ಬೆಣ್ಣೆಹೂವು ಮತ್ತು ಅಶ್ವಮೇಧ
ಅಶೋಕ ಹೆಗಡೆಯವರು ನಮ್ಮ ತಲೆಮಾರಿನವರಾಗಿರುವುದೇ ಇದಕ್ಕೆ ಕಾರಣ ಅನಿಸುತ್ತಿಲ್ಲ. ಅಶೋಕ ಹೆಗಡೆಯವರು ೨೦೦೬ರಲ್ಲಿ ಬರೆಯುತ್ತಿರುವಾಗಲೂ ತಮ್ಮ ಕಥಾನಕದ ಕಾಲಕ್ಕೆ ಮತ್ತು ವಸ್ತುವಿಗೆ ನಿಷ್ಠರಾಗಿಯೇ ಸಮಕಾಲೀನತೆಯನ್ನು ಸಾಧಿಸಿದ್ದಾರೆ. ಹಾಗಾಗಿಯೇ ಜಿ ಎಸ್ ಅಮೂರರು ಮುನ್ನುಡಿಯಲ್ಲಿ ಅಶೋಕರು ತಮ್ಮ ಸಮಕಾಲೀನ ಅನುಭವಗಳಿಗೂ ಕಾದಂಬರಿಯಲ್ಲಿ ಭಾಷೆ ಮತ್ತು ಆಕಾರಗಳನ್ನು ಕೊಡಲಿ ಎಂದು ಬರೆದಿದ್ದಾರೆ. ಅಷ್ಟರ ಮಟ್ಟಿಗೆ ಅಶ್ವಮೇಧ ಕಾದಂಬರಿ ತಡಕುವ ಆಯಾಮಗಳು ಇವತ್ತಿನ ನಮ್ಮ ಬದುಕಿನ ಪರಿಧಿಗೆ ಕೊಂಚ ಹೊರಗಿನವಾಗಿಯೇ ಉಳಿಯುತ್ತವೆ ಅನಿಸಿದರೆ ಅಚ್ಚರಿಯಿಲ್ಲ.
ಮೂಲಭೂತವಾಗಿ ಇಲ್ಲಿ ದಲಿತರ ಅಥವಾ ಅಸ್ಪೃಶ್ಯರ ಮತ್ತು ಅರೆ ಅಸ್ಪೃಶ್ಯರ ತುಳಿತಕ್ಕೆ ಯಾವುದೇ ಕ್ಷತ್ರಿಯ ಜಮೀನ್ದಾರನೋ ಭೂಮಾಲಕನೋ ಕಾರಣವಾಗಿರದೆ ಬ್ರಾಹ್ಮಣ ವರ್ಗ ಕಾರಣವಾಗಿರುವುದು ಮತ್ತು ಒಂದು ಮಠ ಈ ಎಲ್ಲ ಮೇಲ್ಜಾತಿಯವರು ನಡೆಸುತ್ತ ಬಂದ ಅನ್ಯಾಯ ಶೋಷಣೆಗಳ ಮೂಲಧಾತುವಿನಂತೆ ನಿಲ್ಲುವುದು ಗಮನಾರ್ಹವಾಗಿದೆ. ಯಾಕೆಂದರೆ ಬ್ರಾಹ್ಮಣ ವರ್ಗ ಜಾತೀಯತೆ ಮತ್ತು ಅಸ್ಪೃಶ್ಯತೆಗೆ ನೇರವಾಗಿಯೇ ಹೊಣೆಯೆಂಬುದನ್ನು ಬಿಟ್ಟರೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬ್ರಾಹ್ಮಣ ವರ್ಗ ಇತರ ಜಾತಿಯವರನ್ನು ತುಳಿದು ನಿಂತ ಕತೆ ಹೇಳುವ ಕತೆ ಕಾದಂಬರಿಗಳು ನಮ್ಮಲ್ಲಿ ಬಹಳ ಕಡಿಮೆ. ಅಲ್ಲದೆ ಇವತ್ತು ಮನುಷ್ಯ ಮನುಷ್ಯರ ನಡುವಿನ ಹೋರಾಟಗಳಿಗೆ ಜಾತಿಯೇ ಬಹುಮುಖ್ಯ ಕಾರಣವಾಗಿ ಉಳಿದಿರುವಂತೆಯೂ ಕಾಣುವುದಿಲ್ಲ ಅಲ್ಲವೆ? ಅಂದ ಮಾತ್ರಕ್ಕೆ ಜಾತಿ ಆಧಾರಿತ ಸಮಸ್ಯೆಗಳೆಲ್ಲ ಪರಿಹಾರವಾಗಿವೆ ಎಂದೇನಲ್ಲ. ಬಹುಷಃ ಹಾಗಾಗಿಯೇ ಇರಬೇಕು, ಎಸ್ ಆರ್ ವಿಜಯಶಂಕರ, ಕೆ ಸತ್ಯನಾರಾಯಣ ಮೊದಲಾದವರು "ಭಾರತ ಅನೇಕ ಶತಮಾನಗಳನ್ನು ಏಕಕಾಲದಲ್ಲಿ ಬದುಕುತ್ತಿರುವ ದೇಶ" ಎಂದಿರುವುದು. ಹಲವು ನೆಲೆಗಳಲ್ಲಿ ಜಾತಿ ಇಂದಿಗೂ ನಮ್ಮ ಬದುಕಿನ ಬಹು ಮುಖ್ಯ ಇಶ್ಯೂವಾಗಿಯೇ ಉಳಿದಿರುವುದು ಸತ್ಯ.
ಜಾತಿಯ ನೆಲೆಯಲ್ಲಿ ಹುಟ್ಟುವ ಸಂಘರ್ಷಗಳು ಧರ್ಮದ ನೆಲೆಯ ಪ್ರಶ್ನೆಗಳ ಎದುರು ಹೆಚ್ಚು ಸಂಕೀರ್ಣವೂ, ವೈರುಧ್ಯಮಯ ನಿಲುವಿಗೆ ಕಾರಣವಾಗುವಂಥದ್ದೂ ಆಗಿರುತ್ತ, ಸಮಕಾಲೀನ ಜಗತ್ತಿನಲ್ಲೇ ವರ್ಗ ಸಂಘರ್ಷ ಮತ್ತು ಜಾತೀವಾರು ಸಂಘರ್ಷಗಳು ಈ ಧಾರ್ಮಿಕ ನೆಲೆಯಲ್ಲಿ ಪಡೆದುಕೊಳ್ಳುತ್ತಿರುವ ವಿಚಿತ್ರ ನೆಲೆಗಳನ್ನು ನಾವು ಪ್ರತಿನಿತ್ಯ ಕಾಣುತ್ತಿರುವಾಗಲೂ (ಉದಾ: ಕನಕ ಗೋಪುರದ ವಿಚಾರದಲ್ಲಿ ನಮ್ಮ ಕುರುಬರು ಮತ್ತು ಉಡುಪಿಯ ವೈದಿಕ ಬ್ರಾಹ್ಮಣರು ತಳೆಯುವ ನಿಲುವು ಮತ್ತು ಧೋರಣೆಗಳ ನಡುವೆ ಆಂತರಿಕ ಭಿನ್ನತೆ ಇರುತ್ತ ಹಿಂದೂ ಮುಸ್ಲಿಂ ಪ್ರಶ್ನೆಯ ಎದುರು ಈ ಎರಡೂ ವರ್ಗದವರಲ್ಲಿ ಅದು ತಳೆಯುವ ರೂಪಾಂತರ; ಅಮೆರಿಕದ ಆಕ್ರಮಣಕಾರೀ ಧೋರಣೆಯ ಬಗ್ಗೆ ಸಾಮಾನ್ಯವಾಗಿ ಇರುವ ಮುಸ್ಲಿಂ ವಿರೋಧಿ ಸಮರ್ಥನೆ ಮತ್ತು ಅಮೆರಿಕದಿಂದ ಅಂಥದೇ ಆಕ್ರಮಣವನ್ನು ಎದುರಿಸುತ್ತಿರುವ ಕೆಲವು ಕರಿಯರ ಮತ್ತು ತೈಲ ಉತ್ಪಾದಿಸುತ್ತಿರುವ ರಾಷ್ಟ್ರಗಳ ಸಂದರ್ಭದಲ್ಲಿ ಅದು ಪಡೆಯುತ್ತಿರುವ ವಿರೋಧ ಇತ್ಯಾದಿ) ಅಂಥ ಸಂದರ್ಭಗಳೆದುರು ಕಾದಂಬರಿ ಕಾಲಾತೀತವಾಗಲಾರದ ನಿಷ್ಠುರತೆಯನ್ನೂ ಬದ್ಧತೆಯನ್ನೂ ಕಾಪಾಡಿಕೊಂಡು ಬಂದಿರುವುದು ಕೃತಿಯ ಹೆಚ್ಚುಗಾರಿಕೆಯನ್ನಾಗಿಯೂ ಮಿತಿಯನ್ನಾಗಿಯೂ ಕಾಣುವುದು ಸಾಧ್ಯವಿದೆ.
ಕೃತಿಯ ಸಮಕಾಲೀನತೆಯ ಪ್ರಶ್ನೆಯನ್ನು ಚರ್ಚಿಸುವಾಗ ಕೃತಿ, ಕೃತಿಯ ಕಾಲಮಾನಕ್ಕೆ ಸಮಕಾಲೀನವಾಗಿರಬೇಕೆ, ಓದುಗನ ಓದಿನ ಕಾಲಕ್ಕೆ (ಅಥವಾ ಅದು ಪ್ರಕಟವಾದ ಕಾಲಕ್ಕೆ) ಸಮಕಾಲೀನವಾಗಿರಬೇಕೆ ಎನ್ನುವ ಪ್ರಶ್ನೆ ಇದೆ. ಏನಿದ್ದರೂ ಒಂದು ಸಾಹಿತ್ಯ ಕೃತಿ ನನ್ನ ಓದಿಗೆ ಮುಖ್ಯವೆನಿಸಲು ಅದು ನನ್ನ ಇಂದಿನ ಬದುಕಿಗೆ ನೀಡುವ ಕಾಣ್ಕೆ ಏನು ಎಂಬುದೇ ಮಾನದಂಡ. ಈ ಮಾನದಂಡದಿಂದ ಅಶೋಕರ ಅಶ್ವಮೇಧ ಮುಖ್ಯವೆನಿಸಲು ಇರುವ ಅನೇಕ ಕಾರಣಗಳಲ್ಲಿ ಅದು ಎತ್ತುವ ಧರ್ಮ ಮತ್ತು ದೈನಂದಿನಗಳ ನಡುವಿನ ಸಂಘರ್ಷ ಕೂಡ ಒಂದು.
ತನ್ನ ಮಗಳು ಅಸ್ಪೃಶ್ಯ ಮನೆಗೆಲಸದವಳ ಮಗನೊಂದಿಗೆ ಮದುವೆಯ ದಿನವೇ ಓಡಿ ಹೋದುದು ಅರಿವಿಗಿಳಿಯುತ್ತಲೇ ಅರೆಹುಚ್ಚನಂತಾಗುವ ಗಣೇಶ ಹೆಗಡೆ ಧಾರ್ಮಿಕ ಜಿಜ್ಞಾಸೆಗೆ ತೊಡಗುವುದಾಗಲೀ ತನಗಿರುವ ಆರ್ಥಿಕ, ರಾಜಕೀಯ ಗುರುತ್ವಗಳನ್ನು ಬಳಸಿಕೊಂಡು ದಲಿತನನ್ನು ಕೊಚ್ಚಿಹಾಕುವ ಹೆಜ್ಜೆ ಇಡುವ ಪ್ರಮೇಯವಾಗಲೀ ಬರುವುದೇ ಇಲ್ಲ. ಆದರೆ ಇದೆಲ್ಲಕ್ಕಿಂತ ಹೆಚ್ಚಿನದನ್ನು ಈ ಪಾತ್ರದ ಮೂಲಕ ಅಶೋಕರು ಆಗಗೊಡುವುದನ್ನು ಹೇಳುವುದು ನನ್ನ ಉದ್ದೇಶ. ಅದು, ತಾನು ನೆಚ್ಚಿ ಓಡಿ ಹೋದ ಕೃಷ್ಣನಿಂದ ಏನನ್ನೂ ಪಡೆಯಲಾರದ ನಿರ್ಮಲೆ ಮತ್ತೆ ಊರಿಗೇ ಹಿಂದಿರುಗಿ ಬಂದ ಸಂದರ್ಭದಲ್ಲಿ ಈ ಗಣೇಶ ಹೆಗಡೆ ಮತ್ತು ಊರಿನ ಹತ್ತು ಸಮಸ್ತರು (ಬ್ರಾಹ್ಮಣರೇ ಎಂದು ಹೇಳಬೇಕಾದ್ದಿಲ್ಲ ಅನಿಸುತ್ತದೆ) ಅವಳನ್ನು ಎದುರಿಸುವ ರೀತಿ. ಗಣೇಶ ಹೆಗಡೆ ನಿರ್ಮಲೆಯನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಸಂದರ್ಭ ಒಂದು. ಊರಿನ ಇತರ ಪ್ರಭಾವೀ ಬ್ರಾಹ್ಮಣರಿಗೆ ಇದು ಕೇವಲ ಗಣೇಶ ಹೆಗಡೆಯವರ ತೋಟದ ಪ್ರಶ್ನೆಯಾಗಿ ಮಾತ್ರ ಕಾಡುವುದು ಇನ್ನೊಂದು. ಇವೆರಡರ ನಡುವೆ ಒಂದಕ್ಕೊಂದು ಸಂಬಂಧ ಇಲ್ಲವೆನ್ನುತ್ತೀರಾ? ಸ್ವಲ್ಪ ಯೋಚಿಸಿ.
ಗಣೇಶ ಹೆಗಡೆಯ ಅರೆ ಹುಚ್ಚು ನಿಗೂಢವಾಗುವುದು ಇಂಥಲ್ಲೇ. ಇಂಥ ಇನ್ನೊಂದು ಸಂದರ್ಭ, ಸಾಯುವ ಮುನ್ನ ಆತ ನಿರ್ಮಲೆಯ ಕೈಗೆ ಕೊಡಲೆಂದೇ ಮುಷ್ಟಿಯಲ್ಲಿ ಬಿಗಿ ಹಿಡಿದಿದ್ದ ಬೆಣ್ಣೆ ಹೂವು. ಮಗಳನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಗಣೇಶ ಹೆಗಡೆಗೆ ತನ್ನ ಮಗಳು ನಿರ್ಮಲೆಗೆ ಬೆಣ್ಣೆ ಹೂವೆಂದರೆ ಪಂಚಪ್ರಾಣ ಎಂಬುದು ತಿಳಿದಿತ್ತು!
ತನ್ನ ದೇಶ ಕಾಲದ ಪರಿಮಿತಿಯಲ್ಲಿ ಸನಾತನಿಯಾದ, ಬ್ರಾಹ್ಮಣನಾದ ಮತ್ತು ಮನುಷ್ಯನೂ ಆದ ಗಣೇಶ ಹೆಗಡೆ ವರ್ತಿಸುವ ರೀತಿ ಎಷ್ಟು ಸೂಕ್ಷ್ಮವಾಗಿದೆ, ಅರ್ಥಪೂರ್ಣವಾಗಿದೆ ಎಂಬುದನ್ನು ಗಮನಿಸಿದರೆ ಏನೆನಿಸುತ್ತದೆ? ನಿಮ್ಮ ಮನಸ್ಸಿನಲ್ಲಿ ಶ್ರೀನಿವಾಸ ಶ್ರೋತ್ರಿಗಳೂ, ನರಸಿಂಹ ಗೌಡರೂ, ಪ್ರಾಣೇಶಾಚಾರ್ಯರೂ ಕುಳಿತಿರುವಾಗಲೇ ಈ ಗಣೇಶ ಹೆಗಡೆಯವರಿಗೂ ಸ್ವಲ್ಪ ಸ್ಥಳ ಕೊಡಿ.

- narendra ರವರ ಬ್ಲಾಗ್
- Login or register to post comments
- 555 hits
- Email this blog





RSS:
ಪ್ರತಿಕ್ರಿಯೆಗಳು
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ನಮಸ್ತೆ ನರೇಂದ್ರ,
ನಾನಾ ಕಾದಂಬರಿ ಓದಿಲ್ಲ. ಜಾತಿ ವಿಶಯವಿದೆ ಅಂದ್ರೆ ನನಗೆ ತುಸು ಇಸ್ಟವೇ, 'ದಾಟು'ವಿನಂತೆ. ನಿಮ್ಮ ಈ ಬರಹದ ತಿರಳನ್ನು ನಾನು ಆ ಕಾದಂಬರಿಯನ್ನು ಓದಿದ ಮೇಲೇಏ ತಿಳಿದೆನು ಎಂದು ಅಂದುಕೊಳ್ಳವೆನು. ಬಹಳ ಚುಟುಕಾಗಿ, ಚುರುಕಾಗಿ ಓಡಿದೆ, ನಿಮ್ಮ ಬರಹ.
ನಮ್ಮದು ಇಂದಿಗೂ ಜಾತಿ ಜಾತಿ ಎಂದು ಬಡಿದುಕೊಳ್ಳವ ಸಮಾಜವೇ. ಆದರೆ ಇಂದು, ಹಿಂದೆ ಜಾತಿ ಜಾತಿ ಎಂದು ಬಡಿದುಕೊಂಡ ಬ್ರಾಹ್ಮಣ, ಗೌಡ ಲಿಂಗಾಯತ ಮುಂತಾದ ಚಿಕ್ಕಪುಟ್ಟ ಜಾತಿಗಳು ಪಂಗಡಗಳು ಅಲ್ಲ ಆ ಕೆಲಸ ಮಾಡ್ತಿರೋದು . ಇಂದು ಜಾತಿಜಗಳ ಏನಿದ್ದರು ದೊಡ್ಡ ದೊಡ್ಡ ಕೋಮುಗಳ ನಡುವಿನದ್ದು. ಹಿಂದೂ ಜಾತಿ ಮತ್ತು ಮುಸಲಿಮ ಜಾತಿ ಇದಕ್ಕೆ ತಕ್ಕ ಮಾದರಿ. ಹಿಂದೂ ಮತ್ತು ಕ್ರೈಸ್ತರ ಜಾತಿಯ ಜಗಳವೂ, ಹೊಡೆದಾಟವೂ ಈಗೀಗ ಹೆಚ್ಚಾಗುತ್ತಾ ಇದೆ. ಕಾರಣಗಳೇನೇ ಇರಲಿ.
ಮಾನವ ಎಂದಿಗೂ ಜಾತಿ/ಪಂಗಡ ಪ್ರೇಮಿ. ಅವನಿಗೆ ಹೊಡೆದಾಟವಿಲ್ಲದೇ, aggression ಇಲ್ಲದ ಬದುಕಲಾರನು. ಇದಕ್ಕೆ ನಮ್ಮ ಇತಿಹಾಸವೇ ಪುರಾವೆ.
ಹಿಂದೆ ಸ್ಕೂಲಲ್ಲಿ ಓದಿದ ಯಾವುದೋ ಇಂಗ್ಲೀಶ್ ಪದ್ಯದ ನೆನಪು ಬಂತು.
ಒಬ್ಬ ಏಸುವನ್ನು ಕೊಲ್ಲಲ್ಲು, ಏಶ್ಟು ಮಂದಿ ಹೋದರು. ಒಂದು ದಿವಸ ಪೂರ ಬೇಕಾಯ್ತು.
ಬಳಿಕ ಕತ್ತಿ-ಈಟಿ-ಬಿಲ್ಲಿನ ಬವರಗಳಲ್ಲಿ ನೂರಾರು ಮಂದಿ ಸತ್ತರು.
ತರುವಾಯ ಬಂದ ಮದ್ದುಗುಂಡಿಗಳ ಅಂಕದಲ್ಲಿ ಸಾವಿರಾರು ಮಂದಿ ಸಾಯಹತ್ತಿದರು.
ಈ ಲಕ್ಷ ಲಕ್ಷ ಮಂದಿಯನ್ನು ಒಂದೇ ಗಳಿಕೆಯಲ್ಲಿ ತೀರಿಸುವ ಸಿಡಿಮದ್ದು ಅಲ್ಲ ಅಟಂಬಾಂಬ್-ಹೈಡ್ರೊಜನ್ ಬಾಂಬ್ ಬಂದಿವೆ.
- ಮಾಯ್ಸ
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನನ್ನ ಬರಹಕ್ಕೆ ಚುರುಕಿನ ಚುಟುಕಿನ ಓದು ಸಾಕು. ಕಾದಂಬರಿಯನ್ನು ಮಾತ್ರ ಅಗತ್ಯ ಓದಿ. ನನ್ನ ಬರಹದ ಒಂದು ಒಳ ಉದ್ದೇಶ ಅದೇ.
ಜಾತಿ ಜಾತಿಗಳೊಳಗಿನ ಕಲಹಗಳನ್ನು ಮತ್ತು ಧರ್ಮ ಧರ್ಮಗಳ ನಡುವಿನ ಕಲಹವನ್ನು ಒಂದೇ ರೀತಿಯಲ್ಲಿ ನೋಡುವುದು ಸರಿಯೆ? ನನಗೆ ಈ ಬಗ್ಗೆ ಅನುಮಾನಗಳಿವೆ. ಪರಸ್ಪರ ಜಗಳವಾಡುತ್ತಿರುವ ಜಾತಿಗಳವರೂ ಬೇರೆ ಧರ್ಮದವರ ಎದುರು ನಿಲ್ಲುವಾಗ ಒಂದಾಗಿ ನಿಂತ ಉದಾಹರಣೆಗಳಿಲ್ಲವೆ? ಮತ್ತು ಜಾತಿಗಳ ನಡುವಿನ ಜಗಳಗಳಿಗಿಂತ ಧರ್ಮಗಳ ನಡುವಿನ ಜಗಳಕ್ಕೆ ಸಂಕೀರ್ಣವಾದ ಕಾರಣ (`ರಾಜ' ಕಾರಣ?) ಗಳಿರುವಂತೆಯೂ, ಇಂಥ ಜಗಳಗಳಿಗೆ ಪ್ರಾಯೋಜಕರೂ, ಫಲಾನುಭವಿಗಳೂ ಎಲ್ಲ ಇರುವಂತೆಯೂ ಕಾಣುವುದಿಲ್ಲವೆ. ಜಾತಿ ಜಗಳಗಳು ಕೆಲ ಮಟ್ಟಿಗೆ ಸರಳವಾಗಿದ್ದವು ಅನಿಸುತ್ತದೆ. ಅಶೋಕರು ಕಾದಂಬರಿಯ ಕಾಲಮಾನಕ್ಕೆ ತಕ್ಕಂತೆ ಜಾತಿಜಗಳದ ವ್ಯಾಪ್ತಿಯಲ್ಲೇ ಕಾದಂಬರಿ ಹೆಣೆದಿದ್ದಾರೆ. ಬಹುಷಃ ನಲ್ವತ್ತು ಐವತ್ತು ವರ್ಷಗಳ ಹಿಂದೆ, ಅದೇ ಮುಖ್ಯವಿತ್ತು. ವಿಭಜನೆಯ ನಂತರವೇ ನಮ್ಮಲ್ಲಿ ಹಿಂದೂ ಮುಸ್ಲಿಂ ಭೇದ ತೀವೃವಾದಂತೆ ಕಾಣುತ್ತದೆ. ಒಂದೇ ಮನೆಯಲ್ಲಿದ್ದಾಗ ನಮ್ಮೊಳಗಿನ ಜಗಳವಾಗಿದ್ದು ಮುಂದೆ ನೆರೆಹೊರೆಯವರ ಜಗಳವಾದಾಗ ಅದಕ್ಕೆ ಹೆಚ್ಚು ಹೆಚ್ಚು ಆಯಾಮಗಳೊದಗಿದಂತೆ ಕಾಣುತ್ತದೆ. ಜಾತಿ ಜಗಳ ಮಾತ್ರ ಇವತ್ತಿಗೂ ಮನೆಯೊಳಗಿನ (ಧರ್ಮ ಇಲ್ಲಿ ಎರಡೂ ಜಾತಿಗೆ ಸಮಾನ ಅಂಶ ಆಗಿರುವುದರಿಂದ) ಜಗಳವಾಗಿಯೇ ಇದೆ. ದಲಿತರ ಪ್ರಶ್ನೆ ಬಂದಾಗ, ಕಂಬಾಲಪಲ್ಲಿ ಅಥವಾ ಬೆಂಡಿಗೇರಿಯಂಥ ವಿದ್ಯಮಾನಗಳ ವಿಚಾರದಲ್ಲಿ ಇದು ವಿಕೋಪಕ್ಕೆ ಹೋಗಿದೆ, ನಿಜ. ಆದರೂ ಇವತ್ತು ನಾವು ಎದುರಿಸುತ್ತಿರುವ ಧರ್ಮ ಧರ್ಮಗಳ ನಡುವಿನ ಜಗಳದ ಎದುರು ಜಾತಿ ಜಗಳಗಳು ಎಲ್ಲೋ ಭಿನ್ನ ಎನಿಸುವುದಿಲ್ಲವೆ? ಕುರುಬರ ಕನಕ ಗೋಪುರದ ವಿವಾದ ಅಥವಾ ನಮ್ಮ ಲಿಂಗಾಯತರ ಕೆಲವು ಗೊಂದಲದ ಜಗಳಗಳಿಗೂ ಗುಜರಾತ್‌ನಲ್ಲಾದ ಗೋಧ್ರಾ ಗಲಭೆಗೂ ವ್ಯತ್ಯಾಸವಿಲ್ಲವೆ. ಇದು ಸ್ವಲ್ಪ ಸೂಕ್ಷ್ಮ ವ್ಯತ್ಯಾಸ ಎನ್ನುವುದು ನಿಜ, ಆದರೆ ಅದು ಇದೆ. ಎರಡನ್ನೂ ಸಮಾನವಾಗಿ ಪರಿಗ್ರಹಿಸಿ ವಿಶ್ಲೇಷಿಸುವುದು ತಪ್ಪಾಗಬಹುದು ಅನಿಸಿದೆ ನನಗೆ. ಇದರ ಬಗ್ಗೆ ನಮ್ಮ ಗೆಳೆಯರು ಹೆಚ್ಚು ಬೆಳಕು ಚೆಲ್ಲುವರೆ?
ಮನುಷ್ಯ ಎಂದಿಗೂ ಜಾತಿ/ಪಂಗಡ ಪ್ರೇಮಿ, ಅವನು ಹೊಡೆದಾಟವಿಲ್ಲದೇ ಅಗ್ರೆಶ್ಶನ್ ಇಲ್ಲದೆ ಬದುಕಲಾರನು ಎಂದಿದ್ದೀರಿ. ಇದಕ್ಕೆ ಇತಿಹಾಸವೇ ಪುರಾವೆ ಎಂದೂ ಹೇಳಿದ್ದೀರಿ. ನೀವು ಹೇಳಿರುವುದು ಕಟುಸತ್ಯ. ಆದರೆ ಈ ಇತಿಹಾಸದಿಂದ ನಾಗರೀಕ ಮನುಷ್ಯ ಕಲಿತಿದ್ದೇನು ಹಾಗಾದರೆ ಎಂಬ ಪ್ರಶ್ನೆ ಬರುತ್ತದೆ. ಐದಾರು ದಶಕಗಳ ಹಿಂದೆ ಇದ್ದ ಹಾಗೆ ಇವತ್ತು ಜಾತಿ ಕಲಹ ಇಲ್ಲ ಎನ್ನುವ ಸ್ಥಿತಿಗೆ ನಾವು ಬಂದಿದ್ದೆವು. ಆದರೆ ಅಷ್ಟರಲ್ಲಿ ಈ ಧರ್ಮದ ಅಪಭ್ರಂಶಗಳು ಹುಟ್ಟಿಕೊಂಡವು. ಯಾಕೆ ಹುಟ್ಟಿಕೊಂಡವು ಎಂಬುದು ಎಲ್ಲ ಪ್ರಜ್ಞಾವಂತರಿಗೂ ಗೊತ್ತು. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆ ಇರುವುದು ಈ ತಲೆಮಾರಿನ ದುರಂತ. ಅದನ್ನು ನಾವು ನೀವು ಮೀರುವುದರಲ್ಲೇ ಮುಂದಿನ ಭವಿಷ್ಯ ಇರುವುದರಿಂದ ಮನುಷ್ಯರ ಬಗ್ಗೆ ಆಶಾವಾದಿಗಳಾಗಿರೋಣ ಮಹೇಶ್.
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ನನ್ನಿ ನರೇಂದ್ರ..
ನಿಮ್ಮ ಮಾತು ಬಹಳ ಒಪ್ಪವಾಗಿವೆ.
ನನ್ನ ಕೆಲ ಒಳನಿಸಿಕೆ.
೧) ನನಗೆ ಜಾತಿ, ಜಗಳಕ್ಕೂ, ದರ್ಮಗಳ ಜಗಳಕ್ಕೂ ಎರಡೂ ಒಂದೇ ಅನ್ನಿಸಲು ಹಲವು ಕಾರಣಗಳಿವೆ.
----ಅ) ಎರಡೂ ನಂಬಿಕೆಯ, ನಡಾವಳಿ/ಆಚಾರದ ಅಂತರದಿಂದ ಆಗುವುದು.
----ಆ) ಎರಡೂ ಒಂದು ಪಂಗಡದ ಮೇಲೆ ಇನ್ನೊಂದದ ಹಗೆಯಿಂದ, ಒಂದು ಪಂಗಡದ ಮೇಲುಗೈಗಾಗಿ ನಡೆಯುವುದು.
----ಇ) ನೀವೇ ಹೇಳಿದಂತೆ ಇದು ಇತಿಹಾಸದ ಕಹಿದಿಟ.
೨)ಆಶಾವಾದಿಗಳಾಗಿರೋಣ, ಅವುದು ಆಗಿರೋಣ. ಆದರೆ ಆಶಾವಾದ ಬರೀ ಒಂದು idealology ಆಗಿ, ಬರೀ ಕನಸಿನಲ್ಲಿ ಇರುವಂತದಾದರೆ ಏನು ಸುಕ. ಅದು ನನಸಾಗುವಂತಿರಬೇಕು. ನಮ್ಮ ಜಗದ ಈಗಿನ ಪಾಡನ್ನು ನೋಡಿದರೆ, ಎಂದು ಮೂರನೇ ಹೆಬ್ಬವರವಾಗುವುದೋ ಎಂಬ ಅಂಜಿಕೆಯಲ್ಲೇ ಹಲವು ದೇಶಗಳಿರುವಂತಿದೆ. ಈ ಅಂಜಿಕೆಗೂ ದರ್ಮವೇ ಓಸುಗರ ಎಂಬುದು ಒಂದು ಗಮನದಲ್ಲಿಡಬೇಕಾದ ಸಂಗತಿ ಅಲ್ವಾ!.
ನಿಮ್ಮ ವಿಚಾರಗಳು ಚೆನ್ನಾಗಿವೆ.
ನನ್ನಿ!
- ಮಾಯ್ಸ
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ಮಹೇಶ್ ಇವತ್ತು ಇಲ್ಲಿ ಮಂಗಳೂರಿನಲ್ಲಿ ಮಾಧ್ಯಮಗಳು ಮತ್ತು ಕೋಮುವಾದ ಅಂತ ಸೆಮಿನಾರ್ ನಡೆಯುತ್ತಿದೆ. ಎರಡು ದಿನ. ಕರ್ನಾಟಕದ ಉದ್ದಗಲದಿಂದ ಸುಮಾರು ಇನ್ನೂರು ಮಂದಿ ಪತ್ರಕರ್ತರು ಬಂದಿದ್ದಾರೆ. ಅವರನ್ನೆಲ್ಲ ನೋಡಿದರೆ ಎಷ್ಟು ಖುಶಿಯಾಗುತ್ತೆ ಅಂತೀರ! ಅವರಿಗೆ ಇದು ಒಂದು ಕಡೆ ಹೊಟ್ಟೆಪಾಡು, ಇನ್ನೊಂದು ಕಡೆ ಆದರ್ಶ. ಇವರೆಲ್ಲ ಇಲ್ಲಿ ಗೌರಿ ಲಂಕೇಶ್, ಸಂಕರ್ಷಣ ಠಾಕೂರ್ (ತೆಹಲ್ಕ), ಜಿ. ರಾಜಶೇಖರ್, ಅಚಿನ್ ವನಾಯಕ, ಪಟ್ಟಾಭಿರಾಮ ಸೋಮಯಾಜಿ, ಪಮೇಲಾ ಫಿಲಿಪೋಸ್, ರಾಜಾರಾಮ್ ತೋಳ್ಪಾಡಿ, ಭಾನುತೇಜ್, ಇಸ್ಮಾಯಿಲ್, ಸನತ್ ಕುಮಾರ್ ಬೆಳಗಲಿ ಎಲ್ಲರ ಮಾತುಗಳನ್ನು ಕೇಳುತ್ತ ಜೀರ್ಣಮಾಡಿಕೊಳ್ಳುತ್ತಿರುವಾಗ ನನಗೆ ನಿಮ್ಮದೇ ನೆನಪು. ಜಾತಿ, ಧರ್ಮ ಅವುಗಳ ಪರಿಕಲ್ಪನೆ, ಕೋಮುವಾದ, ಮಾಧ್ಯಮಗಳು.....ಎಲ್ಲದರ ಬಗ್ಗೆ ಸುದೀರ್ಘವಾಗಿ ಬರೆಯಲು ಪ್ರಯತ್ನಿಸುತ್ತೇನೆ. ನಾಳೆಯೂ ಸೆಮಿನಾರು ಇದೆ. ಎಲ್ಲ ತುಂಬ ಚೆನ್ನಾಗಿ ನಡೆಯುತ್ತಿದೆ. ನೀವೂ ಎಲ್ಲ ಇರಬೇಕಿತ್ತು ಅನಿಸುತ್ತಿದೆ....
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ಇಲ್ಲ 'ನಿಮ್ಮದೇ' ನನ್ನೊಬ್ಬದು ಅಂತ ಅಲ್ಲ ತಾನೆ!(ತಮಾಶೆ)
. ನಮ್ಮನ್ನು ನೆನದಕ್ಕೆ ನನ್ನಿ!!
ಮೆಲ್ಲಗೇ, ಉದ್ದವಾಗಿ ಬರೇರಿ. ಚನ್ನಾಗಿ ಬರೇತೀರ. ನಾವು ಎಲ್ಲ ಇಂತ ಸೆಮಿನಾರ್ಗಳಿಗೆ ಬರಕ್ಕೆ ಆಗತ್ದೆ. ನಮ್ಮ ಹೊಟ್ಟೇ ಪಾಡಿಗೆ ಇಲ್ಲಿ ಮಣೆಕುಟ್ಟಬೇಕಲ್ಲ

ಹಾಗೆ ಈ ಸೆಮಿನಾರ್‍ನಲ್ಲಿ ಎತ್ತ ವಿಚಾರಗಳನ್ನು ಬಿಡುವಾದರೆ ಬರೇರಿ. ನಮಗೂ ತಿಳಿಯಲಿ!
- ಮಾಯ್ಸ
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ಇಲ್ಲ 'ನಿಮ್ಮದೇ' = ಇಲ್ಲಿ 'ನಿಮ್ಮದೇ'
ನನ್ನೊಬ್ಬದು = ನನ್ನೊಬ್ಬಂದು
ಆಗತ್ದೆ = ಆಗತ್ಯೇ?
ಎಂದು ತಗೊಳ್ಳಿ.
ಮನೆಗೆ ಹೊರಟಿದ್ದೆ. ಗಡಿಬಿಡಿಯಾಯ್ತು ಮನ್ನಿಸಿರಿ!

- ಮಾಯ್ಸ
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ನರೇಂದ್ರರೆ,
ಉತ್ತಮವಾಗಿ ಪರಿಚಯಿಸಿದ್ದೀರ. ಸಮಕಾಲೀನರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಗಂಭೀರವಾಗಿ ಸ್ಪಂದಿಸಿರುವುದೇ ಈ ಪುಸ್ತಕ ಓದಬೇಕೆಂದು ಪ್ರೇರಿಸುತ್ತದೆ!
ಜಾತಿ ಮತ್ತು ಧರ್ಮದ ಸಂಘರ್ಷದ ಬಗ್ಗೆ ನೀವು ಹೇಳಿದ ಮಾತುಗಳನ್ನು ಒಪ್ಪುತ್ತೇನೆ. ಜಾತಿಯಿರಲಿ, ಧರ್ಮವಿರಲಿ, ಎಲ್ಲ ಸಂಘರ್ಷಗಳ ನೆಲೆಯೂ "ಅನ್ಯ" ಎನ್ನುವ ಭಾವ ಎಂದು ಅನಿಸುತ್ತದೆ. ಆದರೆ ಎರಡರ ಪ್ರಕ್ರಿಯೆಗಳು ಮಾತ್ರ ತೀರ ಭಿನ್ನವೆನ್ನುವುದು ನಿಜ.
ಪರಿಚಯಕ್ಕಾಗಿ ಥ್ಯಾಂಕ್ಸ್.
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ಅಂದ ಹಾಗೆ- ಬರಹದ ಮೊದಲ ಸಾಲುಗಳೇನಾದರೂ ತುಂಡರಿಸಿ ಕಳೆದಿದೆಯೋ, ಅಥವಾ ಮೊದಲ ಸಾಲಿನ "ಇದಕ್ಕೆ" ಮುಂದಿನ ಭಾಗವನ್ನು ಉದ್ದೇಶಿಸಿದ್ದೋ? ಗೊತ್ತಾಗಲಿಲ್ಲ.
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ಇದಕ್ಕೆ ಎಂಬ ಮಾತು ಸುರುವಾಗುವುದು ಹೀಗೆ " ಅಶೋಕ ಹೆಗಡೆಯವರು ನಮ್ಮ ತಲೆಮಾರಿನವರಾಗಿರುವುದೇ ಇದಕ್ಕೆ ಕಾರಣ ಅನಿಸುತ್ತಿಲ್ಲ". ನನ್ನ ಕಂಪ್ಯೂಟರಿನಲ್ಲಿ ಇದು ಸರಿಯಾಗಿಯೇ ಕಾಣಿಸುತ್ತಿದೆ.
ನಿಮ್ಮ ಪ್ರತಿಕ್ರಿಯೆಗಾಗಿ ತುಂಬ ಧನ್ಯವಾದಗಳು. ನಿಮ್ಮಂಥವರ ಮಾತುಗಳು 'ಬರೆಯುವುದೇ ನಿರರ್ಥಕ' ಎನಿಸುತ್ತಿದ್ದ ನನಗೆ ಉತ್ಸಾಹ ನೀಡುತ್ತವೆ.
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ನಿಮ್ಮ ಬರೆಹ ಓದಿ ಕಾದಂಬರಿಯಲ್ಲಿ ಒಂದು ಸಣ್ಣ ಸುತ್ತು ಹೊಡೆದಂತೆ ಅನ್ನಿಸಿತು...
ಈ 'ಶ್ರೋತ್ರಿ'ಗಳಂತವರನ್ನು ಕಂಡರೆ ನನಗೆ ಸಿಟ್ಟು...ಸುಮ್ನೆ ಅವರಲ್ಲೆ ಐಬು ಇಟ್ಕಂಡ್ ಬೇರೆಯವ್ರಲ್ಲಿ ಐಬು ಹುಡುಕ್ತಾ ಇರ್ತಾರೆ. ಇರ್ಲಿ.. ನಿಮ್ಮ ಬರೆವಣಿಗೆಯಿಂದ ನನಗೆ ಈ ಕಾದಂಬರಿ ಓದುವ ಆಸೆ ಹೆಚ್ಚುತಿದೆ. ಈ ಹೊತ್ತಗೆ ಬೆಂಗಳೂರಿನಲ್ಲಿ ಈಗ ಸಿಗುತ್ತಿದೆಯೆ? ಎಲ್ಲಿ?
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ಬೆಂಗಳೂರಿನಲ್ಲಿ ಸಿಗುತ್ತದೆ. ಅಂಕಿತದಲ್ಲಿ ನೋಡಿದ್ದೇನೆ. ಸ್ವಪ್ನದಲ್ಲೂ ಕಂಡ ನೆನಪು. ಅಕ್ಷರ ಪ್ರಕಾಶನ. ನೂರ ಇಪ್ಪತ್ತು ರೂಪಾಯಿ ಬೆಲೆ. ಕಾದಂಬರಿಯ ಓದು ನಾಲ್ಕೈದು ದಶಕಗಳ ಹಿಂದಿನ ಉತ್ತರ ಕನ್ನಡದ ಒಂದು ಹಳ್ಳಿಯಲ್ಲಿ ಒಂದು ತಿಂಗಳ ಕಾಲ ನಿಂತು ಬಂದ ಅನುಭವ ನೀಡುತ್ತದೆ. ಖಂಡಿತ ಓದಿ.
ಪ್ರತಿಕ್ರಿಯೆಗೆ ಧನ್ಯವಾದಗಳು ವೈಭವ್.