ನಾವಾಡುವ ನುಡಿ.....
ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |
ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ
ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |
ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.
ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.
ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.
ನಾನು ನಾನಾಗಬೇಕು
ನಾನು ನಾನಾಗಬೇಕು,
ನನ್ನದಲ್ಲದ ಹಾಡ ನಾನು ಹಾಡಲಿ ಹೇಗೆ,
ನನ್ನದಲ್ಲದ ನುಡಿಯ ನಾನು ನುಡಿಯಲಿ ಹೇಗೆ
ನನ್ನದಲ್ಲದ ಕನಸ ನಾನು ಕಾಣಲಿ ಹೇಗೆ
ನಾನು ನಾನಾಗಬೇಕು, ಅವರಿವರಂತಾಗದೆ.
ನನ್ನದಲ್ಲದ ಒಲವ ನಾನು ಬಯಸಲಿ ಹೇಗೆ
ನನ್ನದಲ್ಲದ ಮುಖವ ನಾ ಹೇಗೆ ತೊರಲಿ
ನನ್ನಲಿಲ್ಲದ ಚೆಲುವ, ನಾನು ತೋರಲಿ ಏಕೆ?
ನಾನು ನಾನಾಗಬೇಕು, ಅವರಿವರಂತಾಗದೆ.
ನನ್ನದಲ್ಲದ ದಾರಿಯನು ನಾನು ತುಳಿಯಲಿ ಹೇಗೆ
ನನ್ನದಲ್ಲದ ನೀತಿಗಳ, ನಾ ಹೇಗೆ ಪಾಲಿಸಲಿ
ಒಲ್ಲದ ಗೆಳತಿಯನು, ನಾನು ಮೆಚ್ಚಿಸಲೇಕೆ
ನಾನು ನಾನಾಗಬೇಕು, ಅವರಿವರಂತಾಗದೆ.
ನನ್ನೊಳಗಿಲ್ಲದ ನಾನು, ನಾನು ಆಗಲಿ ಏಕೆ?
ನನ್ನೊಳಗಿಲ್ಲದ ಹೆದರಿಕೆಗೆ, ನಾನು ಅಂಜಲಿ ಏಕೆ?
ಒಳಗೊಂದ, ಹೊರಗೊಂದನೆಣಿಸುವ ಇಬ್ಬಂದಿ ನನಗೇಕೆ?
ನಾನು ನಾನಾಗಬೇಕು, ಅವರಿವರಂತಾಗದೆ.
ಕನ್ನಡಿಯಾಗುವೆ, ಬಿಂಬವಾಗಲಾರೆ
ಬಿಂಬ ಮಿಥ್ಯ, ಕನ್ನಡಿಯು ನಿತ್ಯ
-----ಜಯಪ್ರಕಾಶ ನೇ ಶಿವಕವಿ

- jp.nevara ರವರ ಬ್ಲಾಗ್
- Login or register to post comments
- 412 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: