ಒಂದು ರೋಗದ ಸಾವಿನ ಸುತ್ತಮುತ್ತ………..
ನನ್ನ ಬಾಲ್ಯ ಕಾಲದಲ್ಲಿ ಒಂದು ರೋಗ ಸಾಮಾನ್ಯವಾಗಿತ್ತು. ಕೃಶವಾದ ಮಗುವಿನ ಚಿತ್ರ. ಹೊಟ್ಟೆಯು ಬಲೂನಿನಂತೆ ಊದಿಕೊಂಡಿರುತ್ತಿತ್ತು. ಇಂತಹ ಮಗುವಿಗೆ "ಲಿವರ್ ಆಗಿದೆ" ಎಂದು ಹೇಳುತ್ತಿದ್ದರು. ಇದನ್ನು ಗುಣಪಡಿಸುವುದೆಂದು ನಂಬಲಾಗಿದ್ದ "ಲಿವರ್ ಕ್ಯೂರ್" ಎಂಬ ಔಷಧದ ಗೋಡೇ ಜಾಹೀರಾತುಗಳು ಎಲ್ಲೆಂದರೆಲ್ಲಿ ರಾರಾಜಿಸುತ್ತಿದ್ದವು.
ಈ ರೋಗವನ್ನು ವೈದ್ಯಕೀಯ ಪರಿಭಾಷೆಯಲ್ಲಿ ""ಭಾರತದ ಮಕ್ಕಳ ಯಕೃತ್ ನಾರುಗಟ್ಟುವ ರೋಗ" (ಇಂಡಿಯನ್ ಚೈಲ್ಡ್ ಹುಡ್ ಸಿರಾಸಿಸ್) ಎಂದು ಕರೆಯುತ್ತೇವೆ.
- ೬ ತಿಂಗಳಿನಿಂದ -೨ ವರ್ಷ ವಯಸ್ಸಿನ ಮಕ್ಕಳು ರಚ್ಚೆ ಹಿಡಿಯಲು ಆರಂಭಿಸುತ್ತಾರೆ.
- ಮಂದಗತಿಯ ಜ್ವರ ಕಾಣಿಸಿಕೊಳ್ಳುತ್ತದೆ.
- ರಕ್ತ ಹೀನತೆ ಕಾಣಿಸಿಕೊಳ್ಳುತ್ತದೆ.
- ತಿಂದದ್ದು ಮೈ ಹಿಡಿಯುವುದಿಲ್ಲ.
- ಕ್ರಮೇಣ ಯಕೃತ್ತು ಹಾಗೂ ಗುಲ್ಮ ಊದಿಕೊಳ್ಳುತ್ತದೆ. ಹೊಟ್ಟೆ ದಪ್ಪವಾಗುತ್ತದೆ. ಉದರದಲ್ಲಿ ನೀರು ಸಂಚಯವಾಗುತ್ತದೆ.
- ಕಾಮಾಲೆ ಕಾಣಿಸಿಕೊಂಡು ಮಗು ನಿದಾನವಾಗಿ ಕೋಮಾವನ್ನು ತಲುಪಿ ಸಾವನ್ನಪ್ಪುತ್ತದೆ.
ಇದುವೇ ಭಾರತದ ಮಕ್ಕಳ ಯಕೃತ್ತು ರೋಗ. ಈ ಹೆಸರು ಬರಲು ಕಾರಣವಿದೆ. ಈ ರೋಗ ಭಾರತೀಯ ಮಕ್ಕಳಲ್ಲಿ ಮಾತ್ರ ವಿಶೇಷವಾಗಿ ಕಂಡುಬರುತಿತ್ತು. ಈ ರೋಗದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದಾಗ ಕುತೂಹಲಕರವಾದ ಮಾಹಿತಿಗಳು ದೊರೆತವು.
- ಇದು ಹಿಂದೂಗಳಲ್ಲಿ ಕಂಡುಬರುತಿತ್ತು.
- ಇದು ತೀರಾ ಶ್ರೀಮಂತರ ಮಕ್ಕಳನ್ನು ಕಾಡುತ್ತಿರಲಿಲ್ಲ. ತೀರಾ ಬಡವರ ಮಕ್ಕಳನ್ನು ಕಾಡುತ್ತಿರಲಿಲ್ಲ. ಮಧ್ಯಮ ವರ್ಗದ ಮಕ್ಕಳನ್ನೇ ಹೆಚ್ಚು ಕಾಡುತಿತ್ತು.
- ಮುಸಲ್ಮಾನ ಅಥವಾ ಕ್ರೈಸ್ಥ ಮಕ್ಕಳನ್ನು ಕಾಡಿದ ಉದಾಹರಣೆಗಳಿರಲಿಲ್ಲ.
- ಒಂದೆ ಕುಟುಂಬದ ಎಲ್ಲಾ ಮಕ್ಕಳು ಅಥವಾ ಒಂದೇ ತಾಯಿಯ ಎಲ್ಲಾ ಮಕ್ಕಳು ಒಂದರ ನಂತರ ಒಂದೊಂದಾಗಿ ಸಾಯುತ್ತಿದ್ದುದರಿಂದ ಇದು ದುಷ್ಟ ಶಕ್ತಿಯ ಕಾಟ ಎಂದು ಸಾಮಾನ್ಯವಾಗಿ ಜನ ನಂಬುತ್ತಿದ್ದರು.
೧೯೭೯ರ ಅವಧಿಯಲ್ಲಿ ಇಂಗ್ಲಂಡಿನಲ್ಲಿ ಮಹತ್ವಯುತ ಸಂಶೋಧನೆಗಳು ನಡೆದವು. ನಮ್ಮ ದೇಹದಲ್ಲಿರುವ ಲಘುಪ್ರಮಾಣದ ಖನಿಜಗಳನ್ನು ಪತ್ತೆ ಹಚ್ಚುವ ತಂತ್ರ ಅಭಿವೃದ್ಧಿಗೊಂಡಿತು.
ಅಯೋಡಿನ್, ಫ಼್ಲೂರಿನ್, ಮಾಲಿಬ್ಡಿನಮ್, ಜ಼ಿಂಕ್, ಕೊಬಾಲ್ಟ್, ತಾಮ್ರ, ಮ್ಯಾಂಗನೀಸ್ ಇತ್ಯಾದಿ ಲೋಹಗಳೆಲ್ಲ ಮೈಕ್ರೋಗ್ರಾಮಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕಾಗುತ್ತವೆ. ಇವು ಕಡಿಮೆಯಾದರೂ ಕಷ್ಟ. ಹೆಚ್ಚಾದರೂ ಕಷ್ಟ.
ಟ್ಯಾನ್ನರ್ ಹಾಗೂ ಪೂಪ್ಪರ್ ಎಂಬ ವೈದ್ಯ ವಿಜ್ಞಾನಿಗಳು ಭಾರತದ ಮಕ್ಕಳ ಯಕೃತ್ ರೋಗದಿಂದ ಸತ್ತ ಮಕ್ಕಳ ಯಕೃತ್ತಿನಲ್ಲಿ ಭಾರೀ ಪ್ರಮಾಣದ ತಾಮ್ರ ಇರುವುದಾಗಿ ಪತ್ತೆ ಹಚ್ಚಿದರು. ಈ ಸಂಶೋಧನೆಯ ಜಾಡನ್ನು ಹಿಡಿದ ಭಾರತೀಯರು, ತಾಮ್ರವು ಕೇವಲ ಯಕೃತ್ತಿನಲ್ಲಿ ಮಾತ್ರವಲ್ಲ ರಕ್ತ, ಮೂತ್ರ, ಉಗುರು, ಕೂದಲಿನಲ್ಲಿಯೂ ತೀವ್ರ ತಾಮ್ರ ಶೇಖರಣೆಯಾಗಿರುವುದನ್ನು ಹೊರಗೆಡವಿದರು.
ತಾಮ್ರ ನಮಗೆ ಅಗತ್ಯ. ಆದರೆ ಅದು ಅತ್ಯಲ್ಪ ಪ್ರಮಾಣದಲ್ಲಿ ಸಾಕು. ಇದು ನಮಗೆ ಆಹಾರ ಪದಾರ್ಥಗಳ ಮೂಲಕ ಸಹಜವಾಗಿ ದೊರೆಯುತ್ತದೆ. ಇದಕ್ಕಾಗಿ ನಾವು ವಿಶೇಷವಾಗಿ ತಾಮ್ರವನ್ನು ಸೇವಿಸಬೇಕಾಗಿಲ್ಲ. ಚಿಕ್ಕ ಮಕ್ಕಳಲ್ಲಿ ಈ ಪ್ರಮಾಣದ ತಾಮ್ರ ಹೇಗೆ ಬಂದು ಸೇರಿತು ಎಂದು ಸಂಶೋಧಕರಿಗೆ ಅಚ್ಚರಿ ಹಾಗೂ ಕುತೂಹಲವುಂಟಾಯಿತು.
ಅದಕ್ಕೆ ಉತ್ತರ ಮಧ್ಯಮ ವರ್ಗದ ಹಿಂದೂ ಜನರ ಅಡುಗೆ ಮನೆಯಲ್ಲಿ ದೊರೆಯಿತು.
ತಾಯಿ ಹಾಲು ಸಾಕಾಗದ ಮಕ್ಕಳಿಗೆ ಅಥವಾ ಬೆಳೆಯುವ ಮಕ್ಕಳಿಗೆ ಹಸುವಿನ ಹಾಲು ಶಕ್ತಿ ವರ್ಧಕ ಎಂಬ ನಂಬಿಕೆಯಿಂದ, ಮಕ್ಕಳಿಗೆ ತಾಯಂದಿರನ್ನು ಮೇಲು ಹಾಲನ್ನು ಕುಡಿಸುತ್ತಿದ್ದರು. ಹಾಲನ್ನು ಕಾಯಿಸಲು ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಇವರು ಬಳಸುತಿದ್ದರು. ಹಿತ್ತಾಳೆ ಎಂಬುದು ಒಂದು ಮಿಶ್ರ ಲೋಹ. ಎರಡು ಭಾಗ ತಾಮ್ರ ಹಾಗೂ ಒಂದು ಭಾಗ ಸತುವಿನಿಂದ ತಯಾರಾದ ಲೋಹ. ಇವುಗಳಿಂದ ತಾಮ್ರ ಅಂಶ ಕರಗಿ ಹಾಲನ್ನು ಸೇರುತಿತ್ತು. ಮಕ್ಕಳೆ ಹೊಟ್ಟೆಯನ್ನು ಸೇರುತ್ತಿತ್ತು. ಅಮೃತವೆಂದು ತಾಯಂದಿರು ಕೊಡುತ್ತಿದ್ದ ಹಾಲು ವಾಸ್ತವದಲ್ಲಿ ವಿಷವಾಗಿತ್ತು!
ಸಂಶೋಧಕರು ತಾಮ್ರ/ಹಿತ್ತಾಳೆಯ ಪಾತ್ರೆಗಳಲ್ಲಿ ಇದ್ದ ಹಾಲಿನಲ್ಲಿ ಎಷ್ಟು ತಾಮ್ರದ ಅಂಶ ಇದೆಯೆಂಬುದನ್ನು ಪತ್ತೆ ಹಚ್ಚಿದರು.
- ಪಾತ್ರೆಯಲ್ಲಿದ್ದ ಹಸಿ ಹಾಲು = ೪೦ ಮೈಕ್ರೋಗ್ರಾಮ್ /ಡೆಸಿ ಲೀಟರ್.
- ಮೊದಲ ಕಾಯಿಸಿದಾಗ = ೧೧೩ ಮೈಕ್ರೋಗ್ರಾಮ್ / ಡೆಸಿ ಲೀಟರ್
- ಪದೇ ಪದೇ ಕಾಯಿಸಿದ ಹಾಲು = ೩೫೦೦ ಮೈಕ್ರೋಗ್ರಾಮ್ / ಡೆಸಿ ಲೀಟರ್
ಈ ಪ್ರಯೋಗಗಳಿಂದ ತಾಮ್ರ/ಹಿತ್ತಾಳೆಯ ಪಾತ್ರೆಗಳ ಮಕ್ಕಳನ್ನು ಕೊಲ್ಲುತ್ತಿದ್ದ "ದುಷ್ಟ ಶಕ್ತಿ" ಎಂಬುದು ಜಗತ್ತಿಗೆ ಗೊತ್ತಾಯಿತು.
ಮುಂಬಯಿಯ ಕೆ.ಇ.ಎಂ ಆಸ್ಪತ್ರೆಯ ವೈದ್ಯರು ಒಂದು ಪುಟ್ಟ ಪ್ರಯೋಗವನ್ನು ಮಾಡಿದರು. ಭಾರತದ ಮಕ್ಕಳ ಯಕೃತ್ ರೋಗದಿಂದ ಸತ್ತ ಮಕ್ಕಳ ತಾಯಂದಿರ ಮುಂದಿನ ಮಗುವನ್ನು ಪ್ರಯೋಗಕಕ್ಕೆ ಆಹ್ವಾನಿಸಿದರು. ೧೯೮ ಮಕ್ಕಳು ಪ್ರಯೋಗದಲ್ಲಿ ಪಾಲುಗೊಂಡವು. ಅವರಿಗೆ ಆಲ್ಯೂಮಿನಿಯಂ ಅಥವಾ ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಯಲ್ಲಿ ಕಾಯಿಸಿದ ಹಾಲನ್ನು ನೀಡಿದರು. ಆ ಮಕ್ಕಳಿಗೆ ಯಕೃತ್ ರೋಗಲಕ್ಷಣಗಳು ಕಾಣಿಸಲೇ ಇಲ್ಲ!
ಅಂದು ಶ್ರೀಮಂತ ಹಿಂದುಗಳು ಹಾಲು ಕಾಯಿಸಲು ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆ ಬಳಸುತ್ತಿದ್ದರು. ಬಡವರು ಮಣ್ಣಿನ ಪಾತ್ರೆ ಉಪಯೋಗಿಸುತ್ತಿದ್ದರು. ಮಧ್ಯಮವರ್ಗದ ಜನರು ತಾಮ್ರ /ಹಿತ್ತಾಳೆ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಮುಸಲ್ಮಾನ್ ಹಾಗೂ ಕ್ರೈಸ್ಥರು ಏಕೋ ಈ ಪಾತ್ರೆಗಳನ್ನು ಬಳಸುತ್ತಿರಲಿಲ್ಲ!! ಈಗ ನಿತ್ಯ ಅಡುಗೆಗೆ ತಾಮ್ರ / ಹಿತ್ತಾಳೆ ಪಾತ್ರೆಗಳನ್ನು ಬಳಸುವ ವಾಡಿಕೆ ನಿಂತಿದೆ. ಎಲ್ಲೆಡೆಯೂ ಸ್ಟೈನ್‌ಲೆಸ್ ಸ್ಟೀಲ್! ಹಾಗಾಗಿ ಭಾರತದ ಮಕ್ಕಳ ಯಕೃತ್ ರೋಗ ಈಗ ಮಾಯವಾಗಿಬಿಟ್ಟಿದೆ!
ಈಗ ಒಂದು ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಕೆಲವರು ರಾತ್ರಿ ಹೊತ್ತು ನೀರನ್ನು ತಾಮ್ರ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟು ಬೆಳಿಗ್ಗೆ ಅದನ್ನು ಬರಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಹೀಗೆ ಮಾಡಬಹುದೆ? ಇದರಿಂದ ಆರೋಗ್ಯಕ್ಕೆ ಅಪಾಯವಿಲ್ಲವೇ? ಖಚಿತ ಉತ್ತರ ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಸಂಶೋದನೆ ನಡೆದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಬಹುಶಃ ಕಾಯಿಸದೆ ಇರುವ ನೀರಿನಲ್ಲಿ ತಾಮ್ರದ ಅಂಶ ಹೆಚ್ಚಿಗೆ ಜಿನುಗಲಾರದೇನೋ...ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಬಹುಶಃ ಇಂತಹ ಅಭ್ಯಾಸವನ್ನು ಬಿಡಬಹುದು ಎಂದು ಅನಿಸುತ್ತದೆ. ತಾಮ್ರದ ಪಾತ್ರೆಯಲ್ಲಿಟ್ಟ ನೀರು ಆರೋಗ್ಯವರ್ಧಕ ಎಂಬುದಕ್ಕೆ ಪುರಾವೆ ದೊರೆತಿಲ್ಲ. ನಮ್ಮ ಆರೋಗ್ಯಕ್ಕೆ ಬೇಕಾದ ತಾಮ್ರದ ಪ್ರಮಾಣ ಆಹಾರ ಪದಾರ್ಥಗಳ ಮೂಲಕ ಸಹಜವಾಗಿ ದೊರೆಯುತ್ತವೆ. ಹಾಗಾಗಿ ನಾವು ತಾಮ್ರವನ್ನು ವಿಶೇಷವಾಗಿ ಸೇವಿಸಬೇಕಾಗಿಲ್ಲ.
ಈಗ ಆಲ್ಯೂಮಿನಿಯಂ ಪಾತ್ರೆಗಳೂ ಸಹಾ ಅಡುಗೆಗೆ ಯೋಗ್ಯವಲ್ಲ ಎಂಬ ಮಾಹಿತಿ ದೊರೆಯುತ್ತಿದೆ. ಇದು ಮಿದುಳಿಗೆ ಬರುವ ಆಲ್ಜೀಮರ್ ರೋಗಕ್ಕೆ ಕಾರಣವಾಗಬಲ್ಲುದಂತೆ!
ಇತ್ತೀಚೆಗೆ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಕಂಡುಬಂದ ಕೆಳಗಿನ ಲೇಖನವು ತಾಮ್ರವು ಎಷ್ಟು ಮಾರಕವಾದದ್ದು ಎಂಬುವುದಕ್ಕೆ ಪುರಾವೆಯನ್ನು ನೀಡುತ್ತದೆ.
A severe copper storage disease of the liver with micronodular cirrhosis resembling Indian childhood cirrhosis (ICC) was found in two siblings of a German family leading to death in one infant at the age of 13 months. The fatal outcome correlated with severe ballooning of hepatocytes and excessive formation of Mallory bodies. The copper content of the liver was 698 micrograms per gramme wet weight (control 5 micrograms) in the living patient and 2154 micrograms per gramme dry weight (controls 39, 54 micrograms) in the dead infant. In both cases copper was stored not only in hepatocytes but also to a high degree in mesenchymal cells. Chronic contamination of drinking water supplied from a well via copper pipes could be verified as the cause of copper intoxication, lending further support to ICC as an environmental, acquired disorder. Accumulation of exogenic copper already very early in infancy appears most important for the development of the disease, as both the parents and one child not exposed to copper intoxication during the first 9 months of its life are clinically healthy.
ಒಂದು ಪದ್ಧತಿಯು ಒಂದು ರೋಗ ಉಗಮಕ್ಕೆ ಕಾರಣವಾದರೆ, ಆ ಪದ್ಧತಿಯ ನಿಲುಗಡೆ ಆ ರೋಗವನ್ನು ಹೇಳಹೆಸರಿಲ್ಲದಂತೆ ಮಾಡಿದೆ. ವೈದ್ಯಕೀಯ ಇತಿಹಾಸದಲ್ಲಿ ಇದೊಂದು ಅಪರೂಪದ ರೋಗ ಪ್ರಕರಣ.
-ಡಾ.ನಾ.ಸೋಮೇಶ್ವರ









ಪ್ರತಿಕ್ರಿಯೆಗಳು
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ನಿಮ್ಮಿಂದ ಮತ್ತೊಂದು ಮಾಹಿತಿಭರಿತ ಲೇಖನ.
:)
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ನಾ.ಸೋಮೇಶ್ವರರವರೇ..
ಉತ್ತಮ ಮಾಹಿತಿಗಾಗಿ ಧನ್ಯವಾದಗಳು..
ನನ್ನಿ
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ಯಕೃತ್ ರೋಗದ ಬಗ್ಗೆ ಉತ್ತಮ ಮಾಹಿತಿ ನಿಡಿದ್ದೀರಿ. ತಾಮ್ರದ ಪಾತ್ರೆಯಲ್ಲಿ ಇಟ್ಟಂತಹ ನೀರನ್ನು ಕುಡಿಯುವುದರಿಂದ ರಕ್ತ ಶುದ್ದಿಯಾಗುತ್ತದೆ ಎನ್ನುವ ಮಾತುಗಳನ್ನು ಹಿರಿಯರು ಆಡುತ್ತಾರೆ. ಹಾಗೇ ಇದೀಗ ತೆಳ್ಳಗಾಗಬೇಕೆನ್ನುವ ಹಲವರು ಬೆಳಗ್ಗೆ ನಿಂಬೆಹಣ್ಣಿನ ರಸಕ್ಕೆ ಬೆರೆಸಿ ಒಂದು ಚಮಚ ಜೇನುತುಪ್ಪ ಮತ್ತು ತಾಮ್ರದ ನೀರನ್ನು ಸೇವಿಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕವೋ ಅಥವಾ ಇಲ್ಲವಾ. ಮಾಹಿತಿ ನೀಡಿ ಸರ್.
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ದಿನವೂ ರಾತ್ರಿಯಲ್ಲಿ ತಾಮ್ರದ ಪಾತ್ರೆಯ ತುಂಬ ನೀರನ್ನು ತುಂಬಿಟ್ಟು, ಅದನ್ನು ಬೆಳಗಿನ ಜಾವ ಬರೀ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ಡೇನೆ. ಆದರೆ ಈ ತಾಮ್ರದ ನೀರು ರಕ್ತದಲ್ಲಿರುವ ಯಾವ ವಿಷವನ್ನು ನಿವಾರಿಸಿ ಶುದ್ಧೀಕರಿಸುತ್ತದೆ ಎಂಬ ಪ್ರಶ್ನೆಗೆ ಉತ್ತರ ನನಗೆಲ್ಲೂ ದೊರೆತಿಲ್ಲ. ನನ್ನ ಅಭಿಪ್ರಾಯದಲ್ಲಿ ಇದು ಕೇವಲ ನಂಬಿಕೆಯಷ್ಟೆ.
ಬೆಳಗಿನ ಜಾವ ನಿಂಬೆಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಎಂಬ ಮಾತು ಸತ್ಯವೇ ಆಗಿದ್ದರೆ, ಜಗತ್ತಿನಲ್ಲಿ ಯಾರೂ ದಪ್ಪಕ್ಕೆ ಇರುತ್ತಿರಲೇ ಇಲ್ಲ. ಎಲ್ಲರೂ ಬಳಕುವ ಬಳ್ಳಿಗಳಾಗುತ್ತಿದ್ದರು. ಇದು ಕೇವಲ ಮೂಢನಂಬಿಕೆ.
ತಾಮ್ರದ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿ ಎಂದು ಖಚಿತವಾಗಿ ಹೇಳಲು ಆ ಬಗ್ಗೆ ಅಧ್ಯಯನ ಮಾಡಬೇಕು. ಅಂತಹ ಅಧ್ಯಯನ ನಡೆದಿರುವ ಮಾಹಿತಿ ನನಗಿಲ್ಲ. ನಮ್ಮ ದೇಹಕ್ಕೆ ಅಗತ್ಯವಾದ ತಾಮ್ರವು ನಮ್ಮ ಆಹಾರ ಪದಾರ್ಥಗಳ ಮೂಲಕವೇ ದೊರೆಯುತ್ತದೆ, ಹಾಗಾಗಿ ನಾವು ಹೆಚ್ಚುವರಿ ತಾಮ್ರವನ್ನು ಪೂರೈಸಬೇಕಾದ ಅಗತ್ಯವಿಲ್ಲ.
ತೆಳ್ಳಗಾಗಬೇಕು ಎನ್ನುವವರಿಗೆ ಹಿತ-ಮಿತ ಆಹಾರ ಹಾಗೂ ದೈಹಿಕ ಚಟುವಟಿಕೆಗಳೆರಡೇ ದಾರಿ.
-ನಾಸೋ
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ಸರ್ ,ಉಪಯುಕ್ತ ಮಾಹಿತಿಗೆ ಧನ್ಯವಾದಗಳು
ರಾಜಿ ಅವರ ಪ್ರಶ್ನೆಯೇ ನನ್ನದೂ ಸಹ..
(ಭಾಳ್ ದಿವಸದಿಂದ ತೊಗೊಳ್ಳಿಕತ್ತೆನಿ ..ಹೆದರ್ಕಿ ಚಾಲೂ ಆತು..)
ಹಾಗೆ ಒಂದು ವಿನಂತಿ .
ಪಾತ್ರೆಗಳಿಂದ ದೇಹದ ಮೇಲೆ ಪರಿಣಾಮ ಆಯಿತು..
ಮಾನವನ ಮನಸ್ಸಿನ ಮೇಲೆ ಸೇವಿಸುವ ಆಹಾರದಿಂದ ಪರಿಣಾಮ ಇವೆಯಾ?
ಸ್ವಲ್ಪ ಮಾಹಿತಿ ಕೊಡುವಿರಾ..?
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ಶ್ರೀಕಾಂತ್ ಅವರೆ,
ನಾವು ಸೇವಿಸುವ ಆಹಾರವು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಭಗವದ್ಗೀತೆಯಲ್ಲಿ ಸಾತ್ವಿಕ, ರಾಜಸ ಹಾಗೂ ತಾಮಸ ಆಹಾರಗಳ ವರ್ಣನೆ ಹಾಗೂ ದೇಹದ ಮೇಲೆ ಅವುಗಳ ಪರಿಣಾಮದ ಬಗ್ಗೆ ವಿವರಣೆಯಿದೆ. ಒಮ್ಮೆ ಓದಿ. ಆಹಾರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ‘ನಮ್ಮ ಆಹಾರ ಹೇಗಿರಬೇಕು?’ ಎಂಬ ನನ್ನ ಪುಸ್ತಕವನ್ನು ಓದಿ. ಇದನ್ನು ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಟಿಸಿದೆ.
-ನಾಸೋ
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
>>ನಾವು ಸೇವಿಸುವ ಆಹಾರವು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ>>
ಆಹಾರ ಶುದ್ಧೌ ಸತ್ತ್ವ ಶುದ್ಧಿಃ ಎನ್ನುವ ಹಿರಿಯರ ಮಾತು ಅಕ್ಷರಶಃ ಸತ್ಯ. (ಅದಕ್ಕೇ ಸ್ವಯಂಪಾಕ ಮೊದಲಾದ ನಿಯಮ ಹುಟ್ಟಿಕೊಂಡದ್ದು ಅನ್ಸುತ್ತೆ)
>>ದಿನವೂ ರಾತ್ರಿಯಲ್ಲಿ ತಾಮ್ರದ ಪಾತ್ರೆಯ ತುಂಬ ನೀರನ್ನು ತುಂಬಿಟ್ಟು, ಅದನ್ನು ಬೆಳಗಿನ ಜಾವ ಬರೀ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ>>
ಹೀಗೆ ಹೇಳುವುದನ್ನು ನಾನೂ ಕೇಳಿದ್ದೇನೆ.
ಬೋರ್ವೆಲ್ಗಳಲ್ಲಿ ಬರುವ ನೀರು ಒಂದು ತರಹ ಕಿಲುಬು(ಒಗರು)ಆಗಿರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವೆ?
ಎಂದಿನಂತೆ ಉಪಯುಕ್ತ ಲೇಖನ, ಧನ್ಯವಾದಗಳು.
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ಧನ್ಯವಾದ ಸರ್
ಭಗವದ್ಗೀತೆ ಯನ್ನೂ ಓದುತ್ತೇನೆ..
ಆ ಪುಸ್ತಕ ತೊಗೊಂಡು ಓದುತ್ತೇನೆ..
"ಜಿಮ್ಮಿಯವರ ಲಿವರ್‌ಕ್ಯೂರ್"………..
ಹೌದು ನಾ.ಸೋ ಅವರೆ, ನಿಮ್ಮ ಲೇಖನ ಓದಿ ನನಗೂ ನನ್ನ ಬಾಲ್ಯದಲ್ಲಿ ಇದನ್ನೆಲ್ಲ ನೋಡಿದ ನೆನಪಾಯಿತು. ಪೇಪರ್‌ಗಳಲ್ಲಿ ಹೊಟ್ಟೆ ದಪ್ಪ, ಕೈಕಾಲು ಸಣ್ಣ ಇರುವ ಲಿವರ್ ಮಕ್ಕಳ ಚಿತ್ರವಲ್ಲದೆ ಲಿವರ್ ಕಾಯಿಲೆಯನ್ನು ಗುಣಪಡಿಸುವ ಜಾಹಿರಾತು "ಜಿಮ್ಮಿಯವರ ಲಿವರ್‌ಕ್ಯೂರ್" ಎಂಬುದೂ ತಟ್ಟನೆ ನೆನಪಾಯಿತು.
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ಡಾ. ನಾಸೋ ಅವರೇ,
ಹಿಂದೆಲ್ಲ ಮಕ್ಕಳಲ್ಲಿ (ನನ್ನ ಸಂಬಂಧಿಗಳಲ್ಲೇ) ಈ ಲಿವರ್ ಖಾಯಿಲೆ ನೋಡಿದ ನೆನಪಿದೆ, ಆದರೆ ಇದಕ್ಕೆ ಅತಿಯಾದ ತಾಮ್ರ ಸೇವನೆ ಎಂದು ತಿಳಿದಿರಲಿಲ್ಲ. ನೀವು ಹೇಳಿದಂತೆ ಅಲ್ಯುಮಿನಿಯಂ ಲೋಹವೂ ಕೂಡ ದೇಹಕ್ಕೆ ಒಳ್ಳೆಯದಲ್ಲ ಎಂದು ಈಚಿನ ಶೋಧನೆಗಳು ಖಚಿತಗೊಳಿಸಿವೆ. ಹಾಗೇ ಟೆಫ್ಲಾನ್ ಲೇಪ ಮಾಡಿದ ನಾನ್-ಸ್ಟಿಕ್ ಪಾತ್ರೆಗಳನ್ನು ಸೂಕ್ತ ರೀತಿಯಲ್ಲಿ ಬಳಸದಿದ್ದಲ್ಲಿ ಅಪಾಯ ಕಟ್ಟಿಟ್ಟದ್ದೆ ಅಲ್ಲವೇ? ನಾನು ನೋಡಿದಂತೆ ಹೆಚ್ಚು ಮಂದಿ ಆ ರೀತಿಯ ಪಾತ್ರೆಗಳ ಜೊತೆ ಬಳಸಬೇಕಾದ ಸಲಕರಣೆ ಬಿಟ್ಟು ಲೋಹದ ಮೊಗಚುವ ಕೈ ಇತ್ಯಾದಿಗಳನ್ನು ಬಳಸುತ್ತಾರೆ. ಮನೆ ಕೆಲಸದವರಂತೂ ಆ ಟೆಫ್ಲಾನ್ ಲೇಪ ಬಿರುಕು ಬಿಡುವಂತೆ ಉಜ್ಜಿ ಉಜ್ಜಿ ತೊಳೆಯುತ್ತಾರೆ. ಯಾವ ರೀತಿಯ ಲೋಹಗಳನ್ನು ಅಡಿಗೆಯಲ್ಲಿ ಬಳಸುವುದು ಸರಿ ಹಾಗೂ ಅವುಗಳನ್ನು ಹೇಗೆ ಬಳಸಬೇಕು ಎಂದು ಜನರಲ್ಲಿ ತಿಳುವಳಿಕೆ ಹೆಚ್ಚಬೇಕು.
ಧನ್ಯವಾದ,
ಶಾಮಲ
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ಡಾ. ನಾಸೊ ಅವರೇ,
Indian childhood cirrhosis ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.
ವೈದ್ಯಕೀಯ ಲೇಖನವೊಂದನ್ನು ಸರಳವಾಗಿ ಬರೆಯುವಾಗ ಸಮಗ್ರ ಮಾಹಿತಿಯನ್ನು ನೀಡುವದು ಕಷ್ಟದ ಕೆಲಸ ಎಂದು ಬಲ್ಲೆ. ಆದರೆ ನೀವು Indian childhood cirrhosis ನ ಏಕಮೇವ ಕಾರಣ ತಾಮ್ರದ ಪಾತ್ರೆಗಳಲ್ಲಿ ಹಾಲನ್ನು ಕಾಯಿಸುತ್ತಿದ್ದುದು ಎಂಬರ್ಥ ಬರುವಂತೆ ಬರೆದಿದ್ದೀರಿ; ಅಥವಾ ನನಗೆ ಹಾಗನಿಸುತ್ತಿದೆ. Indian childhood cirrhosis ಆದ ಎಲ್ಲ ಮಕ್ಕಳೂ ತಾಮ್ರದ ಪಾತ್ರೆಗಳಲ್ಲಿ ಕುದಿಸಿದ ಹಾಲನ್ನು ಕುಡಿದಿರಲಿಲ್ಲ ಅಲ್ಲವೇ? ಅಲ್ಲದೇ, ಕೆಲವು ಸಂಶೋಧಕರ ಪ್ರಕಾರ Indian childhood cirrhosis ಗೆ ‘dietary copper toxicity' ಕಾರಣವಲ್ಲ.
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
Indian childhood cirrhosis ಗೆ ‘dietary copper toxicity' ಕಾರಣವಲ್ಲ. ಇದು ನಿಜ. ಆಹಾರದ ಮೂಲಕ ದೊರೆಯುವ ತಾಮ್ರವು ದೇಹದ ಜೈವಿಕ ಕಾರ್ಯಗಳಿಗೆ ಅಗತ್ಯ. ಹೆಚ್ಚುವರಿ ಶುದ್ಧ ಲೋಹವು ಅಪಾಯಕಾರಿ.
ಹೆಚ್ಚುವರಿ ಶುದ್ಧಲೋಹವು ಯಾವ ಮೂಲದಿಂದ ಬಂದರೂ ಅಪಾಯಕಾರಿಯೇ. ಭಾರತದ ಪರಿಸರದಲ್ಲಿ ಇದು ಹಿತ್ತಾಳೆ ಪಾತ್ರೆ/ತಾಮ್ರದ ಪಾತ್ರೆಯ ಮೂಲಕವೇ ಬಂದಿದೆ. ಇತರ ದೇಶಗಳಲ್ಲಿ ಇತರ ಮೂಲಗಳಿಂದ ಬರಬಹುದು.
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ನೆಚ್ಚಿನ ಡಾ. ಸೋಮೇಶ್ವರರಿಗೆ
ತಮ್ಮಿಂದ ಮತ್ತೊಂದು ಸೊಗಸಾದ ಲೇಖನ ಮೂಡಿದೆ.
ಮುಸಲ್ಮಾನರಲ್ಲಿ ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳು ಏಕೋ ಬಳಸುತ್ತಿದ್ದಿಲ್ಲವೆಂದು ತಿಳಿಸಿದ್ದಿರಿ. ಇಂದಿಗೂ ಮುಸಲ್ಮಾನರ ಮದುವೆಗಳಲ್ಲಿ ಬಿರಿಯಾನಿ ತಯಾರಿಸುವುದು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳಲ್ಲಿ. ಆದರೆ ಒಳಭಾಗದಲ್ಲಿ ಹೊಳೆಹೊಳೆಯುವ ಕಲಾಯದ ಕೆಲಸವನ್ನು ಮಾಡಿರುತ್ತಾರೆ. (ತವರದ ಲೇಪನ) ಒಂದು ವೇಳೆ ಕಲಾಯದ ಕೆಲಸ ಹಳೆಯದಾಗಿದ್ದರೆ ಅಥವಾ ಒಂದೆರೆಡು ಕಡೆ ಸವೆದು ತಾಮ್ರ ಕಾಣಿಸುವಂತಿದ್ದಿದ್ದರೆ ಮರುಕಲಾಯದ ಕೆಲಸ ಮಾಡದೇ ಅದರಲ್ಲಿ ಅಡುಗೆ ಮಾಡುವುದಿಲ್ಲ. ಕಾರಣ ಕೇಳಿದರೆ ಕಲಾಯದ ಕೆಲಸವಾಗದ ಪಾತ್ರೆ ತಳ ಹತ್ತುತ್ತದೆ ಹಾಗೂ ಅಡುಗೆ ಹಾಳಾಗಿ ಹೋಗುತ್ತದೆ ಎಂಬ ಉತ್ತರವನ್ನು ಬಾಣಸಿಗರು ನೀಡುತ್ತಾರೆ. ಅಲ್ಲದೇ ಪಾತ್ರೆಯಲ್ಲಿ ಅವರು ಮೊದಲು ಗಮನಿಸುವುದು ಕಲಾಯದ ಕೆಲಸ ಸರಿ ಆಗಿದೆಯೋ ಇಲ್ಲವೋ ಎಂದು.
ಹಿಂದೆ ಮನೆಯಲ್ಲಿ ಉಪಯೋಗಿಸುತ್ತಿದ್ದ ಚಿಕ್ಕಪುಟ್ಟ ಪಾತ್ರೆಗಳಿಗೂ ಕಲಾಯದ ಕೆಲಸ ಮಾಡಿಸಲಾಗುತ್ತಿತ್ತು. ಭಹುಷ್ಯಃ ಈ ಲೇಪನ ತಾಮ್ರ ಅಥವಾ ಹಿತ್ತಾಳೆಯನ್ನು ನೀರಿನೊಂದಿಗೆ ಮಿಶ್ರವಾಗದ ರೀತಿಯ ಒಂದು ತಡೆಗೋಡೆಯಂತೆ ವರ್ತಿಸುತ್ತಿದ್ದಿರಬಹುದು. ಹಿಂದೆ ಈ ಕಲಾಯದ ಕೆಲಸಕ್ಕೂ ಕೊಂಚ ಖರ್ಚು ಮಾಡಬೇಕಾಗಿ ಬರುತ್ತಿದ್ದುದರಿಂದ ಮಧ್ಯಮವರ್ಗದವರು ಉಪಯೋಗಿಸುತ್ತಿರಲಾರರು. ಮುಸ್ಲಿಮರಿಗೆ ಇದ್ದ ಕಲಾಯದ ಕೆಲಸವಿಲ್ಲದ ಪಾತ್ರೆಯಲ್ಲಿ ಮಾಡಿದ ಅಡುಗೆ ಅಥವಾ ಪದಾರ್ಥ ಸರಿಯಾಗುವುದಿಲ್ಲ ಎಂಬ ನಂಬಿಕೆಯಿಂದ ಕಲಾಯವಿದ್ದ ಪಾತ್ರಗಳನ್ನೇ ಉಪಯೋಗಿಸಿದ್ದರಿಂದ ಈ ರೋಗ ಬರದೇ ಇದ್ದಿದ್ದಿರಬಹುದು.
ಏನೇ ಆಗಲಿ, ತಾಮ್ರ ಮೊದಲಾದ ಪಾತ್ರೆಗಳಲ್ಲಿ ಬಿಸಿ ಮಾಡಿದ ಆಹಾರದಿಂದ ಅಪಾಯವಿದೆ ಎಂಬುದನ್ನು ತಮ್ಮ ಲೇಖನದಿಂದ ಅರಿತೆವು. ಧನ್ಯವಾದಗಳು. ಇನ್ನಷ್ಟು ಉತ್ತಮ ಲೇಖನಗಳು ತಮ್ಮಿಂದ ಹೊರಬರಲಿ.
ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
ಉ: ಒಂದು ರೋಗದ ಸಾವಿನ ಸುತ್ತಮುತ್ತ………..
ನೆಚ್ಚಿನ ಡಾ. ಸೋಮೇಶ್ವರರಿಗೆ
ತಮ್ಮಿಂದ ಮತ್ತೊಂದು ಸೊಗಸಾದ ಲೇಖನ ಮೂಡಿದೆ.
ಮುಸಲ್ಮಾನರಲ್ಲಿ ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳು ಏಕೋ ಬಳಸುತ್ತಿದ್ದಿಲ್ಲವೆಂದು ತಿಳಿಸಿದ್ದಿರಿ. ಇಂದಿಗೂ ಮುಸಲ್ಮಾನರ ಮದುವೆಗಳಲ್ಲಿ ಬಿರಿಯಾನಿ ತಯಾರಿಸುವುದು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳಲ್ಲಿ. ಆದರೆ ಒಳಭಾಗದಲ್ಲಿ ಹೊಳೆಹೊಳೆಯುವ ಕಲಾಯದ ಕೆಲಸವನ್ನು ಮಾಡಿರುತ್ತಾರೆ. (ತವರದ ಲೇಪನ) ಒಂದು ವೇಳೆ ಕಲಾಯದ ಕೆಲಸ ಹಳೆಯದಾಗಿದ್ದರೆ ಅಥವಾ ಒಂದೆರೆಡು ಕಡೆ ಸವೆದು ತಾಮ್ರ ಕಾಣಿಸುವಂತಿದ್ದಿದ್ದರೆ ಮರುಕಲಾಯದ ಕೆಲಸ ಮಾಡದೇ ಅದರಲ್ಲಿ ಅಡುಗೆ ಮಾಡುವುದಿಲ್ಲ. ಕಾರಣ ಕೇಳಿದರೆ ಕಲಾಯದ ಕೆಲಸವಾಗದ ಪಾತ್ರೆ ತಳ ಹತ್ತುತ್ತದೆ ಹಾಗೂ ಅಡುಗೆ ಹಾಳಾಗಿ ಹೋಗುತ್ತದೆ ಎಂಬ ಉತ್ತರವನ್ನು ಬಾಣಸಿಗರು ನೀಡುತ್ತಾರೆ. ಅಲ್ಲದೇ ಪಾತ್ರೆಯಲ್ಲಿ ಅವರು ಮೊದಲು ಗಮನಿಸುವುದು ಕಲಾಯದ ಕೆಲಸ ಸರಿ ಆಗಿದೆಯೋ ಇಲ್ಲವೋ ಎಂದು.
ಹಿಂದೆ ಮನೆಯಲ್ಲಿ ಉಪಯೋಗಿಸುತ್ತಿದ್ದ ಚಿಕ್ಕಪುಟ್ಟ ಪಾತ್ರೆಗಳಿಗೂ ಕಲಾಯದ ಕೆಲಸ ಮಾಡಿಸಲಾಗುತ್ತಿತ್ತು. ಭಹುಷ್ಯಃ ಈ ಲೇಪನ ತಾಮ್ರ ಅಥವಾ ಹಿತ್ತಾಳೆಯನ್ನು ನೀರಿನೊಂದಿಗೆ ಮಿಶ್ರವಾಗದ ರೀತಿಯ ಒಂದು ತಡೆಗೋಡೆಯಂತೆ ವರ್ತಿಸುತ್ತಿದ್ದಿರಬಹುದು. ಹಿಂದೆ ಈ ಕಲಾಯದ ಕೆಲಸಕ್ಕೂ ಕೊಂಚ ಖರ್ಚು ಮಾಡಬೇಕಾಗಿ ಬರುತ್ತಿದ್ದುದರಿಂದ ಮಧ್ಯಮವರ್ಗದವರು ಉಪಯೋಗಿಸುತ್ತಿರಲಾರರು. ಮುಸ್ಲಿಮರಿಗೆ ಇದ್ದ ಕಲಾಯದ ಕೆಲಸವಿಲ್ಲದ ಪಾತ್ರೆಯಲ್ಲಿ ಮಾಡಿದ ಅಡುಗೆ ಅಥವಾ ಪದಾರ್ಥ ಸರಿಯಾಗುವುದಿಲ್ಲ ಎಂಬ ನಂಬಿಕೆಯಿಂದ ಕಲಾಯವಿದ್ದ ಪಾತ್ರಗಳನ್ನೇ ಉಪಯೋಗಿಸಿದ್ದರಿಂದ ಈ ರೋಗ ಬರದೇ ಇದ್ದಿದ್ದಿರಬಹುದು.
ಏನೇ ಆಗಲಿ, ತಾಮ್ರ ಮೊದಲಾದ ಪಾತ್ರೆಗಳಲ್ಲಿ ಬಿಸಿ ಮಾಡಿದ ಆಹಾರದಿಂದ ಅಪಾಯವಿದೆ ಎಂಬುದನ್ನು ತಮ್ಮ ಲೇಖನದಿಂದ ಅರಿತೆವು. ಧನ್ಯವಾದಗಳು. ಇನ್ನಷ್ಟು ಉತ್ತಮ ಲೇಖನಗಳು ತಮ್ಮಿಂದ ಹೊರಬರಲಿ.
ಅರ್ಶದ್ ಹುಸೇನ್ ಎಂ.ಹೆಚ್, ದುಬೈ.