ಮತ್ತಷ್ಟು ದನಿ, ಅಭಿಪ್ರಾಯಗಳು ಬೆರೆತು ಮಾತುಕತೆ ಮುನ್ನಡೆದು ಹೋಗಿತ್ತು. ಒಟ್ಟಾರೆ, ಪರ್ಯಾಯ ಪದಗಳಿಲ್ಲದ ಸಮಯ, ಗೊಂದಲ ಮೂಡಿಸುವಂತಹ ಪದಗಳಿರುವ ಸಮಯ, ಆಗಲೇ ಬಳಕೆಯಲ್ಲಿರುವ ಇಂಗ್ಲೀಷ್ ಪದಗಳನ್ನೇ ಬಳಸುವುದು ಎಂಬ ವಿಷಯಕ್ಕೆ ಬೆಂಬಲ ಸಿಕ್ತು. ಚರ್ಚೆ ನಡೆಯುತ್ತಿದ್ದ ಸಮಯ ಕಳೆದ ಚುನಾವಣೆಯಲ್ಲಿ ಬಿಜೆಪಿಯ "Feel Good Factor" ಕನ್ನಡಕ್ಕೆ ಅನುವಾದಗೊಳ್ಳುವಾಗ ಪತ್ರಿಕೆಗಳಲ್ಲಿ ಏನೆಲ್ಲ ಅನಾಹುತಕ್ಕೀಡುಮಾಡಿತ್ತು, ಏನೆಲ್ಲ ಗೊಂದಲ ಹುಟ್ಟುಹಾಕಿತ್ತು ಎಂಬ ವಿಷಯ ಪ್ರಸ್ತಾಪವಾಯಿತು. ಓದುಗರಿಗೆ ಸರಿಯಾಗಿ ಅರ್ಥವಾಗದೇ ಇದ್ದದ್ದಷ್ಟೇ ಅಲ್ಲ, ಆಗ ಪತ್ರಕರ್ತರು ಬರೆದ ವಿಷಯ ಓದುಗರಿಗೆ ಸರಿಯಾಗಿ ತಲುಪದೇ ಹೋಗಿತ್ತು ಕೂಡ. ಈ ವಿಷಯ ಈಗ ನಗಣ್ಯವೆನಿಸಬಹುದು, ಆದರೆ ಮಾಹಿತಿ ತಲುಪಿಸುವಾಗ ಈ ಚಿಕ್ಕ ಸಮಸ್ಯೆಯೂ ಪ್ರಮುಖ ವಿಷಯವಾಗಬಹುದು.  

ನಂತರ ತಂತ್ರಜ್ಞಾನ ಕುರಿತು ಬರೆಯುವಾಗ ಮತ್ತೆ ಮತ್ತೆ ಎದುರಾಗುವ ತೊಂದರೆಗಳು, ಬರೆಯುವ ಉತ್ಸಾಹವನ್ನೇ ಹೋಗಲಾಡಿಸುವಂತಹ ತೊಂದರೆಗಳು - ಈ ಕುರಿತು ಚರ್ಚೆ ಮುಂದುವರೆಯಿತು.

ಇಸ್ಮಾಯಿಲ್ ಹಾಕಿದ ಪ್ರಶ್ನೆ: "ಪ್ರೊಜೆಕ್ಟರನ್ನು ಕನ್ನಡದಲ್ಲಿ ಏನಂತ ಕರೆಯುತ್ತೀರಿ?" ಬರವಣಿಗೆಯ ಮೂಲ ಉದ್ದೇಶದ ಕುರಿತು ಗಮನ ಹರಿಸಬೇಕಾದ ಅವಶ್ಯಕತೆ, ಭಾಷೆಯನ್ನು 'ಶುದ್ಧ'ವಾಗಿಟ್ಟುಕೊಳ್ಳುವುದಕ್ಕಿಂತ ಮುಖ್ಯವಾದದ್ದು ಎಂಬುದನ್ನು ಒಪ್ಪುವಂತೆ ಮಾಡಿತ್ತು.

ನಡುವೆ ಕೆಲವು ಸ್ವತಂತ್ರ ತಂತ್ರಾಂಶಗಳ ಕುರಿತು, ಅದರಲ್ಲಿ ಕನ್ನಡವನ್ನು ಬಳಸುವ, ಕನ್ನಡದಲ್ಲಿ ಅದನ್ನು ಬಳಸುವ ಕುರಿತು ಚರ್ಚೆ ನಡೆಯಿತು.

ನಾಗೇಶ ಹೆಗಡೆಯವರು ಮಧ್ಯಾಹ್ನದ ಅವಧಿಗೆ ಜೊತೆಗೂಡಿದರು, ಚರ್ಚೆಯಲ್ಲಿ ಪಾಲ್ಗೊಂಡರು. ಕನ್ನಡದಲ್ಲಿ ತಂತ್ರಜ್ಞಾನ ಹಾಗು ವಿಜ್ಞಾನ ಬರಹಗಳನ್ನು ಚರ್ಚಿಸುವಾಗ ನಾಗೇಶ ಹೆಗಡೆಯವರ ಹೆಸರಿಲ್ಲದೆ ನಡೆಯದು. ಸ್ವತಃ ಅವರೇ ಚರ್ಚೆಯಲ್ಲಿ ಭಾಗವಹಿಸಿದ್ದು ಒಂದು ಅಪೂರ್ವ ಕ್ಷಣ.

ಕನ್ನಡ ಪ್ರಭದ ಕಾರ್ಯನಿರ್ವಾಹಕ ಸಂಪಾದಕರಾದ ರವಿ ಹೆಗಡೆ ಕೂಡ ಎರಡನೇ ಅವಧಿಯ ಚರ್ಚೆಯಲ್ಲಿ ಪಾಲ್ಗೊಂಡರು. ಎರಡನೆಯ ಅವಧಿ ಕನ್ನಡದಲ್ಲಿ ಪರಿಸರದ ಸುತ್ತ ಬರೆಯುವ ಬಗ್ಗೆ ಮಾತುಕತೆಯಿಂದ ಪ್ರಾರಂಭವಾದದ್ದು. ಅಲ್ಲಿಂದ ಚರ್ಚೆ ಡೇಟ ಸೆಂಟರುಗಳು ಗ್ಲೋಬಲ್ ವಾರ್ಮಿಂಗಿಗೆ ಎಷ್ಟು ಕಾಣಿಕೆ ನೀಡುತ್ತಿದೆ ಎನ್ನುವಲ್ಲಿಂದ ಗೂಗಲ್ ವರೆಗೂ ಮುಟ್ಟಿತು. ಅಂತರ್ಜಾಲ ಬಳಸುವವರ ಪ್ರೈವೆಸಿಗಿರುವ ತೊಂದರೆಗಳ ಕುರಿತು ಚರ್ಚೆ ನಡೆಯಿತು. ಆ ನಂತರ ಆರ್ ಟಿ ಐ (ರೈಟ್ ಟು ಇನ್ಫರ್ಮೇಶನ್ ಆಕ್ಟ್) ಕುರಿತ ಚರ್ಚೆ ನಡೆಯಿತು. ಕನ್ನಡದಲ್ಲಿ ಆರ್ ಟಿ ಐ ಕುರಿತ ಮಾಹಿತಿ, ಸಹಾಯ ಪುಟಗಳ ಅಗತ್ಯವಿರುವ ಕುರಿತು ಚರ್ಚೆ ನಡೆಯಿತು. ತದನಂತರ ಸ್ವತ್ರಂತ್ರ ತಂತ್ರಾಂಶಗಳಾಗಿ ಲಭ್ಯವಿರುವ ಪರ್ಯಾಯ ಆಯ್ಕೆಗಳ ಕುರಿತು ಮಾತುಕತೆ ನಡೆಯಿತು. ಗ್ನು/ಲಿನಕ್ಸ್ ಹಾಗು ಅದರಲ್ಲಿ ಕನ್ನಡದ ಸುತ್ತ ಲಭ್ಯವಿರುವ ತಂತ್ರಾಂಶಗಳು, ಪದ್ಮ (ಕನ್ವರ್ಶನ್ ಮಾಡಲು ಬಳಸಬಹುದಾದ ತಂತ್ರಾಂಶ) ಹಾಗು ಉದಯೋನ್ಮುಖ ಬರಹಗಾರರಿಗೆ, ಪತ್ರಕರ್ತರಿಗೆ ಉಪಯೋಗವಾಗಬಹುದಾದ ಕೆಲವು ಪ್ಲಗಿನ್ನುಗಳು - ಇವುಗಳ ಕುರಿತು ಚರ್ಚೆ ನಡೆಯಿತು. ಕೊನೆಗೆ ಕಂಪ್ಯೂಟರನ್ನು ಪ್ಲಾನೆಟೋರಿಯಂನಂತೆಯೇ ಮಾಡಿಬಿಡುವ ಸ್ಟೆಲೇರಿಯಂ ಎಂಬ ತಂತ್ರಾಂಶದ ಕುರಿತು ಚರ್ಚೆ ನಡೆಯಿತು - ಒಂದು ದೃಶ್ಯಾವಳಿ ಕೂಡ ಇತ್ತು (ಸ್ಟೆಲೇರಿಯಂ ಒಂದು 'ಸ್ವತಂತ್ರ' ತಂತ್ರಾಂಶ).

ಚರ್ಚೆಯಲ್ಲಿ ನಾಗೇಶ ಹೆಗಡೆಯವರು ಹಲವು ಪ್ರಮುಖ ವಿಷಯಗಳನ್ನು ಮುಂದಿಟ್ಟರು. ಬರವಣಿಗೆ ಹೊಸ ರೂಪದಲ್ಲಿ ಬರುತ್ತಿರಬೇಕು, ಹೊಸ ನೆಲೆಗಳನ್ನು ಕಂಡುಕೊಂಡು ಮುಂದುವರೆಯುತ್ತಿರಬೇಕು, ಹಳತನ್ನು ಅಥವ ಮತ್ತೊಬ್ಬರ ಬರವಣಿಗೆ ಶೈಲಿಯನ್ನು ನಕಲು ಮಾಡುವಂತಿರಬಾರದು ಎಂಬುದರ ಕುರಿತು ಅವರು ಹೇಳಿದ ಮಾತುಗಳು ನನ್ನ ನೆನಪಿನಲ್ಲಿ ಅಚ್ಚುಳಿದದ್ದು. ತಂತ್ರಜ್ಞಾನದ ಬಗ್ಗೆ ಬರೆಯುವುದಷ್ಟೇ ಅಲ್ಲ, ಅದರ ಬಳಕೆ (ಹೇಗೆ, ಎಲ್ಲೆಲ್ಲಿ ಇತ್ಯಾದಿ), ಅದರಿಂದಾಗುವ ಬೆಳವಣಿಗೆಗಳು, ತೊಡರುಗಳು - ಈ ಕುರಿತು ಬರೆಯುವುದು ಕೂಡ ಅಷ್ಟೇ ಮುಖ್ಯ ಎಂದರು.  ರವಿ ಹೆಗಡೆಯವರು ಬ್ಲಾಗುಗಳು ಸಾಂಪ್ರದಾಯಿಕ ಮಾಧ್ಯಮ ಮುಟ್ಟುವ ಎಷ್ಟೋ ಓದುಗರನ್ನು ಮುಟ್ಟುವುದಿಲ್ಲ ಎಂಬುದರ ಕುರಿತು ತಿಳಿಸುತ್ತ ಅಂತರ್ಜಾಲದಲ್ಲಿ ಬರೆಯುವವರು ಹೆಚ್ಚು ಹೆಚ್ಚು ಸಾಂಪ್ರದಾಯಿಕ ಮಾಧ್ಯಮಗಳಲ್ಲಿ, ಟಿವಿ, ಪುಸ್ತಕ ಇತ್ಯಾದಿಗಳಲ್ಲೂ ತಂತ್ರಜ್ಞಾನ ಹಾಗು ವಿಜ್ಞಾನ ವಿಷಯಗಳ ಬಗ್ಗೆ ಬರೆದು ಮಾಹಿತಿ ಹಂಚಿಕೊಳ್ಳಬೇಕು ಎಂದರು. ಅಂತರ್ಜಾಲದ ಸಾಮರ್ಥ್ಯ ಬಳಸಿ ಹೇಗೆ ಸಮುದಾಯ ಹೊಸ ಹೆಜ್ಜೆಗಳನ್ನಿಟ್ಟು ಬದಲಾವಣೆಗಳನ್ನು ತರಬಹುದು, ಇಲ್ಲಿಂದ ಪ್ರಾರಂಭಿಸಿ ಹೊರನಡೆದು ಹೇಗೆ ರಾಜ್ಯದ ಎಲ್ಲ ಭಾಗಗಳನ್ನು ಮುಟ್ಟಬಹುದು ಎಂಬುದರ ಕುರಿತು ಸಹ ಚರ್ಚೆ ನಡೆಯಿತು. ಈ ರೀತಿಯ ಸಮುದಾಯ ಪ್ರಯತ್ನಗಳು ಹೆಚ್ಚು ದೂರ ಅನಿಸಲಿಲ್ಲ ನಮಗೆ - ಅಂದು ಜೊತೆಗೂಡಿದ್ದ ನಮ್ಮಲ್ಲಿ ಹಲವರಿಗೆ ಇತರರ ಪರಿಚಯವಾದದ್ದು ಕೂಡ ಅಂತರ್ಜಾಲದ ಮೂಲಕವೇ...  'ನಮ್ಮ ಭಾಷೆ' ಎಂಬ ಒಂದು ಆಸಕ್ತಿಯ ಸುತ್ತ ಹೆಣೆದು.
ಅಲ್ಲದೆ ಈಗಾಗಲೇ ಹಲವು ಸಮುದಾಯ ಪ್ರಯತ್ನಗಳು ಅಂತರ್ಜಾಲದಲ್ಲಿ ಪ್ರಾರಂಭಗೊಂಡು ಹೊರಗಿನ ಜನರಿಗೂ ತಲುಪುತ್ತಿರುವುದು.

ಚರ್ಚೆ ಅನೌಪಚಾರಿಕವಾಗಿ ಪ್ರಾರಂಭವಾದದ್ದಲ್ಲದೆ ಹಾಗೆಯೇ ಮುಗಿದದ್ದು ನಮಗೆಲ್ಲ ಒಂದು ರೀತಿಯ ಆಶ್ಚರ್ಯ, ಖುಷಿ ತಂದಿತು. ಕಾರ್ಯಕ್ರಮಗಳು, ಮಾತುಕತೆ ಎಂದರೆ ಎಂದಿನಂತೆ ಕೆಲವರ ಮಾತು - ಇನ್ನುಳಿದವರು ಕುಳಿತು ಕೇಳಿಸಿಕೊಳ್ಳುವುದು ಎಂಬಂತೆ. ಆದರೆ ಈ ದಿನದ ಮಾತುಕತೆ ವಿಭಿನ್ನವಾಗಿದ್ದು, ಎಲ್ಲರಿಗೂ ತಮ್ಮ ಅಭಿಪ್ರಾಯ ಮಂಡಿಸುವ ಸ್ವಾತಂತ್ರ ನೀಡಿತು. ಅಲ್ಲದೆ, ನಮ್ಮ ಮನಸ್ಸಿನ ಮುಂದೆ ಹಾದೂ ಹೋಗಿರದಂತಹ ಕೆಲವು ವಿಷಯಗಳು ಮತ್ತೊಬ್ಬರ ಮಾತಿನಲ್ಲಿ ಕೇಳಿಬಂದಾಗ ಉಪಯೋಗವಾಗುವ ಸಾಧ್ಯತೆಗಳು ಇಲ್ಲಿದ್ದವು. ಇದನ್ನೆಲ್ಲ ಸಾಧ್ಯವಾಗಿಸಿದ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿಯವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಕಾರ್ಯಕ್ರಮ ನಡೆಸಲು ಜಾಗ ಕೊಟ್ಟಿದ್ದಲ್ಲದೆ ಮಧ್ಯಾಹ್ನದ ಊಟ, ಬೆಳಗಿನ ಕಾಫಿ ಮುಂತಾದವುಗಳನ್ನೂ ಅವರೇ ವಹಿಸಿಕೊಂಡಿದ್ದರು! ಇಷ್ಟೆಲ್ಲ ಪ್ರೋತ್ಸಾಹ ನೀಡುವುದಲ್ಲದೆ ಕಾರ್ಯಕ್ರಮ ಮುಕ್ತ, ಸ್ವತಂತ್ರ ಹಾಗು ಸಾಂಪ್ರದಾಯಿಕವಲ್ಲದಂತೆ ನಡೆಸುವಲ್ಲಿ ಇವರ ಸಹಕಾರ ಮರೆಯಲಾಗದ್ದು. ಒಂದು ರೀತಿಯಲ್ಲಿ ಕಾರ್ಯಕ್ರಮ ಸಾಧ್ಯವಾದದ್ದು ಇವರಿಂದಲೇ.

ಅಂದು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ವಂದನೆಗಳು, ಅಭಿನಂದನೆಗಳು. ಮುಂದೊಮ್ಮೆ, ಮತ್ತೊಮ್ಮೆ ಕಾರ್ಯಕ್ರಮ ಇಟ್ಟುಕೊಂಡಲ್ಲಿ ಇಲ್ಲೇ ಅದರ ಕುರಿತು ಬರೆದು ನಿಮಗೆ ತಿಳಿಸುತ್ತೇವೆ. ಈ ಬಾರಿ ಕಾರಣಾಂತರಗಳಿಂದ ಭಾಗವಹಿಸಲಾಗದವರು ಆಗ ಪಾಲ್ಗೊಳ್ಳಬಹುದು. ನವ ಚಿಗುರಾಗಿ ಹಳೆ (ಬೀರ್ ಅಲ್ಲ) ಬೇರಿನ ನಂಟು ಬಿಡದೆ ಹೊಸತನ್ನು ಕಾಣುತ್ತ ಹೊಸ ಹೆಜ್ಜೆ ಇಡೋಣ, ಒಟ್ಟಾಗಿ! 

ಇದೇ ಕುರಿತು ನಾನು ಇಂಗ್ಲೀಷಿನಲ್ಲಿ ಬರೆದ ಬ್ಲಾಗ್ ಇಲ್ಲಿ ಓದಬಹುದು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

summer_glau's picture

ವರದಿಗಾಗಿ ಧನ್ಯವಾದ. ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನದ ಬರವಣಿಗೆಯಲ್ಲಿ ನನಗೆ ಆಸಕ್ತಿ ಇದೆ.
ಅಂದಹಾಗೆ ಒಂದೆರಡು ಪ್ರಶ್ನೆಗಳು.
೧. ಚಿತ್ರದಲ್ಲಿ ವಿಡಿಯೋ ಕ್ಯಾಮರಾ ಕಾಣಿಸುತ್ತಿದೆಯಲ್ಲ. ಈ ಚರ್ಚೆಯ ವೀಡಿಯೋವನ್ನು ನಮಗೆಲ್ಲಾ ತಲುಪಿಸಲು ಸಾಧ್ಯವೇ?
೨. ವಿಡಿಯೋ ಆಗದೇ ಇದ್ದರೆ ಆಡಿಯೋ ಕೂಡ ಓಕೆ. ಆಡಿಯೋ ಎಡಿಟಿಂಗ್ ಮಾಡಲು ನಾನು ತಯಾರು ನೀವು ಅದನ್ನು ಪಾಡ್ ಕಾಸ್ಟ್ ಮಾಡುವ ಯೋಚನೆಯಲ್ಲಿ ಇದ್ದರೆ.
೩. ಮುಂದೆ ಈ ರೀತಿಯ ಚರ್ಚೆಗಳು ಆದಾಗ (ಸೌಲಭ್ಯ ಇದ್ದಲ್ಲಿ) Skype ಮೂಲಕ ಕಾನ್ಫರೆನ್ಸ್ ನಡೆಸಲು ಸಾಧ್ಯವೇ? ಆಗ ಭೌಗೋಳಿಕ ಎಲ್ಲೆಗಳನ್ನು ಮೀರಿ ಜನ ಭಾಗವಹಿಸಬಹುದು.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ವೀಡಿಯೋ ತೆಗೆದವರು ಸುವರ್ಣ ಚ್ಯಾನಲ್ಲಿನವರು. ಅವರಿಗೊಮ್ಮೆ ಕೇಳಿ ನೋಡುವೆ. ಫುಟೇಜ್ ಇದ್ದರೆ ಖಂಡಿತ ಇಲ್ಲಿ ಹಾಕಬಹುದು!

ಈ ರೀತಿಯ ಕಾರ್ಯಕ್ರಮ ಇದೇ ಮೊದಲು ನಾವುಗಳು ಆಯೋಜಿಸಿದ್ದು. ಅಂದುಕೊಂಡಂತೆ ಕೆಲವು ಪ್ರಯತ್ನಗಳು ಸಾಧ್ಯವಾಗಲಿಲ್ಲ. ಸಿ ಐ ಎಸ್ ನಂತಹ ಸಂಸ್ಥೆಗಳ ಬೆಂಬಲವಿಲ್ಲದೆ ಈ ರೀತಿ ಆಯೋಜಿಸುವುದು ಕಷ್ಟ! ಮುಂದಿನ ಸಾರಿ ಖಂಡಿತ ಲೈವ್ ಸ್ಟ್ರೀಮಿಂಗ್ ಅಥವ ಸ್ಕೈಪ್ ಮೂಲಕ ಕಾನ್ಫರೆನ್ಸಿಂಗ್ ಮಾಡ್ಬಹುದು!

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

ಮಾಯ್ಸ೨'s picture

ಸಕ್ಕತ್ .. skype, window messenger ಎಲ್ಲ ಬಳಸ್ಬೋದು...

ಕನ್ನಡದಲ್ಲಿ ವಿಜ್ನಾನ ಬರಹದ ’ಸರಳೀಕರಣ’ಕ್ಕೆ ನನ್ನ ಮನಸ್ಸು :)

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

palachandra's picture

ಲಾಸ್ಟ್ ಟೈಮ್ ಮೀಟ್ ಅಗಿದ್ವಲ್ಲ ಅದೇ ಪ್ಲೇಸಿದು..

ಸಕ್ಕತ್, ವಿಸ್ತೃತ ವಿವರ

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ಹೌದು, ಅದೇ ಜಾಗ. :-)

ನೀನ್ಯಾಕೆ ಬರಲಿಲ್ಲ ಈ ಸಾರಿ?

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

nkumar's picture

ಮೂರು ದಿನ ರಜೆ ಇದ್ದಾಗ ನನ್ನಂತವರು ಊರಿಗೆ ಹೋಗ್ತಿವಿ. ಆದ್ದರಿಂದ ಬರಲಾಗುವುದಿಲ್ಲ. ಗಣಿತದ ಕೆಲವು ಕ್ಲಿಷ್ಟ ಮಾಹಿತಿಯನ್ನು (ಉದಾ: ಡಿಸ್ಟ್ರಿಬ್ಯೂಶನ್ ಫಂಕ್ಷನ್) ತಿಳಿದವರು ಉದಾಹರಣೆ ಸಮೇತ ಕನ್ನಡಕ್ಕೆ ಅನುವಾದಿಸಿದರೆ ಬಹಳ ಒಳ್ಳೆಯದು. ಇದರಿಂದ ಜ್ನಾನವೂ ವೃದ್ಧಿಯಾಗುತ್ತದೆ.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ಎರಡು ದಿನ ರಜೆ ಇದ್ದರೂ ಊರಿಗೆ ಹೋಗುತ್ತೀರಿ. ಎಂಥ ಮಾಡೋದು? :)

ಗಣಿತದ ಕ್ಲಿಷ್ಟ ಮಾಹಿತಿ: ಗಣಿತ ತಿಳಿದವರು ಪ್ರಯತ್ನ ಮಾಡಬಹುದು.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

mowna's picture

ಹರಿ ಅವರೆ,

"ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ" ತಮ್ಮ ಸುದೀರ್ಘ ಲೇಖನ ಕಾರ್ಯಕ್ರಮಕ್ಕೆ ಬರದಿರುವವರಿಗೆ ಸಾಕಷ್ಟು ಮಾಹಿತಿ ನೀಡಿತು. ಭಾಷೆ ಇಲ್ಲದೆ ಮಾಧ್ಯಮವಿಲ್ಲ. ಯಾವುದೇ ಭಾಷೆ ಮಾತನಾಡಿದರು, ಬರೆದರು ಅದರ ಸೊಗಡು ಕೆಡಬಾರದು. ಆದರೆ ದೂರದರ್ಶನ ಹಾಗೂ ಎಫ್.ಎಂ ಗಳಲ್ಲಿ ನಿರೂಪಕ/ಕಿಯರ ಭಾಷೆ ಯಾವ ವರ್ಗಕ್ಕೆ ಸೇರಿಸಬೇಕು ತಿಳಿಯುತ್ತಿಲ್ಲ. ಕನ್ನಡ ಶಾಸ್ತ್ರೀಯ ಭಾಷೆ ಎನಿಸಿಕೊಂಡಿರುವ ಈ ಸಮಯದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವೈದ್ಯಕೀಯ ಪುಸ್ತಕಗಳು ಕನ್ನಡದಲ್ಲಿ ಸಾಕಷ್ಟು ಸಿಗುವಂತಾಗ ಬೇಕು. ಎನ್ನುವುದು ನನ್ನ ಅನಿಸಿಕೆ.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

>> ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವೈದ್ಯಕೀಯ ಪುಸ್ತಕಗಳು ಕನ್ನಡದಲ್ಲಿ ಸಾಕಷ್ಟು ಸಿಗುವಂತಾಗ ಬೇಕು. ಎನ್ನುವುದು ನನ್ನ ಅನಿಸಿಕೆ.

ನಿಜ. ಭಾಷೆಯನ್ನು ಮಾಧ್ಯಮವಾಗಿ ಹೇರುವ ಬದಲು ಬಳಸುತ್ತ ಉಪಯೋಗ ಹೆಚ್ಚಿಸಬಹುದು. ಭಾಷೆಯ ಸೊಗಡಿನ ಕುರಿತ ಮಾತುಕತೆ ಸ್ವಲ್ಪ offtopic. ಮೊದಲು ಬಳಕೆ ನಂತರ ಬಳಕೆಯಲ್ಲಿನ ಸೊಗಡು! :)

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

uniquesupri's picture

ಉತ್ತಮ ವರದಿ.
ಮುಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಎದುರು ನೋಡುತ್ತಿರುವೆ.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ? :)

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

uniquesupri's picture

ಹಬ್ಬ- ಊರಿಗೆ ಹೋಗಿದ್ದೆ.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

mnsantu_7389's picture

ಸರ್,ಏನು ಹೇಳ್ಬೇಕಂತಾನೆ ಗೋತ್ತಾಗತ್ತಿಲ್ಲ!!!!!.ನೀಮ್ಮ ಪ್ರಯತ್ನ ಒಳ್ಳೆಯ ಫಲ ಕೊಡಲೆಂದು ಹಾರೈಸುತ್ತೇನೆ.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ವಂದನೆಗಳು. ಏನಾದರೂ ಹೇಳಲೇಬೇಕೆಂದೇನಿಲ್ಲ, ಹೇಳಿದರೆ ಉತ್ತಮ. ಆದರೆ ಪ್ರಯತ್ನದಲ್ಲಿ ನೀವೂ ಕೈ ಜೋಡಿಸಬಹುದು!

ಇ ಸಾರಿ ಮಿಸ್ ಮಾಡಕೊಂಡೆ.

ohil's picture

ಇ ಸಾರಿ ಮಿಸ್ ಮಾಡಕೊಂಡೆ. ಮನಸ್ಸಿಗೆ ತುಂಬಾ ಬೆಜಾರಾಯ್ತು..

ಉ: ಇ ಸಾರಿ ಮಿಸ್ ಮಾಡಕೊಂಡೆ.

hpn's picture

ಹು ಸಾರ್, ಬರಲಿಲ್ಲವಲ್ಲ!

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

apr's picture

ಹರಿಪ್ರಸಾದ್, ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಬರವಣಿಗೆ - ಸಾಹಿತ್ಯ ಇನ್ನಷ್ಟು ಸಮೃದ್ಧವಾಗಲು ಇಂಥ ಪ್ರಯತ್ನಗಳು ಅಗತ್ಯ. ಬೆಂಗಳೂರಿನಿಂದ ದೂರ ಇರುವುದರಿಂದ ಮತ್ತು ಇತರ ಕೆಲಸಗಳ ಒತ್ತಡದಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗಲಿಲ್ಲ.
ನಾಗೇಶ ಹೆಗ್ಡೆಯವರು ಭಾಗವಹಿಸಿದ ಮೇಲೆ ಚರ್ಚೆ, ಸಂವಾದಗಳು ನಿಸ್ಸಂಶಯವಾಗಿ ಹೊಸ ಸ್ತರಕ್ಕೆ ತಲುಪಿರಬಹುದು.
ಅಂತರ್ಜಾಲದಲ್ಲಿ ಕನ್ನಡವನ್ನು ತರುವಲ್ಲಿ ಬಹಳಷ್ಟು ಕೆಲಸ ಮಾಡಿದ ಪವನಜರ ಉಪನ್ಯಾಸವನ್ನು ನಮ್ಮ ಕಾಲೇಜಿನಲ್ಲಿ ಮೂರು ವರ್ಷಗಳ ಹಿಂದೆ ಏರ್ಪಡಿಸಿದ್ದೆವು. ಆಗ ಅವರು ಯುನಿಕೋಡ್ ಮತ್ತು ಅಂತರ್ಜಾಲದಲ್ಲಿ ಕನ್ನಡ ಬಳಕೆ ಬಗ್ಗೆ ಮಾಡಿದ ಉಪನ್ಯಾಸೆಒಂದು ಬಗೆಯ ಬೆರಗನ್ನಷ್ಟೆ ಉಂಟು ಮಾಡಿತು. ಆದರೆ ಅದೆಲ್ಲ ಇಂದು ನಿಜವಾಗತೊಡಗಿದೆ.
ನಾನಾದರೂ ಅಂತರ್ಜಾಲದ ಪೂರ್ಣ ಬಳಕೆ ಮಾಡಲು ತೊಡಗಿದ್ದು ತೀರ ಇತ್ತೀಚೆಗೆ - ಬ್ರಾಡ್ ಬ್ಯಾಂಡ್ ಸೌಲಭ್ಯ ಬಂದ ಮೇಲೆ. ಅಂದರೆ ಅಂತರ್ಜಾಲದ ಬರವಣಿಗೆ ಹೆಚ್ಚಿನ ಜನರನ್ನು ಮುಟ್ಟಲು ಇನ್ನೂ ತುಸು ಸಮಯ ಬೇಕು. ಹೆಚ್ಚಿನ ಕಡೆ ಅಂತರ್ಜಾಲ ತಾಣ ಇನ್ನೂ ಆಮೆ ನಡಿಗೆಯಲ್ಲಿದೆ.
ಇದರೊಡನೆ ಕನ್ನಡದಲ್ಲಿ ಬರೆದ ವಿಜ್ಞಾನ ಬರಹವನ್ನು ಓದುವ, ಚರ್ಚಿಸುವ ರುಚಿ-ಅಭಿರುಚಿಯನ್ನು ಹೆಚ್ಚಿಸುವ ಪ್ರಯತ್ನಗಳು ಆಗಬೇಕಾಗಿದೆ. ಇಂಥ ನಿಜ ಕಾಳಜಿಯ ಪ್ರಯತ್ನಗಳು ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಬರವಣಿಗೆಯನ್ನು ಇನ್ನಷ್ಟು ಬಲಪಡಿಸುತ್ತದೆ.
ನಿಮಗೆ ಅಭಿನಂದನೆಗಳು.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ಥ್ಯಾಂಕ್ಸ್, ಏ ಪಿ ಆರ್. ಟೆಕ್ ಸಂಪದ ನೋಡಿದ್ದೀರಾ? http://tech.sampada.net

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

savithru's picture

ಶಿವು ಅವರು ಈ ವಿಷಯವನ್ನು ಸಂಪದದಲ್ಲಿ ತಂದಾಗಲೇ, ಪ್ರತಿಕ್ರಿಯೆ ಮಾಡಬೇಕಿನಿಸಿದರೂ, ಸ್ವಲ್ಪ ಆರಾಮವಾಗಿ ಕುಳಿತುಕೊಂಡು ವಿವರವಾಗಿ ಬರೆಯೋಣ ಅನ್ನೋ ಕಾರಣಕ್ಕೆ ನನ್ನ ಪ್ರತಿಕ್ರಿಯೆ ಮುಂದೂಡುತ್ತಲೇ ಬಂದೆ. ;)

"ಇದು" ನನ್ನ ಆಸಕ್ತಿಯ ವಿಷಯವಾಗಿದ್ದರೂ, ನನ್ನಿಂದ ಭಾಗವಹಿಸಲಾಗಲಿಲ್ಲ. :( . ಈ ಪ್ರೊಗ್ರಾಮ್ ಗೆ ಹೊರಟವನು ಕೊನೆ ಕ್ಷಣದಲ್ಲಿ ಬಿಟ್ಟು ಬಿಟ್ಟೆ. ಸ್ವಲ್ಪ ಹೆಚ್ಚ್ಜಿನ ಪ್ರಿಯಾರಿಟಿ ಇರೋ ಜವಾಬ್ಧಾರಿ ಇತ್ತು. ಬರುವೆ ವೀಕೆಂಡುಗಳಲ್ಲಿ ಬಹುಶ ನಾನು ಫ್ರೀ ಅಗ್ತೀನೇನೋ...ಆಗ ಸಂಪದದ ಟೆಕ್ ಟಿಮ್ ನವರನ್ನು ಭೇಟಿ ಮಾಡಬೇಕು.

ಎಲ್ಲಕ್ಕಿಂತ ಮೊದಲು ಸಂಪದಿಗರೆಲ್ಲರ ಭೇಟಿ ಮಿಸ್ಸಾಯ್ತು :( ಅದರಲ್ಲೂ ನಾಗೇಶ ಹೆಗಡೆಯವರ ಭೇಟಿ.

ಭಾಷೆಯ ನಂಟೇ ನಮ್ಮನ್ನು ಇಲ್ಲಿ ಒಬ್ಬರಿಗೊಬ್ಬರು ಬೆಸೆದಿರುವುದು. ಈ ಭಾಷೆಯ ಬಗ್ಗೆ, ಭಾಷಿಕರ ಬಗ್ಗೆ , ಈ ನಿಟ್ಟಿನಲ್ಲಿ ನನ್ನ/ ನಮ್ಮ ಅಳಿಸು ಸೇವೆ , ಸಹಕಾರ ಮುಂದೆ ಇದ್ದೆ ಇರುತ್ತೆ.

( ಒಮ್ಮೊಮ್ಮೆ ಕಾರಣಾಂತರದಿಂದ) ಭೇಟಿ ಆಗದೆ ಇದ್ರೂ ದೂರದಿಂದಲಾದರೂ ಕೈ ಜೋಡಿಸೋಣ.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ಮುಂದಿನ ಸಾರಿ ತಪ್ಪಿಸಬೇಡಿ. :-)

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

shashikannada's picture

ಪ್ರಿಯ ನಾಡಿಗರೇ,

ನಮಸ್ಕಾರ. ಕ್ಷಮಿಸಿ. ಈ ಕಾರ್ಯಕ್ರಮದಲ್ಲಿ ನಾನು ಹಾಜರಾಗಲಿಲ್ಲ. ಕಾರಣ, ಎಲ್ಲರ ಕಾರಣದಂತೆಯೇ ಹಬ್ಬ.ಮುಂದಿನ ಕಾರ್ಯಕ್ರಮಕ್ಕೆ ತಪ್ಪದೇ ಭಾಗವಹಿಸಬೇಕೆಂದಿದ್ದೇನೆ. ನಾಗೇಶ ಹೆಗ್ಗಡೆಯವರ ಸಾಕಷ್ಟು ಲೇಖನಗಳನ್ನು ಓದಿದ್ದೇನೆ. ಅವರ ತಿಳಿವಳಿಕೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇನ್ನು ಇಂಗ್ಲಿಶ್ ಪತ್ರಿಕೆಗಳಲ್ಲಿ ಬರುವ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆಯನ್ನು ಗಮನಿಸಿದರೆ ಕನ್ನಡದಲ್ಲಿ ಬರುತ್ತಿರುವುದು ತೀರಾ ಸಾಧಾರಣ. ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆಯನ್ನು ಬೇರೆ ಭಾಷೆಗಳ ಮಟ್ಟಿಗೆ ಕೊಂಡೊಯ್ಯಲು ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಎಲ್ಲಾ ಕನ್ನಡಿಗರು ಕೈ ಜೋಡಿಸಿ ಮಾಡಬೇಕಾದ ಅಗತ್ಯವಿದೆ. ಕನ್ನಡದ ಬಗ್ಗೆ ಮಾತನಾಡುತ್ತಿರುವುದರಿಂದ ಒಂದು ವಿಚಾರ ಹೇಳುತ್ತೇನೆ: ಯಾರೋ ಒಬ್ಬರು "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ" ಕುರಿತು ಪ್ರಸ್ತಾಪಿಸುತ್ತ "ಕನ್ನಡ ಶಾಸ್ತ್ರೀಯ ಭಾಷೆ ಎನಿಸಿಕೊಂಡಿರುವ ಈ ಸಮಯದಲ್ಲಿ..." ಎಂದು ಹೇಳಿದ್ದಾರೆ. ಆದರೆ, ಶಾಸ್ತ್ರೀಯ ಕನ್ನಡದ ವೆಬ್ ಸೈಟ್ ಆರಂಭವಾಗಿದೆ. ಅದರ ಬಗ್ಗೆ ಎಲ್ಲೂ ಸುದ್ದಿಯೇ ಇಲ್ಲ. ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಬೆರಳೆಣಿಕೆಯಷ್ಟು ಜನರಿದ್ದರು. ಎಲ್ಲರೂ ಕನ್ನಡಿಗರಿಗೆ ಭಾಷಾಭಿಮಾನವಿಲ್ಲ ಎಂದು ಹೀಗಳೆಯುತ್ತಾರೆ. ಆದರೆ, ಅದು ಅರ್ಧ ಸತ್ಯವಷ್ಟೆ. ಪ್ರಚಾರ ಸರಿಯಾಗಿ ಮಾಡ್ಬೇಕು. ಜತೆಗೆ ಭಾಷೆಯ ಬಗ್ಗೆ ಉತ್ಕಟವಾದ ಅಭಿಮಾನ, ಶ್ರದ್ಧೆ ಬೇಕು. ಅದರ ಬಗ್ಗೆ ಸಧ್ಯದಲ್ಲೇ ಬರೀತೇನೆ. ನೀವು ಈಗ ನಡೆಸಿರುವ ಕಾರ್ಯಕ್ರಮದ ಜತೆ ಶಾಸ್ತ್ರೀಯ ಕನ್ನಡದ ಕುರಿತು ಏನಾದರೂ ಮಾಡಲು ಸಾಧ್ಯವಾ ಯೋಚಿಸಿ!

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

hpn's picture

ಗೊತ್ತಾಗಲಿಲ್ಲ. ನೀವು ಹೇಳಿದಂತೆ ಸವಿವರವಾಗಿ ಒಂದು ಲೇಖನ ಬರೆಯಿರಿ, ವಿಚಾರ ಮಾಡೋಣವಂತೆ.

ಉ: ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

rashmi_pai's picture

ಮಧ್ಯಾಹ್ನದ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡದಕ್ಕೆ ಬೇಸರವಿದೆ. ಅಂತೂ ಕಾರ್ಯಕ್ರಮದ ಸವಿವರ ಓದಿ ಖುಷಿಯಾಯಿತು.
ಥ್ಯಾಂಕ್ಸ್ ಹರಿ...:)