ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...

ಕರುಣೆಯಲ್ಲೂ ಕಲಬೆರಕೆಯೇ?

June 26, 2007 - 6:04am — kalpana

ಮೊನ್ನೆ ಹೀಗೊಂದು ಸಾವಾಯಿತು ನೋಡಿ. ಒಬ್ಬ ಯುವಕನಿಗೆ ಕ್ಯಾನ್ಸರ್ ಬಂದು, ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು, ಹೀಗೆ ತುಂಬಿ ತುಳುಕುತ್ತಿದ್ದ ಸಂಪೂರ್ಣ ಪರಿವಾರವನ್ನು ತ್ಯಜಿಸಿ ಹೊರಟುಹೋದ. ಆ ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ವಿಧವೆ ಹೆಂಡತಿಯ ಮೇಲೆ ಅಯ್ಯೋ-ಪಾಪಗಳ ಸುರಿಮಳೆ ನಡೆದೇ ಇತ್ತು. ಅಷ್ಟರಲ್ಲಿ ಯಾರೋ ಪಿಸುಗುಟ್ಟಿದರು, "ಅವನಿಗೆ ಸಿಕ್ಕಾಪಟ್ಟೆ ಗುಟ್ಕಾ ಚಟವಿತ್ತಂತೆ". ಸರಿ, ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳು ಏಳುವುದಕ್ಕೆ ಶುರುವಾಯಿತು. ಅವನು ಗುಟ್ಕಾ ಜಗಿಯುತಿದ್ದಾಗ ಬೇಡ ಅಂತನ್ನದವರು ಇವರೆಂತಹ ಜನ? ತನ್ನ ಸ್ವಾರ್ಥ ಚಟ ಇಂಗಿಸಲು ಹೋಗಿ, ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಕೈಬಿಟ್ಟು ಹೋದ ಅವನಾದರೂ ಎಂತಹ ಮನುಷ್ಯ? ಇದು ಸ್ವಯಂಕೃತ ಅಪರಾಧವೆಂದ ಮೇಲೆ ನಮ್ಮ ಅನುಕಂಪಕ್ಕೆ ಇವರೆಷ್ಟು ಅರ್ಹರು? ಹೀಗೆ ಆ ಮನೆಯವರ ದುಃಖ, ನೋವು, ಮೀರಿ ಅವರ ನೈತಿಕ ವಿವೇಚನೆಯ ಬಗ್ಗೆ ಚರ್ಚೆ ನಡೆಯತೊಡಗಿತು.

ಇದೇ ರೀತಿಯ ಅನುಭವ ಬಹಳಷ್ಟು ಸಾರಿ ನನಗಾಗಿದೆ. ಏಡ್ಸ್ ಬಂದು ನರಳುತ್ತಿರುವ ರೋಗಿಯ ಚಿತ್ರಣ ಟೀವಿಯಲ್ಲಿ ನೋಡನೋಡುತ್ತ, ಎದೆಯಲ್ಲಿ ಕರುಣೆಯ ಮಿಡಿತ ಶುರುವಾಗುತ್ತಿದ್ದಂತೆ, ತಲೆಯಲ್ಲಿ "ಇವನಿಗೆ ಈ ರೋಗ ಹೇಗೆ ಬಂತು? ಎಷ್ಟು ಜನರ ಜೊತೆ ಮಲಗಿದ್ದನೋ ಏನೋ? ಡ್ರಗ್ ಆಡಿಕ್ಟ್ ಇರಬಹುದೇನೋ?" ಎಂಬ ಸಂಶಯದ ಸುಳಿ ಏಳುತ್ತದೆ. ಅವನಿಗೆ ಯಾವುದೋ ರಕ್ತದ ಟ್ರಾನ್ಸ್ ಫ್ಯೂಶನ್ ಸಮಯದಲ್ಲಿ ಹೆಚ್.ಐ.ವಿ. ಸೊಂಕು ತಗಲಿದ್ದು ಎಂದು ಸ್ಪಷ್ಟವಾದರೆ ಛೆ! ಪಾಪ! ಎಂಬ ನಿಟ್ಟುಸಿರು. ಇಲ್ಲವಾದರೆ ಛೀ! ಏನು ಅಸಹ್ಯದ ಜನರಿರುತ್ತಾರೆ ಎಂಬ ತಿರಸ್ಕಾರ. ಹೀಗೇಕೆ ಮನಸ್ಸು?

ಅಪ್ಪ ಅಮ್ಮಂದಿರು ನಮಗೆ ಒಳ್ಳೆಯ ದಾರಿ ತೋರಿಸಲು ನೀತಿ ಪಾಠಗಳನ್ನು ಹೇಳುತ್ತಾ ಬೆಳೆಸಿರುತ್ತಾರೆ. ಇನ್ನು ನಾವು, ತಾರುಣ್ಯದಲ್ಲಿ ನಮ್ಮನ್ನು ಆಕರ್ಷಿಸುವ ದುಶ್ಚಟಗಳನ್ನು ದೂರವಿಡಲು ಮನಸ್ಸಿಗೆ ಒಂದು ನೈತಿಕ ಬೇಲಿಯನ್ನು ಹಾಕಿಕೊಳ್ಳುತ್ತೇವೆ. ಅದರ ಒಳಗಿರುವವರು ಸರಿ, ಆಚಿನವರು ತಪ್ಪು. ಇದೇ ತತ್ವವನ್ನು ಮೈಗೂಡಿಸಿಕೊಂಡು, ನಮ್ಮ ಮಕ್ಕಳಿಗೂ ಭೋದಿಸುತ್ತಾ ಬದುಕುತ್ತಿರುತ್ತೇವೆ. ಆಗಲೇ ನೋಡಿ, ಜೀವನ ಮಧ್ಯದಲ್ಲಿ, ಈ ಬೇಲಿ ಹಾರಿರುವ ಜನರನ್ನು ಎದಿರುಗೊಂಡರೆ ಮುಜುಗರ ಶುರುವಾಗುತ್ತದೆ. ಯಾರೋ ಅಪರಿಚಿತರಾದರೆ ಅವಾಯ್ಡ್ ಮಾಡೋದು ಸುಲಭ. ಆದರೆ ಕೆಲವೊಮ್ಮೆ ಇವರು ಬಂಧುಗಳಲ್ಲಿ, ಸ್ನೇಹಿತರಲ್ಲಿ ಕಂಡು ಬರುತ್ತಾರೆ. ಆಗ "judgmental" ಆಗದೆ ಅವರ ಕಷ್ಟಗಳಿಗೆ ಸ್ಪಂದಿಸಲಾಗುವುದಿಲ್ಲ. ಹಾಗೇನಾದರೂ ಮಾಡಿದರೆ ನಮ್ಮ ಆತ್ಮಸಾಕ್ಷಿಯನ್ನು ಧಿಕ್ಕರಿಸಿದ ಅನುಭವ. ನಮ್ಮ ಸಾತ್ವಿಕ ನಿಲುವುಗಳನ್ನು ನಾವೇ ಖಂಡಿಸಿದ ಹಾಗೆ. ಮಕ್ಕಳಿಗೆ "ನೀವು ನಡತೆಗೆಟ್ಟರೂ ಪರವಾಗಿಲ್ಲಾ ಬಿಡಿ" ಅನ್ನುವ ಪೀಠಿಕೆ ಹಾಕಿಕೊಟ್ಟ ಹಾಗೆ. ಇಂತಹ ಸಮಯದಲ್ಲಿ ಯಾವ ಪ್ರತಿಕ್ರಿಯೆ ಸರಿ?

ಯಾವುದೇ ಪೂರ್ವೋತ್ತರ ಕೇಳದೆ, ಯಾವುದೇ ಪ್ರತಿಫಲ(ಮನಸ್ಸಿನ ಸಾರ್ಥಕತೆ ಸಹ) ಅಪೇಕ್ಷಿಸದೆ ಶುದ್ಧ ಮನಸ್ಸಿನಿಂದ ಒಬ್ಬರಿಗೆ ಸಹಾಯ ಮಾಡಲು ಸಾಧ್ಯವೆ? ಹಾಗೆ ಅಭಯಹಸ್ತ ಚಾಚಿದ ಮದರ್ ತೆರೇಸರಂತಹವರಿಗೂ ಕ್ರಿಸ್ಚಿಯಾನಿಟಿ ಹರಡುವ ಆಸೆ ಇತ್ತೆಂದರು ಜನ. ಹಾಗಾದರೆ ಕಲಬೆರಕೆಯಿಲ್ಲದ ಕರುಣೆ ಎಲ್ಲೂ ಇಲ್ಲವೇ?

  • ಆತ್ಮವಿಶ್ಲೇಷಣೆ
  • ಭಾವಲಹರಿ
~.~
  • kalpana ರವರ ಬ್ಲಾಗ್
  • Login or register to post comments
  • 584 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2007 - 4:14pm — srivathsajoshi

ಉ: ಕರುಣೆಯಲ್ಲೂ ಕಲಬೆರಕೆಯೇ?

srivathsajoshi's picture

ಕಲ್ಪನಾ ಅವರಿಗೆ ನಮಸ್ಕಾರ.

ಬಹಳ ಸೂಕ್ಶ್ಮವಾದ ವಿಷಯವನ್ನೇ ಪ್ರಸ್ತಾಪಿಸಿ ಯೋಗ್ಯವಾಗಿ ಬರೆದಿದ್ದೀರಿ. ಇದು ಕಲಬೆರಕೆಯ ಯುಗ, ಮಾಡುವವನು ಕಲಬೆರಕೆ ಮಾಡದಿದ್ದರೂ (ಉದಾ: ವ್ಯಾಪಾರಿಯು ಅಕ್ಕಿಯಲ್ಲಿ ಕಲ್ಲು ಸೇರಿಸದಿದ್ದರೂ) ನೋಡುವವನ (ಗ್ರಾಹಕನ) ಮನದಲ್ಲಿ ಅದರಲ್ಲಿ ಕಲಬೆರಕೆಯಿರಬಹುದೇ ಎಂಬ ಅನುಮಾನ. ಇದನ್ನೇ ವಿಸ್ತರಿಸಿದರೆ, ಈಗ ಬಹುಶಃ ಎಲ್ಲ ಕಡೆಯೂ actual ಕಲಬೆರಕೆಗಿಂತಲೂ perceived ಕಲಬೆರಕೆಯೇ ಹೆಚ್ಚು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2007 - 11:08pm — kalpana

ಉ: ಕರುಣೆಯಲ್ಲೂ ಕಲಬೆರಕೆಯೇ?

kalpana's picture

ಧನ್ಯವಾದಗಳು. ಇದು ಕಲಬೆರಕೆಯ ಯುಗವೇ ಸರಿ Smiling ಮಕ್ಕಳನ್ನು ಬಚಾವ್ ಮಾಡುವ angelina jolieದು publicity stunt ಅಂತಾರೆ. ತಾನಾಯಿತು ತನ್ನ ಕಲೆಯಾಯಿತು ಎಂದು ಆರಾಮಾಗಿದ್ದ ಅಣ್ಣಾವರನ್ನು ಸ್ವಾರ್ಥಿ ಅಂತಾರೆ. ಜನರ ಮಾತು ಬಿಡಿ, ನಮ್ಮ ಆತ್ಮಸಾಕ್ಷಿ ನಮ್ಮನ್ನು ದೂಷಿಸದಿದ್ದರೆ ಸರಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2007 - 1:16am — Abhimani

ಉ: ಕರುಣೆಯಲ್ಲೂ ಕಲಬೆರಕೆಯೇ?

Abhimani's picture

ಸಾಕಷ್ಟು ಗೊಂದಲ ಕಲ್ಪನ ಅವರ್‍ಏ.. ತನ್ನ ಸ್ವಾರ್ಥಕ್ಕೆ ಅಂದುಕೊಂಡೆ ಒಬ್ಬ/ಒಬ್ಬಳು ಯಾವುದೋ ದುಶ್ಚಟಕ್ಕೆ?? ಬಲಿಯಾಗಿ ತನ್ನ ನಂಬಿದವರಿಗೆ ನೋವನುಂಟು ಮಾಡುವುದು ಖಂಡನೀಯ..ಬೇಲಿ ಹಾರಿದವರಲ್ಲವೇ..? ಆದರೆ ಈ ಬೇಲಿಯ ಪರಿಭಾಷೆ ಅವರ ಬಳಿ ಬೇರೆ ಇರಬಹುದಲ್ಲ ..ಉದಾಹರಣೆಗೆ ಸಿಗರೇಟ್ ಸೇದುವ ಒಬ್ಬ ಮಿತ್ರನ ಅನಿಸಿಕೆ " ನಾನು ಇನ್ನೊಬ್ಬರಿಗೆ ನೋವು ಮಾಡದ ಹಾಗೆ..ನನಗೂ ಸ್ವಲ್ಪ ರಿಲ್ಯಾಕ್ಸ್ ಆಗುತ್ತೆ ಅಂತ ಸೇದ್ತಿನಿ" ಅಂತಾನೆ. ಹೌದು ಇವನು ಸಿಗರೇಟ್ ಸೇದುವ ವಿಷಯ ಮನೆಯವರಿಗೆಲ್ಲ ಮುಜುಗರ.. ನೋವು ಮಾಡಿರಬಹುದು ಆದರೆ ಇದನ್ನ ಬಿಟ್ಟರೆ ಹುಡುಗ ಒಬ್ಬರ ಬಗ್ಗೆ ಕೆಟ್ಟದ್ದು ಯೋಚನೆ ಮಾಡೊಲ್ಲ,ಹಿಂದೊಂದು ಮುಂದೊಂದು ಮಾಡೊಲ್ಲ. ನಾನು ಹೇಳುವ ಪ್ರಯತ್ನ ಮಾಡ್ತ ಇರೋದು ಇವರಿಗೆ "ಕರುಣೆ","ಅನುಕಂಪ" ಅನ್ನೊ ವಿಶಾಲ ಅರ್ಥವುಳ್ಳ ಪದಗಳು ಬೇಕಾ.. ? ಯಾಕೆ ಆಗಬೇಕು " Judgemental?? "...ನಮ್ಮ ನಿಮ್ಮಂತೆ ಮನುಷ್ಯರು .. ನಮ್ಮ ಅನುಕಂಪ ಬೇಕೆ ಅವರಿಗೆ .. ? ಕರುಣೆ ಅಗತ್ಯ ಇದೆಯೆ..? ಪ್ರಶ್ನೆ ಸಹಜ.

ಕೆಲವರು ಕೆಟ್ಟದ್ದು ಯೋಚನೆ ಮಾಡ್ತಾರೆ,ಕೆಟ್ಟದ್ದು ಮಾಡಿ ಇತರರಿಗೆ ನೋವನ್ನುಂಟು ಮಾಡ್ತಾರೆ.ಕೆಟ್ಟ ಯೋಚನೆ ಮಾಡುವುದು ತಪ್ಪಲ್ಲವೇ ?? ಅವರಿಂದ ನಂಬಿದವರಿಗೆ,ನಂಬದಿದ್ದವರಿಗೆ ನೋವುಂಟಾಗುವುದಿಲ್ಲವೇ..? ಅದು ಸ್ವಯಂಕೃತ ಅಪರಾಧವಲ್ಲವೇ..?? ಅವರಿಗೆ ನಿಮ್ಮ ಅನುಕಂಪ,ಕರುಣೆ ಅಗತ್ಯವಿಲ್ಲವೇ..??

"ಈ ಬೇಲಿ ಹಾರಿರುವ ಜನರನ್ನು ಎದಿರುಗೊಂಡರೆ ಮುಜುಗರ ಶುರುವಾಗುತ್ತದೆ" - ಇದನ್ನ ಸ್ವಲ್ಪ ಬಿಡಿಸಿ ಹೇಳಿದರೆ ಅನುಕೂಲವಾಗುತ್ತಿತ್ತು...

ನಾನು ಎಲ್ಲಾ ಕೆಟ್ಟ ಚಟಗಳನ್ನು ಪ್ರೋತ್ಸಾಹಿಸುತ್ತಿಲ್ಲ ಅಥವ ಅದನ್ನ ಮಾಡುವರೆಲ್ಲ ಸರಿ ಎಂದು ಹೇಳುತ್ತಿಲ್ಲ ಆದರೆ ಒಂದು ಬೀಡಿ,ಸಿಗರೆಟ್,ಕುಡಿತ ಸಮಾಜಘಾತುಕ ಕೆಲಸ ಅನ್ನುವುದನ್ನ ಒಪ್ಪುವುದಿಲ್ಲ ..

"ಲೋಕೊ ಭಿನ್ನೋಭಿರುಚಿಃ " .. - "difference of opinions" ,ಅಷ್ಟೇ.. ಅನ್ಯಥಾ ಭಾವಿಸಬೇಡಿ.

ಬದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2007 - 5:12am — kalpana

ಉ: ಕರುಣೆಯಲ್ಲೂ ಕಲಬೆರಕೆಯೇ?

kalpana's picture

ಪ್ರತಿಕ್ರಿಯೆಗೆ ಧನ್ಯವಾದಗಳು ಅಭಿಮಾನಿ. ನೀವೇ ಹೇಳಿದಂತೆ ಆ ಬೇಲಿಯ ಪರಿಮಿತಿ, ಪರಿಭಾಷೆ ಒಬ್ಬೊಬ್ಬರಲ್ಲಿ ಒಂದೊಂದು ತರಹ ಇರುತ್ತೆ. ನಾನು ಸೇದುವುದು ತಪ್ಪೆನ್ನಬಹುದು, ನೀವು ಸೇದುವುದು, ಕುಡಿಯುವುದು ತಪ್ಪೇನಲ್ಲ, ಆದರೆ ವ್ಯಭಿಚಾರ ಮಾತ್ರ ತಪ್ಪು ಎನ್ನಬಹುದು. ಅದೆಲ್ಲಾ ಪರವಾಗಿಲ್ಲ, ಅತ್ಯಾಚಾರಿಗಳನ್ನು ಕಂಡರೆ ಮಾತ್ರ ನನಗ ಆಗುವುದಿಲ್ಲ ಎಂದು ಇನ್ನೊಬ್ಬರೆನ್ನಬಹುದು. ಅದು ಸರಿ.

ನಾನು ಮಾತಾಡಿದ್ದು, ಆ ಸೇದುವವನಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದಾಗ, ಅಧವಾ, ಆ ವ್ಯಭಿಚಾರಿಗೆ ಏಡ್ಸ್ ಬಂದಾಗ, ನನ್ನ ಮತ್ತು ನಿಮ್ಮಲ್ಲಿ ಉಂಟಾಗುವ ಮನದ ಗೊಂದಲಮಯ ಸಂಧರ್ಭದ ಬಗ್ಗೆ. ಒಂದು ಹಸುಳೆಗೆ ಇದೇ ರೋಗಗಳು ತಗುಲಿದಾಗ ನಾವು ತೋರುವ ಅನುಕಂಪಕ್ಕಿಂತ, ಮೇಲೆ ಉಲ್ಲೇಖಿಸಿದ ಜನರಿಗೆ(ಅಂದರೆ ನಾವು ಹಾಕಿಕೊಂಡಿರುವ ನಮ್ಮ ಸ್ವಂತ ಮನದ ನೈತಿಕ ಚೌಕಟ್ಟು ಹಾರಿದವರಿಗೆ) ನಾವು ತೋರುವ ಅನುಕಂಪ ಭಿನ್ನವಲ್ಲವೇ? ಇದನ್ನೇ ನಾನು ಹೇಳ ಹೊರಟಿದ್ದು.

variety is the spice of life Smiling ಆದ್ದರಿಂದ ನಿಮ್ಮ ಅಭಿಪ್ರಾಯಕ್ಕೆ ಯಾವಾಗಲೂ ಸ್ವಾಗತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2007 - 6:24am — Abhimani

ಉ: ಕರುಣೆಯಲ್ಲೂ ಕಲಬೆರಕೆಯೇ?

Abhimani's picture

"ಈ ಬೇಲಿ ಹಾರಿರುವ ಜನರನ್ನು ಎದಿರುಗೊಂಡರೆ ಮುಜುಗರ ಶುರುವಾಗುತ್ತದೆ. ಯಾರೋ ಅಪರಿಚಿತರಾದರೆ ಅವಾಯ್ಡ್ ಮಾಡೋದು ಸುಲಭ. ಆದರೆ ಕೆಲವೊಮ್ಮೆ ಇವರು ಬಂಧುಗಳಲ್ಲಿ, ಸ್ನೇಹಿತರಲ್ಲಿ ಕಂಡು ಬರುತ್ತಾರೆ. ಆಗ "judgmental" ಆಗದೆ ಅವರ ಕಷ್ಟಗಳಿಗೆ ಸ್ಪಂದಿಸಲಾಗುವುದಿಲ್ಲ."

ಇದನ್ನು ಓದಿ ನಾನು ತಪ್ಪು ಗ್ರಹಿಸಿದೆ ಅಂತ ಕಾಣುತ್ತೆ.

"ನಾನು ಮಾತಾಡಿದ್ದು, ಆ ಸೇದುವವನಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದಾಗ, ಅಧವಾ, ಆ ವ್ಯಭಿಚಾರಿಗೆ ಏಡ್ಸ್ ಬಂದಾಗ, ನನ್ನ ಮತ್ತು ನಿಮ್ಮಲ್ಲಿ ಉಂಟಾಗುವ ಮನದ ಗೊಂದಲಮಯ ಸಂಧರ್ಭದ ಬಗ್ಗೆ"

ನೀವು ಹೇಳ ಹೊರಟದ್ದು ಈಗ ಸ್ಪಷ್ಟವಾಗಿ ತಿಳಿಯಿತು.

ಬದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2007 - 4:29pm — krishnamurthy bmsce

ಉ: ಕರುಣೆಯಲ್ಲೂ ಕಲಬೆರಕೆಯೇ?

krishnamurthy bmsce's picture

ಮಾನ್ಯ ಲೇಖಕರೇ ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಇಲ್ಲದ ಯಾವುದೇ ವಿಷಯ,ವಸ್ತು,ವಿಚಾರ ಕಾಣುತ್ತಿಲ್ಲ ನಿಮ್ಮ ಲೇಖನ ತುಂಬಾ ಸಹಜ ಸತ್ಯನುಡಿ ಇದನ್ನು ಕಲಬೆರಕೆ ಅನ್ನುವುದಕ್ಕಿಂತ (ಸತ್ಯಶೋಧ)ವಿಮರ್ಷೆ ಎನ್ನ ಬಹುದು ವಂದನಾಭಿನಂದನೆಯೊಂದಿಗೆ
-ವೆಂ ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2007 - 6:41am — kalpana

ಉ: ಕರುಣೆಯಲ್ಲೂ ಕಲಬೆರಕೆಯೇ?

kalpana's picture

ನಮಸ್ಕಾರ ಕೃಷ್ಣಮೂರ್ತಿಗಳೇ, ನಿಮ್ಮ ಪ್ರತಿಕ್ರಿಯೆಗೆ ಮತ್ತು ಭೇಟಿಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2007 - 11:35am — ritershivaram

ಉ: ಕರುಣೆಯಲ್ಲೂ ಕಲಬೆರಕೆಯೇ?

ritershivaram's picture

ಧನ್ಯವಾದಗಳು,
ಕೃಷ್ಣಮೊರ್ತಿಯವರೇ,
ಆಡು ಮಾತುಗಳಲ್ಲಿ ನಾವು ಬದುಕುವ ರೀತಿಯೇ ಹಾಗಿದೆ ನಿಜ.ಕಲ್ಪನಾ ಅವರು ಪ್ರಸ್ತಾಪಿಸಿರುವುದೂ ಅದನ್ನೇ ಎಂದುಕೊಂಡಿದ್ದೇನೆ.
ಅದೇ ವ್ಯಾಖ್ಯೆಯಾಗಲಾರದೆಂಬುದಷ್ಟೇ ನನ್ನ ಅಭಿಪ್ರಾಯ.
-ಎಚ್.ಶಿವರಾಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2007 - 10:42am — ritershivaram

ಉ: ಕರುಣೆಯಲ್ಲೂ ಕಲಬೆರಕೆಯೇ?

ritershivaram's picture

"ಕರುಣೆಯಲ್ಲಿ ಕಲಬೆರೆಕೆ" ಎಂಬ ವ್ಯಾಖ್ಯೆ ಸರಿಯಲ್ಲ.

ಪ್ರೀತಿಯಲ್ಲಿ ಕಲಬೆರೆಕೆ, ನಗುವಿನಲ್ಲಿ, ನಲಿವಿನಲ್ಲಿ,ನೋವಿನಲ್ಲಿ ಕಲಬೆರೆಕೆ ಹೀಗೇ ಇಂತಹ ಭಾವನಾತ್ಮಕ ಪದಗಳೊಂದಿಗೆ "ಕಲಬೆರೆಕೆ" ಪದವನ್ನು ಸೇರಿಸುತ್ತಾ ಹೋಗಬೇಕಾದೀತು!!.

ಯಾಕೆಂದರೆ, ಪ್ರೀತಿ ಮಾಡಬೇಕಲ್ಲಾಂತ ಮಾಡಿದರೆ ಕಲಬೆರೆಕೆ, ನಗಬೇಕಲ್ಲಾಂತ ನಕ್ಕರೆ ಕಲಬೆರೆಕೆ, ಇಲ್ಲದ ನಲಿವನ್ನು ತಂದುಕೊಳ್ಳಬೇಕಾದಾಗಲೂ ಅದು ಕಲಬೆರೆಕೆ, ನೋವು ಆದಾಗಲೂ ನಮಗೇತರ ನೋವು ಅದರಿಂದ ಎಂದು ಭಾವಿಸಿದಾಗಲೂ ಕಲಬೆರೆಕೆಯೆ.
-ಹೀಗೆ ಹೊಸದೊಂದು ವ್ಯಾಖ್ಯೆಯೆ ಸರಣಿಯೆ ಬೆಳೆದೀತು!

ಈಗ ನಿಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ-
ಗಟ್ಕಾ ಚಟವಿದ್ದವನು ಸತ್ತಿದ್ದಾನೆ. ಅವನು ಬದುಕಿದ್ದಾಗ ಅದನ್ನು ತಿನ್ನಬೇಡ ಸಾಯ್ತೀಯ, ನಿನ್ನ ಹೆಂಡತಿ ಮಕ್ಕಳನ್ನ ತಬ್ಬಲಿ ಮಾಡ್ತೀಯ ಅಂತ ಹೇಳಿದ್ದರೆ ಆ ಮನುಷ್ಯ ಕೇಳ್ತೀದ್ದನೇನು. ಹಾಗೆ ಕೇಳುವುದೇ ಆಗಿದ್ದರೆ, ಚಟ ಹತ್ತಿಸಿಕೊಂಡವರನ್ನೆಲ್ಲ ಸರಿ ದಾರಿಗೆ ತರೋದು ಬಹಳ ಬಹಳವೆ ಸುಲಭವಾದೀತು! ಸಮಾಜ ಸುಧಾರಣೆಗೂ ಸಹ.
ಇನ್ನು ಏಡ್ಸ್ ರೋಗಿ ವಿಷಯ ಅವನಿಗೆ ಅನೈತಿಕ ಸಂಬಂಧದಿಂದ ಏಡ್ಸ್ ಬಂತೇ? ಅಥವಾ ನಿಜಕ್ಕೂ ಅವನು ಸಾಚಾ ಮನುಷ್ಯನೇ ಆಗಿದ್ದಿರಬೇಕು(ಯಾಕೆಂದರೆ, ನೀವು ನೋಡಿದ್ದು ಹತ್ತಿರದಿಂದ ಅಲ್ಲ;ಟಿ.ವಿ.ಯಲ್ಲಿ ಆ ಮನುಷ್ಯನನ್ನು) ಯಾವುದೋ ರೀತಿಯಲ್ಲಿ ಪಾಪ ಆತನಿಗೆ ಆ ರೋಗ ಅಂಟಿರಲೂ ಬಹುದು. ಸರಿ, ನಿಜಕ್ಕೂ ಅವನು ಕರುಣೆಗೆ ಅರ್ಹನೇ ಆಗಿರಲೂ ಬಹುದು.
-ಇಂತಹ ಸನ್ನಿವೇಶ ಸಂದರ್ಭಗಳಲ್ಲಿ ನಾವು ತೋರುವ ಕರಣೆ ಸಂಶಯಾಸ್ಪದವಾಗಿರುತ್ತದೆಯಷ್ಟೇ. ಅದು ಎಲ್ಲ ಮನುಷ್ಯರಾದವರಿಗೂ ಸಹಜವೇ ಆಗಿರುತ್ತದೆ. ಇಂತಹ ಸಂಶಯಾಸ್ಪದ ಸುಳಿಯಲ್ಲಿಯೆ ಅಂತಹವರಿಗೆ ನಿಜಕ್ಕೂ ಕರುಣೆ ತೋರಿ ಯಾವ ರೀತಿಯಲ್ಲಾದರೂ ಸಹಾಯ ಮಾಡಬಯಸುವಾತನಲ್ಲಿ ತನ್ನ ಸಂಶಯ ನಿವಾರಣೆಗೆ ದಾರಿಗಳೂ ಗೋಚರಿಸುತ್ತವೆ. ಒಂದು ವೇಳೆ ಆತನ ಸಂಶಯ ನಿಜವೇ ಆಗಿದ್ದಾಗ್ಯೂ ಆತ ಸಹಾಯ ಹಸ್ತ ಚಾಚಲು ಮುಂದಾಗುವಾಗಲೂ ಆತನಲ್ಲಿರುವ ಮಾನವೀಯತೆ ಮುಂದೆ ಅಂತ ಹ ಸಂಶಯ ಸೋಲುತ್ತದೆಯಷ್ಟೇ. ಯಾಕೆಂದರೆ, ಕಿಂಚಿತ್ ಮಾನವೀಯತೆ ಇಲ್ಲದಾತನಲ್ಲಿ ಕರುಣೆಯ ಲವಲೇಶವೂ ಉದ್ಭವಿಸಲಾರದಲ್ಲ. ಆದ್ದರಿಂದ, ಇಂತಹ ಸನ್ನಿವೇಶ ಸಂದರ್ಭಗಳಲ್ಲಿ, ಭಾವನೆಯೆಲ್ಲಿ ಕಲಬೆರೆಕೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಮನುಷ್ಯನಾದವನಿಗೆ ಮತ್ತು ಮಾನವೀಯತೆಯುಳ್ಳವರಿಗೆ ಮಾತ್ರ ಕರುಣೆ ತೋರುವಲ್ಲಿ ಕಿಂಚಿತ್ ಸಂಶಯದ ಸುಳಿಯಬಹುದಾದರೂ ಅನಂತರ ಅವರಲ್ಲಿರುವ ಮಾನವೀಯತೆಯೇ ಮೆರೆಯುತ್ತದೆಯಲ್ಲವೇ?
-ಎಚ್.ಶಿವರಾಂ
ಜೀವನ-ಚೇತನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನಸ್ಸಿನ ಮನಸ್ಸೆ...
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ನಮ್ಮ ಜೀವ ಕೇವಲ ನಮಗೆ ಸೇರಿದ್ದೇ?
  • ಈ ಭೂಮಿ ತಾಯಿಯನು ಉಳಿಸೋಣ..
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator