July 15, 2007 - 5:29am
ನಿಂಬೆ ಹಣ್ಣಿಗೆ ಮುಕ್ತಿ
ನನ್ನ ಅಡುಗೆ ಮನೆಯಲ್ಲಿ ಒಂದು ನಿಂಬೆ ಹಣ್ಣು ಬಿದ್ದುಕೊಂಡಿತ್ತು. ಅದನ್ನು ಯಾವೊತ್ತು ತಂದೆ, ಏನು ಎತ್ತ ನೆನೆಪಿಲ್ಲ ನನಗೆ. ಏನು ಒಂದು ವಾರ, ಒಂದುವರೆ ವಾರದ ಹಿಂದೆ ಸುಮ್ಮನೆ ನಮ್ಮ ಮನೆ ಹತ್ತಿರದ ಅಗ್ಗದ ಅಂಗಡಿ ’ಸುಭಿಕ್ಷಾ’ದಿಂದ ಯಾವುದೋ ಹಣ್ಣಿನ ಜೊತೆ ಇದು ಮನೆಗೆ ಬಂದಿರಬಹುದು. ಇದರ ಜೊತೆ ಇನ್ನು ಕೆಲವು ನಿಂಬೆಹಣ್ಣುಗಳೂ ಬಂದಿರಬಹುದು. ಆದರೆ ಅದು ಹೇಗೋ ಇದೊಂದೇ ಉಳಿದು ಬಿಟ್ಟಿತ್ತು.
ಇಲ್ಲಿ ನನಗೂ ಅಡುಗೆಗೂ ಇರುವ ನಂಟಿನ ಗಂಟನ್ನು ಮುದಲಲ್ಲೇ ಈಗಲೇ ಬಿಡಿಸಿ ಬಿಟ್ಟರೆ ಲೇಸು. ನಾನು ಮದುವೆಯಾಗದ ಹುಡುಗನು, ಸ್ವಯಂಪಾಕವೃತವನ್ನು ನಿಷ್ಠೆಯಿಂದ, ’ತಪ್ಪದೇ’ ಅನ್ನುವಂತೆ ಅಲ್ಲದಿದ್ದರೂ, ವಾರದಲ್ಲಿ ಕಡಮೆ ಅಂದರೂ ನಾಲ್ಕೈದು ದಿನ ನಾನೇ, ಅಡುಗೆ ಮಾಡುಂಡು ಇರುವವನು. ಆದರೆ ಕಳೆದ ವಾರವೇಕೋ ಬಲು ಮನಸ್ಸಿಕ್ಕೆ ಗೋಜಲುಗಳು ಹತ್ತಿಕೊಂಡು ಬಿಟ್ಟಿದ್ದವು. ಬರೀ ಹೋಟೆಲೂಟವೇ ನಡೆದುದು. ಅದಕ್ಕೆ ಇರಬೇಕು, ತಂದ ನಿಂಬೇ ಹಣ್ಣು ಹಾಗೆ ಬಿದ್ದುಕೊಂಡಿತ್ತು.
ಈ ಹಾಳು ಹುಳಿ ನಿಂಬೆ, ದರಿದ್ರ ಮುಂಡೇದು, ಅದೇನೋ ರೋಗ ಇದಕ್ಕೆ! .......ಏನಾಯ್ತಪ್ಪ ಇವನಿಗೆ ಇದ್ದಕ್ಕಿದ್ದಂತೆ ಹೀಗಾಡಕ್ಕೆ ಶುರು ಮಾಡಿದ, ಅಂತ ಅಂದುಕೋತಿದ್ದೀರ? ಸೊಲ್ಪ ಇರಿ. ಇನ್ನು ಆ ಹಾಳು ಮುಂಡೇದನ್ನ ಬೈದು ತೀರಿಲ್ಲ. :). ಈ ಒಂದು ನಿಂಬೆ ನನ್ನನ್ನು ಏಷ್ಟು ಕಾಡಿಸಿದೆ ಗೊತ್ತಾ? ಒಂದು ವಾರದಿಂದ ನಾನು ನನ್ನ, ನಾನು ಬಾಡಿಗೆ ಕಟ್ಟುವ ಮನೆಯ ಅಡುಗೆ ಮನೆಯನ್ನು ಹೊಕ್ಕಾಗಲೆಲ್ಲ, ನನ್ನ ಕಣ್ಣಿಗೆ ಬಿದ್ದೇ ಬೀಳಬೇಕು. ನನಗೆ ಮೊದಲೇ ಅಡುಗೆ ಮಾಡಲು ಒಲ್ಲದ ಮನಸ್ಸು. ತೂ ದರಿದ್ರ ಹುಳಿ ನಿಂಬೆ, ನಿನ್ನ ಜೊತೆ ಮನೆಗೆ ಬಂದಿದ್ದ ಬಾಳೆಹಣ್ಣು, ದಾಳಂಬ್ರಿಗಳೆಲ್ಲಾ ತೀರಿದರೂ, ನೀನು ಇನ್ನು ಇದ್ದೀಯ.! ನಿನ್ನ ಜನುಮಕ್ಕಿಷ್ಟು! ಎಂದು ಮನಸ್ಸಲ್ಲೇ ಗೊಣಗಿ, ಸುಮ್ಮನಾಗುತ್ತಿದೆ.
ಆದರೆ ಇಂದು ಅದು ಮತ್ತೆ ಕಣ್ಣಿಗೆ ಬಿದ್ದು, "ನಾನು ಬಾಡಿ ಹೋಗುತ್ತಿದ್ದೇನೆ" ಎಂದು ಅಂಗಲಾಚಿತು. ನನಗೆ ಇದಕ್ಕೊಂದು ಗತಿ ಕಾಣಿಸಲೇ ಬೇಕು ಎಂದು ಮನೆಯಲ್ಲಿ ಅಕ್ಕಿಯಿರದಿರುವ ಕಡೆ ನನ್ನ ಗಮನ ಹರಿಸಿ, ಹೋಗಿ ಮತ್ತದೇ ’ಸುಭಿಕ್ಷಾ’ದಿಂದ ಅಕ್ಕಿ ತಂದೆ. ಹಾಗೆ ನೆಲಕಡಲೆಕಾಯೆಣ್ಣೆಯೂ ಬಂತು.
ಸರಿ, ನಮ್ಮ ಪಾಕ-ರಸಾಯನಶಾಸ್ತ್ರದಲ್ಲೇ ಸುಪ್ರಸಿದ್ಧವಾದ "ನಿಂಬೆ ಚಿತ್ರಾನ್ನ"ವೆಂಬ ’ವ್ಯಂಜನ’ಸಂಧಿಯನ್ನು ರಚಿಸಲು ಅಣಿಯಾದೆ. ಅರೆರೆ!! ತಕ್ಕ ಸರಕು ಮನೆಯಲ್ಲೇ ಇದೆ. ಒಗ್ಗರಣೆಗೆ ಕಡಲೇಕಾಯೆಣ್ಣೆ, ಬೇಳೆ, ಸಾಸಿವೆ, ಒಣಮೆಣಸಿನಕಾಯಿ, ಒಣನೆಲಕಡಲೇಕಾಯಿ(ಶೇಂಗ). ಸಾಕು ಸಾಕು. ಎರಡುಹೊತ್ತಿಗೆ ಆಗುವಷ್ಟು ಚಿತ್ರಾನ್ನ ಮಾಡಿ ಬಿಡಬಹುದು.
ಅನ್ನಕ್ಕೆ ಇಟ್ಟು, ಟೀವಿ ನೋಡಲು ಕೂತೆ. ಅನ್ನವಾಯಿತು.! ಸರಿ ಇನ್ನು ದಿಟವಾದ ಅಡುಗೆ ಶುರು. ಬಾಂಡಲಿಗೆ ಎಣ್ಣೆ ಹುಯ್ದೆ, ನನ್ನ ಅಡುಗೆಯಲ್ಲಿ ತುಸು ಎಣ್ಣೆ ಎಗ್ಗಳ! ಎಣ್ಣೆ ಕಾದಿದ ಬಳಿಕ ಬೇಳೆ ಹಾಕಿದೆ, ಬಳಿಕ ಸಾಸಿವೆ ಹಾಕಿ ಸಿಡಿಸಿದೆ, ತರುವಾಯಂತೆ ಒಣಮೆಣಸಿನಕಾಯಿಯನ್ನೂ ಹರಿದು ಹಾಕಿ, ತಕ್ಕ ಉಪ್ಪು ಬೆರೆಸಿ ಹುರಿದೆ. ಪಾಕಶಾಸ್ತ್ರನಿಪುಣ/ನಿಪುಣೆಯರು ಅಡುಗೆಯ ಕಲಿಗಳು ಇದನ್ನು ಓದಿ ನಗಬಹುದು. ಆದರೆ ಇದು ನಾನೇ ಸ್ವಂತವಾಗಿ ಕಂಡುಹಿಡಿದಿರುವ recipe. Patent ಅರ್ಜಿ ಸಲ್ಲಿಸುವ ದೊಡ್ಡುಂಕೂ/ಮಹದಾಲೋಚನೆಯೂ ಇದೆ :).
ಅಯ್ಯೋ ಮಾತು ಎಲ್ಲೆಲ್ಲಿಗೋ ಹಾಯಿತು. ಈಗ ನಿಂಬೆ ಹಣ್ಣನ್ನು ಕುಯ್ದು, ಎರಡು ಪಕ್ಕಳ ಮಾಡಿ, ಬಿತ್ತಗಳ ತಗೆದು, ಬಾಂಡಲಿಗೆ ಒಂದಾದ ಮೇಲೊಂದು ಪಕ್ಕಳವನ್ನು ಹಿಂಡಿದೆ. ನಿಂಬೇ ಹಣ್ಣ ಹೋಳು, ನೋವಾದಂತೆ ನಾಲ್ಕು ಹನಿ ಹುಳಿಯನ್ನು ಅತ್ತಿತು. ಹಿಂಡಿ ಶೋಷಣೆಗೆ ಒಳಗಾದ, ಶೋಷಣೆ ಅಂದ್ರೆ "ಬತ್ತಿ ಹೋಗುವುದು", "ಸತ್ವಹೀರಿ ಬಿಸಾಕುವುದು" ಹೀಗೆ. ಸರಿ, ಆ ನಿಂಬೆ ಸಿಪ್ಪೆಗಳನ್ನು ಪಕ್ಕಕ್ಕೆ ಬಿಸುಟು, ಬಾಂಡಲಿಯ ಕಡೆ ನಿಗಾ ಹಚ್ಚಿಸಿದೆ. ಒಗ್ಗರಣೆಯನ್ನು ತುಸು ಹುರಿದು, ಅನ್ನ ಬೆರೆಸಿ, ಕಲಸಿ, ಹುರಿದು, ಉಪ್ಪು ಸಾಕಾ? ನೋಡಿ ಅಡುಗೆ ಮುಗಿಸಿದೆ. ಇನ್ನು ಏತಕ್ಕೆ ತಡ. ಹಾಗೆ ಒಂದು ತಟ್ಟೆಗೆ ಬಡಿಸಿಕೊಂಡು, ಹಚ್ಚಿದ್ದ ಟೀವಿ ಮುಂದೇ, ಚಕ್ಕಲಮಕ್ಕಲ ಕೂತು, ಹುಳಿಹುಳಿಯಾದ ಚಿತ್ರಾನ್ನ ತಿಂದು ಮುಗಿಸಿದೆ. ಏನು ಆನಂದ, ಬ್ರಹ್ಮಾನಂದ! ಅದೇನೋ ಆನಂದವೇ ಬ್ರಹ್ಮವೂ ಅಂತೆ, ಅದಕ್ಕೆ ನನಗೆ ಆನಂದವಾಯಿತು ಎಂದರೆ ನನಗೆ ಬ್ರಹ್ಮವಾಯಿತು ಎಂದೂ ಆಗುವುದು. :)
ಇಷ್ಟೆಲ್ಲ ಮುಗಿದ ಮೇಲೆ ಪಾತ್ರ ತೊಳೆಯುವುದೆಂಬ ತಲೆನೋವು ಎದುರಾಯಿತು. ಆದರೂ ಮಾಡಲೇ ಬೇಕಲ್ಲ, ಪಾತ್ರ ತೊಳೆದು, ಒಲೆಯೊರಸಿ ಮುಗಿದ ಮೇಲೆ, ಅಲ್ಲೇ ಬಿದ್ದಿದ ದಲಿತ ನಿಂಬೇ ಸಿಪ್ಪಿಗಳನ್ನ, ( ಅಯ್ಯೋ ಮಾರಾಯ್ರೆ ದಲಿತ ಅಂದ್ರೆ ಜಜ್ಜಿ ಹೋದ, ಅಜ್ಜಂಬಜ್ಜಿಯಾದ ) ತಂದು ಮೂಲೆಯ ಕಸದ ಬುಟ್ಟಿಗೆ ಬಿಸಾಕಿದೆ. ಆಗ ಈ ನಿಂಬೆ ಹೀಗೆ ಹೇಳಿತು.
"ಅಯ್ಯಾ!! ನಾನೇನು ಸೇಬೇ, ಮಾವೇ, ಬಾಳೆಯೇ, ದಾಳಿಂಬ್ರಿಯೇ. ನನ್ನಂತಹ ಕೀಳ್ಗಾಯಿಯಾದ ಹುಳಿ ನಿಂಬೆಯನ್ನು ನಿನ್ನ ವೈಶ್ವಾನರಾಗ್ನಿಯ ದಿವ್ಯಸಾನಿಧ್ಯದ ಪುಣ್ಯಪ್ರಾಪ್ತಿ ಮಾಡಿಸಿ, ನನಗೆ ಸದ್ಗತಿಯ ಮುಕ್ತಿಮಾರ್ಗವನ್ನು ದಯಪಾಲಿಸಿದೆ. ನಿನಗೆ ಅನಂತ ವಂದನೆಗಳು" ಎಂದು ಹೇಳಿತು.
ನನಗೆ ನಗು ಬಂತು. ಆದರೂ ಅದರ ಮುಂದೆ ತರಲೆ ಮಾತಾಡಿದರೆ, ಸಾಯುವ ಹೊತ್ತಿನಲ್ಲಿ ಬೇಸರಪಡುವುದೆಂದು, ಕಸದ ಬುಟ್ಟಿಗೆ ಮುಚ್ಚಳ ಹಾಕಿ ಬಂದು ಯೋಚಿಸಿದೆ.
"ಎಂತಹ ಮಂಕು ಮುಂಡೇದು ಈ ನಿಂಬೆ. ಇದಕ್ಕೆ ಎಲ್ಲಿಂದ ಬಂತು ಈ ಮುಕ್ತಿ, ಸದ್ದತಿಯ ಭ್ರಾಂತು!
"ತ್ರ್‍ಯಂಬಕಂ ಯಜಾಮಹೇ ಸುಗಂಧೀಂ ಪುಷ್ಠಿವರ್ದನಂ
ಉರ್ವಾರುಕಮಿವ ಬಂಧಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್"
ಅಂದರೆ ನಾನು ತ್ರ್‍ಯಂಬಕನ್ನು ಯಜಿಸುವೆನು. ಅವನು ನಲ್ಗಂಪಿನವನೂ, ಪುಷ್ಠಿವರ್ದನನೂ ಆಗಿದ್ದಾನೆ. ಅವನು ಕಳಿತ ಸೌತೇಕಾಯಿ(ಕೊಳೆತ ಅಲ್ಲ :) ) ತನ್ನ ಬಳ್ಳಿ-ತೊಟ್ಟಿನಿಂದ ಹೇಗೆ ಬಿಡಿಸಿಕೊಳ್ಳುವುದೋ, ಹಾಗೆ ನಮ್ಮನ್ನು ಈ ಬಂಧನ/ಸೆರೆಯಿಂದ ಬಿಡಿಸು, ಅಮರ್ದುವಿನಿಂದಲ್ಲ.
ಈ ಶ್ಲೋಕವನ್ನು ಹೇಳಿ ನಾವು, ನಮಗಿಂತ ದೊಡ್ಡದೊಂದು ಶಕ್ತಿಯಿದೆ, ಅದೂ ನಮ್ಮನ್ನು ಉದ್ಧಾರ ಮಾಡುವುದು ಎಂದು ಬೇಡಿಕೊಳ್ಳುವಂತೆ, ಈ ನಿಂಬೆ ನನ್ನನ್ನು ಬೇಡಿಕೊಂಡಿತು. ಇದಕ್ಕೇನು ಗೊತ್ತು ನಾನು ಇದಕ್ಕೆ ಮಾಡಿದ್ದು ಏನು ಎಂದು.
ನನ್ನ ಹಸಿವು, ಇದು ಯಾವ ವೈಶ್ವಾನರನೂ ಅಲ್ಲ. ನನ್ನ ಹಸಿವು ತೀರಿಸುವ ಸಲುವಾಗಿ ಅದನ್ನು ಬಳಸಿ ಬಿಸಾಡಿದ್ದು. ಅದು ನನ್ನ ಹೊಟ್ಟೆ ಹೋದಮೇಲೆ, ಅದಕ್ಕೆ ಇನ್ನೂ ದೊಡ್ಡ ದುರ್ಗತಿ ಕಾದಿದೆ ಎಂದು ಅದಕ್ಕೆ ಅರಿವೇ ಇಲ್ಲ. :) ಮಂಕು ಮುಂಡೇದು. ಅದೂ ಅಲ್ಲದೇ ಅದು ಏನು ಪುಕ್ಸಟ್ಟೆ/ಬಿಟ್ಟಿ ಬಂದಿದ್ದೇ, ಅದಕ್ಕೆ ಒಂದು ರುಪಾಯಿ ತೆತ್ತಿಲ್ಲವೇ ನಾನು :)"
ಒಟ್ಟಿನಲ್ಲಿ ಆ ನಿಂಬೆಗೆ ಮುಕ್ತಿ ಸಿಕ್ಕಿತೋ ಇಲ್ವೋ, ನನ್ನ ಹೊಟ್ಟೆ ತುಂಬಿತು ಅಷ್ಟು ಸಾಕು!! :)
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ
ಉ: ನಿಂಬೆ ಹಣ್ಣಿಗೆ ಮುಕ್ತಿ