19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

'ಶಿಲೆಯೊಳಗಣ ಪಾವಕನಂತೆ'

August 21, 2006 - 5:19pm
Kamalakar

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ

ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: "ಭಕ್ತ ಶಿಲೆಯಾದರೆ ಭಗವಂತ ಪಾವಕ, ಭಕ್ತ ಉದಕವಾದರೆ ದೇವರು ಅಲ್ಲಿ ಹುಟ್ಟುವ ಪ್ರತಿಬಿಂಬ... ಮುಂದಿನ ಸಾಲು ಭಗವಂತನನ್ನು 'ಬೀಜದೊಳಗಣ ವೃಕ್ಷ'ವೆಂದು ಗುರುತಿಸುತ್ತದೆ." ಇತ್ಯಾದಿ. ಇದು ಅವರ "ಅಂತರಂಗದ ಆಕಾಶ" ಎನ್ನುವ ಪುಸ್ತಕದಲ್ಲಿ ಬರುವ ಮಾತುಗಳು. ಈ ಪುಸ್ತಕ ತಾತ್ವಿಕತೆ ಹಾಗೂ ಕಾವ್ಯದ ಕುರಿತ ಸಂಬಂಧದ ಅಧ್ಯಯನವಾಗಿದ್ದು, ಕನ್ನಡ ವಿಮರ್ಶಾ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ.
ಈ ವಚನವನ್ನು ಓದುತ್ತ ನನಗೆ ಒಂದು ಸಂದೇಹ. ಅಲ್ಲಮನ ತಾತ್ವಿಕ ವಿಚಾರಗಳ ಅರಿವಿಲ್ಲದ ನಾನು ಇದನ್ನು ಒಂದು ಕವನವಾಗಿ ಓದುತ್ತೇನೆ. ವಚನದ ಕೊನೆಯ ಸಾಲಿನ ಬಂಧ ನೋಡಿದರೆ, ಒಟ್ಟೂ ವಚನದಲ್ಲಿ ಬರುವ ಮೊದಲ ಶಬ್ದಗಳು, ಅಂದರೆ, ಶಿಲೆ, ಉದಕ, ಬೀಜ, ಶಬ್ದ, "ನಿಮ್ಮಶರಣ ಸಂಬಂಧ" ದ 'ನಿಮ್ಮ' ಜತೆ ಸೇರುತ್ತವೆ ಹಾಗೂ ಪಾವಕ, ಪ್ರತಿಬಿಂಬ, ವೃಕ್ಷ, ನಿಶ್ಶಬ್ದ, ಇವು 'ಶರಣ' ಜತೆ ಸೇರುವುದೆಂದು ಅನಿಸುತ್ತದೆ. ಅಂದರೆ ಶರಣ ಈ ವಚನದಲ್ಲಿ ಕೊಡ್ಲೆಕೆರೆಯವರು ಅನ್ನುವಂತೆ ಶಿಲೆಯಾಗಿ ಬಾರದೆ ಅದರೊಳಗಣ ಪಾವಕನಾಗಿ, ಹಾಗೂ ಗುಹೇಶ್ವರ ಶಿಲೆಯಾಗಿ ಬರುತ್ತಾರೆ. ಅಂತೆಯೇ ಉಳಿದ ಸಾಲುಗಳಲ್ಲಿ ಕೂಡ. ಹೀಗೆ ನೋಡಿದಾಗ ಪ್ರಾಥಮಿಕತೆ ಬರೀ ತೋರಿಕೆಗಷ್ಟೇ ಅಲ್ಲದೇ ಅರ್ಥದಲ್ಲಿಯೂ ಗುಹೇಶ್ವರನಿಗೆ ಸಲ್ಲುತ್ತದೆ. ಅಂದರೆ, ಶಿಲೆ ಗುಹೇಶ್ವರನಾದರೆ, ಅದರೊಳಗಿರಬಹುದಾದ ಅಂಶಗಳಲ್ಲಿ ಶರಣನೂ ಒಂದು. ಉದಕ ಗುಹೇಶ್ವರನಾದರೆ ಆತನೇ ಇಡೀ ವಿಶ್ವವನ್ನು ಒಳಗೊಂಡಂತೇ ಪ್ರತಿಬಿಂಬಿಸುವನು; ಬೀಜ ಗುಹೇಶ್ವರನಾದರೆ ಶರಣನೆಂಬ ವೃಕ್ಷದ ಹುಟ್ಟಿನ ಮೂಲವೇ ಅವನಾಗುತ್ತಾನೆ. ಶಬ್ದ ಗುಹೇಶ್ವರನಾದರೆ ಅರ್ಥವಂತಿಕೆಯ ಅಂಶವಾದ ನಿಶ್ಶಬ್ದ ಶರಣನಾಗಿರುತ್ತಾನೆ. ಹಾಗೂ ಈ ಸಮೀಕರಣದಲ್ಲಿ ಮೊದಲು ಬರುವ ಅಂಶಗಳು ಹೆಚ್ಚಿನ ವ್ಯಾಪ್ತತೆ ಪಡೆದಿದ್ದು ದೈವಶಕ್ತಿಯ ವಿಶಾಲತೆ ಪಡೆಯುತ್ತವೆ. ನಂತರ ಬರುವ ಅಂಶಗಳು ಒಂದು ಘಟಕವಷ್ಟೇ ಆಗಿ ಮೊದಲಿನ ಘಟಕದಲ್ಲಿಯೇ ಲೀನವಾಗುವ ಅಂಶವಾಗುತ್ತವೆ.
ಈ ವಚನದ ರಚನಾ ಬಂಧ ನೋಡಿದರೆ ಕೂಡ ಹೀಗೆ ಓದುವುದು ಸಾಧ್ಯವೆನಿಸುತ್ತದೆ. ಏಕೆಂದರೆ 'ಒಳಗಣ' ಎಂಬ ಪದವು ಮೊದಲು ಬರುವ ಪದಗಳ ಜತೆ ಇದೆ. ಅಂದರೆ 'ಒಳಗೊಳ್ಳುವ' ವ್ಯಾಪ್ತಿ ಆ ಪದಗಳು ಸೂಚಿಸುವ ವಸ್ತುಗಳೊಂದಿಗೆ ಇವೆ. ಶಿಲೆಗೆ ಒಳಗೊಳ್ಳುವ ವ್ಯಾಪ್ತಿಯಿದೆ, ಉದಕಕ್ಕೆ ಪ್ರತಿಬಿಂಬವನ್ನು ಒಳಗೊಳ್ಳುವ ವ್ಯಾಪ್ತಿ ಇದೆ...ಇತ್ಯಾದಿ. ಹೀಗೆ ಒಳಗೊಳ್ಳುವ ವ್ಯಾಪ್ತಿ ಇರುವುದೇ ಗುಹೇಶ್ವರನ ಪ್ರಾಥಮಿಕತೆಯನ್ನು ಸೂಚಿಸುವುದರಿಂದ ಶರಣ ಆತನಲ್ಲಿ ಒಳಗೊಳ್ಳುವದನ್ನು ಬಯಸುತ್ತಾನೆ. 
ಇನ್ನೊಮ್ಮೆ ಓದಿದರೆ ಅನಿಸುತ್ತದೆ: 'ಶಿಲೆಯೊಳಗಣ ಪಾವಕದಂತೆ' ಇರುವುದು ಏನೆಂದು ಅಲ್ಲಮಪ್ರಭು ಹೇಳುತ್ತಿದ್ದಾನೆ? 'ನಿಮ್ಮ ಶರಣ ಸಂಬಂಧ' ಎಂದು. ಅಂದರೆ, ಇಲ್ಲಿ ಶಿಲೆ ಪಾವಕಗಳು ಅಮುಖ್ಯ ಹಾಗೂ 'ಒಳಗಣ' ಮುಖ್ಯ. ಅಂದರೆ, ಶಿಲೆ ಗುಹೇಶ್ವರನೆಂದಾಗಲೀ, ಪಾವಕ ಶರಣನೆಂದಾಗಲೀ ನೋಡುವ ಬದಲು ಇವೆರಡರ ನಡುವಿನ ಸಂಬಂಧವಷ್ಟೇ ಉಪಮೆಯಾಗಿ ಬರುತ್ತದೆ. ಶಿಲೆ ಹಾಗೂ ಪಾವಕ ಆ ಉಪಮೆಯನ್ನು ಸಾಧ್ಯಗೊಳಿಸುವ ಘಟಕಗಳು ಮಾತ್ರ. ಅಂದರೆ, ಗುಹೇಶ್ವರ ಹಾಗೂ ಶರಣರ ಸಂಬಂಧಕ್ಕೂ, ಶಿಲೆಯೊಳಗೆ ಕಾಣದೆಯೂ ಹೂತಿರುವ ಪಾವಕಕ್ಕೂ ಸಂಬಂಧ ಬರುವುದು ಒಳಗೊಳ್ಳುವ ಅರ್ಥವನ್ನು ಗಮನಿಸಿದಾಗ ಮಾತ್ರ. ಹಾಗಾಗಿ, ಶಿಲೆಯೊಳಗೆ ಸದಾಸಾಧ್ಯವಿರುವ ಪಾವಕ, ನೀರಿನಲ್ಲಿ ಸದಾಸಾಧ್ಯವಿರುವ ಬಿಂಬ, ಬೀಜದಲ್ಲಿ ಸದಾಸಾಧ್ಯವಿರುವ ವೃಕ್ಷ, ಶಬ್ದದಲ್ಲಿ ಸದಾಸಾಧ್ಯವಿರುವ ನಿಶ್ಶಬ್ದದಂತೇ, ಶರಣರು ಗುಹೇಶ್ವರನೊಳಗೇ ಇರುವ ಅಂಶವಾಗಿ ಸಾಬೀತಾಗುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by benaka on
ಕಮಲಾಕರರೇ, ನಿಮ್ಮ ಲೇಖನ ಚೆನ್ನಾಗಿದೆ; ಹೀಗೆಯೇ ಬರೆಯುತ್ತಿರಿ. ಈ ವಚನಕ್ಕೆ ಸಂಬಂಧಿಸಿದಂತೆ ನನ್ನೆರಡು ಮಾತು: ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ ಗುಹೇಶ್ವರ, ನಿಮ್ಮ ಶರಣ ಸಂಬಂಧ ಇಲ್ಲಿನ ಉಪಮೆಗಳು ಎಷ್ಟು ಚೆನ್ನಾಗಿವೆಯೆಂದರೆ, ಅಧ್ಯಾತ್ಮದ ಸಾರವನ್ನೆಲ್ಲ ನಾಲ್ಕೇ ಸಾಲುಗಳಲ್ಲಿ ಹಿಡಿದಿಟ್ಟಿವೆ! ೧. ಶಿಲೆಯೊಳಗಣ ಪಾವಕನಂತೆ = ಕಲ್ಲಿನೊಳಗಿನ ಬೆಂಕಿಯಂತೆ ಚಕಮಕಿ ಕಲ್ಲುಗಳು ಉಜ್ಜಿಕೊಂಡಾಗ ಬೆಂಕಿಯ ಕಿಡಿ ಕಾಣುತ್ತದೆ; ಅಲ್ಲಿಯವರೆಗೂ ಅದು ಎಲ್ಲಿತ್ತೋ ಯಾರೂ ತಿಳಿಯರು! ಹಾಗೆಯೇ ಪರಮಾತ್ಮನಿಂದ ಜೀವಿಗಳ ಹುಟ್ಟೂ ಕೂಡ! ೨. ಉದಕದೊಳಗಣ ಪ್ರತಿಬಿಂಬದಂತೆ = ನೀರಿನೊಳಗಿನ ತನ್ನದೇ ಆಕಾರದಂತೆ ನೀರಿಗೆ ಆಕಾರವಿಲ್ಲ; ಯಾವ ಪಾತ್ರೆಗೊಳಗೆ ಇರುವುದೋ, ಅದೇ ಅದರ ಆಕಾರ! ಅಂತೆಯೇ ಪರಮಾತ್ಮನ ರೂಪ ಕೂಡ; ಯಾವ ವಸ್ತು-ಜೀವಿಯೊಳಗಿರುವನೋ ಅದೇ ಅವನ ರೂಪ! ನೀರು ಪಾರದರ್ಶಕ; ಆದರೆ ಯಾವ ವಸ್ತು ಅದರಲ್ಲಿ ಇಣುಕುವುದೋ, ಅದೇ 'ತೆಳ್ಳನೆ' ಪ್ರತಿಫಲಿಸುತ್ತದೆ! ಅಂತೆಯೇ ಪರಮಾತ್ಮನೂ ತನ್ನಲ್ಲಿಣುಕುವ ಜೀವಾತ್ಮನನ್ನೇ ಪ್ರತಿಫಲಿಸುತ್ತಾನೆ! ೩. ಬೀಜದೊಳಗಣ ವೃಕ್ಷದಂತೆ = ಕಾರಣದೊಳಗೆ ಪ್ರತಿಫಲದಂತೆ ಇದು ನ್ಯಾಯಶಾಸ್ತ್ರದ ಪ್ರಸಿದ್ಧ ಉದಾಹರಣೆ: ಬೀಜವೃಕ್ಷನ್ಯಾಯ! ಬೀಜವೇ ಮೊದಲೋ, ಮರವೇ ಮೊದಲೋ? ಅಥವಾ ಬೀಜಕ್ಕಾಗಿ ಮರವೋ, ಮರವಾಗಲೋಸುಗವೇ ಬೀಜವೋ?! ಇದು ತಿಳಿಯಲಾಗದ ಕಗ್ಗಂಟು; ಅಂತೆಯೇ ಪರಮಾತ್ಮ-ಜೀವಾತ್ಮರು! ಯಾರು ಯಾರಿಗಾಗಿ? ಯಾರಿಂದ ಯಾರು? ಬಲ್ಲವರಾರು! ೪.ಶಬ್ದದೊಳಗಣ ನಿಶ್ಶಬ್ದದಂತೆ = ಇದ್ದರೂ ಇಲ್ಲದಂತೆ ಶಬ್ದ ಕೇವಲ ಕ್ಷಣಿಕ! ಶಬ್ದದ ಕೊನೆಯಲ್ಲೇ ನಿಶ್ಶಬ್ದ! ನಿಶ್ಶಬ್ದದ ಕೊನೆಯೇ ಶಬ್ದ! ಇದು ಇವೆರಡರ ಪರಸ್ಪರ ಇರುವಿಕೆ-ಇಲ್ಲದಿರುವಿಕೆಯ ಸಂಕೇತ; ಅಂತೆಯೇ ಪರಮಾತ್ಮ-ಜೀವಾತ್ಮರು! ಶಬ್ದ ಆಕಾಶತತ್ವದ ಸಂಕೇತ. ನಿಶ್ಶಬ್ದವೆಂದರೆ? ಆಕಾಶವೇ ಇಲ್ಲದಿರುವಿಕೆ! ಊಹಾತೀತ ಭಾವಗಳ ಚಕ್ರವೇ ತಾನಾಗಿರುವ ಈ ಅವಿನಾಭಾವ ಸಂಬಂಧ! ಎಂಥಹ ಉಪಮೆ! ಮತ್ತೂ ಸೂಕ್ಷ್ಮವಾಗಿ ನೋಡಿದರೆ, ನಾಲ್ಕು ಸಾಲುಗಳೂ ಜೀವನದ ನಾಲ್ಕು ಹಂತಗಳನ್ನು ತೋರಿಸುತ್ತವೆ: ಹುಟ್ಟು(ಕಲ್ಲಿನಿಂದ ಬೆಂಕಿ) - ಅರಿವು(ತನ್ನದೇ ಬಿಂಬ) - [ವಂಶದ]ಬೆಳವಣಿಗೆ(ಬೀಜ-ವೃಕ್ಷ) - ಸಾವು(ನಿಶ್ಶಬ್ದ) ಎಂಥ ಅದ್ಭುತ ವಚನ ಅಲ್ಲವೇ! ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Kamalakar on

'ನಾಲ್ಕು ಸಾಲುಗಳೂ ಜೀವನದ ನಾಲ್ಕು ಹಂತಗಳನ್ನು ತೋರಿಸುತ್ತವೆ'.
ಈ ಹೊಳಹಿಗಾಗಿ ಧನ್ಯವಾದ, ನಾನು ಹಾಗೆ ನೋಡಿರಲಿಲ್ಲ. ಉಪಮೆಗಳಲ್ಲಿ ಅಲ್ಲಮ ಮಹಾ ಉಸ್ತಾದ್.

ನಿಮ್ಮವ
ಕಮಲಾಕರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.