ಕಡ್ಲಿಮಟ್ಟಿಯ ಕಾಶೀಬಾಯಿ!!!
ಕಡ್ಲಿಮಟ್ಟಿಯ ಕಾಶೀಬಾಯಿ!!!
"ಕಡ್ಲಿಮಟ್ಟಿಯ ಕಾಶೀಬಾಯಿಯ ಶೀಲಕ ತಂದಿತ್ತ..."
ಇದು ಉ.ಕರ್ನಾಟಕದಲ್ಲಿ ಮನೆಮನೆಗೂ ಗೊತ್ತಿರುವ ಸೊಗಸಾದ ಜಾನಪದ ಹಾಡು. ಇದನ್ನ ನಾನು ಚಿಕ್ಕವನಾಗಿದ್ದಾಗ ಹಾಡತಾ ಇದ್ದೆ. ಆದರೆ ಅದರ ಅರ್ಥ ಮಾತ್ರ ಗೊತ್ತಿರಲಿಲ್ಲ. ಈಗ ನನಗೆ ಇದು ಸಂಪೂರ್ಣವಾಗಿ ಮರೆತು ಹೋಗಿದೆ. ಆದರೆ ಈ ಒಂದು ಸಾಲು ಮಾತ್ರ ನೆನಪಿದೆ. ಇದನ್ನು ನಾನು ಹಾಗೆ ಗುನುಗುತ್ತಿರುವಾಗ ನನ್ನ ಅಮ್ಮ ಈ ಹಾಡಿನ ಹಿಂದಿರುವ ಕಥೆಯನ್ನು ಹೇಳಿದರು. ನೂರೈವತ್ತು ವರ್ಷಗಳ ಹಿಂದೆ ನಡೆದಿದೆ ಅನ್ನಬಹುದಾದ ಒಂದು ಕಥೆ ಅದು. ಅದು ಈಗ ಜಾನಪದ ಗೀತೆಯಾಗಿ ಉತ್ತರಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ.
ಆ ಕಥೆ ಇಂತಿದೆ....
ಬಾಗಲಕೋಟೆಯಿಂದ ಬಿಜಾಪುರಕ್ಕೆ ರೈಲು ಮಾರ್ಗವಾಗಿ ಹೋಗುವಾಗ ಕಡ್ಲಿಮಟ್ಟಿಯನ್ನೊ ಒಂದು ಸ್ಟೇಷನ್ ಬರುತ್ತೆ. ಕಡ್ಲಿಮಟ್ಟಿಯಲ್ಲಿ ಕಾಶೀಬಾಯಿ ಅನ್ನೊ ಒಬ್ಬ ಸಾಮಾನ್ಯ ಕೂಲಿ ಹೆಣ್ಣುಮಗಳೊಬ್ಬಳ ಕಥೆ ಇದು. ಅವಳಿಗೆ ಒಂದು ಚಿಕ್ಕ ಹಸುಳೆಯು ಇತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಬೇರೆ. ಗಂಡನ ಕೂಲಿ ಸಾಕಾಗುವುದಿಲ್ಲ ಎಂದು ತಾನೂ ಕೂಡ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಳು.
ಒಂದು ದಿನ ಹಾಗೆಯೇ ಕೂಲಿ ಮಾಡಿ, ಮನೆಗೆ ಹಿಂತಿರುಗಬೇಕೆನ್ನುವಷ್ಟರಲ್ಲೇ ಅದಾಗಲೇ ಕತ್ತಲು ಆವರಿಸಿತ್ತು. ಜನರೆಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದ್ದರು. ತಾನು ತನ್ನ ಹಸುಳೆಯೊಂದಿಗೆ ಮನೆಕಡೆಗೆ ಹೆಜ್ಜೆ ಹಾಕಿದಳು ಕಾಶೀಬಾಯಿ ದಾರಿಯಲ್ಲಿ ಊರ ಹೊರಗಿನ ರೈಲ್ವೆ ಸ್ಟೇಷನ್ ಹತ್ತಿರ ಬಂತು. ಅದು ಇನ್ನೂ ಊರ ಹೊರಗಡೆ ಇದ್ದುದರಿಂದ ನಿರ್ಜನ ಪ್ರದೇಶವಾಗಿತ್ತು.
ರೈಲ್ವೆ ಸ್ಟೇಷನ್ನಲ್ಲಿ ಇರೋ ಸ್ಟೇಷನ್ ಮಾಸ್ಟರ್, ನಡುವಯಸ್ಸಿನ ಕಾಶೀಬಾಯಿ ಒಬ್ಬಳೆ ಮಗುವಿನ ಜೊತೆಗೆ ಬರುವುದನ್ನ ನೋಡ್ತಾನೆ.
ನಿರ್ಜನ ಪ್ರದೇಶದಲ್ಲಿ ಅವಳನ್ನು ಬಲಾತ್ಕಾರ ಮಾಡೋ ಕೆಟ್ಟ ಬುದ್ಧಿ ಅವನಿಗೆ ಬರುತ್ತೆ. ಹತ್ತಿರದ ದಾರಿ ಎಂದು ಯಾವಾಗಲು ಅವಳು ಸ್ಟೇಷನ್ ಮೂಲಕವೇ ಹಾದು ಹೋಗುವದು ವಾಡಿಕೆ. ಅಂದು ಕೂಡ ಹಾಗೆಯೇ ಸ್ಟೇಷನ್ ಮೂಲಕ ಹಾಯ್ತಾಳೆ. ಅವಳು ಸ್ಟೇಷನ್ನಲ್ಲಿ ಬರುವುದನ್ನೆ ಕಾಯ್ತಾ ಇದ್ದ ಸ್ಟೇಷನ್ ಮಾಸ್ಟರ್, ಒಮ್ಮೆಲೆ ಅವಳನ್ನು ಹೋಗಿಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತಾನೆ. ಇದನ್ನು ನೆನೆಸಿರದ ಕಾಶೀಬಾಯಿ ಆವಕ್ಕಾಗುತ್ತಾಳೆ. ತಾನು ಮಾಡ್ತಾ ಇರೋದು ಸರಿಯಲ್ಲ ಬಿಡು ಎಂದು ಪರಿಪರಿಯಲ್ಲಿ ಬೇಡಿಕೊಳ್ತಾಳೆ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಸ್ಟೇಷನ್ ಮಾಸ್ಟರ್ ಮಾತ್ರ ಅದಕೇನೂ ಒಗ್ಗದೆ, ಅವಳನ್ನು ದರದರನೇ ಅಲ್ಲೇ ಇರುವ ಹಳಿ ನಿಯಂತ್ರ ಣ ಕೊಠಡಿಗೆ (control room) ಒಯ್ತಾನೆ. ಕಾಶೀಬಾಯಿಗೆ ಕಂಕುಳಲಲ್ಲಿರೋ ಮಗು ಬೇರೆ. ಜೋರಾಗಿ ಕೂಗಾಡ್ತಾಳೆ, ಯಾರಾದರೂ ಬಂದು ಸಹಾಯ ಮಾಡ್ತಾರೆ ಅಂತ ಕೂಗ್ತಾಳೆ. ಆದರೆ ಬಡ ಕಾಶೀಬಾಯಿಯ ಕೂಗು ದೂರದಲ್ಲಿರೋ ಯಾರಿಗೂ ಕೇಳಿಸೋದೇ ಇಲ್ಲ. ತನ್ನ ಶೀಲಕ್ಕೆ ಬಂದೊದಗಿದ ಪರಿಸ್ಥಿತಿಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ ಳೋಕೆ ಪ್ರಯತ್ನ ಮಾಡ್ತಾಳೆ. ಒಂದುಸಲ ತನ್ನೆಲ್ಲಾ ಶಕ್ತಿಯಾನ ಕಲೆಹಾಕಿ ಜೋರಾಗಿ ಅವನನ್ನ ಒದ್ದು, ಓಡಿ ಹೋಗಿ ಹೊರಗಡೆಯಿಂದ ಬಾಗಿಲು ಹಾಕಿಬಿಡ್ತಾಳೆ. ಆದರೆ ಮಗು ಮಾತ್ರ ಒಳಗಡೆಯೇ ಉಳಿದು ಬಿಡುತ್ತೆ. ಆಗ ಸ್ಟೇಷನ್ ಮಾಸ್ಟರ್ ಕಿಟಕಿಯಿಂದ ಕೇಳ್ತಾನೆ. ಬಾಗಿಲು ತೆಗೆದು ತನಗೆ ಸಹಕರಿಸದಿದ್ದರೆ ಮಗುವನ್ನು ಕೊಂದು ಬಿಡುವುದಾಗಿ ಬೆದರಿಸುತ್ತಾನೆ. ಆದರೆ ಗರತಿ ಕಾಶೀಬಾಯಿ, ತನ್ನ ಶೀಲ ತನ್ನ ಗಂಡನಿಗೆ ಮಾತ್ರ ಮೀಸಲು, ಅದಿದ್ರೆ ಅಂತಹ ಸಾವಿರ ಮುದ್ದು ಮಕ್ಕಳನ್ನು ಪಡೆತೇನೆ ಹೋಗಲೊ, ಆದರೆ ನಿನಗೆ ಮಾತ್ರ ನಾನು ಶರಣಾಗುವುದಿಲ್ಲ ಎಂದು ತನ್ನ ಅಸಹಾಯಕ್ಕಾಗಿ ಬಿಕ್ಕಿಬಿಕ್ಕಿ ಅಳತ್ತಾಳೆ.
ಹೀಗಾದರೆ ಅವಳು ಬಾಗಿಲು ತೆಗೆದು ತನಗೊಲಿಯುವುದಿಲ್ಲವೆಂದು ತಿಳಿದ ಸ್ಟೇಷನ್ ಮಾಸ್ಟರ್ ಆ ಮಗುವಿನ ಒಂದೊಂದೇ ಅಂಗವನ್ನು ಕತ್ತರಿಸಿ, ಕಿಟಕಿ ಮೂಲಕ ಹೊರಗೆ ಬಿಸಾಕುತ್ತಾನೆ... ತನ್ನ ಮಗು ತನ್ನ ಕಣ್ಣಮುಂದೆಯೇ ಸಾಯ್ತಾ ಇರೊದನ್ನು ನೋಡಿ ತನ್ನ ಅಸಹಾಯಕ್ಕಾಗಿ ಮರುಗುತಾಳೆ, ಕೊರಗುತ್ತಾಳೆ, ಆದರೂ ಶೀಲಗಿತ್ತಿ ಕಾಶೀಬಾಯಿ ಅವನಿಗೆ ಬಾಗದೇ ತನ್ನ ಶೀಲವನ್ನು ಕಾಪಾಡಿಕೊಳ್ತಾಳೆ. ಮರುದಿನ ಬೆಳಿಗ್ಗೆ ನೆರೆದ ಜನ ಈ ದೃಶ್ಯವನ್ನು ನೋಡಿ ಕಾಶೀಬಾಯಿಯನ್ನ ಕೊಂಡಾಡ್ತಾರೆ, ಅವಳ ಶೀಲತನಕ್ಕೆ ಬೆರಗಾಗಿ ಅಳ್ತಾರೆ. ಅವಳ ಬಗ್ಗೆ, ಅವಳ ಶೀಲತನ ಎಲ್ಲರಿಗೂ ತಿಳಿಯಲೆಂದು ಅವಳ ಮೇಲೆ ಗೀತೆ ಕಟ್ಟಿ ಊರೂರೆಲ್ಲಾ ಹಾಡ್ತಾರೆ.
ಆನಂತರ ಬಹುಷಃ ಜನ ಸ್ಟೇಷನ್ ಮಾಸ್ಟರನಿಗೆ ಛೀಮಾರಿ ಹಾಕಿ, ಅವನ ತಲೆಬೋಳಿಸಿ ಊರೆಲ್ಲಾ ಕತ್ತೆ ಮೇಲೆ ಮೆರವಣಿಗೆ ಮಾಡಿ, ಊರ ನಡುವೆಯೇ ಗಲ್ಲಿಗೇರಿಸಿದರು ಅಂತ ಕಾಣುತ್ತೆ.
ಸನಾತನ ಭರತ ಸಂಸ್ಕೃತಿಯ ಪ್ರತೀಕ ನಮ್ಮ ಈ ಕಾಶೀಬಾಯಿ ಅಲ್ಲವೇ..
ಇದು ಸರಿಸುಮಾರು ನೂರು ವರ್ಷಗಳ ಹಿಂದೆ ನಡೆದಿದೆ ಅಂತ ಹೇಳ್ತಾರೆ... ಆದರೆ ಸರಿಯಾಗಿ ಗೊತ್ತಿಲ್ಲ...
ಈ ಹಾಡು ನನ್ನ ತಾಯಿಯವರಿಗೂ ನೆನಪಿಲ್ಲ.. ಯಾರಾದರೂ ಗೊತ್ತಿದ್ದರೆ.. ದಯವಿಟ್ಟು ತಿಳಿಸಿ...
"ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಃ"
- ವಿನಾಯಕ

- Khavi ರವರ ಬ್ಲಾಗ್
- Login or register to post comments
- 654 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಕಡ್ಲಿಮಟ್ಟಿಯ ಕಾಶೀಬಾಯಿ!!!
ನೂರು ವರ್ಷದ ಹಿಂದೆಯೇ ಬಿಜಾಪುರದ ಕಡೆ ಟ್ರೈನು ಬಂದಿತ್ತು ಅನ್ನೋದು ಆಶ್ಚರ್ಯ ತಂದಿತು.
Re: ಕಡ್ಲಿಮಟ್ಟಿಯ ಕಾಶೀಬಾಯಿ!!!
ಈ ಕಥಿಯನ್ನಾಧರಿಸಿ, "ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್" ಅನ್ನೋ ಚಲನಚಿತ್ರವೂ ತಯಾರಾಗೆದ. ಅದ್ರಾಗ ಬಹುಶಃ ಶೃತಿಯವರು ಕಾಶೀಭಾಯಿಯ ಪಾತ್ರನ, ಅಭಿಜಿತ್ ಅವರು ಸ್ಟೇಷನ್ ಮಾಸ್ತರನ ಪಾತ್ರ ನಿರ್ವಹಿಸಿದ್ರಂತ ಕಾಣ್ತದ.. ಆದ್ರ ಕತಿ ಸ್ವಲ್ಪ ಭಿನ್ನವಾಗಿದೆಯೆಂದು ನೆನಪು..
Re: ಕಡ್ಲಿಮಟ್ಟಿಯ ಕಾಶೀಬಾಯಿ!!!
ಕಥೆ ಮರೆತು ಹೋಗಿತ್ತು ನೆನಪಿಸಿದಿರಿ.
ಧನ್ಯವಾದಗಳು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನನ್ನಿ: ಕಡ್ಲಿಮಟ್ಟಿಯ ಕಾಶೀಬಾಯಿ!!! ಹಾಗೆಯೇ ದುರ್ಗದ ಗರತಿ
ಖಾವಿ ಅವರಾ,
ನಿಮ್ ಕಡಿ ಕಾಶೀಬಾಯಿ ಆದರ, ನಮ್ ದುರ್ಗದ್ ಕಡೀನೂ ಒಬ್ಳ್ ಗರತಿ ಇದ್ಲಂತ್‌ಆ. ನಾ ಚಿಕ್ಕಂವಿದ್ದಾಗ ಮಾವನ ಮನೀಗಂತ ದುರ್ಗಕ್ ಹೋಗ್ತಿದ್ದಾಗ ಆ ಕತೀ ಹೇಳ್ತಿದ್ರ. ಒನಕೆ ಓಬವ್ವ ಅಲ್ ತೆಗೀರಿ. ಆದ್ರ ನಂಗ್ ಈಗ ಮರ್ತ್ ಹೋಗೇತಿ. ನಿಮ್ ಕಡ್ಲಿಮಟ್ಟಿಯ ಕಾಶೀಬಾಯಿ ಕತೀ ಕೇಳಿದ್ ಮ್ಯಾಗೆ ನಂಗೆ ಈ ಕತಿಯ ಹಿನ್ನೆಪ್ಪು ಕಾಡ ಹತ್ತೇತಿ. ಈ ಬಾರಿ ನಮ್ ತಾತನ್ ಮನೀಗ್ ಹೋದಾಗ ಕ್ಯೇಳ್ ನೋಡ್ತೇನಿ. ನಮ್ ತಾತ ಅಜ್ಜಿಗೆ ಗೊತ್ತಿರಲೇ ಬೇಕು.
ಅಂದ ಹಾಗ, ಕಲ್ಲರಳಿ ಹೂವಾಗಿ ಚಿತ್ರದಲ್ಲಿ, ಸಂಪಿಗೆ ಸಂಪಗಿ ಕಾಮಗೇತಿ ಸಂಪಿಗೆ ಹಾಡಿನಲ್ಲಿ, ದುರ್ಗದ ಗರತಿ ಪದುಮಮ್ಮ ನಾಗತಿ ಎಂಬ ಸಾಲಿದೆ. ಆಸಕ್ತರು ಆ ಹಾಡನ್ನು ಕೇಳಿ ನೋಡಿ. ಒಂದೇ ಒಂದು ಸಾಲಿನ ಹಾಡಾದರೂ, ಚಿತ್ರದುರ್ಗದ ಎಷ್ಟೋ ಇತಿಹಾಸವನ್ನೇ ಹೇಳುತ್ತದೆ ಆ ಹಾಡು.
Re: ನನ್ನಿ: ಕಡ್ಲಿಮಟ್ಟಿಯ ಕಾಶೀಬಾಯಿ!!! ಹಾಗೆಯೇ ದುರ್ಗದ ಗರತಿ
ಹೌದು ಸುನೀಲ ಅವರೆ,
ನಮ್ಮ ನಾಡು ಇಂತಹ ಅನೇಕ ಘನತೆವೆತ್ತ ಮಾತೆಯರ ಇತಿಹಾಸವನ್ನೇ ಹೊಂದಿದೆ. ಅವರೆಲ್ಲರ ಕಥೆಗಳನ್ನು ಒಂದು ಕಡೆ ಕಲೆಹಾಕಬೇಕು... ಅಂದಹಾಗೆ.. ಅದು ಖವಿ (ಖವಾಸಿ ವಿನಾಯಕ) ಖಾವಿ ಅಲ್ಲ :)
ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ.
ಟಿ : ಕಡ್ಲಿಮಟ್ಟಿಯ ಕಾಶೀಬಾಯಿ!!! ಹಾಗೆಯೇ ದುರ್ಗದ ಗರತಿ
ಓಹೋ ಅದು ಖವಿ ಅಂತಲೇ, ನಾನು ಖಾವಿ ಅಂತ್ ಮಾಡಿದ್ದೆ
Re: ಕಡ್ಲಿಮಟ್ಟಿಯ ಕಾಶೀಬಾಯಿ!!!
ಆ ಹಾಡು ಪೂರ ಹಾಕ್ರಿ!
======================================
ಉ: ಕಡ್ಲಿಮಟ್ಟಿಯ ಕಾಶೀಬಾಯಿ!!!
ತೀವ್ರ ದ್ವಂದ್ವವನ್ನು ನಮ್ಮೆದುರಿಗಿಟ್ಟು ನಂತರ ಒಳ್ಳೆಯದು ಗೆಲ್ಲುತ್ತದೆ ಎಂಬುದನ್ನು ನಿರೂಪಿಸುವ ಹಲವಾರು ನೀತಿಕತೆಗಳಿವೆ. ಈ ಕತೆಯೂ ಹೆಣ್ತನ(ಶೀಲ ಎಂಬರ್ಥದಲ್ಲಿ) ಮತ್ತು ತಾಯ್ತನದ ನಡುವಿನ ತೀವ್ರ ದ್ವಂದ್ವವನ್ನು ಹೃದಯಂಗಮವಾಗಿ ತೆರೆದಿಡುತ್ತದೆ. ಶೀಲವನ್ನು ಕಾಪಾಡಿಕೊಳ್ಳುವ ಹೆಣ್ತನವೇ ಇಲ್ಲಿ ಗೆಲ್ಲುತ್ತದೆ. ಅದೂ ಮಗುವನ್ನು ರಕ್ಷಿಸಬೇಕಾದ ತಾಯ್ತನದ ಎದುರು! ಇಲ್ಲಿ ದ್ವಂದ್ವವಿರುವುದು ಒಳ್ಳೆಯ ಕಾಶಿಬಾಯಿ ಮತ್ತು ಕೆಟ್ಟ ಸ್ಟೇಷನ್ ಮಾಸ್ಟರ್ ನಡುವೆ ಅಲ್ಲ ಎಂಬುದನ್ನು ಗಮನಿಸಿ. ಕತೆ ದಾರುಣವಾಗಿರುವುದರಿಂದ ನನ್ನ ತಲೆಯಲ್ಲಿ ಚರ್ಚೆ ಮುಂದುವರಿಯಿತು. "ಸನಾತನ ಭರತ ಸಂಸ್ಕೃತಿಯ ಪ್ರತೀಕ ನಮ್ಮ ಈ ಕಾಶೀಬಾಯಿ" ಎಂಬುದನ್ನು ಯಾಕೋ ಮನಸ್ಸು ಒಪ್ಪುತ್ತಿಲ್ಲ.
ಸಾಮಾನ್ಯವಾಗಿ ಒಂದು ಮೌಲ್ಯವನ್ನು ಆಯ್ದುಕೊಳ್ಳುವಂತೆ ಹೇರುವ/ಪ್ರೇರೇಪಿಸುವ ಕೆಲಸವನ್ನು ನೀತಿಕತೆಗಳು ಮಾಡುತ್ತವಾದರೂ, ಅಂಥ ಕತೆಯನ್ನು ಸ್ವೀಕರಿಸುವಾಗ ಅದರಿಂದ ತಪ್ಪಿಸಿಕೊಳ್ಳುವ ಹೊಂಚು ಹಾಕುತ್ತೇನೆ. ಇಲ್ಲೂ ಹೀಗೆ ಮಾಡುವುದಾದರೆ-
೧. "ಸಾವಿರ ಮುದ್ದು ಮಕ್ಕಳನ್ನು ಪಡೀತೇನೆ" ಎನ್ನುವದರ ಮೂಲಕ ತಾಯ್ತನವನ್ನು ಕಳೆದುಕೊಳ್ಳುತ್ತಿಲ್ಲ ಎಂದು ಸೂಚಿಸುತ್ತಾಳೆ. ಆದರೆ ಅದು ಸಾಯುತ್ತಿರುವ ಮಗುವನ್ನು ಉಳಿಸಿದಂತಾಯಿತೆ?
೨. ಶೀಲದ ಮೂಲಕ ಹೆಣ್ಣು ಕಾಪಾಡಬೇಕಾದ/ಕೆಡಬಾರದ ವಸ್ತುವೆಂದು ನಿರೂಪಿಸುವುದನ್ನು ನಾನು ಹೇಗೆ ಒಪ್ಪುತ್ತೇನೆ? ಶೀಲಬಿಟ್ಟ ಹೆಣ್ಣು ವಸ್ತುವಾಗುವುದನ್ನು ವಿರೋಧಿಸುವ ನಾವು ಕಾಪಾಡಿಕೊಳ್ಳುವ ಮೂಲಕವೂ ಹೆಣ್ಣು ವಸ್ತುವಾಗುವುದನ್ನು ಒಪ್ಪುತ್ತೇವೆಯೆ?
೩. ಮೇಲಿನ ಅಂಶವನ್ನು ಮುಂದುವರೆಸಿ, ನೂರಾರು ವರ್ಷದ ಹಳೆಯ ಕತೆಯಲ್ಲಿ ನಿರೂಪಿತವಾಗಿರುವ ನೈತಿಕತೆಯನ್ನು ಇಂದಿಗೆ ಆರೋಪಿಸಬಹುದ? ಶೀಲದ ಬಗ್ಗೆಗಿನ ಇಂದಿನ ಚರ್ಚೆ ಲಿಂಗವನ್ನು ಮೀರಿದೆಯಲ್ಲವೆ?
೪. ಸ್ಟೇಷನ್ ಮಾಸ್ಟರ್ ನಮ್ಮನ್ನಾಳುತ್ತಿದ್ದ ಪಾಶ್ಚಿಮಾತ್ಯ ಬಲದ ಪ್ರತೀಕವಾಗಿ ಇಲ್ಲಿ ಬರುತ್ತಾನೆಯೆ? ಹಾಗಾದಾಗ, ಈ ಕತೆ ಸ್ವಾತಂತ್ಯ್ರ ಹೋರಾಟದ ಇನ್ನೊಂದು ಮಗ್ಗುಲಿನ ನಿರೂಪಣೆಯೆ?
ಎಲ್ಲ ಜಾನಪದ ಕತೆಗಳಂತೆ ಈ ಕತೆಗೂ ಬೇರೆ ಬೇರೆ ಅವತರಣಿಕೆಗಳು ಇರಲು ಸಾಧ್ಯವಲ್ಲವೆ? ಇದ್ದುದಾದರೆ, ಅವು ಯಾವ ಭಿನ್ನ ನೋಟಗಳನ್ನು ಮುಂದಿಡುತ್ತವೆ? ಹುಡುಕಲು ಗ್ರಾಸ ಕೊಟ್ಟದ್ದಕ್ಕೆ ನಿಮಗೆ ವಂದನೆಗಳು.