ನಾಯಿಯನ್ನು ಹಿಂಬಾಲಿಸಿದ ಕತೆ
ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರತಿ ಸೆಮಿಸ್ಟರಿನಲ್ಲಿ ಒಮ್ಮೆ ಒಂದು ಪ್ರವಾಸ ಹೋಗುವುದು ವಾಡಿಕೆಯಾಗಿತ್ತು. ಆದರೆ ೨-೩ ದಿನ ಪ್ರವಾಸ ಹೋದರೆ ಪ್ರಯಾಣ, ಆಹಾರ, ಉಳಿದುಕೊಳ್ಳಲು ಆಗುವ ಖರ್ಚೆಷ್ಟು! ಆಗಲೇ ಹೊಳೆದದ್ದು ಟ್ರೆಕಿಂಗ್ ಜಾಗಗಳನ್ನು ನೋಡುವ ಒಂದು ಅಗ್ಗವಾದ ವಿಧಾನ ಎಂದು. 7ನೇ ಸೆಮಿಸ್ಟರ್ ನಲ್ಲಿರಬೇಕಾದರೆ (೨೦೦೫ ಸೆಪ್ಟೆಂಬರ್) ನಾವು ಹೊರಟಿದ್ದು ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ ನೋಡಲು.
ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ೧೦ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನ ಗಿರಿ ಬಟ್ಟದ ಕೆಳಗಿನವರೆಗೆ (ಊರಿನ ಹೆಸರು ನೆನಪಿಲ್ಲ. ಕೈಕಂಭ ಎಂತಲೋ ಏನೋ ಇತ್ತು) ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೮ ಕಿ.ಮೀ. ನಡೆದು ಮುಳ್ಳಯ್ಯನ ಗಿರಿಗೆ ಹೋದೆವು. ದಾರಿಯಲ್ಲಿ ಒಂದೇ ಸಮನೆ ಮಳೆ, ಮಂಜು. ೫ ಅಡಿಗಿಂತ ಮುಂದೆ ಏನೂ ಕಾಣುತ್ತಿರಲಿಲ್ಲ. ಜೊತೆಗೆ ಜೋರಾಗಿ ಗಾಳಿ ಬೇರೆ. ಹಾಗೂ ಹೀಗೂ ಮುಳ್ಳಯ್ಯನ ಗಿರಿ ತಲುಪಿದೆವು. ಮುಳ್ಳಯ್ಯನ ಗಿರಿಯಲ್ಲಿ ಒಂದು ಸುಂದರ ದೇವಾಲಯ ಇದೆ. ದೇವರ ದರ್ಶನ ಮಾಡಿ ಅರ್ಚಕರ ಮನೆಯಲ್ಲೇ ಕಾಫಿ ಕುಡಿದೆವು. ತೆಗೆದುಕೊಂಡು ಹೋಗಿದ್ದ ಬ್ರೆಡ್ ತಿಂದು ಜೊತೆಗೇ ಮನೆಯ ಬಳಿ ಇದ್ದ ನಾಯಿಗೆ ಸ್ವಲ್ಪ ಬ್ರೆಡ್ ಹಾಕಿದೆವು. ನಾಯಿ ಬಹಳ ಖುಶಿಯಾಗಿ ಬಾಲ ಆಡಿಸುತ್ತಾ ಹಾಕಿದ್ದ ಬ್ರೆಡ್ಡನ್ನು ತಿಂದಿತು.
ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಾವು ಬಾಬಾ ಬುಡನ್ ಗಿರಿಯ ಕಡೆ ಹೊರಟೆವು. ಅರ್ಚಕರು ದೇವಸ್ಥಾನದ ಎಡಬದಿಯಲ್ಲಿ ಬಾಬಾ ಬುಡನ್ ಗಿರಿಗೆ ಕಾಲುದಾರಿ ಇದೆ. ಅದರಲ್ಲೇ ಹೋಗಿ ಎಂದರು. ಸರಿ ಎಂದು ಹೊರಟರೆ, ಮನೆಯ ಬಳಿಯಿದ್ದ ನಾಯಿ ನಮ್ಮ ಹಿಂದೆಯೇ ಬರತೊಡಗಿತು. ಮುಂದೆ ಹೋದರೆ ಸರಿಯಾದ ದಾರಿಯೇ ಇಲ್ಲ. ಹಿಂದೊಮ್ಮೆ ಕಾಲುದಾರಿ ಇದ್ದ ಕುರುಹು ಇತ್ತಷ್ಟೇ. ಆಮೇಲೆ ತಿಳಿದದ್ದು ಆ ದಾರಿಯಲ್ಲಿ ಯಾರೂ ಓಡಾಡುವುದೇ ಇಲ್ಲ, ಹಾಗಾಗಿ ದಾರಿಯಲ್ಲಿ ಹುಲ್ಲು ಬೆಳೆದು ದಾರಿ ಮುಚ್ಚಿಹೋಗಿದೆ ಎಂದು.
ದಾರಿಯಲ್ಲಿ ವಿಪರೀತ ಮಂಜು. ಮೋಡಗಳ ಒಳಗೇ ಸಾಗುತ್ತಿದ್ದೆವು ಅನಿಸುತ್ತೆ. ಮುಂದಿನ ಬೆಟ್ಟಗಳೂ ಕಾಣುತ್ತಿಲ್ಲ. ಹಿಂದೆ ಮುಳ್ಳಯ್ಯನ ಗಿರಿಯೂ ಕಾಣುತ್ತಿಲ್ಲ. ಇಷ್ಟೆಲ್ಲದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಅಲ್ಪ ಸ್ವಲ್ಪ ಕಾಣುತ್ತಿದ್ದ ದಾರಿ ಕವಲೊಡೆಯಿತು. ಎಡಗಡೆ ಒಂದು ದಾರಿ, ಬಲಗಡೆ ಒಂದು ದಾರಿ. ಆಗ ನನ್ನ ಸ್ನೇಹಿತ ಎನೋ ಕಂಡುಹಿಡಿದಂತೆ ಹೇಳಿದ "ಮಗಾ, ನಾವು ಕಳೆದುಹೋಗಿದೀವಿ". ಯಾವ ಕಡೆ ಹೋಗುವುದೆಂದು ತೋಚದೆ ಕೊನೆಗೆ ಬಲಗಡೆ ದಾರಿಯಲ್ಲಿ ಹೊರಟೆವು. ಆದರೆ ಅಷ್ಟು ಹೊತ್ತು ನಮ್ಮ ಜೊತೆ ಬರುತ್ತಿದ್ದ ನಾಯಿ ಅಲ್ಲೇ ನಿಂತುಬಿಟ್ಟಿತು. ನಾಯಿಯನ್ನು ಅಲ್ಲೇ ಬಿಟ್ಟು ಅಗಾಧ ಮಂಜಿನಲ್ಲಿ ಸ್ವಲ್ಪ ಮುಂದೆ ಹೋಗಿ ನೋಡಿದರೆ, ದೊಡ್ಡ ಪ್ರಪಾತ. ಇನ್ನೊಂದು ಹೆಜ್ಜೆ ಕಾಲಿಟ್ಟಿದ್ದರೆ, ಡೈರೆಕ್ಟಾಗಿ ಭಗವಂತನ ಪಾದ.
ಈಗ ಏನು ಮಾಡುವುದು? ಬಂದ ದಾರಿಯಲ್ಲೇ ಹಿಂದೆ ಹೋಗೋಣವೇ? ಇನ್ನೊಂದು ದಾರಿಯಲ್ಲಿ ಮುಂದೆ ಹೋದರೆ ಮತ್ತೆಲ್ಲೋ ಕಳೆದು ಹೋದರೆ? ಎಂದು ಯೋಚಿಸುತ್ತಾ ಹಿಂದೆ ಬಂದರೆ ಅಲ್ಲೇ ಇದ್ದ ನಾಯಿ ಎಡಗಡೆ ದಾರಿಯಲ್ಲಿ ಸ್ವಲ್ಪ ಮುಂದೆ ಹೋಗಿ ನಿಂತುಕೊಂಡಿತು. ಅದು ನಿಂತುಕೊಂಡ ಭಂಗಿ "ನನಗೆ ದಾರಿ ಗೊತ್ತಿದೆ. Follow me" ಎಂಬಂತಿತ್ತು. ಸರಿ ಆ ದಾರಿಯಲ್ಲೂ ಸ್ವಲ್ಪ ಮುಂದೆ ಹೋಗಿ ನೋಡೇಬಿಡೋಣ ಎಂದು ಹೊರಟರೆ ನಾವು ಮುಂದೆ ಹೋದಂತೆಲ್ಲಾ ನಮ್ಮ ನಾಯಿ ನಮಗಿಂತ ಸ್ವಲ್ಪ ಮುಂದೆ ಹೋಗಿ ನಿಲ್ಲುತ್ತಿತ್ತು. ಆಗ ನಾವು ನಿರ್ಧರಿಸಿಬಿಟ್ಟೆವು. ನಾಯಿಗೆ ದಾರಿ ಸರಿಯಾಗಿ ಗೊತ್ತಿದೆ. ನಾವು ಅದನ್ನು ಹಿಂಬಾಲಿಸಬೇಕಷ್ಟೇ ಎಂದು. ನಂತರ ಒಂದೂವರೆ ಗಂಟೆ ಎಲ್ಲೂ ನಿಲ್ಲದೆ ನಾಯಿಯ ಹಿಂದೆ ಓಡಿದೆವು. ನಾವು ಸ್ವಲ್ಪ ನಿಧಾನ ಮಾಡಿದರೆ, ನಾಯಿ ಮುಂದೆ ಹೋಗಿ ಎತ್ತರದ ಸ್ಥಳದಲ್ಲಿ ನಿಂತು ಕಾಯುತ್ತಿತ್ತು. ಇನ್ನೂ ನಿಧಾನ ಮಾಡಿದರೆ ಹಿಂದೆ ಬಂದು ಬೊಗಳುತ್ತಿತ್ತು. ಹೀಗೇ ತುಂಬಾ ಹೊತ್ತು ಓಡಿ ಓಡಿ ಸುಸ್ತಾಗಿ ಏದುಸಿರು ಬಿಡುತ್ತಾ ನಿಂತಿದ್ದಾಗ ದೂರದಲ್ಲೆಲ್ಲೋ ವಾಹನದ ಹಾರ್ನ್ ಶಬ್ದ ಕೇಳಿಸಿತು. ಆಮೇಲೆ ಮತ್ತೆ ಹತ್ತು ನಿಮಿಷ ನಾಯಿಯ ಹಿಂದೆ ಓಡಿದ ಮೇಲೆ ಕಾಣಿಸಿದ ದೃಶ್ಯ ನೋಡಿ ಎಲ್ಲರಿಗೂ ಖುಷಿಯೋ ಖುಷಿ. ನಮ್ಮ ಮುಂದೆ ಇದ್ದದ್ದು ಬಾಬಾ ಬುಡನ್ ಗಿರಿ - ೬ ಕಿ. ಮೀ. ಎಂಬ ಫಲಕ ಮತ್ತು ಡಾಂಬರು ರಸ್ತೆ.
ನಾಯಿಯಂತೂ "ನನ್ನ ಕೆಲಸ ಮುಗೀತು ನೀವೇನಾದ್ರೂ ಮಾಡ್ಕೊಳಿ" ಅಂತ ಅಲ್ಲೇ ಮಲಗಿಬಿಟ್ಟಿತು. ಅದರ ಬೆನ್ನು ಸವರಿ ಅದಕ್ಕೆ ಸ್ವಲ್ಪ ಬ್ರೆಡ್ ಹಾಕಿ, ನಾವೂ ಸ್ವಲ್ಪ ಹೊತ್ತು ವಿರಮಿಸಿದೆವು. ಆಮೇಲೆ ಬಾಬಾ ಬುಡನ್ ಗಿರಿ ಹೋಗುವುದೇನೂ ಕಷ್ಟ ಆಗಲಿಲ್ಲ. ನಾಯಿಯೂ ನಮ್ಮ ಜೊತೆಗೇ ಬಂದು ನಾವು ಬಾಬಾ ಬುಡನ್ ಗಿರಿಯಲ್ಲಿದ್ದಷ್ಟು ಹೊತ್ತು ನಮ್ಮ ಬಳಿಯೇ ಇತ್ತು. ರಾತ್ರಿ ಬಾಬಾ ಬುಡನ್ ಗಿರಿಯಲ್ಲಿದ್ದು ಮುಂದೆ ಹತ್ತಿರದ ಜಲಪಾತ ನೋಡಿ, ಬಾಬಾ ಪೀಠ, ದತ್ತ ಪೀಠ ಎಲ್ಲ ನೋಡಿ ವಾಪಸ್ ಬೆಂಗಳೂರಿಗೆ ಬಸ್ ನಲ್ಲಿ ಹೊರಟಾಗ ಎಲ್ಲರ ಕಣ್ಣಲ್ಲೂ ನೀರು. ನಮ್ಮ ಬಸ್ಸು ಕಣ್ಮರೆಯಾಗುವವರೆಗೂ ನಾಯಿ ಬಸ್ಸಿನತ್ತಲೇ ನೋಡುತ್ತಿತ್ತು.
ಮನೆಗೆ ಬಂದು ಅಮ್ಮನಿಗೆ ನಡೆದ ಕಥೆಯನ್ನು ಹೇಳಿದರೆ "ದತ್ತಾತ್ರೇಯನೇ ನಾಯಿ ರೂಪದಲ್ಲಿ ಬಂದು ನಿಮ್ಮನ್ನು ಕಾಯ್ದಿರಬೇಕು" ಎಂದರು. ನಾನು "ಇರಬಹುದು" ಎಂದಷ್ಟೇ ಹೇಳಿ ಇನ್ನು ಸ್ವಲ್ಪ ಹೊತ್ತು ಅಲ್ಲಿದ್ದರೆ ನಮ್ಮಮ್ಮನಿಗೆ ನಾವು ಪಟ್ಟ ಪಾಡು ನೆನಪಿಗೆ ಬಂದು ಬೈಸಿಕೊಳ್ಳಬೇಕಾಗುತ್ತದೆ ಎಂದು ಅಲ್ಲಿಂದ ಮಾಯವಾದೆ.
- keerthi2kiran's blog
- Login or register to post comments
- 952 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಮುಳ್ಳಯ್ಯನಗಿರಿ ನನ್ನ ನೆಚ್ಚಿನ ತಾಣಗಳಲ್ಲಿ ಒಂದು. ನನ್ನ ಪ್ರೊಫ಼್ಯೆಲ್ ಫೋಟೋ ಅಲ್ಲಿನದೆ. ನಿಮ್ಮ ನಾಯಿಯ ವಿಚಾರ ಕೇಳಿ ಅಶ್ಚರ್ಯವಾಯಿತು. ದೇವರೇ ನಿಮಗೆ ದಾರಿ ತೋರಿಸಿರಬೇಕು.
- ನಂದನ್
ನಮ್ಮ ತಾಣ - http://www.satyakagy...
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಪ್ರವಾಸ ಕಥೆ ರೋಚಕವಾಗಿದೆ! ಆ ನಾಯಿ ಆಪತ್ಬಾಂಧವನಂತೆ ಬಂದಿದ್ದು ನಿಜಕ್ಕೂ ಆಶ್ಚರ್ಯ. ಹೀಗೆ ಬರೀತಾ ಇರಿ...
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಅಬ್ಬಾ... ಅಂತೂ ಇಂತೂ ಹಿಮಾಲಯದಿಂದ ಚಿಕ್ಕಮಗಳೂರಿಗೆ ಬಂತು ಸವಾರಿ... ಟ್ರೆಕ್ಕಿಂಗ್ ಬಿಟ್ಟು ಬೇರೆ ಏನು ಮಾಡಲ್ವಾ ತಾವು?
ಪ್ರವಾಸ ಕಥನಗಳು ಅಂತ ಸಂಪದದಲ್ಲಿ ಹೊಸ ಕಾಲಮ್ ಶುರು ಮಾಡ್ಬೇಕು ನಿಂಗೆ..
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ತು೦ಬಾ ಅದ್ಭುತವಾಗಿದೆ ನಿಮ್ಮ ಪ್ರವಾಸ ಕಥನ (travelogue). ನಿಜವಾಗಿಯೂ ಆ ನಾಯಿಯೇ ದೇವರ ರೂಪದಲ್ಲಿ ಬ೦ದು ನಿಮಗೆ ದಾರಿ ತೋರಿಸಿದೆ...
ಅನಿಲ್ ರಮೇಶ್.
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ನನ್ನ ತಮ್ಮ ಅಲ್ಲಿ ಹೋಗಿ ನನಗೆ ಫೋಟೋ ತೋರಿಸಿದ್ದ. ತುಂಬ ಚೆನ್ನಾಗಿದೆ ಆ ಪ್ರದೇಶ. ಅದಕ್ಕೆ ನನಗೂ ಅಲ್ಲಿ ಒಮ್ಮೆ ಹೋಗಬೇಕು ಅಂಬ ಅಸೆ. ವರುಷದ ಯಾವ ದಿನಗಳಲ್ಲಿ ಹೋದರೆ ಚೆನ್ನಾಗಿರುತ್ತೆ? ಬೇಸಿಗೆಯಲ್ಲಿ ಹೋದರೆ ಮಳೆ, ಮಂಜು ಇಲ್ಲದೆ ಸರಾಗವಾಗಿ ಟ್ರೆಕ್ಕಿಂಗ್ ಮಾಡಬಹುದು ಎನ್ನಿಸುತ್ತೆ.
ಇದೆ ರೀತಿ ಪ್ರಾಣಿಗಳನ್ನು ದಾರಿ ತೋರಲು ಬಳಸಿರುವ ಬಗ್ಗೆ ತೇಜಸ್ವಿಯವರ ಅನುವಾದಿತ ಕಾದಂಬರಿ 'ಪ್ಯಾಪಿಲಾನ್' ಯಲ್ಲಿ ಇದೆ. ಅದರಲ್ಲಿ ಹಂದಿಯನ್ನು ಬಳಸಿರುವ ಬಗ್ಗೆ ಸ್ವಲ್ಪ ನೆನಪುಂಟು.
-----
ಶಶಿಧರ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಸಖತ್ತಾಗಿದೆ ರೀ ನಿಮ್ಮ ಟ್ರೆಕ್ಕಿಂಗ್ ಪುರಾಣ..ನನಗೂ ಟ್ರೆಕ್ಕಿಂಗ್ ಅಂದ್ರೆ ಪಂಚಪ್ರಾಣ..ನಾನೂ ಕೂಡ ನಮ್ಮರಿನ ಬೆಟ್ಟಗಳಲ್ಲಿ ಟ್ರೆಕ್ಕಿಂಗ್ ಮಾಡಿದ್ದೀನಿ.
ಆದರೆ ನಮ್ಮ ಊರಿನ ಬೆಟ್ಟಗಳು ಪೂರ್ತಿ ಬೋಳು. ಹೇಳಿಕೇಳಿ ಬಯಲುಸೀಮೆ. ಬರೀ ಕಳ್ಳಿಗಿಡ, ಡಬಗೊಳ್ಳಿ ಗಿಡ..ಇಂತಹದೇ ಇರುತ್ತೆ. ನೀರಿ ನಿಡಿ ಬೆಎಕಂದ್ರ ಬಾಳ ತ್ರಾಸು ಪಡಬೇಕಾಗುತ್ತ. ಒಂತರ ಮರಭೂಮಿ ಅನುಭವ...;)
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಆ ತರ ಟ್ರೆಕಿಂಗ್ ಕೂಡ ಇದೆ ಗುರು. ಮರುಭೂಮಿನಲ್ಲೂ ಟ್ರೆಕಿಂಗ್ ಮಾಡ್ತಾರೆ. ಸಮುದ್ರದ ದಂಡೆನಲ್ಲೂ ಮಾಡ್ತಾರೆ. ನಾವೂ ಒಂದ್ ಸಲಿ ಹೊನ್ನಾವರದಿಂದ ಕುಮಟಾಗೆ ಸಮುದ್ರದ ದಡದಲ್ಲೇ ನಡಕೊಂಡು ಹೋಗಿದ್ವಿ. ಬಹಳ ತ್ರಾಸಾಗಿತ್ತು. ದಾರೀನಲ್ಲಿ ಉಸ್ಸಪ್ಪಾ ಅಂತ ಕೂತಿದ್ರೆ ತಲೆ ಮೇಲೆ ಹದ್ದುಗಳು ಹಾರ್ತಾ ಇದ್ವು. ಬೇಡ ಫಜೀತಿ. :)
ಕೀರ್ತಿ ಕಿರಣ್ ಎಂ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ವ್ಹಾಹ್! so sweet. ನಿಜಕ್ಕು ನಿಮ್ಮ ಅನುಭವ ಓದಿ ರೋಮಾಂಚನವಾಯ್ತು. ಅದು ಹ್ಯಾಗ್ರಿ ನಿಮಗೆ ಆ ನಾಯಿನ ಅಲ್ಲೆ ಬಿಟ್ಟು ಬರೋಕೆ ಮನಸಾಯ್ತು..? ಟ್ರೆಕ್ಕಿಂಗ್ ಕುರಿತು ಅಂದರೆ ಅದಕ್ಕೆ ಬೇಕಾಗುವ ಸಿದ್ಧತೆ, ವಾತಾವರಣ, ಅನುಭವಗಳ ಬಗ್ಗೆ ನಿಮ್ಮ ಬರಹಗಳ ನಿರೀಕ್ಷೆ ಇಟ್ಟುಕೊಳ್ಳಬಹುದೆ?
ಜಯಲಕ್ಷ್ಮೀ.ಪಾಟೀಲ್.
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ನೀವು ನಾಳೆ ಹೋದ್ರೆ ದಾರಿ ತೋರಿಸಕ್ಕೆ ಬೇಕಲ್ಲ... ;)
ಟ್ರೆಕಿಂಗ್ ಬಗ್ಗೆ ವಿಷಯ ಒಟ್ಟುಗೂಡಿಸಿ ಸಮಯ ಸಿಕ್ಕಾಗ ಬರೀತೀನಿ.
ಕೀರ್ತಿ ಕಿರಣ್ ಎಂ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಸತ್ತಾಟ ಚನ್ನಾಗಿ ನಡೆಯಲಿ...
ಚನ್ನಾಗಿದೆ..!
=====================================
ಮಾಯ್ಸ!
ಉ: ನಾಯಿಯನ್ನು ಹಿಂಬಾಲಿಸಿದ ಕತೆ
anna
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಅದ್ಭುತವಾಗಿದೆ ನಿಮ್ಮ ಪ್ರವಾಸ ಕಥನ..! ಬಹುಶಃ ಅದೇ ನಾಯಿಯನ್ನ ಮನೆಗೆ ಕರೆತಂದು ನಮ್ಮ ಬೆಂಗಳೊರಿನಲ್ಲಿ ಟೊರಿಂಗ್ ಗೈಡ್ ಮಾಡಬಹುದು ಅಲ್ವೆ ?
ಎಲ್ಲೊ ಓದಿದ ನೆನಪು, ಒಂದು ಕೋತಿ 200 ಕುರಿಗಳನ್ನ ತಾನೊಬ್ಬನೆ ಮೇಯಿಸುತ್ತದಂತೆ. ಪ್ರಾಣಿಗಳು ಹೀಗೆ ಮನುಷ್ಯನ ಕೆಲಸಗಳನ್ನ ಹೆಚ್ಚು ಮಾಡ್ತಾ ಇದ್ರೆ ಮುಂದೊಂದು ದಿನ ನಮ್ಮ IT/BPO ನಲ್ಲಿ ಕೆಲಸಕ್ಕೆ ಇಟ್ಟುಕೊಂಡರು ಆರ್ಸ್ಚರ್ಯ ಇಲ್ಲ. ;)
-ಯುವಪ್ರೇಮಿ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಸಕ್ಕತ್ ನಿರೂಪಣೆ ಕಣ್ರೀ, ಕೀರ್ತಿ ಟು ಕಿರಣ್
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಸ್ವಲ್ಪನೂ ಕರುಣೆ ಇಲ್ದೆ ನಾಯಿ ನ ಅಲ್ಲೆ ಬಿಟ್ ಬಂದಿದೀರಲ್ರಿ . PETA ನಿಮ್ಗೆ ಸ್ವಲ್ಪನೂ ಕರುಣೇ ಇಲ್ಲ ಅಂತ ನಿಮ್ ಮೇಲೆ case ಹಾಕ್ಬೋದು :)
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ನಾಯಿ ಹಿಂಬಾಲಿಸಿದ ನಿಮ್ಮ ಕಥೆ ತುಂಬಾ ಚನ್ನಾಗಿದೆ. ನಾನು 2ನೇ ತರಗತಿಯಲ್ಲಿದ್ದಾಗ ಓದಿದ ಗೌಡರ ನಾಯಿ ಕಥೆಯನ್ನು ನೆನಪಿಗೆ ತಂದಿತು.
ಉ: ನಾಯಿಯನ್ನು ಹಿಂಬಾಲಿಸಿದ ಕತೆ
:)
ಕೀರ್ತಿ ಕಿರಣ್ ಎಂ