ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › narendra ರವರ ಬ್ಲಾಗ್

ಕಾರಂತರು ಮತ್ತು ಧರ್ಮ

May 13, 2007 - 12:27pm — narendra

ಸಮಾಜದ, ಪರಂಪರೆಯ, ಸನಾತನ ಧರ್ಮದ ಭಯ ಮತ್ತು ನಿಯಂತ್ರಣಗಳಾಚೆಯೂ ಒಂದು ಸಂಸಾರ ತಾನು ಏಕಘಟಕವಾಗಿ ಗಟ್ಟಿಯಾಗಿ ನಿಲ್ಲುವುದಕ್ಕಾಗಿಯೇ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವ್ಯಕ್ತಿಯ ವೈಯಕ್ತಿಕ ಧರ್ಮ ಮತ್ತು ಸಂಸಾರದ ಸಮಷ್ಟಿ ಧರ್ಮಗಳ ನಡುವೆಯೇ ಸಂಘರ್ಷ ಸುರುವಾದರೆ ಅಲ್ಲಿ ಹೊಂದಾಣಿಕೆಯಾಗಲೀ ಸಹಜೀವನವಾಗಲೀ ಸಾಧ್ಯವೆ?

ತನ್ನ ತಾಯಿ ಪರಪುರುಷನ ಹಾಸುಗೆಯ ವಸ್ತುವಾಗುವುದನ್ನು ಮನಸಾ ಒಪ್ಪಿಕೊಳ್ಳಲಾರದ ಶ್ವೇತಕೇತು ತನ್ನ ತಾಯಿಯನ್ನು ಯಾರೋ ಉದ್ಧಾಲಕನ ಪತ್ನಿ ಎಂದುಕೊಂಡು ತಾನು ನಂಬಿದ ಮೌಲ್ಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಾಗುವುದೆ? ಸಾಧ್ಯವಿಲ್ಲದಾಗ ಏನು ಪರಿಹಾರ? ಘಟಸ್ಫೋಟ?

ಬ್ರಾಹ್ಮಣ್ಯಕ್ಕೆ ಅಪವಾದದಂತೆ ಬದುಕಿದ ನಾರಣಪ್ಪ, ಮತ್ತೆ ಮದುವೆಯಾಗಲು ಬಯಸುವ ಕಾತ್ಯಾಯಿನಿ, ವಿದೇಶಿ ಹುಡುಗಿಯನ್ನು ಮದುವೆಯಾಗುವ ಸನಾತನಿಯ ಏಕೈಕ ಕುಲಪುತ್ರ, ಕೀಳುಜಾತಿಯವನೊಂದಿಗೆ ಓಡಿ ಹೋಗುವ ಪುರೋಹಿತರ ಮಗಳು, ಮುಸ್ಲಿಂ ಹುಡುಗನನ್ನು ಮದುವೆಯಾಗುವ ನರಸಿಂಹ ಗೌಡರ ಮಗಳು...

ಇದು ಗಂಡು ಹೆಣ್ಣು ಸಂಬಂಧಗಳು ಸಂಸಾರದಲ್ಲಿ ಎಬ್ಬಿಸುವ ಬಿರುಗಾಳಿಗಷ್ಟೇ ಸೀಮಿತವಲ್ಲ. ಹೊಸ ಮೌಲ್ಯಗಳು ಹಳೆಯದರೊಂದಿಗೆ, ಪರಂಪರೆಯೊಂದಿಗೆ ಹೂಡುವ ಸಂಘರ್ಷ ಮಾತ್ರವಲ್ಲ. ಮಾನವೀಯತೆ ಎಂಬ ಸರಳವಾದ ಒಂದು ಸಂಗತಿ ಯಾವುಯಾವುದರ ಜೊತೆಗೆಲ್ಲ ನಡೆಸಲೇ ಬೇಕಾಗಿಬಂದ ಜಿದ್ದಾಜಿದ್ದಿ ಅನಿಸುತ್ತದೆ. ಈ ಅಸಹ್ಯಕರ ಬೆಳವಣಿಗೆ ಇಂದಿನ ಕಾಲಮಾನದ ಸ್ವರೂಪವನ್ನು ನಿರ್ಧರಿಸುತ್ತದೆ.

ಅದೇ ಶಿವರಾಮ ಕಾರಂತರ ಕಾದಂಬರಿಗಳನ್ನು ಗಮನಿಸಿ. ಕಾರಂತರ ಅನೇಕ ಕಾದಂಬರಿಗಳಲ್ಲೂ ಪುರೋಹಿತಶಾಹಿಯನ್ನೆ ನೆಚ್ಚಿದ ಬ್ರಾಹ್ಮಣ ಕುಟುಂಬಗಳಿವೆ. ಅಲ್ಲಿಯೂ ಇಂಥ ಮದುವೆಗಳು, ಓಡಿಹೋಗುವುದು, ವಿಷಮಘಳಿಗೆಯಲ್ಲಿ ಕಾಲುಜಾರುವುದು ಎಲ್ಲ ಇದೆ. ಮಠದ ಸ್ವಾಮಿ, ಯೋಗಿ, ಸಂನ್ಯಾಸಿಗಳೆಲ್ಲ ಕಾರಂತರ ಹೆಚ್ಚಿನ ಕಾದಂಬರಿಗಳ ಭಾಗವೇ ಆಗಿದ್ದಾರೆನ್ನಬಹುದು. ಜಗದೋದ್ಧಾರನಾ ಕಾದಂಬರಿಯಲ್ಲಿ ವಿಷ್ಣುವಿನ ದಶಾವತಾರದ ಸಮಕಾಲೀನ ಅನುಸಂಧಾನವಿದ್ದರೆ ನಂಬಿದವರ ನಾಕ ನರಕದಲ್ಲಿ ಭಾವಾನಂದ ಸ್ವಾಮಿಗಳ ಮುಖವಾಡದ ಚಿತ್ರವಿದೆ. ಆಳ ನಿರಾಳದಲ್ಲಿ ಯಾತ್ರಾ ಡಿಲಕ್ಸ್ ಎಂಬ ತೀರ್ಥಯಾತ್ರೆಯ ರೈಲು ಪ್ರಯಾಣ ಜನಸಾಮನ್ಯರ ಬದುಕಿನ ಆಧ್ಯಾತ್ಮ, ಧಾರ್ಮಿಕ ಡಾಂಭಿಕತೆಯನ್ನು ಇನ್ನಿಲ್ಲದಂತೆ ಕಣ್ಣಿಗೆ ಕಟ್ಟುತ್ತದೆ.

ಬಾಲ್ಯ ಸಖನೋ ಸಹಪಾಠಿಯೋ ಅಥವಾ ಸ್ವಂತ ಊರಿನವನೋ ಆದ ಒಬ್ಬ ವ್ಯಕ್ತಿ ಪರಿಸ್ಥಿತಿ, ಜನರ ಮೌಢ್ಯಗಳನ್ನೇ ಬಂಡವಾಳ ಮಾಡಿಕೊಂಡು ದೂರದ ಯಾವುದೋ ಒಂದು ಊರಿನಲ್ಲಿ ದೊಡ್ಡ ಸಂತನ ಪಟ್ಟಕ್ಕೇರುವುದನ್ನೂ, ಈ ಬಾಲ್ಯದ ಗೆಳೆಯನಿಂದ, ಸಹಪಾಠಿಯಿಂದ ಅಥವಾ ಊರಿನವನಿಂದ ಎಲ್ಲಿ ತನ್ನ ನಿಜರೂಪ ಪತ್ತೆಯಾಗಿ ರಹಸ್ಯ ಬಯಲಾಗುವುದೋ ಎಂದು ಹೆದರುವುದನ್ನೂ ಅವರ ಅನೇಕ ಕಾದಂಬರಿಗಳಲ್ಲಿ ಕಾಣಬಹುದು. ಇದಕ್ಕೆ ಅವರ ನಿಜಜೀವನದ ಒಂದು ಘಟನೆಯೂ ಕಾರಣ ಎನ್ನುವವರಿದ್ದಾರೆ.

ಹೆಚ್ಚಿನ ಕಡೆ ನೇರ ಅಭಿವ್ಯಕ್ತಿ ಇದ್ದರೂ ಕಾರಂತರ ಕಾದಂಬರಿಗಳಲ್ಲೂ ಧರ್ಮಸಂಕಟಗಳಿಗೆ, ಸಂದಿಗ್ಧಗಳಿಗೆ ಕೊರತೆಯಿಲ್ಲ. ಆದರೆ ಕಾರಂತರ ಯಾವ ಪಾತ್ರವೂ ಕಾನೂನಿನ ಪುಸ್ತಕಗಳಲ್ಲಿ, ಧರ್ಮಶಾಸ್ತ್ರಗಳಲ್ಲಿ ಪರಿಹಾರದ ಜಿಜ್ಞಾಸೆ ಹುಡುಕಲು ಹೊರಡುವುದಿಲ್ಲ. ಹೆಚ್ಚೆಂದರೆ ರಾಮಾಯಣ, ಮಹಾಭಾರತದ ಪಾತ್ರಗಳು ತಾವು ಕಂಡ ಯಕ್ಷಗಾನ ಪ್ರಸಂಗದಲ್ಲಿ ಹೇಗೆ ವರ್ತಿಸಿದವು ಎಂಬುದರಾಚೆ ಅವು ನಂಬುವುದು ಮನುಷ್ಯತ್ವವನ್ನು. ಸಮಾಜದ ಆರೋಗ್ಯಕ್ಕೆ ಬೇಕೇ ಬೇಕಿರುವ ಮೌಲ್ಯವನ್ನು. ಅವರ ಮೂಕಜ್ಜಿಯ ಕನಸುಗಳು ಕಾದಂಬರಿಯಂತೂ ಅನುಭವದಿಂದ ಮಾಗಿದ ಮನಸ್ಸು ಕಂಡುಕೊಂಡ ಹೊಸ ಮೌಲ್ಯಗಳ, ಹೊಸ ಅರ್ಥಗಳ ಹೊಸ ವ್ಯಾಖ್ಯಾನಗಳ ಖನಿಯೇ ಸರಿ.ಕಾರಂತರ ಪಾತ್ರಗಳು ಒಟ್ಟಾರೆ ಸಂಸಾರದ ಸುಖಕ್ಕೆ, ಸಮಾಜದಲ್ಲಿ ಇರುವ ಹೆಸರು, ಸ್ಥಾನಮಾನಕ್ಕೆ ಚ್ಯುತಿ ಬರಬಾರದೆನ್ನುವಾಗಲೂ ಮನುಷ್ಯತ್ವವನ್ನು ಬಿಟ್ಟುಕೊಡುವ ಮನೋಧರ್ಮವನ್ನು ಕಾರಂತರು ಎತ್ತಿ ಹಿಡಿಯುವುದಿಲ್ಲ. ನಮ್ಮ ನಿಮ್ಮ ದೈನಂದಿನಗಳು ನಡೆಯುವುದೇ ಹೀಗೆ.

ಸಂಸಾರದ ಅನನ್ಯತೆಯನ್ನು ಕಾಪಾಡುವುದು ಕೊನೆಗೂ ಇದೇ. ಧರ್ಮಶಾಸ್ತ್ರವಲ್ಲ. ಕಾನೂನೂ ಅಲ್ಲ. ಸಂಸಾರಕ್ಕೆ ಅನ್ವಯವಾದದ್ದು ಸಮಾಜಕ್ಕೂ ಅನ್ವಯವಾಗುತ್ತದೆ. ಯಾಕೆಂದರೆ ಸಮಾಜ ಕೂಡ ಒಂದು ಸಂಸಾರವಿದ್ದಂತೆಯೇ. ಅಲ್ಲಿಯೂ ವೈವಿಧ್ಯ, ವಿರೋಧ, ಒಳ್ಳೆಯದು, ಕೆಟ್ಟದು ಜೊತೆಜೊತೆಯಾಗಿ ಇರುತ್ತ ಸಾಮರಸ್ಯ ಮುಖ್ಯ. ಅದೇ ಅದರ ಆರೋಗ್ಯದ ನಿರ್ಣಾಯಕ ಅಂಶ, ಅಲ್ಲವೇ?

ಅಶೋಕ ಹೆಗಡೆಯವರ ಇತ್ತೀಚಿನ ಕಾದಂಬರಿ ಅಶ್ವಮೇಧ ಕೂಡ ಸರಿ ಸುಮಾರು ಹಳೆಯ ತಲೆಮಾರಿನವರ ಒಂದು ಕತೆಯನ್ನೆ ಒಳಗೊಂಡಿದೆ. ಅಲ್ಲಿಯೂ ಸನಾತನಿಯಾದ ಗಣೇಶ ಹೆಗಡೆಯವರ ಮಗಳು ನಿರ್ಮಲೆ ಅಸ್ಪೃಶ್ಯನೂ ಮನೆಗೆಲಸದವಳ ಮಗನೂ ಆದ ಬಾಲ್ಯಸಖ ಕೃಷ್ಣನೊಂದಿಗೆ ಮದುವೆಯ ದಿನವೇ ಓಡಿಹೋಗುತ್ತಾಳೆ. ಗಣೇಶ ಹೆಗಡೆ ಎಷ್ಟು ಸನಾತನಿಯೆಂದರೆ ಇದರಿಂದ ಆತನಿಗೆ ಹುಚ್ಚೇ ಹಿಡಿಯುತ್ತದೆ. ಊರ ಸನಾತನಿ ಬ್ರಾಹ್ಮಣರು, ಮಠ ಎಲ್ಲ ಈ ಸಂದರ್ಭದಲ್ಲಿ ವರ್ತಿಸುವ ರೀತಿ ವಿಭಿನ್ನವಾಗಿದೆ. ಇಲ್ಲಿ ಶಾಸ್ತ್ರಕ್ಕಿಂತ ವ್ಯವಹಾರ ಮುಖ್ಯವಾಗುವುದು ಅಚ್ಚರಿ. ಹುಚ್ಚು ಹಿಡಿದ ಗಣೇಶ ಹೆಗಡೆಯವರ ಆಸ್ತಿ ಕಬಳಿಸಲು ಮಠದಾದಿಯಾಗಿ ಹಲವರು ಜೊಲ್ಲುಸುರಿಸುವುದು ಕಾಣಬಹುದಿಲ್ಲಿ. ಯಾಕೆ ಹೀಗೆ? ಅಶೋಕರು ನಮ್ಮ ತಲೆಮಾರಿನವರಾದ್ದರಿಂದ ಈ ರೀತಿಯಾಯಿತೆ ಅಥವಾ ಆ ತಲೆಮಾರು ಇಂಥ ಮೌಲ್ಯ, ಪ್ರಾಶಸ್ತ್ಯ, ಕುಯುಕ್ತಿಗಳನ್ನು ಪ್ರಾಣೇಶಾಚಾರ್ಯರಂಥವರ, ಶ್ರೀನಿವಾಸ ಶ್ರೋತ್ರಿಗಳಂಥವರ ಮೌಲ್ಯ, ಪ್ರಾಶಸ್ತ್ಯಗಳ ಜೊತೆ ಜೊತೆಗೇ ಹೊಂದಿತ್ತೆ?

~.~
  • narendra ರವರ ಬ್ಲಾಗ್
  • Login or register to post comments
  • 714 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 13, 2007 - 2:01pm — ವೈಭವ

ಉ: ಕಾರಂತರು ಮತ್ತು ಧರ್ಮ

ವೈಭವ's picture

"....ನಿಯಂತ್ರಣಗಳಾಚೆಯೂ ಒಂದು ಸಂಸಾರ ತಾನು ಏಕಘಟಕವಾಗಿ ಗಟ್ಟಿಯಾಗಿ ನಿಲ್ಲುವುದಕ್ಕಾಗಿಯೇ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ...."

ಇಲ್ಲಿ 'ಏಕಘಟಕ' ಅಂದ್ರೆ ಏನು? ನಾನು 'ಒಗ್ಗಟ್ಟು' ಅಂತ ತಲೆಗಿಳಿಸಿಕೊಂಡೆ......ಒಸಿ ಬಿಡಿಸಿ ಹೇಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2007 - 9:07pm — narendra

ಉ: ಕಾರಂತರು ಮತ್ತು ಧರ್ಮ

narendra's picture

ಒಗ್ಗಟ್ಟು ಅಂತ ಆಶಯದ ಮಟ್ಟಿಗೆ ಸರಿಯಾಗಿಯೇ ಗ್ರಹಿಸಿದ್ದೀರಿ. ಆದರೂ ಇದು ಅವಿಭಕ್ತ ಕುಟುಂಬದ ವಿಘಟನೆಗೆ ಸಂಬಂಧಿಸಿದ್ದು. ಒಂದು ಕುಟುಂಬದಲ್ಲಿ ಒಗ್ಗಟ್ಟು ಪ್ರಶ್ನೆಯಾಗುವುದು ಹೊರಗಿನ ಒತ್ತಡಗಳ ಎದುರಿಗೆ. ಇಲ್ಲಿ ಚರ್ಚೆ ಇರುವುದು ಕುಟುಂಬದ ಒಳಗಿನ ಒತ್ತಡಗಳ ಕುರಿತಾದ ಕುಟುಂಬ ಸದಸ್ಯರ ನಡುವಿನ ಹೊಂದಾಣಿಕೆಗಳ ಬಗ್ಗೆ. ಶ್ವೇತಕೇತು ಮತ್ತು ಉದ್ಧಾಲಕರ ನಡುವೆ ಒಗ್ಗಟ್ಟಿಗೆ ಬಾಧಕವೇನಿಲ್ಲ. ಆದರೆ ಮೌಲ್ಯಗಳ ಭೇದವಿದೆ. ಇಬ್ಬರ ನೀತಿ, ನಿಯಮ, ಧರ್ಮ ಬೇರೆಯಾದಾಗ ಸಹಜೀವನ ಕಷ್ಟವಾಗುತ್ತದೆ. ಆಗ ವಿಘಟನೆಯೇ ಪರಿಹಾರವೆ ಎಂಬುದು ಇಲ್ಲಿನ ಪ್ರಶ್ನೆ. ದಯವಿಟ್ಟು ಈ ಚರ್ಚೆಯ ಮೊದಲ ಬರಹದಿಂದ (ಪ್ರಸ್ತುತ ಬರಹ ಐದನೆಯದು) ಓದಿ. ಯಾಕೆಂದರೆ ಇದು ಕುಟುಂಬದ ಒಡಕಿಗೆ ಕಾರಣವಾದ ಹಾಗೆಯೇ ದೇಶದ ಒಡಕಿಗೂ ಸಂಬಂಧಿಸಿದ ಪ್ರಶ್ನೆಯಾದ್ದರಿಂದ ಇದನ್ನು ಕುರಿತು ಕೆಲವು ಕ್ಷಣ ನಿಮ್ಮಂಥವರು ಯೋಚಿಸಿದರೆ ನಮ್ಮಂಥವರಿಗೆ ಲಾಭವಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2007 - 11:30pm — ವೈಭವ

ಉ: ಕಾರಂತರು ಮತ್ತು ಧರ್ಮ

ವೈಭವ's picture

ನಿಮ್ಮ ಬರಹ ಓದಿದ್ದೀನಿ ಸಾರ್... ನಿಮ್ಮ ಬರವಣಿಗೆ ಚೆನ್ನಾಗಿದೆ...ತಮಗೆ ಅದಕ್ಕೆ ನನ್ನಿ

ಆದರೆ 'ಏಕ ಘಟಕ' ಹಿಂದೆ ನಾನೆಲ್ಲೂ ಕೇಳಿರಲಿಲ್ಲ...ಕ.ರಾ.ರ.ಸಾ.ಸಂ ರವರು ಬಸ್ ಡಿಪೊಗೆ 'ಘಟಕ' ಅಂತಾರೆ... ನನಗೆ ಗಲಿಬಿಲಿಯಾಯ್ತು.. ಅದಕ್ಕೆ ಕೇಳಿದೆ...ಗೊತ್ತಿಲ್ಲದಿದ್ದನ್ನು ಕೇಳಿ ತಿಳಿಯಬಹುದಲ್ಲವೆ ?

ಮತ್ತೆ "....ಯಾಕೆಂದರೆ ಇದು ಕುಟುಂಬದ ಒಡಕಿಗೆ ಕಾರಣವಾದ ಹಾಗೆಯೇ ದೇಶದ ಒಡಕಿಗೂ ಸಂಬಂಧಿಸಿದ ಪ್ರಶ್ನೆಯಾದ್ದರಿಂದ ಇದನ್ನು ಕುರಿತು ಕೆಲವು ಕ್ಷಣ ನಿಮ್ಮಂಥವರು ಯೋಚಿಸಿದರೆ ನಮ್ಮಂಥವರಿಗೆ ಲಾಭವಿದೆ....."

ಇದರ ತಿರುಳು ಏನು??....ನಮ್ಮಂಥವರು ಅಂದ್ರೆ ? ನಿಮ್ಮಂಥವರು ಅಂದ್ರೆ ?? ಸರಿಯಾಗಿ ತಳೆಗಿಳಿಯಲಿಲ್ಲ... Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 2:02am — gangadharg

ಉ: ಕಾರಂತರು ಮತ್ತು ಧರ್ಮ

gangadharg's picture

ಯಾಕೆ ಸಾರ್ ಕಛೇರಿ.. ??

ಇಲ್ಲಿ ನೋಡಿ ಸಾರ್.... [url=http://www.sampada.net/policies_and_guidelines]
http://www.sampada.net/policies_and_guidelines
[/url]

೩. ನಿಮ್ಮ ಬರೆಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ.
ಹಾಗೆಂದು ಈಗಾಗಲೇ ನಡೆಯುತ್ತಿರುವ ಚರ್ಚೆ ಸಂವಾದಗಳನ್ನು ದಾರಿ ತಪ್ಪಿಸುವಂತಿರಬಾರದು. ಹಾಗೆಯೇ
ಇದು ವೈಯಕ್ತಿಕ ಟೀಕೆಗಳು, ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 10:41am — ವೈಭವ

ಉ: ಕಾರಂತರು ಮತ್ತು ಧರ್ಮ

ವೈಭವ's picture

ಸಾರ್,
ಅದನ್ನೆ ನಾನು ಮಾಡ್ತಾ ಇರೋದು... ನಾ ಬರೆದಿರುವುದನ್ನು ಒಸಿ ಸರಿಯಾಗಿ ಓದಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 7:16pm — narendra

ಉ: ಕಾರಂತರು ಮತ್ತು ಧರ್ಮ

narendra's picture

ನಿಮ್ಮಂಥವರು ಅಂದ್ರೆ, ಇಂಥ ಲೇಖನ ಓದಿ ಒಂದೆರಡು ಮಾತಾದರೂ ಬರೆದು ನನ್ನಂಥವರು ಬರೆದಿದ್ದನ್ನು ಓದುವವರು ಇದ್ದಾರೆ ಎಂಬ ಧೈರ್ಯ ಕೊಡುವವರು. ಇನ್ನು ನನ್ನಂಥವರು ಅಂದ್ರೆ ಹೀಗೆಲ್ಲ ಬರೆಯಲಿಕ್ಕೆ ಇಷ್ಟ ಪಡೋರು, ಅಷ್ಟೆ. ಎಷ್ಟಂದ್ರೂ ನನ್ನಂಥವರಿಗೆ ಸ್ವಲ್ಪ ದೊಡ್ಡ ದೊಡ್ದ ಶಬ್ದ ಹಾಕಿ ಪಾಂಡಿತ್ಯ ಮೆರೆಸುವ ಚಟ ಇದ್ದೇ ಇರುತ್ತೆ ಮಾರಾಯ್ರೆ. ಅದ್ಕೇ ಘಟಕ ಘಿಟಕ ಅಂತೆಲ್ಲ ಬರೆದು ನಿಮ್ಮ ತಲೆ ತಿನ್ನೋದು! ಇದನ್ನೇ ತೇಜಸ್ವಿ ಹೇಳತಿದ್ರಂತೆ, ವರ್ಬಲ್ ಡೈರಿಯಾ ಅಂತ! ಬಿಡಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 8:26pm — ismail

ಉ: ಕಾರಂತರು ಮತ್ತು ಧರ್ಮ

ismail's picture

ಬಹುಶಃ ಸಿಂಗಲ್ ಯೂನಿಟ್ ಎಂಬುದನ್ನು ನರೇಂದ್ರ ಏಕ ಘಟಕ ಎಂದು ಬರೆದಂತೆ ಕಾಣಿಸುತ್ತದೆ. ಬಳಕೆಯ ಸಂದರ್ಭವೂ ಅದನ್ನೇ ಧ್ವನಿಸುತ್ತಿದೆ. ಇದೇನು ದೊಡ್ಡ ಶಬ್ದ ಅಲ್ಲ. ಪರಿಕಲ್ಪನೆಗಳು ಅನುವಾದಗೊಳ್ಳುವಾಗ ಇಂಥ ಶಬ್ದಗಳು ಬರುತ್ತವೆ. ಲೇಖನವನ್ನು ಒಟ್ಟಾರೆಯಾಗಿ ಗ್ರಹಿಸುವವರಿಗೆ ಇದೇನು ತೊಂದರೆ ಕೊಡಲಾರದು.  

ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 11:45pm — ವೈಭವ

ಉ: ಕಾರಂತರು ಮತ್ತು ಧರ್ಮ

ವೈಭವ's picture

ದೊಡ್ಡ ಶಬ್ದಗಳನ್ನ ತಲೆಗಿಳಿಸಬಹುದು....ಇಂತ ಚಿಕ್ಕ ಒರೆಗಳು ತಲೆತಿನ್ನುತ್ತವೆ.. Smiling

ಒಟ್ಟಾರೆಯಾಗಿ ಅರಿತರೂ ನನ್ನ ತಲೆಗೆ ಹೊಳಿಲಿಲ್ಲ ಸ್ವಾಮಿ......ಅದಕ್ಕೆ ಕೇಳಿ ತಿಳಿದುಕೊಂಡೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 8:42pm — mahesha

ಉ: ಕಾರಂತರು ಮತ್ತು ಧರ್ಮ

mahesha's picture

ನಾನು general ಆಗಿ ಒಂದು ಸಂಗತಿ ನಿಮ್ಮೊಡ ಹಂಚಿಕೊಳ್ಳಬಯಸುವೆನು.

೧. ಸಂಸ್ಕೃತದಲ್ಲಿ, ಸಂಸ್ಕೃತಪದಗಳಲ್ಲಿ ಉಪಸರ್ಗದ ಗೊಂದಲಕ್ಕೆ ಕೊನೆಯೇ ಇಲ್ಲ!! ಅಂದರೆ ಉಪಸರ್ಗ ಹಾಕಿದರೆ ಪದದ ಅರ್ಥ ಹೇಗೆ ಬದಲಾಗುವುದೆಂದು ಹೇಳಲಾಗುವುದಿಲ್ಲ. ಅದಕ್ಕೆ ಹೊಸದಾಗಿ ಉಪಸರ್ಗ ಸೇರಿಸಿ ಮಾಡಿದ ಪದಗಳ ಅರ್ಥ ಹೀಗೇ ಎಂದು ಹೇಳಲಾಗದೇ, ಅದು ಗೊಂದಲಕ್ಕೆ ಎಡೆ ಮಾಡಿಕೊಡುತ್ತದೆ.

ಉಪವಾಸ, ಉಪಹಾರ, ಉಪನದಿ, ಇಲ್ಲಿ ಉಪ ಹೇಗೆ ವಾಸ, ಹಾರ, ನದಿ ಪದಗಳ ಅರ್ಥ ಬದಲಿಸಿತು ಹೇಳಲಾಗದು ಅಲ್ವಾ!!
ಆಹಾರ, ವಿಹಾರ, ಪ್ರಹಾರ, ಪ್ರತ್ಯಾಹಾರ, ಹಾರ ಇವೆಲ್ಲ 'ಹಾರ' ದಿಂದ ಬಂದರೂ ಅರ್ಥ ಹೇಗೆ ಬದಲಾಯಿತು ಎಂದು ಹೇಳಲು ಸರಿಯಾದ ಸೂತ್ರವೂ ಇಲ್ಲ, ಹೇಳಲು ಸಾಧ್ಯವೇ ಇಲ್ಲ.

ಅದಕ್ಕೆ ನಾವು ಹೊಸ ಉಪಸರ್ಗ ಹಾಕಿ ಹೊಸ ಸಂಸ್ಕೃತದ ಪದವನ್ನು ಹುಟ್ಟಿಸುವುದು ಮತ್ತೊಂದು ಗೊಂದಲವನ್ನು ಹುಟ್ಟು ಹಾಕಿದಂತೆ.

ಈ ಕಾರಣದಿಂದ ವೈಬವ ನಿಮಗೆ ಗೊಂದಲದ ಪರಿಹಾರ ಹೇಳಿರಬೇಕೆಂದು ನನ್ನ ಊಹೆ.

ಇದು ಸಿಕ್ಕಾಪಟ್ಟೆ ಕೊರೆತ ಅಂತ ಅನ್ನಿಸಿದರೆ, ಇದನ್ನು ಕಡೆಗಣಿಸಬವುದು.

೨. ಒಂದೇ ಪದವನ್ನು ಬೇರೆ ಬೇರೆ ಕೆಡೆ ಬೇರೆ ಬೇರೆ ಅರ್ಥದಲ್ಲಿ ಬಳಸುವುದು ಸಂಸ್ಕೃತದ ಪದಗಳ ಸೊಬಗನ್ನು ಹೆಚ್ಚಿಸಿದರೂ, ಮಾಮೂಲಿ ಮಂದಿಗೆ ಅವು ಪ್ರಾಣ ತಿನ್ನುತ್ತವೆ. ಕನ್ನಡದಲ್ಲೂ ಒಂದೇ ಒರೆಗೆ ಹಲವರ್ಥಗಳಿವೆ. ಆದರೆ ಸಂಸ್ಕೃತದಲ್ಲಿ ಇಂತಹವು ಸಿಕ್ಕಾಪಟ್ಟೆ.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 12:16am — hamsanandi

ಉ: ಕಾರಂತರು ಮತ್ತು ಧರ್ಮ

hamsanandi's picture

ನೀವು general ಆಗಿ ಬರೆದ ಸಂಗತಿಗೆ ನನ್ನ general ಆದ ಟಿಪ್ಪಣಿ Smiling

Quote:
ಉಪವಾಸ, ಉಪಹಾರ, ಉಪನದಿ, ಇಲ್ಲಿ ಉಪ ಹೇಗೆ ವಾಸ, ಹಾರ, ನದಿ ಪದಗಳ ಅರ್ಥ ಬದಲಿಸಿತು ಹೇಳಲಾಗದು ಅಲ್ವಾ!!
ಆಹಾರ, ವಿಹಾರ, ಪ್ರಹಾರ, ಪ್ರತ್ಯಾಹಾರ, ಹಾರ ಇವೆಲ್ಲ 'ಹಾರ' ದಿಂದ ಬಂದರೂ ಅರ್ಥ ಹೇಗೆ ಬದಲಾಯಿತು ಎಂದು ಹೇಳಲು ಸರಿಯಾದ ಸೂತ್ರವೂ ಇಲ್ಲ, ಹೇಳಲು ಸಾಧ್ಯವೇ ಇಲ್ಲ.

ಅದಕ್ಕೆ ನಾವು ಹೊಸ ಉಪಸರ್ಗ ಹಾಕಿ ಹೊಸ ಸಂಸ್ಕೃತದ ಪದವನ್ನು ಹುಟ್ಟಿಸುವುದು ಮತ್ತೊಂದು ಗೊಂದಲವನ್ನು ಹುಟ್ಟು ಹಾಕಿದಂತೆ.

ಉಪಸರ್ಗದಿಂದ ಪದಗಳ ಬದಲಾವಣೇ ಒಂದೇ ರೀತಿ ಆಗದು ಎಂಬುದು ನಿಜವಾದರೂ ಏಕ ಘಟಕ ಎನ್ನುವ ಪ್ರಯೋಗದಲ್ಲಿ ಉಪಸರ್ಗ ಯಾವುದೂ ಕಾಣ್ತಿಲ್ವಲ್ರೀ?

ಆಸಕ್ತಿಯಿದ್ದವರಿಗೆ - ಮಹೇಶರು ಕೊಟ್ಟಿರುವ ಉದಾಹರಣೆಗಳು ಇಲ್ಲಿಂದ ಬಂದಿವೆ:

ಉಪಸರ್ಗೇಣ ಧಾತ್ವರ್ಥಃ ಬಲಾದನ್ಯತ್ರ ನೀಯತೇ |
ಪ್ರಹಾರ ಆಹಾರ ಸಂಹಾರ ವಿಹಾರ ಪರಿಹಾರವತ್ ||

[ಉಪಸರ್ಗವು ಧಾತುವಿನ ಅರ್ಥವನ್ನು ಬಲದಿಂದ ಬೇರೆಡೆಗೆ ಕೊಂಡೊಯ್ಯುತ್ತದೆ. ಉದಾಹರಣೆಗೆ (ಹೃ ಧಾತುವು) ಪ್ರಹಾರ (ಹೊಡೆತ), ಆಹಾರ, ಸಂಹಾರ (ಕೊಲ್ಲು) ವಿಹಾರ, ಪರಿಹಾರಗಳಂತೆ.]

ಈ ಶ್ಲೋಕ ಯಾವ ಪುಸ್ತಕದ್ದು ಎಂದು ನನಗೆ ತಿಳಿದಿಲ್ಲ - ಯಾವುದಾದರೂ ಪಾಣಿನಿಯ ಅಷ್ಟಾಧ್ಯಾಯಿಯ ವಿಮರ್ಶೆಮಾಡುವ ಪುಸ್ತಕದಿಂದಿರಬಹುದು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 10:09am — mahesha

ಉ: ಕಾರಂತರು ಮತ್ತು ಧರ್ಮ

mahesha's picture

ಹಂಸಾನಂದಿ ಸಾರ್‍...

ಅಲ್ಲಿ 'ಏಕಘಟಕ'ದ ಬಗ್ಗೆ ಉಪಸರ್ಗದ ಸಂಗತಿ ಹೇಳಿಲ್ಲ. ತುಸು ದಯವಿಟ್ಟು ಕೇಳೀ..

ವೈಬವರ ಗೊಂದಲಕ್ಕೆ ಉಲಿಯುತ್ತಾ, ಅವರು 'ಅವಿಭಕ್ತಿ, ವಿಘಟನೆ' ಇನ್ನೂ ಮುಂತಾದ ಉಪಸರ್ಗವಿರುವ ಒರೆಗಳನ್ನು ಹೇಳಿದ್ದಾರೆ. ವೈಬವರಿಗೆ 'ವಿಘಟನೆ' ಎಂಬ ಒರೆಯನ್ನು ತಿಳಿಯುವಲ್ಲಿ, ತುಸು ತೊಂದರೆಯಾಯಿತೆಂದು ಎಣಿಸಿ ಹಾಗ ಹೇಳಿದ್ದು.

ಉಪಸರ್ಗದ ಸ್ಲೋಕಕ್ಕಾಗಿ ನನ್ರಿ Smiling. ನೋಡಿರಿ ಅದೇ ಹೇಳುವುದು ಉಪಸರ್ಗದಿಂದಾಗುವ ಅರ್ತದ ಬದಲಾವಣೆಯನ್ನು ಹೀಗೇ ಎಂದು ಹೇಳಲಾಗುದು. ಉಪಸರ್ಗವು ದಾತುವಿನ ಅರ್ತವನ್ನು ಹೇಗೋ ಬೇರೆಡೆ ಕೊಂಡೊಯ್ಯುವುದು, ಎಂದು.

ಇದು ಪಾಣಿನಿ ಅಷ್ಟಾಧ್ಯಾಯಿಯ ಶ್ಲೋಕವಲ್ಲ ಅಂತ ನನ್ನ ನೆಪ್ಪು!

ಇರಲಿ. ಈಗ ಎಲ್ಲ ತಿಳಿಯಾಗಿ ಹೋಗಿದೆ!
==========================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 11:42pm — ವೈಭವ

ಉ: ಕಾರಂತರು ಮತ್ತು ಧರ್ಮ

ವೈಭವ's picture

ಹೀಗೆ ಬರೀತಾಇರಿ ಸಾರ್. ನನ್ನ ಮೆದುಳು ಒಸಿ ಓಡ್ಲಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2007 - 4:58pm — ಶ್ಯಾಮ ಕಶ್ಯಪ

ಉ: ಕಾರಂತರು ಮತ್ತು ಧರ್ಮ

ಶ್ಯಾಮ ಕಶ್ಯಪ's picture

ನಿಮ್ಮ ಲೇಖನ ಓದಿ ಖುಷಿಯಾಗಿದೆ. ಓದುತ್ತಾ ಓದುತ್ತ, ಹೌದು ಹೌದು ಅನ್ನೋಣ ಅನ್ನಿಸಿತು. ನಾನು ಕಾರಂತರ, ಯೂ. ಆರ್. ಎ ಮತ್ತು ಭೈರಪ್ಪನವರ ಕೆಲವೇ ಕೆಲವು ಕೃತಿಗಳನ್ನು ಓದಿದವನು. ಆದರೆ ಅದೃಷ್ಟಕ್ಕೆ ನೀವು ಹೇಳಿದ್ದನ್ನೆಲ್ಲ ಆ ಕೃತಿಗಳ ವ್ಯಾಪ್ತಿಯಲ್ಲಿ ಕಂಡಿದ್ದೇನೆ. ಕೆ. ವಿ. ಸುಬ್ಬಣ್ಣ ಪದೇ ಪದೇ ಹೇಳುತ್ತಿದ್ದ ಸಮುದಾಯ ಜ್ಞಾನವೆಂದರೆ ಇದೇ ಏನೋ... ವಿವಿಧ ಧರ್ಮ, ಸಂಸ್ಕೃತಿ, ಮೌಲ್ಯಗಳ ಮತ್ತು ಮಾನವೀಯತೆಯ ಘರ್ಷಣೆಯ ಒಟ್ಟು ಫಲಿತಾಂಶ?
ಒಟ್ಟಿನಲ್ಲಿ ನನ್ನ ತಲೆಯಲ್ಲಿ ಕಾರಂತರ ಬಗ್ಗೆಯಿದ್ದ charismaವನ್ನು ಹೆಚ್ಚುಮಾಡಿದಿರಿ,
ಧ್ಯನ್ಯವಾದಗಳು

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2007 - 9:15pm — narendra

ಉ: ಕಾರಂತರು ಮತ್ತು ಧರ್ಮ

narendra's picture

ದಯವಿಟ್ಟು ಈ ಸಂಪದ ಗಮನಿಸುತ್ತಿರಿ. ನನಗೆ ಇಲ್ಲಿ ಮುಂದೆ ಅಶೋಕ ಹೆಗಡೆಯವರ ಅಶ್ವಮೇಧ, ರಾವ್ ಬಹದ್ದೂರರ ಗ್ರಾಮಾಯಣ, ಎಂ.ಟಿ.ವಾಸುದೇವನ್ ನಾಯರ್ ಅವರ ವಾರಾಣಸಿ, ಶಂಕರ ಮೊಕಾಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ, ಡಿ ವೆಂಕಟರಾವ್ ಅವರ ಕೊನೆಯ ಬ್ರಾಹ್ಮಣ, ಬಾಳಾಸಾಹೇಬ ಲೋಕಾಪುರ ಅವರ ಉಧೋ ಉಧೋ, ಕೇಶವ ಮಳಗಿಯವರ ಅಂಗದ ಧರೆ, ಚಂದ್ರಕಾಂತ ಕುಸನೂರರ ಕೆರೂರುನಾಮಾ, ಶಾಂತಿನಾಥ ದೇಸಾಯಿಯವರ ಓಂ ಣಮೋ, ಯು ಆರ್ ಅನಂತಮೂರ್ತಿಯವರ ದಿವ್ಯ, ಕೆ. ಸತ್ಯನಾರಾಯಣರ ಕಾಲಜಿಂಕೆ, ಕಂಬಾರರ ಶಿಖರ ಸೂರ್ಯ ಎಂದೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶವಿದೆ. ನಿಮಗದು ಇಷ್ಟವಾಗಬಹುದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಕಶ್ಯಪ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 2:15am — gangadharg

ಉ: ಕಾರಂತರು ಮತ್ತು ಧರ್ಮ

gangadharg's picture

ಸಾರ್.... ನಿಮ್ಮ ಬರೆಹ ಓದಿ ಖುಷಿಯಾಯ್ತು.... ಹೀಗೆಯೇ ಬರೀತಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 2:21am — gangadharg

ಉ: ಕಾರಂತರು ಮತ್ತು ಧರ್ಮ

gangadharg's picture

ಸಾರ್... ನಿಮ್ಮ ಚಿತ್ರ ನನಗೆ ಅರ್ಧ ಕಾಣ್ತಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 3:13pm — aithalsandy

ಉ: ಕಾರಂತರು ಮತ್ತು ಧರ್ಮ

aithalsandy's picture

@ narendra

"ಕೊನೆಯ ಬ್ರಾಹ್ಮಣ" ಬರೆದೋರು ರಾಣಿ ಶಿವ ಶಂಕರ ಶರ್ಮ ಅನ್ಸುತ್ತೆ... ವೆಂಕಟ ರಾಯರು ಇಂಗ್ಲೀಷ್ ಗೆ ಅನುವಾದ ಮಾಡಿದ್ದಾರೆ. ಇದರ ಕನ್ನಡಾನುವಾದ ಇದೆಯಾ ? ಈ ಪುಸ್ತಕದ ಮೇಲೆ ಹೊಸ ಚರ್ಚೆ ಶುರು ಮಾಡಿ ಮಾರಾಯ್ರೇ..
Digital ರೂಪದಲ್ಲಿ ಈ ಪುಸ್ತಕ ಏನಾದರೂ ಸಿಗುತ್ತಾ ?

http://www.orientlongman.com/display.asp?isbn=978-81-7824-138-8

ಸಂದೀಪ್ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 7:09pm — narendra

ಉ: ಕಾರಂತರು ಮತ್ತು ಧರ್ಮ

narendra's picture

ನೀವು ಹೇಳಿರುವುದು ಸರಿ. ತಪ್ಪು ತಿದ್ದಿದ್ದಕ್ಕೆ ಕೃತಜ್ಞ. ರಾಣೀ ಶಿವಶಂಕರ ಶರ್ಮರ ತೆಲುಗು ಕಾದಂಬರಿಯ ಇಂಗ್ಲೀಷ್ ಅನುವಾದದ ಕನ್ನಡ ಸಂಕ್ಷಿಪ್ತಾನುವಾದವನ್ನು ಅಕ್ಷರ ಪ್ರಕಾಶನ ಹೊರತಂದಿದೆ. ಡಿಜಿಟಲ್ ಆವೃತ್ತಿ ಸಿಗುವ ಸಾಧ್ಯತೆ ಕಡಿಮೆ. ತುಂಬ ಒಳ್ಳೆಯ ಮತ್ತು ದೇಶದ ಪ್ರಸ್ತುತ ಸಂದರ್ಭದ ಆರೋಗ್ಯಕ್ಕೆ ತೀರಾ ಅಗತ್ಯವಾದ ಪುಸ್ತಕ ಇದು.

ನೀವೆಲ್ಲ ಸೇರಿದರೆ ಚರ್ಚೆ ಖಂಡಿತ! ನಾನಂತೂ ವಾದಕ್ಕೆ ಸದಾ ಸಿದ್ಧ! ಇಲ್ಲಿ ಸೇರಿದಾಗೆಲ್ಲ ನಮಗೆ ಸಂಜೆ ಹೊತ್ತು ಚಾವಡಿಯ ಮೇಲೆ ಸೇರಿ ಕೂತು ಪಟ್ಟಾಂಗ ಹೊಡೆದಷ್ಟೇ ಖುಷಿ ಸಿಕ್ಕುವುದಾದರೆ ಇನ್ನೇನು ಬೇಕು ಹೇಳಿ ಈ ಬದುಕಿಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 7:24pm — narendra

ಉ: ಕಾರಂತರು ಮತ್ತು ಧರ್ಮ

narendra's picture

ಧನ್ಯವಾದ ಗಂಗಾಧರ್. ವೈಭವ್ ಹೇಳಿದ್ದರಲ್ಲಿಯೂ ಸ್ವಲ್ಪ ಸತ್ಯ ಇದೆ. ನಾವೆಲ್ಲ ಸರಳವಾಗಿ ಮಾತನಾಡಬಹುದು ಅಂತ ಅವರು ಸೂಚಿಸಿದ ಹಾಗಿದೆ, ಅವರ ಉದ್ದೇಶ ಅದಿತ್ತೋ ಇಲ್ಲವೊ, ಅಂತೂ ಅದರಲ್ಲೂ ನಾವು ತಿಳಿದುಕೊಳ್ಳಬೇಕಾದ್ದು ಇತ್ತು.

ಈ ತಿಂಗಳ "ಮಾತುಕತೆ" (ನೀನಾಸಂನಿಂದ ಬರುತ್ತಿರುವ ಪತ್ರಿಕೆ) ಯಲ್ಲಿ ಜಿ.ರಾಜಶೇಖರ್ ಬರೆದ "ಸಾಹಿತ್ಯ ಸಮ್ಮೇಳನಕ್ಕೆ ದೇವಸ್ಥಾನ ಸೂಕ್ತ ಸ್ಥಳವೇ?" ಲೇಖನ ದಯವಿಟ್ಟು ಓದಿ. ಈ ಸಂವಾದದಲ್ಲಿ ಆಸಕ್ತಿ ಇರುವ ಎಲ್ಲರೂ ಓದಬೇಕಾದ, ಅತ್ಯಂತ ಸರಳವಾಗಿ ಕೆಲವು ಸತ್ಯಗಳನ್ನು ತೆರೆದಿಡುವ ಲೇಖನವಿದು. ತುಂಬ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಣ್ಣೆಹೂವು ಮತ್ತು ಅಶ್ವಮೇಧ
  • ನನಗೂ ನಿಮಗೂ ಸಮಾನವಾದೊಂದು ಧರ್ಮ
  • ಕಾರಂತರ ಜೀವಂತ ಪಾತ್ರಗಳು ೮ (೩)
  • ಕಾರಂತರ ಜೀವಂತ ಪಾತ್ರಗಳು ೭ (೨)
  • ಕಾರಂತರ ಜೀವಂತ ಪಾತ್ರಗಳು ೪ (೨)
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 107 ಅತಿಥಿಗಳು ಆನ್ಲೈನ್ ಇರುವರು.


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator