ಭಾಷೆಗೆ ಸಾಹಿತ್ಯೇತರ ಕೊಡುಗೆ
ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ್ಲ ನೆನಪಿಗೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ಭಾಷೆಯ ಅಚ್ಚುಗಳನ್ನು ಮೊದಲಿಗೆ ತಯಾರಿಸಿದ, ಟೈಪರೈಟರಿನಲ್ಲಿ ಕನ್ನಡ ಅಳವಡಿಸಿದ, ಗಣಕಕ್ಕಾಗಿ ಕನ್ನಡ ತಂತ್ರಾಂಶಗಳನ್ನು ಹುಟ್ಟುಹಾಕಿದ, ಬಗೆಬಗೆಯ ಅಕ್ಷರ ಶೈಲಿಗಳನ್ನು ತಯಾರಿಸಿದ ಹಲವು ತಂತ್ರಜ್ನರನ್ನು ಭಾಷಾಬೆಳವಣಿಗೆಯ ದೃಷ್ಟಿಯಿಂದ ನೆನಪಿಸಿಕೊಳ್ಳುವುದು ಕಡಿಮೆ. ಹಲವು ಬರಹಗಾರರು, ತಂತಮ್ಮ ವಲಯಗಳಲ್ಲಿ ಬರೆದ ಪುಸ್ತಕಗಳು ಆಯಾ ವಲಯಗಳಲ್ಲಿ ನಮ್ಮ ಭಾಷೆ ಶ್ರೀಮಂತವಾಗುವಂತೇ ಮಾಡಿದ್ದಾರೆ. ಉದಾ: ಜಿ. ಟಿ. ನಾರಾಯಣ ರಾವ್ ವಿಜ್ನಾನ ಕುರಿತಾದ ಎಷ್ಟೆಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ಎಚ್ಚೆಸ್ಕೆ ಅರ್ಥಶಾಸ್ತ್ರದ ಕುರಿತು ಬಹಳ ಬರೆದಿದ್ದಾರೆ. ಹೀಗೆ ಬರೆಯುತ್ತ ಇವರುಗಳು ಕನ್ನಡದಲ್ಲಿ ಆಯಾ ಕ್ಷೇತ್ರದ ಪರಿಭಾಷೆಗಳು ತಯಾರಾಗುವಂತೇ ಮಾಡಿದ್ದಾರೆ. ಹೀಗೆ ಬಹಳ ಜನರಿದ್ದಾರೆ. ಕನ್ನಡ ಭಾಷೆ ಆಧುನಿಕ ಜ್ನಾನವಲಯಗಳಲ್ಲಿ ತನ್ನದೇ ಶಬ್ದಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ತಂತ್ರಾಂಶಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ಆ ದಿಕ್ಕಿನಲ್ಲಿ ಕೆಲಸ ಮಾಡಿದವರನ್ನು ನಾವು ನೆನಪಿಸಿಕೊಳ್ಳುತ್ತಿರುವುದು ಒಳ್ಳೆಯದು.

- Kamalakar ರವರ ಬ್ಲಾಗ್
- Login or register to post comments
- 1009 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಜಿಟಿಎನ್ ಮತ್ತು ವಿಜ್ಞಾನ ಬರೆಹ
ತಾವು ಗುರುತಿಸಿರುವಂತೆ ಭಾಷೆ ಎಂದರೆ ಸಾಹಿತ್ಯ. ಅದರಲ್ಲೂ ಕಥೆ, ಕವನ, ಕಾದಂಬರಿ ಮತ್ತು ಅವುಗಳ ವಿಮರ್ಶೆ ಮಾತ್ರ ಸಾಹಿತ್ಯ ಎಂಬ ಸ್ಥಿತಿ ನಮ್ಮದು. ಜಿ.ಟಿ. ನಾರಾಯಣರಾವ್ ಅವರ ನೋಡೋಣ ಬಾ ನಕ್ಷತ್ರ ಪುಸ್ತಕ ನನಗೆ ಹಾಗೆಯೆ ನನ್ನ ಓರಗೆಯ ಅನೇಕರಲ್ಲಿ ಖಗೋಳವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿದೆ. ಅವರ ಐನ್ ಸ್ಟೀನ್ ಜೀವನ ಚರಿತ್ರೆಯನ್ನು ನಾನು ಕನ್ನಡವನ್ನು ಸರಾಗವಾಗಿ ಓದಲಾಗದ ನನ್ನ ತಂದೆಗೆ ಓದಿ ಹೇಳಿದ್ದೆ. ಹೀಗೆ ಓದಿ ಹೇಳಿದ ದಿನಗಳಲ್ಲಿ ನಾನಿನ್ನೂ ಹೈಸ್ಕೂಲ್ ಸೇರಿದ್ದನಷ್ಟೆ. ಅದರಲ್ಲಿದ್ದ ಅನೇಕ ವಿಷಯಗಳು ನನಗೆ ಅರ್ಥವಾಗಿರಲಿಲ್ಲ. ಮುಂದೆ ನನಗಾಗಿಯೇ ಈ ಪುಸ್ತಕವನ್ನು ಓದಿಕೊಳ್ಳಲು ತೀರ್ಮಾನಿಸಿದಾಗ ಅದರ ಹೊಸ ಆವೃತ್ತಿ ಹೊರಬಂದಿತ್ತು. ಅದು ಮತ್ತಷ್ಟು ವಿಸ್ತೃತವಾಗಿತ್ತು. ಮಾತ್ರವಲ್ಲ ಇಂಗ್ಲಿಷ್ ನಲ್ಲಿ ಪ್ರಕಟವಾಗಿರುವ ಐನ್ ಸ್ಟೀನ್ ಪುಸ್ತಕಗಳಿಗೆ ಸಮಾನವಾದ ಗುಣಮಟ್ಟವನ್ನೂ ಹೊಂದಿತ್ತು. ನಾರಾಯಣರಾಯರ ಕೃತಿಗಳಲ್ಲಿ ನಾನು ಬಹಳ ಮುಖ್ಯ ಎಂದು ಭಾವಿಸುವುದು ಅವರ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಜೀವನ ಚರಿತ್ರೆ. ಕನ್ನಡದಲ್ಲಿಯೇ ರಚಿತವಾದ ವಿಜ್ಞಾನಿಯೊಬ್ಬರ ಮೊದಲ ಜೀವನ ಚರಿತ್ರೆ ಇದು ಎಂದು ನನ್ನ ಭಾವನೆ. ಇದಕ್ಕಾಗಿ ನಾರಾಯಣರಾಯರು ಅಮೆರಿಕ ಪ್ರವಾಸ ಮಾಡಿ ಚಂದ್ರ ಅವರನ್ನು ಭೇಟಿಯಾಗಿದ್ದಾರೆ. ಸಪ್ತಸಾಗರದಾಚೆಯೆಲ್ಲೋ ಕೃತಿಯಲ್ಲಿ ಈ ಕುರಿತ ವಿವರಗಳಿವೆ.
ನಾರಾಯಣರಾಯರ ಶೈಲಿಯ ಕುರಿತ ಹಲವು ಆಕ್ಷೇಪಗಳಿವೆ. ಸಂಸ್ಕೃತ ಭೂಯಿಷ್ಟ ಭಾಷೆ ಎಂಬುದು ಮುಖ್ಯ ಆಕ್ಷೇಪ. ಇದು ಕೆಲಮಟ್ಟಿಗೆ ನಿಜ ಎಂದು ಮೇಲ್ನೋಟಕ್ಕೆ ಭಾಸವಾದರೂ ನಾರಾಯಣರಾಯರ ಬರೆಹದ ಪ್ರೇರಣೆಗಳನ್ನು ನೊಡಿದರೆ ನಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕಾಗುತ್ತದೆ. ನಾರಾಯಣರಾಯರ ವಿಜ್ಞಾನ ವಿಷಯಗಳನ್ನು ಬರೆಯುವಾಗ ಬರೆಹ ನಿಖರವಾಗಿರಬೇಕು ಎಂದು ಭಾವಿಸುತ್ತಾರೆ. ಅವರ ನಿಖರತೆಯ ಹುಡುಕಾಟ ಸಂಸ್ಕೃತಭೂಯಿಷ್ಟವಾದ ಒಂದು ಭಾಷೆಯಲ್ಲಿ ಕೊನೊಗೊಳ್ಳುತ್ತದೆ. ಈ ನಿಖರತೆ ಇಲ್ಲದೆ ಹೋದರೆ ಅದು ವಿಜ್ಞಾನ ಬರೆಹವೇ ಆಗುವುದಿಲ್ಲ.
ನಾರಾಯಣರಾಯರು ಈಗಲೂ ಹಳೆಯ ಉತ್ಸಾಹದಿಂದಲೆ ಕಾರ್ಯನಿರತರಾಗಿದ್ದಾರೆ. ತಮ್ಮ ಹಳೆಯ ಪುಸ್ತಕಗಳ ಪರಿಷ್ಕೃತ ಆವೃತ್ತಿಗಳನ್ನು ತರುವುದರ ಜತೆಗೆ ಹೊಸ ಪುಸ್ತಕಗಳ ರೂಪುರೇಷೆಗಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಅಂದರ ಹಾಗೆ ನಾರಾಯಣರಾಯರು ಸಂಗೀತದ ಬಗ್ಗೆಯೂ ಬಹಳ ಚೆನ್ನಾಗಿ ಬರೆಯಬಲ್ಲರು. ಅವರ ಶ್ರುತಗಾನ ಎಲ್ಲಾದರೂ ಸಿಕ್ಕರೆ ಓದಿ ನೋಡಿ.
ಇಸ್ಮಾಯಿಲ್