ರಾಜೀವ್ ದೀಕ್ಷಿತರ ಬಗ್ಗೆ ಶುರುವಾದ ಬರಹವೊಂದರ ಚರ್ಚೆ ವೈದ್ಯ ಪಧ್ಧತಿಗಳತ್ತ ತಿರುಗಿತು. ಇದರಲ್ಲಿ ವೃತ್ತಿಯಿಂದ ವೈದ್ಯರಾದ ಶ್ರೀಯುತ ಶ್ರೀನಿವಾಸ ಕಕ್ಕಿಲ್ಲಾಯ ಅವರು ನನ್ನ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತಾ ಆಧುನಿಕ ವೈದ್ಯ ಪಧ್ಧತಿ ಮಾತ್ರ ವೈಜ್ನಾನಿಕ ಎಂತಲೂ ಉಳಿದ ಪಧ್ಧತಿಗಳಿಗೆ ಇರುವ ವೈಜ್ನಾನಿಕ ಪುರಾವೆ ತಮಗೆ ಸಿಕ್ಕಿಲ್ಲ ಎಂಬ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಈ ವಾದ ವಿವಾದಗಳನ್ನೆಲ್ಲಾ ಬದಿಗಿಟ್ಟು, ಒಬ್ಬ ರೋಗಿಯ ದೃಷ್ಟಿಯಲ್ಲಿ ಎರಡು ಪ್ರಮುಖ ವೈದ್ಯ ಪಧ್ಧತಿಗಳ ತುಲನೆ ಮಾಡುವ ಒಂದು ಸಣ್ಣ ಪ್ರಯತ್ನ. ಮೊದಲನೆಯದ್ದು ಆಧುನಿಕ ವೈದ್ಯ ಪಧ್ಧತಿ, ಎರಡನೆಯದು ಆಯುರ್ವೇದಿಕ್, ನ್ಯಾಚುರೋಪತಿ, ಯೋಗ ಮತ್ತು ಪ್ರಾಣಾಯಾಮಗಳನ್ನೊಳಗೊಂಡ ಪಾರಂಪರಿಕ ಚಿಕಿತ್ಸಾ ಪಧ್ಧತಿ. ಇಲ್ಲಿ ರೇಖಿ ಆಕ್ಯುಪಂಕ್ಚರ್ ಇತ್ಯಾದಿಗಳನ್ನೆಲ್ಲ ಸೇರಿಸಿಲ್ಲ ಯಾಕೆಂದರೆ ಅವುಗಳ ಬಗ್ಗೆ ನನಗೆ ಕಿಂಚಿತ್ತೂ ತಿಳಿಯದು.
(ಯಾವ ಪಾಯಿಂಟುಗಳೂ ಆದ್ಯತೆ ಮೇರೆಗೆ ಬರೆದಿದ್ದು ಅಲ್ಲ )
ಮೊದಲಿಗೆ ಆಧುನಿಕ. ನನಗೆ ಕಂಡಂತೆ ಆಧುನಿಕ ಪಧ್ಧತಿಗಳ ಗುಣಗಳು (Benefits) :
೧. ಆಧುನಿಕ ವೈದ್ಯ ಜೊತೆಗೆ ಬೆಳೆದು ಬಂದ ಅಗಾಧ ಶರೀರ ರಚನೆ ಜ್ನಾನ ಮತ್ತು ಅದರ ಮೂಲಕ ರೋಗ ಪತ್ತೆ ವಿಧಾನಗಳು (ರಕ್ತ ಪರೀಕ್ಷೆ, ಎಂಡೋಸ್ಕೊಪಿ ಇತ್ಯಾದಿ)
೨. ಆಧುನಿಕ ವೈದ್ಯದ ಸಂಶೋಧನೆಗಳು ಸರಿಯಾಗಿ ಪ್ರಮಾಣೀಕೃತ ಹಾಗೂ ಗ್ರಂಥೀಕೃತವಾಗಿವೆ. ಆದ್ದರಿಂದ ಪ್ರಪಂಚದ ಎಲ್ಲಾ ಕಡೆ ಹೆಚ್ಚು ಕಮ್ಮಿ ಒಂದೇ ರೀತಿಯ ಬಳಕೆ ಸಾಧ್ಯವಾಗಿದೆ.
೩. ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಗಳು ಆಧುನಿಕ ವೈದ್ಯ ಪಧ್ಧತಿಯ ಕೊಡುಗೆಯೇ. ಶುಶ್ರುತ ಆ ಕಾಲದಲ್ಲೇ ಶಸ್ತ್ರ ಚಿಕಿತ್ಸೆ ಮಾಡಿದ್ದನೆಂದು ಉಲ್ಲೇಖಗಳಿದ್ದರೂ ಅವು ಇಂದಿನವಕ್ಕೆ ಹೋಲಿಸಿದಲ್ಲಿ ತೀರಾ ಸರಳವಾದವುಗಳು. ಹಾಗೂ ಎಲ್ಲರಿಗೂ ಲಭ್ಯವಿದ್ದಂತಹವಲ್ಲ.
೪. ತತ್ ಕ್ಷಣದ ಪರಿಣಾಮ ಬೀರುವ ಔಷಧಗಳು. ಇವು ಹೆಚ್ಚಾಗಿ Symptoms ಅನ್ನು ನಿವಾರಿಸುವಂಥವು. ಉದಾ ಅತಿಯಾದ ಜ್ವರ ಇಳಿಸಲು ಪಾರಾಸಿಟಮೊಲ್, ಮಿತಿಮೀರಿದ ಉರಿಯೂತ ಇಳಿಸಲು ಆಂಟಿ ಇನ್ಫ್ಲಾಮೇಟರಿ ಔಶಧಿಗಳು, ಉಬ್ಬಸ ಇತ್ಯಾದಿಗಳನ್ನು ಹತೋಟಿಗೆ ತರಲು ಸ್ಟಿರಾಯ್ಡ್ ಗಳು ಮತ್ತು ಸಾಮಾನ್ಯ ನೋವಿಗೆ ನೋವು ನಿವಾರಕಗಳು, ಅರಿವಳಿಕೆಗಳು ಇತ್ಯಾದಿ. ಇವೆಲ್ಲ ಬೇರಾವುದೇ ಪಧ್ಧತಿಗಳಲ್ಲಿ ಇದ್ದಂತಿಲ್ಲ.
೫. ಅಸಾಮಾನ್ಯ ರೋಗಗಳಿಗೆ ಮದ್ದು ಕಂಡುಹಿಡಿದ ಕೀರ್ತಿಯೂ ಇದಕ್ಕೆ ಸಲ್ಲುತ್ತದೆ. ಉದಾ ಮಲೇರಿಯಾ, ಟೆಟೆನಸ್ ಇತ್ಯಾದಿ. ಆದರೆ ಕೆಲವೊಂದು ರೋಗಗಳಿಗೆ ಪರಿಣಾಮಕಾರಿ ಔಷಧಿಗಳು ಇನ್ನೂ ಲಭ್ಯವಿಲ್ಲ. ಇದಾ ಕ್ಯಾನ್ಸರ್ ಇತ್ಯಾದಿ.
ಇನ್ನು ಅವಗುಣಗಳು :
೧. ಕೆಲವು ಸಾಮಾನ್ಯ ರೋಗಗಳನ್ನು ಗುಣಪಡಿಸಿಕೊಳ್ಳುವ ದೇಹದ ಶಕ್ತಿಯನ್ನು ಆಧುನಿಕ ಪಧ್ಧತಿ ಗುರುತಿಸುವುದಿಲ್ಲ. ಅಥವಾ ಗೊತ್ತಿದ್ದೂ ಅದನ್ನು ಪ್ರೋತ್ಸಾಹಿಸುವುದಿಲ್ಲ. ಏನಿದ್ದರೂ ಔಷಧ ಕೊಡಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತಾರಲ್ಲ, ಹಾಗೆ.
೨. ಆಧುನಿಕ ವೈದ್ಯ ತುಟ್ಟಿ. ಸಣ್ಣ ಪುಟ್ಟ ಔಷಧಿಗಳೂ ಕೂಡ ಕಾರ್ಖಾನೆಯಲ್ಲೇ ತಯಾರಾಗಬೇಕು. ಆಗ ಇಲ್ಲಿ ಲಾಭ ನಷ್ಟದ ಪ್ರಶ್ನೆ ನುಸುಳಿಕೊಳ್ಳುತ್ತದೆ.
೩. ಆಧುನಿಕ ವೈದ್ಯ ಪಧ್ಧತಿಯಲ್ಲಿ ವೈದ್ಯಕೀಯ ಜ್ನಾನ ವೈದ್ಯನಲ್ಲೇ ಉಳಿದುಕೊಳ್ಳುತ್ತದೆ. ರೋಗಿಗೆ ತಾನು ಏನು ತಿನ್ನುತ್ತಿದ್ದೇನೆಂಬುದೇ ಗೊತ್ತಿರುವುದಿಲ್ಲ. ರೋಗಿ ತಿಳಿಯಬಯಸಿದರೂ ಅದು ಆತನಿಗೆ ಮೀರಿದ್ದಾಗಿರುತ್ತದೆ. ಇದು ತೀವ್ರತರ ರೋಗಗಳ ವಿಷಯದಲ್ಲಿ ಒಳ್ಳೆಯದೇ. ಯಾಕೆಂದರೆ ರೋಗಿ ತಾನು ಅರೆಬರೆ ತಿಳಿಯುವುದಕ್ಕಿಂತ ವೈದ್ಯ ಹೇಳಿದಂತೆ ಕೇಳುವುದೇ ವಾಸಿ. ಆದರೆ ಇದರಿಂದ ಸಾಮಾನ್ಯ ಸಮಸ್ಯೆಗಳಿಗೂ ವೈದ್ಯರನ್ನೇ ಅವಲಂಬಿಸಬೇಕಾಗುತ್ತದೆ ಎನ್ನುವುದೂ ನಿಜ.
೪. ರೋಗ ಗುಣವಾಗುವುದೇನಿದ್ದರೂ ರೋಗಿಯ ಪ್ರಯತ್ನದಿಂದಲೇ, ಔಶಧಿಗಳೇನಿದ್ದರೂ ರೋಗಿಗೆ ಸಹಾಯ ಮಾಡಲು ಎಂಬುದು ಆಧುನಿಕ ವೈದ್ಯಕ್ಕೆ ಗೊತ್ತಿಲ್ಲ. ಎಲ್ಲಾ ತನ್ನ ಔಷಧಿಯಿಂದಲೇ ಗುಣವಾಗುತ್ತದೆ/ಗುಣವಾಗಬೇಕು ಎಂಬುದು ಆಧುನಿಕ ವೈದ್ಯನ ಆಗ್ರಹ. ಅದಕ್ಕೇ ಎಷ್ಟೋ ಬಾರಿ ಔಷಧಿ ದೇಹಕ್ಕೆ ಒಗ್ಗುವುದಿಲ್ಲ ಅಥವಾ ಗುಣವಾದ ರೋಗ ಮತ್ತೆ ಮರುಕಳಿಸುತ್ತದೆ. ಯಾಕೆಂದರೆ ರೋಗಕ್ಕೆ ಕಾರಣವಾದ ಅಂಶಗಳನ್ನು ನಿವಾರಿಸಲು ರೋಗಿಗೆ ವೈದ್ಯ ಮನದಟ್ಟು ಮಾಡಿಲ್ಲ ಅದಕ್ಕೆ.
೬. ಸೈಡ್ ಇಫೆಕ್ಟ್ಸ್ ಎಲ್ಲರಿಗೂ ತಿಳಿಸಿರುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಇತರ ಪಧ್ಧತಿಗಳಲ್ಲಿ ಅಷ್ಟಾಗಿ ಇಲ್ಲ. (ಇಲ್ಲವೇ ಇಲ್ಲ ಎಂದು ಹೇಳಲಾಗದು)
ಇನ್ನು ಬದಲಿ ವೈದ್ಯಪಧ್ಧತಿಗಳದ್ದು ಗುಣಗಳು :
೧. ರೋಗ ಗುಣಪಡಿಸುವುದರಲ್ಲಿ ಆಧುನಿಕ ಪಧ್ಧತಿಗಿಂತ ಹೆಚ್ಚು ಅನುಭವ (ಸಾವಿರಾರು ವರ್ಷಗಳ). ಲೆಬೋರೇಟರಿಯಲ್ಲಿ ಮಾಡುವ ಕೃತಕ ಪರೀಕ್ಷೆಗಳಿಗಿಂತ ನಿಜ ಜೀವನದ ಅನುಭವವೇ ಇಲ್ಲಿ ಮೇಲುಗೈ (ಅದಕ್ಕೇ ಸೈಡ್ ಎಫೆಕ್ಟ್ಸ್ ಕಮ್ಮಿ ಇರಬಹುದೋ ಏನೋ)
೩. ಅನುಭವಜನ್ಯ ತತ್ವಗಳಾದ ತ್ರಿದೋಶಗಳು, ರಕ್ತಶುಧ್ಧಿ ಮುಂತಾದವುಗಳಿಂದ ರೋಗದ ಸಂಪೂರ್ಣ ಶಮನ ಸಾಧ್ಯವಾಗುತ್ತದೆ. ರೋಗ ಮರುಕಳಿಸುವುದಿಲ್ಲ.
೪. ಕ್ಲಿಷ್ಟಕರವಾದ Symptoms ಇರುವ ಸಮಸ್ಯೆಗಳಿಗೆ ಸರಳ ವೈದ್ಯ ಲಭ್ಯವಿದೆ. ಹೆಚ್ಚಿನ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. (ನನ್ನ ತಾಯಿಯವರಿಗೆ ಆಯುರ್ವೇದ ಔಷಧಿ ಮೂಲಕ ಗರ್ಭಕೋಶದ ಕಲ್ಲಿನ ಸಮಸ್ಯೆ ಪರಿಹಾರವಾಗಿತ್ತು. ಶಸ್ತ್ರಚಿಕಿತ್ಸೆಯ ಅಗತ್ಯವೇ ಬೀಳಲಿಲ್ಲ)
೫. ಸಣ್ಣ ಪುಟ್ಟ ಸಮಸ್ಯೆಗಳಿಗೆ (ಜ್ವರ, ಶೀತ ಇತ್ಯಾದಿ) ಮನೆಮದ್ದು ಲಭ್ಯ. ಧನಪಿಶಾಚಿ ಔಷಧಿ ಕಂಪೆನಿಗಳ ಹಂಗಿನ ಅಗತ್ಯವಿಲ್ಲ (ಕಂಪೆನಿಗಳು ಯಾವ ಔಷಧಿ ತಯಾರಿಸಿದರೂ - ಅಲೋಪಥಿ ಇರಲಿ ಅಥವಾ ಆಯುರ್ವೇದಿಕ್ - ಅವು ಧನಪಿಶಾಚಿಗಳೇ)
೬. ಪರ್ಯಾಯ ವೈದ್ಯ ಪಧ್ಧತಿಗಳು ಒಂದು ಕ್ರಮಬಧ್ಧ ಜೀವನವನ್ನು ನಡೆಸಲು ಆಗ್ರಹಿಸುತ್ತವೆ. ಉದಾ ಆಹಾರ ಪಥ್ಯಗಳು. ಬೇಕಾಬಿಟ್ಟಿಯಾಗಿ ಬದುಕಿ ನಂತರ ಅದರಿಂದುಂಟಾದ ಸಮಸ್ಯೆಗಳನ್ನು ನಿವಾರಿಸುವುದು ಇವುಗಳ ಫಿಲಾಸಫಿಯಲ್ಲಿ ಇಲ್ಲ.
ಬದಲಿ ಚಿಕಿತ್ಸಾ ಪಧ್ಧತಿಯ ಅವಗುಣಗಳು :
೧. ಅನುಭವಕ್ಕಿಂತ ಎಲ್ಲಕ್ಕೂ ಸಾಕ್ಷಿ ಕೇಳುವ ಆಧುನಿಕ ಮನೋಭಾವದವರಿಗೆ ಇಲ್ಲಿ ಕೆಲವು ವಿಷಯಗಳಿಗೆ ಸಾಕ್ಷಿ ಸಿಕ್ಕುವುದಿಲ್ಲ. ಉದಾಹರಣೆಗೆ ವಾತ ಪಿಥ್ಥ ಕಫ ಗಳನ್ನು ಲೆಬೋರೇಟರಿಯಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲ.
೨. ಬದಲಿ ಚಿಕಿತ್ಸಾ ಪಧ್ಧತಿಗಳ ಬಗ್ಗೆ ಹೆಚ್ಚಿನ Documentation ಇಲ್ಲ. ಇದರಿಂದ ಎಲ್ಲಾ ಕಡೆ ಒಂದೇ ರೀತಿಯ ಪರಿಹಾರಗಳಿಲ್ಲ. (ಒಂದು ರೀತಿಯಿಂದ ಇದು ಒಳ್ಳೆ ಗುಣವೂ ಹೌದು. Diversity ಅನ್ನುವುದು ಪ್ರಕೃತಿಯ ಗುಣ. ಎಲ್ಲವೂ ಲೆಬೋರೇಟರಿಯಲ್ಲಿ ಇದ್ದಂತೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ಆಯಾಯಾ ಪ್ರದೇಶದಲ್ಲಿ ಪ್ರಕೃತಿಗನುಗುಣವಾಗಿ ಈ ವೈದ್ಯ ಪಧ್ಧತಿಗಳು ಬೆಳೆದಿವೆ).
೩. ಬದಲಿ ವೈದ್ಯ ಪಧ್ಧತಿಗಳನ್ನು ಅನುಸರಿಸಲು ಕಷ್ಟ. ಬರೇ ಒಂದು ಮಾತ್ರೆ ನುಂಗಿದರೆ ಸಮಸ್ಯೆ ನೀಗಿಸುವುದಿಲ್ಲ ಇವು. ನಾಲಗೆ ಚಪಲಕ್ಕೆ ತಡೆ, ಶಿಸ್ತುಬಧ್ಧ ಜೀವನ ಕ್ರಮ ಇವನ್ನೆಲ್ಲ ಕೇಳುತ್ತದೆ. ಸ್ವೇಚ್ಛಾಚಾರಿಗಳಿಗೆ ಇದು ಒಗ್ಗದು.
೪. ಹಿಂದಿನ ಕಾಲದಲ್ಲಿ ಅಷ್ಟಾಗಿ ಕಂಡುಬರದ ರೋಗಗಳು ಇಂದಿನ ಜೀವನದಲ್ಲಿ ಸಾಮಾನ್ಯವಾಗಿವೆ. ಇವುಗಳಿಗೆ ಒಳ್ಳೆಯ ವೈದ್ಯ ಸುಲಭದಲ್ಲಿ ಲಭ್ಯವಿಲ್ಲ. ಉದಾ ಹೃದಯದ ತೊಂದರೆಗಳು, ಕ್ಯಾನ್ಸರ್ ಇತ್ಯಾದಿ. ಇವುಗಳೆಲ್ಲ ಮೊದಲು ಇರಲೇ ಇಲ್ಲವೆಂದಲ್ಲ. ಇದ್ದಿದ್ದರೂ ಕಡಿಮೆ ಸಂಖ್ಯೆಯಲ್ಲಿದ್ದಿರಬಹುದು ಹಾಗೂ ಅಂತಹ ಅಸಹಜ ಸಾವುಗಳು ಗಮನಕ್ಕೆ ಬರದೆ ಹೋಗಿರಬಹುದು. ಆದರಿಂದ ಅವುಗಳಿಗೆ ಸರಿಯಾದ ಚಿಕಿತ್ಸೆಗಳು ಲಭ್ಯವಿಲ್ಲ. (ಈ ರೋಗಗಳಲ್ಲಿ ಹೆಚ್ಚಿನವು ಆಧುನಿಕ ಜೀವನ ಶೈಲಿಯಿಂದ ಬಂದವು ಎಂಬುದು ಬೇರೆ ಮಾತು)
ಇನ್ನು ಇವೆರಡಕ್ಕೂ ಸಂಬಂಧಿಸದ, ಆದರೆ ಈಗಿನ ವೈದ್ಯಕೀಯ ವ್ಯವಸ್ಥೆಯಲ್ಲಿ, ಅದೂ ಭಾರತದಲ್ಲಿರುವ ಕೆಲವು ಸಮಸ್ಯೆಗಳು :
೧. ಢೋಂಗಿ ವೈದ್ಯರುಗಳನ್ನು ಗುರುತಿಸುವ ವ್ಯವಸ್ಥೆಗಳು ಇಲ್ಲಿ ಸರಿಯಾಗಿ ಅನುಷ್ಟಾನ ಆಗಿಲ್ಲ. ಆಧುನಿಕ ಮತ್ತು ಪರ್ಯಾಯ ಎರಡೂ ಪಧ್ಧತಿಗಳಲ್ಲೂ ಢೋಂಗಿ ವೈದ್ಯರಿದ್ದಾರೆ ಎಂಬುದನ್ನು ಗಮನಿಸಬೇಕು.
೨. ಔಷಧೀಯ ಕಂಪೆನಿಗಳು ತಮ್ಮ ಲಾಭಕ್ಕಾಗಿ ನಡೆಸುವ ಕುತಂತ್ರಗಳು (ಕಳಪೆ ಔಷಧಗಳು), ಮತ್ತು ಸುಳ್ಳು ಜಾಹೀರಾತುಗಳು (ಐ-ಪಿಲ್ ಜಾಹೀರಾತು ನೆನಪಿದೆಯಾ) ಇವುಗಳಿಗೆ ಲಗಾಮಿಲ್ಲ.
೩. ವೈದ್ಯರುಗಳು ದುಡ್ಡಿನ ದಾಸರಾಗಿದ್ದಾರೆ. ಧನಪಿಶಾಚಿಗಳಾಗಿದ್ದಾರೆ. ಅನಗತ್ಯ ಪರೀಕ್ಷೆಗಳನ್ನು ನಡೆಸುವುದು, ಬೇರೆ ಔಷಧಿಗಳು ಲಭ್ಯವಿದ್ದೂ ದುಬಾರಿ ಔಶಧವನ್ನೇ ಕೊಡುವುದು, ಸಹಜ ಹೆರಿಗೆ ಸಾಧ್ಯವಿದ್ದೂ ಸಿಸೇರಿಯನ್ ಮಾಡಿಸುವುದು ಇತ್ಯಾದಿ.
ಈ ಬರಹದ ಉದ್ದೇಶ ವೈದ್ಯ ಪಧ್ಧತಿಗಳ ಬಗ್ಗೆ ನನ್ನ ಈವರೆಗಿನ ತಿಳುವಳಿಕೆಯನ್ನು ದಾಖಲಿಸುವುದು ಅಷ್ಟೆ. ರಾಜೀವ್ ದೀಕ್ಷಿತರ ಚರ್ಚೆಯಲ್ಲಿರುವ ಹೇಸಿಗೆಯನ್ನು ಇಲ್ಲಿ ತರುವ ಉದ್ದೇಶವಲ್ಲ. ಈ ಮೇಲಿನ ಅಂಶಗಳಲ್ಲಿ ತಪ್ಪಿದ್ದರೆ ದಯವಿಟ್ಟು ತಿಳಿಸಿ.
ಕೊನೆಯದಾಗಿ ಒಂದು ಮಾತು - ವೈದ್ಯ ಪಧ್ಧತಿ ಮಾನವನ ಬೌಧ್ಧಿಕ ವಿಕಾಸದ ಒಂದು ಅಂಗ. ಇಲ್ಲಿ ಯಾವುದೂ ಅಂತಿಮವಲ್ಲ. ಹಿಂದಿನ ಜ್ನಾನವೊಂದು ಈಗ ಇತಿಹಾಸದ ಪದರಗಳಲ್ಲಿ ಮುಚ್ಚಿಹೋಗಿರುವುದನ್ನು ಅಲ್ಲಗಳೆಯಲಾಗದು. ಸಾಕ್ಷಿ ಇಲ್ಲವೆಂದ ಮಾತ್ರಕ್ಕೆ ಅದನ್ನು ಅಲ್ಲಗಳೆಯುವವರು ಪ್ರಗತಿವಾದಿಗಳಾಗದೆ ವಿತಂಡವಾದಿಗಳೆನಿಸಿಕೊಳ್ಳುತ್ತಾರೆ. ಹಾಗೆಯೇ ಈ ವಿಕಾಸದ ಮುಂದಿನ ಹಂತದಲ್ಲಿ ಈ ಮೊದಲು ತಿಳಿದಿರದ ಹೊಸ ವಿಧಾನಗಳನ್ನು ಕಂಡುಹಿಡಿಯಬಹುದು/ಹಿಡಿದಿರಬಹುದು. ಇದನ್ನು ಒಪ್ಪದವರು ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವವರು ಅಂಧಕಾರದಲ್ಲಿ ಮುಳುಗುತ್ತಾರೆ. ಈ ಎರಡೂ ಪಂಗಡಗಳಲ್ಲಿ ಆದಷ್ಟು ಕಮ್ಮಿ ಜನ ಇದ್ದರೆ ಎಲ್ಲರಿಗೂ ಒಳ್ಳೆಯದು.





ಪ್ರತಿಕ್ರಿಯೆಗಳು
ಉ: ಬೇಕಾಗಿದೆ ಸಮಚಿತ್ತದ ವೈದ್ಯ
ಪ್ರಿಯ ಮಹೇಶ್, ನಿಮ್ಮ ಪ್ರಯತ್ನವೇನೋ ಚೆನ್ನಾಗಿದೆ. ಆದರೆ ಇದಕ್ಕೆ ಉತ್ತರಿಸ ಬೇಕಾದರೆ ನೀವು ಬರೆದಿರುವ ಎಲ್ಲ ಸಾಲುಗಳಿಗೂ ಒಂದೊಂದಾಗಿ ಉತ್ತರಿಸಬೇಕಾಗುತ್ತದೆ, ಅದನ್ನೂ ಮಾಡುತ್ತೇನೆ. ರಾಜೀವ್ ದೀಕ್ಷಿತ್ ಬಗೆಗಿನ ಚರ್ಚೆ ನಿಮಗೇಕೆ ಹೇಸಿಗೆ ಎನಿಸಿತೋ ತಿಳಿಯದು, ಆ ಕೆಸರಲ್ಲಿ ಈ ಚರ್ಚೆಯಾದರೂ ಹುಟ್ಟಿತಲ್ಲ ?
ನೀವಿದನ್ನು ಇಷ್ಟು ಬೇಗ ಬರೆಯುತ್ತೀರಿ ಅಂದುಕೊಂಡಿರಲಿಲ್ಲ. ಈ ಮುಂದಿನದನ್ನು ಮೊದಲೇ ನಿಮ್ಮ ಗಮನಕ್ಕೆ ತರಬೇಕೆಂದಿದ್ದೆ.
ನಾನು ಸುಮಾರು ಮೂವತ್ತು ವರ್ಷಗಳ ಹಿಂದೆ ಬೆಂಗಳೂರು ಸಯನ್ಸ್ ಫೋರಂ ಪ್ರಕಟಿಸಿದ್ದ ಸಯನ್ಸ್ ನಾನ್ ಸಯನ್ಸ್ ಅಂಡ್ ದ ಪಾರಾನಾರ್ಮಲ್ ಎಂಬ ಪುಸ್ತಕದಲ್ಲಿ ಲೇಖನವೊಂದನ್ನು ಓದಿದ್ದೆ. ಕ್ರಿಟಿಕಲ್ ರೀಡಿಂಗ್, ಕೇರ್ ಫುಲ್ ರೈಟಿಂಗ್ ಅಂಡ್ ದ ಬರ್ಮುಡಾ ಟ್ರಯಾಂಗಲ್ ಎನ್ನುವುದು ಅದರ ಶೀರ್ಷಿಕೆ. ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಓದಿದ್ದ ಆ ಲೇಖನದ ಸಾರವು ನನ್ನ ಕಲಿಯುವಿಕೆಗೆ ತುಂಬ ನೆರವಾಗಿತ್ತೆನ್ನುವುದೇ ಅದು ನನಗಿನ್ನೂ ನೆನಪಿರಲು ಕಾರಣ. ಈ ಚರ್ಚೆಗೂ ಅದಕ್ಕೂ ನೇರ ಸಂಬಂಧವೇನೂ ಇಲ್ಲದಿದ್ದರೂ, ಯಾವುದೇ ಲೇಖನವನ್ನು ಓದುವವರೂ, ಬರೆಯುವವರೂ ಅದನ್ನು ಓದಿದರೆ ಸಹಾಯಕವಾದೀತು ಎನ್ನುವುದು ನನ್ನೆಣಿಕೆ. ಅದರ ಕೊಂಡಿ ಇಲ್ಲಿದೆ: http://www.csicop.or... ಸಾಧ್ಯವಾದರೆ ಓದಿ. ನಂತರ ಈ ಚರ್ಚೆಯನ್ನು ಮುಂದುವರಿಸೋಣ.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
ಆಯ್ತು ಶ್ರೀನಿವಾಸ್ ಅವರೆ, ನೀವು ಕೊಟ್ಟ ಲಿಂಕ್ ಓದುವೆ.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
ಮಹೇಶ್, ರಾಜೀವ್ ದೀಕ್ಷಿತರ ಮರಣದ ಸುತ್ತ, ಬಾಬಾ ರಾಮದೇವರ ಯೋಗ, ಆಯುರ್ವೇದ ಚಿಕಿತ್ಸಾ ವಿಧಾನಗಳ ಸುತ್ತ ನಡೆದ ಚರ್ಚೆಯನ್ನು ಗಮನಿಸುತ್ತಿದ್ದೆ. ಇಲ್ಲಿ ಈಗ ನೀವು ಬರೆದ ಹೊಸ ಲೇಖನವನ್ನು ಓದಲು ಅದೇ ಸ್ಫೂರ್ತಿಯಾಯಿತು. ಸಾಮಾನ್ಯ ತಲೆನೋವಿಗೆ ಅಮೃತಾ೦ಜನ ತಿಕ್ಕಿಕೊ೦ಡರೆ ವಾಸಿಯಾಗುತ್ತದೆ, ಹಲ್ಲುನೋವಿಗೆ ಲವ೦ಗವನ್ನು ದವಡೆಯಲ್ಲಿಟ್ಟು ಜಗಿಯುತ್ತಾ ರಸವನ್ನು ನೋವಿರುವ ಹಲ್ಲಿನ ಮೇಲೆ ಬಿಡುತ್ತಾ ಇದ್ದರೆ ಹಲ್ಲು ನೋವು ವಾಸಿಯಾಗುತ್ತದೆ, ಜ೦ತು ಹುಳು ತು೦ಬಿರುವ ಹೊಟ್ಟೆಗೆ ಪರ೦ಗಿ ಹಣ್ಣಿನ ಬೀಜಗಳನ್ನು ತಿನ್ನಿಸಿದರೆ ಹುಳು ಸಾಯುತ್ತವೆ, ಇನ್ನು ಸಾಕಷ್ಟು ಆಯುರ್ವೇದ ತೈಲಗಳು ಅಲೋಪತಿ ಮಾತ್ರೆಗಳು, ಚುಚ್ಚುಮದ್ದುಗಳು ಗುಣಪಡಿಸಲಾಗದ ನೋವನ್ನು ಗುಣಪಡಿಸುತ್ತವೆ. ಲಕ್ವಾ(ಪೆರಾಲಿಸಿಸ್)ಹೊಡೆದು ಕೈ ಕಾಲು ಸ್ವಾಧೀನ ಕಳೆದುಕೊ೦ಡ ವ್ಯಕ್ತಿಗೆ ಆಯುರ್ವೇದ ತೈಲಗಳು ಪುನರ್ಜನ್ಮ ನೀಡುತ್ತವೆ. ಅದೆಷ್ಟೋ ಮೂಳೆ ಮುರಿದ ರೋಗಿಗಳನ್ನು ಕೇವಲ ತೈಲ ಮತ್ತು ಮಸಾಜಿನಿ೦ದ ಗುಣಪಡಿಸುವ "ಭಟ್ಟರಹಳ್ಳಿ" ಬೆ೦ಗಳೂರಿನ ಪಕ್ಕದಲ್ಲೇ ಇದೆ. ಆಲೋಪತಿ ಗುಣಪಡಿಸಲಾಗದ ಲಕ್ಷಾ೦ತರ ರೋಗಿಗಳು ಇಲ್ಲಿ ಗುಣ ಕ೦ಡಿದ್ದಾರೆ. ಅವರಲ್ಲಿ ನಾನೂ ಒಬ್ಬ! ಅಸಾಮಾನ್ಯ ಬೆನ್ನುನೋವಿನಿ೦ದ ಬಳಲುತ್ತಿದ್ದ ನಾನು ಅಲ್ಲಿನ ಆಯುರ್ವೇದ ಚಿಕಿತ್ಸೆ ಪಡೆದ ನ೦ತರ ಇದುವರೆಗೂ ಮತ್ತೆ ಬೆನ್ನುನೋವು ಬ೦ದಿಲ್ಲ! ಮನೆಯ೦ಗಳದ ಕಸ್ತೂರಿ ಮಾತ್ರೆ, ತುಳಸಿದಳ, ಬೆಳ್ಳುಳ್ಳಿ, ಲವ೦ಗ, ಪುದೀನಗಳು ಅದೆಷ್ಟೋ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿ ಹೊ೦ದಿವೆ. ಇನ್ನು ಯೋಗ, ಪ್ರಾಣಾಯಾಮದ ವಿಚಾರಕ್ಕೆ ಬ೦ದರೆ ಇ೦ದು ವಿದೇಶೀಯರು ಭಾರತಕ್ಕೆ ಬ೦ದು ಯೋಗವನ್ನು ಕಲಿತು ವಿಶ್ವದಾದ್ಯ೦ತ ಪ್ರಚುರಪಡಿಸುತ್ತಿದ್ದಾರೆ, ಅದರಿ೦ದ ಸಾಕಷ್ಟು ಉಪಯೋಗಗಳನ್ನು ಪಡೆಯುತ್ತಿದ್ದಾರೆ.
ಹೀಗೆಲ್ಲಾ ಇರುವಾಗ ಆಲೋಪತಿಯನ್ನೇ ಈ ವಿಶ್ವವನ್ನು ಉದ್ಧರಿಸುವ ವೈದ್ಯವಿಜ್ಞಾನ ಎ೦ದು ಪ್ರತಿಪಾದಿಸುವುದರಲ್ಲಿ ಅರ್ಥವಿಲ್ಲ! ನಾರ್ಮಲ್ ಹೆರಿಗೆ ಆಗುವುದನ್ನು ದುಡ್ಡಿನಾಸೆಯಿ೦ದ ಸಿಝೇರಿಯನ್ ಮಾಡಿಸಿ ಬ೦ಗಲೆಗಳ ಮೇಲೆ ಬ೦ಗಲೆ ಕಟ್ಟಿಸಿರುವ ಸಾವಿರಾರು ವೈದ್ಯರನ್ನು ನಾನು ನೋಡಿದ್ದೇನೆ. ಸಣ್ಣ ಖಾಯಿಲೆಗೂ ಎಕ್ಸ್ರೇ, ಸ್ಕ್ಯಾನಿ೦ಗ್ ಎ೦ದು ಬಡವರ ರಕ್ತ ಬಸಿದು ಕುಡಿಯುವ ಧನದಾಹಿಗಳನ್ನೂ ನೋಡಿದ್ದೇನೆ. ಅಷ್ಟೇ ಏಕೆ, ಬ೦ಗಾರಪ್ಪ ಎ೦ಬ ಹೆಸರಿನ ಮಹಾನ್ ವೈದ್ಯ ಬೆ೦ಗಳೂರಿನ ಪ್ರಖ್ಯಾತ ಬೌರಿ೦ಗ್ ಆಸ್ಪತ್ರೆಯಲ್ಲಿ ನಡೆಸಿದ ಕರ್ಮಕಾ೦ಡವನ್ನೂ ನೋಡಿದ್ದೇನೆ. ಇ೦ದಿರಾನಗರದ ಇ..ಎಸ್.ಐ.ಆಸ್ಪತ್ರೆಯ ಅಧೀಕ್ಷಕ ವೈದ್ಯೆ ತಾನು ಮಾಡಿದ ತಪ್ಪುಗಳಿ೦ದಾಗಿ ಆಸ್ಪತ್ರೆಯಲ್ಲೇ ನೇಣು ಹಾಕಿಕೊ೦ಡಿದ್ದನ್ನೂ ನೋಡಿದ್ದೇನೆ. ಇವರು ಹಣದಾಹಿಗಳು, ರಕ್ತಪಿಪಾಸುಗಳು, "ವೈದ್ಯೋ ನಾರಾಯಣೋ ಹರಿಃ" ಎನ್ನುವ ಮಾತಿಗೆ ತದ್ವಿರುದ್ಧವಾಗಿ ಬದುಕುತ್ತಿರುವವರು. ನಿಮ್ಮ ಚರ್ಚೆಯಲ್ಲಿ ಬ೦ದ೦ತೆ ೨೫% ಒಳ್ಳೆಯ ವೈದ್ಯರಿರಬಹುದು ಎನ್ನುವ ಮಾತು ಅಪ್ಪಟ ಸುಳ್ಳು! ಎಣಿಸಿದರೆ ೧೦% ಕೂಡಾ ಒಳ್ಳೆಯ ವೈದ್ಯರು ಸಿಗುವುದು ಕಷ್ಟವಿದೆ! ಈ ಆಲೋಪತಿಗಿ೦ತ ನಮ್ಮ ಆಯುರ್ವೇದದ "ಅಳಲೇಕಾಯಿ ಪ೦ಡಿತರು" ಸಾವಿರ ಪಟ್ಟು ಮೇಲು! ಇದು ನನ್ನ ಅನುಭವಗಳ ಆಧಾರದಿ೦ದ ಮೂಡಿದ ವೈಯಕ್ತಿಕ ಅಭಿಪ್ರಾಯವಷ್ಟೆ! ಯಾರೂ ಇದನ್ನು ಒಪ್ಪಲೇಬೇಕೆನ್ನುವ ಒತ್ತಾಯವಿಲ್ಲ.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
ಧನ್ಯವಾದ ಮಂಜುನಾಥ್ ಅವರೇ. ನಾಲ್ಕಾರು ವಾಕ್ಯಗಳಲ್ಲೇ ಬಹಳಷ್ಟು ಮಾಹಿತಿ ಕೊಟ್ಟಿದ್ದೀರಾ. ಖುಷಿಯಾಯಿತು.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
ಆಧುನಿಕ ವೈದ್ಯ ವಿಜ್ಞಾನ ಹಾಗೂ ಬದಲಿ ಪದ್ಧತಿಗಳ ತುಲನೆ ಅತ್ಯಗತ್ಯ. ಆಧುನಿಕ ವೈದ್ಯ ವಿಜ್ಞಾನದ ರೀತಿ-ನೀತಿಗಳ ಬಗ್ಗೆ, ಅದು ಕಾರ್ಯನಿರ್ವಹಿಸುವ ಬಗ್ಗೆ ಸಾಕಷ್ಟು ಅರಿವಿಲ್ಲದವರೂ ಅದರ ಕಟು ವಿಮರ್ಶೆಗೆ ಇಳಿದು ಹಿಗ್ಗಾ ಮುಗ್ಗಾ ಅದನ್ನು ಹಳಿಯತೊಡಗುವುದು ಸಾಮಾನ್ಯ. ಆಧುನಿಕ ವೈದ್ಯ ಪದ್ಧತಿಯನ್ನು ಟೀಕಿಸುವ ಮೂಲಕವೇ ತಮ್ಮ ಬದಲಿ ಪದ್ಧತಿಯೇ ಅತ್ಯುತ್ತಮವೆಂದು ಸಾರುತ್ತಾ, ಎಲ್ಲವನ್ನೂ ಗುಣಪಡಿಸಬಲ್ಲವರಂತೆ ವರ್ತಿಸುವ ಬದಲಿ ಚಿಕಿತ್ಸಕರೂ ಸಾಕಷ್ಟಿದ್ದಾರೆ. ಆದರೆ ಆಧುನಿಕ ವೈದ್ಯರೇನಾದರೂ ಬದಲಿ ವ್ಯವಸ್ಥೆಯ ಸಮಸ್ಯೆಗಳನ್ನು ತೆರೆದಿಟ್ಟರೆ ಇದೇ ಜನ ಅದನ್ನು ಸಹಿಸದೇ, ಇದೆಲ್ಲ ಬದಲಿ ವ್ಯವಸ್ಥೆಯನ್ನು ಮುಗಿಸುವ ಹುನ್ನಾರವೆಂದು ಬೊಬ್ಬಿರಿಯುತ್ತಾರೆ. ಅಂದರೆ ಆಧುನಿಕ ವೈದ್ಯ ವಿಜ್ಞಾನವು ಇವರೆಲ್ಲರ ಟೀಕೆಗಳನ್ನೂ ಸಹಿಸಿಕೊಂಡು ತೆಪ್ಪಗಿರಬೇಕು ಹಾಗೂ ಆಧುನಿಕ ವೈದ್ಯರಾರೂ ಬದಲಿ ವ್ಯವಸ್ಥೆಗಳ ಬಗ್ಗೆ ಚಕಾರವೆತ್ತಬಾರದು ಎಂದೇ ಅರ್ಥ. ಎಲ್ಲಾ ಸ್ವಾತಂತ್ರ್ಯಗಳೂ ಬದಲಿ ಪದ್ಧತಿಗಳವರಿಗಷ್ಟೆ ಮೀಸಲು!
ಆಧುನಿಕ ವೈದ್ಯ ವಿಜ್ಞಾನವನ್ನು ಹಳಿಯುವಲ್ಲಿ ಅನೇಕ ವಿದ್ಯಾವಂತರೆನಿಸಿಕೊಂಡವರೂ ಸೇರಿಕೊಳ್ಳುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಟೀಕಿಸುವ ಸ್ವಾತಂತ್ರ್ಯವು ಎಲ್ಲರಿಗೂ ಇದೆ ಎನ್ನುವುದನ್ನು ಒಪ್ಪಿಕೊಂಡರೂ, ಟೀಕೆಗಳು ವಸ್ತು ನಿಷ್ಠವಾಗಿರಬೇಕು ಹಾಗೂ ಸಾಧ್ಯವಾದರೆ ರಚನಾತ್ಮಕವಾಗಿರಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲವೆಂದುಕೊಳ್ಳುತ್ತೇನೆ.
ಮಹೇಶ್ ಬರೆದಿರುವುದಕ್ಕೆ ಸಾಕಷ್ಟು ದೀರ್ಘವಾಗಿಯೇ ಪ್ರತಿಕ್ರಿಯಿಸಿದ್ದೇನೆ. ಇಲ್ಲಿ ಬರೆದಿರುವುದು ಸರಿಯಿಲ್ಲ ಎನ್ನುವವರಿಗೆ ಸ್ವಾಗತ; ಆದರೆ ಯಾಕೆ ಸರಿಯಿಲ್ಲ ಮತ್ತು ಇದು ಸರಿಯಿಲ್ಲದಿದ್ದರೆ ಸರಿಯಿರುವುದು ಯಾವುದು ಎನ್ನುವುದನ್ನೂ ಸ್ಪಷ್ಟವಾಗಿ, ಆಕರಗಳೊಂದಿಗೆ ಬರೆದರೆ ಅದಕ್ಕೆ ಬೆಲೆಯಿರುತ್ತದೆ. ಕೇವಲ ಭಾವನಾತ್ಮಕವಾದ ಟೀಕೆಗಳಿಗೆ ಅಥವಾ ವೈಯಕ್ತಿಕ ಮಟ್ಟದ ನಿಂದನೆಗಳಿಗೆ ನಾನು ಉತ್ತರಿಸಲಾರೆ.
ಬದಲಿ ವ್ಯವಸ್ಥೆಯು ಆಧುನಿಕ ವೈದ್ಯ ವಿಜ್ಞಾನಕ್ಕೆ ಎಂದಿಗೂ, ಯಾವ ರೀತಿಯಲ್ಲೂ ಪ್ರತಿಸ್ಪರ್ಧಿಯಲ್ಲ, ಯಾವ ವಿಧದಲ್ಲೂ ಬದಲಿಯೂ ಅಲ್ಲ. ಅವರ ಬಗ್ಗೆ ನಮಗೆ ಹೊಟ್ಟೆ ಕಿಚ್ಚಿಲ್ಲ, ಹೆದರಿಕೆಯಂತೂ ಇಲ್ಲವೇ ಇಲ್ಲ. ಆದರೆ ರೋಗಗಳಿಂದ ಮುಕ್ತಿ ಪಡೆಯುವ ಆಸೆಯಿಂದ ಬದಲಿ ಚಿಕಿತ್ಸಕರೆಂದು ಸ್ವಯಂ ಘೋಷಿಸಿಕೊಳ್ಳುವವರ ಸುಳ್ಳುಗಳಿಗೆ ಜನಸಾಮಾನ್ಯರು ಬಲಿಯಾಗದಂತೆ ಎಚ್ಚರಿಸುವ ಪ್ರಯತ್ನವನ್ನು ಮಾಡುವುದು ಓರ್ವ ವೈದ್ಯನಾಗಿ ನನ್ನ ಕರ್ತವ್ಯವಾಗಿದೆ ಎಂಬ ಕಾರಣಕ್ಕಷ್ಟೇ ಇದನ್ನು ಬರೆಯುತ್ತಿದ್ದೇನೆ.
ಕೊನೆಯ ಸಾಲಿನಿಂದ ಆರಂಭಿಸೋಣ:
>>ವೈದ್ಯ ಪಧ್ಧತಿ ಮಾನವನ ಬೌಧ್ಧಿಕ ವಿಕಾಸದ ಒಂದು ಅಂಗ. ಇಲ್ಲಿ ಯಾವುದೂ ಅಂತಿಮವಲ್ಲ. ಹಿಂದಿನ ಜ್ನಾನವೊಂದು ಈಗ ಇತಿಹಾಸದ ಪದರಗಳಲ್ಲಿ ಮುಚ್ಚಿಹೋಗಿರುವುದನ್ನು ಅಲ್ಲಗಳೆಯಲಾಗದು. ಸಾಕ್ಷಿ ಇಲ್ಲವೆಂದ ಮಾತ್ರಕ್ಕೆ ಅದನ್ನು ಅಲ್ಲಗಳೆಯುವವರು ಪ್ರಗತಿವಾದಿಗಳಾಗದೆ ವಿತಂಡವಾದಿಗಳೆನಿಸಿಕೊಳ್ಳುತ್ತಾರೆ. ಹಾಗೆಯೇ ಈ ವಿಕಾಸದ ಮುಂದಿನ ಹಂತದಲ್ಲಿ ಈ ಮೊದಲು ತಿಳಿದಿರದ ಹೊಸ ವಿಧಾನಗಳನ್ನು ಕಂಡುಹಿಡಿಯಬಹುದು/ಹಿಡಿದಿರಬಹುದು.<<
ಆಧುನಿಕ ವೈದ್ಯ ಪದ್ಧತಿ ಇವತ್ತು ನಿನ್ನೆ ಹುಟ್ಟಿದ್ದಲ್ಲ, ತನ್ನನ್ನು ಕಾಡುತ್ತಿರುವ ಹತ್ತು ಹಲವು ಕಾಹಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ಮನುಷ್ಯನು ಶತಶತಮಾನಗಳಿಂದ ಸತತವಾಗಿ ನಡೆಸುತ್ತಿರುವ ಪ್ರಯತ್ನಗಳ ಫಲವೇ ಅದು. ಆಧುನಿಕ ವೈದ್ಯ ವಿಜ್ಞಾನವು ಗ್ರೀಸ್ ನಲ್ಲಿ ಆರಂಭಗೊಂಡಿತೆನ್ನುವುದು ಸಾಮಾನ್ಯ ತಿಳುವಳಿಕೆಯಾದರೂ, ಅದಕ್ಕೂ ಮೊದಲು ಭಾರತವೂ ಸೇರಿದಂತೆ ವಿಶ್ವದ ವಿವಿಧೆಡೆಗಳಲ್ಲಿ ಲಭ್ಯವಿದ್ದ ವೈದ್ಯಕೀಯ ಜ್ಞಾನಸಂಪತ್ತನ್ನು ಆಧರಿಸಿಯೇ ಅದು ಮುಂದಕ್ಕೆ ಬೆಳೆಯಿತೆನ್ನಬಹುದು. ಇಂದಿಗೂ ಕೂಡ ವಿಜ್ಞಾನ-ತಂತ್ರಜ್ಞಾನಗಳ ಯಾವುದೇ ಶಾಖೆಯಲ್ಲಿ ಏನೇ ಹೊಸ ಆವಿಷ್ಕಾರಗಳಾದರೂ ಅದರ ಮೊದಲ ಬಳಕೆಯಾಗುವುದು ವೈದ್ಯ ವಿಜ್ಞಾನದಲ್ಲಿ. ಹೊಸ ಕಂಪ್ಯೂಟರ್ ಇರಲಿ, ಅಬ್ದುಲ್ ಕಲಾಂರಂತಹ ವಿಜ್ಞಾನಿಗಳು ಕ್ಷಿಪಣಿಗಳಿಗಾಗಿ ತಯಾರಿಸಿದ ಹೊಸ ಲೋಹದ ಮಾದರಿಯೇ ಇರಲಿ, ಲೇಸರ್ ಇರಲಿ, ಅವೆಲ್ಲವುಗಳ ಪ್ರಯೋಜನವು ವೈದ್ಯ ವಿಜ್ಞಾನಕ್ಕೂ ದೊರೆಯುತ್ತದೆ. ಮನುಷ್ಯನ ಆರೋಗ್ಯ ರಕ್ಷಣೆಗೆ ನೆರವಾಗಲೆನ್ನುವುದೇ ಈ ಪ್ರಯತ್ನಗಳ ಹಿಂದಿರುವ ಉದ್ದೇಶವಲ್ಲದೆ, ಕಾಸು ಮಾಡುವುದಕ್ಕಾಗಿ ಅಲ್ಲ ಎನ್ನುವುದು ನನ್ನ ದೃಢವಾದ ಅಭಿಮತ.
ಮನುಷ್ಯನ ದೇಹವನ್ನೂ, ಅದನ್ನು ಕಾಡುವ ರೋಗಗಳನ್ನೂ ಅರ್ಥೈಸಿಕೊಳ್ಳುವಲ್ಲಿ ಹಲವು ದಾರಿಗಳಲ್ಲಿ ಪ್ರಯತ್ನಗಳಾಗಿರುವುದು ಸಹಜವೇ. ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಭೌಗೋಳಿಕ ನೆಲೆಗಳಲ್ಲಿ ಹುಟ್ಟಿದ ಇಂತಹ ಹಲವು ವಿಚಾರಗಳನ್ನು ತನ್ನೊಳಕ್ಕೆ ಸೆಳೆದು ಆಧುನಿಕ ವೈದ್ಯ ವಿಜ್ಞಾನವು ಬೆಳೆದಿದೆ. ಆಧುನಿಕ ವೈದ್ಯ ವಿಜ್ಞಾನದಲ್ಲೂ ಹಲವು ತರಹದ ಅಭಿಪ್ರಾಯಗಳಿದ್ದು, ಇಂತಹ ಭಿನ್ನಾಭಿಪ್ರಾಯಗಳನ್ನು ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಿದಾಗಲೇ ಸರಿ-ತಪ್ಪುಗಳ ಅರಿವಾಗುವುದು. ತಂತ್ರಜ್ಞಾನ ಬೆಳೆದಂತೆ, ಪರೀಕ್ಷೆಗಳ ಸಾಮರ್ಥ್ಯವೂ ಬೆಳೆದು, ಈ ಅರಿವುಗಳು ಮತ್ತಷ್ಟು ಪರಿಷ್ಕಾರಗೊಳ್ಳುತ್ತವೆ. ಹೀಗೆ ಆಧುನಿಕ ವೈದ್ಯ ವಿಜ್ಞಾನವು ಹಿಂದಿನಿಂದ ಇಂದಿನವರೆಗೆ ನಿರಂತರವಾಗಿ ಸಾಗಿಬಂದಿರುವ ಚಲನಶೀಲ ಚಿಂತನೆಯಾಗಿದೆ.
ಒಂದು ಕಾಲಕ್ಕೆ (ಸುಮಾರು ೨೫೦೦-೧೮೦೦ ವರ್ಷಗಳ ಹಿಂದೆ) ಆಯುರ್ವೇದವೂ ಆಧುನಿಕ ವೈದ್ಯಶಾಸ್ತ್ರವೇ ಆಗಿತ್ತು. ಮನುಷ್ಯರೆಲ್ಲರೂ ಒಂದೇ, ಎಲ್ಲರ ದೇಹ ರಚನೆಯೂ ಒಂದೇ ಎನ್ನುವ ಸಮಾನತೆಯ ಭಾವವನ್ನು ಸಾರಿತ್ತು. ದೇಹರಚನೆಯನ್ನು ಕಲಿಯುವುದಕ್ಕಾಗಿ ಸ್ಮಶಾನಗಳಿಂದ ಹೆಣಗಳನ್ನು ಕದ್ದೊಯ್ದು ಸಿಗಿಯಲಾಗುತ್ತಿತ್ತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಗಳ ರೂಪದಲ್ಲಿ ಬರೆಯಲಾಗಿರುವ ಚರಕ ಸಂಹಿತೆಯಲ್ಲಿ ದೇಹ, ರೋಗಗಳು ಹಾಗೂ ಚಿಕಿತ್ಸೆಯ ಬಗ್ಗೆ ಆ ಕಾಲಕ್ಕೆ ಅತ್ಯುನ್ನತವಾಗಿತ್ತೆಂದು ಪರಿಗಣಿಸಬಹುದಾದ ಚರ್ಚೆ-ವಿಮರ್ಶೆ-ಅಧ್ಯಯನಗಳ ವಿವರಗಳನ್ನು ಕಾಣಬಹುದು. ಆ ಕಾಲದ ಆಯುರ್ವೇದದ ವೈಚಾರಿಕ ವಿಧಾನಗಳು ಮುಂದೆ ಗ್ರೀಸಿನಲ್ಲಿ ಬೆಳೆಯತೊಡಗಿದ ಆಧುನಿಕ ವೈದ್ಯ ವಿಜ್ಞಾನಕ್ಕೆ ತನ್ನದೇ ಆದ ಕೊಡುಗೆಗಳನ್ನೂ ನೀಡಿದೆಯೆನ್ನುವುದರಲ್ಲಿ ಸಂದೇಹಗಳಿಲ್ಲ. ಆದರೆ ನಮ್ಮಲ್ಲಿ ಅದು ಅಲ್ಲಿಗೇ ನಿಂತಿತು, ಎಲ್ಲರೊಂದೇ ಎಂದ ಆಯುರ್ವೇದವನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲಾಯಿತು. ಆ ಕಾಲದಲ್ಲಿ ಆಸ್ಪತ್ರೆಗಳ ಸ್ಥಾಪನೆಗೆ ಕಾರಣವಾಗಿದ್ದ ಆಯುರ್ವೇದ ಮತ್ತೆ ’ನಾಟಿ’ ವೈದ್ಯಶಾಸ್ತ್ರವಾಗಿಬಿಟ್ಟಿತು. ಈಗ ಆಯುರ್ವೇದ ಅಧ್ಯಯನಕ್ಕೆ ಹಲವು ಕಾಲೇಜುಗಳಿದ್ದರೂ ಅಲ್ಲಿ ಕಲಿಸುವುದು ಚರಕ ಸಂಹಿತೆಯನ್ನೇ! ಆಧುನಿಕ ವೈದ್ಯ ವಿಜ್ಞಾನದ ಪುಸ್ತಕಗಳು ಮೂರ್ನಾಲ್ಕು ವರ್ಷಗಳಿಗೊಮ್ಮೆ ಪರಿಷ್ಕರಣೆಗೊಳ್ಳುತ್ತಿದ್ದರೆ, ಆಯುರ್ವೇದ ಕಾಲೇಜುಗಳಲ್ಲಿ ಅದೇ ಚರಕ ಸಂಹಿತೆ ಇಂದಿಗೂ ಕಲಿಸಲ್ಪಡುತ್ತಿದೆ. ಆ ಕಾಲದವರಿಗೆ ಎಲ್ಲವೂ ಗೊತ್ತಿತ್ತು, ಅದರಲ್ಲಿ ಪರಿಷ್ಕರಿಸಬೇಕಾದುದು ಏನೂ ಇಲ್ಲ ಇನ್ನುವುದು ಆ ಕಾಲದ ಆಯುರ್ವೇದದ ಅಧ್ವರ್ಯುಗಳಿಗೆ ಅವಮಾನ ಮಾಡಿದಂತೆಯೇ ಸರಿ. ಆಯುರ್ವೇದದ ಪಂಚಭೂತಗಳಿಂದಾದ ದೇಹ, ತ್ರಿದೋಷಗಳಿಂದುಂಟಾಗುವ ರೋಗಗಳು ಇವೇ ಮುಂತಾದ ಪರಿಕಲ್ಪನೆಗಳು ಅಲ್ಲಿಂದ ವಿಸ್ತಾರಗೊಳ್ಳದೆ ಹಾಗೇ ನಿಂತಿವೆ. ಆಧುನಿಕ ವೈದ್ಯ ವಿಜ್ಞಾನವಾದರೋ ಲಭ್ಯವಿರುವ ಎಲ್ಲ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಾ ದೇಹದ ಜೀವಕಣಗಳೊಳಗಿರುವ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಅರಿಯುತ್ತಾ ಮುಂದೆ ಸಾಗಿದೆ. ಅಂತಹದರಲ್ಲಿ ತ್ರಿದೋಷಗಳಿಂದ ರೋಗವುಂಟಾಗುವುದಕ್ಕೆ (ಅಥವಾ ಸೂಜಿ ಚಿಕಿತ್ಸೆಯ - ಅಕುಪಂಕ್ಚರಿನ - ಚಿ ಹರಿವಿಗೆ) ಯಾವುದೇ ಆಧಾರಗಳು ದೊರೆತಿಲ್ಲ. ಆದರೆ ಅವು ದೊರೆಯುವುದಕ್ಕೆ ಸಾಧ್ಯವಿಲ್ಲ, ಅಂತಹ ಆಧಾರಗಳ ಅಗತ್ಯವೂ ಇಲ್ಲ ಎನ್ನುವುದು ಚರಕ ಸಂಹಿತೆಯ ಮೂಲ ಆಶಯಗಳಿಗೇ ಅನ್ಯಾಯ ಮಾಡಿದಂತೆ.
ಆಧುನಿಕ ವೈದ್ಯ ವಿಜ್ಞಾನವು ತನ್ನ ದಾರಿಯಲ್ಲಿ ಆಯುರ್ವೇದವಲ್ಲದೆ ಇನ್ನೂ ಹಲವು ಸ್ಥಳೀಯ ವೈದ್ಯಶಾಸ್ತ್ರಗಳಲ್ಲಿ ಬಳಕೆಯಾಗುತ್ತಿದ್ದ ’ಔಷಧಗಳನ್ನು’ ಪರೀಕ್ಷಿಸಿ, ಶುದ್ಧೀಕರಿಸಿ ಬಳಸಿಕೊಳ್ಳುತ್ತಿದೆ. ಮಲೇರಿಯಾದಲ್ಲಿ ಬಳಕೆಯಾಗುತ್ತಿರುವ ದ. ಅಮೆರಿಕಾ ಮೂಲದ ಸಿಂಕೋನಾ ತೊಗಟೆಯ ಕ್ವಿನಿನ್, ಚೀನಾ ಮೂಲದ ಚಿಂಗ್ ಹಾ ಹುಲ್ಲಿನಿಂದ ತಯಾರಿಸಿದ ಆರ್ಟೆಮಿಸಿನಿನ್, ಹೃದಯ ವೈಫಲ್ಯಕ್ಕೆ ಬಳಸಲಾಗುವ ಡಿಗಾಕ್ಸಿನ್ ಇತ್ಯಾದಿ ಉದಾಹರಣೆಗಳು. ಆಯುರ್ವೇದದಲ್ಲಿ ಹೇಳಲಾಗಿರುವ ಹಲವಾರು ಔಷಧಿಗಳನ್ನು ಇಂತಹಾ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ, ಆದರೆ ಹೆಚ್ಚಿನ ಲಾಭವಾಗಿಲ್ಲ.
ಆಧುನಿಕ ವೈದ್ಯ ವಿಜ್ಞಾನದ ಮುನ್ನಡೆಯ ಹಾದಿಯಲ್ಲಿ ಆಯುರ್ವೇದದಂತಹ ಪದ್ಧತಿಗಳು ಅಲ್ಲಿಗೇ ನಿಂತರೆ, ಇನ್ನು ಕೆಲವು ತಮ್ಮದೂ ಒಂದು ಚಿಕಿತ್ಸಾ ಪದ್ಧತಿಯೆಂದು ಸ್ವಯಂ ಘೋಷಿಸಿಕೊಂಡು ವೈದ್ಯಕೀಯ ಪದ್ಧತಿಗಳ ಸಾಲಿಗೆ ಸೇರಲು ಪ್ರಯತ್ನಿಸಿವೆ. ಯೋಗ, ಅಯಸ್ಕಾಂತ ಚಿಕಿತ್ಸೆ, ರೀಕಿ ಇತ್ಯಾದಿ ಅವಕ್ಕೆ ಉದಾಹರಣೆಗಳು. ಯೋಗ ಚಿಕಿತ್ಸೆ ಎನ್ನುವುದಿಲ್ಲ, ಯೋಗ ವಿದ್ಯೆಗೂ, ರೋಗಗಳ ಚಿಕಿತ್ಸೆಗೂ ಸಂಬಂಧವಿಲ್ಲ. ಬಹುಷಃ ಆಯುರ್ವೇದಕ್ಕಿಂತಲೂ ಹಳೆಯದಾದ ಯೋಗಾಭ್ಯಾಸವನ್ನು ಚಿಕಿತ್ಸೆಯಲ್ಲಿ ಬಳಸುತ್ತಿದ್ದ ಬಗ್ಗೆ ಆ ಕಾಲದ ಮೇರು ಕೃತಿಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯ, ಭಾವ ಪ್ರಕಾಶ, ಕಶ್ಯಪ ಸಂಹಿತೆ ಇತ್ಯಾದಿಗಳಲ್ಲಿ ಚಕಾರವೂ ಇಲ್ಲ. (ಇದೆಯೆನ್ನುವವರು ದಯವಿಟ್ಟು ಸ್ಪಷ್ಟವಾದ ಆಕರವನ್ನೊದಗಿಸಿ; ಅಲ್ಲಿದ್ದದ್ದನ್ನು ಇದ್ದ ಹಾಗೇ ಇಲ್ಲಿ ಬರೆದರೆ ಒಳ್ಳೆಯದು) ಇಂದಿಗೂ ಆಯುರ್ವೇದ ಕಾಲೇಜುಗಳಲ್ಲಿ ಯೋಗ ಚಿಕಿತ್ಸೆಗೆ ಹೆಚ್ಚಿನ ಮಹತ್ವವೇನೂ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಕುವಲಯಾನಂದರು ಪುಣೆಯಲ್ಲಿ ಸ್ಥಾಪಿಸಿದ ಕೈವಲ್ಯಧಾಮ, ಬೆಂಗಳೂರಿನ ವಿವೇಕಾನಂದ ಯೋಗ ಕೇಂದ್ರ ಮುಂತಾದೆಡೆಗಳಲ್ಲಿಯೂ, ನಿಮ್ಹಾನ್ಸ್, ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಗಳೂ ಸೇರಿದಂತೆ ದೇಶ-ವಿದೇಶಗಳ ಹಲವು ಪ್ರತಿಷ್ಠಿತ ಆಧುನಿಕ ಸಂಸ್ಥೆಗಳಲ್ಲಿಯೂ ಯೋಗದಿಂದಾಗಬಹುದಾದ ಪ್ರಯೋಜನಗಳ ಬಗ್ಗೆ ಸಾವಿರಗಟ್ಟಲೆಯಲ್ಲಿ ಅಧ್ಯಯನಗಳು ನಡೆದಿದ್ದರೂ ಯೋಗದಿಂದ ಯಾವುದೇ ರೋಗಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆಯು ಸಾಧ್ಯವಿದೆ ಎನ್ನುವುದಕ್ಕೆ ದೃಢವಾದ ಆಧಾರಗಳು ದೊರೆತಿಲ್ಲ.(ಇದೆಯೆಂದಾದರೆ ದಯವಿಟ್ಟು ಪ್ರಕಟಿತ ಲೇಖನದ ಸ್ಪಷ್ಟವಾದ ಆಕರವನ್ನೊದಗಿಸಿ: ಲೇಖಕರು, ಶೀರ್ಷಿಕೆ, ಪತ್ರಿಕೆಯ ಹೆಸರು, ವರ್ಷ, ಸಂಪುಟ, ಸಂಚಿಕೆ, ಪುಟಗಳು)
ಆಯುರ್ವೇದವನ್ನಾಗಲೀ, ಯೋಗ ಚಿಕಿತ್ಸೆಯನ್ನಾಗಲೀ ಆಧುನಿಕ ವಿಧಾನಗಳಿಂದ ಶ್ರುತ ಪಡಿಸಲಾಗದು, ಇವು ಆಧುನಿಕ ವಿಧಾನಗಳಿಗೆ ನಿಲುಕದವು, ಅತೀತವಾದುವುಗಳು ಎಂದು ಬಹಳಷ್ಟು ಜನ ವಾದಿಸುತ್ತಾರೆ. ಇದು ತೀರಾ ತಪ್ಪಾದ ಕಲ್ಪನೆ. ಆಧುನಿಕ ವೈದ್ಯ ವಿಜ್ಞಾನದ ಪರಿಕಲ್ಪನೆಗಳನ್ನು ಒರೆಗಲ್ಲಿಗೆ ಹಚ್ಚುವ ಪರೀಕ್ಷೆಗಳ ಸೂತ್ರವು ಅತಿ ಸರಳವಾದುದು: ಪರೀಕ್ಷೆಗೊಳಪಡುವ ಸಮಾನ ಗಾತ್ರದ ಎರಡು ಗುಂಪುಗಳಿರಬೇಕು, ಈ ಎರಡೂ ಗುಂಪುಗಳಲ್ಲಿ ಸೇರ್ಪಡೆಯಾಗುವವರು ಸಮಾನ ವಯಸ್ಸು, ಲಿಂಗ ಇತ್ಯಾದಿ ಮಾನದಂಡಗಳನ್ನು ಹೊಂದಿರಬೇಕು, ಇವರನ್ನು ಅನಿಶ್ಚಿತವಾಗಿ ಆಯ್ದಿರಬೇಕು; ಒಂದು ಗುಂಪಿಗೆ ಪರೀಕ್ಷೆಗೊಳಪಡುವ ವಸ್ತು/ವ್ಯಾಯಾಮವನ್ನು ನೀಡಿದರೆ ಇನ್ನೊಂದು ಗುಂಪಿಗೆ ಯಾವ ಪರಿಣಾಮವನ್ನೂ ಬೀರದ ವಸ್ತುವನ್ನು ನೀಡಬೇಕು; ಯಾವ ಗುಂಪಿಗೆ ಏನನ್ನು ನೀಡಲಾಗಿದೆಯೆನ್ನುವುದು ಪರೀಕ್ಷೆಗೊಳಪಡುವವರಿಗೂ, ಪರೀಕ್ಷೆಗಳನ್ನು ನಡೆಸುವವರಿಗೂ ತಿಳಿದಿರಬಾರದು; ಎರಡೂ ಗುಂಪುಗಳನ್ನು ನಿರ್ದಿಷ್ಟ ಅವಧಿಯವರೆಗೆ ಪರೀಕ್ಷೆಗಳಿಗೊಳಪಡಿಸಿ ಅವರಲ್ಲಾಗುವ ಬದಲಾವಣೆಗಳೆಲ್ಲವನ್ನೂ ದಾಖಲಿಸಿ ಹೋಲಿಸಬೇಕು, ಹೀಗೆ ಮಾಡಿದಾಗ ಪರೀಕ್ಷೆಗೊಳಪಟ್ಟ ವಸ್ತು/ವ್ಯಾಯಾಮದ ಪ್ರಯೋಜನ, ದುಷ್ಪರಿಣಾಮಗಳು ಇತ್ಯಾದಿಯೆಲ್ಲವನ್ನೂ ದೃಢಪಡಿಸಲು ಸಾಧ್ಯವಾಗುತ್ತದೆ. ಗುಂಪುಗಳು ದೊಡ್ಡದಾದಷ್ಟೂ ಅಧ್ಯಯನದ ಮಹತ್ವವು ಹೆಚ್ಚುತ್ತದೆ. ಕೆಲವು ಸಂದರ್ಭಗಳಲ್ಲಿ ಅಧ್ಯಯನದ ಗುಂಪುಗಳನ್ನು ಅದಲು ಬದಲು ಮಾಡುವ ಮೂಲಕ ಅದನ್ನು ಇನ್ನೂ ಉತ್ತಮಪಡಿಸಬಹುದು. ಹೀಗೆ ಪರಿಶೀಲನೆ - ಹೋಲಿಕೆ - ವಿಶ್ಲೇಷಣೆ - ನಿರ್ಧಾರಗಳನ್ನು ತಳೆಯುವ ಕ್ರಮವು ಅತಿ ಸರಳವಾಗಿದ್ದು ಇದನ್ನು ಆಧುನಿಕ ವೈದ್ಯ ವಿಜ್ಞಾನದಲ್ಲಷ್ಟೇ ಅಲ್ಲ, ಜೀವನದ ಪ್ರತಿಯೊಂದು ಚಟುವಟಿಕೆಗಳಲ್ಲೂ ನಾವು ಬಳಸಿಕೊಳ್ಳಬಹುದು. ವೈಜ್ಞಾನಿಕ ಮನೋಭಾವವನ್ನು ಹೊಂದಿರುವುದಕ್ಕೆ ವಿಜ್ಞಾನವನ್ನೇ ಓದಬೇಕಿಲ್ಲ, ಅನಕ್ಷರಸ್ಥರೂ ಅದನ್ನು ಪಾಲಿಸಬಹುದು. (ವಿಜ್ಞಾನವನ್ನು ಓದಿದವರೆಲ್ಲರಲ್ಲೂ ವೈಜ್ಞಾನಿಕ ಮನೋಭಾವವಿರಬೇಕಾಗಿಲ್ಲವೆನ್ನುವುದೂ ಅಷ್ಟೇ ಸತ್ಯ) ಆಯುರ್ವೇದ ಹಾಗೂ ಯೋಗಗಳ ಪ್ರಯೋಜನಗಳ ಬಗ್ಗೆ ಇಂತಹ ಸಾವಿರಾರು ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಈ ಪದ್ಧತಿಗಳಿಂದ ಖಚಿತವಾಗಿಯೂ ಪ್ರಯೋಜನವಿದೆಯೆಂದು ಶ್ರುತ ಪಟ್ಟರೆ ಅದನ್ನು ಬಳಕೆಗೆ ತರಲು ಯಾರ ಅಡ್ಡಿಯೂ ಇರಲಾರದು. ಆದರೆ ಅಂತಹದು ಇಲ್ಲವೆಂದೇ ಹೇಳಬೇಕು.
ಇಂತಹಾ ಪರೀಕ್ಷೆಗಳಿಗೆ ಒಡ್ಡಿಕೊಳ್ಳುವುದಕ್ಕೆ ತಯಾರಾಗುವ ಬದಲಿ ಪದ್ಧತಿಗಳವರು ಅವುಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸ್ವಲ್ಪ ಮಟ್ಟಿಗೆ ಶ್ರುತಪಡಿಸಲು ಸಾಧ್ಯವಾದಾಗಲೆಲ್ಲ ದೊಡ್ಡದಾಗಿ ಅದನ್ನು ಪ್ರಕಟಿಸಿಬಿಡುತ್ತಾರೆ. ಆದರೆ ಅದರಲ್ಲಿ ವಿಫಲರಾದಾಗ ತಮ್ಮ ವಿಧಾನವು ಇಂತಹಾ ಪರೀಕ್ಷೆಗಳಿಗೆ ಅತೀತವಾದುವುಗಳೆಂದು ವಾದಿಸ ತೊಡಗುತ್ತಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯು ಪರೀಕ್ಷೆಯನ್ನೇ ದೂರಿದಂತೆ! ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಇಂತಹ ಪಲಾಯನವಾದವು ತೀರಾ ಅಪಾಯಕಾರಿಯಾಗಬಹುದು.
ಆಧುನಿಕ ವೈದ್ಯ ವಿಜ್ಞಾನದಲ್ಲಿ ಇಂತಹ ಪರೀಕ್ಷೆಗಳನ್ನು ಒಮ್ಮೆಯಲ್ಲ, ಹಲವು ಬಾರಿ ನಡೆಸಲಾಗುತ್ತದೆ. ಒಂದೆಡೆ ಕಂಡುಬಂದ ಪರಿಣಾಮಗಳನ್ನು ಇನ್ನೊಂದೆಡೆ ಒರೆಗೆ ಹಚ್ಚಲಾಗುತ್ತದೆ. ಸಣ್ಣ ಪ್ರಮಾಣದ ಅಧ್ಯಯನಗಳಲ್ಲಿ ಕಂಡುಬಂದ ಪರಿಣಾಮಗಳನ್ನು ದೊಡ್ಡ ಪ್ರಮಾಣದ ಅಧ್ಯಯನಗಳಲ್ಲಿ ಪುನರ್ ಪರಿಶೀಲಿಸಲಾಗುತ್ತದೆ. ಆಧುನಿಕ ವೈದ್ಯ ವಿಜ್ಞಾನಿಗಳು ಇತರ ವಿಜ್ಞಾನಿಗಳ ತಪ್ಪನ್ನು ಎತ್ತಿ ತೋರಿಸುವಲ್ಲಿ ಸದಾ ಆಸಕ್ತರಾಗಿರುತ್ತಾರೆ, ಇನ್ನೊಬ್ಬರ ಸಾಧನೆಗಳನ್ನು ತಾವೂ ಪರೀಕ್ಷಿಸಿ ಪರಾಮರ್ಶಿಸಿ ಕಾಳೆಷ್ಟು, ಜೊಳ್ಳೆಷ್ಟು ಎನ್ನುವುದನ್ನು ನಿರ್ಧರಿಸುತ್ತಾರೆ. ಇಂತಹ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡರಷ್ಟೇ ಯಾವುದೇ ಸಿದ್ಧಾಂತ/ವಿಧಾನ/ಚಿಕಿತ್ಸೆಯು ಸ್ವೀಕಾರಾರ್ಹವಾಗುತ್ತದೆ, ಇಲ್ಲದಿದ್ದರೆ ಬಿದ್ದು ಹೋಗುತ್ತದೆ. ಹೊಸ ಔಷಧಗಳೆಲ್ಲವೂ ಬಳಕೆಗೆ ಬಂದ ನಂತರವೂ ನಿರಂತರವಾದ ಅಧ್ಯಯನಗಳಿಗೆ ಒಳಪಡುತ್ತಿರುತ್ತವೆ, ಗಂಭೀರವಾದ ಅಡ್ಡ ಪರಿಣಾಮಗಳು ವರದಿಯಾದರೆ ಅವುಗಳ ಬಳಕೆಯನ್ನು ನಿಲ್ಲಿಸಲಾಗುತ್ತದೆ ಅಥವಾ ಔಷಧವನ್ನು ನಿಷೇಧಿಸಲಾಗುತ್ತದೆ.
ಇಂತಹ ವ್ಯವಸ್ಥೆಯ ನಡುವೆ ಒಬ್ಬೊಬ್ಬರ ಅನುಭವಕ್ಕೇನು ಬೆಲೆ? ಆಧುನಿಕ ವೈದ್ಯ ವಿಜ್ಞಾನದ ಪಿತಾಮಹನೆನಿಸಿರುವ ಹಿಪೋಕ್ರಿಟಸ್ ವೈದ್ಯರಿಗೆ ಹೇಳಿರುವ ಮೊದಲ ಮಾತು ಇದು: "Life is short, and the Art is long; the occasion fleeting; experience fallacious, and judgement difficult". ಎಲ್ಲ ಕಾಹಿಲೆಗಳೂ ಮುಖ್ಯವೇ. ರೋಗಿಯು ಎದುರಿಗಿರುವ ಅಲ್ಪ ಅವಕಾಶದಲ್ಲಿಯೇ ಎಲ್ಲವನ್ನೂ ಪರೀಕ್ಷಿಸಿ ರೋಗವನ್ನೂ, ಅದರ ಚಿಕಿತ್ಸೆಯನ್ನೂ ಸರಿಯಾಗಿ ನಿರ್ಧರಿಸುವುದು ಆಷ್ಟೇನೂ ಸುಲಭದ ಕೆಲಸವಲ್ಲದಿದ್ದರೂ ವೈದ್ಯನು ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ. ಅದರ ಜೊತೆಗೆ ರೋಗಿಯನ್ನಷ್ಟೇ ಅಲ್ಲ, ಅವನ ಸಂಬಂಧಿಕರನ್ನೂ, ಜೊತೆಗಿರುವ ಇತರರನ್ನೂ ಅವನು ನಿಭಾಯಿಸಬೇಕಾಗುತ್ತದೆ: "The physician must not only be prepared to do what is right himself, but also to make the patient, the attendants, and the externals cooperate." ಅಂತಹದರಲ್ಲಿ ಓರ್ವನ ಅಲ್ಪ ಜೀವಿತಾವಧಿಯಲ್ಲಿ ಪಡೆಯಬಹುದಾದ ಅನುಭವವು ಗೌಣವೇ; ಜಗತ್ತಿನೆಲ್ಲೆಡೆಗಳಿಂದ ಶತಶತಮಾನಗಳಿಂದ ಕ್ರೋಢೀಕರಿಸಿದ ಅನುಭವಗಳನ್ನು ವೈದ್ಯನಾದವನು ಅರಿತಿರುವುದು ಅತ್ಯಗತ್ಯವಾಗಿರುತ್ತದೆ. "Life is short, and the Art is long; the occasion fleeting; experience fallacious, and judgement difficult" ನಮ್ಮ ಪುಸ್ತಕಗಳ ಮೊದಲ ಪುಟದಲ್ಲೇ ಅಚ್ಚಾಗಿದ್ದು ಪ್ರತಿನಿತ್ಯ ನಮ್ಮ ಮಿತಿಗಳನ್ನೂ, ಜವಾಬ್ದಾರಿಗಳನ್ನೂ ನೆನಪಿಸುತ್ತಿರುತ್ತದೆ.
ಎಷ್ಟು ಕಲಿತರೂ ಮುಗಿಯದ ವೈದ್ಯ ವಿಜ್ಞಾನದ ಸಾಧನೆಗಳಿಗೆ ಬದಲಿಯಿದೆಯೇ? ಏನೂ ಕಲಿಯದವನು ಎಲ್ಲ ಕಾಹಿಲೆಗಳನ್ನೂ ತಾನು ಗುಣ ಪಡಿಸುತ್ತೇನೆಂದರೆ ಅವನನ್ನು ನಂಬಬೇಕೆ?
ಇನ್ನು ನಿಮ್ಮ ಕೆಲವು ಅನಿಸಿಕೆಗಳಿಗೆ ನನ್ನ ಪ್ರತಿಕ್ರಿಯೆಗಳು:
>>ತತ್ ಕ್ಷಣದ ಪರಿಣಾಮ ಬೀರುವ ಔಷಧಗಳು. ಇವು ಹೆಚ್ಚಾಗಿ Symptoms ಅನ್ನು ನಿವಾರಿಸುವಂಥವು. <<
ಆಧುನಿಕ ವೈದ್ಯ ವಿಜ್ಞಾನವು ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುತ್ತದೆ, ಕಾಹಿಲೆಗಲ್ಲ ಎನ್ನುವುದು ತೀರಾ ತಪ್ಪಾದ ಕಲ್ಪನೆ. ವಸ್ತು ಸ್ಥಿತಿ ಇದಕ್ಕೆ ವ್ಯತಿರಿಕ್ತ. ಕಾಹಿಲೆಯ ಕಾರಣವನ್ನು ನಿಖರವಾಗಿ ಗುರುತಿಸುವುದಕ್ಕೂ, ಅದಕ್ಕೆ ತಕ್ಕುದಾದ ಚಿಕಿತ್ಸೆಯನ್ನು ನೀಡುವುದಕ್ಕೂ ಆಧುನಿಕ ವೈದ್ಯಶಾಸ್ತ್ರದಲ್ಲಿ ಮಾತ್ರವೇ ಸಾಧ್ಯವಿದೆ. ಕೆಲವೊಂದು ಸರಳ ಉದಾಹರಣೆಗಳು ಇಲ್ಲಿವೆ. ಜ್ವರಕ್ಕೆ ನೂರಾರು ಕಾರಣಗಳಿವೆ - ಗಾಯಗಳು; ಮಲೇರಿಯ, ಡೆಂಗೀ, ಕ್ಷಯ ಮುಂತಾದ ಸೋಂಕುಗಳು; ಕ್ಯಾನ್ಸರ್ ಇತ್ಯಾದಿ ರೋಗಗಳು ಜ್ವರಕ್ಕೆ ಕಾರಣವಾಗಬಹುದು. ಆಧುನಿಕ ವೈದ್ಯನು ಮೊದಲು ಜ್ವರಕ್ಕೆ ಕಾರಣವೇನೆಂದು ಹುಡುಕುತ್ತಾನೆ, ರೋಗಿಯ ನೇರ ಪರೀಕ್ಷೆಗಳಲ್ಲಿ ಅದು ತಿಳಿಯದಿದ್ದರೆ ಅಗತ್ಯವಿರುವ ಇತರ ಪರೀಕ್ಷೆಗಳನ್ನು ನಡೆಸುತ್ತಾನೆ (ಮಲೇರಿಯ, ಟೈಫಾಯ್ಡ್ ಗಳಿಗೆ ರಕ್ತದ ಪರೀಕ್ಷೆ, ಕ್ಷಯದ ಸಂಶಯವಿದ್ದರೆ ಕ್ಷಕಿರಣ ಇತ್ಯಾದಿ). ಮಲೇರಿಯಾದಿಂದ ಜ್ವರವಿದ್ದರೆ ಮಲೇರಿಯಾಕ್ಕೆ, ಟೈಫಾಯ್ಡ್ ಆಗಿದ್ದರೆ ಅದಕ್ಕೆ, ಕ್ಷಯವಿದ್ದರೆ ಅದಕ್ಕೆ ತಕ್ಕುದಾದ ಚಿಕಿತ್ಸೆಯನ್ನು ನೀಡುತ್ತಾನೆ, ರೋಗವು ವಾಸಿಯಾಗುತ್ತಿದ್ದಂತೆ ಜ್ವರವೂ ಇಳಿಯುತ್ತದೆ. ಆ ನಡುವೆ ವಿಪರೀತವಾದ ಜ್ವರದಿಂದಲೇ ರೋಗಿಗೆ ತೊಂದರೆಯಾಗುವುದಿದ್ದರೆ ಅದನ್ನು ಇಳಿಸಲು ತಾತ್ಕಾಲಿಕವಾಗಿ ಜ್ವರನಿವಾರಕಗಳನ್ನೂ ಬಳಸುತ್ತಾನೆ. ವೈರಾಣುಗಳಿಂದ ಉಂಟಾಗುವ ಜ್ವರಕ್ಕೆ ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ವಾರದೊಳಗೆ ತನ್ನಿಂತಾನಾಗಿ ಗುಣಹೊಂದುತ್ತದೆನ್ನುವ ಭರವಸೆಯನ್ನು ನೀಡುವುದಕ್ಕೂ ಅವನಿಗೆ ಸಾಧ್ಯವಾಗಬೇಕು. ಈ ಯಾವುದೇ ರೋಗಗಳಿಗೆ ಆಯುರ್ವೇದದಲ್ಲಿ ನಿರ್ದಿಷ್ಟವಾದ ಚಿಕಿತ್ಸೆ ಇದೆಯೇ? ಅಲ್ಲಿರುವುದೇನಿದ್ದರೂ ಜ್ವರಕ್ಕೆ ಚಿಕಿತ್ಸೆ, ಅಷ್ಟೆ. ಆಯುರ್ವೇದದ ಅನುಸಾರ ಫ್ಲೂ ಸೋಂಕು ವಾತ=ಕಫಗಳ ಜ್ವರವನ್ನು ಹೋಲುವ ಜ್ವರವಂತೆ, ಹಾಗಾಗಿ ಅದಕ್ಕನುಸಾರವಾದ ಚಿಕಿತ್ಸೆಯಂತೆ. ಆಧುನಿಕ ವೈದ್ಯಶಾಸ್ತ್ರದಲ್ಲೋ ಅದು ವೈರಸ್ ಸೋಂಕು, ಅದಕ್ಕೆ ಚಿಕಿತ್ಸೆಯೇ ಬೇಡ (ಅಥವಾ ವಿಶೇಷ ಸಂದರ್ಭಗಳಲ್ಲಿ ವೈರಸ್ ನಿರೋಧಕ ಔಷಧಗಳು). ಹೋಮಿಯೋಪತಿಯಲ್ಲಿ ಜ್ವರದ ಜೊತೆಗಿರುವ ಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ - ವಾಂತಿ, ತಲೆನೋವು, ಕೈನೋವು, ಕಾಲು ನೋವು ಹೀಗೆ. ಜ್ವರದ ಕಾರಣ ಯಾರಿಗೂ ಬೇಡ. ಆಯುರ್ವೇದ, ಹೋಮಿಯೋಪತಿಗಳಲ್ಲಿ ಕ್ಷಯ, ಮಲೇರಿಯಾ, ಟೈಫಾಯ್ಡ್ ಗಳ ಗತಿಯೇನು? ಇನ್ನು ಯೋಗ ಚಿಕಿತ್ಸೆಯಿಂದ ಜ್ವರಕ್ಕೇನು ಪ್ರಯೋಜನ? ಎಲ್ಲಾ ಬಲ್ಲ (ಯೋಗ, ಆಯುರ್ವೇದ, ಹಿಂದೂ ಧರ್ಮ, ಸ್ವಿಸ್ ಖಾತೆಗಳಲ್ಲಿ ಕೂಡಿಟ್ಟ ಹಣ, ದೇಶ ಭಕ್ತಿ ಇತ್ಯಾದಿ ಎಲ್ಲವೂ) ರಾಮದೇವನೇ ಹೇಳಬೇಕು. ಮಧುಮೇಹ, ಹೃದ್ರೋಗ, ಪಾರ್ಶ್ವವಾಯು ಇತ್ಯಾದಿಗಳೂ ಅಷ್ಟೆ. ನಮ್ಮ ಜೀವನ ಶೈಲಿ, ನಮ್ಮ ಆಹಾರಗಳೇ ಈ ರೋಗಗಳಿಗೆ ಕಾರಣ. ಅವುಗಳಲ್ಲಿ ಬದಲಾವಣೆಗಳನ್ನು ಸೂಚಿಸುವುದರ ಜೊತೆಗೆ ಇತರ ಔಷಧಗಳನ್ನು ಆಧುನಿಕ ವೈದ್ಯಶಾಸ್ತ್ರದಲ್ಲಿ ನೀಡಲಾಗುತ್ತದೆ. ಕಟ್ಟುನಿಟ್ಟಿನ ಆಹಾರ ನಿಯಂತ್ರಣವನ್ನು ಪಾಲಿಸಬಲ್ಲವರಿಗೆ ಹೆಚ್ಚೇನೂ ಔಷಧಗಳ ಅಗತ್ಯವಿಲ್ಲ. ಆದರೆ ಹೃದಯಾಘಾತವಾದರೆ, ಪಾರ್ಶ್ವವಾಯುವಾದರೆ ಆ ರಕ್ತನಾಳಗಳೊಳಗೆ ಉಂಟಾಗಿರುವ ತೊಡಕನ್ನು ನಿವಾರಿಸಿ ಆ ಅಂಗಗಳಿಗೆ ರಕ್ತ ಸಂಚಾರವನ್ನು ಸುಗಮಗೊಳಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಆ ಅಂಗಗಳಲ್ಲಿ ಶಾಶ್ವತವಾದ ತೊಂದರೆಗಳಾಗಬಹುದು ಅಥವಾ ಸಾವು ಸಂಭವಿಸಬಹುದು. ಈ ಗಂಭೀರ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಹೊಂದಿರುವ ರೋಗಿಗೆ ಅಗತ್ಯವಿರುವ ಪರೀಕ್ಷೆಗಳನ್ನೂ ಚಿಕಿತ್ಸೆಯನ್ನೂ ಒದಗಿಸಿ ಅವನನ್ನು ಉಳಿಸದೇ ಮತ್ತೇನು ಮಾಡಬೇಕು? ಇದನ್ನು ವಾತ-ಪಿತ್ತ-ಕಫಗಳೆಂದು ಕಾದು ಕುಳಿತುಕೊಳ್ಳುವುದು ಸಾಧುವೇ? ರಾಮದೇವನಿಗೆ ಇವನ್ನು ಅರಿತು ಗುಣಪಡಿಸಲು ಸಾಧ್ಯವೇ? ಹೋಮಿಯೋಪತಿಯಿಂದಲೂ ಏನಾದೀತು?
ಎಣ್ನೆ ಹಚ್ಚಿ ತೀಡಿದಾಗ ಪಾರ್ಶ್ವವಾಯು ಸರಿಯಾಗುತ್ತದೆ ಎನ್ನುವುದು ಹಲವರ ತಿಳುವಳಿಕೆ. ಪಾರ್ಶ್ವವಾಯು ಯಾಕುಂಟಾಗುತ್ತದೆ? ನಮ್ಮ ದೇಹದ ಎಲ್ಲಾ ಭಾಗಗಳ ಸ್ನಾಯುಗಳನ್ನು ನಿಯಂತ್ರಿಸುವುದು ನಮ್ಮ ಮೆದುಳು. ಬಲ ಭಾಗದ ಮೆದುಳು ದೇಹದ ಎಡ್ಭಾಗವನ್ನೂ, ಎಡ್ ಮೆದುಳು ಬಲಭಾಗವನ್ನೂ ನಿಯಂತ್ರಿಸುತ್ತವೆ. ಮೆದುಳಿನ ರಕ್ತನಾಳಗಳೊಳಗೆ ರಕ್ತವು ಹೆಪ್ಪುಗಟ್ಟಿ ಅದು ಮುಚ್ಚಿಕೊಂಡರೆ ಆ ಭಾಗಕ್ಕೆ ರಕ್ತ ಸಂಚಾರವು ಸ್ಥಗಿತಗೊಂಡು ಮೆದುಳಿಗೆ ಹಾನಿಯಾಗಿ ನಿಯಂತ್ರಣವು ತಪ್ಪುತ್ತದೆ. ರಕ್ತನಾಳವು ಒಡೆದು ಮೆದುಳಿನೊಳಕ್ಕೆ ರಕ್ತಸ್ರಾವವಾದರೂ ಹಾಗೆಯೇ ಆಗುತ್ತದೆ. ಮೂರರಿಂದ ಆರು ವಾರಗಳಲ್ಲಿ ಮೆದುಳಿನ ಆಘಾತವು ನಿಧಾನವಾಗಿ ಗುಣ ಹೊಂದಿ ಕಳೆದು ಹೋದ ನಿಯಂತ್ರಣವು ಮತ್ತೆ ಮರಳುತ್ತದೆ. ಮೆದುಳಿಗಾದ ಹಾನಿಯನ್ನವಲಂಬಿಸಿ ಹೆಚ್ಚಿನವರಲ್ಲಿ ಪಾರ್ಶವಾಯುವು ಬಹುಪಾಲು ಸರಿಯಾಗುತ್ತದೆ, ಕೆಲವರಲ್ಲಿ ಸ್ವಲ್ಪ ಮಟ್ಟಿನ ನ್ಯೂನತೆಯು ಉಳಿದುಕೊಳ್ಳಬಹುದು. ತೀವ್ರ ಸ್ವರೂಪದ ಆಘಾತವಾದವರು ಸಾವನ್ನಪ್ಪಬಹುದು. ಆಧುನಿಕ ವೈದ್ಯ ವಿಜ್ಞಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಾರ್ಶ್ವವಾಯುವಿನ ಚಿಕಿತ್ಸೆಯಲ್ಲಿ ಅದ್ಭುತವಾದ ಸಾಧನೆಗಳನ್ನು ಮಾಡಲಾಗಿದೆ. ತಲೆಯ ಸ್ಕಾನಿಂಗ್ ಮೂಲಕ ಮೆದುಳಿಗಾಗಿರುವ ಹಾನಿಯನ್ನು ಕೂಡಲೇ ಗುರುತಿಸಿ, ಮೂರು ಗಂಟೆಗಳೊಳಗೆ ರೋಗಿಯು ತಲುಪಿದರೆ ರಕ್ತನಾಳದೊಳಗೆ ಹೆಪ್ಪುಗಟ್ತಿರುವ ರಕ್ತವನ್ನು ಕರಗಿಸಿ ಸಂಪೂರ್ಣ ಪಾರ್ಶ್ವವಾಯುವುಂಟಾಗುವುದನ್ನು ತಪ್ಪಿಸಲೂ ಸಾಧ್ಯವಿದೆ. ಉಳಿದವರಲ್ಲಿ ಸೂಕ್ತವಾದ ಔಷಧಗಳನ್ನೂ, ಪಾರ್ಶ್ವವಾಯು ಪೀಡಿತ ಭಾಗಗಳನ್ನು ಮೆದುಳು ಗುಣಹೊಂದುವವರೆಗೆ ಸುಸ್ಥಿತಿಯಲ್ಲಿರುವುದಕ್ಕಾಗಿ ವ್ಯಾಯಾಮಗಳನ್ನೂ ನೀಡಲಾಗುತ್ತದೆ. ಆಗಲೇ ಹೇಳಿದಂತೆ ಕೆಲದಿನಗಳಲ್ಲೇ ಕೈಕಾಲಿನ ಚಲನೆಯು ಮತ್ತೆ ಮರಳುತ್ತದೆ. ಆಯುರ್ವೇದದಲ್ಲಿ (ನಾಟಿಯಲ್ಲೂ) ಪಾರ್ಶ್ವವಾಯು ಪೀಡಿತ ಭಾಗಕ್ಕೆ ಎಣ್ಣೆ ಉಜ್ಜಿ ತೀಡಲಾಗುತ್ತದೆ, ಮೂರರಿಂದ ಆರು ವಾರಗಳಲ್ಲಿ ಚಲನೆಯು ಮರಳುತ್ತದೆ. ಮೆದುಳಿನ ತೊಂದರೆಯು ಸರಿಯಾಗುತ್ತಿದ್ದಂತೆ ಚಲನಶಕ್ತಿಯು ಮರಳುವುದಲ್ಲದೆ ಎಣ್ಣೆ ತೀಡುವುದರಿಂದ ಅಲ್ಲ!
>>ಕೆಲವು ಸಾಮಾನ್ಯ ರೋಗಗಳನ್ನು ಗುಣಪಡಿಸಿಕೊಳ್ಳುವ ದೇಹದ ಶಕ್ತಿಯನ್ನು ಆಧುನಿಕ ಪಧ್ಧತಿ ಗುರುತಿಸುವುದಿಲ್ಲ. ಅಥವಾ ಗೊತ್ತಿದ್ದೂ ಅದನ್ನು ಪ್ರೋತ್ಸಾಹಿಸುವುದಿಲ್ಲ. ಏನಿದ್ದರೂ ಔಷಧ ಕೊಡಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತಾರಲ್ಲ, ಹಾಗೆ..<<
ಇದು ಸರಿಯಲ್ಲ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಬಗ್ಗೆ ಆಧುನಿಕ ವೈದ್ಯ ವಿಜ್ಞಾನದಲ್ಲಿ ಅದ್ಭುತವಾದ ಮಾಹಿತಿಯಿದೆ, ಆ ಬಗ್ಗೆ ಅತ್ಯುನ್ನತ ಮಟ್ಟದ ಸಂಶೋಧನೆಗಳಾಗುತ್ತಿವೆ. ವಿವಿಧ ರೋಗಗಳಲ್ಲಿ ಈ ವ್ಯವಸ್ಥೆಯ ಪಾತ್ರವೇನು ಎನ್ನುವ ಬಗ್ಗೆ ಸಾಕಷ್ಟು ವಿವರಗಳು ಲಭ್ಯವಿದ್ದು ಅವಕ್ಕೆ ಅನುಗುಣವಾಗಿಯೇ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ರೋಧ ಶಕ್ತಿ ಸಬಲವಾಗಿರುವವರಿಗೂ, ದುರ್ಬಲವಾಗಿರುವವರಿಗೂ ಬೇರೆಯೇ ಆದ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ರೋಧಶಕ್ತಿಯನ್ನು ಬಲಪಡಿಸುವ ಅಥವಾ ಅದರಿಂದಲೇ ಕಾಹಿಲೆಗಳುಂಟಾದರೆ ಅದನ್ನು ದುರ್ಬಲಗೊಳಿಸಬಲ್ಲ ಚಿಕಿತ್ಸೆಗಳನ್ನೂ ನೀಡಲಾಗುತ್ತದೆ. ಎಲ್ಲಾ ಕಾಹಿಲೆಗಳಿಗೆ ಔಷಧಗಳನ್ನು ಕೊಡಲೇ ಬೇಕೆಂಬ ನಿಯಮವು ಆಧುನಿಕ ವೈದ್ಯ ವಿಜ್ಞಾನದಲ್ಲಿ ಇಲ್ಲವೇ ಇಲ್ಲ. ಫ್ಲೂ, ಡೆಂಗೀಯಂತಹ ಹತ್ತು ಹಲವು ಕಾಹಿಲೆಗಳು ಯಾವುದೇ ಔಷಧಗಳಿಲ್ಲದೆ ಗುಣ ಹೊಂದುವ ಕಾಹಿಲೆಗಳೆಂದು ಆಧುನಿಕ ವೈದ್ಯ ವಿಜ್ಞಾನದಲ್ಲಷ್ಟೇ ಹೇಳಲಾಗುತ್ತದೆ, ಬದಲಿ ಪದ್ಧತಿಗಳಲ್ಲಲ್ಲ.
>>ಆಧುನಿಕ ವೈದ್ಯ ತುಟ್ಟಿ. ಸಣ್ಣ ಪುಟ್ಟ ಔಷಧಿಗಳೂ ಕೂಡ ಕಾರ್ಖಾನೆಯಲ್ಲೇ ತಯಾರಾಗಬೇಕು. ಆಗ ಇಲ್ಲಿ ಲಾಭ ನಷ್ಟದ ಪ್ರಶ್ನೆ ನುಸುಳಿಕೊಳ್ಳುತ್ತದೆ.<<
ಇದೂ ಸರಿಯಲ್ಲ. ಔಷಧಗಳು ಎಲ್ಲಿ ತಯಾರಾಗುತ್ತವೆ ಎನ್ನುವುದು ಮುಖ್ಯವಲ್ಲ, ಅವುಗಳಿಂದ ಏನು ಪ್ರಯೋಜನವಾಗುತ್ತದೆ ಎನ್ನುವುದೇ ಮುಖ್ಯ. ಈ ದೃಷ್ಟಿಯಿಂದ ಯಾವುದೇ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ನೀಡಲಾಗದ ಆಯುರ್ವೇದ ಔಷಧಗಳಿಗಾಗಲೀ, ಯಾವುದೇ ಪರಿಣಾಮಕಾರಿ ವಸ್ತುಗಳ ಲವಲೇಶವೂ ಇಲ್ಲದ (ನ್ಯಾನೋ ಪ್ರಮಾಣದಲ್ಲಂತೆ!) ಹೋಮಿಯೋಪತಿ ಔಷಧಗಳಿಗಾಗಲೀ, ಚಿಕಿತ್ಸೆಯೇ ಅಲ್ಲದ ಯೋಗಕ್ಕಾಗಲೀ ಚಿಕ್ಕಾಸು ಖರ್ಚು ಮಾಡಿದರೂ ಅದು ವ್ಯರ್ಥವೇ, ಅದು ತುಟ್ಟಿಯೇ.
ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆಧುನಿಕ ಚಿಕಿತ್ಸೆಯು ಲಭ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಖಾಸಗೀಕರಣದ ಭೂತದಿಂದಾಗಿ ಇದು ದುರ್ಲಭವಾಗುತ್ತಲಿದೆ. ಕೆನಡಾದಲ್ಲಿ ಎಲ್ಲ ಅತ್ಯಾಧುನಿಕ ಚಿಕಿತ್ಸೆಯೂ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಹಾಗಾಗಿ ಸರಕಾರಗಳು ಮನಸ್ಸು ಮಾಡಿದರೆ ಇದು ಸಾಧ್ಯವಿದೆ. ಹಲವು ಸಂಘ ಸಂಸ್ಠೆಗಳೂ ಉಚಿತವಾಗಿ ಯಾ ತೀರಾ ಕಡಿಮೆ ವೆಚ್ಚದಲ್ಲಿ ಆಧುನಿಕ ಆಸ್ಪತ್ರೆಗಳನ್ನು ನಡೆಸುತ್ತಿವೆ. ಆದರೆ ಖಾಸಗಿ ವೃತ್ತಿಯಲ್ಲಿರುವ ವೈದ್ಯರಾಗಲೀ, ಖಾಸಗಿ ಆಸ್ಪತ್ರೆಗಳಾಗಲೀ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆಯನ್ನು ನೀಡಬೇಕೆಂದು ಅಪೇಕ್ಷಿಸುವುದು ಸರಿಯಾಗದು. ಆದರೂ ಇಂತಹಾ ವ್ಯವಸ್ಥೆಗಳಲ್ಲೂ ಅತಿ ಬಡವರಿಗೆ ನೆರವಾಗುವ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದು ವಿರಳವಲ್ಲ.
ಇನ್ನೊಂದೆಡೆ, ತಮ್ಮ ವಿದ್ಯೆಯನ್ನು ದುರುಪಯೋಗಿಸಿ ರೋಗಿಗಳನ್ನು ಸುಲಿಯುವ ಆಧುನಿಕ ವೈದ್ಯರೂ ಇದ್ದಾರೆ. (ಇಲ್ಲಿ ಕೆಲವರು ಅಂದಾಜಿಸಿದಂತೆ ಶೇ.೯೦ ಇತ್ಯಾದಿಗಳೆಲ್ಲ ಅತಿ ಉತ್ಪ್ರೇಕ್ಷೆಗಳಷ್ಟೆ) ವೈದ್ಯಕೀಯ ಶಿಕ್ಷಣವು ಹೆಚ್ಚು ಹೆಚ್ಚು ಖಾಸಗೀಕರಣಗೊಂಡಂತೆ ಇದು ಇನ್ನಷ್ಟು ಹೆಚ್ಚಲಿದೆ. ಈ ವ್ಯಾಧಿಗೆ ಚಿಕಿತ್ಸೆ ಸುಲಭವಿಲ್ಲ. ಆದರೆ ಕೆಲವು ಆಧುನಿಕ ವೈದ್ಯರ ತಪ್ಪಿಗೆ ಇಡೀ ಆಧುನಿಕ ವೈದ್ಯ ವಿಜ್ಞಾನವನ್ನೇ ದೂಷಿಸುವುದು ಅನ್ಯಾಯವಾಗುತ್ತದೆ. ವಿದ್ಯುತ್ ಆಘಾತವಾದರೆ ವಿದ್ಯುತ್ ಶಕ್ತಿಯನ್ನು ದೂಷಿಸಲಾದೀತೇ? ಹಾಗೆಯೇ, ಆಧುನಿಕ ವೈದ್ಯರು ಇಂತಹಾ ತಪ್ಪುಗಳನ್ನು ಮಾಡುತ್ತಾರೆನ್ನುವ ಕಾರಣಕ್ಕೆ ಬದಲಿ ಪದ್ಧತಿಗಳು ತನ್ನಿಂತಾನಾಗಿ ಒಳ್ಳೆಯವಾಗುವುದಿಲ್ಲ. ಆಧುನಿಕ ವೈದ್ಯರುಗಳಿಗೆ ಮನುಷ್ಯತ್ವವೇ ಇಲ್ಲವೆಂದೂ, ಹಾಗಾಗಿ ಬದಲಿ ವೈದ್ಯರೇ ಒಳ್ಳೆಯವರೆಂದೂ ಭಾಷಣ ಬಿಗಿಯುವ ಆಧುನಿಕ ವೈದ್ಯಕೀಯ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲರೊಬ್ಬರು, ತಮ್ಮ ಕಾಲೇಜಿನಲ್ಲಿ ಅದೇಕೆ ಮನುಷ್ಯತ್ವವನ್ನು ಕಲಿಸಿಕೊಡಲಿಲ್ಲ ಎನ್ನುವುದನ್ನು ಹೇಳುವುದೇ ಇಲ್ಲ. ತಾವು ಕಲಿತಿರುವ ವೈದ್ಯ ವಿಜ್ಞಾನಕ್ಕೆ ಬದಲಾಗಿ ದನದ ಮೂತ್ರವನ್ನು ಕುಡಿಸುವ, ಸೆಗಣಿ ತಿನ್ನಿಸುವ, ಎಂಜಲೆಲೆಯ ಮೇಲೆ ಉರುಳಾಡುವ, ಯೋಗಾಭ್ಯಾಸವನ್ನು ಸೂಚಿಸುವ ಆಧುನಿಕ ವೈದ್ಯರೂ ಇದ್ದಾರೆ. ಇಂತಹ ಎಡೆಬಿಡಂಗಿಗಳಿಂದಲೂ ಆಧುನಿಕ ವೈದ್ಯ ವಿಜ್ಞಾನಕ್ಕೆ ಅಪಚಾರವಾಗುತ್ತಿದೆ, ಬದಲಿ ಪದ್ಧತಿಗಳಿಗೆ ಪುಕ್ಕಟೆ ಪ್ರಚಾರವೂ ದೊರೆಯುತ್ತಿದೆ.
ಆಧುನಿಕ ವೈದ್ಯರ ಲಾಭಕೋರತನದ ಬಗ್ಗೆ ಮೈಲುಗಟ್ಟಲೆ ಬರೆಯುವವರಿಗೆ ಬದಲಿ ವೈದ್ಯರ ಮೋಸಗಳು ಅದೇಕೆ ಕಾಣುವುದಿಲ್ಲ? ಯಾವ ರೋಗವನ್ನು ಗುಣಪಡಿಸಲಾಗದಿದ್ದರೂ ಎಲ್ಲಾ ರೋಗಗಳನ್ನೂ ಗುಣ ಪಡಿಸುವುದಾಗಿ ನಂಬಿಸಿ ಸಾವಿರಗಟ್ಟಲೆ ಬಾಚುವ ಬದಲಿ ವೈದ್ಯರುಗಳಿಗೇನೂ ಕಡಿಮೆಯಿಲ್ಲ. ಆಧುನಿಕ ವೈದ್ಯ ವಿಜ್ಞಾನದ ಗಂಧಗಾಳಿಯಿಲ್ಲದಿದ್ದರೂ ಅದರ ಔಷಧಗಳನ್ನು ಬೇಕಾಬಿಟ್ಟಿಯಾಗಿ ಬಳಸುವ ಬದಲಿ ವೈದ್ಯರುಗಳು ಹೇರಳವಾಗಿದ್ದಾರೆ. ಯಾವುದೇ ತರಬೇತಿಯೂ ಇಲ್ಲದೆ ಬದಲಿ ವೈದ್ಯರಂತೆ ನಟಿಸಿ ಕಾಸು ದೋಚುವವರೂ ಇದ್ದಾರೆ. ವಿ.ವಿ.ಎ.ಆರ್., ಆರ್.ಎಂ.ಪಿ. ಎಂಬ ’ಪದವಿಯನ್ನು’ (ಇದರ ಪೂರ್ಣ ವಿಸ್ತಾರವನ್ನು ತಿಳಿಸಬಲ್ಲಿರಾ?) ಹೊತ್ತ ಬದಲಿ ವೈದ್ಯರೊಬ್ಬರು ನಮ್ಮೂರಲ್ಲಿದ್ದು, ಪ್ರತೀ ರೋಗಿಯಿಂದ ಪ್ರತೀ ಭೇಟಿಗೆ ರೂ. ೯೦೦ ಪಡೆದು ಎಲ್ಲರಿಗೂ ಒಂದೇ ತರಹದ ಬಾಟಲಿಯನ್ನು ನೀಡುತ್ತಾರೆ, ಆಧುನಿಕ ವೈದ್ಯರನ್ನು ಹೀಯಾಳಿಸುವುದನ್ನೂ ಆತ ಮರೆಯುವುದಿಲ್ಲ. ಯಾವುದೇ ತರಬೇತಿಯಿಲ್ಲದೆ ಎಂ.ಡಿ. ಪದವಿಯನ್ನು ರಾಜಾರೋಷವಾಗಿ ಬಳಸುವ ನಕಲಿ ವೈದ್ಯನೊಬ್ಬನನ್ನು ನಂಬಿದ್ದ ನನ್ನ ಹೈಸ್ಕೂಲು ಗುರುಗಳೊಬ್ಬರಲ್ಲಿ ಕ್ಯಾನ್ಸರ್ ಪತ್ತೆಯಾದಾಗ ಯಾವ ಚಿಕಿತ್ಸೆಯನ್ನೂ ನೀಡಲಾಗದ ಸ್ಥಿತಿಗೆ ತಲುಪಿತ್ತು. ಇತ್ತೀಚೆಗೆ ನಮ್ಮೂರಲ್ಲಿ ಬಹಳ ಅಬ್ಬರದೊಂದಿಗೆ ಆರಂಭಗೊಂಡ ಆಯುರ್ವೇದ ಕ್ಲಿನಿಕ್ ಒಂದರಲ್ಲಿ ಒಬ್ಬ ಯುವಕನ ನಾಡಿಯನ್ನು ಪರೀಕ್ಷಿಸಿ ’ನಿನ್ನ ಎಡ ಭಾಗಕ್ಕೆ ರಕ್ತ ಸಂಚಾರವಿಲ್ಲ, ಅದನ್ನು ಸರಿಪಡಿಸಲು ಎರ್ನಾಕುಲಂನಿಂದ ಸ್ಪೆಷಲಿಸ್ಟ್ ಬರುತ್ತಾರೆ, ನಾಳೆ ಹತ್ತು ಸಾವಿರ ತಗೊಂಡು ಬಾ’ ಎಂದು ಹೇಳಲಾಗಿತ್ತು. ಇಂತಹದನ್ನು ನಾವು ದಿನನಿತ್ಯವೂ ನೋಡುತ್ತೇವೆ.
>>ಆಧುನಿಕ ವೈದ್ಯ ಪಧ್ಧತಿಯಲ್ಲಿ ವೈದ್ಯಕೀಯ ಜ್ನಾನ ವೈದ್ಯನಲ್ಲೇ ಉಳಿದುಕೊಳ್ಳುತ್ತದೆ. ರೋಗಿಗೆ ತಾನು ಏನು ತಿನ್ನುತ್ತಿದ್ದೇನೆಂಬುದೇ ಗೊತ್ತಿರುವುದಿಲ್ಲ,<<
ಇದೂ ಸರಿಯಲ್ಲ. ಆಧುನಿಕ ವೈದ್ಯರು ಬರೆದಿರುವ ವಿವರಗಳನ್ನು ಜಗತ್ತಿನ ಯಾವ ಆಧುನಿಕ ವೈದ್ಯನಿಗೆ ತೋರಿಸಿದರೂ ಚಿಕಿತ್ಸೆಯನ್ನು ಮುಂದುವರಿಸುವುದಕ್ಕೆ ಸಾಧ್ಯವಿದೆ. ರೋಗಿಯೂ ತನಗೆ ಬೇಕಾದ ಎಲ್ಲ ವಿವರಗಳನ್ನೂ ವೈದ್ಯರನ್ನು ಕೇಳಿ ಪಡೆಯಬಹುದು, ಎಲ್ಲ ಸಂಶಯಗಳಿಗೂ ಉತ್ತರಗಳನ್ನು ಕೇಳಬಹುದು. ಬದಲಿ ಚಿಕಿತ್ಸೆಯಲ್ಲಿ ನೀಡಲಾಗುವ ಔಷಧಗಳ ಸ್ವರೂಪ ಹಾಗೂ ಗುಣಾವಗುಣಗಳ ಬಗ್ಗೆ ಅದನ್ನು ಕೊಡುವ ವೈದ್ಯರಿಗಾಗಲೀ, ಪಡೆಯುವ ರೋಗಿಗಳಿಗಾಗಲೀ, ನಂತರ ಆ ರೋಗಿಯನ್ನು ನೋಡುವ ಆಧುನಿಕ ವೈದ್ಯರಿಗಾಗಲೀ ಯಾವ ಮಾಹಿತಿಯೂ ಇರುವುದಿಲ್ಲ. ಎಷ್ಟೋ ಸಲ ಇಂತಹ ಔಷಧಗಳನ್ನು ತಿಂದು ತೀವ್ರ ಸ್ವರೂಪದ ಅಡ್ಡ ಪರಿಣಾಮಗಳಾದಾಗ ಅವನ್ನು ಗುರುತಿಸಿ, ನಿಭಾಯಿಸುವುದಕ್ಕೂ ಕಷ್ಟವಾಗುತ್ತದೆ.
>>ರೋಗ ಗುಣವಾಗುವುದೇನಿದ್ದರೂ ರೋಗಿಯ ಪ್ರಯತ್ನದಿಂದಲೇ, ಔಶಧಿಗಳೇನಿದ್ದರೂ ರೋಗಿಗೆ ಸಹಾಯ ಮಾಡಲು ಎಂಬುದು ಆಧುನಿಕ ವೈದ್ಯಕ್ಕೆ ಗೊತ್ತಿಲ್ಲ. ಎಲ್ಲಾ ತನ್ನ ಔಷಧಿಯಿಂದಲೇ ಗುಣವಾಗುತ್ತದೆ/ಗುಣವಾಗಬೇಕು ಎಂಬುದು ಆಧುನಿಕ ವೈದ್ಯನ ಆಗ್ರಹ. ಅದಕ್ಕೇ ಎಷ್ಟೋ ಬಾರಿ ಔಷಧಿ ದೇಹಕ್ಕೆ ಒಗ್ಗುವುದಿಲ್ಲ ಅಥವಾ ಗುಣವಾದ ರೋಗ ಮತ್ತೆ ಮರುಕಳಿಸುತ್ತದೆ. ಯಾಕೆಂದರೆ ರೋಗಕ್ಕೆ ಕಾರಣವಾದ ಅಂಶಗಳನ್ನು ನಿವಾರಿಸಲು ರೋಗಿಗೆ ವೈದ್ಯ ಮನದಟ್ಟು ಮಾಡಿಲ್ಲ ಅದಕ್ಕೆ. <<
ಇದು ಸರಿಯಲ್ಲ. ಇದಕ್ಕೆ ಉತ್ತರ ಮೇಲಿದೆ.
>>ಸೈಡ್ ಇಫೆಕ್ಟ್ಸ್ ಎಲ್ಲರಿಗೂ ತಿಳಿಸಿರುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಇತರ ಪಧ್ಧತಿಗಳಲ್ಲಿ ಅಷ್ಟಾಗಿ ಇಲ್ಲ. (ಇಲ್ಲವೇ ಇಲ್ಲ ಎಂದು ಹೇಳಲಾಗದು)<<
ಅಡ್ದ ಪರಿಣಾಮಗಳಿಲ್ಲದ ಔಷಧಗಳಿಲ್ಲ. ಪರಿಣಾಮವಿದ್ದರೆ ಅಡ್ದ ಪರಿಣಾಮವಿರಲೇ ಬೇಕು. ಆಧುನಿಕ ವೈದ್ಯಶಾಸ್ತ್ರದಲ್ಲಿ ಬಳಸುವ ಎಲ್ಲ ಔಷಧಗಳ ಎಲ್ಲಾ ಸಂಭಾವ್ಯ ಅಡ್ಡ ಪರಿಣಾಮಗಳನ್ನು ಮೊದಲೇ ಗುರುತಿಸಿ ಅದನ್ನು ಬರೆಯುವ ವೈದ್ಯರಿಗೆ ಹೇಳಲಾಗುತ್ತದೆ, ಪಡೆಯುವ ರೋಗಿಗಳಿಗೂ ಅದನ್ನು ತಿಳಿಸಲಾಗುತ್ತದೆ; ಅಡ್ಡ ಪರಿಣಾಮಗಳುಂಟಾದರೆ ಕೂಡಲೇ ಗುರುತಿಸಿ ತಕ್ಕ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ. ಬದಲಿ ಔಷಧಗಳ ಬಗ್ಗೆ ಇಂತಹಾ ಅಧ್ಯಯನಗಳು ನಡೆಯದಿರುವುದರಿಂದ ಅಡ್ಡ ಪರಿಣಾಮಗಳ ಬಗ್ಗೆ ಯಾವುದೇ ಅರಿವಿರುವುದಿಲ್ಲ. ಆದರೆ ಗೊತ್ತಿಲ್ಲ ಎನ್ನುವುದಕ್ಕೆ ಬದಲಾಗಿ ಇಲ್ಲವೇ ಇಲ್ಲ ಎನ್ನಲಾಗುತ್ತದೆ; ಹೀಗಾಗಿ ಎಲ್ಲರೂ ಕತ್ತಲೆಯಲ್ಲಿದ್ದಂತಾಗುತ್ತದೆ, ಅಡ್ಡ ಪರಿಣಾಮಗಳಾದರೆ ರೋಗಿಗಾಗಲೀ, ಬದಲಿ ವೈದ್ಯರಿಗಾಗಲೀ ಗೊತ್ತಾಗುವುದೇ ಇಲ್ಲ. ಯೋಗವೂ ಸುರಕ್ಷಿತವಲ್ಲ, ಯೋಗಾಸನಗಳಿಂದಾಗಿರುವ ಹಲವು ಅನಾಹುತಗಳ ಬಗ್ಗೆ ವರದಿಗಳಿವೆ.
>>ರೋಗ ಗುಣಪಡಿಸುವುದರಲ್ಲಿ ಆಧುನಿಕ ಪಧ್ಧತಿಗಿಂತ ಹೆಚ್ಚು ಅನುಭವ (ಸಾವಿರಾರು ವರ್ಷಗಳ). ಲೆಬೋರೇಟರಿಯಲ್ಲಿ ಮಾಡುವ ಕೃತಕ ಪರೀಕ್ಷೆಗಳಿಗಿಂತ ನಿಜ ಜೀವನದ ಅನುಭವವೇ ಇಲ್ಲಿ ಮೇಲುಗೈ (ಅದಕ್ಕೇ ಸೈಡ್ ಎಫೆಕ್ಟ್ಸ್ ಕಮ್ಮಿ ಇರಬಹುದೋ ಏನೋ)<<
ಇದಕ್ಕೆ ಉತ್ತರವೆಲ್ಲ ಮೇಲಿದೆ. ಅನುಭವವನ್ನು ನೆಚ್ಚಿಕೊಳ್ಳುವುದು ಅಪಾಯಕರ.
>>ಅನುಭವಜನ್ಯ ತತ್ವಗಳಾದ ತ್ರಿದೋಶಗಳು, ರಕ್ತಶುಧ್ಧಿ ಮುಂತಾದವುಗಳಿಂದ ರೋಗದ ಸಂಪೂರ್ಣ ಶಮನ ಸಾಧ್ಯವಾಗುತ್ತದೆ. ರೋಗ ಮರುಕಳಿಸುವುದಿಲ್ಲ.<<
ಇದು ಬರೇ ಹೇಳಿಕೆಯಷ್ಟೇ, ಆಧಾರಗಳಿಲ್ಲ. ಮೇಲೆ ನೋಡಿ.
>>ಕ್ಲಿಷ್ಟಕರವಾದ Symptoms ಇರುವ ಸಮಸ್ಯೆಗಳಿಗೆ ಸರಳ ವೈದ್ಯ ಲಭ್ಯವಿದೆ. ಹೆಚ್ಚಿನ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. (ನನ್ನ ತಾಯಿಯವರಿಗೆ ಆಯುರ್ವೇದ ಔಷಧಿ ಮೂಲಕ ಗರ್ಭಕೋಶದ ಕಲ್ಲಿನ ಸಮಸ್ಯೆ ಪರಿಹಾರವಾಗಿತ್ತು. ಶಸ್ತ್ರಚಿಕಿತ್ಸೆಯ ಅಗತ್ಯವೇ ಬೀಳಲಿಲ್ಲ)<<
ಇದೂ ಹೇಳಿಕೆಯೇ. ಯಾವೆಲ್ಲ ಕ್ಲಿಷ್ಟಕರ ರೋಗಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆಯೇ ಗುಣ ಪಡಿಸಬಹುದೆನ್ನುವುದನ್ನು ವಿವರವಾಗಿ ಹೇಳಿದರೆ ಒಳ್ಳೆಯದು. ಗರ್ಭಕೋಶದ ಕಲ್ಲು ಎಂಬುದಿಲ್ಲ, ಗರ್ಭಕೋಶದ ಫೈಬ್ರಾಯ್ಡ್ ಆಗಿರಬಹುದು, ಅದರಲ್ಲಿ ಕ್ಯಾಲ್ಸಿಯಂ ತುಂಬಿದ್ದಿರಬಹುದು. ಕೆಲವರಲ್ಲಿ ಅದು ಯಾವುದೇ ಚಿಕಿತ್ಸೆಯಿಲ್ಲದೆಯೇ ಕಿರಿದಾಗುವುದಿದೆ.
>>ಪರ್ಯಾಯ ವೈದ್ಯ ಪಧ್ಧತಿಗಳು ಒಂದು ಕ್ರಮಬಧ್ಧ ಜೀವನವನ್ನು ನಡೆಸಲು ಆಗ್ರಹಿಸುತ್ತವೆ. ಉದಾ ಆಹಾರ ಪಥ್ಯಗಳು. ಬೇಕಾಬಿಟ್ಟಿಯಾಗಿ ಬದುಕಿ ನಂತರ ಅದರಿಂದುಂಟಾದ ಸಮಸ್ಯೆಗಳನ್ನು ನಿವಾರಿಸುವುದು ಇವುಗಳ ಫಿಲಾಸಫಿಯಲ್ಲಿ ಇಲ್ಲ.<<
ಜೀವನಶೈಲಿಯ ನಿರ್ವಹಣೆಯು ಬದಲಿ ಪದ್ಧತಿಗಳ ಗುತ್ತಿಗೆಯೇನಲ್ಲ. ಅಧುನಿಕ ವೈದ್ಯ ವಿಜ್ಞಾನದಲ್ಲೂ ಅದಕ್ಕೆ ಅತೀವವಾದ ಮಹತ್ವವಿದೆ.
>>ಅನುಭವಕ್ಕಿಂತ ಎಲ್ಲಕ್ಕೂ ಸಾಕ್ಷಿ ಕೇಳುವ ಆಧುನಿಕ ಮನೋಭಾವದವರಿಗೆ ಇಲ್ಲಿ ಕೆಲವು ವಿಷಯಗಳಿಗೆ ಸಾಕ್ಷಿ ಸಿಕ್ಕುವುದಿಲ್ಲ. ಉದಾಹರಣೆಗೆ ವಾತ ಪಿಥ್ಥ ಕಫ ಗಳನ್ನು ಲೆಬೋರೇಟರಿಯಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲ.; ಬದಲಿ ಚಿಕಿತ್ಸಾ ಪಧ್ಧತಿಗಳ ಬಗ್ಗೆ ಹೆಚ್ಚಿನ Documentation ಇಲ್ಲ. ಇದರಿಂದ ಎಲ್ಲಾ ಕಡೆ ಒಂದೇ ರೀತಿಯ ಪರಿಹಾರಗಳಿಲ್ಲ. (ಒಂದು ರೀತಿಯಿಂದ ಇದು ಒಳ್ಳೆ ಗುಣವೂ ಹೌದು. Diversity ಅನ್ನುವುದು ಪ್ರಕೃತಿಯ ಗುಣ. ಎಲ್ಲವೂ ಲೆಬೋರೇಟರಿಯಲ್ಲಿ ಇದ್ದಂತೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ಆಯಾಯಾ ಪ್ರದೇಶದಲ್ಲಿ ಪ್ರಕೃತಿಗನುಗುಣವಾಗಿ ಈ ವೈದ್ಯ ಪಧ್ಧತಿಗಳು ಬೆಳೆದಿವೆ).<<
ಇವನ್ನು ಒಪ್ಪಲಾಗದು, ಮೇಲೆ ವಿವರಿಸಿದ್ದೇನೆ.
>>ಬದಲಿ ವೈದ್ಯ ಪಧ್ಧತಿಗಳನ್ನು ಅನುಸರಿಸಲು ಕಷ್ಟ. ಬರೇ ಒಂದು ಮಾತ್ರೆ ನುಂಗಿದರೆ ಸಮಸ್ಯೆ ನೀಗಿಸುವುದಿಲ್ಲ ಇವು. ನಾಲಗೆ ಚಪಲಕ್ಕೆ ತಡೆ, ಶಿಸ್ತುಬಧ್ಧ ಜೀವನ ಕ್ರಮ ಇವನ್ನೆಲ್ಲ ಕೇಳುತ್ತದೆ. ಸ್ವೇಚ್ಛಾಚಾರಿಗಳಿಗೆ ಇದು ಒಗ್ಗದು. <<
ಇದೂ ಸರಿಯಲ್ಲ, ಮೇಲೆ ವಿವರಿಸಿದ್ದೇನೆ. ಕಾಹಿಲೆ ನಿಧಾನವಾಗಿ ಕಡಿಮೆಯಾಗುತ್ತದೆ, ತಲೆಯಲ್ಲಿದ್ದ ಹುಣ್ಣು ಕಾಲಿನ ದಾರಿಯಾಗಿ ಬಿದ್ದು ಹೋಗುತ್ತದೆ ಇತ್ಯಾದಿ ವಿವರಣೆಗಳು ಅಮಾಯಕರ ದಾರಿ ತಪ್ಪಿಸಿ ಅನಾಹುತಗಳಿಗೆ ಕಾರಣವಾದ ಎಷ್ಟೋ ನಿದರ್ಶನಗಳಿವೆ. ನಾವು ದಿನನಿತ್ಯ ನೋಡುವ ಇಂತಹ ಅವಾಂತರಗಳನ್ನು ಪಟ್ಟಿ ಮಾಡುವುದು ಅಸಾಧ್ಯ.
ನಾನು ಕೇರಳದ ಕಣ್ಣೂರಿನ ಆಸ್ಪತ್ರೆಯೊಂದರಲ್ಲಿ ಕೆಲಕಾಲ ದುಡಿಯುತ್ತಿದ್ದಾಗ ನಡೆದ ಘಟನೆಯನ್ನು ಹೇಳಲೇಬೇಕು. ನಮ್ಮನ್ನು ಪ್ರತೀವಾರವೂ ಕಾಣುತ್ತಿದ್ದ ಔಷಧ ಕಂಪೆನಿಯೊಂದರ ಪ್ರತಿನಿಧಿಯೊಬ್ಬರ ತಂಗಿಗೆ ಭುಜದ ಮೂಳೆಮುರಿತವಾಯಿತು. ಅತ್ಯಂತ ಬುದ್ಧಿವಂತಳೂ, ಸ್ಫುರದ್ರೂಪಿಯೂ ಆಗಿದ್ದ ಆಕೆಯನ್ನು ಇದೇ ಪ್ರತಿನಿಧಿಯು ಮೂಳೆ ಕಟ್ಟುವವರ ಬಳಿ ಒಯ್ದನು. (ತಾನು ನೋಡುತ್ತಿದ್ದ ವೈದ್ಯರ ಬಗ್ಗೆ ಅವನಿಗೆ ವಿಶ್ವಾಸವಿದ್ದಿಲ್ಲವೇನೋ) ಅಲ್ಲಿ ಬಿಗಿದ ಕಟ್ಟಿನಿಂದ ಅವಳ ಕೈಯ ರಕ್ತನಾಳವು ಮುಚ್ಚಲ್ಪಟ್ಟು ಇಡೀ ಕೈಯೇ ಕೊಳೆತು ಹೋಯಿತು. ಕಟ್ಟಿದ ನಾಟಿ ವೈದ್ಯನಿಗಾಗಲೀ, ಮನೆಯವರಿಗಾಗಲೀ ಇದು ತಿಳಿಯದೆ ಮೂಳೆತಜ್ಞರ ಬಳಿ ಬರುವಾಗ ಪರಿಸ್ಥಿತಿಯು ಕೈಮೀರಿತ್ತು, ಅವಳ ಇಡೀ ಕೈಯನ್ನೇ ಕತ್ತರಿಸಿ ತೆಗೆಯಬೇಕಾಯಿತು. ಆ ಆಸ್ಪತ್ರೆಯಲ್ಲಿದ್ದ ಮೂಳೆತಜ್ಞರು ತಮ್ಮ ವೃತ್ತಿಯಲ್ಲಿ ಅತ್ಯಂತ ನಿಪುಣರೂ, ಅತಿ ಮೃದು ಸ್ವಭಾವದವರೂ ಆಗಿದ್ದು, ಆತನಲ್ಲಿ "ಅಯ್ಯ, ನಿನಗೇಕೆ ನಮ್ಮ ನೆನಪಾಗಲಿಲ್ಲ?” ಎಂದಷ್ಟೇ ಕೇಳಿದರು. ಆಗ ಆತನ ಮುಖದಲ್ಲಿ ಮೂಡಿದ್ದ ಭಾವನೆಯನ್ನು ನಾನೆಂದೂ ಮರೆಯೆನು.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
ಲೇಖನವೇ ದೊಡ್ಡದಾಯಿತೆಂದುಕೊಂಡಿದ್ದೆ. ಲೇಖನದ ನಾಲಕ್ಕು ಪಟ್ಟು ಪ್ರತಿಕ್ರಿಯೆ ಬರೆದಿರಲ್ಲ... ಭೇಷ್. ನಿಮ್ಮಷ್ಟೇ ದೊಡ್ಡ ಪ್ರತಿಕ್ರಿಯೆ ಬರೆಯಲು ಸದ್ಯಕ್ಕಂತೂ ಅಸಾಧ್ಯ. ಇನ್ನೆರಡು ದಿನಗಳಲ್ಲಿ ಹತ್ತು ದಿನಗಳ ಮಟ್ಟಿಗೆ ಬೆಂಗಳೂರಿಗೆ ಟಾಟಾ ಮಾಡಿ ಊರಿಗೆ ಹೋಗುತ್ತಿದ್ದೇನೆ. ಬಂದ ಮೇಲೆ ಬಿಡುವಾದರೆ ವಿಶದವಾಗಿ ಬರೆಯುತ್ತೇನೆ. ನಿಮ್ಮ ಒಟ್ಟಾರೆ ಪ್ರತಿಕ್ರಿಯೆಗೆ ನನ್ನ ಉತ್ತರ :
<<ಆಧುನಿಕ ವೈದ್ಯ ವಿಜ್ಞಾನವನ್ನು ಹಳಿಯುವಲ್ಲಿ ಅನೇಕ ವಿದ್ಯಾವಂತರೆನಿಸಿಕೊಂಡವರೂ ಸೇರಿಕೊಳ್ಳುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಟೀಕಿಸುವ ಸ್ವಾತಂತ್ರ್ಯವು ಎಲ್ಲರಿಗೂ ಇದೆ ಎನ್ನುವುದನ್ನು ಒಪ್ಪಿಕೊಂಡರೂ, ಟೀಕೆಗಳು ವಸ್ತು ನಿಷ್ಠವಾಗಿರಬೇಕು ಹಾಗೂ ಸಾಧ್ಯವಾದರೆ ರಚನಾತ್ಮಕವಾಗಿರಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲವೆಂದುಕೊಳ್ಳುತ್ತೇನೆ.>>
ಇದೇ ಮಾತನ್ನು ತಮಗೂ ಅನ್ವಯಿಸಿ ಹೇಳಬಹುದಾದ್ದರಿಂದ ಇದರಿಂದ ಚರ್ಚೆಗೆ ನೀವು ಹೇಳಿದಂತೆ ಯಾವ ರಚನಾತ್ಮಕ ಲಾಭವೂ ಇಲ್ಲ.
<<ಬದಲಿ ವ್ಯವಸ್ಥೆಯು ಆಧುನಿಕ ವೈದ್ಯ ವಿಜ್ಞಾನಕ್ಕೆ ಎಂದಿಗೂ, ಯಾವ ರೀತಿಯಲ್ಲೂ ಪ್ರತಿಸ್ಪರ್ಧಿಯಲ್ಲ, ಯಾವ ವಿಧದಲ್ಲೂ ಬದಲಿಯೂ ಅಲ್ಲ>>
ಚರ್ಚೆಯಲ್ಲಿ ಭಾಗಬಹಿಸುವಾಗ ತೆರೆದ ಮನಸಿನಿಂದ ಭಾಗವಹಿಸಬೇಕು. ತಮ್ಮ ಪ್ರತಿಕ್ರಿಯ ಮೊದಲಲ್ಲೇ ಈ ರೀತಿ ಷರಾ ಎಳೆದು ಬಿಟ್ಟರೆ ಪ್ರತಿಕ್ರಿಯೆಯ ಉಳಿದ ಭಾಗವನ್ನು ಬರೆಯುವ ಅವಶ್ಯಕತೆಯೇನಿತ್ತು?
<<ಆಧುನಿಕ ವೈದ್ಯ ಪದ್ಧತಿ ಇವತ್ತು ನಿನ್ನೆ ಹುಟ್ಟಿದ್ದಲ್ಲ... >> ಈ ಪ್ಯಾರಾದ ಬಗ್ಗೆ : ನನ್ನ ತಕರಾರೇನಿಲ್ಲ.
<<ಒಂದು ಕಾಲಕ್ಕೆ (ಸುಮಾರು ೨೫೦೦-೧೮೦೦ ವರ್ಷಗಳ ಹಿಂದೆ) ಆಯುರ್ವೇದವೂ ಆಧುನಿಕ ವೈದ್ಯಶಾಸ್ತ್ರವೇ ಆಗಿತ್ತು>> ಪ್ಯಾರಾ ಬಗ್ಗೆ :
ಆ ಕಾಲಕ್ಕೇ ಆಯುರ್ವೇದ ಬೆಳವಣಿಗೆ ನಿಂತಿದ್ದಾಗಿರಬಹುದು. ಯಾಕೆಂದರೆ ಅದೇ ಸಮಯಕ್ಕೆ ಹೊರಗಿನಿಂದ ಬಂದ ಧಾಳಿಕೋರರು ಭಾರತದಾದ್ಯಂತ ತಮ್ಮ ಆಡಳಿತ ಸ್ಥಾಪಿಸಿ ತಮ್ಮ ಮತಗಳ ಹೊರತಾಗಿ ಬೇರೆ ಮತ ಮತ್ತು ಅದರ ಜೊತೆಗಿನ ಎಲ್ಲಾ ಜ್ನಾನವನ್ನು ನಾಶಪಡಿಸಿ, ಪಂಡಿತರುಗಳನ್ನು ಕೊಂದು ರಾಜರುಗಳನ್ನು ಪದಚ್ಯುತಗೊಳಿಸಿ ರಾಣಿಯರನ್ನು ಹೊತ್ತೊಯ್ದು.. ಏನೆಲ್ಲಾ ಮಾಡಿದ್ದರು, ಅವೆಲ್ಲಾ ಇಲ್ಲಿ ಅಪ್ರಸ್ತುತ. ಅನಿವಾರ್ಯ ಕಾರಣಗಳಿಂದ ನಿಂತಿದ್ದುದು ಹೌದಾದರೂ ಅದರಿಂದ ಅಲ್ಲಿವರೆಗಿನ ಸಂಶೋಧನೆಗಳೆಲ್ಲವೂ ತಪ್ಪು ಎಂದು ಸಾಬೀತಾಗುವುದಿಲ್ಲ. ಉದಾ ಕ್ಲಾಸಿಕಲ್ ಮೆಕಾನಿಕ್ಸ್ ನ ನಂತರ ಬಂದದ್ದು ಕ್ವಾಂಟಮ್ ಮೆಕಾನಿಕ್ಸ್. ಹಾಗಂತ ಕ್ಲಾಸಿಕಲ್ ಮೆಕ್ಯಾನಿಕ್ಸ್ ಎಲ್ಲ ಸುಳ್ಲೇನಲ್ಲ. ಹಾಗಂತ ಮೊದಲಿನದ್ದು ಸರಿ ಎಂದೂ ಸಾಬೀತಾಗಬೇಕಿಲ್ಲ (ಉದಾ ಭೂಮಿ ದುಂಡಗಿದೆ ಎಂದು ಗೊತ್ತಾದಾಗ ಮೊದಲಿನ ನಂಬಿಕೆ ತಪ್ಪು ಎಂದು ಸಾಬೀತಾಯಿತು). ಹಾಗೆಯೇ ಕಬ್ಬಿಣವನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡು ಹಿಡಿದರೂ ಕಬ್ಬಿಣ ಇನ್ನೂ ಕಬ್ಬಿಣವಾಗಿಯೇ ಉಳಿದಿದೆ, ಏಕೆ ಎಂದು ಕೇಳಿದರೆ ಏನು ಹೇಳುವುದು.
ಇನ್ನು ಆಯುರ್ವೇದ ಗ್ರಂಥಗಳಲ್ಲಿ ಯೋಗದ ಪ್ರಸ್ತಾವನೆ ಏಕಿಲ್ಲ ಎಂಬುದು ನನಗೂ ಗೊತ್ತಿಲ್ಲ. ನಾನು ನನ್ನ ಬರಹದ ಮೊದಲಲ್ಲೇ ಹೇಳಿದಂತೆ ನಾನು ಬರೆದದ್ದು ಒಬ್ಬ ರೋಗಿಯ ದ್ರುಷ್ಟಿಯಿಂದ. ನಾನ ವೈದ್ಯಕೀಯ ಹಿನ್ನೆಲೆಯವನಾಗಿದ್ದರೆ ಇನ್ನೂ ಚೆನ್ನಾಗಿ ಪ್ರತಿಕ್ರಿಯಿಸಬಹುದಿತ್ತು ಅನಿಸುತ್ತಿದೆ. ಆ ನಿಟ್ಟ್ಟಿನಲ್ಲಿ ನೋಡಿದರೆ ಈಚರ್ಚೆ Equal footing ನಲ್ಲಿ ಇಲ್ಲ. ಇದು Level playing field ಅಲ್ಲ.
ಇನ್ನು ಅಲೋಪಥಿ Symptom ಗೆ ಮದ್ದು ಕೊಡುವ ಬಗ್ಗೆ ನಾನು ಧನಾತ್ಮಕವಾಗೇ ಹೇಳಿದ್ದು. ಉದಾ ಜ್ವರ ತೀವ್ರತರವಿದ್ದಾಗ ಅದನ್ನು ಇಳಿಸುವುದೇ ಆದ್ಯತೆ. ಆಗ ಪರಾಸಿಟಮಲ್ ಖಂಡಿತ ಉಪಯುಕ್ತ. ಆದ್ದರಿಂದ ನೀವು ಅದನ್ನು ಸಮರ್ಥಿಸಿ ಬರೆಯುವ ಅಗತ್ಯವಿರಲಿಲ್ಲ. ಆಯುರ್ವೇದ ರೋಗ ಮರುಕಳಿಸದಂತೆ ಗುಣಪಡಿಸುತ್ತದೆ ಎಂದು ಹೇಳಿದ್ದಷ್ಟೇ ಹೊರತು ಆಧುನಿಕ ಪಧ್ಧತಿ Symptoms ಗೆ "ಮಾತ್ರ" ಮದ್ದು ಕೊಡುವುದು ಎಂದು ನಾನು ಹೇಳಿಲ್ಲ.
<<ಇದು ಸರಿಯಲ್ಲ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಬಗ್ಗೆ ಆಧುನಿಕ ವೈದ್ಯ ವಿಜ್ಞಾನದಲ್ಲಿ ಅದ್ಭುತವಾದ ಮಾಹಿತಿಯಿದೆ...>> ಈ ಪ್ಯಾರಾದ ಬಗ್ಗೆ :
ನೀವು ಹೇಳಿದ್ದು ಯಾವುದೋ ವೈದ್ಯಕೀಯ ಗ್ರಂಥದಲ್ಲಿ ಬರೆದಿರಬಹುದು ಅಥವಾ ಇಲ್ಲದಿರಬಹುದು. ಆದ್ರೆ ರೋಗಿಗಂತೂ ಆ ಅನುಭವ ಆಗುವುದಿಲ್ಲ ಎಂದಷ್ಟೇ ಹೇಳಬಲ್ಲೆ. ನಾನು ಹೋಗಿರೋ ಡಾಕ್ಟರುಗಳಲ್ಲಿ ಒಬ್ಬರೂ (ಸಂಬಂಧಿಕರಾದ ಡಾಕ್ಟರುಗಳು ಒಂದಿಬ್ಬರನ್ನು ಬಿಟ್ಟು) ಕೂಡ ನೀವಂದಂತಹ ಮಾತುಗಳನ್ನು ಆಡಲಿಲ್ಲ.
<<ಈ ದೃಷ್ಟಿಯಿಂದ ಯಾವುದೇ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ನೀಡಲಾಗದ ಆಯುರ್ವೇದ ಔಷಧಗಳಿಗಾಗಲೀ >> ಮತ್ತದೇ ಮುಚ್ಚಿದ ಮನಸು. ಕೇಳಬಾರದೆಂದು ಕಿವಿಮುಚ್ಚಿ ಕುಳಿತರೆ ಗೀತೆ ಸಾರಾಂಶ ಹೇಗೆ ಅರ್ಥವಾದೀತು..
<<ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆಧುನಿಕ ಚಿಕಿತ್ಸೆಯು ಲಭ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಖಾಸಗೀಕರಣದ ಭೂತದಿಂದಾಗಿ ಇದು ದುರ್ಲಭವಾಗುತ್ತಲಿದೆ. ಕೆನಡಾದಲ್ಲಿ ಎಲ್ಲ ಅತ್ಯಾಧುನಿಕ ಚಿಕಿತ್ಸೆಯೂ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಹಾಗಾಗಿ ಸರಕಾರಗಳು ಮನಸ್ಸು ಮಾಡಿದರೆ ಇದು ಸಾಧ್ಯವಿದೆ.>>
ಇದು ನಮ್ಮ ಚರ್ಚೆಯಲ್ಲಿ ಏನೂ ಉಪಯೋಗವಿಲ್ಲ. ಸರಕಾರ ಮನಸು ಮಾಡಿ ಅಲೋಪಥಿ ಆಸ್ಪತ್ರೆ ನಿರ್ಮಿಸಿದ ಮಾತ್ರಕ್ಕೆ ಆಯುರ್ವೇದ ತಪ್ಪೆಂದು ಸಾಬೀತಾಗದು.
<<ಆಧುನಿಕ ವೈದ್ಯರ ಲಾಭಕೋರತನದ ಬಗ್ಗೆ ಮೈಲುಗಟ್ಟಲೆ ಬರೆಯುವವರಿಗೆ ಬದಲಿ ವೈದ್ಯರ ಮೋಸಗಳು ಅದೇಕೆ ಕಾಣುವುದಿಲ್ಲ>>
ಕಾಣುವುದಿಲ್ಲ ಎಂದು ಯಾರು ಹೇಳಿದರು? "ಆಯುರ್ವೇದದ ಗುಣಗಳು" ಎಂಬಲ್ಲಿ "ಆಯುರ್ವೇದದಲ್ಲಿ ಢೋಂಗಿ ವೈದ್ಯರುಗಳೇ ಇರುವುದಿಲ್ಲ" ಎಂದು ಹೇಳಿದೆನೇ? ಇಲ್ಲ ತಾನೇ?
ಇನ್ನು ಅಡ್ಡಪರಿಣಾಮಗಳ ಬಗ್ಗೆ ನೀವು ಹೇಳಿದ್ದು ಮತ್ತದೇ ಥಿಯರಿ. ಅಲೋಪಥಿ ಮಾತ್ರೆಗಳನ್ನು ತಿಂದವನಿಗೆ ಗೊತ್ತು ಅದರ ಕಷ್ಟ. ವೈದ್ಯರುಗಳಿಗಲ್ಲ. ಹಾಗಂತ ಅನಿವಾರ್ಯ ಸಂದರ್ಭಗಳಲ್ಲಿ ತಿನ್ನಬೇಕಾದ್ದೇ ಹೌದು. ನಾನೆಲ್ಲೂ ಅಲೋಪಥಿಯನ್ನು ತೊಡೆದುಹಾಕಬೇಕೆಂದು ಶಪಥ ತೊಟ್ಟಿಲ್ಲ. ಹಾಗಂತ ಅದರಲ್ಲಿ ಅಡ್ಡ ಪರಿಣಾಮ ಹೆಚ್ಚು ಎಂಬ ಅನುಭವವನ್ನು ಹೇಳಿಕೊಳ್ಲಲು ನನಗೆ ಸಂಕೋಚವೇನಿಲ್ಲ. Metronidazole, ciprofloxacin ಇತ್ಯಾದಿಗಳ ಬಗ್ಗೆ ಯೋಚಿಸದರೇನೇ ನನಗೆ ವಾಕರಿಕೆ ಬಂದಂತಾಗುತ್ತದೆ. ಇವೆಲ್ಲಾ ಅಂಥಾ ಭಯಂಕರ ರೋಗಗಳಿಗೆ ಕೊಡುವಂಥಾದ್ದು ಅಲ್ಲ ತಾನೆ.. ಹೊಟ್ಟೆ ಇನ್ ಫೆಕ್ಷನ್ ಗೆ ಕೊಡುವಂಥಾದ್ದು. ಹೆಚ್ಚಿನ ಸಂದರ್ಭಗಳಲ್ಲಿ ಇವುಗಳನ್ನು ಸರಳ ಮನೆಮದ್ದಿನಿಂದಲೇ ಗುಣಪಡಿಸಬಹುದು. (ಹಾಗಿದ್ದಲ್ಲಿ ನಾನೇಕೆ ತಿಂದೆ ಎಂದು ಕೇಳಬಹುದು. ಈ ವೇಗದ ಯುಗದಲ್ಲಿ ಮನೆಮದ್ದು ಮಾಡಿಕೊಂಡು ಇರಲು ಯಾವಾಗಲೂ ಎಲ್ಲಿ ಸಾಧ್ಯ. ಅನಿವಾರ್ಯವಾದಾಗ ಅಲೋಪಥಿ ತಿಂದಿದ್ದೇನೆ. ಅದು ನನ್ನ ಆಯ್ಕೆ. ಇದರಲ್ಲಿ ವೈದ್ಯ ಪಧ್ಧತಿಗಳ ತಪ್ಪೇನಿದೆ)
<<ಕೆಲವರಲ್ಲಿ ಅದು ಯಾವುದೇ ಚಿಕಿತ್ಸೆಯಿಲ್ಲದೆಯೇ ಕಿರಿದಾಗುವುದಿದೆ.>>
ನಾವು ಹೋಗಿದ್ದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಅನಿವಾರ್ಯ ಅಂದಿದ್ದರು. ಅದು ಹೇಗೆ ಸಾಧ್ಯ? ಆಧುನಿಕ ವೈದ್ಯ ಪಧ್ಧತಿ ಎಲ್ಲಾ ಕಡೆ ಒಂದೇ ಎಂದಾದ ಮೇಲೆ ಅವರೊಂದು ರೀತಿ, ನೀವೊಂದು ರೀತಿ ಹೇಳುವುದು ಹೇಗೆ ಸಾಧ್ಯ?
ಸದ್ಯಕ್ಕೆ ಇಷ್ಟೇ. ಕೊನೆಯದಾಗಿ ನಿಮ್ಮ ಕೊನೆಯ ಪ್ಯಾರಾದಲ್ಲಿ ಪ್ರಸ್ತಾಪಿಸಿದ ಘಟನೆ ಬಗ್ಗೆ . ಮೂಳೆ ಮುರಿತ ಶಸ್ತ್ರ ಚಿಕಿತ್ಸೆ ಇತ್ಯಾದಿಗಳಲ್ಲಿ ಆಧುನಿಕ ವೈದ್ಯ ಪಧ್ಧತಿಗೆ ಸಾಟಿ ಇಲ್ಲ ಎಂದು ಮೊದಲೇ ಒಪ್ಪಿಕೊಂಡಿದ್ದೇನೆ. ಕೆಲವರಿಗೆ ನಾಟಿ ವೈದ್ಯದಲ್ಲಿ ಕಡಿಮೆಯಾದ್ದಿರಬಹುದು. ಆದರೆ ನಾನಂತೂ ಅಂತಹವರ ಬಳಿಗೆ ಹೋಗುವುದಕ್ಕಿಂತ ಮೊದಲು ಸಾವಿರ ಬಾರಿ ಯೋಚಿಸಿಯೇನು.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
>>
ಇನ್ನು ಆಯುರ್ವೇದ ಗ್ರಂಥಗಳಲ್ಲಿ ಯೋಗದ ಪ್ರಸ್ತಾವನೆ ಏಕಿಲ್ಲ ಎಂಬುದು ನನಗೂ ಗೊತ್ತಿಲ್ಲ. ನಾನು ನನ್ನ ಬರಹದ ಮೊದಲಲ್ಲೇ ಹೇಳಿದಂತೆ ನಾನು ಬರೆದದ್ದು ಒಬ್ಬ ರೋಗಿಯ ದ್ರುಷ್ಟಿಯಿಂದ. ನಾನ ವೈದ್ಯಕೀಯ ಹಿನ್ನೆಲೆಯವನಾಗಿದ್ದರೆ ಇನ್ನೂ ಚೆನ್ನಾಗಿ ಪ್ರತಿಕ್ರಿಯಿಸಬಹುದಿತ್ತು ಅನಿಸುತ್ತಿದೆ. ಆ ನಿಟ್ಟ್ಟಿನಲ್ಲಿ ನೋಡಿದರೆ ಈಚರ್ಚೆ Equal footing ನಲ್ಲಿ ಇಲ್ಲ. ಇದು Level playing field ಅಲ್ಲ<<
ನನ್ನದೊಂದು ವಿನಮ್ರ ವಿನಂತಿ - ತಮಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಬರೆಯಬೇಡಿ, (ಅದೂ ಅಧಿಕಾರವಾಣಿಯಿಂದ). Critical reading, careful writing ಲೇಖನ ಓದಿದ್ದೀರಾ ತಾವು? ನಾನು ಪ್ರತಿಕ್ರಿಯಿಸುವ ಮೊದಲೇ ಆ ಲೇಖನವನ್ನು ತಮಗೆ ತೋರಿಸುವುದಕ್ಕೆ ಇದೇ ಕಾರಣವಾಗಿತ್ತು.
ಆಯುರ್ವೇದ ಗ್ರಂಥಗಳಲ್ಲಿ ಯಾಕಿಲ್ಲ ಅಂದರೆ ಯೋಗ ಚಿಕಿತ್ಸೆ ಎಂಬುದು ಇರಲಿಲ್ಲ, ಅದಕ್ಕೆ.
>> ನೀವು ಹೇಳಿದ್ದು ಯಾವುದೋ ವೈದ್ಯಕೀಯ ಗ್ರಂಥದಲ್ಲಿ ಬರೆದಿರಬಹುದು ಅಥವಾ ಇಲ್ಲದಿರಬಹುದು. ಆದ್ರೆ ರೋಗಿಗಂತೂ ಆ ಅನುಭವ ಆಗುವುದಿಲ್ಲ ಎಂದಷ್ಟೇ ಹೇಳಬಲ್ಲೆ. ನಾನು ಹೋಗಿರೋ ಡಾಕ್ಟರುಗಳಲ್ಲಿ ಒಬ್ಬರೂ (ಸಂಬಂಧಿಕರಾದ ಡಾಕ್ಟರುಗಳು ಒಂದಿಬ್ಬರನ್ನು ಬಿಟ್ಟು) ಕೂಡ ನೀವಂದಂತಹ ಮಾತುಗಳನ್ನು ಆಡಲಿಲ್ಲ.<<
ಹಾಗೆಯೇ <<ಆಧುನಿಕ ವೈದ್ಯ ಪಧ್ಧತಿ ಎಲ್ಲಾ ಕಡೆ ಒಂದೇ ಎಂದಾದ ಮೇಲೆ ಅವರೊಂದು ರೀತಿ, ನೀವೊಂದು ರೀತಿ ಹೇಳುವುದು ಹೇಗೆ ಸಾಧ್ಯ<<
ನಾವು ಮಾಡುವ ಕೆಲಸಗಳೆಲ್ಲವನ್ನೂ ರೋಗಿಯ ಅನುಭವಕ್ಕೆ ತರಲು ಸಾಧ್ಯವೇ? ನಮ್ಮ ತಲೆಯೊಳಗಿರುವುದನ್ನೆಲ್ಲಾ ರೋಗಿಯೆ ಗಮನಕ್ಕೆ ತರಲು ಸಾಧ್ಯವೇ? ಆಸಕ್ತಿಯಿದ್ದರೆ How Doctors Think (Jerome Groopman, Byword Books) ಓದಿ. ಆಧುನಿಕ ವೈದ್ಯರಲ್ಲೂ ತಿಳುವಳಿಕೆ, ಕೌಶಲ್ಯಗಳು ಒಂದೇ ರೀತಿ ಇರಬೇಕಾಗಿಲ್ಲ, ಕಲಿಯಲಿಕ್ಕಿರುವುದು ಅಷ್ಟೊಂದಿರುವಾಗ ಎಲ್ಲರಿಗೂ ಎಲ್ಲವೂ ಗೊತ್ತಿರುವುದಕ್ಕೆ ಸಾಧ್ಯವೂ ಇಲ್ಲ. ಮೇಲಿನೆ ಪುಸ್ತಕ ಓದಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ.
>>ಅಲೋಪಥಿ ಮಾತ್ರೆಗಳನ್ನು ತಿಂದವನಿಗೆ ಗೊತ್ತು ಅದರ ಕಷ್ಟ. ವೈದ್ಯರುಗಳಿಗಲ್ಲ<<
ಅಲೋಪತಿ ವೈದ್ಯರಿಗೂ ಗೊತ್ತಾಗುತ್ತದೆ, ಅಡ್ಡ ಪರಿಣಾಮಗಳನ್ನು ಅಧ್ಯಯನ ಮಾಡದಿರುವ ಆಯುರ್ವೇದದವರಿಗಲ್ಲ.
>> ಯಾಕೆಂದರೆ ಅದೇ ಸಮಯಕ್ಕೆ ಹೊರಗಿನಿಂದ ಬಂದ ಧಾಳಿಕೋರರು ಭಾರತದಾದ್ಯಂತ ತಮ್ಮ ಆಡಳಿತ ಸ್ಥಾಪಿಸಿ ತಮ್ಮ ಮತಗಳ ಹೊರತಾಗಿ ಬೇರೆ ಮತ ಮತ್ತು ಅದರ ಜೊತೆಗಿನ ಎಲ್ಲಾ ಜ್ನಾನವನ್ನು ನಾಶಪಡಿಸಿ, ಪಂಡಿತರುಗಳನ್ನು ಕೊಂದು ರಾಜರುಗಳನ್ನು ಪದಚ್ಯುತಗೊಳಿಸಿ ರಾಣಿಯರನ್ನು ಹೊತ್ತೊಯ್ದು.. ಏನೆಲ್ಲಾ ಮಾಡಿದ್ದರು<<
ಅಯ್ಯಾ, ಇದೆಲ್ಲಿ ಸಿಕ್ಕಿತು ಸ್ವಲ್ಪ ಹೇಳಬಹುದೇ? ಹೊರಗಿನಿಂದ ಬಂದ ಅನ್ಯಮತೀಯರಷ್ಟೇ ಈ ದೇಶದಲ್ಲಿ ಕೊಲೆ ಮಾಡಿದವರು ಎನ್ನಲು ನಿಮ್ಮಲ್ಲೇನಾದರೂ ಆಧಾರಗಳಿವೆಯೇ? ಮತಕ್ಕೂ, ಆಯುರ್ವೇದಕ್ಕೂ ಏನು ಸಂಬಂಧವೋ ಅದನ್ನೂ ಹೇಳಿ. ಚರಿತ್ರೆ ಗೊತ್ತಿಲ್ಲದಿದ್ದರೆ ಇತಿಹಾಸಕಾರರು ಬರೆದ ಪುಸ್ತಕಗಳಿಂದ ದಯವಿಟ್ಟು ಓದಿಕೊಳ್ಳಿ (ಕಾದಂಬರಿಗಳಿಂದಲ್ಲ)
>>ಆಯುರ್ವೇದ ತಪ್ಪೆಂದು ಸಾಬೀತಾಗದು<<
ಸರಿ-ತಪ್ಪಿನ ಚರ್ಚೆಯಲ್ಲ, ರೋಗಿಗೆ ಯಾವುದು ಒಳ್ಳೆಯದು, ಸುರಕ್ಷಿತ ಎನ್ನುವುದಷ್ಟೇ.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
{ನನ್ನದೊಂದು ವಿನಮ್ರ ವಿನಂತಿ - ತಮಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಬರೆಯಬೇಡಿ }
ಸ್ವಾಮಿ, ಇದು ತಮಗೇ ಅನ್ವಯವಾಗಬೇಕು. ನಾನು ಆಯುರ್ವೇದದ ಬಗ್ಗೆ ಎಲ್ಲಾ ಗೊತ್ತೆಂದೂ ಆದ್ದರಿಂದ ಆಧುನಿಕ ಪಧ್ಧತಿಗಳೆಲ್ಲ ಪೊಳ್ಳು ಎಂದು ಎಲ್ಲೂ ಅಧಿಕಾರವಾಣಿಯಿಂದ ಹೇಳಿಲ್ಲ. ಹಾಗೆ ಹೇಳುತ್ತಿರುವುದು ತಾವು. ಆಯುರ್ವೇದ ಅಧ್ಯಯನ ಮಾಡದೆ, ಅದರಲ್ಲಿರುವುದೆಲ್ಲಾ ಸುಳ್ಳು ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೀರಿ. ತಮಗಾಗದವರು ಹೇಳಿದ್ದೆಲ್ಲಾ ಸುಳ್ಳು ಎಂದು ಹೇಳುವ ಬುಧ್ಧಿ ನನಗಂತೂ ಇಲ್ಲ.
ಸಾವಿರ ವರ್ಷಗಳ ಹಿಂದಿನ ಚರಿತ್ರೆಯನ್ನು ಪ್ರಸ್ತಾಪಿಸಿದ್ದು ತಾವು. ಮತಕ್ಕೂ ಈ ಚರ್ಚೆಗೂ ಹೇಗೆ ಸಂಬಂಧವಿಲ್ಲವೋ (ಇದನ್ನು ನನ್ನ ಪ್ರತಿಕ್ರಿಯೆಯಲ್ಲೇ ಹೇಳಿದ್ದೇನೆ ಆದರೂ ನೀವು ನನ್ನನ್ನು ದೂಷಿಸಿದ್ದೀರಿ) ಹಾಗೆಯೇ ಚರಿತ್ರೆಯ ಕಾಲಘಟ್ಟವೊಂದರಲ್ಲಿ ಬೆಳವಣಿಗೆ ನಿಂತಿರುವುದಕ್ಕೂ, ಅದರ ಸತ್ಯಾಸತ್ಯತೆಗೂ ಸಂಬಂಧವಿಲ್ಲ ಎಂದು ನಾನು ಹೇಳಿರುವುದು. ಅದರ ಬಗ್ಗೆ ಏನೂ ಹೇಳದೆ ನಾನು ಹೇಳದ್ದನ್ನು ನನ್ನ ಮೇಲೆ ಆರೋಪಿಸಿ ತಪ್ಪಿಸಿಕೊಳ್ಳುವ ಜಾಣತನ ನನಗೂ ತಿಳಿಯುತ್ತದೆ. ಮಹಾ ಆರ್ಥಿಕ ಕುಸಿತವಾಗಿ ನಾಳೆ ಜೆನೆಟಿಕ್ಸ್ ಗೆ ಸಂಬಂಧಿಸಿದ ಸಂಶೋಧಗಳು ನಿಂತು ಹೋದರೆ ಇನ್ನು ನೂರು ವರ್ಷ ಕಳೆದಾಗ ಅವೆಲ್ಲ ಸುಳ್ಳಾಗುತ್ತವೆಯೆ?
{ಸರಿ-ತಪ್ಪಿನ ಚರ್ಚೆಯಲ್ಲ, ರೋಗಿಗೆ ಯಾವುದು ಒಳ್ಳೆಯದು, ಸುರಕ್ಷಿತ ಎನ್ನುವುದಷ್ಟೇ}
ಇದರಲ್ಲಿ ರೋಗಿಯ ಪಾತ್ರವೂ ಇದೆ ತಾನೆ! ಧನ್ಯವಾದ. ರೋಗಿಗೆ ಯಾವುದು ಸುರಕ್ಷಿತ ಎನ್ನುವುದು ವೈದ್ಯನಿಗೆ ಹೇಗೆ ತಿಳಿದಿರುತ್ತದೋ ಹಾಗೆಯೇ ರೋಗಿಗೂ ತಿಳಿದಿರುತ್ತದೆ ಎಂದು ನೆನಪಲ್ಲಿದ್ದರೆ ಸಾಕು.
ಇನ್ನು ಚರಿತ್ರೆ ಬಗ್ಗೆ ಕಮ್ಯುನಿಸ್ಟರು ಬರೆದಿರುವುದು ಗೊತ್ತು, ಅದರಲ್ಲಿ ಸುಳ್ಳು ಎಷ್ಟು ಸತ್ಯ ಎಷ್ಟು ಎಂದು ತಿಳಿದಿದೆ. ಅದನ್ನು ಓದಿಕೊಳ್ಳಲು ಹೇಳಿದ ತಮ್ಮ ಸಲಹೆ ತಮ್ಮಲ್ಲಿಯೇ ಇರಲಿ. ಧನ್ಯವಾದ.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
>>ಅದರಲ್ಲಿರುವುದೆಲ್ಲಾ ಸುಳ್ಳು ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೀರಿ. <<
ಹಾಗೆ ಎಲ್ಲಿ ಬರೆದಿದ್ದೇನೆ ತೋರಿಸಿ.
>>ಆಯುರ್ವೇದ ಅಧ್ಯಯನ ಮಾಡದೆ<<
ನಾನು ಮಾಡಿದ್ದು ಬಿಟ್ಟದ್ದು ನಿಮಗೆ ಹೇಗೆ ಗೊತ್ತು?
ಆಯುರ್ವೇದದ ದುರ್ಗತಿಗೆ ಮತೀಯರ ಅಕ್ರಮಣ ಕಾರಣ ಅಂತ ನೀವು ಬರೆದಿರುವುದಕ್ಕೆ ಆಧಾರ ಏನು ಅಂತ ನಾನು ಕೇಳಿದ್ದು, ಅದಕ್ಕೆ ನೀವು ಉತ್ತರಿಸಿಲ್ಲ. ಬೇರೇನೋ ಹೇಳುತ್ತಿದ್ದೀರಿ.
ಯಾವ ಕಮ್ಯುನಿಸ್ಟ್ ಬರೆದ ಚರಿತ್ರೆಯನ್ನೂ ನಿಮಗೆ ಸೂಚಿಸಿಲ್ಲ (ಸೂಚಿಸಿದ್ದರೆ ತೋರಿಸಿ, ಮಿಥ್ಯಾಪವಾದ ಸರಿಯಲ್ಲ) , ನೀವು ಓದಿರುವುದನ್ನು ನನಗೆ ಹೇಳಿ ಹಾಗೂ ಇತಿಹಾಸಕಾರರು ಬರೆದದ್ದನ್ನು ಓದಿ ಅಂತಷ್ಟೇ ನನು ಬರೆದಿರುವುದು. ಇಲ್ಲಿ ರಾಜಕೀಯ ಯಾಕೆ?
>>ತಮಗಾಗದವರು <<
ಇಲ್ಲಿ ವೈಯಕ್ತಿಕ ಭಾವನೆಗಳನ್ನೇಕೆ ತೂರಿಸುತ್ತಿದ್ದೀರಿ? ಆಯುರ್ವೇದದ ಮೇಲೆ ನನಗೆ ಸಿಟ್ಟಿದೆ ಅನ್ನುವುದು ನಿಮ್ಮ ಅಭಿಪ್ರಯ, ನಾನೆಲ್ಲೂ ಹಾಗೆ ಹೇಳಿಲ್ಲ, ಪೂರ್ವಾಗ್ರಹ ಪೀಡಿತರಾಗಿ ಬರೆದದ್ದನ್ನು ಅಪಾರ್ಥ ಮಾಡಿಕೊಳ್ಳುವುದಿದ್ದರೆ ಯಾವ ಚರ್ಚೆಯೂ ಸಾಧ್ಯವಿಲ್ಲ.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
>>ಹಾಗೆ ಎಲ್ಲಿ ಬರೆದಿದ್ದೇನೆ ತೋರಿಸಿ<<
೧. "ಪರ್ಯಾಯ ಪದ್ಧತಿಗಳ ಬಗ್ಗೆ ನನಗೆ ನಂಬಿಕೆಯೂ ಇಲ್ಲ, ಅಪನಂಬಿಕೆಯೂ ಇಲ್ಲ, ಅವುಗಳ ಬಗ್ಗೆ ನಾನು ಉರಿದುಕೊಳ್ಳುವುದೂ ಇಲ್ಲ. ಅವನ್ನು ಒಪ್ಪುವಂತಹಾ ಆಧಾರಗಳು ನನಗೆ ದೊರೆತಿಲ್ಲ".
೨. "ಅಂತಹದರಲ್ಲಿ ತ್ರಿದೋಷಗಳಿಂದ ರೋಗವುಂಟಾಗುವುದಕ್ಕೆ (ಅಥವಾ ಸೂಜಿ ಚಿಕಿತ್ಸೆಯ - ಅಕುಪಂಕ್ಚರಿನ - ಚಿ ಹರಿವಿಗೆ) ಯಾವುದೇ ಆಧಾರಗಳು ದೊರೆತಿಲ್ಲ"
೩. "ಆಯುರ್ವೇದ ಹಾಗೂ ಯೋಗಗಳ ಪ್ರಯೋಜನಗಳ ಬಗ್ಗೆ ಇಂತಹ ಸಾವಿರಾರು ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಈ ಪದ್ಧತಿಗಳಿಂದ ಖಚಿತವಾಗಿಯೂ ಪ್ರಯೋಜನವಿದೆಯೆಂದು ಶ್ರುತ ಪಟ್ಟರೆ ಅದನ್ನು ಬಳಕೆಗೆ ತರಲು ಯಾರ ಅಡ್ಡಿಯೂ ಇರಲಾರದು. ಆದರೆ ಅಂತಹದು ಇಲ್ಲವೆಂದೇ ಹೇಳಬೇಕು"
ಸಾಕೇ ಪುರಾವೆ? ಎಲ್ಲಾ ಕಡೆ ಪರ್ಯಾಯ ಪಧ್ಧತಿಗಳಿಗೆ ಪುರಾವೆಯಿಲ್ಲ ಅಂತೀರಿ. ಪುರಾವೆಯಿಲ್ಲದ್ದೆಲ್ಲಾ ಸುಳ್ಳುಲ್ಲವೇ? ಸುಳ್ಳಲ್ಲವೆಂದಾದರೆ ಯೋಗ ಪ್ರಾಣಾಯಾಮಗಳು ಸುಳ್ಳು ಎಂದು ಹೇಗೆ ಹೇಳುತ್ತೀರಿ? ಇದು ನಿಮ್ಮ ವಾದದಲ್ಲಿನ ಆಭಾಸ. ದಯವಿಟ್ಟು ಒಂದೋ ಪುರಾವೆಯಿಲ್ಲದ ಆಯುರ್ವೇದ ಯೋಗ ಇತ್ಯಾದಿಗಳು ಸುಳ್ಳು ಎಂದು ವಾದ ಮುಂದುವರೆಸಿ (ತೆರೆದ ಮನಸಿನೊಂದಿಗೆ) . ಅಥವಾ ಅವು ಸುಳ್ಳು ಎಂದು ಹೇಳುವುದನ್ನು ಬಿಟ್ಟು ಬಿಡಿ. ಈ ಎರಡನ್ನೂ ತಮಗೆ ಬೇಕಾದಾಗ ಹೇಳಿ ನನ್ನ ಸಮಯ ವ್ಯರ್ಥ ಮಾಡಬೇಡಿ.
ಮತೀಯರ ಆಕ್ರಮಣದಿಂದ ಆಯುರ್ವೇದ ಮಾತ್ರ ಅಲ್ಲ, ಭಾರತದ ಸರ್ವ ನಾಶವಾಗಿದೆ. ನಳಂದಾ ತಕ್ಷಶಿಲಾ ವಿಶ್ವವಿದ್ಯಾಲಯಗಳನ್ನು ನಾಶಮಾಡಿದವರಾರು? ಅಲ್ಲಿದ್ದ ಸಾವಿರಾರು ಗ್ರಂಥಗಳು ಸುಟ್ಟುಹೋಗಿಲ್ಲವೇ? ಇದಕ್ಕೆ ದಾಖಲೆ ಯಾವುದೇ ಇತಿಹಾಸ ಪುಸ್ತಕದಲ್ಲಿ ದೊರೆಯುತ್ತದೆ. ಹಿಂದೂ ರಾಜರುಗಳ ಆಶ್ರಯದಲ್ಲಿದ್ದ ಆಯುರ್ವೇದ ಸೇರಿದಂತೆ ಇತರ ವಿಷಯಗಳಲ್ಲಿ ಪ್ರಖಂಡ ಪಾಂಡಿತ್ಯ ಪಡೆದಿದ್ದ ಆಸ್ಥಾನ ಪಂಡಿತರು ನಾಶವಾದರೆ ಅವರ ಜೊತೆಗಿದ್ದ ಪಾಂಡಿತ್ಯ ಕೂಡ ನಾಶವಾಗದೇ ಇರುತ್ತದೆಯೇ? ಇತರ ಮತೀಯರು ಮಾತ್ರ ಕೊಲೆಪಾತಕಿಗಳು ಎಂದು ಹೇಳಿಲ್ಲ ನಾನು. ಆದರೆ ನಮ್ಮ ನಮ್ಮಲ್ಲೇ ನಡೆದ ಯುಧ್ಧಗಳಲ್ಲಿ ನಳಂದಾವನ್ನು ಸುಟ್ಟವರಿಲ್ಲ. ಅದಕ್ಕೇ ಹಾಗೆ ಹೇಳಿದೆ.
>>ಇಲ್ಲಿ ವೈಯಕ್ತಿಕ ಭಾವನೆಗಳನ್ನೇಕೆ ತೂರಿಸುತ್ತಿದ್ದೀರಿ? ಆಯುರ್ವೇದದ ಮೇಲೆ ನನಗೆ ಸಿಟ್ಟಿದೆ ಅನ್ನುವುದು ನಿಮ್ಮ ಅಭಿಪ್ರಯ, ನಾನೆಲ್ಲೂ ಹಾಗೆ ಹೇಳಿಲ್ಲ, ಪೂರ್ವಾಗ್ರಹ ಪೀಡಿತರಾಗಿ ಬರೆದದ್ದನ್ನು ಅಪಾರ್ಥ ಮಾಡಿಕೊಳ್ಳುವುದಿದ್ದರೆ ಯಾವ ಚರ್ಚೆಯೂ ಸಾಧ್ಯವಿಲ್ಲ.<<
ಈ ಬಗ್ಗೆ ಮೇಲೆ ಹೇಳಿದ್ದೇನೆ. ತಮ್ಮ ನಿಲುವನ್ನು ಸ್ಪಷ್ಟಪಡಿಸಿ ನಂತರ ವಾದವನ್ನು ಮುಂದುವರೆಸಬಹುದು.
>>ನಾನು ಮಾಡಿದ್ದು ಬಿಟ್ಟದ್ದು ನಿಮಗೆ ಹೇಗೆ ಗೊತ್ತು?<<
ಸರಿ, ತಾವು ಅಧ್ಯಯನ ಮಾಡಿದ್ದರೆ ಎಲ್ಲಿ, ಯಾವುದನ್ನು ಅಧ್ಯಯನ ಮಾಡಿದ್ದೀರಿ ಎಂದು ತಿಳಿಸಿ. ಇಲ್ಲವಾದಲ್ಲಿ ಅಧ್ಯಯನ ಮಾಡಿಲ್ಲ ಎಂದು ಒಪ್ಪಿಕೊಳ್ಳಿ. ಅಡ್ಡಗೋಡೆಯ ಮೇಲೆ ದೀಪವಿಡುವುದು ಬೇಡ.
ನನ್ನ ಬಗ್ಗೆ:
ನಾನು ರೋಗಿಯ ದೃಷ್ಟಿಯಿಂದ ಹೇಳಿದ್ದೇನಷ್ಟೇ ಹೊರತು ಆಯುರ್ವೇದದ ಶಾಸ್ತ್ರ ಪಾಂಡಿತ್ಯ ನನಗೂ ಇಲ್ಲ. ನಾನು ಓದಿದ್ದು ಎಲೆಕ್ಟ್ರಾನಿಕ್ಸ್. ಇಂಟರ್ ನೆಟ್ ನಲ್ಲಿ ಆಸಕ್ತಿ ಇರುವ ವಿಷಯಗಳ ಬಗ್ಗೆ ಸಾಕಷ್ಟು ಓದಿದ್ದೇನೆ ಹೊರತಾಗಿ ಬೇರೆ ಯಾವುದೇ ಡಿಗ್ರಿ ನನಗಿಲ್ಲ.
ಉ: ಬೇಕಾಗಿದೆ ಸಮಚಿತ್ತದ ವೈದ್ಯ
ಸುಳ್ಳು - Lie - ಪದದ Definition ಮೊದಲು ನೋಡಿಕೊಳ್ಳಿ, ಆಮೇಲೆ ನಿಮ್ಮೆಲ್ಲಾ ತರ್ಕಗಳನ್ನೂ ಮುಂದುವರಿಸಿ. ನಿಮಗೆ ಗೊತ್ತಿರುವುದೇ ಸರಿ ಎನ್ನುವಲ್ಲಿ, ಆ ತರ್ಕದ ಸುಳಿಯಲ್ಲಿ ಯಾವ ಚರ್ಚೆಯೂ ಸಾಧ್ಯವಿಲ್ಲ. ಅಂತಲ್ಲಿ ನನ್ನ ಓದಿನ ಮಟ್ಟವನ್ನು ಪ್ರದರ್ಶಿಸಿಕೊಳ್ಳುವ ಅಗತ್ಯವೇನೂ ನನಗಿಲ್ಲ. >> ಮತೀಯರ ಆಕ್ರಮಣದಿಂದ ಆಯುರ್ವೇದ ಮಾತ್ರ ಅಲ್ಲ, ಭಾರತದ ಸರ್ವ ನಾಶವಾಗಿದೆ.<< ಎನ್ನುವುದೂ ನಿಮ್ಮ ತರ್ಕವೇ, ಚರಿತ್ರೆಯಲ್ಲ. ಇವೆಲ್ಲ ನೇರ್ಪಾದರೆ ಮತ್ತೆ ನೋಡೋಣ, ನಮಸ್ಕಾರ.