ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಭಾರತದಲ್ಲಿ ಜುಲೈ ೧ ನೆಯ ದಿನವನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವರು. ಜುಲೈ ೧, ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿ ಹಾಗೂ ವರ್ಧಂತಿಯ ದಿನ. ಅವರ ಸ್ಮರಣೆಯಲ್ಲಿ ಭಾರತ ಸರ್ಕಾರವು ವೈದ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ವೃತ್ತಿ ನಿರತರಾಗಿರುವ ಎಲ್ಲ ವೈದ್ಯರು, ಅವರು ಕುಟುಂಬ ವೈದ್ಯರಾಗಿರಲಿ ಅಥವ ಹೃದ್ರೋಗ ತಜ್ಞರಾಗಿರಲಿ ಎಲ್ಲರಿಗೂ ಈ ದಿನ ಅನ್ವಯವಾಗುತ್ತದೆ.
ಅಮೆರಿಕದಲ್ಲಿಯೂ ವೈದ್ಯ ದಿನಾಚರಣೆಯನ್ನು ಆಚರಿಸುವರು. ಮಾರ್ಚ್, ೩೦-೧೮೪೨ ರಂದು ಡಾ.ಕ್ರಾಫರ್ಡ್ ಡಬ್ಲ್ಯು ಲಾಂಗ್ ಎನ್ನುವವರು ಮೊದಲ ಬಾರಿಗೆ ಅರಿವಳಿಕೆಯನ್ನು (ಅನೆಸ್ತೀಸಿಯ) ಪರಿಣಾಮಕಾರಿಯಾಗಿ ಬಳಸಿ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದರು. ಹಾಗಾಗಿ ಅಮೆರಿಕನ್ನರು ಮಾರ್ಚ್ ೩೦ ದಿನವನ್ನು ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ. ರೆಡ್ ಕಾರ್ನೇಶನ್ ಹೂವು ವೈದ್ಯ ದಿನಾಚರಣೆಯ ಸಂಕೇತ. ಕೆಂಪು ಕಾರ್ನೇಶನ್ ಹೂವು ಪ್ರೀತಿ, ತ್ಯಾಗ, ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಾಗಿದೆ. ಹಾಗಾಗಿ ರೋಗಿಗಳು ಹಾಗೂ ಜನಸಾಮಾನ್ಯರು ತಮ್ಮ ವೈದ್ಯರಿಗೆ ರೆಡ್ ಕಾರ್ನೇಶನ್ ಹೂವನ್ನು ಅಭಿಮಾನದಿಂದ ನೀಡಿ ಅವರಿಗೆ ವೈದ್ಯ ದಿನಾಚರಣೆಯ ಶುಭಾಶಯವನ್ನು ಹೇಳುವುದುಂಟು.
ಡಾ.ಬಿದನ್ ಚಂದ್ರ ರಾಯ್ ಅವರು ಲಂಡನ್ನಿನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದು ತಜ್ಞವೈದ್ಯರು ಹಾಗೂ ಶಸ್ತ್ರವೈದ್ಯರೂ ಆಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಮಾಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರಾಗಿದ್ದರು. ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯನ್ನು ಮಾಡಿದರು. ಡಾ.ರಾಯ್ ಅವರು ಮುಖ್ಯಮಂತ್ರಿಗಳಾಗಿದ್ದಾಗಲು ಪ್ರತಿ ದಿನ ಸುಮಾರು ೨ ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು. ಡಾ.ಬಿ.ಸಿ.ರಾಯ್ ಅವರ ಜನನ ಜುಲೈ ೧, ೧೮೮೨. ಮರಣ ಜುಲೈ ೧, ೧೯೬೨.
ಈ ಹಿನ್ನೆಲೆಯಲ್ಲಿ ವೈದ್ಯ ದಿನಾಚರಣೆಯ ಮಹತ್ವವನ್ನು ಚಿಂತಿಸೋಣ.
- ವೈದ್ಯ ದಿನಾಚರಣೆಯಂದು ಡಾ.ಬಿ.ಸಿ.ರಾಯ್ ಅವರ ಹಾಗೆ ನಿಸ್ಪೃಹ ಸೇವೆಯನ್ನು ಮಾಡಿರುವ/ಮಾಡುತ್ತಿರುವ ಎಲ್ಲ ವೈದ್ಯರಿಗೂ ಜನಸಾಮಾನ್ಯರು ಕೃತಜ್ಞತೆಯನ್ನು ಸಲ್ಲಿಸುವ ದಿನ.
- ಈ ದಿನದಂದು ವೈದ್ಯರು ಜನಸಾಮಾನ್ಯರ ಬದುಕಿನಲ್ಲಿ ಹಾಗೂ ಸಮಾಜದಲ್ಲಿ ಯಾವ ಸ್ಥಾನವನ್ನು ಹೊಂದಿದ್ದಾರೆ ಎಂಬುದರ ಬಗ್ಗೆ ಮುಕ್ತ ಮನಸ್ಸಿನಿಂದ ಚಿಂತಿಸಬೇಕಾದ ದಿವಸ.
- ವೈದ್ಯಕೀಯ ಒಂದು ವೃತ್ತಿಯಲ್ಲ; ಅರಿವು, ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವ ಮೇಳೈಸಿರುವ ಸೇವೆ.
- ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು.
- ವೈದ್ಯನು ಸದಾ ಜಾಗೃತನಾಗಿರಬೇಕು. ಅವನು ಮಾಡಬಹುದಾದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ (ತನ್ಮೂಲಕ ಒಂದು ಕುಟುಂಬಕ್ಕೆ) ಎರವಾಗಬಹುದು. ಹಾಗಾಗಿ ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕಾಗುತ್ತದೆ. ವೈದ್ಯನು ಸದಾ ಒತ್ತಡದಲ್ಲಿರುವುದು ಅನಿವಾರ್ಯ.
- ವೈದ್ಯನು ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ; ರೋಗಿಯ ನೋವಿನಲ್ಲಿ ಪಾಲುಗೊಂಡು ಸಾಂತ್ವನವನ್ನು ನೀಡಬೇಕಾಗುತ್ತದೆ. ತನ್ನ ಖಾಸಗೀ ಬದುಕನ್ನು ಗೌಣವಾಗಿಸಬೇಕಾಗುತ್ತದೆ. ಒಂದರ್ಥದಲ್ಲಿ ‘ಮನೆಗೆ ಮಾರಿ, ಪರರಿಗೆ ಉಪಕಾರಿ’ಯಾಗಬೇಕಾಗುತ್ತದೆ.
- ವೈದ್ಯ ದಿನಾಚರಣೆಯ ದಿನ, ಸ್ವಯಂ ವೈದ್ಯರೂ ಮನನ ಮಾಡಬೇಕಾದ ದಿನ. ವೈದ್ಯರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಅರಿತುಕೊಳ್ಳಬೇಕು. ಸೇವೆಯ ಪ್ರತಿಜ್ಞೆಯನ್ನು ಸ್ವೀಕರಿಸಿರುವುದನ್ನು ನೆನಪಿಸಿಕೊಂಡು ವೃತ್ತಿಗೆ ನ್ಯಾಯವನ್ನು ಒದಗಿಸಬೇಕು. ಎಲ್ಲವೂ ಗೌಣವಾಗಿ ವೃತ್ತಿಧರ್ಮ ಮುಖ್ಯವಾಗಬೇಕು. ಕೆಲವು ವೈದ್ಯರು ತಮ್ಮದೇ ಆದ ಕಾರಣಗಳಿಂದ ವೃತ್ತಿಧರ್ಮ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವರು. ಅದು ತಪ್ಪು ಎಂದು ತಿಳಿದು ತಮ್ಮನ್ನು ಪುನಃ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ.
- ವೈದ್ಯಕೀಯ ವೃತ್ತಿ ಕವಲುಹಾದಿಯಲ್ಲಿ ನಿಂತಿದೆ. ವೈದ್ಯಕೀಯವು ಇಂದು ಸೇವೆಯಾಗಿ ಉಳಿಯದೇ ಉದ್ಯಮವಾಗಿದೆ.
- “ವೈದ್ಯೋ ನಾರಾಯಣೋ ಹರಿಃ-ವೈದ್ಯನು ಭೂಮಿಯ ಮೇಲೆ ನಡೆದಾಡುವ ಭಗವಂತ-ಜನಸೇವೆಯೇ ಜನಾರ್ಧನ ಸೇವೆ” – ಇತ್ಯಾದಿ ಭಾವಗಳೆಲ್ಲ ಇತಿಹಾಸವನ್ನು ಸೇರಿವೆ. ವೈದ್ಯ-ರೋಗಿಯ ನಡುವೆ ಇದ್ದ ಮಧುರ ಸಂಬಂಧ ದೂರವಾಗಿದೆ. ಪರಸ್ಪರ ನಂಬಿಕೆ-ವಿಶ್ವಾಸ ಕಾಣೆಯಾಗಿದೆ. ಎಲ್ಲವೂ ಮಾರಾಟಗಾರ-ಗ್ರಾಹಕರ ಸಂಬಂಧಗಳಾಗಿವೆ.
- ಇಂದು ಬಹುಪಾಲು ವೈದ್ಯರು ರಕ್ಷಣಾತ್ಮಕ ವೃತ್ತಿ (ಡಿಫೆನ್ಸಿವ್ ಪ್ರಾಕ್ಟೀಸ್) ಯನ್ನು ಅನುಸರಿಸುತ್ತಾರೆ. ವೈದ್ಯರು ತಮ್ಮ ಬಳಿ ಬರುವ ಪ್ರತಿಯೊಬ್ಬ ರೋಗಿಯನ್ನು ನಾಳೆ ನನ್ನ ಮೇಲೆ ದಾವ ಹೂಡಲಿರುವವ ಎಂದು ಪರಿಗಣಿಸಿಯೇ ಚಿಕಿತ್ಸೆಯನ್ನು ನೀಡುತ್ತಾರೆ. ತಾನು ನೀಡಿರುವ ಚಿಕಿತ್ಸೆ ಸರಿಯಾಗಿದೆ ಎಂಬುದಕ್ಕೆ ಅಗತ್ಯವಾದ ಎಲ್ಲ ಪುರಾವೆಗಳನ್ನು ಗಳಿಸುವತ್ತ, ತನ್ನ ರಕ್ಷಣೆಯನ್ನು ಮಾಡಿಕೊಳ್ಳುವತ್ತ, ವೈದ್ಯ ಗಮನವನ್ನು ಹರಿಸುತ್ತಾನೆ. ಹಾಗಾಗಿ ಬಹುಪಾಲು ಪರೀಕ್ಷೆಗಳು ಅನಗತ್ಯವಾಗಿರುತ್ತವೆ. ಪ್ರತಿ ವೈದ್ಯನು ದಾವಾ-ವಿಮೆಯನ್ನು ಮಾಡಿಸಿಕೊಳ್ಳುತ್ತಾನೆ. ನಾಳೆ ಯಾವುದಾದರೂ ರೋಗಿ ತನ್ನ ಮೇಲೆ ಮೊಕದ್ದಮೆಯನ್ನು ಹೂಡಿದರೆ, ಮೊಕದ್ದಮೆಯು ರೋಗಿಯ ಪರವಾದರೆ, ಅಗತ್ಯ ದಂಡವನ್ನು ಕಟ್ಟಿಕೊಡಲು ವಿಮೆಯನ್ನು ಮಾಡಿಸಿಕೊಳ್ಳುವುದು ಅವನಿಗೆ ಅನಿವಾರ್ಯವಾಗಿಬಿಟ್ಟಿದೆ. (ಈ ವಿಮಾ ಪ್ರೀಮಿಯಂ-ನನ್ನು ಪರೋಕ್ಷವಾಗಿ ರೋಗಿಯೇ॑ ಕೊಡಬೇಕಾಗುತ್ತದೆಯಲ್ಲವೆ!)
- ವೈದ್ಯಕೀಯ ಶಿಕ್ಷಣವು ಹಣವನ್ನು ಆಧರಿಸಿದೆ. ಲಕ್ಷಗಟ್ಟಲೆಯಲ್ಲ, ರೇಡಿಯಾಲಜಿಯಂತಹ ಶಿಕ್ಷಣವನ್ನು ಪಡೆಯಲು ಕೋಟಿಗಟ್ಟಲೇ ಹಣವನ್ನು ವಂತಿಗೆಯನ್ನಾಗಿ ಕೊಡಬೇಕಾಗುತ್ತದೆ. ಹೀಗೆ ಹಣದಿಂದಲೇ ವೈದ್ಯರಾದ ಇವರು ಜನಸಾಮಾನ್ಯರಿಗೆ ದಕ್ಕುವಂತಹ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಬಲ್ಲರೆ?
- ನಮಗೆ ಪಾಠವನ್ನು ಹೇಳಿದಂತಹ ವೈದ್ಯರು, ಒಂದು ಸ್ಟೆಥೋಸ್ಕೋಪನ್ನು ಬಿಟ್ಟು ಮತ್ಯಾವ ಘನ ವೈದ್ಯಕೀಯ ಸಾಧನಗಳ ಮೊರೆ ಹೋಗುವುದು ಅಪರೂಪವಾಗಿತ್ತು. ರೋಗಿಯ ರೋಗಚರಿತ್ರೆ ಹಾಗೂ ರೋಗಿಯ ಸಮಗ್ರ ಪರೀಕ್ಷೆಗಳೆರಡೇ ರೋಗನಿದಾನಕ್ಕೆ (ಡಯಾಗ್ನೋಸಿಸ್) ಸಾಕಾಗುತ್ತಿತ್ತು. ಅಪರೂಪಕ್ಕೆ ಕೆಲವು ಮೂಲಭೂತ ಪರೀಕ್ಷೆಗಳನ್ನು ಮಾಡಿಸುವಂತೆ ಸೂಚಿಸುತ್ತಿದ್ದರು. ವೈದ್ಯನು ತನ್ನ ವೈದ್ಯಕೀಯ ಅರಿವನ್ನು ಸಮಗ್ರವಾಗಿ ಬಳಸಿದ್ದೇ ಆದಲ್ಲಿ ೭೫%ಕ್ಕಿಂತಲೂ ಹೆಚ್ಚಿನ ರೋಗಗಳನ್ನು ತಪಾಸಣೆಯ ನೆರವಿಲ್ಲದೇ ಹಾಗೆಯೇ ಗುಣಪಡಿಸಬಲ್ಲ. ಆದರೆ ಇಂದು ವೈದ್ಯರು ಸ್ಟೆಥೋಸ್ಕೋಪನ್ನೇ ಉಪಯೋಗಿಸುವುದು ವಿರಳ. ರೋಗಿಯು ತನ್ನ ರೋಗಲಕ್ಷಣಗಳನ್ನು ಹೇಳುತ್ತಿರುವಂತೆಯೇ, ಅವನು ಯಾವ ಯಾವ ಪರೀಕ್ಷೆಗಳನ್ನು ಮಾಡಿಸಿಕೊಂಡು ಬರಬೇಕು ಎಂಬ ಪಟ್ಟಿಯನ್ನು ವೈದ್ಯನು ಬರೆಯುತ್ತಿರುತ್ತಾನೆ.
- ಒಂದು ಆಸ್ಪತ್ರೆಯಲ್ಲಿ ಒಬ್ಬ ವೈದ್ಯನು ಸಲಹೆಗಾರನಾಗಿ ಮುಂದುವರೆಯಬೇಕಾದರೆ ಪ್ರತಿ ತಿಂಗಳು ಇಂತಿಷ್ಟು ಒಳರೋಗಿಗಳನ್ನು ದಾಖಲಿಸಲೇಬೇಕು; ಇಂತಿಷ್ಟು ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಿಸಲೇಬೇಕು; ಆಗ ಮಾತ್ರ ಅವನು ಆ ಆಸ್ಪತ್ರೆಯಲ್ಲಿ ವೃತ್ತಿ ನಿರತನಾಗಬಲ್ಲ. ಕೇವಲ ಸ್ಠೆಥೋಸ್ಕೋಪನ್ನು ಬಳಸಿ, ಅವನು ಎಷ್ಟೇ ಉತ್ತಮ ಚಿಕಿತ್ಸೆಯನ್ನು ನೀಡಿದರೂ ಸಹಾ ಅವನಿಗೆ ಎತ್ತಂಗಡಿಯಾಗುತ್ತದೆ.
- ಒಬ್ಬ ಒಂದು ಸಿಟಿ ಸ್ಕ್ಯಾನ್ ಯಂತ್ರವನ್ನು ಕೋಟಿಗಟ್ಟಲೇ ಹಣವನ್ನು ನೀಡಿ ತರಿಸುತ್ತಾನೆ. ಹೂಡಿದ ಹಣದ ಕೇವಲ ಬಡ್ಡಿಯನ್ನು ಮಾತ್ರ ತೀರಿಸಬೇಕಾದರೆ, ಆತ ದಿನಕ್ಕೆ ಕನಿಷ್ಠ ೧೨ ಸ್ಕ್ಯಾನ್ ಮಾಡಬೇಕಾಗುತ್ತದೆ. ಆನಂತರವೇ ಅಸಲನ್ನು ತೀರಿಸುವ ಇಲ್ಲವೇ ಲಾಭವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಸ್ಕ್ಯಾನಿಗಾಗಿ ಬಕರಾಗಳನ್ನು ಹುಡುಕಬೇಕಾಗುತ್ತದೆ. ಸ್ಕ್ಯಾನಿಗಾಗಿ ರೋಗಿಗಳನ್ನು ಕಳುಹಿಸುವ ವೈದ್ಯರಿಗೆ/ಏಜಂಟರಿಗೆ ಪಾಲುಕೊಡಬೇಕಾಗುತ್ತದೆ. ಇಂತಹುದೇ ಸೂತ್ರ ಉಳಿದ ತಪಾಸಣೆಗಳಿಗೂ ಅನ್ವಯವಾಗುತ್ತದೆ. ಒಟ್ಟಿನಲ್ಲಿ ತಪಾಸಣೆಗಳು ಉಪಯೋಗವಾಗುತ್ತಿರುವುದಕ್ಕಿಂತ ದುರುಪಯೋಗವಾಗುತ್ತಿರುವುದೇ ಹೆಚ್ಚು. ಆದರೆ ಇವೆಲ್ಲ ಅನಿವಾರ್ಯ ಶನಿಗಳಾಗಿರುವುದು ನಮ್ಮ ದುರಂತ.
- ಭಾರತವನ್ನೂ ಒಳಗೊಂಡಂತೆ ಜಗತ್ತಿನ ಬಹುಪಾಲು ದೇಶಗಳು ವೈದ್ಯಕೀಯವನ್ನು ಹೆಲ್ತ್ ಇಂಡಸ್ಟ್ರಿ ಎಂದು ಕರೆಯುತ್ತದೆ. ಆರೋಗ್ಯ ಉದ್ಯಮದಲ್ಲಿ ಇಂದು ಬಿಲಿಯ ಬಿಲಿಯ ಡಾಲರುಗಳ ಹೂಡಿಕೆಯಾಗಿದೆ. ಭಾರತದಲ್ಲಿಯೂ ಸರಣೀ ಆಸ್ಪತ್ರೆಗಳ ಜಾಲ ವ್ಯಾಪಕವಾಗಿ ಹರಡಿದೆ. ಬೆಂಗಳೂರು ’ಜಾಗತಿಕ ಆರೋಗ್ಯ ಕಾಶಿ;ಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ವಿದೇಶಗಳಿಂದ ಭಾರತಕ್ಕೆ ಬಂದು ಚಿಕಿತ್ಸೆಯನ್ನು ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸ್ಟಾರ್ ಆಸ್ಪತ್ರೆಗಳು ಯಾರು ಡಾಲರುಗಳನ್ನು ನೀಡುತ್ತಾರೋ ಅವರನ್ನು ‘ಪ್ರಥಮ ದರ್ಜೆ’ ರೋಗಿಗಳೆಂದು ಪರಿಗಣಿಸಿ ಆದ್ಯತೆಯನ್ನು ನೀಡುತ್ತಾರೆ. ರೂಪಾಯಿಗಳನ್ನು ನೀಡುವ ಭಾರತೀಯರು (ಅವರೆಷ್ಟೇ ಶ್ರೀಮಂತರಾಗಿರಲಿ) ಎರಡನೆಯ ದರ್ಜೆಯ ರೋಗಿಗಳಾಗುತ್ತಾರೆ. ಜನಸಾಮಾನ್ಯರು ಈ ಕಡೆ ತಲೆಹಾಕಿ ಮಲಗುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ.
- ಪಾಶ್ಚಾತ್ಯ ದೇಶಗಳಿಗೆ ಹಾಗೂ ಕೆಲವು ಪೌರಸ್ತ್ಯ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿಯೇ ವೈದ್ಯಕೀಯ ಸೇವೆಗಳು ಅಗ್ಗವಾಗಿ ದೊರೆಯುತ್ತಿವೆ. ನಿಜ. ಆದರೂ ಸಹಾ ರೂ.೧೦,೦೦೦ ಒಳಗೆ ಒಂದು ಸಹಜ ಹೆರಿಗೆ ನಡೆಯುತ್ತಿದ್ದುದನ್ನು ನಾನು ನೋಡಿ ಬಲ್ಲೆ. ಈಗ ಕನಿಷ್ಟ ೩೦-೪೦,೦೦೦ ರೂಪಾಯಿಗಳನ್ನು ತೆರಬೇಕಾಗುತ್ತದೆ. ಇಂದು ವೈದ್ಯಕೀಯ ವಿಮೆಯನ್ನು ಮಾಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಅಗತ್ಯ ಚಿಕಿತ್ಸೆಯು ಕನಸಾಗುತ್ತದೆ.
- ಮಾಧ್ಯಮ, ಮುಖ್ಯವಾಗಿ ವಿದ್ಯುನ್ಮಾನ ಮಾಧ್ಯಮ ಇಂದು ವಿದ್ಯಾವಂತರಿಗೆ ಸುಲುಭವಾಗಿ ದಕ್ಕುತ್ತದೆ. ಬೆರಳ ತುದಿಯಲ್ಲಿ ಅಗತ್ಯ ಮಾಹಿತಿಯು ಅಂತರ್ಜಾಲದ ಮೂಲಕ ದೊರೆಯುತ್ತಿದೆ. ಅಂತರ್ಜಾಲದಲ್ಲಿ ಸತ್ಯಮಾಹಿತಿ ಎಷ್ಟು ಸುಲುಭವಾಗಿ ದೊರೆಯುತ್ತದೆಯೋ ಅಷ್ಟೇ ಸುಲುಭವಾಗಿ ಪೊಳ್ಳು ಮಾಹಿತಿಯೂ ದೊರೆಯುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಇವುಗಳ ವ್ಯತ್ಯಾಸವನ್ನು ತಿಳಿಯುವುದು ಅಸಾಧ್ಯವಾಗುತ್ತದೆ. ಹಾಗಾಗಿ ಜನಸಾಮನ್ಯರಿಗೆ ವೈದ್ಯರ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ವೈದ್ಯ ಹೇಳುವುದನ್ನೆಲ್ಲ ಅಂತರ್ಜಾಲದಲ್ಲಿ ಪರಿಕಿಸಲು ಹೋಗುತ್ತಾರೆ. ಅನೇಕರು ವೈದ್ಯರ ಬಳಿ ಬಂದು ಜಗಳವಾಡುತ್ತಾರೆ. ಇದರ ಬದಲು ಸ್ವತಃ ವೈದ್ಯರನ್ನೇ ನಿರ್ದಿಷ್ಟ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿ/ಯಾವ ಜಾಲ ತಾಣದಲ್ಲಿ/ಯಾವ ಪುಸ್ತಕದಲ್ಲಿ ದೊರೆಯುತ್ತದೆ ಎಂದು ಕೇಳಿ ಅವರಿಂದಲೇ ಮಾಹಿತಿಯನ್ನು ಪಡೆಯುವುದು ಸೂಕ್ತ. ಎಲ್ಲಕ್ಕಿಂತ ಮಿಗಿಲಾಗಿ ಜಾಲತಾಣಗಳಲ್ಲಿ ದೊರೆಯುವ ಮಾಹಿತಿ ಸಾಮಾನ್ಯ ಮಟ್ಟದ್ದಾಗಿರುತ್ತದೆ. ವಿಷಯ ಪರಿಚಯ ಸ್ವರೂಪದ್ದಾಗಿರುತ್ತದೆ. ಅಲ್ಲಿರುವ ಮಾಹಿತಿ ನಿರ್ದಿಷ್ಟ ರೋಗಿಯ ನಿರ್ದಿಷ್ಟ ಹಂತಕ್ಕೆ ಅನ್ವಯವಾಗಬೇಕೆಂದೇನೂ ಇರುವುದಿಲ್ಲ.
- ವೈದ್ಯನೊಬ್ಬ ತನ್ನ ಕ್ಲಿನಿಕ್ ಆರಂಭಿಸಬೇಕಾದರೆ, ಸುತ್ತಮುತ್ತಲಿನ ಜನರಿಂದ ‘ನೋ ಅಬ್ಜಕ್ಷನ್ ಸರ್ಟಿಫಿಕೇಟ್” ಪಡೆಯಬೇಕಾದಂತಹ ದುಃಸ್ಥಿತಿ ಇಂದು ಬಂದಿದೆ. ಒಂದು ಕಾಲದಲ್ಲಿ ಹೆಂಡದಂಗಡಿಯನ್ನೋ ಇಲ್ಲವೇ ಬಾರನ್ನೂ ತೆಗೆಯಬೇಕಾದರೆ ಹೀಗೆ ಸಾರ್ವಜನಿಕರಿಂದ ಪರವಾನಗಿಯನ್ನು ಪಡೆಯಬೇಕಾಗಿತ್ತು. ಈಗ ವೈದ್ಯರ ಕ್ಲಿನಿಕ್/ಆಸ್ಪತ್ರೆಗಳು ಗಡಂಗುಗಳಿಗಿಂತ ಕೊನೆಯಾಗಿ ಹೋಗಿದೆ. ಇಡೀ ಜಗತ್ತಿನಲ್ಲಿ ಇಂತಹ ಕಾನೂನು ಬೇರೆ ಯಾವ ದೇಶದಲ್ಲೂ ಇಲ್ಲ.
- ವೈದ್ಯರು ತಪ್ಪು ಮಾಡಿದಾಗ ಎಲ್ಲರೂ ಅವರ ಮೇಲೆ ಮುಗಿಬೀಳುತ್ತಾರೆ. ಆಳಿಗೊಂದು ಕಲ್ಲಿನಂತೆ ಧರ್ಮದೇಟುಗಳನ್ನು ಕೊಡುತ್ತಾರೆ. ಅದೇ ವೈದ್ಯನ ಯಶಸ್ಸಿನಲ್ಲಿ ಪಾಲುಗೊಳ್ಳುವವರು ವಿರಳ. ದುಡ್ಡು ತಗೋಂಡಿಲ್ವಾ…. ಎಂಬ ಉದ್ಗಾರಗಳೇ ಹೆಚ್ಚು ಕೇಳಿಬರುತ್ತದೆ. ಆದರೆ ಕೇವಲ ದುಡ್ಡು ಜೀವವನ್ನು ಮರಳಿಸಲಾರದು ಎಂಬುದನ್ನು ಮರೆಯಬಾರದಲ್ಲ!
- ವೈದ್ಯರನ್ನು ದೇವರ ಮಟ್ಟಕ್ಕೆ ಏರಿಸುವುದು ಬೇಡ. ರಾಕ್ಷಸನ ಮಟ್ಟಕ್ಕೂ ಇಳಿಸುವುದು ಬೇಡ, ವೈದ್ಯರನ್ನೂ ಸಾಮಾನ್ಯ ಮನುಷ್ಯರಂತೆ ಕಂಡರೆ ಸಾಕು. ಅಲ್ಲವೆ!
ವೈದ್ಯ ದಿನಾಚರಣೆಯ ಈ ದಿನದಂದು ವೈದ್ಯ-ವೈದ್ಯಕೀಯದ ಬಗ್ಗೆ ಮನನ ಮಾಡೋಣ.
ವೈದ್ಯರು ನಿಮಗೆ, ಈ ಸಮಾಜಕ್ಕೆ ಅಗತ್ಯ ಎಂದು ಅನಿಸಿದಲ್ಲಿ, ಮತ್ತೇನು ಬೇಡ, ಒಂದು ಕೆಂಪು ಗುಲಾಬಿ (ರೆಡ್ ಕಾರ್ನೇಶನ್ ಬದಲು) ಯನ್ನು ನೀಡಿ ಥ್ಯಾಂಕ್ಯು ಹೇಳಿದರೆ ಸಾಕಾಗುತ್ತದೆ.
ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಬಾಗ್ ಭವೇತ್
- ನಾ. ಸೋಮೇಶ್ವರ
http://im.in.com/connect/images/profile/b_profile1/Bidhan_Chandra_Roy_300.jpg





ಪ್ರತಿಕ್ರಿಯೆಗಳು
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಸರ್, ತಮಗೆ ವೈದ್ಯರ ದಿನದ ಶುಭಾಶಯಗಳು. ಹಲವು ಮಾಹಿತಿಗಳನ್ನು ನೀಡಿದ ತಮ್ಮ ಲೇಖನ ಮೆಚ್ಚುಗೆಯಾಯಿತು. ಧನ್ಯವಾದಗಳು.
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಸು೦ದರ ಮತ್ತೊಮ್ಮೆ ಎ೦ದಿನ೦ತೆ ಮಾಹಿತಿ ಪೂರ್ಣ ಲೇಖನ ಸೋಮೇಶ್ವರರೇ.
ಆದರೆ,
>>ಮಾ ಕಶ್ಚಿದ್ ದುಃಖಬಾಗ್ ಭವೇತ್<<
ದು:ಖ ಭಾಗ್ ಭವೇತ್ ಸರಿಯೇ? ಯಾ ದು:ಖ ಭಾಗ್ಯವೇತ್ ಸರಿಯೇ?
ಎ೦ಬ ಗೊ೦ದಲ ಉ೦ಟಾಗಿದೆ. ಪರಿಹರಿಸುವಿರೇ?
ನಮಸ್ಕಾರಗಳು.
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ದು:ಖ ಭಾಗ್ ಭವೇತ್ ಸರಿ
-ನಾಸೋ
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಆತ್ಮೀಯ
ನಾ ಸೋಮೇಶ್ವರ, ಮೀನ ಸುಬ್ಬರಾವ್, ಹಾಗೂ ಎಲ್ಲಾ ವೈದ್ಯರಿಗೆ ಶುಭಾಶಯಗಳು.
ವೈದ್ಯೋ ನಾರಾಯಣೋ ಹರಿಃ.
ಹರಿ
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
>>ವೈದ್ಯೋ ನಾರಾಯಣೋ ಹರಿಃ.
ಹರಿ<<
:)
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಸೋಮೇಶ್ವರರೆ, ವೈದ್ಯರ ದಿನಕ್ಕೆ ಉತ್ತಮ ಮಾಹಿತಿಪೂರ್ಣ ಲೇಖನ. ಧನ್ಯವಾದಗಳು ಹಾಗೂ ವೈದ್ಯರ ದಿನದ ಶುಭಾಶಯಗಳು, ನಿಮಗೂ ಮತ್ತೆಲ್ಲ ವೈದ್ಯರಿಗೂ.
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಡಾ.ನಾಸೋ ರವರಿಗೆ ಮತ್ತು ಸಂಪದ ಬಳಗದಲ್ಲಿರುವ ಎಲ್ಲ ವೈದ್ಯರಿಗೆ 'ವೈದ್ಯ ದಿನಾಚರಣೆ'ಯ ಶುಭಾಶಯಗಳು:).
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
+೧
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಡಾ.ನಾಸೋ ರವರಿಗೆ 'ವೈದ್ಯ ದಿನಾಚರಣೆ'ಯ ಶುಭಾಶಯಗಳು:).
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಡಾ.ನಾಸೋ ರವರಿಗೆ ಮತ್ತು ಸಂಪದ ಬಳಗದಲ್ಲಿರುವ ಎಲ್ಲ ವೈದ್ಯರಿಗೆ 'ವೈದ್ಯ ದಿನಾಚರಣೆ'ಯ ಶುಭಾಶಯಗಳು:)
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಪ್ರತಿಯೊಬ್ಬ ವೈದ್ಯರಿಗು....ವೈದ್ಯ ದಿನಾಚರಣೆಯ ಶುಭಾಶಯಗಳು...
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಶುಭಾಶಯ ಹೇಳಿದ ಎಲ್ಲರಿಗೂ ಥ್ಯಾಂಕ್ಸ್.
ನಾನೂ ಮನೆಯವರಿಗೆ, ಅಕ್ಕಪಕ್ಕದವರಿಗೆ, ಗೆಳೆಯರಿಗೆ ’ಸಣ್ಣ ಮಟ್ಟಿನ ಡಾಕ್ಟ್ರು’. ಹೊಸ ಡಾಕ್ಟ್ರಿಗಿಂತ ಹಳೇ ರೋಗಿ..ಗಾದೆ ಇದೆಯಲ್ಲಾ.. ಡಾಕ್ಟ್ರ ಬಳಿ ಹೋಗಿ ಬಂದು, ಹೋಗೀ ಬಂದೂ, ಹೆಚ್ಚಿನ ಔಷಧಿಗಳು, ಅವುಗಳ ಡೋಸ್ ಎಲ್ಲಾ ಗೊತ್ತಿದೆ. ತಲೆನೋವು, ಕೆಮ್ಮು, ನೆಗಡಿ, ಜ್ವರ, ಭೇದಿ, ವಾಂತಿ, ಬಾಲಗ್ರಹ, ಸನ್ನಿ, ಭಟ್ಟಿ ಬೀಳುವುದು ಇತ್ಯಾದಿ ಕಾಯಿಲೆಗೆ ನಿಮ್ಮ ಡಾಕ್ಟ್ರಿಗಿಂತ ಚೆನ್ನಾಗಿ ಔಷಧಿ ಕೊಡಬಲ್ಲೆ. ಜಾಂಡೀಸನ್ನು ಮೂರೇ ದಿನದ ನಾಟಿ ಔಷಧಿಯಲ್ಲಿ ಗುಣಪಡಿಸಬಲ್ಲೆ. ನನ್ನನ್ನು ನಾನೇ ಹೊಗಳಿಕೊಳ್ಳುವುದಲ್ಲ.. ಈಗಿನ ಕಾಲದ ಡಾಕ್ಟ್ರುಗಳು ಸಣ್ಣ ಜ್ವರಕ್ಕೂ ಆ ಟೆಸ್ಟ್, ಈ ಟೆಸ್ಟ್ ಎಂದು ಜನರ ಹಣ ಬೋಳೀಸುತ್ತಿರುವಾಗ, ನಾನು ನನ್ನಿಂದಾದಷ್ಟು ಸೇವೆ ಎಂದು "ಉಚಿತವಾಗಿ ಔಷಧಿಗಳನ್ನು" ಕೊಡುತ್ತಿರುವೆ.
.
.
.
.
_ಈ ತರಹದ ವೈದ್ಯರು ಬೀದಿ ಬೀದಿಯಲ್ಲಿರುತ್ತಾರೆ. ಒಂದು ಮೊಬೈಲ್, ಟಿ.ವಿ.... ಕೊಳ್ಳಬೇಕಾದರೆ ಕ್ವಾಲಿಟಿ ನೋಡುತ್ತೇವೆ.
ನಮ್ಮ ದೇಹವನ್ನು ಮಾತ್ರ ಇಂತಹ ಅಯೋಗ್ಯರ ಕೈಗೆ ಕೊಡಲು ಹೇಗೆ ಮನಸ್ಸು ಬರುವುದು?
-ಸಂಪದದಲ್ಲಿರುವ ಎಲ್ಲಾ ವೈದ್ಯರಿಗೆ ಶುಭಾಶಯಗಳು+ವೈದ್ಯೆಯಾಗುತ್ತಿರುವ ಆಸುಹೆಗ್ಡೆಯವರ ಮಗಳಿಗೂ ವೈದ್ಯರ ದಿನದ ಶುಭಾಶಯಗಳು,
-ಗಣೇಶ.
ಉ: ವೈದ್ಯರ ದಿನದ ಶುಭಾಶಯಗಳು (ತಡವಾಗಿ!)
ನಾ ಸೋಮೇಶ್ವರ, ಮೀನ ಸುಬ್ಬರಾವ್, ಹಾಗೂ ಎಲ್ಲಾ ವೈದ್ಯರಿಗೆ ಶುಭಾಶಯಗಳು.
ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು ಹಾಗೂ ವೈದ್ಯರ ದಿನದ ಶುಭಾಶಯಗಳು (ತಡವಾಗಿ!).
ಅಂಬಿಕಾ
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ನಾಸೋ ಅವರೇ
ಸತ್ವ ಭರಿತವಾದ ನಿಮ್ಮ ಲೇಖನಕ್ಕೆ
ಮತ್ತು ಪ್ರಪಂಚದ ಎಲ್ಲಾ ನಿಜವಾದ ವೈದ್ಯರಿಗಾಗಿ
ಒಂದು ಗುಲಾಬಿ
ಬಾಕಿ ಉಳಿದ ಎಲ್ಲರ ಪರವಾಗಿ
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
'ವೈದ್ಯೋ ನಾರಾಯಣೋ ಹರಿಃ-ವೈದ್ಯನು ಭೂಮಿಯ ಮೇಲೆ ನಡೆದಾಡುವ ಭಗವಂತ'
ನಾ ಸೋಮೇಶ್ವರ ಅವರೇ, ಆ ಪದಗಳ(ವೈದ್ಯೋ ನಾರಾಯಣೋ ಹರಿಃ) ಅರ್ಥ ಹಾಗೆ (ವೈದ್ಯನು ಭೂಮಿಯ ಮೇಲೆ ನಡೆದಾಡುವ ಭಗವಂತ-ಎಂದು) ಅಲ್ಲ!!!!
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಮಾಚಿಕೊಪ್ಪರೇ,
•“ವೈದ್ಯೋ ನಾರಾಯಣೋ ಹರಿಃ-ವೈದ್ಯನು ಭೂಮಿಯ ಮೇಲೆ ನಡೆದಾಡುವ ಭಗವಂತ-ಜನಸೇವೆಯೇ ಜನಾರ್ಧನ ಸೇವೆ” – ಇತ್ಯಾದಿ ಭಾವಗಳೆಲ್ಲ ಇತಿಹಾಸವನ್ನು ಸೇರಿವೆ.
ನಾ ಸೋ. ರವರು ಹೇಳುತ್ತಿರುವುದು-ವೈದ್ಯೋ ನಾರಾಯಣೋ ಹರಿಃ-ವೈದ್ಯನು ಭೂಮಿಯ ಮೇಲೆ ನಡೆದಾಡುವ ಭಗವಂತ-ಜನಸೇವೆಯೇ ಜನಾರ್ಧನ ಸೇವೆ” – ಇತ್ಯಾದಿ ಭಾವಗಳೆಲ್ಲ ಅ೦ದರೆ ಆ ಥರಹದ ಭಾವನೆಗಳೆಲ್ಲ ಇತಿಹಾಸ ಸೇರಿವೆ ಎ೦ದು. ಅವರು ವೈದ್ಯೋ ನಾರಾಯಣ ಹರಿ ಎ೦ದರೆ ವೈದ್ಯನು ಭೂಮಿಯ ಮೇಲೆ ನಡೆದಾಡುವ ಭಗವ೦ತ ಎ೦ದು ಖಚಿತವಾಗಿ ನುಡಿದಿಲ್ಲ. ಯಾವುದೇ ವ್ಯಾಖ್ಯಾನವನ್ನು ಮಾಡುವಾಗ “ಎ೦ದರ್ಥ“ , ‘ಅದರ ಅರ್ಥ ಏನೆ೦ದರೆ “ ಎ೦ಬ ಪದಗಳನ್ನೆಲ್ಲಾ ಸೇರಿಸಿದರೆ ಮಾತ್ರವೇ ಅದು ಖಚಿತತೆಯನ್ನು ಸೂಚಿಸುತ್ತದೆ. ಭಾವ ಮತ್ತು ಅರ್ಥ ಎ೦ಬ ಎರಡೂ ಪದಗಳಿಗೆ ವ್ಯತ್ಯಾಸ ಇದೆ ಎ೦ಬ ಅನಿಸಿಕೆ ನನ್ನದು.
ತಪ್ಪಿದ್ದಲ್ಲಿ ಬಲ್ಲವರು ತಿಳಿಸುವುದು.
ನಮಸ್ಕಾರಗಳು.
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಉತ್ತಮ ಲೇಖನ ,ವೈದ್ಯಲೋಕದ ಅನೇಕ ಸಂಗಥಿಗಳನ್ನು ಚೆನ್ನಾಗಿ ವಿವರಿಸಿದ್ದೀರಿ,ಧನ್ಯವಾದಗಳು
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಡಾ|| ಸೋಮೇಶ್ವರ್ ರವರೆ,
ಹದ್ದಿನ ಕಣ್ಣು ಅಂದ್ರೆ ಅರ್ಥ ಆಯಿತು, ಹೆಣ್ಣಿನ ಕೋಮಲ ಕೈಗಳು ಅಂತ ಅಂದ್ರೂನೂ ಅರ್ಥ ಆಯಿತು ಆದರೆ ಸಿಂಹದ ಹೃದಯ ಅಂತ ಅಂದ್ರೆ ಇದುವರೆವಿಗೂ ಅರ್ಥವಾಗಲಿಲ್ಲ ದಯವಿಟ್ಟು ಇದರ ಮೂಲಾರ್ಥ ತಿಳಿಸಿ
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಸಿಂಹದ ಹೃದಯ ಎನ್ನುವುದು ವೈದ್ಯರಿಗೆ ಇರಬೇಕಾದ ಧೈರ್ಯವನ್ನು ಸೂಚಿಸುತ್ತದೆ.
ಅಪಘಾತಗಳು, ಸುಟ್ಟಗಾಯಗಳು, ಹೆರಿಗೆ, ಹೃದಯಾಘಾತ ಮುಂತಾದ ಸನ್ನಿವೇಶಗಳನ್ನು ಗಮನಿಸಿಕೊಳ್ಳಿ. ಭಾವಾವೇಶವನ್ನು ತೋರದೆ ಈ ಪ್ರಕರಣಗಳನ್ನು ಎದುರಿಸಲು ಸಿಂಹ ಹೃದಯವೇ ಬೇಕು. ಅಲ್ಲವೇ!
ಪ್ರಸ್ತುತ ನುಡಿಗಟ್ಟು ವಿಶೇಷವಾಗಿ ಶಸ್ತ್ರವೈದ್ಯರಿಗೆ ಅನ್ವಯಿಸುತ್ತದೆ. ಶಸ್ತ್ರಕ್ರಿಯೆಯನ್ನು ನಡೆಸುವಾಗ ಕೆಲವು ಸಲ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅವನ್ನು ಎದುರಿಸಲು ಎಂಟೆದೆ ಬೇಕು. ಉದಾಹರಣೆಗೆ ಶಸ್ತ್ರಚಿಕಿತ್ಸೆ ನಡೆಸುವಾಗ ಹೃದಯ ತನ್ನ ಕೆಲಸವನ್ನು ಥಟ್ ಅಂತ ನಿಲ್ಲಿಸಿಬಿಡಬಹುದು. (ಶಿವಮೊಗ್ಗದಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿದ್ದ ಡಾ|ಎಚ್.ಡಿ.ಚಂದ್ರಪ್ಪಗೌಡ ಇಂತಹ ತಮ್ಮ ಒಂದು ಅನುಭವವನ್ನು ಬರೆದಿದ್ದಾರೆ. ಅವರು ಒಂದು ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿರುವಾಗ ಹೃದಯವು ಒಮ್ಮೆಲೆ ಸ್ಥಗಿತವಾಗುತ್ತದೆ. ತಕ್ಷಣವೇ ಕಾರ್ಡಿಯಾಕ್ ಮಸಾಜ್ ಹಾಗೂ ಕೃತಕ ಉಸಿರಾಟವನ್ನು ನೀಡಿದರು. ಪ್ರಯೋಜನವಾಗಲಿಲ್ಲ. ಆಗ ಚಂದ್ರಪ್ಪಗೌಡರು ಧೈರ್ಯಗೆಡದೆ ಎದೆಗೂಡನ್ನು ಸೀಳಿ, ನೇರವಾಗಿ ತಮ್ಮ ಕೈಗಳಿಂದ ನಿಂತ ಹೃದಯವನ್ನು ಒತ್ತಿ ಒತ್ತಿ ಕೆಲಸ ಮಾಡುವಂತೆ ಮಾಡುತ್ತಾರೆ. ಅವರು ಸಾಮಾನ್ಯ ಶಸ್ತ್ರವೈದ್ಯರಷ್ಟೆ. ಹೃದಯ ಮತ್ತು ಎದೆಗೂಡಿನ ತಜ್ಞರಲ್ಲ. ಅವರು ತಮ್ಮ ಜೀವನದಲ್ಲಿ ಅದೇ ಮೊದಲಬಾರಿಗೆ ಎದೆಗೂಡಿನ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದಾರೆ. ಮಾರ್ಗದರ್ಶನವನ್ನು ನೀಡಲು ಯಾವ ಹಿರಿಯ ವೈದ್ಯರೂ ಇರಲಿಲ್ಲ. ಆದರೂ ಅವರು ಸಿಂಹಹೃದಯದೊಡನೆ ಎದೆಗೂಡನ್ನು ಸೀಳಿ ಹೃದಯವನ್ನು ನೇರ ಮಸಾಜಿನಿಂದ ಪುನಶ್ಚೇತನಗೊಳಿಸಿದರು. ಒಂದು ವೇಳೆ ಅವರು ತಮ್ಮ ಪ್ರಯತ್ನದಲ್ಲಿ ವಿಫಲವಾಗಿದ್ದರೆ................? ಪರಿಣಾಮ ಭೀಕರವಾಗಬಹುದಿತ್ತು! ಆದರೂ ಅವರು ಪರಿಣಾಮವನ್ನು ಕುರಿತು ಚಿಂತಿಸಲಿಲ್ಲ. ರೋಗಿಯನ್ನು ಉಳಿಸಲು ಅವರ ಬಳಿ ಅದೊಂದೇ ಮಾರ್ಗವಿತ್ತು! ಇಂತಹ ದಿಟ್ಟ ನಿರ್ಣಯವನ್ನು ಕೈಗೊಳ್ಳಲು ಎಂಟೆದೆ ಬೇಕಾಗುತ್ತದೆ) ವಿಪರೀತ ರಕ್ತಸ್ರಾವವಾಗಬಹುದು. ಹೀಗೆ ಹಲವು ಸೂಕ್ಷ್ಮ ಸನ್ನಿವೇಶಗಳು ತಲೆದೋರಬಹುದು. ಇಂತಹವನ್ನು ಆ ಕ್ಷಣದಲ್ಲಿ ಎದುರಿಸಲು ಧೈರ್ಯವಿರಬೇಕಾಗುತ್ತದೆ.
-ನಾಸೋ
ಉ: ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
ಅಬ್ಬಾ. ಡಾ. ಚಂದ್ರಪ್ಪ ಗೌಡ್ರದ್ದು ನಿಜಕ್ಕೂ ಸಿಂಹ ಹೃದಯನೇ.
ಉದಾಹರಣೆ ಸಹಿತ ವಿವರಿಸಿದ ನಾಸೋರವರಿಗೆ ನನ್ನಿ.
-ಗಣೇಶ.