23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

February 7, 2011 - 12:03pm
modmani

ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಹೋಗಿದ್ದೆ.  ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ.  ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ ಯಾರಿಗೂ ಕೇಳಲಿಲ್ಲ. ಅಷ್ಟೇ ಏಕೆ ಯಾವ ಕವಿಯನ್ನೂ/ ಸಾಹಿತಿಯನ್ನೂ ನೋಡಲಿಲ್ಲ.

ಮನೆಮಂದಿಯೊಂದಿಗೆ ಅಲ್ಲಿಗೆ ಹೋದ ನನ್ನ ಮೊದಲ ಗಮನ ಇದ್ದದ್ದು  ಪುಸ್ತಕ ಪ್ರದರ್ಶನದತ್ತ. ಆದರೆ ಪಾರ್ಕಿಂಗ್ ಸಿಗುವುದರೊಳಗೆ ಸುಮಾರು ಅರ್ಧ ಗಂಟೆ ಸಮಯ ಕಳೆದು ಹೋಯಿತು.  ವಾಹನ ನಿಲ್ಲಿಸಿ, ನಡೆದು ಹೊರಟರೆ, ಊರ ಜಾತ್ರೆಯಲ್ಲಿ ಹರಡಿದಂತೆ ವ್ಯಾಪಾರಿಗಳ ಸುಗ್ಗಿ, ಏನುಂಟು ಏನಿಲ್ಲ ಇಲ್ಲಿ?  ಹಾಲು ಬಿಳುಪಿನ ಅಂಗಿಗಳು ಬೇಕೆ..? ಬೆಂಗಳೂರು ಚಳಿ ತಡೆಯುವ ಸ್ವೆಟರುಗಳೇ..?  ಬಣ್ಣದ ಬಲೂನುಗಳೇ?, ನೀರಿನಲ್ಲಿ ಹಾಕಿದರೆ ಊದಿಕೊಳ್ಳುವ  ಬಣ್ಣಾದ ಮಣಿಗಳೇ?  ನವಿಲುಗರಿಗಳೇ?  ರಾಜಣ್ಣ , ವಿಷ್ಣುವರ್ಧನರ  ಚೆಂದದ ಕಟ್ಟು ಹಾಕಿಸಿಕೊಂಡ ಚೆಂದದ  ಚಿತ್ರಗಳೇ?  ಬಾಯಾರಿಕೆ ತಣಿಸಲು ಎಳನೀರು, ಕಬ್ಬಿನಹಾಲು, ಹಣ್ಣಿನರಸಗಳೇ? ರಂಗವಲ್ಲಿ ಹಾಕುವ ಹೊಸ ಸಲಕರಣೆಗಳೇ? ಹೊಸಮಾದರಿಯ ಒಂದೊಂದು ಕೋನದಿಂದ ಒಂದೊಂದು ರೀತಿಯಾಗಿ ಕಾಣುವ ಚಿತ್ರಪಟಗಳೇ ಜೋಕು, ದೊಡ್ಡವರ ಜೋಕು, ಪೋಲಿ ಜೋಕು, ಜ್ಯೋತಿಷ್ಯದ ಪುಸ್ತಕಗಳೇ?  ಅಂದದ ಹೆಂಗಸಿನ ಚೆಂದಗಾಣಿಸುವ  ಶೃಂಗಾರ ಸಾಮಗ್ರಿಗಳೇ? ಎಲ್ಲವೂ ಇದ್ದ ಈ ಬೀದಿಯನ್ನು ಹಾದು  ಮುಖ್ಯದ್ವಾರಕ್ಕೆ ಬರುವುದರಲ್ಲಿ ಸಾಕು ಬೇಕಾಯಿತು.

ಹೌದು  ಇದೆಲ್ಲದಕ್ಕೂ ಖಳಸಪ್ರಾಯವಾಗಿ ಸುತ್ತೆಲ್ಲಾ  ಫ್ಲೆಕ್ಸ್ ಬೋರ್ಡುಗಳು. ಕನ್ನಡ ಓರಾಟಗಾರರ ಚಿತ್ರಗಳು,  ಪಾಪ ಅವರ ಮಧ್ಯೆ ಸಮ್ಮೇಳನಾಧ್ಯಕ್ಷ  ಹಿರಿಯ 'ಜೀವಿ'ಯವರ ಚಿತ್ರ!.  ಬೆಂಗಳೂರು 'ಮೆಜೆಸ್ಟಿಕ್' ನಿಂದ ಸಮ್ಮೇಳನಕ್ಕೆ ಉಚಿತವಾಗಿ ಕರೆತರುವ ಆಟೋಗಳು.  ಕೈಕೊಟ್ಟ  ಈಟಿ ( ಐ.ಟಿ) ಗಳು.

 ಕನ್ನಡಿಗರು ತುಂಬಾ ಮೃದು ಸ್ವಭಾವದವರೆನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಎಂತಹುದೇ   ಭದ್ರತಾ ತಪಾಸಣೆ ಇರಲೇ ಇಲ್ಲ!  ಅಷ್ಟು ಜನ ಸೇರಿದ ಸಭೆ ಸಂಪೂರ್ಣ ಸುರಕ್ಷಿತವೆಂದು ಯಾರೂ ಖಾತರಿ ಮಾಡಿಕೊಳ್ಳಬೇಕಾಗಿಲ್ಲ.  ನೀವೇ ನೋಡಿದಿರಲ್ಲ, ಎಂತಹ ಸುರಕ್ಷತೆಯೂ  ಇಲ್ಲದಿದ್ದರೂ ಯಾವುದೇ ತೊಂದರೆ ಇಲ್ಲದೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದದ್ದು..! ಬೆಂಗಳೂರಿನಲ್ಲಿ ಹಲವು ಸಭೆ ಸಮಾರಂಭಗಳು ಜರುಗುತ್ತಲೇ ಇರುತ್ತವೆ, ಹಾಗಾಗಿ   ಕೋಟಿ ಜನಸಂಖ್ಯೆಯ ಬೆಂಗಳೂರಲ್ಲಿ  ನಾಲ್ಕೈದು ಲಕ್ಷ  ಕನ್ನಡ ಜನ ಸೇರುವ ಈ ಸಮಾರಂಭಕ್ಕೆ ಏನೂ ಸಮಸ್ಯೆಯಿಲ್ಲ.

ಇನ್ನು ಪುಸ್ತಕ ಪ್ರದರ್ಶನದ ಒಳ ಹೋಗಲು, ನೂಕು ನುಗ್ಗಲು,  ಒಳಗೆ ನಿಮ್ಮ ಕುತೂಹಲ ತಣಿಸಲು  ನೂರಾರು ಪ್ರಕಾಶಕರ ಲಕ್ಷಾಂತರ ಪುಸ್ತಕಗಳು. ತಮಿಳಿನ ರಂಗವಲ್ಲಿ, ಇಂಗ್ಲಿಷಿನ ರೈಮ್ , ಜ್ಯೋತಿಷ್ಯದ ಪುಸ್ತಕಗಳ ಜೊತೆಯಲ್ಲಿ, ವಿವಿಧ ಜ್ಯೋತಿಷ್ಯಮಣಿಗಳು, ಇವುಗಳ ಜೊತೆಗೇ, ಸಮಗ್ರ ಕುವೆಂಪು ಕಾವ್ಯ,  ಶೂನ್ಯಸಂಪಾದನೆಯ ವಿಮರ್ಶೆ, ಕೌಟಲೀಯ ಅರ್ಥಶಾಸ್ತ್ರ,   ಲಂಕೇಶ್ ಪ್ರತಿಪಾದಿತ  ಐಲ್ ಪುಲ್ಲಿಂಗ್ ಚಿಕಿತ್ಸೆ.  ಇಗೋ ಕನ್ನಡ, ಭಾಷೆ, ಗಾಂಧೀಜಿಯ ಆತ್ಮ ಚರಿತ್ರೆ.  ಅಲ್ಲಿರುವ ಪುಸ್ತಕಗಳನ್ನು ಕಣ್ತುಂಬಿಕೊಳ್ಳಲೂ ಸಾಧ್ಯವಿಲ್ಲದಷ್ಟು ಜನಜಂಗುಳಿ.  ಮಳಿಗೆ ನೋಡಿಕೊಳ್ಳಲ್ಲು ಇರುವ ಇಬ್ಬರಿಗೆ ಕಣ್ಣು ತಿರುಗಿಸಲೂ ಪುರುಸೊತ್ತಿಲ್ಲದಷ್ಟು ಕೆಲಸ, ಬಿಲ್ಲು ಹರಿಯುವುದರೊಳಗೆ ಇಲ್ಲೊಂದು ಪುಸ್ತಕ ಹಾರಿಹೋದರೆ? ದೇವನೇ ಬಲ್ಲ.  ಕಾಸು ಕೊಟ್ಟು ಪುಸ್ತಕ ಕೊಂಡವರೆಷ್ಟೋ?  ಮೆಲ್ಲಗೆ  ಜೋಳಿಗೆಯೊಳಗೆ ನುಸುಳಿದವೆಷ್ಟೋ? ಇರಲಿ ಬಿಡಿ ಕನ್ನಡ ಕೃತಿಗಳಿಗೆ ಓದುಗರು ಸಿಕ್ಕರಲ್ಲಾ ಅದು ಮುಖ್ಯ. ತಪ್ಪು ನಾವು ಹೀಗೆಲ್ಲಾ ಅನ್ನಬಾರದು.  "ಏಳು" ಕೋಟಿಯ ವಹಿವಾಟು ನಡೆದಿದೆ ಅಲ್ಲಿ ಗೊತ್ತಾ?  ಜೊತೆಗೆ ಪುಸ್ತಕ ಪ್ರದರ್ಶನ ಇನ್ನೂ ಮುಂದುವರೆದಿದೆಯಂತೆ.  ಸದ್ಯ ನಮ್ಮ ರೈತರು ಈರುಳ್ಳಿಯನ್ನು ರಸ್ತೆಯಲ್ಲಿ ಸುರಿದ ಹಾಗಾಗಲಿಲ್ಲವಲ್ಲ.!

ಸಾರಸ್ವತ ಲೋಕ ಒಗ್ಗಟ್ಟಾಗಿ, ಚಿಮೂಗೆ  ಗೌರವ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆಯಂತೆ, ಆದರೆ ಬಡಸಾಹಿತಿಯ ಮಾತಿಗೇನು ಬೆಲೆ.  ಕನ್ನಡದ ಕೊಲೆಗಡುಕ ಇಂಗ್ಲಿಷ್ ಎಂದರೆ ಯಾರಿಗೇನು ನಷ್ಟ. ನಮ್ಮ ಅಡಿಗೆಯವರು ನೈಫ್ ಅನ್ನೇ ಹಿಡಿಯುತ್ತಾರೆ, ಡಿನ್ನರಿಗೇ ಕರೆಯುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gopaljsr on

ತುಂಬಾ ಚೆನ್ನಾಗಿದೆ ....
ಖಳಸಪ್ರಾಯ
ಓರಾಟಗಾರರ
ಸರಿ ಮಾಡಿ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinay_2009 on

"ಖಳಸಪ್ರಾಯ, ಓರಾಟಗಾರರ" -- ಇವು ಉದ್ದೇಶಪೂರ್ವಕವಾಗಿ ಬರೆದದ್ದಂತಿದೆ ಗೋಪಾಲ್ ಸರ್, ಏಕೆಂದರೆ "ಓರಾಟಗಾರ" ಗಾರರ (ರಾಜಕಾರಣಿ) ಚಿತ್ರಗಳು ಸಮ್ಮೇಳನದಲ್ಲಿ ಅನಾವಶ್ಯಕವಾಗಿಯೇ ಹೆಚ್ಚು-ಹೆಚ್ಚು "ಕಣ್ಣು ಕುಕ್ಕುತ್ತಿದ್ದವು". ಹಾಗೆಯೇ ಅಟೋದವರು ಹೇಗೆ ಮಾಡಿದ್ದು ಸರಿಯಿಲ್ಲ. ಹಲವೆಡೆ ಅವರ ಪತ್ತೆಯೇ ಇರಲಿಲ್ಲ...!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by modmani on

;)

ವಿನಯರ ಅಭಿಪ್ರಾಯ ಸರಿ ಅನ್ಸುತ್ತೆ ಗೋಪಾಲ್ ಸರ್.
ಅಥವಾ ಖಳಸಪ್ರಾಯ ಖಳಸಮಾಯ ಎಂದಾಗಬೇಕೋ ..;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by modmani on

// ಲೇಖಕರ ನೋವು ಏನು ಎಂಬುದು
ವಿಜಯ್ ಇದು ಕನ್ನಡಿಗರೆಲ್ಲರ ನೋವು.

ಸಮ್ಮೇಳನದ ಠರಾವುಗಳಿಗೆ ಸಿಗುವ ಮರ್ಯಾದೆ ಅಷ್ಟರಲ್ಲೇ ಇದೆ. ಈ ಬಾರಿಯ ಸಮ್ಮೇಳನಕ್ಕೆ ಹಣಕಾಸಿನ ತೊಂದರೆಯಾಗಿದೆಯಂತೆ! ಏಳು ಕೋಟಿ ರೂಪಾಯಿಗಳ ಪುಸ್ತಕದ ವಹಿವಾಟು ನಡೆದೆಡೆಯಲ್ಲಿ ಸಮ್ಮೇಳನದ ಖರ್ಚಿಗೆ ಹಣ ಕಡಿಮೆಯಾಯಿತೆಂದರೆ, ಇದು ಅಯೋಜಕರ ದೂರದೃಷ್ಟಿಯ ಕೊರತೆಯಲ್ಲವೇ?. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಿ ಎಂದು ಗೋಗರೆಯುವ ಬದಲು, ಕನ್ನಡದಲ್ಲಿ ವ್ಯವಹರಿಸುವ ನಿಯಮ ತಂದರೆ, ಈ ಕೆಲಸ ತಂತಾನೇ ಆಗುವುದಿಲ್ಲವೇ?. ಬ್ಯಾಂಕುಗಳ/ಮೊಬೈಲ್ ಕಂಪನಿಗಳ ಅಥವಾ ಹಲವಾರು ದಿನಚರಿ ವಸ್ತುಗಳ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಕನ್ನಡದ ಸುಳಿವೇ ಇಲ್ಲ. ಇಲ್ಲೆಲ್ಲಾ ಕಾನೂನು ಮಾಡಬಹುದಲ್ಲ. ಎಫ್.ಎಂ. ರೇಡಿಯೋಗಳ ಕನ್ನಡವನ್ನು ತಿದ್ದುವುದು ಹೇಗೆ? ಎಲ್ಲಕ್ಕಿಂತ ಮುಖ್ಯವಾಗಿ ಶಾಲೆಗಳಲ್ಲಿ ಕನ್ನಡ ಮಾತಾಡಿದರೆ ಫೈನ್ ಹಾಕುವುದನ್ನ, ಟೀಚರ್ಸ್ ಗಳು ರೇಗುವುದನ್ನ (ಹಾಗೂ ಈ ಮೂಲಕ ಕನ್ನಡದ ಕಂದಮ್ಮಗಳ ಮನದಲ್ಲಿ ಕನ್ನಡ ಮಾತಾಡಿದರೆ ತಪ್ಪಿರಬಹುದೆನ್ನುವ ಅರಿಮೆ ಬೆಳೆಸುವುದನ್ನ) ತಪ್ಪಿಸುವುದು ಹೇಗೆ..?

ಕಂಪ್ಯೂಟರಿನಲ್ಲಿ ಸರ್ಕಾರೀ ಬಳಕೆಗೆ ಮತ್ತು ಇ-ಆಡಳಿತ ಸೇವೆಗಳಲ್ಲಿ ಕನ್ನಡ ಅಳವಡಿಸುವ ವಿಷಯದಲ್ಲಿ, ದೂರದೃಷ್ಟಿಯುಳ್ಳ ಮತ್ತು ಕಾರ್ಯಸಾಧುವಾದ ತಂತ್ರಾಂಶ ಬಳಕೆಗೆ ಶೀಘ್ರ ನಿರ್ಧಾರ ಕೈಗೊಳ್ಳದಿದ್ದಲ್ಲಿ ಕನ್ನಡವನ್ನು ಆಡಳಿತದಿಂದ ಓಡಿಸುವುದು ಸಹಜವಾಗಿಯೇ ಆಗುತ್ತದೆ.

ಈ ಸಮ್ಮೇಳನದಲ್ಲಿ ಬ್ಲಾಗ್ ಬರಹಗಾರರಿಗೆ ವೇದಿಕೆ ಇತ್ತೇ ಇಲ್ಲವೇ ನನಗೆ ತಿಳಿಯದು, ಆಧುನಿಕತೆಯನ್ನ ಆಲಂಗಿಸಿಕೊಳ್ಳಲು ಸಿಧ್ಧವಾಗದಿದ್ದರೆ ಕನ್ನಡ ಉಳಿಯುವುದಾದರೂ ಹೇಗೆ? ಈ ಕೆಲಸಗಳು ಸಮ್ಮೇಳನದಲ್ಲಿ ಆಗುತ್ತಿಲ್ಲವೆಂಬುದು ನನ್ನ ನೋವು. ಕೇವಲ ಸಾಹಿತ್ಯದಿಂದ ಭಾಷೆ ಉಳಿಯುತ್ತದೆಂಬುದು ಕನಸಷ್ಟೇ..?

ಕಡೆಗೊಮ್ಮೆ ಸಂತಸದ ಸುದ್ದಿ ಎಂದರೆ, ಹಂಸರಾಜರು ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಕೊಡಲೊಪ್ಪಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raynuka on

ಇದು ಎಲ್ಲ ಕನ್ನಡಿಗರ ನೋವಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿನಾದ್ಯಂತ ಹೆಸರು ಗಳಿಸಿದ ಬೆಂಗಳೂರು ಸರ್ಕಾರಿ ಬಳಕೆ ಮತ್ತು ಇ-ಆಡಳಿತದಲ್ಲಿ ಕನ್ನಡ ಅಳವಡಿಸುವ ಮಹತ್ಕಾರ್ಯವನ್ನು ಬೇಗ ಮಾಡಬೇಕು. cbse ಮತ್ತು icse ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಿರಬೇಕು. ಕನಿಷ್ಠ ಪಕ್ಷ ಐದನೇ ತರಗತಿವರೆಗೆ ಮಕ್ಕಳು ಕನ್ನಡ ಓದಲೇ ಬೇಕು
ಒಳ್ಳೆಯ ಲೇಖನ ...ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jokumar on

ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಧಿಕವಾಗಿ ಮಾರಾಟಗೊಂಡ ಪುಸ್ತಕಗಳು -
೧) ಮೂವತ್ತು ದಿನಗಳಲ್ಲಿ ಇಂಗ್ಲೀಷನ್ನು ಕಲಿಯಿರಿ!
೨) ಮಾಟ, ಮಂತ್ರ ಗಳಿಂದ ನಿವಾರಣೋಪಾಯಗಳು ಬರೀ ಮೂವತ್ತು ದಿನದಲ್ಲಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rajgowda on

ಬಹುಷಃ ಇಷ್ಟೊಂದು ನಿರಾಸರಗುವ ಅವಶ್ಯಕತೆಯಿಲ್ಲ ಅನ್ನಿಸುತ್ತೆ. ಈ ಬಾರಿ ಕನ್ನಡ ಸಮ್ಮೇಳನಕ್ಕೆ ಖಂಡಿತ ಊತ್ತಮ ಪ್ರತಿಕ್ರಿಯೆ ಬಂದಿದೆ. ನಾನು ಸೇರಿದಂತೆ ನನ್ನ ಅನೇಕ ಐ ಟಿ ಮಿತ್ರರು ಭಾಗವಯಿಸಿ ಹಲವರು ಪುಸ್ತಕಗಳನ್ನು ಕೊಂಡೆವು ಹಾಗು ಅನೇಕ ಸಾಹಿತಿಗಳನ್ನು ಹತ್ತಿರದಿಂದ ನೋಡುವ ಅವಕಾಶವು ದೊರೆಯಿತು. ಎಲ್ಲದರಲ್ಲೂ ತಪ್ಪು ಹುಡುಕುವ ಬದಲು ಸಿಗುವ ಅವಕಾಶವನ್ನು ನಾವು ಎಷ್ಟು ಸದುಪಯೋಗ ಪಡಿಸಿಕೊಂದೆವು ಅನ್ನುವುದರ ಮೇಲೆ ಸಮ್ಮೇಳನದ ಯಶಸ್ಸು ಅವಲಂಬಿಸಿದೆ. ರಾಜಕೀಯ ನಾಯಕರು ಹಾಗು ಅವರ ಕಟೌಟ್ಗಳ ವಿಷಯ ಬಿಟ್ಬಿಡಿ ಅವೆಲ್ಲ ಸರಿಪಡಿಸಲಾಗದ ವಿಷಯಗಳು, ಸಮ್ಮೇಳನದಲ್ಲಿ ನೋಡಿದ ಪುಸ್ತಕಗಳ ರಾಶಿ, ಜನರ ಜಾತ್ರೆ, ಕೊಂಡ ಅಪರೂಪದ ಪುಸ್ತಕಗಳ ಮಧ್ಯೆ ಚಿಕ್ಕ ಪುಟ್ಟ ದೋಷಗಳು ಕಾಣಿಸಲೇ ಇಲ್ಲ.
ನನಗಂತೂ ಈ ಬಾರಿಯ ಸಮ್ಮೇಳನ ತುಂಬಾ ಖುಷಿ ಕೊಟ್ಟಿತು. ಬೆಂಗಳೂರಿನಲ್ಲಿ ವರ್ಷಕ್ಕೆ ಒಮ್ಮೆಯಾದರೂ ಇಂತ ಸಮ್ಮೇಳನ ನಡೆಯಬೇಕು ಅನ್ನಿಸಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anant pandit on

ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಚರ್ಚಾಗೋಷ್ಠಿಗಳು ನಡೆದರೂ ಕನ್ನಡವನ್ನು ಇ೦ಟರ್ ನೆಟ್ ನಲ್ಲಿ ಎಲ್ಲರೂ ಬಳಸುವ೦ತಾಗಲು, ಆದಳಿತದಲ್ಲಿ ಉಪಯೋಗಿಸುವ೦ತಾಗಲು ಏನು ಸುಧಾರಣೆ ಅವಶ್ಯಕ ಎ೦ಬುದು ಚರ್ಚಿತವಾಗಲೇ ಇಲ್ಲ. ಇ೦ದು ಬರಹ ಇತ್ಯಾದಿ ಹಲವಾರು ತ೦ತಾ೦ಶಗಳಿದ್ದರೂ ಯಾವುವೂ ಏಕರೂಪ ವಾಗಿಲ್ಲದಿರುವುದರಿ೦ದ ಬೆ೦ಗಳೂರಿನಲ್ಲಿ ನೀವು ಒ೦ದು ಕನ್ನಡ ಪತ್ರವನ್ನು ಯಾವುದೇ ತ೦ತ್ರಾ೦ಶ ಉಪಯೋಗಿಸಿ ಸಿದ್ಧಪಡಿಸ್ಕೊ೦ಡು ಹೋದರೆ ಅದನ್ನು ಪ್ರಿ೦ಟ್ ಮಾಡಿಸಲು ಸಾಧ್ಯವಿಲ್ಲದ ಪರಿಸ್ಥಿತಿಇದೆ. ನೀವು ಬರಹ ಉಪಯೋಸಿದ್ದರೆ ಅವನು ಅವನು ನನ್ನ ಹತ್ತಿರ ನುಡಿ ಇದೆ. ಎನ್ನುತ್ತಾನೆ. ಇ೦ದು ಆಗಬೇಕಾದ ಅತ್ಯಗತ್ಯ ವೆ೦ದರೆ ಯಾವುದೇ ತ೦ತ್ರಾ೦ಶ ಇನ್ನೊ೦ದು ತ೦ತ್ರಾ೦ಶಕ್ಕೆ ಬದಲಾಯಿಸಲು ಸಾಧ್ಯವಾಗುವ೦ತಹ ಏಕರೂಪ ತ೦ತ್ರಾ೦ಶ. ಕುವೆ೦ಪು ತ೦ತ್ರಾ೦ಶ ಬಿಡುಗಡೆ ಆಗಿದೆ ಎನ್ನುತ್ತಾರೆ. ಆದರೆ ಅದರ ಉಪಯೋಗ ಎಷ್ಟು ಸಾಧ್ಯ ಎನ್ನುವುದು ಜನಸಮಾನ್ಯರ ಗಮನಕ್ಕೆ ಬ೦ದಿಲ್ಲ. ಈ ವಿಚಾರದಲ್ಲಿ ಪರಿಷತ್ತು, ಸರಕಾರ ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಇದು ಸಾಧ್ಯಾವಾದರೆ ಸಾಹಿತ್ಯದ ಬೆಳವಣಿಗೆಗೂ ಅತಿಹೆಚ್ಚಿನ ಸಹಕಾರಿ. ಪುಸ್ತಕದ ಬೆಲೆಗಳೂ ಕಡಿಮೆ ಆಗಲು ಸಾಧ್ಯ. ಅ೦ತಹ ಯುನಿಕೋಡ್ ತ೦ತ್ರಾ೦ಶದ ಬಗ್ಗೆ ಪರಿಷತ್ತು ಗಮನ ಹರಿಸಲಿ. ಆಗ ಕನ್ನಡ ತಾನೇ ಉಳಿದು ಬೆಳೆಯುತ್ತದೆ.

ಅನ೦ತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.