ಭಾಷೆ ಮತ್ತು ನದಿ
ಹಿಂದೆ ನದಿ ಪಾತ್ರದಲ್ಲಿ ಜನ ವಾಸಿಸುತ್ತಿದ್ದರು. ಅವರದೇ ಒಂದು ಜನಾಂಗವಾಗುತ್ತಿತ್ತು. ಅವರ ಸಮೂಹ ನಡವಳಿಕೆಗಳು ಕ್ರಮೇಣ ನಾಗರೀಕತೆಗಳಾಗಿ ಸಮಾಜ, ಸಹಕಾರ, ನೀತಿ ಸಂಹಿತೆಗಳು ಆಚಾರಕ್ಕೆ ಬಂದವು ಅಂದುಕೊಳ್ಳೋಣ. ಮಾನವ ಮೊದಮೊದಲು ಎರಡು ಕಲ್ಲನ್ನು ಕುಟ್ಟಿ ಬೆಂಕಿ ಹುಟ್ಟಿಸಿ ನಂತರ ಆಹಾರ ತಯಾರಿಸಲು ಕಲಿತ. ಅದು ಶಿಲಾಯುಗವಾಯ್ತು. ನಾಗರೀಕತೆ ಬೆಳೆಯುತ್ತಾ ಹೋದಂತೆ ಸುಧಾರಣೆಗಳಾಗುತ್ತಾ ಹೋದವು. ಹಾಗೆಯೇ ಮಾನವ ಪ್ರಬುದ್ಧವಾಗುತ್ತಾ ಹೋದ. ಎಲ್ಲೋ ಒಂದು ಕಡೆ ಬೆಟ್ಟದ ಕೊರಕಲಿನಲ್ಲಿ ಹುಟ್ಟಿದ ನದಿಯೂ ಹಾಗೆಯೇ. ಹಲವಾರು ಕಾಡು ಮೇಡು, ಊರು ಕೇರಿ ಬದಿಯಲ್ಲಿ ಹರಿದು ಹತ್ತು ಹಲವು ಮಂದಿಗೆ ನೀರುಣಿಸಿ ಕೆಲವು ಕಡೆ ಪ್ರಶಾಂತವಾಗಿ ಹರಿಯುತ್ತಾ ಕೆಲವು ಕಡೆ ಜಲಪಾತವಾಗಿ ಧುಮುಕುತ್ತಾ ತನಗೆ ದಾರಿ ಸಿಕ್ಕ ಕಡೆ ಸ್ವಾಭಾವಿಕವಾಗಿ ಹರಿಯುತ್ತಾ ಸಮುದ್ರವನ್ನು ಸೇರುತ್ತಾಳೆ. ಹುಟ್ಟಿದ ಮಗುವನ್ನೇ ತೆಗೆದುಕೊಳ್ಳಿ ಮೊದ ಮೊದಲು ಕೈ ಕಣ್ಣು ಸನ್ನೆಯಲ್ಲಿ ತನ್ನದೇ ಆದ ತೊದಲು ನುಡಿಯಲ್ಲಿ ಹೇಳಬೇಕಾದ್ದನ್ನು ಹೇಳುತ್ತಿರುತ್ತದೆ. ಕಾಲಕ್ರಮೇಣ ಅದಕ್ಕೆ ಅವರಿವರು ಮಾತನಾಡುವ ಶಬ್ದಗಳು ಕಿವಿಗೆ ಬಿದ್ದು ಯಾವ ಶಾಲೆಗೆ ಹೋಗುವ ಮೊದಲೇ ಸಲೀಸಾಗಿ ಒಂದು ಭಾಷೆಯನ್ನು ಕಲಿತು ಬಿಟ್ಟಿರುತ್ತದೆ. ಭಾಷೆಯನ್ನೂ ಇದೇ ರೀತಿ ಬೆಳೆದು ಬಂದಿತು ಎನ್ನೋಣವೇ?. ಮೊದಲು ಕೆಲವೇ ಮಂದಿ ಒಂದಷ್ಟು ಪದಗಳನ್ನು ಹುಟ್ಟಿಹಾಕುತ್ತಾರೆ. ಪದಗಳನ್ನು ಕೂಡಿಸುವ ನಿಯಮಗಳನ್ನು ಸೃಷ್ಟಿಸುತ್ತಾರೆ. ಕ್ರಮೇಣ ಅವರ ಸಂಖ್ಯೆ ವೃದ್ಧಿಸುತ್ತದೆ. ಜನರು ಭಾವನೆಗಳು, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಆಗಲೇ ಇರುವ ಪದಗಳು ಸಾಲದಾಗಿ ಕೆಲವು ಹೊಸ ಪದಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಭಾಷೆಯೂ ನದಿಯಂತೆ ಕಾಲಕ್ರಮೇಣ ಹಲವು ಭಾಷೆಯ ಪದಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ಹತ್ತು ಹಲವು ಮಾರ್ಪಾಡನ್ನು ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಹೋಗುತ್ತದೆ. ಆದ್ದರಿಂದ ಒಂದು ಭಾಷೆಯನ್ನು ಅದರ ಮೂಲವನ್ನು ಹುಡುಕಿ ಅಲ್ಲಿದ್ದಷ್ಟೇ ಪದಗಳು ನಮಗೆ ಸಾಕು ಎನ್ನುವುದು ಎಷ್ಟು ಸರಿ? ಇದು ಒಂದು ನದಿಯು ಹುಟ್ಟುವ ತಾಣದಲ್ಲಿ ಅಣೆಕಟ್ಟು ಕಟ್ಟಿ ಅಲ್ಲಿಗೇ ನೀರನ್ನು ನಿಲ್ಲಿಸುವಷ್ಟು ಮೂರ್ಖ ತನವಾದೀತು. ಆ ನದಿ ಹರಿಯಲೇಬೇಕು. ಅದು ನಿಯಮ. ಒಂದಲ್ಲಾ ಒಂದು ದಿನ ಕಟ್ಟಿದ ಕಟ್ಟೆಯನ್ನು ಮೀರಿ ಹರಿದು ಸಮುದ್ರ ಸೇರಲೇಬೇಕು. ನಮ್ಮ ಕನ್ನಡದಲ್ಲಿ ಇಂದಿಗೂ ಎಷ್ಟೋ ವಸ್ತುಗಳಿಗೆ ಸ್ವಂತ ಭಾಷೆಯ ಪದಗಳಿಲ್ಲ. ಹೃದಯ, ವರ್ತುಲ, ಜನಾಂಗ ಇತ್ಯಾದಿ ಪದಗಳು ನಮ್ಮ ಭಾಷೆಯವಲ್ಲ. ಅದನ್ನು ಬಳಸಲೇ ಬೇಡಿ. ಅದು ಅಪರಾಧ. ಒಂದು ವೇಳೆ ಬಳಸಲೇಬೇಕೆಂದಿದ್ದರೆ ಅವುಗಳನ್ನು ಕೈಸನ್ನೆ ಮಾಡಿ ತೋರಿಸಿ ಅಥವಾ ಚಿತ್ರ ಬಿಡಿಸಿ ತೋರಿಸಿ ಎಂದಂತಾದೀತು. ಆದ್ದರಿಂದ ಜನರಿಗೆ ಯಾವ ಪದಗಳು ಅನುಕೂಲವೆನಿಸುತ್ತದೋ ಅವರವರಿಗೆ ಬಿಟ್ಟು ಬಿಡುವುದು ಒಳ್ಳೆಯದು. ಅದು ಬಿಟ್ಟು ಆಡುವ ಭಾಷೆಗೂ ನಿಯಮ ಕಟ್ಟಳೆಗಳನ್ನು ತಂದರೆ ಹರಿಯುವ ನೀರಿಗೆ ಅಡ್ಡಕಟ್ಟಿದಂತಾದೀತು.

- madhava_hs ರವರ ಬ್ಲಾಗ್
- Login or register to post comments
- 234 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಭಾಷೆ ಮತ್ತು ನದಿ
ಹೃದಯ=ಗುಂಡಿಗೆ,, ವರ್ತುಲ=ಸುತ್ತು, ಜನಾಂಗ=ಪೈಕಿ
ನೀ ಯಾರ್ ಪೈಕಿ ಅದೀಪಾ ಸಾಯಬss? ಅಂದ್ರೆ ನೀನು ಯಾರ ಮನೆಯವನು....
ನೀ ಯಾರ್ ಪೈಕಿ ಅದೀಪಾ ಸಾಯಬss? ಅಂದ್ರೆ ನೀನು ಯಾವ ಜನಾಂಗದವನು.....
ಕನ್ನೆದಲ್ಲೂ ಒಂದು ಪದಕ್ಕೆ ಹಲವು ಅರ್ಥಗಳಿವೆ..
ಹಂಗ ಇಂಗ್ಲೀಶಲ್ಲಿ rush ಅನ್ನೂ ಪದಕ್ಕೆ ಕನ್ನಡದಲ್ಲಿ ಅರ್ಥ ಹೇಳ್ರಿ ನೋಡುನು....
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಭಾಷೆ ಮತ್ತು ನದಿ
ಮೇಲಿನ ನನ್ನಡದಲ್ಲೂ ಪದವನ್ನು ತಿದ್ದಿಕೊಂಡು ಓದುವುದು...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಭಾಷೆ ಮತ್ತು ನದಿ
ಮೇಲಿನ ಕನ್ನಡದಲ್ಲೂ ಪದವನ್ನು ತಿದ್ದಿಕೊಂಡು ಓದುವುದು...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಭಾಷೆ ಮತ್ತು ನದಿ
ಪ್ರತಿಕ್ರಿಯೆಗೆ ನನ್ನಿ ಗಿರೀಶರೆ,
’ಗುಂಡಿಗೆ’ ಪದವನ್ನು ಧೈರ್ಯ ಕ್ಕೆ ಪರ್ಯಾಯಕ್ಕೆ ಉಪಯೋಗಿಸುವುದನ್ನು ಕೇಳಿದ್ದೀನಷ್ಟೆ. ’ಹೃದಯದ ಭಾವನೆಗಳು’, ’ಹೃದಯ ಚಿಕಿತ್ಸೆ’ ಇವುಗಳನ್ನು ಕೇಳಿದ್ದೇನೆ..ಇದನ್ನು ’ಗುಂಡಿಗೆ ಭಾವನೆಗಳು’, ’ಗುಂಡಿಗೆ ಚಿಕಿತ್ಸೆ’ ಎಂದು ಕೇಳಿಲ್ಲ. ಇದು ತಪ್ಪಿಲ್ಲದೆಯೂ ಇರಬಹುದು. ನನ್ನ ಅಭಿಮತ ಇಷ್ಟೆ. ’ಗುಂಡಿಗೆ ಭಾವನೆಗಳು’ ಅನ್ನುವವರು ಹಾಗೇ ಬಳಸಲಿ. ’ಹೃದಯದ ಭಾವನೆಗಳು’ ಅನ್ನುವರು ಅದೇ ರೀತಿ ಬಳಸಲಿ. ನಮಗೆ ಅರ್ಥವಾದರೆ ಸಾಕು !! ಇನ್ನು ’ಪೈಕಿ’-ಜನಾಂಗ ಕ್ಕೆ ಸಮಾನಾರ್ಥಕ ಅರ್ಥವನ್ನು ಕೊಡುವುದಿಲ್ಲ ಇಂದು ನನ್ನ ಅನಿಸಿಕೆ. ಹಾಗೆಯೇ ಬಸ್ಸು, ಕಾರು, ಪಿಜ್ಜಾ, ನ್ಯೂಡಲ್(ಶಾವಿಗೆ) ಈ ಪದಗಳೂ ಅಷ್ಟೆ ಅದೇರೀತಿ ಬಳಸಿದರೆ ಚಂದ. ಈ ಪದಗಳೂ ಬೇರೆ ಭಾಷೆಯಿಂದ ಬಂದವೇ.
ಉ: ಭಾಷೆ ಮತ್ತು ನದಿ
@ಗಿರೀಶ ರಾಜನಾಳ,
rush->ಬಿರುಸು
@ಮಾಧವ,
ಹೃದಯದ ಭಾವನೆಗಳು - ಹೆಸರೇ ಹೇಳುವ ಹಾಗೆ, ಭಾವುಕರಾದಾಗ ಏನು ಬೇಕಾದರೂ ಇರಬಹುದು. ಆದರೆ "ಹೃದಯದ ಚಿಕಿತ್ಸೆ"ಗೆ ವಿಷಯ ಬಂದಾಗ "ಎದೆ" ಅಂತಲೂ ಹೇಳಬಹುದು. "ಎದೆ" ಎಂದರೆ ಬರೀ ಈಗ ನಾವು ತಿಳಿದುಕೊಂಡ ಹಾಗೆ ಬರೀ ಎಲುಬುಗೂಡಲ್ಲ.
"ಪೈಕಿ - ಜನಾಂಗ"ವೆಂಬ ಅರ್ಥ ಕೊಡಲ್ಲ ಅನ್ನೋದು, ನೀವೇ ಹೇಳುವ ಹಾಗೆ ನಿಮ್ಮ ಅನಿಸಿಕೆ. ಅದು ಸಾರ್ವತ್ರಿಕವಲ್ಲ. ನಮ್ಮ ಮನೆಗಳಲ್ಲಿ,
ಅವನು ಯಾರ ಪೈಕಿ ? ಎಂಬ ಪ್ರಶ್ನೆ ಬಂದರೆ
೧. ಅವನು ಯಾರು, ೨. ಅವನ ಜಾತಿ ಯಾವುದು ೩. ಜಾತಿಯ ಒಳಪಂಗಡ ಯಾವುದು ೪. ಧರ್ಮ ಯಾವುದು ೫. ದೇಶ ಯಾವುದು. ೬. ಯಾವ ಭಾಷೆಯವನು...ಇವೆಲ್ಲವುಗಳಿಗೂ ಉತ್ತರವನ್ನು ಬಯಸುತ್ತದೆ. ಹಾಗಾಗಿ ಪೈಕಿ-ಜನಾಂಗ ಎಂಬುದು ಸರಿಯಾದ ಕನ್ನಡ ಪದ ಅಂತ ನನ್ನನಿಸಿಕೆ.
ಉ: ಭಾಷೆ ಮತ್ತು ನದಿ
rush => ನುಗ್ಗುವಿಕೆ ಆಗಬಹುದೇ?
ಪೈಕಿ => "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಸರಿಯೋ "ಕನ್ನಡಿಗರ ಪೈಕಿ ಭಾಷೆ ಕನ್ನಡ ಸರಿಯೋ?"
ಏನೋ ಗೋಜಲು..
ಹಾಗೆಯೇ ನಿಮ್ಮ ಸ್ನೇಹಿತರಿಬ್ಬರನ್ನು ನೀವು ಒಂದು ಸ್ಠಳದಲ್ಲಿ ನೀವು ಭೇಟಿಯಾಗುತ್ತೀರಿ ಎಂದುಕೊಳ್ಳಿ. "ನಿಮ್ಮಲ್ಲಿ ಯಾರು ಮೊದಲು ಬಂದದ್ದು" ಅಥವಾ "ನಿಮ್ಮ ಪೈಕಿ ಯಾರು ಮೊದಲು ಬಂದದ್ದು" ಎನ್ನ ಬಹುದು. ಹಾಗಾದರೆ "ನಿಮ್ಮ ಜನಾಂಗದಲ್ಲಿ ಯಾರು ಮೊದಲು ಬಂದದ್ದು" ಅನ್ನುವುದು ಸರಿಯೇ? ಪೈಕಿ ಎನ್ನುವುದು ಒಂದು sub-set ಆಗಿ ಹೆಚ್ಚು ಅರ್ಥ ನೀಡಬಲ್ಲದು.
ಉ: ಭಾಷೆ ಮತ್ತು ನದಿ
ಅಯ್ಯಪ್ಪಾ, ಮಾಧವ, ನನಗೆ ಹೇಗೆ ಹೇಳಬೇಕೋ ಗೊತ್ತಿಲ್ಲ. ಪದಗಳು ಬೇರೆ ಬೇರೆ ಸನ್ನಿವೇಶದಲ್ಲಿ ಬೇರೆ ಬೇರೆ ಅರ್ಥ ಕೊಡತ್ತೆ, ಅನ್ನೋದು ನಿನಗೆ ಗೊತ್ತಿಲ್ವಾ, ನಾನು ಹೊಸದಾಗಿ ಹೇಳಬೇಕಾ.
ಪೈಕಿ => "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಸರಿಯೋ "ಕನ್ನಡಿಗರ ಪೈಕಿ ಭಾಷೆ ಕನ್ನಡ ಸರಿಯೋ?"
ನೋಡು ಮಾಧವ, ನೀನು, ನಾವು ಬಳಸುವ "ಪೈಕಿ" ಪದವನ್ನು ವಿಮರ್ಶೆ ಮಾಡಬೇಕಿದ್ದರೆ, ಕನ್ನಡದ ನೆಲೆಗಟ್ಟಿನಲ್ಲೆ ಹೇಗೆ ಬಳಸುತ್ತಿದ್ದೇವೋ ಅದರ ಮೂಲಕವೇ ಮಾಡಬೇಕು. "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಅಂತ ಯಾರೂ ಹೇಳೋದೇ ಇಲ್ಲ, ನಾವು ಹೇಳೋದು "ಕನ್ನಡಿಗರ ಭಾಷೆ ಕನ್ನಡ", ಇಲ್ಲಿ ಜನಾಂಗ ಎಂಬ ಪದವನ್ನು ನಾವು ಬಳಸೋದೇ ಇಲ್ಲ. ಹಾಗಾಗಿ, ಜನಾಂಗಕ್ಕೆ ಪೈಕಿ ಎನ್ನಬಹುದು ಅಂದಮಾತ್ರಕ್ಕೆ, ಮಕ್ಕಿಕಾಮಕ್ಕಿ "Find ಜನಾಂಗ and Replace ಪೈಕಿ" ಮಾಡಕ್ಕೆ ಬರಲ್ಲ. ಇನ್ನು, ಸರಿ ತಪ್ಪು ಪ್ರಶ್ನೆಯೇ ಇಲ್ಲ.
ಅಷ್ಟಾಗಿಯೂ, "ಮಹಾರಾಷ್ಟ್ರದವರು ಮರಾಠಿ ಪೈಕಿನವರು", "ಕನ್ನಡಿಗರು ಕರ್ನಾಟಕ ಪೈಕಿನವರು" ಎಂಬುದು ಸರಿಯಾದ ವಾಕ್ಯರಚನೆ.
ಇನ್ನು ಎರಡನೆಯದು,
>> "ನಿಮ್ಮ ಪೈಕಿ ಯಾರು ಮೊದಲು ಬಂದದ್ದು" ಎನ್ನ ಬಹುದು. ಹಾಗಾದರೆ "ನಿಮ್ಮ ಜನಾಂಗದಲ್ಲಿ ಯಾರು ಮೊದಲು ಬಂದದ್ದು"
ನೋಡು, ಮತ್ತೆ ನೀನು, ತಪ್ಪಲ್ಲದಿದ್ದರೂ, ಈ ಚರ್ಚೆಗೆ ಅನ್ವಯಿಸದ ಉದಾಹರಣೆ ಕೊಡ್ತಾ ಇದ್ದೀಯಾ!! ಎಲ್ಲಿ ಕನ್ನಡಿಗರು "ಪೈಕಿ" ಬಳಸುತ್ತಾರೋ ಅಲ್ಲೆಲ್ಲ ಸುಮ್ಸುಮ್ನೆ ಸಂಸ್ಕೃತದ "ಜನಾಂಗ" ಬಳಸಕ್ಕೆ ಆಗಲ್ಲ. ಮಕ್ಕಿಕಾಮಕ್ಕಿ ಟ್ರಾನ್ಸಲೇಟ್ ಮಾಡೋದು ತರವಲ್ಲ. ವಾಕ್ಯದ ಪೂರ್ಣ ರಚನೆ ನೋಡಿ, ಪೈಕಿ = ಜನಾಂಗವೋ, ಕಂಪಾರಿಸನ್ನಿಗೆ ಬಳಸ್ತಾ ಇರೋ ಸೀಮಿತ ಸೆಟ್ಟೋ, ಹೇಳಬಹುದು.
ಎಲ್ಲಿ ಸಂಸ್ಕೃತದ ಜನಾಂಗ ಬಳಸುತ್ತೀವೆಯೋ, ಅಲ್ಲಿ
೧. ಬಹುತೇಕ ವೇಳೆ ಪೈಕಿ ಬಳಸಿ ಸರಿಯಾದ, ಕ್ರಮಬದ್ಧವಾದ ಕನ್ನಡ ವಾಕ್ಯ ರಚನೆ ಮಾಡಬಹುದು. ಇಲ್ಲಾ,
೨. ಜನಾಂಗ ಪದವನ್ನೇ ಬಳಸದೆ ಇದ್ದರೂ ಅರ್ಥಲೋಪವಾಗುವುದಿಲ್ಲ.
ಆದರೆ ಎಲ್ಲಿ "ಪೈಕಿ" ಬಳಸುತ್ತೇವೆಯೋ ಅಲ್ಲೆಲ್ಲೆ ಮಕ್ಕಿಕಾಮಕ್ಕಿ ಸಂಸ್ಕೃತದ "ಜನಾಂಗ" ಬಳಸಕ್ಕೆ ಆಗಲ್ಲ. ಹಾಗಾಗಿ ಕನ್ನಡದ "ಪೈಕಿ" ಪದಕ್ಕೆ ಸಂಸ್ಕೃತದ ಜನಾಂಗಕ್ಕಿಂತ ಹೆಚ್ಚಿನ ವ್ಯಾಪ್ತಿ ಇದೆ ಎನ್ನಬಹುದು. ನಿನ್ನ ಪರಿಭಾಷೆಯಲ್ಲಿ ಹೇಳುವುದಾದರೆ, ಜನಾಂಗ subset, ಪೈಕಿ superset.
ಉದಾ:
೧. ಅವರು ಕನ್ನಡ ಜನಾಂಗದವರು = ಅವರು ಕನ್ನಡ ಪೈಕಿಯವರು / ಅವರದು ಕನ್ನಡದ ಪೈಕಿ. ಸರಿ.
೨.೧ ನಮ್ಮ ಪೈಕಿ ಒಬ್ರು ಡಾಕ್ಟರ್ ಆದ್ರು != ನಮ್ಮ ಜನಾಂಗದಲ್ಲಿ ಒಬ್ರು ಡಾಕ್ಟರ್ ಆದ್ರು. ತಪ್ಪು.
೨.೨ ನಮ್ಮ ಪೈಕಿ ಒಬ್ರು ಡಾಕ್ಟರ್ ಆದ್ರು = ನಮ್ಮ ಕುಟುಂಬದಲ್ಲಿ(ಅಥ್ವಾ, relatives, ಜಾತಿಯಲ್ಲಿ, ನಾಡಿನಲ್ಲಿ, ದೇಶದಲ್ಲಿ) ಒಬ್ರು ಡಾಕ್ಟರ್ ಆದ್ರು. ಸರಿ. ನಮ್ಮ ಪೈಕಿ ಒಬ್ರು ದೇಶದ ಪ್ರಧಾನಮಂತ್ರಿ ಆದ್ರು = ನಮ್ಮ ರಾಜ್ಯದ ಒಬ್ಬರು ಪ್ರಧಾನ ಮಂತ್ರಿ ಆದ್ರು.
೩ ನಿಮ್ಮದು ಯಾವ ಪೈಕಿ = This could mean, "ನಿಮ್ಮದು ಯಾವ ಜಾತಿ", "ಯಾವ ಒಳಪಂಗಡ", "ಯಾವ ರಾಜ್ಯ", "ನಿಮ್ಮ ಮಾತೃಭಾಷೆ ಯಾವುದು" ? ಇದು ಹೆಚ್ಚಾಗಿ ವಧು-ವರಾನ್ವೇಷಣಾ ಕೇಂದ್ರದಲ್ಲಿ ಬಳಕೆಯಾಗತ್ತೆ.
ಸಂಸ್ಕೃತದಲ್ಲಿಯೂ ಈ ರೀತಿಯ ಪದಗಳಿವೆ. "ನಡುವೆ ಅಂತರವಿರಲಿ", "ಅಲ್ಲಿ ಹರಿಯುವುದು ಅಂತರಗಂಗೆ".
ಉ: ಭಾಷೆ ಮತ್ತು ನದಿ
rush- ನುಗ್ಗು (ಕ್ರಿಯಾಪದ)
ನೂಕುನುಗ್ಗಲು ( ಕ್ರಿಯಾಪದವಲ್ಲದ್ದು ! - ನನಗೆ ವ್ಯಾಕರಣ ಗೊತ್ತಿಲ್ಲ - ಮನ್ನಿಸಿ)
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"