ಆ ಇಂಜಿನೀಯರಿಂಗ್ ಕಾಲೇಜಿನ ಕಾರ್ಯಕ್ರಮ ಹೋದವರ್ಷ ತಪ್ಪಿಸಿಕೊಂಡಿದ್ದೆ. ಕೊನೆಯ ಘಳಿಗೆಯಲ್ಲಿ ಬರಲಾಗದು ಎಂದು ಹೇಳಿದ್ದರ ಅಳುಕು ಮನಸ್ಸಿನಲ್ಲಿತ್ತು. ಹೀಗಾಗಿ ಈ ಬಾರಿ ಅಲ್ಲಿಯ ಹುಡುಗರು ಎಂದಿನ enthusiasmನಲ್ಲಿಯೇ ಕರೆದಾಗ ಬರುತ್ತೇನೆ ಎಂದು ಒಪ್ಪಿಕೊಂಡದ್ದು. ಹೆಚ್ಚಿನಂತೆ ನಾನು ಕಾರ್ಯಕ್ರಮಗಳಿಗೆ ಏನಾದರೂ ಸಬೂಬು ಹೇಳಿ ಚಕ್ಕರ್ ಹೊಡೆಯೋದೇ ಹೆಚ್ಚು.
ಕಾರ್ಯಕ್ರಮ ಎಂದಿನಂತೆ ದೀಪ ಹಚ್ಚುವುದರ ಜೊತೆಗೆ ಪ್ರಾರಂಭವಾದದ್ದು ಸ್ವಲ್ಪ ಇರುಸುಮುರುಸಾದದ್ದು, ಕಾರ್ಯಕ್ರಮದ "ಮುಖ್ಯ ಅತಿಥಿ"ಯಾದದ್ದು ನನಗೆ ಹೊಸತು. ತದನಂತರ ನಾನು ಎಂದಿನಂತೆ ಬಡಬಡನೆ ಮಾತನಾಡಿದ್ದು. ವಿದ್ಯಾರ್ಥಿಗಳು ಕೇಳಿದ ಕೆಲವು ಪ್ರಶ್ನೆಗಳು ಬಹಳ ಚೆನ್ನಾಗಿದ್ದವು. ಇದೆಲ್ಲ ಮುಗಿದ ನಂತರ ಅವರೊಡನೆ ಹಾಗೂ ಉಳಿದ ಅತಿಥಿಗಳೊಡನೆ ಮಾತುಕತೆ ಖುಷಿ ತಂದಿತು.
ಮೈಸೂರಿನಲ್ಲಿದ್ದಾಗ "ಇದು posh ಏರಿಯ" ಎನ್ನುತ್ತ ಕಾಲಿಡದ ಏರಿಯದಲ್ಲಿನ ಒಂದು ಚೆಂದದ ಹೋಟೆಲಿನಲ್ಲಿ ರಘು ಜೊತೆಗೆ ಅದೇ ಎಂದಿನ ನಾನ್, ರೋಟಿ ತಿಂದು ಶಶಿ ಮನೆಗೊಂದು ಭೇಟಿ ಕೊಟ್ಟು ಹೊರಟಾಗ ಹತ್ತೂವರೆಯಾಗಿತ್ತು. ಬಸ್ ಸಿಗುತ್ತೋ ಇಲ್ಲವೋ ಎಂದು ಆಲೋಚಿಸುತ್ತಿರುವಂತೆಯೇ "ಅಂಬಾರಿ" ಅಂತ ಬೋರ್ಡ್ ಕಂಡದ್ದು.
ಅಂಬಾರಿಯಲ್ಲಿ ಭೀಮಾರಿಯಾಗುವಷ್ಟು AC. ಅಲ್ಲೊಂದು ಕಡೆ AC ನೀರು ಲೀಕ್ ಆಗುತ್ತಿದುದನ್ನು ನೋಡಿ "ಅಂಬಾರಿಯಲ್ಲಿ ಗಾಳಿ ಆಡುತ್ತಿದೆ, ಆದರೆ ನೀರೂ ಸೋರುತ್ತಿದೆ" ಎಂದು ಯಾರೋ ಮಾತನಾಡುತ್ತಿದ್ದುದು ಜೋರಾಗಿ ಕೇಳಿಸಿದಾಗ ಕಂಡಕ್ಟರು ಇರುಸುಮುರುಸಾದ. ಆದರೆ ಹೋದ ಸಾರಿ ಹತ್ತಿದ ಬಸ್ಸಿಗಿಂತ ಇದರಲ್ಲಿ ಬೆಲೆ ಕಡಿಮೆ ಇದ್ದದ್ದು ಗಮನಕ್ಕೆ ಬಂತು.
ಬೆಂಗಳೂರು ತಲುಪಿದಾಗ ಸುಮಾರು ಒಂದು ಗಂಟೆ. ಸೆಟಲೈಟ್ ಟೌನಿನಲ್ಲಿ ಬಿಕೋ ಎನ್ನುವಷ್ಟು. ಕ್ಲೋಕ್ ರೂಂ ಹುಡುಗನನ್ನು ಬಡಿದೆಬ್ಬಿಸಿ ಹೆಲ್ಮೆಟ್ ತೆಗೆದುಕೊಂಡು ಬಂದು ಚಳಿಯಲ್ಲಿ ಮುಸುಕ ಹೊದ್ದು ಕುಳಿತಿದ್ದ ಗಾಡಿ ಸ್ಟಾಂಡಿನವರ ಕಷ್ಟ ಸುಖ ವಿಚಾರಿಸಿ ಹೊರಟರೆ ರೋಡು ಖಾಲಿ ಖಾಲಿ. ಅಲ್ಲೊಂದು ಕಡೆ ಯಾರದೋ ಹೆಲ್ಮೆಟ್ಟು ತುಂಡಾಗಿ ಪುಡಿಪುಡಿಯಾಗಿ ಬಿದ್ದಿತ್ತು. ಯಾವುದೋ accident ಆಗಿರಬೇಕು. ಶೆಲ್ ಪೆಟ್ರೋಲು ಬಂಕು ಬಾಗಿಲು ಹಾಕಿತ್ತು! ನಾಳೆ ಪೆಟ್ರೋಲ್ ಸ್ಟಾಕ್ ಇಲ್ಲ ಎಂಬ ಬೋರ್ಡು ನೋಡಬೇಕು ಇನ್ನು.
ಅಲ್ಲಿಲ್ಲಿ ಹಲವೆಡೆ ಮರಗಳಿಗೆ ಕತ್ತರಿ ಬಿದ್ದಿತ್ತು. ಬಹುಶಃ ರಾತ್ರೋ ರಾತ್ರಿ ಸಾಗಿಸುವ ಪ್ಲಾನ್ ಇರಬಹುದು. ಅಲ್ಲೆಲ್ಲೋ ("ಗಣೇಸ"ನ ಪೆಂಡಾಲ್?) ಜಗಮಗ ಲೈಟು ಇನ್ನೂ ರೋಡು ತುಂಬ ಉರಿಯುತ್ತಿದ್ದು ಯಾರೂ ಕೇಳದಂತೆ ಅದು. ಮತ್ತಷ್ಟು ದೂರ ಹೋದ ಮೇಲೆ ನಿರ್ಜನ ರೋಡಿನಲ್ಲಿ ಪೂರ್ಣ ಕತ್ತಲೆ! ಎಂತಹ irony! ಆದರೆ ಬೈಕಿನಲ್ಲಿ ಅರ್ಧ ನಿಮಿಷ ಕತ್ತಲೆ. ದೂರದ ಸಿಗ್ನಲ್ ಕಾಣುತ್ತಲೇ ಇತ್ತು.
ಬೆಂಗಳೂರಲ್ಲಿ ರಾತ್ರಿ ಹೊತ್ತು ಬೈಕು ಅಥವ ಕಾರು ತೆಗೆದರೆ ಅತ್ತಿತ್ತ ಕಾಣುವ ಶ್ವಾನಗಳ ಮೇಲೂ ಕಣ್ಣಿಟ್ಟಿರಬೇಕು! ಯಾವಾಗ ಅವುಗಳಿಗೆ ಕಾರು ಬೈಕುಗಳ ಮೇಲೆ ಇದ್ದಕ್ಕಿದ್ದ ಹಾಗೆ ಸಿಟ್ಟು ಬಂದು "chase" ಮಾಡುತ್ತವೆಯೋ ಗೊತ್ತಾಗುವುದಿಲ್ಲ.
ಇಷ್ಟೆಲ್ಲ ಗಮನಿಸುತ್ತ ಮನೆಗೆ ಬಂದಾಗ ಎರಡು ಗಂಟೆ. ನೋಡಿದರೆ "ಇಷ್ಟೊತ್ತಾದರೂ ಬರಲಿಲ್ಲ" ಎನ್ನುತ್ತ ಅಮ್ಮ ನಿದ್ರೆ ಮಾಡದೆ ಮಹಡಿಯ ಮೇಲೆ ಕಾಯುತ್ತ ನಿಂತಿದ್ದಾರೆ! ಏನೂ ಮಾತು ಹೊರಡದೆ "ಯಾಕೆ ಮಲಗಲಿಲ್ಲ ಇಷ್ಟೊತ್ತಾದರೂ" ಎಂದಷ್ಟೆ ಕೇಳಿ ಒಳನಡೆದೆ.

- hpn ರವರ ಬ್ಲಾಗ್
- Login or register to post comments
- 553 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.



RSS:
ಉ: ಅಂಬಾರಿ ದಿನಚರಿ
ಪ್ರಿಯ ಹರಿಯವರೆ,
ಈರೀತಿ ರಾತ್ರಿಯ ಅಪಾಯಗಳ ಬಗ್ಗೆಯೆಲ್ಲ ವರ್ಣಿಸುತ್ತಾ ನಡುರಾತ್ರಿಯಲ್ಲಿ ಮನೆ ತಲುಪಿದೀರಲ್ಲ. ಇವುಗಳ ಬಗ್ಗೆ ತಿಳಿದಿರುವ ನಿಮ್ಮ ಅಮ್ಮ ಅವರಿಗೆ ನಿದ್ದೆ ಹೇಗಾದರೂ ಬಂದೀತು? ಯಾವ ತಾಯಿಗೆ ತಾನೇ ಬಂದೀತು? ಅದಕ್ಕೆ ಅಲ್ಲವೇ ಅನ್ನೋದು ಅಮ್ಮ ಅಂದರೆ ಸ್ಪೆಷಲ್ ಅಂತ. ಅಮ್ಮ ಅಮ್ಮಾನೆ. ನಿಮ್ಮ ಬರಹದಿಂದ ನನ್ನ ಮಕ್ಕಳು ತಡವಾಗಿ ಬರುವಾಗಲೆಲ್ಲಾ ನಾನು ಅನುಭವಿಸಿದ, ಅನುಭವಿಸುತ್ತಿರುವ ಆತಂಕಗಳೆಲ್ಲಾ ನೆನಪಾಗುತ್ತವೆ.
ಶೈಲಾಸ್ವಾಮಿ
ಉ: ಅಂಬಾರಿ ದಿನಚರಿ
ಹರಿ, ನಿಮ್ಮ ಲೇಖನ ನನ್ನ ಅಪೂರ್ಣ ಕನಸನ್ನು ಮತ್ತೆ ನೆನಪಿಸಿತು.
ರಾತ್ರಿ ಹೊತ್ತು ಬೆಂಗಳೂರು ಸುತ್ತೋ ಮಜಾನೇ ಬೇರೆ. ರಿಸ್ಕ್ ಇಲ್ಲವೆಂದಲ್ಲ. ಆದರೂ, ಬೆಂಗಳೂರು ಆಗ ಕಾಣುವ ರೀತಿ ಇದೆಯಲ್ಲ, ಅದು ಹಗಲು ಖಂಡಿತ ಸಿಗೋಲ್ಲ. ಪ್ರಜಾವಾಣಿಯಲ್ಲಿ ಇದ್ದಾಗ, ಈ ಬಗ್ಗೆ ಬರೆಯಬೇಕೆಂದು ಫೊಟೊ ತೆಗೆಸಲು ಯತ್ನಿಸಿದೆ. ಆದರೆ, ಆ ಪ್ರಯತ್ನ ನಿರೀಕ್ಷಿತ ಫಲ ಕೊಡಲಿಲ್ಲ. ಸರಿಯಾದ ಒಂದೆರಡು ಫೋಟೊಗಳಾದರೂ ಸಿಕ್ಕರೆ, ಬರವಣಿಗೆಗೆ ಬಲ ಬರುತ್ತದೆ ಎಂದು ಇನ್ನೂ ಕಾಯುತ್ತಿದ್ದೇನೆ.
- ಚಾಮರಾಜ ಸವಡಿ
http://chamarajsavadi.blogspot.com