23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ

January 20, 2006 - 4:21pm
ismail
ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಥವಾ ಕೇವಲ ಸಾಹಿತ್ಯದ ಸಮ್ಮೇಳನ ನಡೆಯುತ್ತಿದೆ. ಇಲ್ಲಿರುವ ಹತ್ತಾರು ಗೋಷ್ಠಿಗಳ, ವಿಶೇಷ ಉಪನ್ಯಾಸಗಳ ವಿಷಯಗಳನ್ನು ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿರುವವರು ಸಂಪೂರ್ಣ ಸಂವೇದನಾ ಶೂನ್ಯರಾಗಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಬಹಳಷ್ಟು ಮಂದಿ ಈಗಾಗಲೇ ಸಾಹಿತ್ಯ ಸಮ್ಮೇಳನ ವಿಷಯ ಸಾಹಿತ್ಯಕ್ಕೆ ಯಾವ ಮಹತ್ವವನ್ನೂ ಕೊಟ್ಟಿಲ್ಲ ಎಂದು ದೂರುತ್ತಿದ್ದಾರೆ. ವಿಷಯ ಸಾಹಿತ್ಯ ಬಿಡಿ ನಮ್ಮ ಸಾಹಿತಿಗಳು ಹೆಮ್ಮೆಯಿಂದ ಹೇಳಿಕೊಳ್ಳುವ ಸೃಜನಶೀಲ ಸಾಹಿತ್ಯದ ಹೊಸ ಟ್ರೆಂಡ್ ಗಳ ಬಗ್ಗೆ ಚರ್ಚಿಸುವ ಒಳ್ಳೆಯ ಗೋಷ್ಠಿ ಇಲ್ಲ. ಹೆಸರಿಗೊಂದು ಇಂಥ ಗೋಷ್ಠಿಯಿದೆಯಾದರೂ ಇದರಲ್ಲಿ ಏನಿರಬಹುದು ಎಂಬುದನ್ನು ಈಗಲೇ ಊಹಿಸಬಹುದು. ಕನ್ನಡ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದಂತೆ ಬಹಳ ಹಳೆಯ ಜೋಕ್ ಒಂದಿದೆ-'ಕಾದಂಬರಿಯ ವಿಷಯದಲ್ಲಿ 'ವಿವರ'ಗಳನ್ನೂ, ಕಥೆಯ ವಿಷಯದಲ್ಲಿ 'ಸೂಕ್ಷ್ಮ'ಗಳನ್ನೂ, ಕವಿತೆಯ ವಿಷಯದಲ್ಲಿ 'ಪ್ರತಿಮೆ'ಗಳನ್ನೂ, ವಿಮರ್ಶೆಯ ವಿಷಯದಲ್ಲಿ 'ಸಂಕೀರ್ಣತೆ'ಯನ್ನೂ ಉಳಿಸಿಕೊಳ್ಳಬೇಕಾದುದು ಅಗತ್ಯ'. ಇದು ಕನ್ನಡ ಸಾಹಿತ್ಯ ವಿಮರ್ಶೆಗೆ ಬರೆದ ಭಾಷ್ಯದಂತೆ ಕಾಣಿಸುತ್ತಿದೆ. ಸಾಹಿತ್ಯ ಸಮ್ಮೇಳನದ ಗೋಷ್ಠಿಯ ವಿಷಯಕ್ಕೆ ಬಂದರಂತೂ ಇದು ಬಹಳ ಸರಿಯಾಗಿ ಒಪ್ಪುತ್ತದೆ. ಎಲ್ಲಾ ಭಾಷೆಯ ಸಾಹಿತ್ಯವೂ ತನ್ನ ಕಾಲಕ್ಕೆ ಸ್ಪಂದಿಸುತ್ತಾ ಇರುತ್ತದೆ. ಕನ್ನಡ ಸಾಹಿತ್ಯವೂ ಇದಕ್ಕೆ ಹೊರತಲ್ಲ. ವಿವಿಧ ಕಾಲಘಟ್ಟಗಳ ಈ ಸ್ಪಂದನೆಯನ್ನು ಆಯಾ ಕಾಲದ ವಿಮರ್ಶಕರು ಗುರುತಿಸಿದ್ದಾರೆ. ಆದರೆ ಜಾಗತೀಕರಣ ಯುಗದ ಆರಂಭದ ನಂತರದ ಬೆಳವಣಿಗೆಗಳನ್ನು ಗುರುತಿಸಲು ಕನ್ನಡ ವಿಮರ್ಶಕರು ಸಂಪೂರ್ಣವಾಗಿ ಸೋತಿದ್ದಾರೆ. ಹೊಸ ಕಾಲಕ್ಕೆ ಸ್ಪಂದಿಸಿದ ಲೇಖಕರನ್ನು ಅವರು ಅರ್ಥ ಮಾಡಿಕೊಳ್ಳುವಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಪರಿಣಾಮವಾಗಿ ಮಾಹಿತಿ ಕ್ರಾಂತಿಯಂಥ ಮಹಾ ಬದಲಾವಣೆಯನ್ನು ವ್ಯಾಖ್ಯಾನಿಸುವುದಕ್ಕೆ ಪದಗಳೇ ಇಲ್ಲದೆ, ಅರ್ಥ ಮಾಡಿಕೊಳ್ಳಲು ಅಗತ್ಯವಾದ ಪರಿಕರಗಳೂ ಇಲ್ಲದೆ ಸುಮ್ಮನೆ ಬಡಬಡಿಸುತ್ತಾ ಇದ್ದಾರೆ. ಅದೃಷ್ಟವಶಾತ್ ಹೊಸ ತಲೆಮಾರಿನ ಬರೆಹಗಾರರು ಈ ವಿಮರ್ಶಕರ ಸೋಲನ್ನು ಬಹಳ ಚೆನ್ನಾಗಿ ಅರಿತಿದ್ದಾರೆ. ಹಾಗೆಯೇ ಈ ವಿಮರ್ಶಕರಿಗೊಂದು ಅನನ್ಯತೆಯನ್ನು ಕೊಟ್ಟಿರುವ ಸಾಹಿತ್ಯ ಪರಿಷತ್ ತರಹದ ಸಂಸ್ಥೆಗಳ ಮಿತಿಗಳನ್ನೂ ತಿಳಿದಿದ್ದಾರೆ. ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೇ ಇದು ಅರ್ಥವಾಗುತ್ತದೆ. ನನ್ನ ಮಟ್ಟಿಗೆ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ, ನಡೆಯುದಿರುವ ಚರ್ಚೆಗಳೆಲ್ಲವೂ ಅಪ್ರಸ್ತುತ. ಈ ಪರಿಷತ್ತು, ಅಕಾಡೆಮಿಗಳಲ್ಲೆವೂ ಯಾವುದೋ ಕಾಲಘಟ್ಟದಲ್ಲಿ ಸ್ಥಗಿತಗೊಂಡ ವ್ಯವಸ್ಥೆಯ ಉದಾಹರಣೆಗಳು. ಅಥವಾ ಮ್ಯೂಸಿಯಂನಲ್ಲಿ ಇರುವ ಇತಿಹಾಸವನ್ನು ನೆನಪಿಸುವ ವಸ್ತುಗಳಂಥವು. ಈ ಹಳೆಯ ವಸ್ತುಗಳು ಸಂಗ್ರಹದಲ್ಲಿರುವುದಕ್ಕಷ್ಟೇ ಸೂಕ್ತ. ಇವು ಹೊಸ ಕಾಲಕ್ಕೂ ಬಳಕೆಗೆ ಬರಬೇಕು ಎನ್ನುವುದು ನಮ್ಮ ಹಾರೈಕೆಯಾಗಿರಬಹುದೇ ಹೊರತು ವಾಸ್ತವವಾಗಲು ಸಾಧ್ಯವಿಲ್ಲ. ಸಾಹಿತ್ಯ ಸಮ್ಮೇಳನಕ್ಕಿರುವ ಮಹತ್ವ ಆಕಾಶವಾಣಿಯ ಸಂಸ್ಕೃತ ವಾರ್ತೆಗಿರುವ ಮಹತ್ವವನ್ನು ಮೀರುವುದಿಲ್ಲ.
Taxonomy upgrade extras: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by pavanaja on
ಇಸ್ಮಾಯಿಲ್ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಕನ್ನಡ ಸಾಹಿತ್ಯ ಪರಿಷತ್ತನ್ನು ಕೆಲವರು ಈಗಾಗಲೆ ಕನ್ನಡ ಸ್ವಹಿತ ಪರಿಷತ್ತು ಎಂದು ಕರೆಯತೊಡಗಿದ್ದಾರೆ. ನೀವು ಈಗಾಗಲೇ ನನ್ನ [http://vishvakannada...|ಬ್ಲಾಗ್] ಓದಿದ್ದೀರಾ. ಸುಧಾ ಪತ್ರಿಕೆಯವರು ಒಂದು ಸಮೀಕ್ಷೆ ನಡೆಸುತ್ತಿದ್ದಾರೆ. ನಾನು ಅದಕ್ಕಾಗಿ ಚುಟುಕಾಗಿ ಬರೆದಿದ್ದೆ. ಅದು ಮುಂದಿನ ವಾರದ ಸಂಚಿಕೆಯಲ್ಲಿ ಬರಲಿದೆ. ಅದರಲ್ಲಿ ಇನ್ನೂ ಹಲವಾರು ಮಂದಿಯ, ಮುಖ್ಯವಾಗಿ "ವಿಷಯ ಸಾಹಿತ್ಯ" ಲೇಖಕರ ಅಭಿಪ್ರಾಯಗಳಿರುತ್ತವೆ. ಸಿಗೋಣ, ಪವನಜ ----------- [http://www.vishvakan...|Vishva Kannada] Think globally, Act locally
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vvdooshaka on
ಇಸ್ಮಾಯಿಲ್‌ರವರೆ, ನೀವೆಂದಿರುವ ಮಾತುಗಳಲ್ಲಿ ಪೂರ್ಣ ನಂಬಿಕೆಯಿದೆಯಾದರೂ, ಕನ್ನಡ ಸಾಹಿತ್ಯದಿಂದ ಬಹುಕಾಲ ದೂರವಿರುವ ನನ್ನಂತಹವರಿಗೆ, ಸೃಜನಶೀಲ ಸಾಹಿತ್ಯದ ಟ್ರೆಂಡ್‌ಗಳ ಬಗ್ಗೆ "ಹೆಸರಿಗೊಂದು" ಇರುವ ಗೋಷ್ಠಿಯಲ್ಲಿ ಏನಿರಬಹುದೆಂದು ಊಹಿಸಲು ಕಷ್ಟ. ನಿಮಗೆ ಈ ಗೋಷ್ಠಿಯ ವಿವರಗಳು ತಿಳಿದಿದ್ದರೆ, ಆ ವಿವರಗಳನ್ನು ಕೊಟ್ಟು, ಆ ಗೋಷ್ಠಿ ಏಕೆ "ಸಂಪೂರ್ಣ ಸಂವೇದನಾ ಶೂನ್ಯ"ವಾಗಿದೆ ಎಂದು ಬರೆದರೆ, ನನ್ನಂತಹವರಿಗೆ ಉಪಯುಕ್ತವಾಗುತ್ತದೆ. "ವಿಷಯ ಸಾಹಿತ್ಯ"ದ ಬಗ್ಗೆ ಒಂದು ಪ್ರಶ್ನೆ: ಪತ್ರಿಕೋದ್ಯಮ ವಿಷಯ ಸಾಹಿತ್ಯಕ್ಕೆ ಸೇರಬೇಕೆ? (ಕೆಲವೊಮ್ಮೆ ನಾವು ಓದುವ [http://noorentusullu...|ಸೃಜನಶೀಲ ಪತ್ರಿಕೋದ್ಯಮದ] ವಿಚಾರ ಮಾಡುತ್ತಿಲ್ಲ ;-)) ಪತ್ರಿಕೆಗಳಲ್ಲಿ ಪ್ರಕಟವಾಗುವುದೆಲ್ಲಾ ಸಾಹಿತ್ಯವೇ? ವಂದನೆಗಳೊಂದಿಗೆ, ವಿ.ವಿ. ನನ್ನ ಬ್ಲಾಗ್: [http://majavani.blog...|ಮಜಾವಾಣಿ]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ismail on
ಸಾಹಿತ್ಯವೆಂದರೆ ಪತ್ರಿಕೆಯಲ್ಲಿ ಬರುವುದಷ್ಟೇ ಅಲ್ಲ. ಅಡುಗೆಗೆ ಬೇಕಾಗಿರುವ ವಸ್ತುಗಳನ್ನೂ ಸಾಹಿತ್ಯವೆಂದೇ ಕರೆಯಲಾಗುತ್ತದೆ. ಬೇಕಿದ್ದರೆ ನಮ್ಮೂರಿನ ಅಡುಗೆಯವರನ್ನು ಕೇಳಿ ನೋಡಿ! ಇನ್ನು ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ಮತ್ತು ಅಲ್ಲಿ ಚರ್ಚೆಯಾಗುವ ಸಾಹಿತ್ಯದ ಟ್ರೆಂಡ್ ಗಳು. ಅದು ಒಂದೆರಡು ಸಾಲುಗಳಲ್ಲಿ ಬರೆದು ಮುಗಿಯುವಂಥದ್ದಲ್ಲ. ಸದ್ಯವೇ ಸಂಪದದ ಪುಟಗಳಲ್ಲಿ ಈ ವಿವರಗಳು ಕಾಣಿಸಿಕೊಳ್ಳಲಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.