"ನಿತ್ಯ ಹುಟ್ಟಿ ಮುಳುಗುವ ರವಿ"
ಹುಟ್ಟುಹಬ್ಬ ನನಗೆಂದೂ ಯಾವ ಕಾರಣಕ್ಕೂ ವಿಶೇಷ ಎನಿಸಿದ್ದಿಲ್ಲ. ಒಂದೊಮ್ಮೆ ಮತ್ತೊಂದು ವರುಷ ಕಳೆದುಹೋಯಿತಲ್ಲ ಎಂಬ ಬೇಸರ ಮೂಡಿಸುತ್ತಿದ್ದುದಂತೂ ನಿಜ. ಆದರೆ ಅದೂ ಹೆಚ್ಚು ಹೊತ್ತು ಮನಸ್ಸಿನಲ್ಲುಳಿಯುತ್ತಿರಲಿಲ್ಲ. ಹುಟ್ಟುಹಬ್ಬದ ಕೇಕ್, ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ನೆರೆಯುವ ಜನ, ಆ ನಂತರದ ಘಳಿಗೆ, ನೆರೆದವರಿಂದ ಸಿಗಬಹುದಾದ ಉಡುಗೊರೆ - ಇವು ಯಾವೂ ನನಗೆಂದೂ ಆಸಕ್ತಿ ಹುಟ್ಟಿಸಿದ್ದಿಲ್ಲ. ಕಾಲೇಜಿನ ಕ್ಲಾಸ್ ರೂಮಿನಲ್ಲಿ ಯಾರದ್ದಾದರೂ 'ಬರ್ತ್ ಡೇ'ಗೆಂದು ಕ್ಲಾಸ್ ಮುಗಿಯುತ್ತಲೇ ಕೇಕ್ ಕಟ್ ಮಾಡಿಸಿದ ಸಮೂಹ ಕೇಕೆ ಹಾಕುತ್ತಿದ್ದರೆ ನನ್ನ ಮನಸ್ಸು ನನ್ನನ್ನು ಅದೆಲ್ಲದರಿಂದ ದೂರ ಓಡುವಂತೆ ಮಾಡುತ್ತಿತ್ತು. ಅದೇ ಆ 'ಬರ್ತ್ ಡೇ ಬೇಬಿ'ಯಿಂದ 'ಟ್ರೀಟ್' ಸಿಕ್ಕ ನಂತರ ಬರ್ತ್ ಡೇ ಯಾರದ್ದು ಎಂಬುದೂ ನೆನಪಿರದಂತೆ ಇರುತ್ತಿದ್ದ ದೃಶ್ಯ ಕೇಕ್ ಕಟ್ ಮಾಡಿಸಿದವರ ವಿಶ್ವಾಸ ಎಷ್ಟಿರಬಹುದು ಎಂಬುದರ ಬಗ್ಗೆ ಅಪಾರ ಆಲೋಚನೆಗಳು ಸುಳಿದು ಹೋಗುವಂತೆ ಮಾಡುತ್ತಿತ್ತು.
ಹುಟ್ಟುಹಬ್ಬ ಆಚರಣೆ ಅವರವರ ಭಾವನೆಗಳಿಗೆ, ಆದರ್ಶಗಳಿಗೆ, ಆಲೋಚನೆಯ ರೀತಿಗೆ ಬಿಟ್ಟದ್ದು ಎಂದು ನನಗನಿಸುತ್ತದೆ. ತಮಗೆ ನೆಮ್ಮದಿ ಸಿಗುವ, ತಮಗೆ ಸಂತೋಷ ಉಂಟುಮಾಡುವ ಯಾವುದೇ ಆಚರಣೆ ಅಂದಿನ 'ಹಬ್ಬ'ವಾಗಬಹುದು ಎಂದು ನನ್ನ ಅನಿಸಿಕೆ. ಅದು ತನಗಿಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವುದಿರಬಹುದು, ತನಗೆ ಇಷ್ಟವಾದೆಡೆ ಕುಳಿತು ಸಮಯ ಕಳೆಯುವುದಿರಬಹುದು. ಯಾವ ಆಚರಣೆಯನ್ನೂ ಕೀಳಾಗಿ ನೋಡಬೇಕಿಲ್ಲ, ಯಾವ ಆಚರಣೆಯನ್ನೂ ಆಡಂಬರದಿಂದ ಕಾಣಬೇಕಿಲ್ಲ. ಕೊನೆಗೆ ಆ 'ಹಬ್ಬ' ನಡೆಸಿದ ರೀತಿಗೊಂದು ನಾವು ಅರಿಯದ ಕಾರಣವೇ ಇದ್ದಿರುತ್ತದೆ. ಒಂದೊಮ್ಮೆ ಅರಿತರೂ ಅರಿಯದಂತಿರುತ್ತೇವೆ. ಅವರವರ ಇಷ್ಟದಂತೆ ಇರಬಹುದು ಆಚರಣೆ. ಅವರವರ ಸ್ವಂತದ ವಿಚಾರ.
ನನಗೆ ಇಪ್ಪತ್ತಾರು ವರ್ಷ ತುಂಬಿದ ದಿನ (ಅಂದರೆ ನಿನ್ನೆ) ಕೂಡ ನನಗೆ ಅಂತಹ ವಿಶೇಷ ದಿನ ಅನ್ನಿಸಿದ್ದಿಲ್ಲ. ಆದರೆ ಈ ದಿನ ಹತ್ತಿರಬರುತ್ತಿದ್ದಂತೆಯೇ ಕಳೆದ ವರುಷದ ನೆನಪು, ಅವಲೋಕನ ನನ್ನ ಮನಸ್ಸಿನಲ್ಲಿ ನನಗರಿವಿಲ್ಲದಂತೆಯೇ ಪ್ರಾರಂಭವಾದದ್ದು ಎಂದಿನಂತೆಯೇ. ಕಳೆದ ವರುಷದಲ್ಲಿ ನಾನಂದುಕೊಂಡಿದ್ದ ಹಲವು ವಿಷಯಗಳು ಕಾರ್ಯರೂಪಕ್ಕೆ ಬಂದದ್ದು, ಎಷ್ಟೋ ಬರದೇ ಹೋದದ್ದು, ಜೀವನ ಕಹಿ ಸಿಹಿಗಳ ನಡುವೆ ಹೊರಳುತ್ತ, ಟಾಗಲ್ ಮಾಡುವಂತಿದ್ದದ್ದು, ಹೊಗಳಿಕೆ, ತೆಗಳಿಕೆಗಳೆರಡೂ ಇದ್ದದ್ದು - ಎರಡನ್ನೂ ಒಂದೇ ರೀತಿ ತೆಗೆದುಕೊಳ್ಳುವ ಪಾಠವನ್ನು ಕಲಿತದ್ದು, ಮಾಡಿದ ತಪ್ಪುಗಳನ್ನು ಕೆದಕಿ ನೋಡುತ್ತ ಅವುಗಳನ್ನು ಸರಿಪಡಿಸುವತ್ತ ಒಲವು ತೋರಿದ ಮನಸ್ಸು, ಇದೇ ಸಮಯದಲ್ಲಿ ಹೋದ ವರ್ಷ ಇದ್ದಷ್ಟು ಕತ್ತಲೆ ಈಗ ಇಲ್ಲ ಎಂಬ ಸಮಾಧಾನ, ಎಲ್ಲ ಕಷ್ಟಗಳ, ಎಲ್ಲ ಎಡರುತೊಡರುಗಳ ನಡುವೆ, ಭರವಸೆಯ ಹಸುರಿನ ಚಿಗುರು ಕಣ್ಣಿಗೆ ಕಾಣುತ್ತಿರುವುದು - ಎಲ್ಲದಕ್ಕಿಂತ ಮಿಗಿಲಾಗಿ ಇವೆಲ್ಲ ನಾ ಹೊರಟಿರುವುದು ಕಷ್ಟದ್ದಾದರೂ ಸರಿ ದಾರಿ ಎಂಬ ಆತ್ಮವಿಶ್ವಾಸ ಮೂಡಿಸಿರುವುದು - ಇವೇ ಮೊದಲಾದ ಆಲೋಚನೆಗಳು ಮನದ ಸುತ್ತ ಹಾದು ಹೋದದ್ದಿದೆ. ಸ್ವಂತದ ನಿರ್ಣಯಗಳು ಎಷ್ಟು ಕಠಿಣತೆ ನಿರೀಕ್ಷಿಸುತ್ತದೋ, ಅಷ್ಟೇ ಕಠಿಣ ಪರಿಸ್ಥಿತಿಗಳನ್ನೊಡ್ಡಿ, ಜೊತೆಜೊತೆಗೇ ಸ್ವಂತಿಕೆಯ ಬಲ ನೀಡುತ್ತ ಮುನ್ನಡೆಸುತ್ತದೆ. ಆ ನಿಟ್ಟಿನಲ್ಲಿ ಹುಟ್ಟು ಹಬ್ಬದ ದಿನ ಹತ್ತಿರ ಬರುತ್ತಿರುವಂತೆ ಮನಸ್ಸನ್ನು ಕಾಡುತ್ತಲೇ ಅಮೂರ್ತ ಚಿತ್ರಣಗಳಲ್ಲಿ ಆಲೋಚನೆ ಕೆದಕುವ ಘಳಿಗೆಗಳು 'ವಿಶೇಷ'ವೆನ್ನಲಾಗದಿದ್ದರೂ ತನ್ನದೇ ರೀತಿಯದ್ದು.
ಈ ಸಾರಿ ನನಗೆ ವಿಶೇಷ ಎನಿಸಿದ್ದು ನನ್ನ ಮೇಲೆ ಹಲವರು ಇಟ್ಟಿರುವ ಪ್ರೀತಿ, ವಿಶ್ವಾಸ. ದೂರದ ಶಿವಮೊಗ್ಗದ ಹಳೆಯ ಪರಿಚಯ, ಹೊಸ ಪರಿಚಯ, ಸ್ನೇಹಿತರು - ಎಲ್ಲರೂ ನನ್ನ ಮೇಲೆ ಇಟ್ಟಿರುವ ವಿಶ್ವಾಸ ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸುವಷ್ಟು. ಸಂಪದಿಗರು ಹಲವರು ಹುಟ್ಟುಹಬ್ಬದಂದು ಶುಭ ಹಾರೈಕೆಗಳನ್ನು ಕಳುಹಿಸಿದಿರಿ. ನಿಮ್ಮ ಹಾರೈಕೆಗಳಿಗೆ ನಾನು ಋಣಿ. ನೀವೆಲ್ಲ ಕೊಟ್ಟ ಗಮನ ನನ್ನನ್ನು ಸಂಪದದಿಂದಲೂ ದೂರ ಓಡಿಸುವಷ್ಟಾದರೂ ನಾನು ಇಲ್ಲಿಯೇ ಇದ್ದೇನೆ. ಆದರೆ ಈ ತಿಂಗಳು ಅಲ್ಲಿಗಲ್ಲಿಗೆ ಸರಿದೂಗಿಸಿದರೇ ಗೆದ್ದೆ ಎಂಬಂತಿರುವಾಗ ಎಲ್ಲರಿಗೂ 'ಟ್ರೀಟು' ಕೊಡಿಸುವುದು ಸಾಧ್ಯವಾಗದಿರಬಹುದು. ಮುಂದೊಂದು ದಿನ ಇದೇ ನೆಪದಲ್ಲಿ ಎಲ್ಲರೂ ಸಿಕ್ಕು ಮಾತನಾಡೋಣವಂತೆ, ನಿಜವಾದ ಸಂಭ್ರಮ ಬೇರೆ ಇಟ್ಟುಕೊಳ್ಳೋಣವಂತೆ.
ಒಂದೆರಡು ವಾರ ಸುಮಾರು ಕೆಲಸಗಳನ್ನು ನನ್ನ ತಲೆಯ ಮೇಲೇ ಹಾಕಿಕೊಂಡು ಸ್ವತಃ ಕಣ್ಣು ನೋಯಿಸಿಕೊಂಡಿದ್ದೆ. ಹೀಗಾಗಿ ಸೋಮವಾರ ನನಗೆ ಹೊಳೆದದ್ದು ಹುಟ್ಟುಹಬ್ಬದಂದು ಕೆಲಸವೆಲ್ಲ ಬಿಟ್ಟು ಏಕಾಂತ, ನೆಮ್ಮದಿ ಅರಸಿ ಹೊರಡುವುದು ಎಂದು. ಆದರೆ ಕಂಪ್ಯೂಟರ್, ಮೊಬೈಲುಗಳನ್ನಿಟ್ಟುಕೊಂಡು ಅದೂ ಸಿಟಿಯಲ್ಲಿದ್ದವರಿಗೆ ಇದು ಆಗದಾ ಮಾತು. ಸರಿಯಾದ ನಿದ್ರೆಯಾದರೂ ಮಾಡೋಣವೆಂದು ರಾತ್ರಿ ಮಲಗುವ ವೇಳೆಯಿಂದ ಬೆಳಗಾಗುವವರೆಗೂ ಸೈಲೆಂಟ್ ಮೋಡ್ ನಲ್ಲಿ ಇಟ್ಟು "ವಿಶ್ ಮಾಡೋಣ ಅಂದರೆ ಫೋನ್ ಎತ್ತಿಕೊಳ್ಳೋದಿಲ್ಲವಲ್ಲೋ" ಎಂದೆನಿಸಿಕೊಂಡದ್ದಾಯಿತು. ತದನಂತರ ಬೆಳಗ್ಗಿನಿಂದ ಒಂದರ ಹಿಂದೆ ಒಂದರಂತೆ ಬಂದ ಫೋನ್ ಕಾಲ್ ಗಳು ನನ್ನನ್ನು ಕಟ್ಟಿಹಾಕಿದ್ದು irony. ಜೊತೆಜೊತೆಗೇ ಹಾರೈಸಿದ ಎಲ್ಲರ ವಿಶ್ವಾಸ ನನಗೆ ಆಶ್ಚರ್ಯ ತಂಡೊಡ್ಡಿದುದರ ಜೊತೆಗೆ ಎಚ್ಚೆತ್ತಿಸಿದಂತಿತ್ತು. ಉಳಿದಷ್ಟು ಹೊತ್ತು ಬಹಳ ದಿನಗಳಿಂದ ಓದಬೇಕು ಎಂದುಕೊಳ್ಳುತ್ತಿರುವ ಪುಸ್ತಕವೊಂದನ್ನು ಕೈಲಿಟ್ಟುಕೊಂಡು ಕಳೆದದ್ದು.
ಸಾಯಂಕಾಲ ಮಾತ್ರ ಸ್ವಲ್ಪ ಹೊತ್ತಾದರೂ ಶುದ್ಧ ಗಾಳಿ ಉಸಿರಾಡಿ ಬರಬೇಕೆಂದು ಹೊಂಚು ಹಾಕಿ, ಫೋನ್ ಮಾಡಿ ತಿಳಿಸಿ ನಾಗೇಶ ಹೆಗಡೆಯವರ ತೋಟದ ಮನೆಯ ಕಡೆಗೆ ಹೊರಟೆ. ಶಾಲೆಯಲ್ಲಿದ್ದಾಗ ನನ್ನನ್ನು ಕನ್ನಡ ಓದು, ಬರಹಗಳೆಡೆಗೆ ಸೆಳೆದ ಬರಹಗಳಲ್ಲಿ ನನ್ನ ಮೇಲೆ ಅತಿ ಹೆಚ್ಚಿನ ಪ್ರಭಾವ ಬೀರಿದ ಲೇಖನಗಳು ನಾಗೇಶ ಹೆಗಡೆಯವರದ್ದು. ಒಂದು ದಿನ ನಮ್ಮ ಶಾಲೆಯ ಪಠ್ಯದಲ್ಲಿ ಓದಿ ನೆನಪಿಟ್ಟುಕೊಳ್ಳುತ್ತಿದ್ದ ಹೆಸರುಗಳನ್ನು ಮುಖತಃ ಭೇಟಿ ಮಾಡಿ ವ್ಯಕ್ತಿ ರೂಪದಲ್ಲಿ ಕಾಣಲೂಬಹುದು ಎಂದು ನಾವುಗಳು ಶಾಲೆಯಲ್ಲಿ ಎಣಿಸಿದ್ದೆವೋ ಇಲ್ಲವೋ ನೆನಪಿಲ್ಲ. ಆದರೆ ನಮ್ಮ ಮೇಲೆ ಪ್ರಭಾವ ಬೀರಿದವರನ್ನು ಭೇಟಿಯಾಗಿ ಮಾತನಾಡಿಸುವುದು ಇರಲಿ, ಅವರು ತಾವು ಬರೆದ ಲೇಖನಗಳಷ್ಟೇ ಸರಳ ಜೀವನದ ವ್ಯಕ್ತಿತ್ವ ಎಂದು ಮುಖತಃ ಭೇಟಿಯಾಗಿ ತಿಳಿಯುವುದಿದೆಯಲ್ಲ, ಅದು ಅಪೂರ್ವವಾದುದು.
ಮೈತ್ರಿ ಫಾರ್ಮ್ ತಲುಪಿದಾಗ ಎಡಗಡೆ ಕಾಣುತ್ತಿದ್ದ ಕೆರೆಯ ಬಾತುಕೋಳಿಗಳು ಕಣ್ಣಿಗೆ ಬಿದ್ದವು. ಬೈಕ್ ಪಾರ್ಕ್ ಮಾಡಿ ತೊಟ್ಟಿಯಲ್ಲಿ ಹಾವು ಕಾಣುತ್ತದೆಯೇ ಎಂದು ಒಮ್ಮೆ ಇಣುಕಿ ನಂತರ ಫಾರ್ಮ್ ಒಳಹೋಗುತ್ತಿರುವಂತೆ ರೇಖ 'Hi' ಹೇಳಿದರು. ಅವರು ಎಂದಿಗೂ cheerful! ಹುಟ್ಟುಹಬ್ಬದ ಚಾಕಲೇಟು ಕೊಡುತ್ತ ನಾಗೇಶ ಹೆಗಡೆಯವರು 'ಕಾಫಿ'ಯನ್ನು ವಾಕಿಂಗಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಅವರಿಂದ ತಿಳಿಯುತ್ತಲೇ ನಾನೂ ಒಂದು ರೌಂಡ್ ಹೊರಟೆ. ದೈತ್ಯಾಕಾರದ ವುಡ್ಲೆಂಡ್ ಶೂ ಚರಪರನೆ ಸದ್ದು ಮಾಡುತ್ತಿದ್ದುದು ಅಲ್ಲೊಂದು ಮನೆಯ ಕೆಲಸದ ಹುಡುಗಿಗೆ ಹೆದರಿಕೆ ಹುಟ್ಟಿಸಿತೆಂದು ಕಾಣುತ್ತದೆ. ಆ ಮನೆಯವರಿಗೆ 'ಯಾರೋ ಬಂದಿದ್ದಾರೆ' ಎಂಬ ಸುದ್ದಿ ತಲುಪಿಸಿದಳು. ನಾನು ಸುಮ್ಮನೇ ಮುಂದೆ ನಡೆದೆ. 'ನೋ ಪ್ಲಾಸ್ಟಿಕ್ ಝೋನ್' ಎಂಬುದರ ಜೊತೆಗೆ ಮತ್ತಷ್ಟು ಫಲಕಗಳನ್ನು ನೋಡುತ್ತ, ಓದುತ್ತ, ಅತ್ತಿತ ಇರುವ ಮರಗಳು ಯಾವುದು ಎಂದು ಗ್ಯೆಸ್ ಮಾಡುತ್ತ ಸ್ವಲ್ಪ ದೂರ ಹೋಗಿದ್ದೆ, ಅಷ್ಟರಲ್ಲಿ ಒಂದಷ್ಟು ದೂರದಲ್ಲಿ ನಾಗೇಶ ಹೆಗಡೆಯವರು ಒಂದು ಪುಟ್ಟ ಕೋಲು ಹಿಡಿದು ಬರುತ್ತಿದ್ದರು. ಕ್ಷಣಾರ್ಧದಲ್ಲಿ ಹಿಂದಿನಿಂದ ಓಡಿ ಬಂದ 'ಕಾಫಿ' ಬರ್ತ್ ಡೇ ವಿಷಯ ಅದಕ್ಕೂ ತಿಳಿದಿರುವಂತೆ, ತಾನೂ ವಿಶ್ ಮಾಡುತ್ತಿರುವಂತೆ ಹಿಂದೆ ಮುಂದೆ ಚುರುಕಾಗಿ ಓಡಿತ್ತು. ಬೆಂಗಳೂರಿಗೆ ಬಂದ ಹೊಸತರಲ್ಲಿ ಅಸುನೀಗಿದ ನಮ್ಮ 'ಸೋನಿ' ಇದ್ದಿದ್ದರೆ ಅದೂ ಹೀಗೇ ಚುರುಕಾಗಿ ಓಡಾಡಿಕೊಂಡಿರುತ್ತಿತ್ತೇನೋ ಎಂದು ಒಂದು ನಿಮಿಷ ಅನಿಸಿದ್ದುಂಟು.
ನಾಗೇಶ ಹೆಗಡೆಯವರ ಜೊತೆ ಮಾತನಾಡುತ್ತ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಹೆಚ್ಚು ಮಾತನಾಡುವುದು ನಾನೇನೆ. ಹೀಗಾಗಿ ಅವರಿಗೆ ಸಮಯ ಹೋಗುವುದು ಕಷ್ಟವಾಗಬಹುದು, ನಾನು ಟೆಕ್ನಿಕಲ್ ವಿಷಯಗಳನ್ನು ವಿವರಿಸಲು ಹೊರಟುಬಿಟ್ಟರೆ. ಆದರೆ ಮೈತ್ರಿ ಫಾರ್ಮಿನ ವಾತಾವರಣ ಬರಹಗಾರರಿಗೆ ಹೇಳಿ ಮಾಡಿಸಿದಂತೆ. ಸಿಟಿ ಬಸ್ ಹೋದರೆ ಆ ಜಾಗ ಸಿಟಿಯೊಳಗೇ ಎನ್ನುವ ಲೆಕ್ಕ. ಈ ಲೆಕ್ಕಕ್ಕೆ ಮೈತ್ರಿ ಫಾರ್ಮ್ ಕೂಡ ಸಿಟಿ ಒಳಗೇ. ಬೆಂಗಳೂರ ಒಳಗೇ ಇಂತಹ ಜಾಗ, ಇವರು ಮಾಡುತ್ತಿರುವ ಪರಿಸರದ ಕೆಲಸ ಕಲ್ಪನೆಗೆ ಮೀರಿದ್ದು. ವಾಪಸ್ ಬರುವಾಗಲಂತೂ ಖಾಲಿ ರೋಡು, ಕತ್ತಲೆಯ ದಾರಿ, ಒಳ್ಳೆಯ ಗಾಳಿ - ಬೈಕಿನಲ್ಲಿ ಹೋಗೋವಾಗ ಖುಷಿ ಕೊಡುತ್ತದೆ. ಆ ಚೆಂದದ ಕತ್ತಲೆ ಕೂಡ ಪ್ರತಿ ಘಳಿಗೆಗೂ ಮನಸ್ಸನ್ನು ಗಟ್ಟಿಯಾಗಿಸುವ ಕ್ಷಮತೆಯುಳ್ಳದ್ದು. ದೂರದಲ್ಲಿ ಸೈಕಲ್ ಹಿಡಿದು ಸಂಪೂರ್ಣ ಕತ್ತಲೆಯಲ್ಲಿ ಬರುತ್ತಿದ್ದವನ ನೋಡಿ ಗಟ್ಟಿತನ ಏನೆಂಬುದು ತಿಳಿಯುವಂತಿತ್ತು.
ಮಾಗಡಿ ರೋಡಿಗೆ ಬಂದ ಕೂಡಲೆ ವೇಗವಾಗಿ ಮುನ್ನಡೆಯುವ ಬಯಕೆಯಾಗುವಷ್ಟು ಹೊಸ ರೋಡು. ಆದರೆ ನನ್ನ ಬೈಕಿಗೂ ವಯಸ್ಸಾಗಿರುವುದು ತಿಳಿದುಬಂದದ್ದು ಆಗಲೇ. ಎಪ್ಪತ್ತು ದಾಟದ ಬೈಕು, ಬ್ರೇಕು ನುರಿತ ಒಳ್ಳೆಯ ಬೈಕು ಅದು. ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಿ ಮೆಟ್ಟಲು ಹತ್ತುತ್ತಿರುವಾಗ, ನನಗೊಬ್ಬನಿಗೇ ಇಪ್ಪತ್ತಾರರ ವಯಸ್ಸಾದದ್ದಲ್ಲ, ನನ್ನ ಬೈಕು, ಕೈದೋಟದಲ್ಲಿರುವ ಗಿಡ, ಸುತ್ತಲ ಜನ, ಎಲ್ಲರೂ ನನ್ನೊಟ್ಟಿಗೇ ಹೊಸ ದಿನಗಳಿಗೆ ಕಾಲಿಡುತ್ತಿದ್ದಾರೆ, ತಮಗೆ ಬೇಕೋ ಬೇಡವೋ ತಮ್ಮ ವಯಸ್ಸಿಗೆ ದಿನಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ, ಸೇರಿಸಿಕೊಳ್ಳಲೇಬೇಕಾಗಿದೆ ಎಂಬ ಅರಿವು ಸಮಾಧಾನ ಹುಟ್ಟಿಸಿತ್ತು.

- hpn ರವರ ಬ್ಲಾಗ್
- Login or register to post comments
- 823 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.



RSS:
ಉ: ನವೆಂಬರ್ ೧೮
ಹುಟ್ಟು ಹಬ್ಬದ ಆಲೋಚನೆಯ ಪರಿ ಚೆನ್ನಾಗಿದೆ ಹರಿ...ಚಿತ್ರವೂ ಕೂಡ
ಮತ್ತೊಮ್ಮೆ ಶುಭಾಶಯಗಳು
-ಸವಿತ
ಉ: ನವೆಂಬರ್ ೧೮
ನಾಡಿಗ್ರವರೇ ತಮ್ಮ ಬರಹ ತುಂಬಾ ಚೆನ್ನಾಗಿದೆ ಅದರಲ್ಲೂ ಚಿತ್ರ ಎಕ್ಸಲೆಂಟ್ ...ಚಿತ್ರ ಎಲ್ಲಿಂದ ದಯವಿಟ್ಟು ತಿಳಿಸಿ....
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ
ಉ: ನವೆಂಬರ್ ೧೮
ಚಿತ್ರ ಅವ್ರ ಕಲ್ಪನೆದು ಅನ್ಸುತ್ತೆ..
--
PaLa
ಉ: ನವೆಂಬರ್ ೧೮
ನಾಗರಾಜ್, ಚಿತ್ರ ನಾನೇ ಸ್ಕೆಚ್ ಮಾಡಿದ್ದು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
ಒಳ್ಳೆಯ ಹಾರ್ಟ್+ ಆರ್ಟಿಸ್ಟ್= hpn
manjunath s reddy
ಉ: ನವೆಂಬರ್ ೧೮
ಎರೆಡು ದಿನ ತಡವಾಗಿ ಜನ್ಮದಿನದ ಶುಭಾಶಯಗಳು...
manjunath s reddy
ಉ: ನವೆಂಬರ್ ೧೮
ಚಿತ್ರದ ಕಲ್ಪನೆ ತುಂಬಾ ಇಷ್ಟ ಆಯ್ತು..
--
PaLa
ಉ: ನವೆಂಬರ್ ೧೮
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
ನಾಡಿಗರಿಗೆ ವಂದನೆಗಳು
ನೀವು ಹುಟ್ಟಿ ೨೬ ವರ್ಷದೊಳಗೆ ಇಂಥ ದೊಡ್ಡ ಸಾಧನೆಯನ್ನು ಮಾಡಿದ್ದಿರ. ಕನ್ನಡ ಭಾಷೆಗೆ ಇದು ಸಾರ್ವಕಾಲಿಕ ಮಹತ್ವವುಳ್ಳ ಕೊಡುಗೆ. ನಿಮ್ಮ ಹೆಸರು ಅಜರಾಮರವಾಗಲಿ ಎಂದು ಹಾರೈಕೆ.
ಕನ್ನಡನಾಡಿಗರಿಗೆ ಸಂಪದವಾಯಿತು.
ಸಂಪದವಾಗಲಿ ನಾಡಿಗರಿಗೆ.
ಉ: ನವೆಂಬರ್ ೧೮
ಗುರು, ಇನ್ನೂ ದೊಡ್ಡ ಸಾಧನೆ ಅನ್ನಿಸಿಕೊಳ್ಳುವ ಕೆಲಸ ನಾನೇನೂ ಮಾಡಿಲ್ಲ ಅಂತ ನನಗನ್ನಿಸುತ್ತೆ. ನಿಮ್ಮ ಹಾರೈಕೆಗಳಿಗೆ ನಾನು ಋಣಿ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
ಉತ್ತಮ ಜನ್ಮದಿನದ ಅನುಭವ ವ್ಯಕ್ತಪಡಿಸುವ ಲೇಖನ
ಸಂಪದವನ್ನು ಸೃಜಿಸಿ, ಪೋಷಿಸಿ, ಉನ್ನತೀಕರಿಸುತ್ತಿರುವ ನಿಮಗೆ ಅಭಿನಂದನೆ.
ಧನ್ಯವಾದ
-ಮಹೇಶ
ಉ: ನವೆಂಬರ್ ೧೮
ನನ್ನ ಜನ್ಮದಿನ ಇರಲಿ, ನಿನ್ನದು ಹೊಸ ಜನ್ಮವೋ? ಸಂಸ್ಕೃತ ಜನುಮ?
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
HPN, ಬರಹ ಚೆನ್ನಾಗಿದೆ, ಮಾಯ್ಸನ್ ಇಸ್ಟಾಯಿಲ್ ಅದು ಗೊತ್ತಲ್ಲ,.. ಆಗಾಗ ಹೊಸತನ ಮೂಡುತ್ತ ಇರುತ್ತದೆ..
ಉ: ನವೆಂಬರ್ ೧೮
ಎಮ್ಮಯ ವಿಷಯವಿರಲಿ.
ನಿಮ್ಮ ವಿವಾಹಭೋಜನದ ರುಚಿ ನೋಡುವ ಸದವಕಾಶವೆಂದು?
ಶೀಘ್ರ ಕಲ್ಯಾಣಪ್ರಾಪ್ತಿ ಆಶಿಸುವೆನು.
ಧನ್ಯವಾದ
-ಮಹೇಶ
ಉ: ನವೆಂಬರ್ ೧೮
ಹುಟ್ಟು ಹಬ್ಬದ ಶುಭಾಶಯಗಳು.....
Vinu
ಉ: ನವೆಂಬರ್ ೧೮
ವಂದನೆ, ವಿನು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
ಹರಿ,
ಚಿತ್ರ ಚೆನ್ನಾಗಿದೆ.
ವಿವರಣೆ ಕೂಡ...
-ಅನಿಲ್ ರಮೇಶ್.
ಉ: ನವೆಂಬರ್ ೧೮
>>ಆದರೆ ಈ ತಿಂಗಳು ಅಲ್ಲಿಗಲ್ಲಿಗೆ ಸರಿದೂಗಿಸಿದರೇ ಗೆದ್ದೆ ಎಂಬಂತಿರುವಾಗ ಎಲ್ಲರಿಗೂ 'ಟ್ರೀಟು' ಕೊಡಿಸುವುದು ಸಾಧ್ಯವಾಗದಿರಬಹುದು.
ಸಂಪದ ನಾಡಿಗರ ಕಿಸೆಗೆ ಕತ್ತರಿ ಹಾಕುತ್ತಿದೆ. ನಾವೆಲ್ಲ ಏನಾದರೂ ಮಾಡಬೇಕಲ್ಲ.
*ಅಶೋಕ್
ಉ: ನವೆಂಬರ್ ೧೮
ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಯೋಚನೆಯಿದ್ದರೆ ದಯವಿಟ್ಟು ತಿಳಿಸಿ.
--
PaLa
ಉ: ನವೆಂಬರ್ ೧೮
ಹನಿಹನಿಗೂಡಿದರೆ ಹಳ್ಳ... ತೆನೆತೆನೆಗೂಡಿ ಬಳ್ಳ..
ಯಥಾನುಶಕ್ತಿ ಸಹಾಯ ಮಾಡುವುದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಿದರೆ ಒಳ್ಳೆಯದು. ಏನಂತೀರಿ?
*ಅಶೋಕ್
ಉ: ನವೆಂಬರ್ ೧೮
ಈಗ ಸದ್ಯಕ್ಕೆ ಏನೂ ಬೇಡ. ಹಾಗೇನಾದರೂ ಒಂದು ಸಮಯ ತೀರ ಕಷ್ಟವೊದಗಿ ಬಂದರೆ ನಾವೆಲ್ಲ ಕೂಡಿ ಒಂದು ದಾರಿ ಹುಡುಕೋಣ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
ಸರಿಯಾದ ಮಾತು
--
PaLa
ಉ: ನವೆಂಬರ್ ೧೮
ಥ್ಯಾಂಕ್ಸ್
ಸುಮ್ಮನೆ ಹಾಗೇ ಬೇಗನೆ ಗೀಚಿದ್ದು. ತದನಂತರ ಸ್ವಲ್ಪ ಚೆನ್ನಾಗಿ ಬಂತು ಅಂತ ನನಗೂ ಅನ್ನಿಸಿತು. ಹಾಗೇ ಮತ್ತೇನೂ ಸೇರಿಸದೆ ನೇರ ಹಾಕಿದೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
ಹುಟ್ಟಿದಬ್ಬದ ಸವಿ ಹಾರೈಕೆಗಳು ಹರಿ..
ಬರೋ ವರ್ಷ ಟೆಕ್ ಸಂಪದ, ಕನ್ನಡ ಲರ್ನಿಂಗ್ ಇತ್ಯಾದಿ ಕನಸೆಲ್ಲ ಭರ್ಜರಿ ಯಶಸ್ಸು ಕಾಣಲಿ..
-
ವಸಂತ
ಉ: ನವೆಂಬರ್ ೧೮
ವಸಂತ್, ಸವಿ ಹಾರೈಕೆಗಳಿಗೆ ವಂದನೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ನವೆಂಬರ್ ೧೮
ಪ್ರಿಯ ಹರಿಯವರೇ,
ತಮ್ಮ ಚಿತ್ರ ಹಾಗೂ ಬರಹ ಎರಡೂ ಚೆನ್ನಾಗಿವೆ. ಸಂಪದಿಗರೊಂದಿಗೆ ಆತ್ಮೀಯತೆಯಿಂದ ನಿಮ್ಮ ಭಾವನೆಗಳನ್ನು ಹಂಚಿಕೊಂಡಂತೆ ಇದೆ. ಸರಳ ಸುಂದರ ವಿವರಣೆ.
ಶೈಲಾಸ್ವಾಮಿ
ಉ: ನವೆಂಬರ್ ೧೮
ಅಶೋಕ್ ಅವರು ಹೇಳಿದ ಹಾಗೆ ಹನಿಗೂಡಿಸುವಲ್ಲಿ ನಾನೂ ಭಾಗಿಯಾಗುತ್ತೇನೆ.
ಶೈಲಾಸ್ವಾಮಿ
ಉ: ನವೆಂಬರ್ ೧೮
ಹುಟ್ಟು ಹಬ್ಬದ ಬಿಲೇಟೆಡ್ ವಿಶಸ್ ನಿಮಗೆ ಹರಿ..ಚಿತ್ರ ಬರಹ ಎರಡೂ ತುಂಬ ಚನ್ನಾಗಿದೆ.
ಉ: ನವೆಂಬರ್ ೧೮
ಇಂತಹ ಅನೇಕ ಹುಟ್ಟು ಹಬ್ಬಗಳು ಮತ್ತೆ ಮತ್ತೆ ಬರಲಿ.
ಸಂಪದ ದಂತಹ ಅನೆಕ ಕೆಲಸಗಳು ಹೊಸದಾಗಿ ಬರಲಿ ಮತ್ತು ಯಶಸ್ವಿಯಾಗಲಿ.
ಸವಿತೃ
ಉ: ನವೆಂಬರ್ ೧೮
ಪ್ರೀತಿಯ ಹರಿ
ಕನ್ನಡದಲ್ಲಿ ಇಂತಹದೊಂದು ತಾಣದ ನಿರ್ವಹಣೆ ನಿಮಗೆ ದೊಡ್ಡ ಸಾಧನೆಯಲ್ಲ ಎನಿಸಿರುವುದೇ ನಿಮ್ಮ ದೊಡ್ಡತನ . ನಿಮ್ಮ ವಯಸ್ಸಿಗೆ ನೀವು ನಡೆಸುತ್ತಿರುವ ಚಟುವಟಿಕೆಗಳನ್ನು ಕಂಡು ವಿಸ್ಮಿತನಾಗಿದ್ದೇನೆ ; ಹೆಮ್ಮೆ ಎನಿಸುತ್ತಿದೆ . ನಿಮ್ಮ ರೀತಿಯ ಯುವಕರು ನಾಡಿಗೆ ತುಂಬಾ ಬೇಕು . ಇಷ್ಟೊಂದು ಅಭಿಮಾನಿಗಳಿಂದ ಕೂಡಿರುವ ಸಂಪದ ಆರ್ಥಿಕವಾಗಿಯೂ ಬಳಲಬೇಕಾಗಿಲ್ಲ ; ಅಶೋಕ್ ತಿಳಿಸಿದ ಹಾಗೆ ಹನಿ ಹನಿ ಸೇರಿದರೆ ಹಳ್ಳ , ಸಂದರ್ಭ ಒದಗಿದಾಗ ಎಲ್ಲರೂ ಕೈ ಕೂಡಿಸೋಣ .
ಉ: ನವೆಂಬರ್ ೧೮
ಹರಿಯಣ್ಣ, ನಾಗೇಶ್ ಹೆಗಡೆಯವರ ಬಗ್ಗೆ ನನಗೂ ಅಪಾರವಾದ ಆಸಕ್ತಿಯಿದೆ. ಅವರ ಬರಹಗಳನ್ನು ಪಾಠಗಳಾಗಿ ಅತ್ಯಾಸಕ್ತಿಯಿಂದ ಓದಿ ಬೆಳೆದ ಅನೇಕರಲ್ಲಿ ನಾನೂ ಒಬ್ಬ. ಜೋಗಿಯವರ ಪುಸ್ತಕ ಬಿಡುಗಡೆ ಸಮರಂಭವೊಂದರಲ್ಲಿ ನಾಗೇಶ್ ಹೆಗಡೆಯವರನ್ನು ಕಂಡು ಅವರದ್ದೊಂದು ಪುಸ್ತಕಕ್ಕೆ ಸಹಿ ಹಾಕಿಸಿಕೊಂಡು ಇಟ್ಟುಕೊಂಡಿದ್ದೆ.
ಮುಂದೊಮ್ಮೆ ಯಾವಾಗಲಾದರೂ ನನ್ನನ್ನೂ ಅವರ ಫಾರ್ಮ್‌ಗೆ ಕರೆದೊಯ್ಯಿರಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wordpress.com/
http://kalaravapatrike.wordpress.com
http://ekshana.wordpress.com/
http://oshohaadu.wordpress