ಕಲ್ಪನಾಲೋಕ
ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...
ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.
ಪಲ್ಲವಿಯವರು ಹೇಳಿದ್ದು, ಮಹಿಳಾ ಲೇಖಕಿಯರು ಅಡುಗೆ ಮತ್ತು ಕುಟುಂಬದ ಬಗ್ಗೆ ಹೆಚ್ಚಾಗಿ ಬರೆದಿರುವುದರಿಂದ, ಇವು ತೆಳು ವಿಷಯಗಳಾದವು. ಅವರು ಇವುಗಳಿಗೆ ತಮ್ಮ ಲೇಖನ ಸಾಮರ್ಥ್ಯವನ್ನು ಸೀಮಿತಗೊಳಿಸದೆ, ರಾಜಕೀಯ ಇತ್ಯಾದಿಯ ಬಗ್ಗೆ ಬರೆದು, ಸಮಾಜವು ಮಹಿಳಾ ಲೇಖಕಿಯರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕೆಂದು.
ನನಗೆ ಹಲವು ಬಗೆಗಳಲ್ಲಿ ಇದು ತಪ್ಪು ಎನ್ನಿಸಿತು.
ಒಂದು, ಸಮಾಜದಲ್ಲಿ ಸಾಮಾನ್ಯ ಗೃಹಿಣಿಗೆ ಈ ನಡುವೆ ಬೆಲೆ ಬಹಳ ಕಡಿಮೆಯಾಗಿದೆ. ಅಡುಗೆ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರುತ್ತಾಳೆಂದರೆ, ಅಯ್ಯೊ, ಅಷ್ಟೇನಾ? ಎಂದು ಹೆಂಗಸರೇ ಅವಳನ್ನು ಅಲ್ಲಗೆಳೆಯುತ್ತಾರೆ! ಒಂದು ಕುಟುಂಬವನ್ನು ಸರಿಯಾಗಿ ಪೋಷಿಸಬೇಕಾದರೆ ಒಬ್ಬ ಗೃಹಿಣಿ ಪಡುವ ಶ್ರಮವನ್ನು ದುಡ್ಡಿನಲ್ಲಿ ಅಳೆಯಲು ಸಾಧ್ಯವಿಲ್ಲ, ಅವಳಿಗೆ ದುಡ್ಡೂ ಸಿಗುವುದಿಲ್ಲ! ಇಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆದ ಯಾರ್ಯಾರಿದ್ದೀರೋ ಒಂದು ಕ್ಷಣ ನಿಮ್ಮ ಚಿಕ್ಕಂದಿನಲ್ಲಿ ತಾಯಿ ಮನೆಯಲ್ಲಿ ಇಲ್ಲದಿದ್ದರೆ ಹೇಗಿರುತ್ತಿತ್ತೆಂದು ನೆನೆಸಿಕೊಳ್ಳಿ. ಆಗ ಮನೆಯಲ್ಲಿರುವ ತಾಯಿಯ ಮಹಿಮೆ ಅರ್ಥವಾಗುತ್ತೆ. ಹೀಗಿರುವಾಗ, ಗೃಹಿಣಿಯ ಹಿರಿಮೆಯನ್ನು ಎತ್ತಿ ಹಿಡಿಯುವುದನ್ನು ಬಿಟ್ಟು, ಅಡುಗೆ, ಕುಟುಂಬದ ಬಗ್ಗೆ ಬರೆಯುವುದೂ ಸಹ ಕೀಳೆಂದರೆ ಹೇಗೆ?
ಎರಡು, ಮಹಿಳೆಗ್ಯಾಕೆ ತಾನು ಗಂಡಸರಿಗೆ ಸಮ ಎಂದು ತೋರಿಸುವ ಉತ್ಕಟ ಆಸೆ? ಪುರುಷರು ರಾಜಕೀಯ ಇತ್ಯಾದಿಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ. ಹಾಗಂತ, ಅವರು ಅವು ತೆಳು ವಿಷಯಗಳು, ನಾವು ಅಡುಗೆಯ ಬಗ್ಗೆ ಬರೆಯಬೇಕು. ಹೆಂಗಸರಿಗೆ ಸಮ ಆಗಬೇಕು. ಇಲ್ಲದಿದ್ದರೆ, ನಾವು ಸಮಾಜದಲ್ಲಿ ಮುಖ ತೋರಿಸಲು ಲಾಯಕ್ಕಿಲ್ಲ ಎಂದೇನು ಎಣಿಸುವುದಿಲ್ಲ ಬದಲಿಗೆ, ಹೆಂಗಸರಿಗೂ ಅಡುಗೆ, ಸಂಸಾರ ವಿಷಯಗಳು ತೂಕದ್ದಲ್ಲ ಎನ್ನುವ ಭಾವನೆ ಬರಿಸುತ್ತಾರೆ! ಹೆಂಗಸರು, ಸಮಾಜದ ದೃಷ್ಟಿಕೋನದಲ್ಲಿರುವ ಡೊಂಕು ತಿದ್ದದೆ, ತಮ್ಮನ್ನು ತಾವು ಬದಲಿಸಿಕೊಳ್ಳಲು ಹೋಗುತ್ತಾರೆ. ಇದು ನೋಡಿ, ವಿಪರ್ಯಾಸ.
ಮೂರು, ಎರಡನೆಯ ಪಾಯಿಂಟನ್ನೆ ವಿಸ್ತರಿಸುತ್ತ, ಮಹಿಳೆ ತಾನು ಗಂಡಸಾಗಬೇಕೆಂದು ಬಯಸದೆ, ತನ್ನ ಹೆಣ್ತನಕ್ಕೆ ಗೌರವ ಕೊಡುವುದನ್ನು ಸಮಾಜಕ್ಕೆ ಕಲಿಸಬೇಕು. ಅಂದರೆ, ಪ್ರಕೃತಿ ಅವಳನ್ನು ಯಾವುದಕ್ಕಾಗಿ ಸೃಷ್ಟಿಸಿದೆಯೋ ಅದನ್ನು ಸಮಾಜ ಗುರುತಿಸಿ ಅದಕ್ಕೆ ಬೆಲೆ ಕೊಡುವಂತೆ ಕೇಳಬೇಕು. ಅದು ಬಿಟ್ಟು, ತಾನೂ ಗಂಡಸು ಮಾಡುವುದೆಲ್ಲವನ್ನೂ ಮಾಡಿದರೆ ತನಗೆ ಬೆಲೆ ಸಿಗುತ್ತೆಂಬ ಭ್ರಮೆಯ ಹಿಂದೆ ಹೋಗಬಾರದು. ಇದು ಉಪದೇಶದ ಹಾಗೆ ಅನ್ನಿಸಿದರೂ, ಸ್ವಲ್ಪ ವಿಶ್ಲೇಷಿಸಿದರೆ, ನಿಜದ ಅರಿವಾಗುತ್ತೆ.

- kalpana ರವರ ಬ್ಲಾಗ್
- Login or register to post comments
- 255 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಪ್ರಿಯರೇ,
ನಮಸ್ಕಾರ. ಪಲ್ಲವಿಯವರ ಆ ಪ್ರತಿಕ್ರಿಯೆಯನ್ನು ನಾನು ಕೂಡ ಓದಿದೆ. ಅದು ಒಂದು ರೀತಿಯಲ್ಲಿ ಮಹಿಳಾವಾದಿಗಳ ವಾದದ ಹಾಗೆ ತೋರಿದರೂ, ನಮ್ಮ ಜಾನಪದ ಸಾಹಿತ್ಯವೇ ಆಗಲಿ, ಕೆಎಸ್ ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆಯಂತಹ ಪದ್ಯಗಳೇ ಆಗಲಿ, ನೀವು ಹೇಳುವ ವಿಚಾರಗಳು(ಹೆಣ್ಣಿನ ತುಮುಲಗಳು, ಕೌಟುಂಬಿಕ ವ್ಯವಹಾರಗಳು ಇತ್ಯಾದಿ) ಕುರಿತು ಸಾಕಷ್ಟು ನವಿರಾಗಿ ಚಿತ್ರಿಸಿದೆ. ಕೆಲವರು ಮಹಿಳಾವಾದಿಗಳು ವಾದಿಸುವಂತೆ, ಮಹಿಳೆಯರು ಮಾತ್ರ ಹೆಣ್ಣಿನ ಕಷ್ಟ, ಕಾರ್ಪಣ್ಯಗಳನ್ನು, ನೋವು, ನಲಿವುಗಳನ್ನು ಸಮರ್ಥವಾಗಿ ಚಿತ್ರಿಸಲು ಸಾಧ್ಯ ಎನ್ನುವುದು ಅರ್ಥವಿಲ್ಲದ ಮಾತು. ಯಾಕೆಂದರೆ, ಮಹಿಳೆಯರ ಮನಸ್ಸನ್ನು ಪುರುಷ ಸಾಹಿತಿಗಳು ಚಿತ್ರಿಸಿರುವಷ್ಟು ಚೆನ್ನಾಗಿ ಯಾವ ಮಹಿಳಾ ಸಾಹಿತಿಗಳೂ ಸೃಷ್ಟಿಸಿಲ್ಲ ಎನ್ನುವುದಕ್ಕೆ ಉದಾಹರಣೆ ನಮ್ಮ ಕನ್ನಡ ಸಾಹಿತ್ಯದಲ್ಲೇ ಇದೆ. ಈ ಕುರಿತು ದೊಡ್ಡ ಮಟ್ಟದಲ್ಲೇ ಚರ್ಚೆಗಳು ನಡೆದಿವೆ. ಆ ಕುರಿತು ನಾನು ಇಲ್ಲಿ ಹೇಳಬಯಸುವುದಿಲ್ಲ. ಇ
ಇಲ್ಲಿ ಯಾರು ಶ್ರೇಷ್ಟ ಎನ್ನುವುದಕ್ಕಿಂತ ವಸ್ತುನಿಷ್ಟತೆ ಮುಖ್ಯ.
ನಿಮಗೆ ನನ್ನದೊಂದು ಸಲಹೆ ಏನೆಂದರೆ, ತಾವು ಹೆಣ್ಣು ಹೇಗೆ ಗಂಡಿಗಿಂತ ಶ್ರೇಷ್ಟಳಾಗುತ್ತಾಳೆ ಎಂದು ಓಶೋ ತನ್ನ The book of woman ಪುಸ್ತಕದಲ್ಲಿ ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ. ದಯವಿಟ್ಟು ಅದನ್ನು ಓದಿ. ಇಲ್ಲವಾದಲ್ಲಿ, ನಾನೇ ಆ ಕುರಿತು ಬರೆಯುವ ಪ್ರಯತ್ನ ಮಾಡುತ್ತೇನೆ. ಆಗಲಾದರೂ ಓದಿಕೊಳ್ಳಿ.
ಒಂದು ಸತ್ಯ ಏನೆಂದರೆ, ನಮ್ಮ ವಚನಕಾರರು ಹೇಳುವ ಹಾಗೆ, ನಡುವೆ ಸುಳಿವ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ ಅಲ್ಲವೇ? ಹೆಂಗಸರು ಗಂಡಸರಿಗಿಂತ ಹೆಚ್ಚು ಕ್ರಿಯಾಶೀಲರು ಎಂದು ಹೇಳಬೇಕೇ? ಅದನ್ನು ನೋಡುವ ಕಣ್ಣುಗಳು, ಗುರುತಿಸುವ ಹೃದಯ ಬೇಕಷ್ಟೆ.
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
Mobile: 9886484937
Personal Blog: http://sampada.net/user/shashikannada
Personal Website: http://vishwamanava.mywebdunia.com/
ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಪ್ರತಿಕ್ರಿಯೆಗೆ ಧನ್ಯವಾದಗಳು, ಶಶಿಯವರೆ. ಓಶೋ ಪುಸ್ತಕ ಸಿಕ್ಕರೆ ಓದುತ್ತೇನೆ.
ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಸರಿಯಾಗಿ ಹೇಳಿದ್ದೀರಿ . ಇವತ್ತು ಕೆಲವು (ಹೆಚ್ಚಿನ?) ಹೆಣ್ಣು ಮಕ್ಕಳು ಗಂಡಸರು ಮಾಡಿದ್ದನ್ನೆಲ್ಲವನ್ನೂ (ಒಳ್ಳೆಯದು, ಕೆಟ್ಟದು) ಮಾಡಿದರೆ ತಾವು ಸಮಾನರಾಗುತ್ತೀವಿ, ಶ್ರೇಷ್ಥರಾಗುತ್ತೀವಿ ಎಂಬ ತಪ್ಪು ತಿಳುವಳಿಕೆ ಹೊಂದಿರುವುದನ್ನು ಕಾಣಬಹುದು. ಕೆಲವರು ಅದರ ಜೊತೆಗೆ ಸಮಾಜದಲ್ಲಿ ಮೊದಲಿಂದ ರೂಢಿಯಾದ ಹೆಂಗಸರು ಮಾಡುವ ಕೆಲಸಗಳನ್ನು, ಪ್ರಕೃತಿ ಸಹಜವಾದ ಗುಣಗಳನ್ನು ಧಿಕ್ಕರಿಸುವುದನ್ನು ಅಭ್ಯಾಸ ಮಾಡಿಕೊಂಡಿರುವುದನ್ನೂ ಕಾಣಬಹುದು. ಅಮ್ಮನು ಮಾಡಿದ ಅಡುಗೆಯನ್ನು ಮೊಣಕೈ ವರೆಗೆ ನೆಕ್ಕಿಕೊಂಡು ತಿಂದು ಬೆಳೆದವರು ನಂತರ ಹೊರಗೆ ಬಂದು ಅಡುಗೆ ಮನೆಯೆಂದರೆ ಜೈಲು, ಅಡುಗೆ ಮಾಡುವವರು ಖೈದಿಗಳು ಎಂಬಂತೆ ಚಿತ್ರಿಸಿ ಆ ಕೆಲಸವನ್ನು ಕೀಳು ಎಂಬಂತೆ ಮಾಡುತ್ತಾರೆ. ದಾರಿತಪ್ಪಿದ ಸ್ತ್ರೀವಾದಗಳು ಇವು.
**************************
http://vikasavada.blogspot.com/
**************************
ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಪ್ರತಿಕ್ರಿಯೆಗೆ ಧನ್ಯವಾದಗಳು ವಿಕಾಸರೆ. ಸ್ತ್ರೀಸಮಾನತೆಯ ಬಗ್ಗೆ ನನಗೂ ಖುಷಿಯಿದೆ, ಆದರೆ, ಅದರ ದುಶ್ಪರಿಣಾಮಗಳ ಬಗ್ಗೆ ಚಿಂತೆಯುಂಟಾಗುತ್ತದೆ.
ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಕಲ್ಪನಾ
ನೂರು ಪಟ್ಟು ಹೆಚ್ಚು
:) 
ಮನೆಯಲ್ಲಿ ಅಡುಗೆ ಹಾಗು ಮನೆಯ ವಾರ್ತೆಗಳನ್ನೆಲ್ಲಾ ನೋಡಿಕೊಳ್ಳುವ ಗೃಹಿಣಿ ಎನಿಸಿಕೊಳ್ಳುವ ಹೆಣ್ಣು ಹೊರಗೆ ದುಡಿದು ಮನೆಗೆ ಬಂದು ಏನೂ ಬೇಯಿಸಿ ಹಾಕಿ ಇಲ್ಲವಾದರೆ ಹೋಟೆಲ್‍ನಿಂದ ತಂದು ತಿನ್ನುವ ನಮ್ಮಂತಹ ಎಡಬಿಡಂಗಿ ಹೆಂಗಸರಿಗಿಂತ
ಯಾವುದೇ ಬ್ಲಾಗ್‍ನಲ್ಲೂ ಮನೆ ಹೇಗೆ ನೋಡಿಕೊಳ್ಳಾಬೇಕು, ಗಂಡ, ಮಕ್ಕಳನ್ನು ಹೇಗೆ ಸಂಭಾಳಿಸಬೇಕು ಅನ್ನುವುದು ಸಿಗುವುದೇ ಕಷ್ಟ.
ಹಾಗಾಗಿ
ಅಡುಗೆ, ಮನೆ, ಸಂಸಾರವನ್ನು ನಿರ್ವಹಿಸುವ ಬಗೆ ತಿಳಿಸುವ ಬರವಣಿಗೆ ಈಗ ಬಹಳ ಮುಖ್ಯ ವಾಗಿದೆ
ಈಗಂತೂ ಹಾಗೆ ಹೇಳಿಕೊದುವವರು ಸಿಕ್ಕರಂತೂ ಸಾಷ್ಟಾಂಗ ನಮಸ್ಕಾರ ಮಾಡುವುದಕ್ಕೂ ನಾನು ರೆಡಿ
http://thereda-mana.blogspot.com/
ರೂಪ
ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
ಹೌದೇ ರೂಪ? ಹಾಗಾದರೆ ನಾನು ಇಲ್ಲಿ ಖಂಡಿತ ನನ್ನ ಮಕ್ಕಳಿಗೆ ಮಾಡಿಕೊಡುವ ಕೆಲವು ಸುಲಭ, ಆದರೂ ಪೌಷ್ಠಿಕರ ತಿಂಡಿಗಳ ಬಗ್ಗೆ ಬರೆಯಬಹುದು ಅನ್ನಿ. ನಾನು ಒಂದು ರೆಸಿಪಿಗಳ ಬ್ಲಾಗ್ ಶುರು ಮಾಡಬೇಕೆಂದುಕೊಂಡವಳು ಯಾಕೋ ಸುಮ್ಮನಾದೆ. ಈಗ ಮಾಡಲು ಸ್ವಲ್ಪ ಹುರುಪು ಬಂತು. ಒಂದು ಪ್ರಾಬ್ಲಂ ಏನಪ್ಪಾಂದ್ರೆ, ಅಮೇರಿಕದಲ್ಲಿ ನನಗೆ ಸಿಗುವ ಸಾಮಗ್ರಿಗಳು ಬೆಂಗಳೂರಲ್ಲಿ ಸಿಗುತ್ತೋ ಇಲ್ವೋ ಗೊತ್ತಿಲ್ಲ.