ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹೊಳೆ ನರಸೀಪುರ ಮಂಜುನಾಥ
ಪರಿಚಯ
ಹುಟ್ಟಿದ್ದು ಮೈಸೂರಿನಲ್ಲಿ, ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ. ಓದಿದ್ದು ಬೆಳೆದಿದ್ದು ಪದವೀಧರನಾಗಿದ್ದು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ. ಆದರೆ ಜೀವನದ ನದಿಯಲ್ಲಿ ಈಜುವುದ ಕಲಿತು ಧೃಡವಾಗಿ ನಿಂತದ್ದು, ಹೇಮಾವತಿಯ ದಡದಲ್ಲಿ, ಹೊಳೆ ನರಸೀಪುರದಲ್ಲಿ, ಹಲವಾರು ವರ್ಷಗಳು ಬೆಂಗಳೂರೆಂಬ ಬೆಂಗಳೂರಲ್ಲಿ ದುಡಿದು ಈಗ ಸಧ್ಯಕ್ಕೆ ಸಂಯುಕ್ತ ಅರಬ್ ರಾಷ್ಟ್ರದ ಹೆಮ್ಮೆಯ ನಗರ ದುಬೈನಲ್ಲಿದ್ದೇನೆ. ಆಗಾಗ ಸಂಪದ ಓದುವುದು, ಕೆಲವು ಕವನ, ಲೇಖನಗಳನ್ನು ಬರೆಯುವುದು ಹವ್ಯಾಸ. ಕಾಲೇಜು ಜೀವನದಲ್ಲಿ ಸಾಕಷ್ಟು ಬರೆದದ್ದುಂಟು, ಆದರೆ, ಜೀವನದ ಹೋರಾಟ ಪ್ರಾರಂಭವಾದಾಗಿಂದ ಬರವಣಿಗೆ ಮರೆತೇ ಹೋಗಿತ್ತು,, ಈಗ ಅದನ್ನು ಮತ್ತೆ ಆರಂಭಿಸಿದ್ದೇನೆ.
ಇಲ್ಲಿಯೂ ಒಮ್ಮೆ ಕಣ್ಣು ಹಾಯಿಸಿ -www.myspace.com/460138030, http://manjus787.hi5..., http://twitter.com/m..., http://manju787.blog...
ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಬಹು ದಿನಗಳಿಂದ ಇವನು ನನ್ನ ಮನದಲ್ಲಿ ಕುಳಿತು ಕಾಡುತ್ತಿದ್ದ, ಇಂದು, ಅವನ ಕಾಟ ತಡೆಯಲಾಗದೆ, ಅವನ ಬಗ್ಗೆ ಬರೆದೇ ತೀರಬೇಕೆಂದು ನಿರ್ಧರಿಸಿ, ಕೊನೆಗೂ ಬರೆದು ಮುಗಿಸಿದೆ, ಇಲ್ಲಿ ಸುಡುತ್ತಿರುವ ಬೇಸಿಗೆಯ ದಿನಗಳಲ್ಲಿ, ಸತತ ಹದಿನಾರು ಘಂಟೆಗಳ ದುಡಿತದ ನಂತರ, ಈ ಬರೆಯಬೇಕೆಂಬ ತುಡಿತವೇ ಅಂಥಾದ್ದು ಎಂದು ನನ್ನ ಭಾವನೆ.
ಅವನೊಬ್ಬ ಬಡ ಹುಡುಗ, ನಾನು ನೇಪಾಳಕ್ಕೆ, ನಾನು ಕೆಲಸ ಮಾಡುವ ಸಂಸ್ಥೆಗೆ, ಯುವಕರನ್ನು ನೇಮಕಾತಿ ಮಾಡಲು ಹೋಗಿದ್ದಾಗ ನನ್ನ ಹಿಂದೆ ಬಿದ್ದಿದ್ದ, ಹೇಗಾದರೂ ಮಾಡಿ ಕೆಲಸ ಗಿಟ್ಟಿಸಬೇಕು, ದುಬೈಗೆ ಹೋಗಬೇಕು ಎಂದು. ಸುಮಾರು ಮೂರು ಸಾವಿರ ಜನ ಕೆಲಸ ಮಾಡುವ ನಮ್ಮ ಸಂಸ್ಥೆಯಲ್ಲಿ ಆಗಾಗ ಇದ್ದಕ್ಕಿದ್ದಂತೆ ಧಿಡೀರ್ ಕೆಲಸಗಾರರ ಕೊರತೆ ಎದುರಾಗಿ ಬಿಡುತ್ತದೆ. ಆಗ ನಾವು ನಾಲ್ಕಾರು ಮಂದಿ, ಎರಡು-ಮೂರು ತಂಡಗಳಲ್ಲಿ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕ, ಫಿಲಿಫೈನ್ಸ್ ಮುಂತಾದ ದೇಶಗಳನ್ನು ಸುತ್ತಾಡಿ ನಮಗೆ ಬೇಕಾದಂಥ ಯುವಕರನ್ನು ನೇಮಿಸಿಕೊಂಡು ಬಂದು ಸಂಸ್ಥೆಯ ಕೆಲಸ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಒಂದು ಮಾಮೂಲಿನ ಅಭ್ಯಾಸ. ಇದರಲ್ಲಿ ನನ್ನ ಪಾಲು ಹೆಚ್ಚಾಗಿ ನನ್ನ ನೆಚ್ಚಿನ ಭಾರತ ಹಾಗೂ ನೇಪಾಳ, ಹಾಗೆ ನಾನು "ಧಿಡೀರ್ ನೇಮಕಾತಿ" ಗಾಗಿ ಹೋದಾಗ ಸಿಕ್ಕಿದವನೇ ಈ ಅಪರೂಪದ ಹುಡುಗ.
ಮೂರು ದಿನಗಳ ಅವಿರತ ಪ್ರಯಾಣ, ಸಂದರ್ಶನಗಳು, ನೂರೆಂಟು ಪ್ರಶ್ನೆಗಳು, ಸಾವಿರಾರು ಉತ್ತರಗಳಿಂದ ರೋಸಿ ಹೋಗಿದ್ದ ಮನಸ್ಸಿಗೆ ಆ ಒಂದು ಸೋಮವಾರ, ಬಿಡುವಿನ ದಿನವಾಗಿತ್ತು. ಕಾಕತಾಳೀಯವಾಗಿ, ಅಂದು, " ವಿಶ್ವ ತಾಯಂದಿರ ದಿನ" ವೂ ಆಗಿತ್ತು. ಅಗಲಿ ಹೋದ ಅಮ್ಮನ ನೆನಪಿನಲ್ಲಿ ಅಂದು, ನಾನು ನೇಪಾಳದ ರಾಜಧಾನಿ, ಪುರಾಣ ಪ್ರಸಿದ್ಧ "ಭಾಗಮತಿ" ನದಿ ತೀರದಲ್ಲಿರುವ ಕಾಠ್ಮಂಡು ನಗರದ, ಪ್ರಖ್ಯಾತ ’ ಪಶುಪತಿನಾಥ’ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನಿಟ್ಟುಕೊಂಡಿದ್ದೆ. ಅಲ್ಲಿಗೆ ಪ್ರವೇಶಿಸುವಾಗ ಅಲ್ಲಿನ ಪ್ರತಿಯೊಂದು ದೃಶ್ಯವೂ ನನಗೆ ಕುತೂಹಲಕಾರಿಯಾಗಿ ಕಾಣಿಸುತ್ತಿತ್ತು. ಅಲ್ಲಿ ಒಬ್ಬ ಹುಡುಗ ನನ್ನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿ, ನೇಮಕಾತಿ ಕಂಪನಿಯವರ ಆಜಾನುಬಾಹು ’ರಕ್ಷಕರ’ ಬೆದರಿಕೆಗೆ ಹೆದರಿ ದೂರ ಸರಿದಿದ್ದ. ಆಗ ನಾನು ಅವನನ್ನು ಅಷ್ಟಾಗಿ ಗಮನಿಸಿರಲಿಲ್ಲ. ಆ ದೇವಾಲಯದಲ್ಲಿ ನೂರಾರು ವರ್ಷಗಳಿಂದ ಪೂಜೆ ನೆರವೇರಿಸುತ್ತಿದ್ದ ಅರ್ಚಕರು, ನಮ್ಮ ಕನ್ನಡಿಗರು, ಗೋಕರ್ಣ ಮತ್ತು ಉಡುಪಿಯ ಸುತ್ತ ಮುತ್ತಿನ ಬ್ರಾಹ್ಮಣರು. ಇವರ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೆ, ಅದರೆ ಕಣ್ಣಾರೆ ಕಾಣುವ ಅವಕಾಶ ಅಂದು ಒದಗಿ ಬಂದಿತ್ತು. ಅಲ್ಲಿನ ಜನ ಜಂಗುಳಿಯನ್ನು, ಆ ತಳ್ಳಾಟವನ್ನು ನೋಡಿ ಸಾಕಾದ ನನಗೆ ದೇವಾಲಯದ ಪ್ರವೇಶ ದ್ವಾರವನ್ನು ದಾಟುವಾಗ, ಅದೇನೋ ಆವೇಶ ಬಂದು ಆ ಅರ್ಚಕರಿಗೆ, ಜೋರಾಗಿ ಕೂಗಿ, ’ಸ್ವಾಮಿಗಳೆ, ನಾನು ಕರ್ನಾಟಕದವನು, ಹೇಗಾದರೂ ದರ್ಶನಕ್ಕೆ ಅವಕಾಶ ಮಾಡಿ ಕೊಡಿ’ ಎಂದು ಹೇಳಿದೆ. ನಿಜಕ್ಕೂ ಇದು ನಮ್ಮ " ಕನ್ನಡ ಭಾಷೆಯ" ಹಿರಿಮೆ. ಹಾಗೊಂದು ವೇಳೆ ನಾನು ಅವರಿಗೆ ಆ ರೀತಿ ಕೂಗಿ ಹೇಳದೆ ಇದ್ದಿದ್ದರೆ, ಆ ಜನ ಜಾತ್ರೆಯಲ್ಲಿ ನನಗೆ ದರ್ಶನ ಭಾಗ್ಯವೇ ಸಿಗುತ್ತಿರಲಿಲ್ಲವೇನೋ ?? ನಾನು ಅವರ ಬಳಿ ಸರಿದಂತೆ, ಅವರು ನನ್ನನ್ನು ಒಂದು ಪಕ್ಕದಲ್ಲಿ ನಿಲ್ಲಿಸಿ, ಅಭಿಷೇಕ ಹಾಗೂ ಪೂಜೆಗಳನ್ನು ಕಣ್ತುಂಬಾ ನೋಡಿ ಆನಂದಿಸಲು ಅವಕಾಶ ಮಾಡಿ ಕೊಟ್ಟರು. ಪ್ರಸಾದ ಸ್ವೀಕರಿಸಿದ ನಂತರ, ತಮ್ಮ ಪರಿಚಯ ಪತ್ರವೊಂದನ್ನು ಕೊಟ್ಟು, ಸಂಜೆಯ ಹೊತ್ತಿನಲ್ಲಿ ಮನೆಗೆ ಬಂದು ಭೇಟಿಯಾಗುವಂತೆ ಹೇಳಿ ಕಳುಹಿಸಿದಾಗ, ಮನಸ್ಸು ಹಕ್ಕಿಯಂತೆ ಹಗುರಾಗಿ ಹಿಮಾಲಯದ ಮೇಲೆ ಹಾರಾಡುತ್ತಿತ್ತು.
ಪ್ರಫುಲ್ಲವಾದ ಮನದೊಂದಿಗೆ ನಾನು ದೇಗುಲದಿಂದ ಹೊರ ಬರುತ್ತಿದ್ದೆ, ನನ್ನ ಜೊತೆಯಿದ್ದ ನೇಮಕಾತಿ ಕಂಪನಿಯ ಅಧಿಕಾರಿಗಳು ನಗುನಗುತ್ತಾ, ನನ್ನ ’ಪಶುಪತಿನಾಥನ’ ದರ್ಶನದ ಬಗ್ಗೆ, ಆ ದಿವ್ಯ ಅನುಭವದ ಬಗ್ಗೆ ಮಾತಾಡುತ್ತಿದ್ದರು. ಅಷ್ಟರಲ್ಲಿ ನಮ್ಮ ಮುಂದೆ ಹೋಗುತ್ತಿದ್ದ ನಮ್ಮ ’ರಕ್ಷಕರ’ ಪಡೆಗೂ ಮತ್ತೊಬ್ಬ ಯುವಕನಿಗೂ ಅದೇನೊ ಘರ್ಷಣೆಯಾಗುತ್ತಿತ್ತು. ಅದೇನೆಂದು ನೋಡಿದರೆ, ಮತ್ತೆ ಅದೇ ಹುಡುಗ!! ತದೇಕಚಿತ್ತನಾಗಿ ನನ್ನನ್ನೇ ನೋಡುತ್ತಾ, ಅದೇನನ್ನೋ ತನ್ನ ಕಣ್ಣುಗಳಲ್ಲೇ ಭಿನ್ನವಿಸಿಕೊಳ್ಳುತ್ತಾ, ನನ್ನತ್ತಲೇ ನೋಡುತ್ತಿದ್ದ. ಆದರೆ ಆ ನೇಪಾಳಿ ರಕ್ಷಕರ ಶಕ್ತಿಯನ್ನು ದಾಟಿ ಅವನು ನನ್ನ ಬಳಿ ಬರಲಾಗದೆ ಅಸಹಾಯಕನಾಗಿ ದೂರ ಸರಿದಿದ್ದ. ನಾನು ಆ ನೇಮಕಾತಿಯ ಕಂಪನಿಯ ವ್ಯವಸ್ಥಾಪಕರಿಗೆ ಕೇಳಿದಾಗ ಅವನೊಂದು ಉದಾಸೀನದ ನಗು ಚೆಲ್ಲಿ, "ಇವರೆಲ್ಲಾ ಹೀಗೆಯೇ ಸಾರ್, ಕೆಲಸ ಗಿಟ್ಟಿಸಲು ಎಲ್ಲ ರೀತಿಯ ನಾಟಕ ಮಾಡುತ್ತಾರೆ, ನೀವು ತಲೆ ಕೆಡಿಸಿಕೊಳ್ಳಬೇಡಿ" ಅಂದ. ಆದರೂ ಅದೇಕೋ ನನ್ನ ಮನಸ್ಸಿಗೆ ಸಮಾಧಾನವಾಗಲಿಲ್ಲ. ನಾನು ತಂಗಿದ್ದ ಹೋಟೆಲಿಗೆ ಬಂದ ನಂತರ ಸುಮ್ಮನೆ ಮಲಗಿಬಿಟ್ಟೆ, ಅದೇಕೋ ಆ ಬಡ ಹುಡುಗ ನನ್ನನ್ನು ಕಾಡ ಹತ್ತಿದ್ದ, ಕಣ್ಮುಚ್ಚಿದರೆ ಅವನ ಮುಗ್ಧ ಮುಖ, ಅದೇನೋ ಹೇಳಬೇಕೆಂದು ತವಕಿಸುತ್ತಿದ್ದ ಅವನ ಕಣ್ಣೋಟ ನೆನಪಾಗಿ, ಆ ರಜದ ದಿನ, ನನ್ನ ನಿದ್ದೆಯನ್ನೇ ಕಸಿದುಕೊಂಡು ಬಿಟ್ಟಿತು.
ಮರುದಿನ, ಮಾಮೂಲಿನಂತೆ ನಮ್ಮ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಯಿತು, ಬೆಳಗಿನಿಂದ ಸಂಜೆಯವರಿಗೂ ಸಾಕಷ್ಟು ಜನರನ್ನು ನೋಡಿ, ಅವರ ಪೂರ್ವಾಪರಗಳನ್ನೆಲ್ಲಾ ವಿಷ್ಲೇಶಿಸಿ, ಕೆಲವರನ್ನು ನೇಮಕಾತಿ ಮಾಡಿ, ಮತ್ತೆ ಹಲವರನ್ನು ಹಿಂದೆ ಕಳುಹಿಸಿ, ಸಾಕಾಗಿ, ಆ ಕಛೇರಿಯ ಬಾಲ್ಕನಿಗೆ ಬಂದು ಸಿಗರೇಟು ಹತ್ತಿಸಿದೆ, ಒಂದೆರಡು ದಮ್ಮೆಳೆದು ಹೊರಗೆ ನೋಡಿದರೆ, ಮತ್ತದೇ ಹುಡುಗ!!! ತನ್ನ ಕೈನಲ್ಲಿ ತನ್ನ ಕಡತವೊಂದನ್ನು ಹಿಡಿದು, ತಾನು ನಿಂತಿದ್ದಲ್ಲಿಂದಲೇ, ನನ್ನ ಕಡೆಗೇ ನೋಡುತ್ತಾ ಅದೇನೋ " ಮೇಘ ಸಂದೇಶ" ಕಳುಹಿಸಲು ಆರಂಭಿಸಿದ. ನನಗೆ ತಲೆ ಕೆಟ್ಟು ಹೋಯಿತು. ಒಳಗೆ ಬಂದು, ಆ ಸಂಸ್ಥೆಯ ವ್ಯವಸ್ಥಾಪಕರನ್ನು ಕರೆದು, ಬಾಲ್ಕನಿಗೆ ಕರೆ ತಂದು, ದೂರದಲ್ಲಿ, ರಸ್ತೆಯಲ್ಲಿ ನಿಂತಿದ್ದ ಆ ಹುಡುಗನನ್ನು ತೋರಿಸಿ, ಅವನನ್ನು ಸಂದರ್ಶನಕ್ಕೆ ಕಳುಹಿಸುವಂತೆ ಹೇಳಿದೆ. ಅದಕ್ಕೆ ಅವರು ಹೇಳಿದ್ದೇನು ಗೊತ್ತೇ ? " ಆ ಹುಡುಗನಿಗೆ ಆಂಗ್ಲ ಭಾಷೆ ಸ್ವಲ್ಪವೂ ಬರುವುದಿಲ್ಲ ಸಾರ್, ಜೊತೆಗೆ ಅವನು ಪೀಚಲು, ನಿಮ್ಮ ಕೆಲಸಕ್ಕೆ ಸರಿ ಹೋಗುವುದೇ ಇಲ್ಲ, ಅದಕ್ಕೇ ಅವನನ್ನು ನಾವು ಗೇಟಿನಿಂದ ಒಳಕ್ಕೇ ಬಿಟ್ಟಿಲ್ಲ".
" ಅವನು ಹೇಗಿದ್ದರೂ ಸರಿ, ಪರವಾಗಿಲ್ಲ, ಅವನನ್ನು ನನ್ನ ಬಳಿ ಕಳುಹಿಸು" ಎಂದು ತಾಕೀತು ಮಾಡಿ ಕಳುಹಿಸಿದೆ. ಕೊನೆಗೂ ಬಂದೇ ಬಿಟ್ಟ, ನನ್ನ ನಿದ್ದೆಗೆಡಿಸಿದ ಆ ಪೀಚಲು ದೇಹದ ಹುಡುಗ, ನನ್ನ ಮುಂದೆ. ಅವನನ್ನೇ ದಿಟ್ಟಿಸಿ ನೋಡಿದೆ, ಮುಖದ ತುಂಬಾ ನಿರಿಗೆಗಳು ಮೂಡಿ, ಇಪ್ಪತ್ತೈದು ವರ್ಷದ ಹುಡುಗ, ಎಪ್ಪತ್ತರ ಮುದುಕನಂತೆ ಕಾಣುತ್ತಿದ್ದ, ಅವನ ದೇಹದಲ್ಲಿ ಎಲುಬು ಮತ್ತು ಚರ್ಮವನ್ನು ಬಿಟ್ಟರೆ, ಎಲ್ಲಿಯೂ ಮಾಂಸವಿರುವ ಕುರುಹೇ ಕಾಣುತ್ತಿರಲಿಲ್ಲ. ನನ್ನ ತೀಕ್ಷ್ಣ ದೃಷ್ಟಿಯನ್ನೆದುರಿಸಲಾಗದೆ ಅವನು ತಲೆ ಬಗ್ಗಿಸಿದ. ಅವನನ್ನು ಕೇಳಿದೆ, " ನೀನ್ಯಾಕೆ ನನ್ನ ಹಿಂದೆ ಬಿದ್ದಿದ್ದೀಯಾ, ನನ್ನನ್ನೇ ಹಿಂಬಾಲಿಸಿ ನನ್ನ ನಿದ್ದೆಗೆಡಿಸುತ್ತಿದ್ದೀಯಾ" ಎಂದು. ಅದಕ್ಕೆ ಅವನು ಹೇಳಿದ," ನಾನ್ಯಾಕೆ ನಿಮ್ಮ ನಿದ್ದೆಗೆಡಿಸಲಿ ಸಾರ್, ತಾವು ದೊಡ್ಡವರು, ಕೃಪೆ ಮಾಡಿ ನನಗೊಂದು ಉದ್ಯೋಗ ಕೊಟ್ಟರೆ ನಿಮ್ಮ ಹೆಸರು ಹೇಳಿಕೊಂಡು ಬದುಕಿಕೊಳ್ಳುತ್ತೇನೆ, ನಾನು ನಿದ್ದೆ ಮಾಡಿ, ಹೊಟ್ಟೆ ತುಂಬಾ ಊಟ ಮಾಡಿ, ಅದ್ಯಾವುದೋ ಕಾಲವಾಯ್ತು ಸಾರ್, ನಾನು ಕೆಲಸ ಮಾಡಲು ದುಬೈಗೆ ಬರಬೇಕು, ಜೀವನದಲ್ಲಿ ಮುಂದುವರೆಯಬೇಕು, ಇದಷ್ಟೇ ನನ್ನ ಜೀವನದ ಉದ್ಧೇಶ, ಅದು ಸಾಧ್ಯವಾಗದಿದ್ದಲ್ಲಿ ಸಾವೊಂದೇ ನನಗೆ ಉಳಿದಿರುವ ದಾರಿ".
ಅವನ ತಾಯಿ ಅದ್ಯಾವುದೊ ಖಾಯಿಲೆಗೆ ತುತ್ತಾಗಿ ಸತ್ತಳಂತೆ, ಅವನಪ್ಪ ಇನ್ನೊಬ್ಬಳನ್ನು ಮದುವೆಯಾಗಿ, ಅವಳಿಗೆ ಮೂರು ಮಕ್ಕಳಾಗಿ, ಆ ಮಹಾ(ಲ)ತಾಯಿ ಇವನಿಗೆ ಹೊಟ್ಟೆಗೆ ಅನ್ನ ನೀಡದೆ ಭಾರೀ ಹಿಂಸೆ ಕೊಟ್ಟು ಇವನನ್ನು ನರಪೇತಲನನ್ನಾಗಿಸಿದಳಂತೆ. ನಮ್ಮಲ್ಲಿ ಕೆಲಸಕ್ಕೆ ಸೇರಬೇಕಾದರೆ, ಐದಡಿ ಏಳಿಂಚು ಎತ್ತರವಿರಬೇಕು, ೬೦ ಕಿಲೋ ತೂಕವಿರಬೇಕು, ಆಂಗ್ಲ ಭಾಷೆಯಲ್ಲಿ ಉತ್ತಮ ಸಂವಹನ ಸಾಮರ್ಥ್ಯವಿರಬೇಕು. ಇದರಲ್ಲಿ ಅವನಿಗಿದ್ದದ್ದು, ಎತ್ತರವೊಂದೇ, ದೇಹ ಪೀಚಲಾಗಿತ್ತು, ಅವನ ಆಂಗ್ಲ ಭಾಷೆಯಂತೂ ಏನಕ್ಕೂ ಬೇಕಿರಲಿಲ್ಲ, ಆದರೂ ಅವನ ಬಗ್ಗೆ ಅದೇಕೋ ನನ್ನ ಅಂತ:ಕರಣ ಮಿಡಿಯುತ್ತಿತ್ತು. ಅವನನ್ನು ಒಂದು ಪ್ರಶ್ನೆ ಕೇಳಿದೆ, ’ ನೀನು ಸಧ್ಯಕ್ಕಿರುವ ಪರಿಸ್ಥಿತಿಯಲ್ಲಿ ನಾನು ನಿನ್ನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ, ಏನಾದರೂ ನಿನ್ನ "ವಿಶೇಷ" ಗುಣಗಳಿದ್ದರೆ ಹೇಳು’ ಅದಕ್ಕವನು ಹೇಳಿದ, ’ ನಾನು ತುಂಬಾ ಚೆನ್ನಾಗಿ ಹಾಡುತ್ತೇನೆ’ ಆಗ ನಾನವನಿಗೆ ಹೇಳಿದೆ, " ನೀನು ತುಂಬಾ ಮೆಚ್ಚುವ ಒಂದು ಹಾಡನ್ನು ಹಾಡಿ ತೋರಿಸು, ನೋಡೋಣ".
ಅದಕ್ಕಾಗಿಯೇ ಕಾಯುತ್ತಿದ್ದವನಂತೆ ಅವನು ಆರಂಭಿಸಿಯೇ ಬಿಟ್ಟ, ಭಾವ ತನ್ಮಯತೆಯಿಂದ ಹಾಡಲು, " ಜಿಂದಗೀ ಕಿ ರಾಹೋಂ ಮೆ, ರಂಜೊ ರಂಕಿ ಮೇಲೇ ಹೈ", ಪಂಕಜ್ ಉದಾಸ್ ರವರು ಹಾಡಿದ್ದ ಒಂದು ಹೃದಯಂಗಮ ಭಾವಗೀತೆ, " ಕನ್ನಡಿಯನ್ನು ನೂರು ತುಂಡು ಮಾಡಿದೆ, ಕಂಡೆ ಸಾವಿರಾರು ಪ್ರತಿಬಿಂಬ, ಅದರೆ ಕೊನೆಗೆ ನಾ ಒಂಟಿಯಾಗಿಯೇ ಉಳಿದಿದ್ದೆ" ಎಂಬ ಭಾವಾನುಭವದ ಆ ಗೀತೆ ನನ್ನ ಹೃದಯವನ್ನೇ ಹಿಂಡಿ, ಸಹಸ್ರಾರು ತರಂಗಗಳ, ಭಾವ ದೀಪ್ತಿಯನ್ನೇ ಬೆಳಗಿಸಿ ಬಿಟ್ಟಿತ್ತು. ನಾನು ಹಾಗೇ ಆ ಹುಡುಗನನ್ನು ನೋಡುತ್ತಿದ್ದೆ, ಅವನು ಈ ಲೋಕದ ಪರಿವೆಯೇ ಇಲ್ಲದಂತೆ ಉಚ್ಛ ಸ್ವರದಲ್ಲಿ, ತಲ್ಲೀನನಾಗಿ ಹಾಡುತ್ತಿದ್ದ, ಮುಚ್ಚಿದ್ದ ಅವನ ಕಂಗಳಿಂದ ಅಶ್ರು ಧಾರೆ ಹರಿಯುತ್ತಿತ್ತು. ಆ ಹಾಡು ಅವನ ಜೀವನದಲ್ಲಿ ಅವನು ಅನುಭವಿಸಿದ್ದ ಎಲ್ಲಾ ನೋವಿಗೂ ಅಂದು ಸಾಕ್ಷಿಯಾಗಿ ಬಿಟ್ಟಿತ್ತು. ಅವನ ಆ ಭೀಕರ ಒಂಟಿತನದ ಪ್ರತಿರೂಪವಾಗಿತ್ತು.
ಕೊನೆಗೂ ನಾನು ಅವನನ್ನು ನಮ್ಮ ಸಂಸ್ಥೆಯ ಕೆಲಸಕ್ಕೆ ಆಯ್ಕೆ ಮಾಡಿದೆ. ನನ್ನ ನಿರ್ಧಾರವನ್ನು ಅವನಿಗೆ ತಿಳಿಸಿದಾಗ, ಅವನು ಭಾವ ತನ್ಮಯತೆಯಿಂದ ನನ್ನ ಕಾಲು ಹಿಡಿದು ನಮಸ್ಕರಿಸಲು ಬಂದ, ಅವನನ್ನು ತಡೆದು, ಮುಂದೆ ಅಲ್ಲಿ ಬಂದಾಗ, ಅವನು ಏನು ಮಾಡಬೇಕೆಂದು ತಿಳಿ ಹೇಳಿದೆ. ಅದಕ್ಕವನದು ಒಂದೇ ಉತ್ತರ, " ಅದೆಂಥದೇ ಕಷ್ಟವಿರಲಿ ಸಾರ್, ನಾನು ಖಂಡಿತ ಜಯ ಸಾಧಿಸುತ್ತೇನೆ ”. ಅಂದಿನ ಅವನ ಆ ಆತ್ಮ ವಿಶ್ವಾಸ ನನಗೆ ಮೆಚ್ಚಿಗೆಯಾಯಿತು.
ಇದಾದ ಸುಮಾರು ಎರಡು ಮೂರು ತಿಂಗಳ ನಂತರ ಆ ಹುಡುಗ ಅಬುಧಾಬಿಗೆ ಬಂದ. ಆಗ ನಮ್ಮ ಸಂಸ್ಥೆಯಲ್ಲಿನ ತರಬೇತಿ ಇಲಾಖೆಯ ಮುಖ್ಯಸ್ಥ, ಕಣ್ಣನ್, ಆ ಹುಡುಗ ಹಾಗೂ ಅವನ ಜೊತೆ ಬಂದಿದ್ದ ಇನ್ನೂ ಐವತ್ತು ಹುಡುಗರನ್ನು, ಅವರ ದೇಹ ಧಾರ್ಡ್ಯತೆ, ಆಂಗ್ಲ ಭಾಷಾ ವಿಶಾರದತೆ ಎಲ್ಲವನ್ನೂ ಪರೀಕ್ಷಿಸಿ, ಸಂಸ್ಥೆಯ ಮುಖ್ಯಸ್ಥರಿಗೆ ವರದಿ ಕೊಟ್ಟಿದ್ದ. ಅವನ ವರದಿಯ ಪ್ರಕಾರ ಈ ಹುಡುಗ ಎಲ್ಲರಿಗಿಂತ ಕೀಳು ಮಟ್ಟದಲ್ಲಿದ್ದ. ಸರಿ! ಹಾಗಾದರೆ, ಇಂತಹ ಕೀಳು ಮಟ್ಟದ ಹುಡುಗನನ್ನು ನೇಮಕಾತಿ ಮಾಡಿದ್ದು ಯಾರು ಎಂಬ ಪ್ರಶ್ನೆ ಎದ್ದು ಕೊನೆಗೆ ನನ್ನನ್ನು ಎಂಡಿ ಸಾಹೇಬರು ತಮ್ಮ ಕಛೇರಿಗೆ ಕರೆಸಿ, ಅವನನ್ನು ನೇಮಕಾತಿ ಹೇಗೆ ಮತ್ತು ಯಾವ ಆಧಾರದ ಮೇಲೆ ಮಾಡಿದ್ದು ಎಂದು ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. ಅವನಲ್ಲಿ ಕಂಡ ಆತ್ಮ ವಿಶ್ವಾಸದಿಂದ ನಾನು ಅವನನ್ನು ನೇಮಕಾತಿ ಮಾಡಿದೆ ಎಂದರೂ ಸಮಾಧಾನವಾಗದ ಎಂಡಿ ಸಾಹೇಬರು, ಅವನು ಆಕಸ್ಮಾತ್ ಪೊಲೀಸ್ ಇಲಾಖೆಯ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿಬಿಟ್ಟರೆ, ಸಂಸ್ಥೆಗೆ ಆಗುವ ನಷ್ಟಕ್ಕೆಲ್ಲಾ ನಾನೇ ಹೊಣೆ ಎಂದು ಬರೆದು ಕೊಟ್ಟಲ್ಲಿ ಮಾತ್ರ ಆ ಹುಡುಗನನ್ನು ಪೊಲೀಸರ ಬಳಿಗೆ ಪರವಾನಗಿಗಾಗಿ ಕಳುಹಿಸುತ್ತೇವೆಂದಾಗ, ನಾನು ಮತ್ತೊಮ್ಮೆ ಆ ಹುಡುಗನ ಮುಖ ನೋಡಿದೆ. ದೈನ್ಯತೆಯೇ ಮೂರ್ತಿವೆತ್ತಂತೆ ಕಾಣುತ್ತಿದ ಅವನು ನನಗೆ ಧೈರ್ಯ ಹೇಳಿದ, " ಸಾರ್, ದಯವಿಟ್ಟು ನೀವು ಬರೆದು ಕೊಡಿ, ನಾನು ಆ ಪೋಲೀಸರ ಪರೀಕ್ಷೆಯನ್ನು ಖಂಡಿತ ಪಾಸು ಮಾಡಿ ತೋರಿಸುತ್ತೀನಿ" ಅವನ ಕಣ್ಗಳಲ್ಲಿ ಅದೇನೋ ಆತ್ಮ ವಿಶ್ವಾಸದ ಜ್ವಾಲೆ ಉರಿಯುತ್ತಿದ್ದುದನ್ನು ನೋಡಿ, ಅದನ್ನು ನಂಬಿ ನಾನು ನನ್ನ ಎಂಡಿಯವರಿಗೆ, ಅದೂ ಜೀವನದಲ್ಲಿ ಮೊದಲ ಬಾರಿಗೆ, ಕಂಡು ಕೇಳಿಲ್ಲದ ಒಬ್ಬ ಅಪರಿಚಿತನಿಗಾಗಿ ಬರೆದು ಕೊಟ್ಟೇ ಬಿಟ್ಟೆ. ಅದೇನಾಗುತ್ತದೋ ನೋಡೇ ಬಿಡೋಣವೆಂದು.
ಮುಂದಿನ ಕೆಲವು ದಿನಗಳು, ನನ್ನ ಕೆಲಸದ ಒತ್ತಡಗಳ ನಡುವೆ ನಾನು ಈ ಪ್ರಸಂಗವನ್ನು ಮರೆತೇ ಬಿಟ್ಟಿದ್ದೆ. ಒಂದು ದಿನ ಖುದ್ದು ಎಂಡಿಯವರೇ ಫೋನ್ ಮಾಡಿ ನನ್ನನ್ನು ತಮ್ಮ ಕಛೇರಿಗೆ ಬರ ಹೇಳಿದಾಗ, ಆತಂಕದಿಂದಲೇ ಅವರನ್ನು ಭೇಟಿಯಾಗಲು ಹೊರಟೆ. ಅಲ್ಲಿ, ಎಂಡಿಯವರ ಕಛೇರಿಯಲ್ಲಿ ಮತ್ತದೇ ಹುಡುಗ ಆಸೀನನಾಗಿದ್ದ. ಇದೇನೋ ಗ್ರಹಚಾರ ವಕ್ಕರಿಸಿಕೊಂಡಿತು ಅಂದುಕೊಳ್ಳುತ್ತಿರುವಾಗಲೇ, ನನ್ನನ್ನು ಕಂಡ ಎಂಡಿಯವರು, ತಮ್ಮ ಆಸನದಿಂದ ಎದ್ದು ಬಂದು, ನನ್ನ ಕೈ ಕುಲುಕಿ, " ನಿನ್ನ ಹೃದಯದೊಳಗಿನ ಮಾನವೀಯತೆಯನ್ನು ನಾನು ಮೆಚ್ಚುತ್ತೇನೆ ಮಂಜು, " ಎಂದಾಗ ನನಗೆ ತಲೆ ಬುಡ ಅರ್ಥವಾಗಲಿಲ್ಲ. ಆ ಬಡ ನೇಪಾಳಿ ಹುಡುಗ, ಪಿಳಿ ಪಿಳಿ ಕಣ್ಣು ಬಿಡುತ್ತಾ, ತನ್ನ ಕೈಲಿದ್ದ ದಾಖಲೆ ಪತ್ರವನ್ನು ನನ್ನ ಕೈಗಿತ್ತು, ನನಗೆ ಕೈ ಮುಗಿದಾಗಲೇ ನನಗೆ ಅರ್ಥವಾಗಿದ್ದು!!!
ಅವನು ಪೊಲೀಸರು ನಡೆಸಿದ ಪರೀಕ್ಷೆಯಲ್ಲಿ ನೂರಕ್ಕೆ ತೊಂಭತ್ತೆಂಟು ಅಂಕಗಳನ್ನು ಗಳಿಸಿ, ಆ ತಂಡದಲ್ಲಿಯೇ ಮೊದಲಿಗನಾಗಿ ಹೊರಬಂದಿದ್ದ. ಅಂದು ಅವನು ಹಾಡಿದ್ದ ಆ ಹಾಡನ್ನು ಕೇಳಿ, ಅದ್ಯಾವುದೋ ಕಾಣದ ಭರವಸೆಯಿಂದ ಅವನನ್ನು ನೇಮಕ ಮಾಡಿ, ಅವನ ಆತ್ಮ ವಿಶ್ವಾಸವನ್ನು ನಂಬಿದ್ದಕ್ಕೆ, ಆ ಹುಡುಗ ನನಗೆ ಅತ್ಯುತ್ತಮ ಉಡುಗೊರೆಯನ್ನೇ ನೀಡಿದ್ದ. ಅಂದು, ಅವನ ಕಂಗಳಲ್ಲಿ ಕಂಡಿದ್ದ ಆ ಜ್ವಾಲೆ, ಅದು ಬರೀ ಜ್ವಾಲೆಯಾಗಿರಲಿಲ್ಲ, ಅದು ಅವನ ಅಪ್ರತಿಮ ಆತ್ಮ ವಿಶ್ವಾಸದ ಪ್ರತೀಕವಾಗಿತ್ತು. ಅವನನ್ನು ಯಶಸ್ವಿಯಾಗುವಂತೆ ಮಾಡಿತ್ತು.
ಅವನು ಹಾಡಿದ ಒಂದು ಭಾವ ಪೂರ್ಣ ಗೀತೆಗೆ ಮರುಳಾಗಿ, ನೇಮಕಾತಿ ಮಾಡಿದ್ದರೂ, ಕೊನೆಗೆ ಅವನು ಗೆದ್ದ ರೀತಿ, ನನಗೆ ತುಂಬಾ ಹಿಡಿಸಿತು. ಅವನು ಈಗಲೂ ಇಲ್ಲೇ ಇದ್ದಾನೆ, ಕೆಲಸ ಮಾಡುತ್ತಾ, ಕೈ ತುಂಬಾ ಸಂಪಾದನೆ ಮಾಡುತ್ತಾ!
ಅಂದು ಕೇವಲ ಐವತ್ತು ಕೇಜಿಯಿದ್ದವನು ಈಗ ಚೆನ್ನಾಗಿ ತಿಂದುಂಡು, ಮೈ ಕೈ ತುಂಬಿಕೊಂಡು ಎಪ್ಪತ್ತೈದು ಕೇಜಿ ತೂಗುತ್ತಾನೆ. ನನ್ನನ್ನು ಕಂಡರಂತೂ ಅವನಿಗೆ ವಿಪರೀತ ಭಕ್ತಿ ಭಾವ !! ಅವನನ್ನು ಕಂಡರೆ ನನಗದೇನೋ ಒಂದು ರೀತಿಯ ಧನ್ಯತಾ ಭಾವ.
- manju787's blog
- Login or register to post comments
- 591 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಮಂಜುನಾಥರೇ ಧನ್ಯವಾದಗಳು ನಿಮಗೆ,
ಹಾಗೆಯೇ ನೀವು ಬರೆದ ಶೈಲಿ ಇಷ್ಟವಾಯಿತು ಚೆನ್ನಾಗಿ ಓದಿಸಿಕೊಂಡು ಹೋಯಿತು.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಧನ್ಯವಾದಗಳು, ಅನಂತೇಶ್, ಕೆಲವೊಮ್ಮೆ ನಮ್ಮ ವೃತ್ತಿ ಜೀವನದಲ್ಲಿ ಇಂಥ ಸನ್ನಿವೇಶಗಳು ಸಹಜ, ನಮ್ಮ ಪೂರ್ವ ನಿರ್ಧಾರಿತ ಮಾನದಂಡಗಳಿಗಿಂತ ಒಮ್ಮೊಮ್ಮೆ ಮಾನವೀಯತೆಯೇ ಮುಖ್ಯವಾಗುತ್ತದೆ. ಅದನ್ನೇ ನಾನು ಮಾಡಿದ್ದು.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಜೀವನದ ಅನಿರೀಕ್ಷಿತತೆಗಳ ಒ೦ದು ಮಜಲನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಎಲ್ಲ ತರ್ಕಗಳ ಗುಣಾಕಾರ ಭಾಗಾಕಾರ ಮಾಡಿ, ಬುದ್ಧಿಮತ್ತೆಯನ್ನೆಲ್ಲಾ ಒರೆಹಚ್ಚಿ ತೆಗೆದುಕೊ೦ಡ ನಿರ್ಧಾರಗಳಿಗಿ೦ತ, ಮನಸ್ಸಿನ ಮಾತಿಗೆ ಓಗೊಟ್ಟು, ಆ ಗಟ್ ಫೀಲಿ೦ಗ್ ಮೇಲೆ ತೆಗೆದುಕೊ೦ಡ ನಿರ್ಧಾರಗಳ ಗೆಲುವು ಇ೦ದಿಗೂ, ಎ೦ದಿಗೂ ಒ೦ದು ಸೋಜಿಗವೇ ಸರಿ. ಅಭಿನ೦ದನೆಗಳು ನಿಮಗೂ, ಆ ಹುಡುಗನಿಗೂ.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಹೌದು ವಿನುತರವರೆ, ನಿಮ್ಮ ಮಾತು ನಿಜ, ಯಾವುದೋ ಒಂದು ನಿರ್ದಿಷ್ಟ ಮಾನದಂಡಕ್ಕೆ ಕಟ್ಟು ಬಿದ್ದು ನಾವು ನಡೆದುಕೊಂಡರೆ ಅದು ಕೆಲವು ಆಭಾಸಗಳಿಗೆ ಕಾರಣವಾಗಿಬಿಡುತ್ತದೆ. ಹಾಗೆಯೇ ಹಲವು ಪ್ರತಿಭಾವಂತರ ಬಾಳಿಗೆ ಮುಳ್ಳಾಗಿ ಬಿಡುತ್ತದೆ. ನನಗಾದ ಕಹಿ ಅನುಭವಗಳು ಯಾವಾಗಲೂ ನನ್ನನ್ನು ಹಾಗೆ ಮಾಡದಂತೆ ಎಚ್ಚರಿಸುತ್ತಲೇ ಇರುತ್ತವೆ. ಸಾಧ್ಯವಾದಷ್ಟೂ ಅರ್ಹತೆಯುಳ್ಳವರಿಗೆ ಅವಕಾಶ ಕೊಡಲು ನಾನು ಅಹರ್ನಿಶಿ ಪ್ರಯತ್ನಿಸುತ್ತಲೇ ಇರುತ್ತೇನೆ.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಮಂಜುನಾಥ್
ಆ ನೇಪಾಳಿ ಹುಡುಗನ ಆತ್ಮವಿಶ್ವಾಸಕ್ಕೂ, ನಿಮ್ಮ ನಿರ್ಧಾರಕ್ಕೂ ನನ್ನ ನಮನಗಳು.
:)
ಅರವಿಂದ್
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ವಂದನೆಗಳು, ಅರವಿಂದ್, ಮಾನವೀಯತೆ ಎಂದಿಗೂ ಜಯಿಸುತ್ತದೆನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ !
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ನೀವು ಮಾಡಿದಂತ ಕಾರ್ಯ ತುಂಬಾನೆ ದೊಡ್ದದು, ನಮಗೆಲ್ಲ ಮಾದರಿ ಆಗುವಂತಹ ನಡತೆ . ಓದಿ ಖುಷಿಆಯಿತು ... ದನ್ಯವಾದಗಳು
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಮಂಜುನಾಥ್ ಸರ್,
ನೀವು ಬಡಯುವಕನ ಸಾಹಸಗಾಥೆಯನ್ನು ಹೇಳುತ್ತಾ ಹೋಗುವಾಗ ಕಣ್ಣಾಲಿಗಳು ತುಂಬಿದವು. ನನ್ನ ಕೆಲವು ಗೆಳೆಯರಿಗೆ ಎಲ್ಲ ಅರ್ಹತೆಗಳು ಇದ್ದು ಬಡತನದ ಕಾರಣಕ್ಕಾಗಿ ಸೋತ ಘಟನೆಗಳು ಮತ್ತೊಮ್ಮೆ ನೆನಪಿಗೆ ಬಂದವು.
ಸಾಧಕನಿಗೆ ಹಾದಿಯಾಗಿದ್ದೀರಿ ಸರ್.. ನಿಮ್ಮನ್ನು ಎಷ್ಟು ಪ್ರಶಂಸಿದರೂ ಕಡಿಮೆಯೇ...
ಮತ್ತು ಹ್ರುದಯ ಎಂದು ಬರೆದಿದ್ದೀರಿ. ಸರ್ ಕನ್ನಡದ ಬರಹ ರೂಪದಲ್ಲಿ ಈ ಬಳಕೆ ಇಲ್ಲ ಸರ್.. ಅದು ಹೃದಯ ಎಂದಾಗಬೇಕು
ಸಾತ್ವಿಕ್
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಹೌದು.... ಮಂಜುನಾಥ್ ಅವರೇ, ನೀವು ಬರಹ ಬಳಸುತ್ತಿದ್ದಲ್ಲಿ hrudaya ಎಂದು ಟೈಪಿಸುವ ಬದಲು hRudaya ಎಂದು ಮಾಡಿ ಆಗ ಹೃದಯ ಎಂಬುದಾಗಿ ಬರುತ್ತದೆ.... ಹಾಗೆಯೇ, ಮನತಟ್ಟುವಂತಹ ಕಥೆಗಾಗಿ ಅಭಿನಂದನೆಗಳು
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಶ್ರೀನಾಥರವರೆ, ನಿಮ್ಮ ಸಲಹೆಗೆ ನನ್ನ ವಂದನೆಗಳನ್ನು ಒಪ್ಪಿಸಿಕೊಳ್ಳಿ, ಇಲ್ಲಿನ ಒಡನಾಟ ಹಾಗೂ ಯಾವಾಗಲೂ ಆಂಗ್ಲ ಭಾಷೆಯಲ್ಲೇ ಬೆರಳಚ್ಚಿಸುವ ಅಭ್ಯಾಸದಿಂದಾಗಿ, ಈ ಒಂದು ಸಣ್ಣ ಪ್ರಮಾದವಾಗಿತ್ತು. ಈಗ ಸರಿಯಾಯಿತು. ಸರಿ ಮಾಡಿದ್ದೇನೆ. ಮತ್ತೊಮ್ಮೆ ವಂದನೆಗಳು.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ತಮ್ಮ " ಸಾತ್ವಿಕ " ಎಚ್ಚರಿಕೆಗೆ ನನ್ನ ವಂದನೆಗಳು, ಇದು ಅಕ್ಷರಶ: ಬೆರಳಚ್ಚು ದೋಷ, ಅದಕ್ಕಾಗಿ ಕ್ಷಮೆಯಿರಲಿ, ಈಗ ಅದನ್ನು ಸರಿಪಡಿಸಿದ್ದೇನೆ.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ರೋಷನ್, ನಿಮ್ಮ ಈ ಬಹುದೊಡ್ಡ ನುಡಿಗೆ ನನ್ನ ಹೃದಯ ಪೂರ್ವಕ ವಂದನೆಗಳು. ಕೊನೇ ಪಕ್ಷ ಕೆಲವು ಸಂಪದಿಗರು ಇದೇ ರೀತಿ ಮಾನವೀಯತೆ ತೋರಿ, ಹಲವು ಅಸಹಾಯಕರಿಗೆ ನೆರವಾದರೆ ನನ್ನ ಬರವಣಿಗೆ ಸಾರ್ಥಕ.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ರೋಷನ್, ನಿಮ್ಮ ಈ ಬಹುದೊಡ್ಡ ನುಡಿಗೆ ನನ್ನ ಹೃದಯ ಪೂರ್ವಕ ವಂದನೆಗಳು. ಕೊನೇ ಪಕ್ಷ ಕೆಲವು ಸಂಪದಿಗರು ಇದೇ ರೀತಿ ಮಾನವೀಯತೆ ತೋರಿ, ಹಲವು ಅಸಹಾಯಕರಿಗೆ ನೆರವಾದರೆ ನನ್ನ ಬರವಣಿಗೆ ಸಾರ್ಥಕ.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಮಂಜುನಾಥ ಅವರೆ ನಿಮ್ಮ ಅನುಭವ ನನ್ನನ್ನು ಮೊಕವಿಸ್ಮಿತಳನ್ನಾಗಿ ಮಾಡಿತು...ಏಕೊ ಗೊತ್ತಿಲ್ಲ ಕಣ್ಣಾಲಿಗಳು ತುಂಬಿ ಬಂದವು.
ನಿಮ್ಮ ಮೇಲಿರುವ ಗೌರವ ಹೆಚ್ಚಾಯಿತು.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಮಾಲತಿಯವರೆ, ಗೌರವದಿಂದ ನೀವು ಬರೆದ ನುಡಿಗಳಿಗಿದೋ, ನನ್ನ ನಮನ, ಕೊನೇ ಪಕ್ಷ ಕೆಲವು ಸಂಪದಿಗರು ಇದೇ ರೀತಿ ಮಾನವೀಯತೆ ತೋರಿ, ಹಲವು ಅಸಹಾಯಕರಿಗೆ ನೆರವಾದರೆ ನನ್ನ ಬರವಣಿಗೆ ಸಾರ್ಥಕ.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ನೀವು ಆ ಅದೃಶ್ಯ ಗಾಜಿನ ಗೋಡೆಯಾಚೆ ಕೈ ಚಾಚಿ ಅವನನ್ನು ಇತ್ತ ಎಳಕೊಂಡದ್ದು ಹೃದಯಗಳ ನಡುವಿನ ಸಂವಹನ ಎಷ್ಟೊಂದು ಪ್ರಬಲ ಎನ್ನುವ ನನ್ನ ಸಾರ್ವಕಾಲಿಕ ಅಚ್ಚರಿಯನ್ನು ಇನ್ನಷ್ಟು ಬೆಳಗಿಸಿದೆ.
ಉ: ಹ್ರುದಯದ ಕದ ತಟ್ಟಿದ ನೇಪಾಳಿ ಹುಡುಗ......
ಅಹುದಹುದು ಬಾಳಿಗರೆ, ಇದು ಹೃದಯಗಳ ಮಾತು. ಆ ಹೃದಯದ ವೀಣೆ ಮಾನವೀಯತೆಯಿಂದ ಮೀಟಿದಾಗ, ಹೊರ ಹೊಮ್ಮುವ ಆ ರಾಗ, ಅದು ಇಡೀ ಜಗಕೆ ಕೊಡಬಲ್ಲುದು, ದಿವ್ಯ ಶಾಂತಿ.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ನಲ್ಮೆಯ ಮ೦ಜುನಾಥರೇ,
ನಿಮ್ಮ ಈ ಸುಕಾರ್ಯ ನನ್ನ್ಮನ ಮೆಚ್ಚಿತು. ನಮಗಳಿಗೆಲ್ಲಾ ಮಾದರಿಯಾಗೊ೦ತ ನಡತೆ ನಿಮ್ಮದು. ಮನಗರಿವಿಲ್ಲದೆ ಕಾಣ್ಣಾಲಿಗಳು ತೇಲಿ ತು೦ಬಿ ಬ೦ದವು.
ನನಗನ್ನಿಸಿರೋ ಪ್ರಕಾರ ಸ೦ಪದದಲ್ಲೇ ನಿಮ್ಮ ಲೇಖನ ಅತ್ತ್ಯುತ್ತಮವೆನಿಸಿತು.
ಧನ್ಯವಾದಗಳು
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಯಾರ ಬಗ್ಗೆ ಕನಿಕರ ಪಟ್ಟು ಸಹಾಯ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರುವುದೇ ಕಷ್ಟದ ಕೆಲಸ. ಬರಹ ಮೆಚ್ಚುಗೆಯಾಯಿತು.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಸರ್, ನೀವು ನಮ್ಮ ಹೃದಯವನ್ನ ತಟ್ಟಿಬಿಟ್ಟಿರಿ....
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಪ್ರತಿಕ್ರಿಯೆಗೆ ವ೦ದನೆಗಳು ಸ೦ಧ್ಯ ವೆ೦ಕಟೇಶ್.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಪ್ರತಿಕ್ರಿಯೆಗೆ ವ೦ದನೆಗಳು ಅಶೋಕ್ ಕುಮಾರ್, ........ಯಾರ ಬಗ್ಗೆ ಕನಿಕರ ಪಟ್ಟು ಸಹಾಯ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರುವುದೇ ಕಷ್ಟದ ಕೆಲಸ.......... ನಿಮ್ಮ ಮಾತು ಖ೦ಡಿತ ನಿಜ, ಕೆಲವೊಮ್ಮೆ ಅಪಾತ್ರರಿಗೂ ಸಹಾಯ ಸಿಕ್ಕಿ ಬಿಡುತ್ತದೆ, ನಮ್ಮ ಮಾನದ೦ಡಗಳು ಸೋತು ಬಿಡುತ್ತವೆ.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ತು೦ಬಾ ದೊಡ್ಡ ಮಾತು ಸ್ವಾಮಿಯವರೇ, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನನ್ನ ವಂದನೆಗಳು.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಹೊಳೆನರಸೀಪುರದ ಮಂಜುನಾಥ್ ರವರಿಗೆ ಈ ಕುಣಿಗಲ್ ಮಂಜುನಾಥನ ನಮಸ್ಕಾರಗಳು..
ಕಾಕತಾಳಿಯ ಅನ್ನೋದಾದರೆ ನಿಮ್ಮ ಅನುಭವದಂತಹುದೇ ಅನುಭವ ನನಗೂ ಅನೇಕ ಸಾರಿ ಆಗಿದೆ, ಅದೂ ಸಹ ದುಬೈನಲ್ಲಿಯೇ..
ಆಫ್ಘಾನಿಸ್ತಾನ, ಇರಾಕ್ ನಂತಹ ಯುದ್ಧಪೀಡಿತ ದೇಶಗಳಲ್ಲಿ ನೆಲೆಸಿರುವ ಅಮೆರಿಕಾ ಹಾಗೂ ನ್ಯಾಟೊ ದ ಸೈನಿಕರಿಗೆ ಮೂಲಭೂತ ಸೌಕರ್ಯವೂ ಸೇರಿದಂತೆ ತಾಂತ್ರಿಕ ಸೇವೆಗಳನ್ನು ಒದಗಿಸುವ ನಮ್ಮ ಕಂಪನಿಯು ತನ್ನ ಬಹುತೇಕ ಕೆಲಸಗಳಿಗಾಗಿ ಭಾರತ,ನೇಪಾಳ,ಬಾಂಗ್ಲಾ,ಫಿಲಿಪ್ಪೈನ್ಸ್ ತರಹದ ದೇಶಗಳ ಕಾರ್ಮಿಕರನ್ನು ಉಪಯೋಗಿಸಿಕೊಳ್ಳುತ್ತದೆ.
ಮಧ್ಯವರ್ತಿಗಳಿಗೆ ಒಂದೋ ಎರಡೋ ಲಕ್ಷ ರೂಪಾಯಿಗಳನ್ನು ಕೊಟ್ಟು ದುಬೈ ನಲ್ಲಿ ಕೆಲಸ ಗಿಟ್ಟಿಸಿ, ಐದಾರು ವರ್ಷಗಳು ಹಲ್ಲುಮುರಿ ಕಟ್ಟು ದುಡಿದರೆ ಬದುಕೇ ಹಸನಾಗುವುದೆಂಬ ಹಗಲುಗನಸನ್ನು ಹೊತ್ತು ಬರುವ ಸಾವಿರಾರು ಕಾರ್ಮಿಕರು ಇಲ್ಲಿ(ದುಬೈ) ಸಲ್ಲದೇ ಹೋದಲ್ಲಿ ಯುದ್ಧ ಪೀಡಿತ ಪ್ರದೇಶಗಳಿಗೆ ಹೊರಡಲು ತಯಾರಾಗುತ್ತಾರೆ. ಅವರಿಗೆ ಇನ್ಯಾವುದೇ ಅವಕಾಶಗಳಿರುವುದಿಲ್ಲ. ಮಧ್ಯವರ್ತಿಗಳಿಗೆ ಕೊಟ್ಟ, ಜೀವನ ಪೂರ್ತಿ ಅವರ ದೇಶಗಳಲ್ಲಿ ದುಡಿದರೂ ತೀರಿಸಲಾಗದಂತಹ ದೊಡ್ಡ ಮೊತ್ತದ ಸಾಲವನ್ನು ಅವರು ಹೇಗೆ ತೀರಿಸ್ಯಾರು? ಮಧ್ಯಮವರ್ತಿಗಳು ಅವರನ್ನು ಪ್ರತೀ ಹೆಜ್ಜೆಗೂ ಮೂರ್ಖರನಾಗಿಸುತ್ತಿರುತ್ತಾರೆ.
ಮತ್ತೊಂದು ವಿಷಯ ಎಂದರೆ ಈ ಯುದ್ಧಪೀಡಿತ ಪ್ರದೇಶಗಳಲ್ಲೂ ಕೆಲಸ ಗಿಟ್ಟಿಸುವುದು ಸುಲಭವಲ್ಲ. ಇಲ್ಲಿಯೂ ಸ್ಪರ್ಧೆ. ಕಕ್ಕಸ್ಸು ತೊಳೆಯುವ ಕೆಲಸಕ್ಕೂ ಸಂದರ್ಶನ. ಅಲ್ಪ ಸ್ವಲ್ಪ ಇಂಗ್ಲಿಷ್ನ ತಿಳುವಳಿಕೆ ಇರಲೇಬೇಕು. ಇನ್ನು ತಾಂತ್ರಿಕ ಕೆಲಸಗಾರರಿಗಂತೂ ಎರಡು ಮೂರು ಸಂದರ್ಶನಗಳು ಅದೂ ಪ್ರಾಕ್ಟಿಕಲ್ ಸೇರಿ. ಈ ತಾಂತ್ರಿಕ ಸಂದರ್ಶನದ ಹೊಣೆ (ಸಂಕಷ್ಟ) ನನ್ನದೇ.
ಅಕಸ್ಮಾತ್ ಈ ಕೊನೆಯ ಬಾಗಿಲು ಮುಚ್ಚಿಹೋಗಿಬಿಟ್ಟರೆ ಜೀವನವೇ ಇನ್ನು ಮುಗಿಯೇತೇನೋ ಎಂಬಲ್ಲಿಗೆ ಅವರಲ್ಲೆರ ಮನಸ್ಥಿತಿ ಬಂದಿರುತ್ತದೆ. ಈ ಘಟ್ಟದಲ್ಲಿ ಅವರ್ಯಾರೂ ಧೈರ್ಯವಾಗಿ ಉತ್ತರಿಸುವ ಸ್ಥಿತಿಯಲ್ಲಿರಲು ಅಸಾಧ್ಯ ಅನ್ನೋದು ನನಗೆ ಮನದಟ್ಟಾಗಿ ಹೋಗಿದೆ. ತಾನು ಆಯ್ಕೆಯಾಗಲಿಲ್ಲ ಎಂಬ ಸಣ್ಣ ಸಂಶಯ ಬಂದರೂ ಸಾಕು ಕಾಲನ್ನು ಬಿಗಿಯಾಗಿ ಹಿಡಿದುಬಿಡುತ್ತಾರೆ. ಸುತ್ತಮುತ್ತ ಯಾರಿದ್ದರೂ ಅದರ ಪರಿವಿಲ್ಲ. ಮಕ್ಕಳ ಹಾಗೆ ಅಳಲು ಶುರು ಮಾಡಿಬಿಡುತ್ತಾರೆ. ಮತ್ತೊಂದು ಪ್ರಮುಖ ವಿಷಯ ಅಂದರೆ ಅವರಲ್ಲಿ ಬಹುತೇಕ ನಲವತ್ತು ದಾಟಿದವರು. ನಿಜವಾಗಿಯೂ ಕರಳು ಚುರುಕ್ ಅನ್ನುತ್ತೆ ಅವನ್ನೆಲ್ಲ ನೋಡಿಬಿಟ್ಟರೆ. ಹೇಗಾದರೂ ಆಗಲಿ ಎಂದು ಆಯ್ಕೆ ಮಾಡಿ ಕಳಿಸಿದರೆ ಅಲ್ಲಿಂದ ದೂರುಗಳ ಮೇಲೆ ದೂರು.
ಕಂದಹಾರ್ ನಲ್ಲಿ ಒಮ್ಮೆಯಂತೂ ಒಬ್ಬ ವಿದ್ಯುತ್ ಕಾರ್ಮಿಕನ ಸಣ್ಣ ಅಚಾತುರ್ಯವನ್ನು ಎಲ್ಲರೂ(ಯೂರೋಪ್ನವರು) ಬಹು ದೊಡ್ಡದಾಗಿ ಮಾಡಿ ಕೈ ಚೆಲ್ಲಿ ಕುಳಿತುಬಿಟ್ಟಿದ್ದರು. ಅದನ್ನು ಸರಿಪಡಿಸಲು ಸ್ವತಹ ನಾನೇ ಕಂದಹಾರ್ ಏರ್ ಬೇಸ್ ಗೆ ಹೋಗಬೇಕಾಗಿ ಬಂತು. ಅದೂ ಮೂವತ್ತೆರಡು ದಿನಗಳು. ಅಲ್ಲಿ ಹೋಗಿ ನೋಡಿದರೆ ಇವರೆಲ್ಲರ ಪರಿಸ್ಥಿತಿಯನ್ನ ಹೇಗೆ ಬಣ್ಣಿಸೋದು ಅನ್ನೋಕೆ ಪದಗಳೇ ಸಿಕ್ಕಲ್ಲ ಬಿಡಿ. ಒಂದು ದೀರ್ಘ ಲೇಖನಕ್ಕೂ ನಿಲುಕ್ಕದ್ದು.
ನಿಮ್ಮ ಈ ಅನುಭವ ಲೇಖನ ನನ್ನನ್ನೆಲ್ಲೋ ಕರೆದುಕೊಂಡು ಹೋಗಿ ಇದಕ್ಕೆ ಪ್ರತಿಕ್ರಿಯಸಲೇ ಬೇಕೆಂದು ಪ್ರೇರಿಪಿಸದ್ದಂತೂ ಹೌದು.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಆ ಗೀತೆಯ ಭಾವವೇ ಹಾಗಿದೆ.. ಯಾರನ್ನಾದರೂ ಮರುಳು ಮಾಡಬಲ್ಲುದು...
ತುಂಬಾ ಒಳ್ಳೆ ಲೇಖನ.
ಹೀಗೆ ಬರೀತಾ ಇರಿ
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಅದು ನನ್ನ ಮನ ತಟ್ಟಿದ ಗೀತೆ, ಈಗಲೂ ಆಗಾಗ ಕೇಳುತ್ತಿರುತ್ತೇನೆ. ಪ್ರತಿಕ್ರಿಯೆಗೆ ವ೦ದನೆಗಳು.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ನಮಸ್ಕಾರ ಕುಣಿಗಲ್ ಮ೦ಜುನಾಥರಿಗೆ, ನಮ್ಮ ವೃತ್ತಿ ಜೀವನದಲ್ಲಿ ಇ೦ತಹ ಸನ್ನಿವೇಶಗಳು ನೂರಾರು ಬರುತ್ತಲೇ ಇರುತ್ತವೆ, ಆದರೆ ಮಾನವೀಯತೆಯ ಆಧಾರದ ಮೇಲೆ ಕೆಲವೊಮ್ಮೆ ನಮ್ಮ ಪೂರ್ವ ನಿರ್ಧಾರಿತ ಮಾನದ೦ಡಗಿಗಿ೦ತ ಹೊರಗಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಕ್ರಿಯೆಗೆ ವ೦ದನೆಗಳು.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಸಾರ್ ತುಂಬಾ ಒಳ್ಳೆಯ ಕೆಲಸ.
ಉ: ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..
ಪ್ರತಿಕ್ರಿಯೆಗೆ ವ೦ದನೆಗಳು ಚೇತನ್.