ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿದವರು ಮಾತ್ರ ಈ ವಿಷಯದ ಚರ್ಚೆಯ ಮುಂಚೂಣಿಯಲ್ಲಿದ್ದಾರೆ. ಪರಿಣಾಮವಾಗಿ ಯಾವುದು ಚರ್ಚೆಯಾಗಬೇಕಿತ್ತೋ ಅದು ಚರ್ಚೆಯಾಗದೆ ಕನ್ನಡದ ಬಳಕೆ ಎಂಬುದು ವರ್ಗ, ವರ್ಣ, ಜಾತಿ ಮುಂತಾದುವುಗಳ ಚರ್ಚೆಯಾಗಿ ಬದಲಾಗುತ್ತಿದೆ. ಭಾಷೆಯೊಂದರ ಕಲಿಕೆಯ ಹಿಂದೆ ಈ ಎಲ್ಲಾ ಸಾಮಾಜಿಕ ಅಸಮಾನತೆಗಳು ಪರಿಣಾಮ ಬೀರುತ್ತವೆಯಾದರೂ ಕೇವಲ ಅವುಗಳನ್ನಷ್ಟೇ ಪರಿಗಣಿಸಿ ಭಾಷೆಯೊಂದರ ಕಲಿಕೆಗೆ ಸಂಬಂಧಿಸಿದ ನೀತಿ ರೂಪಿಸಲು ಸಾಧ್ಯವಿಲ್ಲ.
ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದರಿಂದ ಮಕ್ಕಳಿಗೆ ಹೊರೆಯಾಗುತ್ತದೆ. ಕನ್ನಡಕ್ಕೆ ಅಪಾಯ, ಕನ್ನಡ ಸಂಸ್ಕೃತಿಗೆ ಅಪಾಯ ಎಂದು ಒಂದು ಗುಂಪಿನವರು ವಾದಿಸುತ್ತಿದ್ದಾರೆ. ಈ ಗುಂಪಿನಲ್ಲಿರುವ ಹಿರಿಯರಲ್ಲಿ ಹಲವರು ‘ತಮ್ಮದೇ ಆದ’ ಕಾರಣಗಳಿಗಾಗಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿಸಿಯೂ ಇದ್ದಾರೆ. ಮತ್ತೊಂದು ಗುಂಪಿನವರು ಇಂಗ್ಲಿಷ್ ಸಾಮಾಜಿಕ ಅಸಮಾನತೆಯ ನಿವಾರಣೆಗೆ ಅವಶ್ಯ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಇಲ್ಲದಿದ್ದರೆ ಸಾಧ್ಯವಿಲ್ಲ. ಶೋಷಿತ ವರ್ಗಗಳಿಗೆ ಇಂಗ್ಲಿಷ್ ನಿಂದಲೇ ವಿಮೋಚನೆ ಎನ್ನುತ್ತಿದ್ದಾರೆ. ಈ ವಾದಗಳನ್ನು ಮಂಡಿಸುತ್ತಿರುವವರೆಲ್ಲರೂ ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶಗಿಟ್ಟಿಸಿಕೊಂಡಿದ್ದಾರೆ. ಇಂಗ್ಲಿಷ್ ಪರವಾಗಿ ವಾದಿಸುವ ಮೂಲಕ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದು ಮೊದಲ ಗುಂಪಿನವರ ಆರೋಪ.
ವಾಸ್ತವದಲ್ಲಿ ಈ ಎರಡೂ ವಾದಗಳೂ ವಿತಂಡವಾದಗಳೇ ಸರಿ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಸಂಸ್ಕೃತಿ ಇಷ್ಟೂ ವರ್ಷಗಳಿಂದ ಉಳಿದುಕೊಂಡು ಬಂದಿದೆ. ಈ ಕನ್ನಡ ಸಂಸ್ಕೃತಿ ಎಂಬುದು ಇತರ ಎಲ್ಲಾ ಸಂಸ್ಕೃತಿಗಳಂತೆ ಚಲನಶೀಲವೇ ಆಗಿರುವುದರಿಂದ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನನ್ನು ಉಳಿಸಿಕೊಂಡಿದೆ. ಹೈದರ್, ಟಿಪ್ಪು, ಬಹಮನಿ ಸುಲ್ತಾನರ ಆಡಳಿತದ ಅವಧಿಯಲ್ಲಿ ದಖ್ಖನಿ ಆಡಳಿತ ಭಾಷೆಯಾಗಿತ್ತು. ಹಾಗೆಂದು ಕನ್ನಡ ಮರೆಯಾಗಲಿಲ್ಲ. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಇಂಗ್ಲಿಷ್ ಆಳುವವರ ಭಾಷೆಯಾಗಿತ್ತು. ಆಗಲೂ ಕನ್ನಡ ಮರೆಯಾಗಲಿಲ್ಲ. ಈ ಸವಾಲುಗಳನ್ನು ಎದುರಿಸಿ ಅದು ಉಳಿದುಕೊಂಡಿತು. ಈಗಲೂ ಅಷ್ಟೆ ಜಾಗತೀಕರಣದ ಎಲ್ಲ ಸವಾಲುಗಳನ್ನೂ ಅದು ಎದುರಿಸಿ ಉಳಿದುಕೊಳ್ಳುತ್ತದೆ. ಈ ಸವಾಲುಗಳನ್ನು ಎದುರಿಸಲು ನಮ್ಮ ಭಾಷೆಯನ್ನು ಸಿದ್ಧಗೊಳಿಸಬೇಕು. ಅಂದರೆ ಹೊಸ ಪರಿಕಲ್ಪನೆಗಳನ್ನು ನಮ್ಮ ಭಾಷೆಯಲ್ಲಿ ಚರ್ಚಿಸಬೇಕು. ಇದರ ಬದಲಿಗೆ ಕಂಪ್ಯೂಟರನ್ನು ‘ಗಣಕ ಯಂತ್ರ’ ಎಂದರೆ ಮಾತ್ರ ಕನ್ನಡವಾಗುತ್ತದೆ ಎಂಬ ಕೂದಲು ಸೀಳುವ ಕೆಲಸವನ್ನು ಮಾತ್ರ ಮಾಡುತ್ತಾ ಹೋದರೆ ಕನ್ನಡವನ್ನು ಶಿಶುವಿಹಾರದಿಂದ ಸ್ನಾತಕೋತ್ತರ ಮಟ್ಟದವರೆಗೆ ಕಡ್ಡಾಯ ಮಾಡಿದರೂ ಅದು ಉಳಿಯಲಾರದು.
ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿತವರೆಲ್ಲರೂ ಇಂಗ್ಲಿಷ್ ಪಂಡಿತರಾಗಿ ಬಿಡುವುದಿಲ್ಲ. ನನ್ನ ತಲೆಮಾರಿನ ಹಾಗೂ ಅದಕ್ಕೂ ಹಿಂದಿನವರೆಲ್ಲರೂ ಹಳ್ಳಿಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಬಂದು ಕಾಲೇಜು ಮಟ್ಟದಲ್ಲಿ ಇಂಗ್ಲಿಷಿಗೆ ತೆರೆದುಕೊಂಡವರು. ಇವರೆಲ್ಲರೂ ಇಂಗ್ಲಿಷನ್ನು ಸಲೀಸಾಗಿ ಬಳಸುತ್ತಿಲ್ಲವೇ? ಹೌದು, ಕೆಲ ಸಂದರ್ಭಗಳಲ್ಲಿ ಇಂಗ್ಲಿಷ್ ಒಂದು ಸವಾಲು ಎನಿಸಿತ್ತು. ಆದರೆ ಇದು ಮೀರಲಾರದ ಸವಾಲಾಗಿರಲಿಲ್ಲ.
ಈಗಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರೆಲ್ಲರೂ ಸರ್ವಜ್ಞರಲ್ಲ. ಕನಿಷ್ಠ ಇಂಗ್ಲಿಷ್ ನಲ್ಲೂ ಅವರು ಸರ್ವಜ್ಞರಾಗಿಲ್ಲ.
ನಮಗಿರುವ ಸವಾಲು ಮಾಧ್ಯಮದ್ದಲ್ಲ. ಶಿಕ್ಷಣದ್ದು. ಈ ಸವಾಲನ್ನು ಎದುರಿಸುವ ಬದಲಿಗೆ ಅದರಿಂದ ತಪ್ಪಿಸಿಕೊಳ್ಳುವ ಹಾದಿಯಾಗಿ ಮಾಧ್ಯಮದ ಕುರಿತ ಚರ್ಚೆಯನ್ನು ಅನವಶ್ಯಕವಾಗಿ ಬೆಳಸುತ್ತಿದ್ದೇವೆ. ನಮ್ಮ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣಗಳೆರಡೂ ಈ ಕಾಲದ ಅಗತ್ಯವನ್ನು ಪೂರೈಸುತ್ತಿಲ್ಲ. ಜಗತ್ತು ಹಳ್ಳಿಯಾಗಿರುವ ಈ ಹೊತ್ತಿನಲ್ಲಿಯೂ ನಮ್ಮ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಲು ಅಗತ್ಯವಿರುವ ಪರಿಕರಗಳನ್ನು ಒದಗಿಸುತ್ತಿಲ್ಲ. ಈ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಮಾಧ್ಯಮ ಯಾವುದಾಗಿರಬೇಕು ಎಂಬುದರ ಕುರಿತು ಚರ್ಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಬದುಕಿಗೆ ಪ್ರಸ್ತುತವಾಗದ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ಒದಗಿಸಿದರೂ ಅದು ವ್ಯರ್ಥವೇ.
namismail @ rediffmail. com

- ismail ರವರ ಬ್ಲಾಗ್
- Login or register to post comments
- 1105 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ವಾಸ್ತವ ಚಿತ್ರಣ
ಬಹಳ ಚೆನ್ನಾಗಿದೆ
ನೀವು ನಡೆಸಿರುವ ಚಿಂತನೆ ಸರಿಯಾದದ್ದು. ವಾಸ್ತವದ ಚಿತ್ರಣ ಬಹಳ ಚೆನ್ನಾಗಿ ಮಾಡಿದ್ದೀರಿ. ಸಮಸ್ಯೆ ಮಾಧ್ಯಮದ್ದಲ್ಲ, ಶಿಕ್ಷಣದ ಕ್ವಾಲಿಟಿಯ ಕುರಿತದ್ದು ಎಂಬುದು ಒಪ್ಪಲೇಬೇಕಾದಂತಹ ಸಂಗತಿ.
ವಸ್ತುಸ್ಥಿತಿ
ವಸ್ತುಸ್ಥಿತಿ ಏನೆಂದರೆ, ನಮ್ಮಲ್ಲಿ ಒಂದನೇ ತರಗತಿಯಿಂದ ಆಂಗ್ಲ ಭಾಷೆ ಹೇಳಿಕೊಡುವಂತಹ ಶಿಕ್ಷಕರಿಲ್ಲ. ನಾನು ಮೈಸೂರಿನಲ್ಲಿ ಶೈಕ್ಷಣಿಕ ತರಬೇತಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿಗೆ ಬಂದ ಶಿಕ್ಷಕರ ಇಂಗ್ಲೀಷ್ ನೋಡಿದ್ರೆ ಇಂಗ್ಲೀಷ್ ಪ್ರತಿಪಾದಕರ್ಯಾರೂ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಸಿ ಅಂತ ಹೇಳ್ತಾ ಇರಲಿಲ್ಲ, ಅವರೇನು ಹೇಳ್ತಾ ಇದಾರೆ ಅಂತಾನೇ ಅರ್ಥ ಆಗೋದಿಲ್ಲ.. ಅದೂ ಅಲ್ಲದೆ ಅಲ್ಲಿ ತರಬೇತಿಗೆ ಬಂದವರೆಲ್ಲ ಇದ್ದುದ್ರಲ್ಲಿ ಚೆನ್ನಾಗಿ ಪಾಠ ಮಾಡೋಂತ ಶಿಕ್ಷರಂತೆ.. ಅದೇ ಶಿಕ್ಷಕರು ಕನ್ನಡ ಪಾಠಗಳನ್ನು ಮಾಡೋದನ್ನ ನೋಡಬೇಕಾಗಿತ್ತು..೧೦೦ ಪಾಲು ವಾಸಿ.
ಆದ್ದರಿಂದ ಇಂಗ್ಲೀಷ್ ಬೇಕೋ ಬೇಡವೋ ಅನ್ನೋದು ಸಧ್ಯಕ್ಕಂತೂ ಅಪ್ರಸ್ತುತ ಅಂತ ನನ್ನ ಭಾವನೆ.
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
Re: ವಾಸ್ತವ ಚಿತ್ರಣ
ಉಪ್ಪೇ ಇಲ್ದೆ ಉಪ್ಪಿನಕಾಯಿ ಮಾಡಕಾಗುತ್ತಾ? ಮಾಧ್ಯಮದ ಚರ್ಚೆ ಮಾಡ್ದೆ ಶಿಕ್ಷಣ ಹೇಗಿರಬೇಕೆಂದು ಚರ್ಚೆ ಮಾಡಕಾಗುತ್ತಾ?
ಇದು ನನ್ನಲ್ಲಿ ಮೂಡಿದ ಪ್ರಶ್ನೆ
ನಿಮ್ಮ ವಿಚಾರಗಳು ನಿಜಕ್ಕೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ.
ನಿಮ್ಮ ವಿಚಾರಗಳು ನಿಜಕ್ಕೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. "ಬದುಕಿಗೆ ಪ್ರಸ್ತುತವಾಗದ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ಒದಗಿಸಿದರೂ ಅದು ವ್ಯರ್ಥವೇ." ಈ ನಿಮ್ಮ ಕೊನೆಯ ವಾಕ್ಯ ಅಕ್ಷರಶಃ ನಿಜ.
ತರ್ಕಬದ್ಧವಾಗಿದೆ
ಇಸ್ಮಾಯಿಲ್ ಅವರೇ,
ತರ್ಕಬದ್ಧವಾಗಿ ವಿಷ್ಯಯವನ್ನು ನಮ್ಮ ಮುಂದಿಟ್ಟಿದ್ದೀರ. ಈ ಎರಡೂ ವರ್ಗಗಳ ವಾದಗಳನ್ನು ನೋಡುತ್ತಿದ್ದಾಗ ನಾನೂ ಅವರುಗಳ ಕಡೆಗೇ ವಾಲುತ್ತಿದ್ದೆ. ಒಮ್ಮೆ ಆ ಕಡೆಯಾದರೆ, ಇನ್ನೊಮ್ಮೆ ಈ ಕಡೆ. ಈ ಹೊಯ್ದಾಟದಲ್ಲಿ ಯಾವುದರ ಬಗೆಗೂ ನಿರ್ಧರಿಸಲಾಗಲಿಲ್ಲ. ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ.
ಎರಡೂ ವಾದಿಗಳನ್ನು ವಿತಂಡವಾದಿಗಳೆಂದು ಸರಿಯಾಗಿ ತಿಳಿಸಿದ್ದೀರಿ.
ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿತವರೂ ಇಂಗ್ಲೀಷ್ ಪಂಡಿತರಾಗುವುದಿಲ್ಲ. ಇದು ಸತ್ಯವಾದ ಮಾತು.
ಕಾಲಕ್ಕೆ ತಕ್ಕ ಹಾಗೆ ನಡೆಯಬೇಕು.
ಇಂತಹ ಲೇಖನಗಳು ಜನಗಳ ಕಣ್ತೆರೆಯುವುವು.
ಇದು ಪತ್ರಿಕೆಯಲ್ಲಿ ಪ್ರಕಟವಾಗಿದೆಯೇ?
---
ತವಿಶ್ರೀನಿವಾಸ
ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ
ಇಂಗ್ಲೀಷ್ ಹಾಗೂ ಕನ್ನಡದ ಬಗೆಗಿನ ಚರ್ಚೆ ಹೆಚ್ಚೂ ಕಡಿಮೆ ನಿಂತು ಹೋಗಿದೆ. ಬಹುಶಃ ಮತ್ತೆ ಶಾಲೆ ಪ್ರಾರಂಭವಾಗುವ ವೇಳೆಗೆ ಚಾಲೂ ಆದರೂ ಆದೀತು.
ಇಂಗ್ಲೀಷ್ ನ್ನು ಒಂದನೇ ತರಗತಿಯಿಂದ ಪ್ರಾರಂಭಿಸಲು ಒಪ್ಪಿ, ಜೊತೆ ಜೊತೆಗೆ ಕನ್ನಡ ಮಾಧ್ಯಮ ಕಡ್ಡಾಯ ಜಾರಿ ಎಂಬ ಬೇಡಿಕೆಯನ್ನೂ ಗಂಭೀರವಾಗಿ ಪರಿಗಣಿಸುವಂತೆ ಒಂದು ರಾಜಿಸೂತ್ರವನ್ನೂ ತಯಾರಿಸಲಾಯಿತು. ಆಮೇಲೇನಾಯಿತು ತಿಳಿಯದು.
ಇಂಗ್ಲೀಷ್ ನ್ನು ಒಂದನೇ ಕ್ಲಾಸ್ ನಿಂದ ಪ್ರಾರಂಭಿಸುವುದರ ಬಗೆಗೆ ನನಗಿರುವ ಸಮಸ್ಯೆಯೆಂದರೆ ಅದು ಕುಗ್ಗುತ್ತಿರುವ ಕನ್ನಡ ಬಳಕೆಯನ್ನು ಇನ್ನಷ್ಟು ಕುಗ್ಗಿಸುವ ಸಾಧ್ಯತೆ ಇರುವುದು.ಬದಲಾಗಿ ಇಂದು ಆಗಬೇಕಾಗಿರುವುದು ಕನ್ನಡದ ಬಳಕೆಯ ಹಿಗ್ಗುವಿಕೆ.
ಆದರೆ ಬಗೆಗಿನ ಬುದ್ಧಿಜೀವಿಗಳ ಕಾಳಜಿ ಪೂರ್ಣ ಅರ್ಥ ನನಗಿನ್ನೂ ಅರಿವಾಗಿಲ್ಲ. ಉದಾಹರಣೆಗೆ ಕನ್ನಡಕ್ಕೆ ಕ್ಲಾಸಿಕಲ್ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ ಒತ್ತಾಯಿಸುವುದು ಸರಿಯೇ. ಆದರೆ ಕನ್ನಡವನ್ನೊಳಗೊಂಡೂ ಎಲ್ಲಾ ಭಾಷೆಗಳಿಗೂ ರಾಷ್ಟ್ರೀಯ ಭಾಷೆ ಸ್ಥಾನಮಾನ ಕೊಡುವ ಬಗೆಗೆ ಒತ್ತಾಯಗಳು ಏಕೆ ಬರುತ್ತಿಲ್ಲ?
ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ತನ್ನ ಅಜೆಂಡಾದಲ್ಲಿ `ಎಲ್ಲಾ ಶೆಡ್ಯೂಲ್ ಎಂಟರಲ್ಲಿರುವ ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ ಅಧ್ಯಯನ ಮಾಡಲು ಸಮತಿಯೊಂದನ್ನು ರಚಿಸುವ ಅಶ್ವಾಸನೆ ಕೊಟ್ಟಿದೆ` (ತಮಿಳಿಗೆ ಕ್ಲಾಸಿಕಲ್ ಭಾಷೆಯ ಸ್ಥಾನಮಾನ ನೀಡುವ ಬಗೆಗಿನ ಯುಪಿಎನ ಅಶ್ವಾಸನೆ ಪ್ರಾಂತೀಯ ಭಾಷೆಗಳ ಬಗೆಗಿನ ಅಶ್ವಾಸನೆಯ ನಂತರ ಬರುತ್ತದೆ. ಅದರೆ ಅದನ್ನು ಮೊದಲು ಮಾಡಲಾಯಿತು. ಅಲ್ಲದೆ ಪ್ರಾಂತೀಯ ಭಾಷೆಗಳ ಬಗೆಗಿನ ಈ ಅಶ್ವಾಸನೆ ಹಿಂದಿನ ಎನ್‌ಡಿಎ ಅಜೆಂಡಾದಲ್ಲಿ ಸಹ ಇತ್ತು.) ಇದರ ಪರಿಣಾಮಗಳೇನು ಹಾಗೂ ಇದು ಕನ್ನಡ ಹಾಗೂ ಇತರ ಪ್ರಾಂತೀಯ ಭಾಷೆಗಳ ಬಳಕೆಯ ವ್ಯಾಪ್ತಿಯನ್ನು ಹಿಗ್ಗಿಸುತ್ತದೆಯೇ ಎಂಬುದರ ಬಗೆಗೆ ಇಂದು ಚರ್ಚೆಗಳು ನಡೆಯುತ್ತಿಲ್ಲ. ಈ ಬಗೆಗೆ ಒತ್ತಾಯ ತರುವುದು ಅಗತ್ಯವಿಲ್ಲವೇ?
ಇದು ನಮ್ಮ ಆದ್ಯತೆಗಳ ಸ್ವರೂಪವನ್ನು ಸೂಚಿಸುತ್ತದೆಯೇ?
ಭಾಷೆಗಳ ಸಾವಿನ ಬಗೆಗೆ ಇಂದು ಚರ್ಚೆಯಾಗುತ್ತಿದೆ. ವಾಣಿಜ್ಯ, ಉದ್ಯಮ ಹಾಗೂ ಜ್ಞಾನ ಮಾಧ್ಯಮವಾಗಿ ಬಳಸದೆ ಕನ್ನಡವನ್ನೂ ಒಳಗೊಂಡು ಯಾವ ಪ್ರಾಂತೀಯ ಭಾಷೆಗಳೂ ಉಳಿಯಲಾರವು. ಅವುಗಳ ಸಾವಿನ ಮಹೂರ್ತ ಭಿನ್ನವಾಗ ಬಹುದಷ್ಟೆ. ಇದು ತಕ್ಷಣ ಆಗುತ್ತದೆ ಎಂದೇನೂ ಅಲ್ಲ, ಬಳಕೆಯನ್ನು ಕಳೆದು ಕೊಂಡ ಭಾಷೆಗಳಿಗೆ ಭವಿಷ್ಯವಿಲ್ಲ, ಅವು ಸಾವಿನೆಡೆ ದೂಡಲ್ಪಡುತ್ತವೆ.
ಹಾಗಾದರೆ ನಾವು ಎತ್ತ ಸಾಗುತ್ತಿದ್ದೇವೆ?
Re: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
MNS Raoswaami,
ellaa sari, kannaDavannu vyavahaaradalli baLasidare naavu kILu eMdu bahutEka kannaDigaru bhaavisuvudannu hOgalaaDisuvudu hEge?
kelavaru manegaLalli kannaDavannu horage aTTi makkaLoMdige iMglIshinalle maatanaaDalu kaTTupaaDu maaDuttaa iddaaralla!
satyanaaraayaNa raav
ಸೂಚನೆ: ಕಂಗ್ಲಿಷ್ ಬಳಸಬೇಡಿ. ಕನ್ನಡ ಲಿಪಿ ಬಳಸಿ.
- ನಿರ್ವಾಹಕರ ತಂಡದ ಪರವಾಗಿ.
ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
ಗುರಿಗಿಂತ ದಾರಿಯೇ ಮುಖ್ಯ ಎಂಬಂತೆ ಶಿಕ್ಷಣಕ್ಕೆ ಮಾಧ್ಯಮವೇ ಮುಖ್ಯವಾಗುತ್ತದೆ.
ಬದುಕಿಗೆ ಪ್ರಸ್ತುತವಲ್ಲದ ಶಿಕ್ಷಣ ನಮ್ಮದೆಂಬುದು ಬಹುಹಿಂದಿನಿಂದಲೂ ತಿಳಿದಿರುವ ಸಂಗತಿಯೆ. ಅದಕ್ಕೆ ನಮ್ಮ ಶಿಕ್ಷಣ ತಜ್ಞರು ತೀವ್ರವಾಗಿ ಚಿಂತಿಸಬೇಕಿದೆಯಷ್ಟೇ..
ಆದರೆ, ಒಂದನೇ ತರಗತಿಯಿಂದ ಕಾನ್ವೆಂಟ್ ನಲ್ಲಿ ಶಿಕ್ಷಣ ಪಡೆದವರೆಲ್ಲರೂ ಇಂಗ್ಷೀಷ್ ತಜ್ಞರಾಗಲಾರರು. ಅದೇ ಒಂದನೇ ತರಗತಿಯಿಂದ ಕನ್ನಡ ಮಾಧ್ಯಮದಲ್ಲೇ ಓದಿ ಆನಂತರ, ಒಂದು ಹಂತದಲ್ಲಿ ಇಂಗ್ಸೀಷ್ ತಜ್ಞರಾದವರೂ ಇದ್ದಾರೆ.
ಈಗ ಪ್ರಸ್ತುತದಲ್ಲಿರುವುದೇನೆಂದರೆ, ಇಂಗ್ಷೀಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಪರಿಚಯಿಸುವುದಷ್ಟೇ ಆದರೆ ಬೇಡವೇಕೆ ಎಂಬುದು. ಇಂದಿನ ಮಕ್ಕಳು ತುಂಬಾ ಚುರುಕು. ಅವರಿಗೆ ಎಲ್ಲವನ್ನೂ ತಿಳಿಯುವ ಕಲಿಯುವ ಕುತೂಹಲ ಚಿಕ್ಚಂದಿನಲ್ಲಂತೂ ಬಹಳ. ಅವರ ಪರಿಸರದಲ್ಲಿಯೆ ಇಂಗ್ಲೀಷ್ ಪದಗಳನ್ನು ನಿತ್ಯ ಬಳಸುವವರನ್ನು ನೋಡಿ ಹಾಗೆಂದರೇನು? ಹೀಗೆಂದರೇನು? ಎಂಬುದಾಗಿ ಕೇಳುವುದಕ್ಕಿಂತ ಒಂದನೇ ತರಗತಿಯಿಂದಲೇ ಅದು ಆರಂಭವಾದರೆ ತಪ್ಪೇನಿಲ್ಲ ಅಲ್ಲವೇ...? ಪ್ರತಿಭಾವಂತ ಮಕ್ಕಳು ಚಿಕ್ಕಂದಿನಿಂದಲೇ ತಮ್ಮ ಬುದ್ಧಿ ಮತ್ತೆಯನ್ನು ಹೆಮ್ಮೆಯಿಂದ ಮೆರೆಯುವಂತಾಗುತ್ತದೆ.
ನಮ್ಮ ಮಕ್ಕಳು ಭವಿಷ್ಯದಲ್ಲಿ ಮುಂದೆ ತಜ್ಞರಾಗುವುದು ಅಥವಾ ಸರ್ವಜ್ಞರಾಗುವುದನ್ನು ಆದಿಯಿಂದಲೇ ಯಾವ ಮಾಧ್ಯಮದಲ್ಲೂ ನಿರ್ಧರಿಸಲು ಸಾಧ್ಯವಿಲ್ಲವಲ್ಲ.. ಯಾರು ಯಾವ ವಯಸ್ಸಿನಲ್ಲಿ ಯಾವ ಹಂತದಲ್ಲಿ ಏನಾಗುತ್ತಾರೆ ಯಾರು ಬಲ್ಲರು...?
-ಎಚ್.ಶಿವರಾಂ
ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
ಗುರಿಗಿಂತ ದಾರಿಯೇ ಮುಖ್ಯ ಎಂಬಂತೆ ಶಿಕ್ಷಣಕ್ಕೆ ಮಾಧ್ಯಮವೇ ಮುಖ್ಯವಾಗುತ್ತದೆ.
ಬದುಕಿಗೆ ಪ್ರಸ್ತುತವಲ್ಲದ ಶಿಕ್ಷಣ ನಮ್ಮದೆಂಬುದು ಬಹುಹಿಂದಿನಿಂದಲೂ ತಿಳಿದಿರುವ ಸಂಗತಿಯೆ. ಅದಕ್ಕೆ ನಮ್ಮ ಶಿಕ್ಷಣ ತಜ್ಞರು ತೀವ್ರವಾಗಿ ಚಿಂತಿಸಬೇಕಿದೆಯಷ್ಟೇ..
ಆದರೆ, ಒಂದನೇ ತರಗತಿಯಿಂದ ಕಾನ್ವೆಂಟ್ ನಲ್ಲಿ ಶಿಕ್ಷಣ ಪಡೆದವರೆಲ್ಲರೂ ಇಂಗ್ಷೀಷ್ ತಜ್ಞರಾಗಲಾರರು. ಅದೇ ಒಂದನೇ ತರಗತಿಯಿಂದ ಕನ್ನಡ ಮಾಧ್ಯಮದಲ್ಲೇ ಓದಿ ಆನಂತರ, ಒಂದು ಹಂತದಲ್ಲಿ ಇಂಗ್ಸೀಷ್ ತಜ್ಞರಾದವರೂ ಇದ್ದಾರೆ.
ಈಗ ಪ್ರಸ್ತುತದಲ್ಲಿರುವುದೇನೆಂದರೆ, ಇಂಗ್ಷೀಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಪರಿಚಯಿಸುವುದಷ್ಟೇ ಆದರೆ ಬೇಡವೇಕೆ ಎಂಬುದು. ಇಂದಿನ ಮಕ್ಕಳು ತುಂಬಾ ಚುರುಕು. ಅವರಿಗೆ ಎಲ್ಲವನ್ನೂ ತಿಳಿಯುವ ಕಲಿಯುವ ಕುತೂಹಲ ಚಿಕ್ಚಂದಿನಲ್ಲಂತೂ ಬಹಳ. ಅವರ ಪರಿಸರದಲ್ಲಿಯೆ ಇಂಗ್ಲೀಷ್ ಪದಗಳನ್ನು ನಿತ್ಯ ಬಳಸುವವರನ್ನು ನೋಡಿ ಹಾಗೆಂದರೇನು? ಹೀಗೆಂದರೇನು? ಎಂಬುದಾಗಿ ಕೇಳುವುದಕ್ಕಿಂತ ಒಂದನೇ ತರಗತಿಯಿಂದಲೇ ಅದು ಆರಂಭವಾದರೆ ತಪ್ಪೇನಿಲ್ಲ ಅಲ್ಲವೇ...? ಪ್ರತಿಭಾವಂತ ಮಕ್ಕಳು ಚಿಕ್ಕಂದಿನಿಂದಲೇ ತಮ್ಮ ಬುದ್ಧಿ ಮತ್ತೆಯನ್ನು ಹೆಮ್ಮೆಯಿಂದ ಮೆರೆಯುವಂತಾಗುತ್ತದೆ.
ನಮ್ಮ ಮಕ್ಕಳು ಭವಿಷ್ಯದಲ್ಲಿ ಮುಂದೆ ತಜ್ಞರಾಗುವುದು ಅಥವಾ ಸರ್ವಜ್ಞರಾಗುವುದನ್ನು ಆದಿಯಿಂದಲೇ ಯಾವ ಮಾಧ್ಯಮದಲ್ಲೂ ನಿರ್ಧರಿಸಲು ಸಾಧ್ಯವಿಲ್ಲವಲ್ಲ.. ಯಾರು ಯಾವ ವಯಸ್ಸಿನಲ್ಲಿ ಯಾವ ಹಂತದಲ್ಲಿ ಏನಾಗುತ್ತಾರೆ ಯಾರು ಬಲ್ಲರು...?
-ಎಚ್.ಶಿವರಾಂ
ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
http://sampada.net/blog/tarlesubba/07/10/2007/5871
ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
ಒಂದೆ ರಾಜ್ಯ, ಒಂದೆ ಜನ ಎರಡೇರಡು ಸಿಸ್ಟಂ.
ನೇರ ಪಾಯಿಂಟಿಗೆ ಬರ್ತಿನಿ.
ಕನ್ನಡ, ಸಮಾಜ - ಕನ್ನಡ ಮಾಧ್ಯಮ
ಇಂಗ್ಲಿಷ್, ಮ್ಯಾಥ್ಸ್, ಸಯೆನ್ಸ್ - ಇಂಗ್ಲಿಷ್ ಮೀಡಿಯಂ
೧ ರಿಂದ ೧೨, ಎಲ್ಲಾರ್ಗೂ ಒಂದೆ ಸಿಸ್ಟಂ.
ಹಿಂಗಾದರೆ ಹೆಂಗೆ?