ಕಾವೇರಿ ಶಾಪವೋ, ವರವೋ!
೧೯೯೨ ನಾನು ಪ್ರೈಮೆರಿ ಶಾಲೆಗೆ ಹೋಗುತ್ತಿದ್ದ ದಿನಗಳವು.
ದಸರೆಯಾದ ಮೇಲೆ ಇರಬೇಕು. ಒಂದು ದಿನ ಬೆಳಿಗ್ಗೆ ನಾನು ಶಾಲೆಗೆ ಹೊರಟಿದ್ದೆ. ನಮ್ಮ ಮನೆಯಿರುವುದು ಒಂದು ಮೈನ್ ರೋಡಲ್ಲಿ. ನನ್ನ ಜೊತೆ ಬರಲು ನನ್ನ ಗೆಳೆಯ ಮನೆಗೆ ಬಂದಿದ್ದ. ನಾವು ಮನೆಯ ಗೇಟಿಗೆ ಬಂದೆವು. ನಮ್ಮ ಮನೆಯ, ಅಲ್ಲ ನಮ್ಮ ಬೀದಿಯಲ್ಲಿ ಎಲ್ಲರ ಮನೆಯಲ್ಲೂ, ಎತ್ತರವಾದ ಗೇಟುಗಳು, ಮತ್ತು ಎತ್ತರವಾದ ಕಾಂಪೌಂಡು. ಊರಲ್ಲಿ ಒಮ್ಮಿಂದೊಮ್ಮೆ ದೊಡ್ಡ ಗದ್ದಲವಂತೆ. ನಮ್ಮ ಮನೆ ಮುಂದೆ ರಸ್ತೆಯಲ್ಲಿ ಸಿಕ್ಕಾಪಟ್ಟೆ ಜನ ಸೇರಿದ್ದರು. ಅಪ್ಪ ಮನೆಯಲ್ಲಿ ಇರಲಿಲ್ಲ, ಇದನ್ನು ಗಮನಿಸಿ "ನಮ್ಮ ಅಮ್ಮ ಕೊಂಚ ತಡೆಯಿರಿ, ಆಮೇಲೆ ಹೋಗಿ" ಎಂದರು. ನಾವು "ಲೇಟಾಗುತ್ತೆ" ಅಂದೆವು. ಅವರು "ಏನಾಗಲ್ಲ. ಸ್ವಲ್ಪ ತಡೀರಿ" ಎಂದು ಗದರಿಸಿದರು.
ರಸ್ತೆಯಲ್ಲಿ ಹೆಚ್ಚು ಜನ ರೈತರೆಂದು ಅವರ ಹೆಗಲ ಮೇಲಿನ ಟವಲ್ಲು, ಹಸಿರು ಶಾಲುಗಳು ಹೇಳುತ್ತಿದ್ದವು. ನಾವು ಗೇಟಿನಲ್ಲಿ ನಿಂತು ಕೇಳುತ್ತಿದ್ದವು.
ಒಬ್ಬ "ಆ ಬೋಳೀ ಮಗ ನಮ್ಮ ಚೀಪ್ ಮಿನಿಸ್ಟರ್ರು, ಕನ್ನಂಬಾಡಿಯಿಂದ ಆ ಕೊಂಗರಿಗೆ ನೀರು ಬುಟೌನಂತೆ. ಅವನವ್ವನ ಷನಷನನಞಸಹದಹಕ"
ಇನ್ನೊಬ್ಬ "ಆ ಕಳ್ ಮುಂಡೆಗೆ ಏಟ್ ನೀರ್ ಬೇಕೋ, ಅವಳು ಪಟ್ಟಕ್ಕೆ ಬಂದಳೂ ಅಂದರೆ ನಮಗೆ ಈ ಗ್ರಾಚಾರ ವಕ್ಕರಿಸ್ತದೆ, ಅವಳವ್ವನ ಞಞಷಸಜಕಸಹದಹಸ"
ಸರಿ.. ಇದನ್ನು ಕೇಳಿದೊಡನೆ ನಮ್ಮ ಅಮ್ಮ "ಅಯ್ಯೋ, ಈ ವರ್ಷ ಮತ್ತೆ ಕಾವೇರಿ ಗಲಾಟೆ ಸುರುವಾಯಿತು, ಇವೊತ್ತು ಸ್ಕೂಲ್ ನಡೆಯಲ್ಲ, ಮನೆಯೊಳಗೆ ನಡೀರಿ" ಎಂದು ನಮ್ಮನ್ನು ಮನೆಗೆ ದನದಂತೆ ಅಟ್ಟಿದಳು. ಸರಸರನೆ ಮನೆಯ ಗೇಟ್ ಎಳೆದು ಬೀಗ ತಂದು ಜಡಿದರು. ನಾವು ಮನೆಯ ತಾರಸಿಯ ಮೇಲೇರಿದೆವು.
ನಮ್ಮ ಬೀದಿಯಲ್ಲಿ ಎಷ್ಟು ಜನ! ಅದೂ ಹೆಚ್ಚು ಮಂದಿ ರೈತರೇ. ಬೀದಿಯಲ್ಲಿ ಎಲ್ಲ ಅಂಗಡಿಗಳೂ ಮುಚ್ಚಿವೆ. ಒಂದು ಬಂಡಿ, ಆಟೋ, ಯಾವುದು ಇಲ್ಲ. ಆದರೂ ಜನರಿಗೆ ಎಲ್ಲಿಂದ ಆ ರೋಷ ಬಂದಿತ್ತೋ, ಅದೇನನ್ನೋ ತಂದು ತಂದೂ ನಮ್ಮ ರಸ್ತೆಯಲ್ಲಿ ಸುಟ್ಟರು. ಅಷ್ಟರಲ್ಲಿ ಎಲ್ಲಿಂದ ಪೋಲೀಸರು ಬಂದರೋ ತಿಳಿಯದು. ಅವರು ಬಂದೊಡನೆ ಇವರನ್ನು, ಮುಖ, ಮೂತಿ, ಎಲ್ಲಿಗೆ ಹೊಡೆಯುತ್ತಿದ್ದೇವೆ ಎಂದು ನೋಡದೆ ಅವರನ್ನು ತಮ್ಮ ದೊಣ್ಣೆಗಳಿಂದ ಹೊಡೆದರು. ಆ ಹೊಡೆತದಲ್ಲಿ ಕೆಲವರು ಅಲ್ಲೇ ನೆಲಕ್ಕೆ ಬಿದ್ದರು. ಇನ್ನು ಹಲವರು ದಿಕ್ಕಾಪಾಲಾಗಿ ಓಡಿದರು.
ಇಲ್ಲಿ ಮನೆಯಲ್ಲಿ ಅಮ್ಮ, ನಮ್ಮ ಅಪ್ಪ ಎಲ್ಲಿ ಸಿಕ್ಕಿಹಾಕಿಕೊಂಡಿದ್ದಾರೋ ಅಂತ ಆತಂಕ, ನನ್ನ ಗೆಳೆಯನಿಗೆ ಹೇಗೆ ಮನೆ ತಲುಪುದು ಎಂಬ ಆತಂಕ. ಆಗ ಮೊಬೈಲು, ಪೋನು ಎಲ್ಲರ ಮನೆಯಲ್ಲಿ ಇರುತ್ತಿರಲಿಲ್ಲ. ಪೋನು ಮಾಡಕ್ಕೆ ಮನೆ ಆಚೆ ಬರಲೇ ಬೇಕು.
ಇನ್ನು ಎರಡು ತಿಂಗಳೂ ನಮಗೆ ಶಾಲೆಗೆ ರಜ. ಆ ವರುಷ ಊರಲ್ಲಿ ಸರಿಯಾಗಿ ಜಾತ್ರೆಯಿಲ್ಲ. ಯಾವ ಸಿನಿಮಾಮನೆಯಲ್ಲೂ ಯಾವ ಸಿನಿಮಾ ಚೆನ್ನಾಗಿ ಓಡಲಿಲ್ಲ. ದಿನಿಸಿ ಬಿಟ್ಟು ಮಿಕ್ಕ ಎಲ್ಲ ವ್ಯಾಪಾರ ಡಲ್ಲು. ಅದು ಯಾಕೆ ನಮ್ಮ ಅಪ್ಪನೇ ನಮಗೆ ಸಂಕ್ರಾತಿಗೆ ಹೊಸಬಟ್ಟೆ ಕೊಡಿಸಲಿಲ್ಲ. ಒಂದು ಬಗೆ ದರಿದ್ರ ಮೆಟ್ಟುಕೊಂಡಿತ್ತು. ಜೊತೆ ನೀರೂ ಇಲ್ಲ.
ಹೀಗೆ ಪ್ರತೀ ಸರತಿ, ನಮ್ಮ ಮುಖ್ಯಮಂತ್ರಿಗಳು ಕನ್ನಂಬಾಡಿಯಿಂದ ನೀರು ತಮಿಳುನಾಡಿಗೆ ಬಿಡೋದು, ನಮಗೆ ಕನಿಷ್ಠ ಅಂದರೆ ೨ ವಾರ ಶಾಲೆಗೆ ರಜ, ಊರಲ್ಲಿ ನೀರಿಗೂ ದರಿದ್ರ.
ಹಿಂಗೆ ನಮ್ಮಪ್ಪ ಶಾಲೆಯಲ್ಲಿ ಓದುತ್ತಿರುವಾಗಲೂ ಆಗ್ತಿತ್ತಂತೆ. ಅದು ಒಂದು ತೆರ ನಮ್ಮೂರಿನ ಜಾತ್ರೆ, ರಥೋತ್ಸವದಂತೆ, ಸಂಪ್ರದಾಯವೇ ಆಗಿಹೋಗಿದೆ. ಅದಕ್ಕೆ ನಮ್ಮ ತಾತ ಹೇಳ್ತಿದ್ರು " ಆ ಜನಾರ್ದನ ಸ್ವಾಮಿ ತೇರ್ ನಡೀದಿದ್ರು, ಈ ಕಾವೇರಿ ಗಲಾಟೆ ನಡೆದೇ ನಡೀತದೆ. ಎಲ್ಲ ಗ್ರಾಚಾರ" ಅಂತ
ನಮ್ಮ ರೈತರು, ಎಂದು ನಮ್ಮ ಮಹಾರಾಜರು ಮದ್ರಾಸಲ್ಲಿ ೧೮೯೨ ರುಜು ಮಾಡಿ ಬಂದರೋ ಅಂದಿನಿಂದ, ಕಾವೇರಿ ಕಾವೇರಿ ಅಂತ ಪ್ರತಿ ವರುಷ ಪ್ರತಿಭಟನೆ, ಗಲಾಟೆ ಮಾಡ್ತಾನೆ ಇದ್ದಾರಂತೆ.
ಅಂತೂ ಇಂತೂ ೧೬ವರುಷದ ಬಳಿಕ ಐತೀರ್ಪು ಬಂತು. ಬಂದದ್ದೇನೋ ಬಂತು ಆದರೆ ಅದೂ ಎಡವಟ್ಟು. ಈಗ ನಮ್ಮ ಸರಕಾರ ಸುಪರೀಮ್ ಕೋರ್ಟಿಗೆ ಹೋಗುತ್ತಂತೆ. ಇನ್ನು ಈ ವ್ಯಾಜ್ಯ ನಾನು ಸತ್ತ ಮೇಲೆ ಮುಗಿಯೋದು. ಆಗಲೋ ಮುಗಿಯದಿದ್ದರೆ ಯಾವ ಸೋಜಿಗವಿಲ್ಲ.
ಇನ್ನು ಈ "ಬೃಹತ್ ಬೆಂಗಳೂರಿಗೆ" ನಮ್ಮ ಕಾವೇರಿಯನ್ನೇ ಕೊಡತಾರಂತೆ. ಬೆಂಗಳೂರಿಗೆ ಕೊಡ್ತಾರೆ ನಮ್ಮೂರಿಗೆ ನಿಲ್ಲಿಸ್ತಾರೆ.
ಕಾವೇರಿ ಏನೋ ನಮ್ಮ ನೆಲಕ್ಕೆ ಹಸಿರು ತಂದಳು. ಆದರೆ ಅವಳೇ ನಮ್ಮ ಜಿಲ್ಲೆಗೆ ದೊಡ್ಡ ಸಮಸ್ಯೆಯನ್ನು ತಂದುಳು.

- mahesha ರವರ ಬ್ಲಾಗ್
- Login or register to post comments
- 553 hits
- Email this blog





RSS:
ಪ್ರತಿಕ್ರಿಯೆಗಳು
ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ್ಯ ?
ಹೀಗೆ ಬೇಸತ್ತು, ಅದು ಶಾಪವೋ ವರವೋ ಎನ್ನುವ ಮಾತು ಅಷ್ಟು ಸಮಂಜಸವಲ್ಲ. ನೋಡಿ, ನಮ್ಮ ಭಾರತ ದೇಶದಲ್ಲಿ ಎಲ್ಲಾ ರಾಜ್ಯಗಳು ಕೆಲವು ನದಿಗಳನ್ನು ಹೊಂದಿವೆ. ಅದು ಬಂದದ್ದು ದೇವರ ಕೃಪೆ ಅಷ್ಟೆ. ಯಾರೂ ನಮ್ಮ ತರಹದ ಪೀಕಲಾಟದಲ್ಲಿ ಸಿಕ್ಕಿಹಾಕಿಕೊಂಡು ’ಸಿಂಬಳದಲ್ಲಿನ ಹುಳದಂತೆ” ಒದ್ದಾಡುತ್ತಿಲ್ಲ. ಇದಕ್ಕೆ ಕಾರಣ ನಮ್ಮ ಮೌಢ್ಯ, ಹಾಗೂ ಐಕ್ಯತೆ, ದೇಶಾಭಿಮಾನ, ಇಲ್ಲದಿರುವುದು, ನಮ್ಮ ನಾಡು, ನುಡಿಗಳ ಬಗ್ಗೆ ತಿರಸ್ಕಾರ ; ಇವೆಲ್ಲಾ ಸೇರಿಕೊಂಡು ನಮ್ಮ ತಲೆಯಮೇಲೆ ಕಲ್ಲು ಹಾಕಿಕೊಂಡಿದ್ದರಿಂದ ಆಗಿರುವ ಅನಾಹುತ. ಒಳ್ಳೆ ನಾಯಕರಿಲ್ಲ. ಇರೋ ನಾಯಕರಿಗೂ ಎಲ್ಲರನ್ನು ಮಾತಿನಲ್ಲಿ ಒಪ್ಪಿಸುವ ಮರ್ಮ ಗೊತ್ತಿಲ್ಲ. ಧರ್ಯವಿಲ್ಲ. ಹೇಳೋದೊಂದು. ಮಾಡೊದೊಂದು. ಮಂಡ್ಯ, ಮೈಸೂರೇ ಕರ್ನಾಟಕವಲ್ಲ !
ಸ್ವಲ್ಪದಿನಗಳಾದಮೇಲೆ ನೋಡಿ, ಈ ಆಂದೊಳನದಲ್ಲಿ ಕರ್ನಾಟಕದ ಜನತೆ ಭಿನ್ನಾಭಿಪ್ರಾಯದಲ್ಲಿ, ಇರುವುದನ್ನೂ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ರಾಜರಕಾಲದಲ್ಲಿ ಹಿತೈಷಿಗಳು ತಮಿಳರು. ರಾಜ್ಯದ ವಹಿವಾಟನ್ನೆಲ್ಲಾ ಅವರೇ ನೋಡ್ತಿದ್ರು. ನಿರ್ಧರಿಸ್ತಿದ್ರು. ಅವರು ಮೈಸೂರಿನಲ್ಲಿ ಇದ್ರೂ ಅವರಿಗೆ ತಮ್ಮ ನೆಲದ ವ್ಯಾಮೋಹ ಸ್ವಲ್ಪವೂ ಕಮ್ಮಿ ಇರಲಿಲ್ಲ. ಕನ್ನಂಬಾಡಿ ಅಣೆಕಟ್ಟು ಕಟ್ಟಿದ್ದು, ಬಂಗಾರ ಪೇಟೆಯ ಚಿನ್ನದ ಗಣಿಗಳ ಯಂತ್ರಕ್ಕೆ ತಡೆಯಿಲ್ಲದ ವಿದ್ಯುತ್ ಸರಬರಾಜನ್ನು ಮಾಡಲು. ವ್ಯವಸಾಯ, ನೀರಾವರಿ ಮಾತು ಆಮೇಲೆ. ಇದೊಂದು ಅಗ್ರಿಮೆಂಟ್ , ಕೆಲವು ವರ್ಷಗಳ ವರೆಗೆ ಲಾಗೂ ಆಗಬೇಕಿತ್ತು. ಆದರೆ ವಿಶಾಲ ಕರ್ನಾಟಕ ಆದಮೇಲು, ಯಾಕೆ ಇದನ್ನು ಮುಂದುವರೆಸಬೇಕು ? ನಮ್ಮ ರಾಜ್ಯದ ಜನ, ರೈತರು, ಕುಡಿಯಲು ನೀರಿಲ್ಲದೆ, ಉಳಲು ಬೇಕಾದ ನೀರಾವರಿ ಸಹಾಯವಿಲ್ಲದೆ, ಒದ್ದಾಡುತ್ತಿರುವಾಗ ನೀರಿವ ಹಂಚಿಕೆಗೆ ಅರ್ಥವಿಲ್ಲ. ನಮಗೆ ಹೆಚ್ಚಾದ ನೀರನ್ನು ನಾವು ಬಿಟ್ಟೇಬಿಡುತ್ತೇವೆ. ಧರ್ಮರಾಯನ ತರಹ ತಲೆಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳೋದೇಕೆ ? ಯಾವ ಅಗ್ರಿಮೆಂಟಿಗೂ ಗಡಿ, ವಾಯಿದೆ ಇರುತ್ತೆ. ಎಂದೆಂದಿಗೂ ಸರ್ವಕಾಲದಲ್ಲಿಯೂ ಅನುಸರಿಸಿಕೊಂಡು ಹೋಗಲು ಹೇಗೆ ಸಾಧ್ಯ ?
ನಿಜವಾಗಿ ನೋಡಿದರೆ, ಕಾವೇರಿ ವಿವಾದವೇ ಅಲ್ಲ. ನಮಗೆ ಹೆಚ್ಚಾದ ನೀರನ್ನು ತಮಿಳುನಾಡಿಗೂ ಮತ್ತು ನಮ್ಮ ನೆರೆಹೊರೆಯ ಕೇರಳ ರಾಜ್ಯಕ್ಕೂ ನಾವೇ ನೀರು ಕೊಟ್ಟು ಸಹಾಯ ಮಾಡುತ್ತೇವೆ. ಕನ್ನಡಿಗರು ಒಳ್ಳೆತನಕ್ಕೆ ಹೆಸರಾದವರು. ” ಬೆಪ್ಪ’ರೆಂದು ಸಾಬೀತು ಮಾಡುವುದನ್ನು ನಾನು ಖಂಡಿತ ಎಂದಿಗೂ ಒಪ್ಪುವುದಿಲ್ಲ.
ಬೆಳಗಾಂನಲ್ಲಿ ನಮ್ಮವರಿಗೇಟು. ಇನ್ನೊಂದು ಹೊಡೆತ, ಆಂಧ್ರದಿಂದ, ಮತ್ತೊಂದು ಕೇರಳದಿಂದ. ’ಬಕ್ರ ಸಿಕ್ಕರೆ ಎಲ್ರೂ ಮಟ್ಟಹಾಕೋರೆ” !
Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ
ನಿಮ್ಮ ಮಾತು ಸರಿ..
ಆದರೆ ಹುಟ್ಟಿದಾಗಿನಿಂದ, ನಮ್ಮೂರಿನ ಜನ "ನೀರು ನೀರು" ಎಂದು ಪರಿತಪಿಸುವುದು, ಗಲಾಟೆ ಮಾಡುವುದು, ರೈಲ್ವೇ ನಿಲ್ದಾಣ ಒಡೆದು ಹಾಕುವುದು, ೨-೩ ವಾರ ಶಾಲೆ ನಡೆಯದೇ ಹೋಗುವುದು, ಮಳೆಯಿಲ್ಲದ ವರುಷ ಊರ ಜಾತ್ರೆ, ಹಬ್ಬಗಳನ್ನು ನೆಟ್ಟಗೆ ಮಾಡದೇ ಹೋಗುವುದು, ಬೇಸಿಗೆಯಲ್ಲಿ ಊರಾಚೆಯ ಕರೆಯಿಂದ ನೀರು ಹೊರುವುದು, ಈಗ ಆಟೋಗಳಲ್ಲಿ ತರುವುದು, ನಮ್ಮ ಎಂಪಿಗಳು, ಎಮ್ಮೆಲ್ಯೇ ಗಳು ಏನೂ ಮಾಡದೆ, ಬರಿ ಮಾತಲ್ಲೇ ಮಾಳಿಗೆ ಕಟ್ಟಿ, ನಮ್ಮ ಕೈ ಬಿಡುವುದು, ರೈತರು ಸಾಲ ಮಾಡಿ ಹೊಲದಲ್ಲೇ ವಿಷ ತಿಂದು ಸಾಯೋದು.
ಇದು ಪ್ರತೀ ವರುಷ ನಡೀತಾನೆ ಇದೆ. ಅದಕ್ಕೆ ಕೊಂಚ ಬೇಸರ ಈ ಕಾವೇರಿ ಕಂಡ್ರೆ.
ನಾವು ಒಳ್ಳೆಯವರಾದವೊತ್ತಿಗೇ ನಾವು ಕನ್ನಡಿಗರು ಇಷ್ಟ ಅನ್ಯಾಹ ಸಹಿಸಿ ತೆಪ್ಪಗಿರುವುದು. ಆದರೆ ನನಗೆ ನಮ್ಮ ಒಳ್ಳೇತನ ತುಸು ಅತಿ ಆಯ್ತು ಅನ್ಸುತ್ತೆ, ಹಲವು ಸರ್ತಿ.
ಇರಲಿ ಬಿಡಿ, ನಮ್ಮ ಗ್ರಾಚಾರ, ಹಣೆಬರಹ!
=========================================================
=========================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!