ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಮಂಗಳೂರು ಯುನಿವರಿಸಿಟಿಯಲ್ಲಿ ಬಿ.ಎ, ಬಿ.ಎಸ್ಸಿ ಮಂದಿಗೆ ಕನ್ನಡ, ಕನ್ನಡದೇನು ಬಂತು, ನಮ್ಮ ಇಂಡಿಯ ದೇಶದ ಸಕ್ಕತ್ ಹೆಸರುವಾಸಿಯಾದ ’ಸಂಸ್ಕಾರ’ ಕಾದಂಬರಿಯ ಹಿಂದಿ ಅನುವಾದವನ್ನು ಓದಲು ನಾನ್-ಡೀಟಯ್ಲ್ ಆಗಿ ಇಟ್ಟಿದಕ್ಕೆ ಲಚರ್ರಗಳು ಮುಜುಗರಗೊಂಡಿದ್ದಾರಂತೆ.
ಅವರು ಕೊಟ್ಟಿರುವ ಓಸುಗರವೆಂದರೆ ’ಸಂಸ್ಕಾರದಲ್ಲಿ ಅಶ್ಲೀಲವಿದೆ’ ಎಂಬುದು. ಸಂಸ್ಕಾರ ಓದಿರುವ ನನಗಂತೂ ಅದರಲ್ಲಿ ಅಂತದ್ದು ಕಂಡಿಲ್ಲ.
http://kannadaprabha.com/NewsItems.asp?ID=KP420080216051546&Title=Saptha...
http://kannadaprabha.com/NewsItems.asp?ID=KP420080216051829&Title=Saptha...
ಕನ್ನಡಪ್ರಭದಲ್ಲಿ ಈ ಕುರಿತು ಒಂದು ಬರಹ ಬಂದಿದೆ ಓದಿ..
ಅವರು ಹೇಳುವಂತೇ ಕಾಳಿದಾಸನ ದುಶ್ಯಂತನ ಕಣ್ಣು ಬರೀ ಶಕುಂತಲೆಯ ಸ್ತನವೇಪಥು( ಮೊಲೆಯ ಅದರುವಿಕೆ ) ನೋಡಿ, ಅದರ ಬಗ್ಗೆ ಮೂರು ಮೂರು ಕಂದಪದ್ಯ ಹಾಡಿದರೆ, ಅಶ್ಲೀಲವಲ್ಲ..
ಅದೇ ದಿಟವಾಗಲೂ ಅಂತ ಉನ್ಮಾದ ಬಾವದಿಂದ ಇರದ ಸಾಲುಗಳಿರುವ ಸಂಸ್ಕಾರ ಅಶ್ಲೀಲ..!!
ಸಂಸ್ಕಾರದ ದೊಡ್ದತನದ ಬಗ್ಗೆ ಅಲ್ಲೇ ಬೇಕಾದಶ್ಟು ಅರಿಮೆ ಇದೆ.! ಬರೀ ಕನ್ನಡದ ಸಂಗತಿಯಲ್ಲೇ ಮಡಿ! ![]()

- mahesha ರವರ ಬ್ಲಾಗ್
- Login or register to post comments
- 681 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
'ಸಂಸ್ಕಾರ' ಅಶ್ಲೀಲವಾಗಿದೆ ಎಂದು ಯಾರೂ ಹೇಳಲಿಲ್ಲ. ಅದರ ಹಿನ್ದಿ ಅನುವಾದ ಕಾಲೇಜಿನಲ್ಲಿ 'ನಾನ್-ಡೀಟೈಲ್ಡ್' ಪಠ್ಯವಾಗುವಾಗ ಎಲ್ಲ ಭಾಗಗಳನ್ನೂ ಶಿಕ್ಷಕರು ಕಲಿಸಬೇಕಾಗುತ್ತದೆ. ಅಶ್ಲೀಲ ಯಾವುದು, ಶೃಙ್ಗಾರ ಯಾವುದು ಎಂಬುದು ವ್ಯಕ್ತಿಯೊಬ್ಬನಿಗೆ ಬಿಟ್ಟದ್ದು ಎನ್ನಬಹುದಾದರೂ ಅವುಗಳನು ಪಾಠಮಾಡುವುದು ಸರಿಯಲ್ಲವೆನ್ದೇ ನನ್ನ ಭಾವನೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಸಂಸ್ಕಾರದಲ್ಲಿ ಇರುವುದು ಕೆಲವು ಪ್ಯಾರಾಗ್ರಾಫ್ ಗಳ ಶೃಂಗಾರ, ಪಂಪನ ಆದಿಪುರಾಣದಲ್ಲಿ ಇರುವ ಶೃಂಗಾರವೆಷ್ಟು? ಅದನ್ನು ಕಲಿಸುವುದು ಬೇಡ ಎಂದರೆ ಹೇಗಿರುತ್ತದೆ. ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಉತ್ತಮ. ಎರಡನೇ ವರ್ಷದ ಪದವಿಯ ಮಕ್ಕಳಿಗೆ ಪಾಠ ಮಾಡುವುದು ಹೇಗೇ ಎಂದು ಅವರಿಗೆ ಗೊತ್ತಿಲ್ಲ. ಅವರೇನು ಕಾಂದಬರಿಯನ್ನು ಇಟ್ಟುಕೊಂಡು ಓದಿ ಅರ್ಥ ಹೇಳುತ್ತಾರಾ?
ಎರಡನೇ ವರ್ಷದ ಪದವಿಯ ವಿದ್ಯಾರ್ಥಿಗಳೆಂದರೆ ಕನಿಷ್ಠ ಹದಿನೆಂಟು ಹತ್ತೊಂಬತ್ತು ವರ್ಷದವರು. ಈಗ ಮದುವೆಯ ವಯಸ್ಸನ್ನೇ ಹದಿನೆಂಟಕ್ಕೆ ನಿಗದಿ ಪಡಿಸಲಾಗಿದೆ ಎಂಬುದಾದರೂ ಅವರಿಗೆ ಗೊತ್ತಿದೆಯೋ ಇಲ್ಲವೋ? ಪುಸ್ತಕವನ್ನು ನಿಗದಿ ಪಡಿಸಿದಾಗ ಯಾವ ಮಾತೂ ಆಡದೇ ಇದ್ದವರು ವರ್ಷದ ಕೊನೆಯಲ್ಲಿ ಮಾತನಾಡುತ್ತಿದ್ದಾರೆ ಎಂದರೆ ಅವರು ಈವರೆಗೂ ಪುಸ್ತಕವನ್ನು ತೆರೆದೂ ನೋಡಿಲ್ಲ ಎಂಬುದು ಖಚಿತ. ಇಂಥ ಶಿಕ್ಷಕರಿಂದ ವಿದ್ಯಾರ್ಥಿಗಳ ಉದ್ಧಾರವಾದ ಹಾಗೆಯೇ. ಸಂಸ್ಕಾರ ಕಾದಂಬರಿ ಅಶ್ಲೀಲವಾಗಿದೆ ಎಂದು ಅದು ಪ್ರಕಟವಾಗಿ ನಲವತ್ತು ವರ್ಷವಾದ ಮೇಲೆ ಹಿಂದಿ ಅನುವಾದದಲ್ಲಿ ಓದಿ ಅದೂ ತಾವೇ ಪಾಠ ಮಾಡುವ ಪಠ್ಯವಾದ ಮೇಲೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಕಿರುಚಾಡುವ ಮಂದಿಗೆ ತಲೆ ಸರಿ ಇದೆ ಎಂದು ಭಾವಿಸಲು ಸಾಧ್ಯವೇ?
ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಕಲ್ಲರಳಿ ಹೂವಾಗಿ ಎಂಬ ನಾನ್ ಡೀಟೇಲ್ಡ್ ಪಠ್ಯವಿತ್ತು. ಅದರಲ್ಲೂ ಸಾಕಷ್ಟು ಶೃಂಗಾರದ ಅಂಶಗಳಿದ್ದವು. ಅದನ್ನು ಪಾಠ ಮಾಡಲಾಗುವುದಿಲ್ಲ ಎಂದು ಯಾವುದೇ ಹೈಸ್ಕೂಲ್ ಶಿಕ್ಷಕ ಹೇಳಿರಲಿಲ್ಲ. ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಾಠ ಮಾಡುವ ಅಧ್ಯಾಪಕರು ಈ ಹೈಸ್ಕೂಲ್ ಶಿಕ್ಷಕರಷ್ಟೂ ಬುದ್ಧಿ ಇಲ್ಲದವರೇ.
-ರಮೇಶ್ ಸಮಗಾರ
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಕಲ್ಲರಳಿ ಹೂವಾಗಿ ಒಂದು ಸುಂದರವಾದ ಕತೆ. ಅದರಲ್ಲಿ ಅಶ್ಲೀಲವೆನ್ನುವಂತಹ ಯಾವುದೆ ವಾಕ್ಯವಿಲ್ಲ ಹಾಗು ಶ್ರಂಗಾರ ಸನ್ನಿವೇಶಗಳನ್ನು ಅತಿ ನವಿರಾಗಿ ನಿರೂಪಿಸಿದ್ದಾರೆ.
ಹಾಗಾಗಿ ಸಂಸ್ಕಾರಕ್ಕೂ ಕಲ್ಲರಳಿ ಹೂವಾಗಿಗೂ ಹೋಲಿಕೆ ಸರಿಯಲ್ಲ ಎಂಬುದು ನನ್ನ ಅನಿಸಿಕೆ
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಆ ಕತೆಯನ್ನೇ ನಮ್ಮ ನಾಗಭರಣ ಸಿನಿಮಾ ಮಾಡಿರೋದಾ?
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಅಲ್ಲ. ಅದೇ ಬೇರೆ.
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ನಾಗಾಭರಣರ ಕಲ್ಲರಳಿ ಹೂವಾಗಿ, ಅವರ ಕಲ್ಪನೆಯ ’ಹೂವು’
ಇಲ್ಲಿ ಪ್ರಸ್ತಾಪಕ್ಕೆ ಬರುತ್ತಿರುವ ಕಥೆ, ಗೀತಾ ನಾಗಭೂಷಣ ಅವರದ್ದು
-ಹಂಸಾನಂದಿ
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಸಂಸ್ಕಾರದಲ್ಲಿ ಅಶ್ಲೀಲ ಪದಗಳು ಇದ್ದಾವೆಂದು ಕೇಳಿದ್ದೇನೆ. ಸಾವಿರಾರು ಉತ್ತಮ ಕಾದಂಬರಿಗಳಿದ್ದಾಗ್ಯೂ ಇದೇ ಕಾದಂಬರಿಯನ್ನೇ ಏಕೆ ಆಯ್ದುಕೊಂಡರು ಎಂದು ಕೇಳಬಹುದೇ?
ಕಾಳಿದಾಸನ ಮೇಘಸಂದೇಶವೇ ಇರಬಹುದು, ಸಂಸ್ಕಾರವೇ ಇರಬಹುದು, ಅಶ್ಲೀಲ ಪಠ್ಯಗಳನ್ನು ವಿದ್ಯಾರ್ಥಿಗಳಿಂದ ಓದಿಸುವುದು ತರವಲ್ಲ.
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಅನಂತಮೂರ್ತಿಯವರು ಅತ್ಯಂತ ಪ್ರಗತಿಪರರಾಗಿದ್ದೂ ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೇರವಾಗಿ ಸಂದೇಶ ಕೊಡಲು ಹೋಗದೇ ಕನ್ನಡಿ ತೋರಿದವರು. ಕ್ರಿಶ್ಚಿಯನ್ ಹೆಣ್ಣನ್ನು ಮದುವೆಯಾಗಿರುವುದರಿಂದ ತಮ್ಮ ಸಂಸ್ಕಾರ ಹೇಗಿದ್ದೀತು ಎಂಬುದರ ಸುಳಿವನ್ನು ಇಲ್ಲಿ ನೀಡಿದ್ದಾರೆಂದು ಕುಹಕಿಗಳು ಆಡಿಕೊಂಡರಂತೆ. ಪರ್ವ ಬರೆದ ಭೈರಪ್ಪ ಪರ್ವರ್ಟೆಡ್ ಭೈರಪ್ಪ ಎನ್ನಲಿಲ್ಲವೇ ಹಾಗೆ. ತಮ್ಮ ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಇಡೀ ವ್ಯವಸ್ಧೆಗೇ ಸಂಸ್ಕಾರ ಆಗಬೇಕಿದೆ ಎಂಬುದನ್ನು ಧ್ವನಿಸುತ್ತಾರೆ.
ಪ್ರಾಣೇಶಾಚಾರ್ಯ ಹಾಗೂ ನಾರಾಯಣಪ್ಪ ಈ ಕೃತಿಯಲ್ಲಿ ಎರಡು ಧೃವಗಳಾಗಿ ನಿಲ್ಲುತ್ತಾರೆ. ಪ್ರಾಣೇಶಾಚಾರ್ಯ ಧರ್ಮಭೀರು ಹಾಗೂ ಜನತೆಗೆ ಬುದ್ಧಿ ಹೇಳಬಲ್ಲ ಸಾತ್ವಿಕ. ಆದರೆ ನಾರಾಯಣಪ್ಪ ಎಲ್ಲ ಧರ್ಮಕಟ್ಟಲೆಗಳನ್ನು ಧಿಕ್ಕರಿಸಿ ಚಂದ್ರಿಯನ್ನು ಮಡಗಿಕೊಂಡ ಲಂಪಟ. ಪ್ರಾಣೇಶಾಚಾರ್ಯನ ಪುರಾಣಕ್ಕಿಂತಲೂ ಜನಗಳಿಗೆ ನಾರಾಯಣಪ್ಪನ ಕ್ಯಾಸೆಟ್ ಮೋಡಿಯೇ ಹುಚ್ಚು ಹಿಡಿಸುತ್ತದೆ. ಹೀಗೆ ನಾರಾಯಣಪ್ಪ ವಾಸ್ತವದ ಸಂಕೇತವಾಗುತ್ತಾನೆ.
ನಾರಾಯಣಪ್ಪ ಸತ್ತ ಮೇಲೆ ಚಂದ್ರಿ ಬಂದು ಆತನಿಗೆ ಸಂಸ್ಕಾರ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರಾಣೇಶಾಚಾರ್ಯ ಹಿಂಜರಿದರೂ ಕೊನೆಗೆ ಹಾಸಿಗೆ ಹಿಡಿದಿರುವ ತನ್ನ ಪತ್ನಿಗಾಗಿ ಚಂದ್ರಿಯ ನೆರವನ್ನು ಪಡೆಯಬೇಕಾಗುತ್ತದೆ. ಚಂದ್ರಿಯ ಸಂಗದಲ್ಲಿ ಆತ ನೆಲದ ವಾಸನೆ ಏನೆಂದು ಅರಿಯುತ್ತಾನೆ ಹಾಗೆಯೇ ಪ್ರಾಣೇಶಾಚಾರ್ಯನ ಸನಿಹದಲ್ಲಿ ಆಕೆ ಆಗಸದ ಸಪ್ತರ್ಷಿ ಮಂಡಲವನ್ನು ದರ್ಶಿಸುತ್ತಾಳೆ. (ಇದು ಅಶ್ಲೀಲವೆನಿಸಿದರೆ ಓದಬೇಡಿ, ಅಷ್ಟೇ) ಈ ಕ್ರಿಯೆ ನಡೆದ ಮೇಲೆ ಪ್ರಾಣೇಶಾಚಾರ್ಯನಿಗೆ ತಾನು ತಪ್ಪು ಮಾಡಿದ ಅರಿವುಂಟಾಗಿ ಅಲ್ಲಿ ನಿಲ್ಲದೆ ಓಡಿಹೋಗುತ್ತಾನೆ. ಓಡಿ ಹೋದವನು ಹೋಟೆಲಿಗೆ ನುಗ್ಗಿ ಕಾಫಿ ಹೀರುತ್ತಾನೆ. ಮಡಿವಂತ ಬ್ರಾಹ್ಮಣರು ಹೋಟೆಲಿನಲ್ಲಿ ಕಾಫಿ ಕುಡಿಯುವುದೆಂದರೆ ನಿಷಿದ್ಧವೆನಿಸಿದ್ದ ಆ ಕಾಲದಲ್ಲಿ ಪ್ರಾಣೇಶಾಚಾರ್ಯನ ಕ್ರಿಯೆ ಬದಲಾವಣೆಯ ಸಂಕೇತವಾಗಿ ಕಾಣುತ್ತದೆ.
ಇಲ್ಲಿ ನಾರಣಪ್ಪನ ಹೆಣದ ರೂಪದಲ್ಲಿ ನಮ್ಮ ದೇಶದ ಒಟ್ಟು ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ಅದಕ್ಕೆ ಸಂಸ್ಕಾರ ಕೂಡಲೇ ಆಗಬೇಕು. ವ್ಯವಸ್ಥೆಯ ಅಂಗವಾದ ಚಂದ್ರಿಯಂಥ ಸೂಳೆಯರೂ ಸಂಸ್ಕಾರಕ್ಕಾಗಿ ಹಪಹಪಿಸುವಾಗ ಹೊಲಸಿನಲ್ಲೇ ಮುಳುಗಿರುವ ಕರ್ಮಠರು ಶಾಸ್ತ್ರಗಳ ತೌಲನಿಕ ಮೀಮಾಂಸೆಯಲ್ಲಿ ತೊಡಗಿದ್ದಾರೆ. ಆಗ ಅನ್ಯಧರ್ಮದ ಅನ್ಯಸಂಸ್ಕೃತಿಯ ಸಜ್ಜನನೊಬ್ಬ ಅವತರಿಸಿ ಸಂಸ್ಕಾರಗೈಯುವ ಪ್ರಕ್ರಿಯೆಯನ್ನು ಗಮನಿಸಿ ಸಮಾಜ ಪರಿವರ್ತನೆಗೆ ಇಂಬುಗೊಡಬೇಕಾದ ಶಿಕ್ಷಕರು ನೆಲದವಾಸನೆ ಮತ್ತು ನಕ್ಷತ್ರದರ್ಶನಗಳ ಜುಗಲಬಂದಿಯಲ್ಲಿ ತೊಡಗಿರುವುದೇ ನಮ್ಮ ಶಿಕ್ಷಣವ್ಯವಸ್ಥೆಯ ದುರಂತ.
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಬಲು ಚಂದದ ವಿಮರ್ಶೆ...
ಸಂಸ್ಕಾರ ಸಾರ ಪೂರ್ಣ
ನನ್ನಿ ರೀ ಜೋಸೆಪ್ರೆ!!
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
"ನನ್ನಿ ರೀ ಜೋಸೆಪ್ರೆ!!"
ಈ ನನ್ನಿ ಎಂಬೋ ಮಾತನ್ನ ಸಂಪದದಲ್ಲಿ ತುಂಬಾ ಸಲ ನೋಡಿದ್ದೇನೆ. ನನ್ನಿ ಎಂದರೆ ನಿಜ ಅಂತ ತಾನೇ?
’ಬೀರದಳವಿಯ ನನ್ನಿಯ ಚಾಗದ ಶಾಸನಂ ಚಂದ್ರಾರ್ಕ ತಾರಂಬರಂ’ ಎಂಬುದು ಒಂದು ಶಿಲಾಶಾಸನದ ಸಾಲು. ಶಾಸನ ಕೆತ್ತಿಸಿದವರು ಪಂಪನಿಂದ ಈ ಸಾಲನ್ನು ಬರೆಸಿಕೊಂಡರಂತೆ. ಅದಿರಲಿ, ಇಲ್ಲಿ ನನ್ನಿ ಎಂದರೆ ಸತ್ಯ / ದಿಟ / ನಿಜ ಎಂದರ್ಥ.
ನೀವು ಬಹುಶಃ ಕೃತಜ್ಞತೆ / ಧನ್ಯವಾದ ಎಂಬುದಕ್ಕೆ ಕನ್ನಡ ರೂಪ ಕೊಟ್ಟಂತೆ ತೋರುತ್ತದೆ. ತಮಿಳಿನಲ್ಲಿ ಹಾಗೂ ಮಲಯಾಳದಲ್ಲಿ ನನ್ರಿ ಎಂಬ ಪದಬಳಕೆಯಿದೆ. ಕನ್ನಡದಲ್ಲಿನ ಈ ಪ್ರಯೋಗಕ್ಕೆ ಅವುಗಳ (ತಮಿಳು ಮಲಯಾಳಗಳ) ಪ್ರಭಾವವಿದೆಯೇ? ಈ ಕುರಿತು ಯಾರಾದರೂ ಬೆಳಕು ಚೆಲ್ಲುವಿರಾ?
ನಾನು ಹೆಚ್ಚು ತಿಳಿದವನಲ್ಲ.
ಪ್ರೀತಯಿಂದ
ಸಿ ಮರಿಜೋಸೆಫ್
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ನೀವ್ ಹೇಳೋದು ಸರಿನೇ ಇದ್ದರೂ... ಕೂಟದ ಸಂಗತಿಗಳನ್ನು ನೂರಾರು ಕಲಿಯೋರ ಮುಂದೆ ನಿಂತು ಹೇಳೋದು... ಮುಜುಗರಪಡಬೇಕಾದ್ದೇ.... ಇಲ್ಲಿ ಸಂಗತಿ ಇರೋದು ಅಸ್ಟೇ... ಸಮಾಜ, ಸುದಾರಣೆ ವಿಚಾರ ಇಲ್ಲಿ ಬರಲ್ಲ....
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ನಾನು ಸಂಸ್ಕಾರವನ್ನು ಮೊದಲು ಓದಿದ್ದು ಹೈಸ್ಕೂಲಿನಲ್ಲಿದ್ದಾಗ.ಅಪ್ಪ ಅಮ್ಮನ ಜೊತೆಗಿದ್ದ ಇದ್ದ ಬದ್ದ ಪುಸ್ತಕಗಳನ್ನು ಓದುತಿದ್ದ ದಿನಗಳವು.ಯಾವತ್ತೂ ಅದು ಕೆಟ್ಟದು,ಅದನ್ನು ಓದಬೇಡ ಅಂತ ಅಪ್ಪ ಅಮ್ಮ ಹೇಳಿಲ್ಲ.ಆಮೇಲೆ ಸಂಸ್ಕಾರವನ್ನು ಬೇಕಾದಶ್ಟು ಸರ್ತಿ ಓದಿದ್ದೇನೆ.ಅಶ್ಲೀಲವೆಂದು ನಂಗೂ ಯಾವತ್ತು ಅನಿಸ್ಲಿಲ್ಲ..ಹಾಗಾಗಿ ಬಿ.ಎ, ಬಿ.ಎಸ್ಸಿ ಮಂದಿಗೆ ಸಂಸ್ಕಾರದ ಬಗ್ಗೆ, ಅದೂ ನಾನ್-ಡೀಟಯ್ಲ್,ಹೇಳಿ ಕೊಡೋಕೆ ಆಗೊಲ್ಲ ಅಂದರೆ ಒಪ್ಕೊಳ್ಳೋದು ಕಶ್ಟ.
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಹಿಂದಿ ಅಧ್ಯಾಪಕರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದರೆ ಅತಿಯಾಗುತ್ತದೆ. ವಾದಕ್ಕಾಗಿ ವಾದಿಸುವುದಾದರೆ ಎಷ್ಟೂ ಹೇಳಬಹುದು. ಆದರೆ 'ಇಲ್ಲಿ ಕೆಲವು ಮಂದಿ ಅನಂತಮೂರ್ತಿ ಅಭಿಮಾನಿಗಳಿದ್ದೇವೆ' ಎನ್ನುವುದಾದರೆ ಆಗ ಒಪ್ಪಬಹುದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಅಲ್ಲ ಗುರು,
ಇದು ನಾನ್- ಡೀಟೇಯ್ಲ್ ತಾನೆ, ಒಂದೊಂದು ಪದ, ವಾಕ್ಯನೂ ಓದಿ ಹೇಳ್ಬೇಕ ? ಇವರು ಓದ್ಕಂಡ್ ಅರಿತ ಮಾಡ್ಕಂಡ್ ಹೊತ್ತಗೆ ಮುಚ್ಚಿಟ್ಟು ಲೆಚ್ಚರ್ ಕೊಡ್ಬೋದು.
ನನಗೇನೊ ಈ ಲೆಚ್ಚರ್ ಗಳಿಗೆ ಕಾದಂಬರಿಯಲ್ಲಿ ಬರುವ ವಾಕ್ಯ,ಪದಗಳಿಗಿಂತ ಅದರ ಆಶಯ/ತಿರುಳಿನ ಬಗ್ಗೆ ಒಪ್ಪಿಗೆ ಇಲ್ಲ ಅನ್ಸುತ್ತೆ. ಅದಕ್ಕೆ ಹೀಗೆ ನೆವ ಒಡ್ತ ಇದ್ದಾರೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಮಂಗಳೂರು ವಿ.ವಿ.ಯಲ್ಲಿ ಸಂಸ್ಕಾರ ಕಾದಂಬರಿಯನ್ನು ಹಿಂದಿ ಬಾಷೆಯಲ್ಲಿ ಅರೆ-ಪಠ್ಯಪುಸ್ತಕವಾಗಿ ಇಟ್ಟದ್ದು ಏಕೆ ಗೊತ್ತುಂಟೋ? ಅನಂತಮೂರ್ತಿಯವರು ದೊಡ್ಡ ಲೇಖಕರು, ರಾಜಕಾರಣಿಗಳು ಎಂದಲ್ಲವೇ? ಅವರು ಬರೆದದ್ದೆಲ್ಲಾ ದೊಡ್ಡದೇ. ಸಂಸ್ಕಾರವೂ ದೊಡ್ಡದೆ, ಅವರು ಮಾಡಿದ್ದು ಏನುಂಟು, ಬಾಲ ಕತ್ತರಿಸಿಕೊಂಡ ಕೋತಿ ಬಾಲವಿದ್ದ ಕೋತಿಗಳೆಲ್ಲಾ ಹಳೆ ಕಾಲದವು ಎಂದಂತೆ ಅಲ್ಲವೆ? ನಮಗೆಲ್ಲಾ ನಮ್ಮ ಪೂರ್ವೀಕರು ನೀಡಿರುವ ಸಂಸ್ಕಾರ ಹೆಚ್ಚು, ಅನಂತಮೂರ್ತಿಯವರು ಕೊಟ್ಟದ್ದಲ್ಲ. ವಿ.ವಿಯಲ್ಲಿ ಅರೆ-ಪಠ್ಯಪುಸ್ತಕವಾಗಿಡಲು ಆ ಪುಸ್ತಕದಲ್ಲಿರುವ ಗಮ್ಮತ್ತಾದರೂ ಏನು? ಬ್ರಾಹ್ಮಣರನ್ನು, ಬ್ರಾಹ್ಮಣತ್ವವನ್ನು ಹೀನಾಯವಾಗಿ ಕಾಣಿಸಿರುವುದಲ್ಲವೇ? ಅದೇ ಅವರು ಹೊಸದಾಗಿ ಮುಸ್ಲಿಮರನ್ನೋ ಕ್ರಿಶ್ಚಿಯನ್ನರನ್ನೋ ಕುರಿತು ಬರೆಯಲಿ, ಬರೆದು ಗೇಲಿ ಮಾಡಲಿ, ಮಾಡಿ ಗೆಲ್ಲಲಿ ನೋಡುವ. ಆ ಪುಸ್ತಕದಿಂದ ವಿದ್ಯಾರ್ಥಿಗಳು ಕಲಿಯುವುದು ಬಹಳ ಉಂಟಲ್ಲವೇ?
ಎ.ವಿ. ನಾಗರಾಜು
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ನಮ್ಮ ಶಿಕ್ಷಣ ವ್ಯವಸ್ಠೆಯ ಕೆಲವು ವಿಕೃತಿಗಳನ್ನೇ ನೋಡಿ..
ಒಂದು ಧರ್ಮ, ಒಂದು ಪಂಗಡವನ್ನು ನಿಂದನೆ ಮಾಡಿರುವ ಕಾದಂಬರಿಯನ್ನು ಪಠ್ಯವನ್ನಾಗಿ ಮಾಡುತ್ತಾರೆ.
ಅದೇ ಇತಿಹಾಸದ ಸತ್ಯ ಸಂಗತಿಗಳನ್ನೇ ಮರೆ ಮಾಚಿ ತರಗತಿಗಳಲ್ಲಿ ಅರೆ-ಬರೆ ಇತಿಹಾಸ ಕಲಿಸುತ್ತಾರೆ. ಬಹಳಷ್ಟು ಸತ್ಯ ಸಂಗತಿಗಳನ್ನೊಳಗೊಂಡಿರುವ ’ಆವರಣ’ ಕಾದಂಬರಿಯಲ್ಲಿರುವ ಅಂಶಗಳನ್ನೇಕೆ ಇವರು ಇತಿಹಾಸ ಪುಸ್ತಕಗಳಲ್ಲಿ ಸೇರಿಸಬಾರದು??
ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರೇ ಒಂದು ಕಡೆ ಹೇಳಿಕೊಂಡಿರುವಂತೆ(ವಿ.ಕ ದಲ್ಲಿ ಒಮ್ಮೆ ಅವರ ಸಂದರ್ಶನ ಪ್ರಕಟಿಸಲಾಗಿತ್ತು) ನಮ್ಮ ಶಿಕ್ಷಣದ ಇತಿಹಾಸದ ಪುಸ್ತಕಗಳಿಂದ ಬಹಳಷ್ಟು ಸತ್ಯ ಸಂಗತಿಗಳನ್ನು ಮರೆಮಾಚಿದ್ದಾರೆ. ಕೆಲವು ದಾಳಿಕೋರರಿಂದ ಭಾರತದಾದ್ಯಂತ ನಡೆದಿರುವ ಸುಮಾರು ೩೦,೦೦೦ ದೇಗುಲಗಳ ನಾಶ, ಮತಾಂತರ, ಧಾಳಿಗಳು ಇವುಗಳೆಲ್ಲವನ್ನೂ ವ್ಯವಸ್ಠಿತವಾಗಿ ಇತಿಹಾಸ ಪುಟಗಳಿಂದ ಹೊರಗಿಡಲಾಗಿದೆ !!
ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ. ಇದ್ಯಾವ ಲೆಕ್ಕ??
ಪಠ್ಯ ಮಾಡಲು ಅರ್ಧ ಸಾಹಿತಿ-ಅರ್ಧ ಹತಾಶ ರಾಜಕಾರಣಿ ಅನಂತ ಮೂರ್ತಿ ಯವರ ಸಂಸ್ಕಾರವೆಂಬ (ವಿ)ಕೃತಿಯೇ ಏಕೆ ಬೇಕಿತ್ತು?
ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!
ಶ್ಲೀಲ ಅಶ್ಲೀಲಗಳ ಕಲ್ಪನೆ ವ್ಯಕ್ತಿ ವ್ಯಕ್ತಿಗೆ ಬೇರೆಯಾಗಿರುತ್ತದೆ ಎಂಬ ನನ್ನ ಗ್ರಹಿಕೆಗೆ ಎಲ್ಲ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಇಂಬು ಸಿಕ್ಕಿತು. ಇಂಥ ವಿಚಾರಗಳನ್ನು ಚರ್ಚಿಸಬಹುದೇ ಹೊರತು ಒಂದು ಅಭಿಪ್ರಾಯಕ್ಕೆ ಬರಲು ಸಾಧ್ಯವೆ? ಎಲ್ಲ ಪ್ರತಿಕ್ರಿಯೆಗಳೂ ಒಂದು ನೆಲೆಯಲ್ಲಿ ಕೇವಲ personal ಅಭಿಪ್ರಾಯಗಳಲ್ಲದೆ ಬೇರೆ ಅಲ್ಲ. ಹಾಗಂತ ಚರ್ಚೆ ಬೇಡವೆಂದು ನನ್ನ ಅಭಿಪ್ರಾಯವಲ್ಲ. ಆದರೆ ಈ ಚರ್ಚೆಗೆ ಬಂದ ಅಭಿಪ್ರಾಯಗಳು individual ಆಗಿ ಈ ವಿಷಯದಲ್ಲಿ ನಮ್ಮ ಅಭಿಪ್ರಾಯ ಮಾತ್ರವಾಗಿರದೆ ವ್ಯಕ್ತಿಗತವಾಗಿ ನಮ್ಮ mental makeup ಬಗೆಗೆ ಮಾಡಿದ commentಗಳೂ ಹೌದೆನ್ನಿಸುತ್ತದೆ