ಒಳ್ಳೆಯತನ
ತಾನು ಎಂದೂ ಒಳ್ಳೆಯವನು, ಎಂದು ಪೂರ್‍ತಿ ಭ್ರಾಂತಿಯಲ್ಲಿರುವ ವ್ಯಕ್ತಿಯು ತಾನು ಮಾಡಿದ್ದೆಲ್ಲ ಹೇಳಿದ್ದೆಲ್ಲ ಒಳ್ಳೆಯದು ಎಂದೇ ಅಂದುಕೊಳ್ಳುವನು. ಅವನಿಗೆ ಅದರ ದಿಟದ ಒಳ್ಳೆತನ ಬೇಕಿಲ್ಲ. ಅವನಿಗೆ ಬೇಕಿರುವುದು ಬೇರೆಯವರು ಅವನನ್ನು ಒಳ್ಳೆಯವನು ಎಂದು ಗುರುತಿಸುವುದು. ಅದಕ್ಕಾಗೇ ಹೆಚ್ಚಿನವರು ಹೇಳುವ ಒಳ್ಳೆಯದಕ್ಕೆ ಅಂಟಿಕೊಂಡು, ಕನಿಕರ ಹುಟ್ಟಿಸಿಕೊಳ್ಳುವ, ಒಳ್ಳೆಯವನು ಎಂದು ಹೆಚ್ಚು ಮಂದಿಯ ಬೆಂಬಲ ಪಡಿಯುವ ಸರ್‍ವತಂತ್ರವನ್ನು ಬಳಸುವನು. ಏಕೆಂದರೆ ಆತನಿಗೆ ತಾನು ಒಳ್ಳೆಯವನು ಎಂದು ಗುರುತಿಸುವಿಕೆ ಮುಖ್ಯ.
ಈ ಗುರುತಿಸುವಿಕೆಗಾಗೇ ತನ್ನ ವೇಷ, ನುಡಿ, ನಡೆ, ಯೋಚನೆ ಮುಂತಾದವುಗಳನ್ನು ಒಳ್ಳೆಯದು ಎಂದು ಗುರುತಿಸಿಕೊಳ್ಳಲು ಶ್ರಮಪಡುವನು. ಅವನ ಗಮನ ದಿಟವಾದ ಒಳ್ಳೆಯತನಕ್ಕಿಂತ ಒಳ್ಳೆಯದು ಎಂದು ಗುರುತಿಸುವಿಕೆಯಲ್ಲಿ, ಲೇಬಲ್ಲು ಅಂಟಿಸಿಕೊಳ್ಳುವುದರಲ್ಲಿ ಇರುವುದು. ಇಂತಹವನು ಮೊದಲು ತಾನು ಎಷ್ಟು ಒಳ್ಳೆಯವರು ಎಂದು ತೋರಿಸಿಕೊಳ್ಳಲು ತಮಗೆ ಅರಿವಿಲ್ಲದಂತೆ ತಮ್ಮ ಸದ್ಗುಣಗಳನ್ನು ಪಟ್ಟಿ ಮಾಡಿ ಹೇಳುವರು. ಬಳಿಕ ಕೆಟ್ಟದ್ದು ಎಂದು ಗುರುತಿಸಿರುವುದನ್ನು ವಿರೋಧಿಸುವ ಮೂಲಕ ತನ್ನನ್ನು ಮತ್ತೆ ಒಳ್ಳೆಯವನು ಎಂದು ಗುರುತಿಸಿಕೊಳ್ಳುವರು. ದಿಟವಾಗಿ ಅದರ ಕೆಟ್ಟತನವನ್ನು ಅವರ ವಿವೇಚನೆ ಹೆಚ್ಚು ಸರತಿ ಯೋಚಿಸಿಯೇ ಇರುವುದಿಲ್ಲ. ಹೆಚ್ಚಿನವರು ಮತ್ತೊಬ್ಬರು ಹೇಳಿದ ಒಳ್ಳೆಯದು ಕೆಟ್ಟದಕ್ಕೆ ಅಂಟಿಕೊಂಡಿರುವರು. ಇಲ್ಲದೇ ಹೋದಲ್ಲಿ ಒಳ್ಳೆಯದು ಮತ್ತು ಕೆಟ್ಟದನ್ನು ಉಲ್ಲೇಖಿಸಿರುವ ವ್ಯಕ್ತಿ, ಪುಸ್ತಕಗಳ ಉಲ್ಲೇಖಿಸುವ ’ಒಳ್ಳೆಯವರು’ ಕಡಮೆ ಇರುತ್ತಿದ್ದರು. ಶುಭನುಡಿಯುವ ಶಕುನದ ಗಿಳಿಗೆ ದಿಟವಾಗಲು ಅದು ನುಡಿಯುವ ಶಕುನ ಅರ್‍ಥವೇನಾದರು ತಿಳಿದಿರುವುದೇ? ಅದಕ್ಕೆ ಶುಭವೆಂದು ಉರುಹೊಡೆಸಿದ್ದನ್ನೇ ಪುನಃ ಪುನಃ ಹೇಳಿಕೊಂಡು ಒಳ್ಳೆಯ ಗಿಳಿಯಂದು ಗುರುತಿಸಿಕೊಳ್ಳುವುದು. ಪ್ರಿಯಶಿಷ್ಯ, ಪ್ರಿಯಮಿತ್ರ, ಪ್ರಿಯ ಯಾರು ಎಂದರೆ ಯಾರು ತನ್ನನ್ನು ಪ್ರಶ್ನಿಸುವುದಿಲ್ಲ. ತನ್ನ ತಾಳಕ್ಕೆ ಮೇಳವಾಗುವವರು ಅಷ್ಟೆ. ಹೆಚ್ಚಿನವರಿಗೆ ಒಳ್ಳೆಯದು ಎಂದು ತಿಳಿಸುವ ತನ್ನ ನೆಚ್ಚಿನ ಒಬ್ಬ ವ್ಯಕ್ತಿ, ಇಲ್ಲವೇ ಪುಸ್ತಕ ಒಬ್ಬ ಗುರು ಇದ್ದೇ ಇರುವದು. ಅಂದರೆ ಅಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆಯ ಆತನ ವಿವೇಚನೆ ಮತ್ತೊಬ್ಬರು ಹೇಳಿದ್ದು. ಅದರ ಪೂರ್‍ಣವಿವೇಚನೆಯನ್ನು ನಡೆಸದೇ ಒಪ್ಪಿರುತ್ತಾರೆ. ಮನಸ್ಸಿಗೆ ವಿವೇಚನೆ ಯೋಚನೆ ಇಷ್ಟವಾಗದ ಕೆಲಸ. ಅದಕ್ಕೆ ಭ್ರಾಂತಿಯೇ, ಅಮಲು, ಮತ್ತಿನಂತಹದ್ದೇ ಸುಖದಾಯಕ ಸ್ಥಿತಿ.
ಈ ಒಳ್ಳೆಯದು ಮತ್ತು ಕೆಟ್ಟದ್ದುಗಳ ನಡುವಣ ಜಗಳ ದಿಟದಲ್ಲಿ ನೋಡಿದರೆ ಒಳ್ಳೆಯದ್ದು ಮತ್ತು ಕೆಟ್ಟದ್ದುಗಳ ನಡುವಣ ಜಗಳವೇ ಇರುವುದಿಲ್ಲ. ಅಲ್ಲಿರುವುದು ಒಳ್ಳೆಯದು ಮತ್ತು ಕೆಟ್ಟದ್ದು ಎಂದು ಗುರುತಿಸುವಿಕೆಯಲ್ಲಿರುವ ಜಗಳ. ಒಳ್ಳೆಯದ್ದಕ್ಕಾಗಿ ಕೆಲಸ ಮಾಡುವವನೂ ಕೂಡ ಕೆಟ್ಟವನು ಎಂದು ಗುರುತಿಸಲ್ಪಡಬಹುದು. ಕೆಟ್ಟುದ್ದೇಶಕ್ಕೆ ಶ್ರಮಿಸುವವನನ್ನು ಸಮಾಜ ಒಳ್ಳೆಯದು ಎಂದು ಅವನ ನಟನೆಗೆ ಗುರುತಿಸಿ ಎಡುವಿದ ಸಾಕಷ್ಟು ಉದಾಹರಣೆಗಳಿವೆ.
ಎಲ್ಲಿಯ ವರೆಗೂ ಒಳಗೆ ತನ್ನನ್ನು ತಾನು ಒಳ್ಳೆಯವನು, ಸಾಧು, ಸಭ್ಯವೆಂದು ಸಂತೈಸಿಕೊಳ್ಳುವ, ಗುರುತಿಸಿಸಿಕೊಳ್ಳುವ ಆಕರ್‍ಷಣೆ, ಹಂಬಲ, ತೆವಲು ತನ್ನ ತಲೆಯಿಂದ ಹೋಗುವುದಿಲ್ಲವೋ ಅಲ್ಲಿಯ ವರೆಗೂ ದಿಟವಾದ ಒಳ್ಳೆಯದು ಕೆಟ್ಟದ್ದುಗಳ ಬಗ್ಗೆ ಗಮನ ಹರಿಯುವುದಿಲ್ಲ. ಸಮಯ ಪೂರ್‍ತಿ ಗುರುತಿಸುವಿಕೆಯಲ್ಲೇ ಗುರುತಿಸಿಕೊಳ್ಳುವಿಕೆಯಲ್ಲಿ ವ್ಯಯವಾಗಿ ಬಿಡುವುದು.
ಈ ಗುರುತಿಸಿಕೊಳ್ಳುವ ಭ್ರಾಂತಿಯನ್ನು ಮೀರುವುದು ಸುಲಭವಲ್ಲ. ಮೀರಿದವನು ಒಂದು ರಕ್ಷಣಾಕವಚವನ್ನು ತ್ಯಜಿಸಿದ ದುಃಖ ಅನುಭವಿಸಬೇಕು. ಆ ದುಃಖದ ಹಲವು ಮುಖಗಳಾಗಿ ಕ್ರೋಧ, ವಿಷಾದ, ಮತ್ಸರಾದಿಗಳು ಬರುವುವು. ಆದರೆ ಗುರುತಿಸಿಕೊಳ್ಳುವಿಕೆಯನ್ನು ಮೀರದೇ ಇದ್ದರೆ ದಿಟವನ್ನು ಬರಿಯ ಹುಸಿಗುರುತೋ ಇಲ್ಲವೇ ದಿಟದ ಸಾರವೋ ಎಂದು ತಿಳಿಯುವುದು ಹೇಗೆ. ಇದೇ ’ಕೆಟ್ಟ’ ಕುತೂಹಲ ಎಂಬುದು ಇರಬೇಕು.
ಜೀವನವೆಲ್ಲ ಗುರುತಿಸಿಕೊಳ್ಳವಿಕೆಯಲ್ಲಿ ವ್ಯಯಿಸಿ ’ಸಾರ್‍ಥಕ’ ಮಾಡಿಕೊಳ್ಳಬೇಕೆ? ಬಹುಶಃ ಒಳ್ಳೆಯವರು ಎಂದು ಗುರುತಿಸಿಕೊಳ್ಳುವವರ ಉತ್ತರ ’ಹು’
ಸಂಗತಿಗಳ ಒಳ್ಳೆಯದು ಕೆಟ್ಟದ್ದು ಎಂಬ ಗುರುತಿಸುವಿಕೆ ಅನಿವಾರ್‍ಯವೇ? ಬಹುಶಃ ಇದಕ್ಕೆ ಒಳ್ಳೆಯವರು ಎಂದು ಗುರುತಿಸಿಕೊಳ್ಳವವರು ಉತ್ತರ ಪುನಃ ’ಹು’
ಅಯ್ಯೋ.. ಇಲ್ಲಿ ಜ್ಞಾನಿಗಳೆಂಬ ಮೂರ್‍ಖರು ತಮ್ಮನ್ನು ಮೂರ್‍ಖಿಸಿಕೊಳ್ಳುವುದರ ಜತೆ ಬೇರೆಯವರನ್ನು ಆ ಮೂರ್‍ಖತನಕ್ಕೆ ಸೆಳೆದು ಬಿಟ್ಟಿದ್ದಾರೆ ಎಂದು ತಾನೊಬ್ಬನೇ ದಿಟದನ್ನರಿತ ಜ್ಞಾನಿ ಎಂದು ಯೋಚಿಸುವ ಜಾಣ ಮಾತಿನ ಮೂರ್‍ಖರು. ಮತ್ತೆ ಮತ್ತೊಂದು ಬಗೆಯ ಗುರುತಿಸುವಿಕೆ, ಗುರುತಿಸಿಕೊಳ್ಳುವಿಕೆ. ಇದನ್ನು ಬಿಟ್ಟು ಗುರುತಿಲ್ಲ ಎನಗೆ ಎಂದು ನಿರ್‍ಲಿಪ್ತ ಎಂದು ಹೇಳಿಕೊಂಡು ಗುರುತಿಸಿಕೊಳ್ಳುವವರು ಇದ್ದಾರೆ.
- mahesha's blog
- Login or register to post comments
- 505 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಒಳ್ಳೆಯತನ
ಜೀವನವೆಲ್ಲ ಗುರುತಿಸಿಕೊಳ್ಳವಿಕೆಯಲ್ಲಿ ವ್ಯಯಿಸಿ ’ಸಾರ್‍ಥಕ’ ಮಾಡಿಕೊಳ್ಳಬೇಕೆ?
ಯೋಚಿಸಬೇಕಾದ್ದೇ ಮಹೇಶ್,
ಜಗತ್ತಿನಲ್ಲಿ ಒಳ್ಳೆಯದು ಎನ್ನುವುದೂ ಇಲ್ಲ. ಕೆಟ್ಟದು ಎನ್ನುವುದೂ ಇಲ್ಲ. ನಿಮಗೆ ಒಳ್ಳೆಯದಾಗಿದ್ದುದು ನನಗೆ ಕೆಟ್ಟದಾಗಬಹುದು, ಹಾಗೆಯೇ ನನಗೂ ಅದೇ ಅನ್ವಯ. ಎಲ್ಲವನ್ನೂ ಮೀರಿನಿಲ್ಲುವುದು ಬಲುಕಷ್ಟ ಹುಲುಮಾನವರಿಗೆ.
ಹರಿಹರಪುರಶ್ರೀಧರ್
ಉ: ಒಳ್ಳೆಯತನ
"ಜಗತ್ತಿನಲ್ಲಿ ಒಳ್ಳೆಯದು ಎನ್ನುವುದೂ ಇಲ್ಲ. ಕೆಟ್ಟದು ಎನ್ನುವುದೂ ಇಲ್ಲ."
ಹೇಗೆ ನಿಶ್ಚಿತ? ನೀವೇ ತರ್‍ಕಿಸಿ ಅಂದುಕೊಂಡಿದ್ದೋ. ಬೇರೆಡೆ ಕೇಳಿದ ಪಾಠದ ಹೇಳಿಕೆಯೋ? ಬೇರೆಡೆ ಕೇಳಿದ್ದಾದರೆ ನೀವು ಅವರ/ಅದರ ಪರವಾಗಿ ಯಾಕೆ ಮಾತಾಡುತ್ತಿದ್ದೀರಿ? ಒಳ್ಳೆಯವರೆಂದು ಗುರುತಿಸಿಕೊಳ್ಳಲಿಕ್ಕ?
ನಿಮ್ಮ ತರ್‍ಕವಾದರೆ ಕಾರಣಗಳನ್ನು ನೀಡಿರಿ, ನನಗೆ ಅರ್‍ಥವಾಗುವುದು.
ಪ್ರಶ್ನೆಯಿಂದ ಬೇಸರಿಸಿಕೊಳ್ಳುವ ಮುನ್ನ ಹೇಳಿಬಿಡಿರಿ. ಸೂಕ್ಷಸ್ವಭಾವವೆಂದು ಸುಮ್ಮನಿರುತ್ತೀನಿ. ಬೇಸರವಾಗುವುದು ನಿಮಗೆ ಎಂದು ಮುನ್ನವೇ ಭ್ರಾಂತಿ ಪಟ್ಟುಕೊಂಡು ನಿಮ್ಮ ಸಹ್ಯತೆಗೆ ಅವಮಾನ ಮಾಡಲಾರೆ.
ಕ್ಷಮೆ ಬೇಸರವಾಗಿದ್ದರೆ.
ಉ: ಒಳ್ಳೆಯತನ
ಮಹೇಶ್,
ತರ್ಕಕ್ಕೆ ಎಳೆದಿದ್ದೀರಿ. ಆದರೆ ನನಗೆ ತರ್ಕ ಮಾಡುವ ಸಾಮರ್ಥ್ಯವೂ ಇಲ್ಲ. ಮಾನಸಿಕತೆಯೂ ಇಲ್ಲ. ಆದರೂ.........
ನೀವು ನನ್ನ ಲೇಖನಗಳನ್ನು ನೋಡಿದರೆ ನಿಮಗೆ ಉತ್ತರ ಸಿಗುತ್ತೆ. ನನಗೆ ಯಾರಿಂದ ಏನೂ ಆಗ ಬೇಕಿಲ್ಲ. ಒಂದು ಬಡತನದ ಮನೆಯಲ್ಲಿ ಹುಟ್ಟಿದ ನನಗೆ ಐವತ್ತೈದು ವರ್ಷ ವಯಸ್ಸಲ್ಲಿ ಐವತ್ತು ವರ್ಷ ಕಹಿಯನ್ನೇ ಉಂಡು ಅಭ್ಯಾಸ ವಾಗಿಬಿಟ್ಟಿದೆ.ನನ್ನನ್ನು ಜನರು ಹೊಗಳುವುದಕ್ಕಿಂತಲೂ ತೆಗಳಿರುವುದೇ ಹೆಚ್ಚು. ಮನಸಿಗೆ ಅಹಿತ ವಾದಾಗ ಆ ವಿಷಯಕ್ಕೆ ಪೂರ್ಣ ವಿರಾಮ ಹಾಕುತ್ತೀನಷ್ಟೇ.ನನ್ನ ಸ್ವಭಾವಕ್ಕೂ ನಿಮ್ಮ ಸ್ವಭಾವಕ್ಕೂ ಬಹಳ ವೆತ್ಯಾಸವಿದೆ. ನೀವು ಗಟ್ಟಿಗರು. ತರ್ಕದಲ್ಲಿ ಸಂತೋಷ ಕಾಣುವವರು. ನನಗೆ ನಿಮ್ಮಷ್ಟು ಬುದ್ಢಿಯೂ ಇಲ್ಲ. ಗಟ್ಟಿತನ ಮೊದಲೇ ಇಲ್ಲ. ನನಗೆ ಸರಿ ಅನ್ನಿಸಿದ್ದು ನಿಮಗೆ ಸರಿಯಾಗಿರ ಬೇಕಿಲ್ಲ. ಆದರೆ ನನ್ನ ಸ್ವಭಾವಕ್ಕೆ ನನ್ನ ಕವನದ ಒಂದು ಸಾಲು ನನ್ನ ಮಾನಸಿಕತೆಗೆ ದ್ಯೋತಕ.
ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ
ನಾನೆ ಧನ್ಯನು
ನನ್ನ ಕವನ ಧನ್ಯವು|
ಸಂಕ್ರಾಂತಿಯ ಶುಭಾಷಯಗಳು.
ಹರಿಹರಪುರಶ್ರೀಧರ್
ಉ: ಒಳ್ಳೆಯತನ
ತರ್ಕದಲ್ಲಿ ಸಂತೋಷ ಕಾಣುವವರು. ತಪ್ಪು. ತರ್‍ಕದಲ್ಲಿ ಸಂತೋಷವಿಲ್ಲ. ಪ್ರಶ್ನಾತೀತ ಶರಣಾಗತಿಯಲ್ಲೇ ನೆಮ್ಮದಿಯಿರುವುದು. ಅಲ್ಲವೇ?
ತರ್‍ಕದಲ್ಲಿ ಸಂಶಯದ ಸಂಕಟ, ಅಲ್ಲವೇ?
ಸಂಕ್ರಾಂತಿಯ ಶುಭಾಶಯ ನೀವು ಯಾಕೆ ಹೇಳಿದ್ದು, ಅದಕ್ಕೆ ನಾನು ನನ್ನಿ ಯಾಕೆ ಹೇಳಬೇಕು?
ನಿಮಗೆ ಸಭ್ಯತೆಯಲ್ಲಿ ನಂಬಿಕೆ ಇದೆ. ಅದನ್ನು ನೋಯಿಸುವುದಿಲ್ಲ. ನಿಮ್ಮ ಶುಭಾಶಯಕ್ಕೆ ನನ್ನ ಪ್ರತಿಧನ್ಯವಾದ.
ಉ: ಒಳ್ಳೆಯತನ
ಶ್ರೀಧರ್ ಸರ್,
ಮಾಯ್ಸಣ್ಣ ಹಾಗೂ ನನ್ನಂಥ ಕೆಲವರಿಗೆ ತರ್ಕವೇ ಬಹುಮುಖ್ಯವಾಗುತ್ತದೆ. ಹಲವು ಸಲ ನನ್ನಂತಯೇ ಅವರೂ ತಮ್ಮ ಬುದ್ಧಿವಂತಿಕೆಯ ಹಮ್ಮಿನಲ್ಲಿ ಭಾರಿ ತರ್ಕಕ್ಕೆ ಕೂರುತ್ತೇವೆ.
ಬೇಸರ ಪಟ್ಟುಕೊಳ್ಳಬೇಡಿ. ನಮ್ಮ ವರ್ತನೆ ಅಸಮಧಾನ ಉಂಟು ಮಾಡಿದರೆ ಸುಮ್ಮನೆ ಇಗ್ನೋರ್ ಮಾಡಿಬಿಡಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...