ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

(ಸುಮ್ಮನೆ ಒಂದು ಪ್ರಯೋಗ. Disclaimer: ಇಲ್ಲಿ ಬರೆದದ್ದೆಲ್ಲ ನಿಜವಿರಬೇಕಿಲ್ಲ)

ದಿನ: ಭಾನುವಾರ.

ಆಗಲೇ ಬೆಳಿಗ್ಗೆ! ಬೇಗ ಏಳೋಣೆಂದುಕೊಂಡದ್ದು. ಕರೆಂಟು ಹೋಗಿದೆಯಲ್ಲ! ಮತ್ತೆ ಮಲಗಿರುವೆ. "ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತೀಯ, ಸ್ವಲ್ಪ ಹೊತ್ತು ಇನ್ನೂ ಮಲಕ್ಕೋ ಹೋಗು. ಕರೆಂಟು ಬೇರೆ ಹೋಗಿದೆ!" ಎಂದರು ಅಮ್ಮ. ಅಥವ ಕನಸು ಕಾಣುತ್ತಿದ್ದೇನೆಯೆ?

ಅಪ್ಪ ಹಾಕಿಸಿರುವ ತಾರಸಿಯ ಬಣ್ಣ ಕಣ್ಣಿಗೆ ಕಾಣುತ್ತಿದೆ. ಕಣ್ಣು ತೆರೆದಿರುವೆ. ಆದರೆ ಅದನ್ನು ನೋಡಿಯೂ ನಾನು ನೋಡುತ್ತಿಲ್ಲ.
ಯಾವ ದಿನ ಇವತ್ತು? ಏನೇನು ಮಾಡಬೇಕು ಅಂದುಕೊಂಡಿದ್ದೆ?
ಫ್ಯಾನು ತಿರುಗುತ್ತಿಲ್ಲ. ಕರೆಂಟು ಹೋಗಿದೆ.

~.~

ಏನೋ ಡಿಫರೆಂಟು ಈ ದಿನ, ಇವತ್ತು ತಿಂಡಿ ತಿಂದು ಬಂದು ತಕ್ಷಣ ಪುಸ್ತಕ ಹಿಡಿದು ಕುಳಿತಿರುವೆ. ಕಣ್ಣ ಮುಂದೆ ಟೈಪಿಸಿದಂತೆ ಪಟಪಟನೆ ಗೋಚರವಾಗುವ, ಮರೆಯಾಗುವ, ಬದಲಾಗುವ ಅಕ್ಷರಗಳ ಕಂಪ್ಯೂಟರ್ ಸ್ಕ್ರೀನ್ ಇಲ್ಲ. ಬದಲಿಗೆ ಅಕ್ಷರಗಳು ನಿಂತಲ್ಲೇ ಗಟ್ಟಿಯಾಗಿ ನಿಂತಿವೆ. ಪುಸ್ತಕದ ವಾಸನೆ ಪುಸ್ತಕ ಓದುತ್ತಿರುವೆನೆಂಬುದನ್ನು ನೆನಪಿಸಿದೆ. ಸಣ್ಣಗೆ ಕಣ್ಣೆಳೆದುಕೊಂಡು ಹೋಗುತ್ತಿದೆ. ಆದರೂ ಕಥೆಯ ಹಂದರ ಆಗಾಗ ಎಚ್ಚರಿಸುತ್ತಿದೆ.

ಹೊರಗಡೆ ಸ್ವಲ್ಪ ದೈತ್ಯಾಕಾರದವರು ಒಬ್ಬರು ಇನ್ನೂ ವಾಕಿಂಗ್ ಮಾಡುತ್ತಿದ್ದಾರೆ. ಅವರ ನಾಯಿ ಅವರಿಗೆ ದಾರಿ ತೋರಿಸುತ್ತಿರುವಂತಿದೆ. ಅತ್ತ ಮೈನಾ ಹಕ್ಕಿ ಇನ್ನೂ ಬೆಳಗಾಗುತ್ತಿದೆ ಎಂಬಂತೆಯೇ ಕೂಗುತ್ತಿದೆ. ಎಲ್ಲೋ ಕೋಗಿಲೆಯೂ ಕೂಗಿದೆ. ಬೀಸುತ್ತಿರುವ ಗಾಳಿಗೆ ಎದುರಿಗಿರುವ ಹೊಂಗೆ ಮರದ ಎಲೆಗಳು ಪಟಪಟನೆ ಹೊಡೆದುಕೊಳ್ಳುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಗಮನ ಮತ್ತೆ ಕಥೆಯೆಡೆಗೆ.

~.~

ಹೊರಗೆ ಬಿಸಿಲೇರಿದ್ದು ನಾನು ಕುಳಿತಿರುವಲ್ಲಿಗೆ ಕಿಟಕಿಯಿಂದ ಬಂದ ಕಿರಣಗಳು ಧೂಳಿಲ್ಲದ ಧೂಳನ್ನು ತನ್ನೊಳಗೆ ಮಾತ್ರ ಹಿಡಿದಿಟ್ಟು ತೋರಿ ಕೆಲಸಮಯ ನಾನೋದುತ್ತಿದ್ದ ಕಥೆಯನ್ನು ಮರೆಸಿ ನನ್ನ ಮನಸ್ಸನ್ನು ಹಿಡಿದಿಟ್ಟು ಆದದ್ದು ಕಸಿವಿಸಿಯೆ? ವಿಸ್ಮಯವೆ? ತಿಳಿಯಲಿಲ್ಲ. ಕಥೆ ಮುಂದುವರೆದಿದೆ. ಇದು ಬಹಳ ಚೆನ್ನಾಗಿದೆ. ಓ ಎಷ್ಟು ಚೆನ್ನಾಗಿ ಬರೆದಿದ್ದಾರೆ. ಈ ಕಥೆ ಹೀಗಾಗುತ್ತೆ ಅಂತ ಖಂಡಿತ guess ಮಾಡಿರಲಿಲ್ಲ.

~.~

ಅಲ್ಲೆಲ್ಲೋ ಲೈಟ್ ಹತ್ತಿತು. ಕರೆಂಟು ಬಂದಿದೆ. ಕಂಪ್ಯೂಟರ್ ಆನ್ ಮಾಡಬೇಕು. ಪುಸ್ತಕ ಬದಿಗಿಡೋಣ, ಬೂಟ್ ಆಗಿತ್ತಿದೆ. ಎಷ್ಟು ಇ-ಮೇಯ್ಲ್ ಬಂದಿದೆಯೋ, ಯಾರು ಯಾರು ಮೆಸೇಜ್ ಹಾಕಿದಾರೋ, ಇವತ್ತು ಏನು ಚರ್ಚೆ ಮಾಡ್ತಿದಾರೆ? ಸುದ್ದಿ ಬೇರೆ ಓದಲಿಲ್ಲ!
ಇವತ್ತು ಅದೆಲ್ಲ ಬೇಡ, ಆಮೇಲೆ ನೋಡಿಕೊಂಡರಾಯಿತು. ಇವತ್ತು ಒಂದು ಕಥೆ ಬರೆಯೋಣ. ಬೆಳಗ್ಗಿನಿಂದ ಓದಿದ್ದ ಕಥೆಯ ಗುಂಗು ಹೋದಂತಿಲ್ಲ, ಅದಕ್ಕೇ. ಅಥವ ಹೋಗಿರಬೇಕು. ಕಥೆ ಬರೆಯೋಣಂತೆ, ಅದಕ್ಕೇನು?
'ಕ್ರಿಕೆಟ್ ಮ್ಯಾಚ್ ಇದೆಯಲ್ಲ ಇವತ್ತು'. ಹೋ, ಏನಾಯ್ತು ನೋಡಬೇಕು!
ನ್ಯೂಸ್ ಪೇಪರ್ ಆಮೇಲೆ ಕೆಳಗೆ ಹೋಗಿ ತರಬೇಕು. ಗೂಗಲ್ ನ್ಯೂಸ್! cricinfo!
ಅರೆ, ಇದೇನಿದು ಸುದ್ದಿ? ಓಹೋ! ನೋಡಬೇಕು ಎಷ್ಟು ನಿಜ ಹೇಳ್ತಾ ಇದಾರೆ ಅಂತ. hmm...
ಅರೆ ನಾಲ್ಕೂವರೆ ಆಗಿಹೋಯ್ತು ಆಗಲೇ!

ಏನ್ ಮಾಡೋಕ್ ಹೊರಟಿದ್ದೆ?

ಕಥೆ ಬರೆಯೋಣಾಂತ ಹೊರಟಿದ್ದೆನಲ್ವ? ಯಾವ ಎಡಿಟರ್ ಬಳಸೋದು? ಓಹ್ Celtx. ಇದು screenplay ಬರೆಯೋ software ಅಲ್ವ? ಇದರಲ್ಲಿ ಕನ್ನಡ ಸರಿಯಾಗಿ ಬರುತ್ತಿಲ್ಲ ಅಂದಿದ್ರು ಸುದರ್ಶನ್. ನೋಡೋಣ ಒಂದ್ನಿಮಿಷ.
ಹೌದಲ್ವ, ಸರಿಯಾಗಿ ಬರ್ತಾ ಇಲ್ಲ. ನಾನು ಬರೆದಿಟ್ಟಿದ್ದ screenplay ಎಲ್ಲಿ?
ಓಹ್ ಇಲ್ಲಿದೆ. ಕಥೆ ಚೆನ್ನಾಗಿಲ್ಲ. ನಿಜವಾಗ್ಲೂ ಚೆನ್ನಾಗಿಲ್ಲ. ಇಲ್ಲ, ಚೆಂದ ಮಾಡಬಹುದು ಅನ್ಸತ್ತೆ. ಛೆ, ಸುಮಾರು ಹೊತ್ತಾಯ್ತು, ಈಗ ಬೇಡ.

ಏನ್ ಮಾಡೋಕ್ ಹೊರಟಿದ್ದೆ?

ಕ್ರಿಕೆಟ್ ಸ್ಕೋರು!
ಓಹ್ ಭಾರತದವರು ಸೋಲ್ತಿರೋ ಹಾಗಿದೆ! ಸಂಪದದಲ್ಲಿ ಏನು ನಡೀತಿದೆ? ಓಹ್, ಫೆಡರರ್ ಬಗ್ಗೆ ಶಿವು ಬರೆದಿದ್ದಾನೆ. ಸೋತನಾ ಫೆಡರರ್? ಇಲ್ಲ, ಸೋಲೋ ತರಾ ಇದಾನೆ. ಏನೆಲ್ಲ ಹೈಪ್ ಮಾಡಿದ್ರು! ಸೋಬರಾಜ್ ಗೆ ಮತ್ತೊಂದು ಮದುವೆಯಂತೆ. ಹೆ ಹೆ. ಪರ್ವಾಗಿಲ್ಲ ಇವ!
ಇದ್ಯಾವುದೋ ಬಾಲಿವುಡ್ ಸಿನಿಮಾ ಅಂತೆ! ಓಹ್, ಇದು ಗೊತ್ತು. ಇದರ ಹಾಡು ಕೇಳಿದ್ದೆ, ಚೆನ್ನಾಗಿದ್ವು. ಆದರೆ ಇಷ್ಟೆಲ್ಲಾ ಇದರ ಬಗ್ಗೆ ಇವರು ಬರೆಯೋದ್ಯಾಕೆ?
ಏನು, ಸಲ್ಮಾನ್ ಪಪ್ಪು ಅಲ್ವ? ಕಟ್ಕೊಂಡ್ ನನಗೇನು! ಯಡ್ಯೂರಪ್ಪ ಮತ್ತಷ್ಟು ಜನಾನ ಸೇರಿಸಿಕೊಳ್ತಿದಾರಂತೆ ಮಿನಿಷ್ಟ್ರೀಲಿ. ಸರಿಹೋಯ್ತು.

ಏನ್ ಮಾಡೋಕ್ ಹೊರಟಿದ್ದೆ ನಾನು?

ಅರೆ, ಕಥೆ ಬರೆಯೋಣಾಂತ ಹೊರಟಿದ್ದಲ್ವಾ? ಬಿಡು ಲೇಟಾಗಿದೆ. ಮತ್ತೊಂದ್ ಸಾರಿ ಬರೆಯೋಣಂತೆ!

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಥೆ ಬರೆದದ್ದು ಹೀಗಿತ್ತು

anivaasi's picture

ನಿಜವೋ ಅಲ್ಲವೋ ಮುಖ್ಯವೇ ಅಲ್ಲ... ಅದು ತೋರಿಸುವ ಮನಸ್ಥಿತಿ ತುಂಬಾ ಕುತೂಹಲಕಾರಿಯಾಗಿದೆ. ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ. ಈ ಫಾರ್ಮಾಟ್ ತುಂಬಾ ಇಷ್ಟವಾಯಿತು ಕೂಡ.

ಹೌದರಿ, ಕನ್ನಡ celtxನಲ್ಲಿ ಆಗಲ್ಲ... ಬೇರೇನಾದರೂ ಮಾಡಬೇಕು... ಯೋಚಿಸ್ತಿದ್ದೀನಿ.

ಉ: ಕಥೆ ಬರೆದದ್ದು ಹೀಗಿತ್ತು

hpn's picture

Celtx ಕರ್ತೃ (ಅಥವ ಕತೃ?) ನನಗೆ ಪರಿಚಯ. ಅವರಿಗೊಂದು ಮೇಯ್ಲ್ ಹಾಕಿ ನೋಡ್ತೇನೆ. ಮುಂಚೆ ಎಲ್ಲ ಸರಿ ಇತ್ತು. ಹೊಸ ಆವೃತ್ತಿ ಬಂತಲ್ಲ ಇತ್ತೀಚೆಗೆ, ಅದರಲ್ಲಿ ಹದಗೆಟ್ಟಿದೆ!

ಲೂಯಿ ಬ್ಯುನೆಲ್ ನಿರ್ದೇಶಿಸಿರುವ ಚಿತ್ರವೊಂದರ ಕಾಮೆಂಟರಿ ನೋಡುತ್ತಿದ್ದೆ. ನಿರೂಪಣೆ ಒಂಥರಾ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದರು. ನಾನೂ ನೋಡೋಣ, ಈ ರೀತಿ ಬರೆಯಬಹುದೋ ಎಂದು ಹೊರಟವನು ಒಂದಷ್ಟು ಬರೆದೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಕಥೆ ಬರೆದದ್ದು ಹೀಗಿತ್ತು

basavarajdengi's picture

@Disclaimer: ಇಲ್ಲಿ ಬರೆದದ್ದೆಲ್ಲ ನಿಜವಿರಬೇಕಿಲ್ಲ
--ನಿಮ್ಮ ಪಾಲಿಗೆ ಗೊತ್ತಿಲ್ಲ. ಆದ್ರೆ ನಾನಂತೂ ಹೀಗೆ ಮಾಡೋದು. ಬರೀಬೇಕು ಬರೀಬೇಕು ಅಂತ ಅಂದುಕೊಂಡಿದ್ದೆ ಆಯ್ತು. ಕಳೆದ ನಾಲ್ಕಾರು ವರ್ಷಗಳಲ್ಲಿ ಬರ್ದದ್ದು ೨-೩ ಅಸ್ಟೆ

ಉ: ಕಥೆ ಬರೆದದ್ದು ಹೀಗಿತ್ತು

hpn's picture

ಅರ್ಥವೇ ಅಗ್ಲಿಲ್ವಲ್ರಿ! ಅಥವ ನನಗೇ ಅರ್ಥವಾಗ್ಲಿಲ್ವೇನೊ. ನಿಮ್ಮ ಪ್ರತಿಕ್ರಿಯೆ ಎರಡು ಮೂರು ಸಾರಿ ಓದಿದೆ... ಉಹುಂ. ಏನೂ ಅರ್ಥವಾಗಲಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಕಥೆ ಬರೆದದ್ದು ಹೀಗಿತ್ತು

Chamaraj's picture

ತುಂಬಾ ಚೆನ್ನಾಗಿ ಬರೆದಿದ್ದೀರಿ ಹರಿ.

ಬರೆಯಬೇಕು ಅನ್ನೋದನ್ನೇ ಚೆನ್ನಾಗಿ ಬರೆದುಬಿಟ್ಟಿದ್ದೀರಿ. ಇದು ಕಥೆ ಅಲ್ಲ ಅನ್ನೋರಾರು? ತೇಲುವ ವಿಚಾರಗಳನ್ನು ಅಕ್ಷರಗಳನ್ನಾಗಿಸುವುದು ಸುಲಭವಲ್ಲ. ಆದರೆ, ತೇಲುತ್ತಿದ್ದುದೆಲ್ಲ ಅಕ್ಷರಗಳಾಗಿವೆ. ಒಪ್ಪವಾದ ಅನುಭವ ಕಥನವಾಗಿದೆ. ನಿಜಕ್ಕೂ ಚೆನ್ನಾಗಿದೆ.

ಒತ್ತಡದಲ್ಲಿ ಬರೆಯುವುದೇ ನಿಜವಾದ ಬರಹ. ಆರಾಮವಾಗಿ ಕೂತರೆ ಓದಬಹುದು ಮಾತ್ರ. ಆದರೆ, ಬರೆಯುವುದು ನಿಜಕ್ಕೂ ಕಡು ಕಷ್ಟ. ನನ್ನ ಹೆಚ್ಚಿನ ಬರವಣಿಗೆಗಳು, ವರದಿಗಳು, ಲೇಖನಗಳು, ಕವಿತೆಗಳು ಕೂಡ ಡೆಡ್‌ ಲೈನ್‌ ಒತ್ತಡದಲ್ಲೇ ಬರೆದವು.

ನಿಮ್ಮ ’ಕಥೆ’ ಓದಿ ಅವೆಲ್ಲ ಸುಮ್ಮನೇ ನೆನಪಾದವು.

- ಚಾಮರಾಜ ಸವಡಿ

ಉ: ಕಥೆ ಬರೆದದ್ದು ಹೀಗಿತ್ತು

hpn's picture

ಥ್ಯಾಂಕ್ಯೂ.

ಒತ್ತಡದಲ್ಲಿ ಬರೆಯುವುದೇ ನಿಜವಾದ ಬರಹ. ಆರಾಮವಾಗಿ ಕೂತರೆ ಓದಬಹುದು ಮಾತ್ರ. ಆದರೆ, ಬರೆಯುವುದು ನಿಜಕ್ಕೂ ಕಡು ಕಷ್ಟ. ನನ್ನ ಹೆಚ್ಚಿನ ಬರವಣಿಗೆಗಳು, ವರದಿಗಳು, ಲೇಖನಗಳು, ಕವಿತೆಗಳು ಕೂಡ ಡೆಡ್‌ ಲೈನ್‌ ಒತ್ತಡದಲ್ಲೇ ಬರೆದವು.

ತೀರ ಒತ್ತಡದಲ್ಲಿ ಬರೆಯೋದೂ ಬಹುಶಃ ಕಷ್ಟವಾಗಬಹುದು. ತೀರ pressure ಆಗಿಬಿಟ್ಟರೆ ನಮ್ಮ ನ್ಯೂಸ್ ಚ್ಯಾನಲ್ಲುಗಳು literally "ಬ್ರೇಕ್" ಮಾಡುವ ಸುದ್ದಿಗಳಂತಾಗಿಬಿಡಬಹುದು ಅನ್ಸತ್ತೆ. ಸ್ವಲ್ಪ ಮನಸ್ಸಿಗೆ ನಾವೇ ತಂದುಕೊಂಡ ಒತ್ತಡ ಹಾಗೂ ಹಾಕಿಕೊಂಡ ಡೆಡ್ಲೈನ್ ಚೌಕಟ್ಟು ಕೆಲಸ ಮಾಡಬಹುದೇನೊ?

ಬಹುಶಃ ಆ ವೇಗಕ್ಕೆ ಒಗ್ಗಿಕೊಂಡಿರುವ ನಿಮಗೆ (ಹಾಗೂ ಇನ್ನು ಹಲವರು ಪತ್ರಿಕೆಯವರಿಗೆ) ಹೆಚ್ಚಿನ ಒತ್ತಡ ಇದ್ದರೂ ಚೆಂದವಾಗಿ ಬರೆಯಲು ಸಾಧ್ಯವಾಗುತ್ತಿರಬಹುದು, ಒತ್ತಡದಲ್ಲಿ ಕೆಲಸ ಮಾಡಿ ಇರುವ ಅಭ್ಯಾಸದಿಂದ. (ಸಾಫ್ಟ್ವೇರ್ ಜಗತ್ತಿನಲ್ಲೂ ಹೀಗಾಗುತ್ತದೆ. ಸಿಕ್ಕಾಪಟ್ಟೆ pressure ಇದ್ದಾಗಲೂ ಪಟಪಟನೆ ಕೋಡ್ ಮಾಡಲೇಬೇಕು. ಹಲವರು ಈ ಸಮಯದಲ್ಲೂ ಚೆನ್ನಾಗಿ ಕೋಡ್ ಮಾಡ್ತಾರೆ. ಕೆಲವರಿಗೆ ಬರೆದ ಕೋಡ್ ಇಂತಹ ಸಮಯ ಚೆನ್ನಾಗಿ ಬರೋದು ಡೌಟು. ಅಂಥವರಲ್ಲಿ ನಾನೂ ಒಬ್ಬ! - ಆದರೆ ಅದು ಮಾಡಬೇಕಿರುವ ಕೆಲಸ ಮಾಡುವಷ್ಟಕ್ಕೆ ಅದು ರೆಡಿಯಾಗಿರುತ್ತದೆ. perfect ಆಗಿರೋದಿಲ್ಲ).
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಕಥೆ ಬರೆದದ್ದು ಹೀಗಿತ್ತು

Chamaraj's picture

ಒತ್ತಡದಲ್ಲಿ ಬರೆದರೆ ಚೆನ್ನಾಗಿ ಬರೆಯುವುದು ಆಗದು ಎಂಬ ಭಾವನೆ ನನಗೂ ಇತ್ತು. ಆದರೆ, ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಹೋದಂತೆ ಕ್ರಮೇಣ ಆ ಭಾವನೆ ಹೊರಟುಹೋಯಿತು. ಆರಾಮವಾಗಿ ಕೂತು ಬರೆಯಲು ಯತ್ನಿಸಿ ನೋಡಿದ್ದೇನೆ. ಆದರೆ, ಅಂದುಕೊಂಡ ರೀತಿ ಬರೆಯಲು ಆಗಿಲ್ಲ. ಸ್ವಯಂ ಒತ್ತಡವೋ, ಬಾಹ್ಯ ಒತ್ತಡವೋ ಇರಲೇಬೇಕಾಗುತ್ತದೆ. ಇಲ್ಲದಿದ್ದರೆ ಬರಹ ಹೊರಬರುವುದು ಕಷ್ಟ.

ಮುದ್ರಣ ಮಾಧ್ಯಮದಲ್ಲಿದ್ದಾಗ ಸಂಜೆಯಷ್ಟೇ ಹೆಚ್ಚು ಒತ್ತಡವಿರುತ್ತಿತ್ತು. ಆದರೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕರ್ತವ್ಯದ ಮೇಲಿದ್ದ ಪ್ರತಿಕ್ಷಣವೂ ಒತ್ತಡವೇ. ಒತ್ತಡ ಅತಿಯಾಗಿ, ಆಗಿ ಕೊನೆಗೆ ಒಂದು ನಿರ್ಧಾರ ಮಾಡಿದೆ: ಒತ್ತಡವನ್ನು ಸಂತಸದಿಂದ ಅನುಭವಿಸುವುದು. ಅದನ್ನು ಕ್ರಿಯಾತ್ಮಕವಾಗಿ ಬಳಸುವುದು. ಮೊದಮೊದಲು ಕಷ್ಟವನಿಸಿದರೂ ಕ್ರಮೇಣ ಅದು ರೂಢಿಯಾಯಿತು. ಬರವಣಿಗೆಗೆ ವೇಗ ಹಾಗೂ ತೀವ್ರತೆಗಳೆರಡೂ ದಕ್ಕಿದವು.

ಬಹುಶಃ ಇದು ಎಲ್ಲರಿಗೂ ಸಾಧ್ಯ ಅಂತ ಅಂದುಕೊಂಡಿದ್ದೇನೆ.

- ಚಾಮರಾಜ ಸವಡಿ

Syndicate content