ಮಡಿ ಭಾಷೆ, ಮಡಿ ಭಾಷೆ
ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು!
ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ ಅಂತಲೂ ಹೌದು. ಯಾವುದೇ ಭಾಷೆ ತುಂಬ ಮಡಿಯಾದರೆ ಸತ್ತೇ ಹೋಗುತ್ತದೆ. ಸಂಸ್ಕೃತ. ಲ್ಯಾಟಿನ್, ಗ್ರೀಕ್ ಇತ್ಯಾದಿಗಳೆಲ್ಲ ತುಂಬ ಮಡಿವಂತ ಭಾಷೆಗಳಾದವು, ಆಯಾ ಭಾಷಾ ಪಂಡಿತರಿಂದ. ಹಾಗೆ ಅವರು ಮಡಿ ಮಾಡಿ ಮಾಡಿ ಇವತ್ತು ಅವು ಅಷ್ಟೇನೂ ಮಡಿಯಲ್ಲದ ಭಾಷೆಗಳಲ್ಲಿ ಮಾತ್ರ ಪದಗಳಾಗಿ ಉಳಿದುಕೊಂಡಿವೆ.
ಇಂಗ್ಲಿಷು ಇದೆಯಲ್ಲ, ಅದರಲ್ಲಿ ಶೇ ೯೦ ಬೇರೆ ಭಾಷೆಯ ಪದಗಳೇ ಇವೆ. ಟವಲ್, ಟೊಮೆಟೊ, ಕ್ವೆಶ್ಚನ್, ಲ್ಯಾಂಗ್ವೆಜ್, ವಕಾಬುಲರಿ ಇಂಥ ನಾವು ಇಂಗ್ಲಿಷ್ ಅಂದುಕೊಂಡ ಪದಗಳು ಎಲ್ಲೆಲ್ಲಿಂದಲೋ ಬಂದು ಇಂಗ್ಲಿಷಿನಲ್ಲಿ ಮನೆ ಮಾಡಿಕೊಂಡಿವೆ. ಇತ್ತೀಚಿನ ಆಕ್ಸ್-ಫರ್ಡ್ ಡಿಕ್ಷನರಿಯಲ್ಲಿ ಭಾರತೀಯ ಮೂಲದ ಸುಮಾರು ಎಂಟು ಸಾವಿರದಷ್ಟು ಪದಗಳ ಪಟ್ಟಿ ಕಾಣುತ್ತದೆ. ಆಕ್ಸ್ ಅಂದರೆ ಗೋವುಗಳು, ಫರ್ಡ್ ಅಂದರೆ ತೀರ್ಥ. ತೀರ್ಥ ಅಂದರೆ ನದಿ ದಾಟುವ ಜಾಗ. ಅದಕ್ಕೇ ಆ ಊರಿನ ಹೆಸರನ್ನು ಗೋತೀರ್ಥ ಎಂದು ಬದಲಾಯಿಸಿದ್ದೂ ಇದೆ. ಇದು ಕಡ್ಡಿಪುಡಿ ಕರಿಬಸಯ್ಯ ಅನ್ನುವ ಹೆಸರನ್ನು ಕಾಷ್ಠಚೂರ್ಣಕಾಳವೃಷಭಾರ್ಯ ಕಾಷ್ಠ (ಕಡ್ಡಿ) ಚೂರ್ಣ (ಪುಡಿ) ಕಾಳ (ಕರಿ) ವೃಷಭ (ಬಸವ) ಆರ್ಯ (ಅಯ್ಯ) ಅಂತ ಬದಲಾಯಿಸಿದ ಹಾಗೆ. ಸಿಗ್ನಲ್ ಅನ್ನುವುದನ್ನು ಧೂಮ್ರಚಾಲಿತ ಬಹುಚಕ್ರಶಕಟ ಗಮನಾಗಮನಸೂಚೀ ಲೋಹಪಟ್ಟಿಕಾ ಅಂದಹಾಗೆ. ಮಡಿ ಅತಿಯಾದರೆ ಹೀಗಾದೀತು. ಸಂಸ್ಕೃತವು ದೇಸೀಭಾಷೆಗಳಿಂದ ಪದಗಳನ್ನು ತೆಗೆದುಕೊಂಡೇ ಇಲ್ಲ ಎಂದಲ್ಲ, ತೀರ ಕಡಮೆ. ಸಾವಿರಕ್ಕೆ ಒಂದು ಹತ್ತು ಇದ್ದಾವು.
ಇಂಗ್ಲಿಷಿನ ಗತಿ ಇನ್ನೊಂದು ಥರದ್ದು. ಅದು ಹೊಟ್ಟೆಬಾಕನಂತೆ ಎಲ್ಲ ಪದಗಳನ್ನೂ ಗಿಡಿದುಕೊಂಡು ಎಗ್ಗಿಲ್ಲದೆ ಸಿಗ್ಗಿಲ್ಲದೆ ಜಗತ್ತಿನ ಮುಖ್ಯಭಾಷೆ ಆಯಿತು. ಅಷ್ಟಾದರೂ ಜಗತ್ತಿನಲ್ಲಿ ಅತಿ ಹೆಚ್ಚು ಜನ ಬಳಸುವ ಭಾಷೆಗಳ ಪೈಕಿ ಇಂಗ್ಲಿಷಿಗೆ ಎಂಟನೆಯ ಸ್ಥಾನವಂತೆ.
ಅಲ್ಲ ಭಾಷೆಯೊಂದು ವ್ಯಾಪಕವಾಗುವುದಕ್ಕೆ ಕೇವಲ ಭಾಷೆ ಬಳಸುವುದಷ್ಟೇ ಕಾರಣವಾಗುವುದಿಲ್ಲ. ಆದರೂ ಪೆಟ್ರೋಲ್ ಉಳಿಸಿ, ಕನ್ನಡ ಉಳಿಸಿ ಎಂಬ ಎರಡು ಘೋಷಣೆಗಳನ್ನೂ ಒಂದೇ ಥರ ಅಂತ ತಿಳಿದು ಪೆಟ್ರೋಲ್ ಉಳಿಸುವುದಕ್ಕೆ ಪೆಟ್ರೋಲು ಕಡಮೆ ಬಳಸಬೇಕು. ಕನ್ನಡವನ್ನು ಉಳಿಸುವುದಕ್ಕೆ ಕನ್ನಡವನ್ನೂ ಕಡಮೆ ಬಳಸಬೇಕು ಅಂತ ತೀರ್ಮಾನಮಾಡುವುದು ತಪ್ಪು. ಕನ್ನಡ ಹೆಚ್ಚು ಹೆಚ್ಚು ಬಳಸಿದರೇ ಕನ್ನಡ ಉಳಿಯುವುದು. ಹಾಗೆ ಬಳಸುವಾಗ ಕಲಿತ ನಾವು ಅಲ್ಲ, ಬಹುಸಂಖ್ಯೆಯ ಜನ ಯಾವಯಾವದನ್ನೆಲ್ಲ ಸ್ವೀಕರಿಸಿದ್ದಾರೋ ಅದೆಲ್ಲವೂ ಕನ್ನಡವೇ ಅಂತ ತಿಳಿಯಬೇಕು. ವ್ಯಾಕರಣದ ಕೆಲಸ ಭಾಷಾಪೋಲೀಸರ ಕೆಲಸದಂತಲ್ಲ. ಜೀವಂತವಾದ ಭಾಷೆಯಲ್ಲಿ ಪ್ರತಿತಲೆಮಾರಿಗೂ ಸಾವಿರ ಪದ ಸಾಯುತ್ತಿರುತ್ತವೆ, ಸಾವಿರಪದ ಹೊಸದಾಗಿ ಬಂದು ಸೇರಿಕೊಳ್ಳುತ್ತಿರುತ್ತವೆ, ಇನ್ನು ಸಾವಿರಪದಗಳು ಅರ್ಥವ್ಯತ್ಯಾಸಮಾಡಿಕೊಳ್ಳುತ್ತಿರುತ್ತವೆ. ಇವೆಲ್ಲವನ್ನು ಕುತೂಹಲದಿಂದ ಗಮನಿಸಿ ತಾರ್ಕಿಕವಾಗಿ ವಿವರಿಸುವುದು ಮಾತ್ರ ವ್ಯಾಕರಣಕಾರರ ಕೆಲಸ.
ಭಾಷೆ ನದಿಯಂತೆ, ಹೊಳೆಯಂತೆ ಅನ್ನುವ ಸುಪ್ರಸಿದ್ಧ ಮಾತು ಇದೆ. ನದಿಯೇ ಆಗಲಿ, ಹೊಳೆಯೇ ಆಗಲಿ ಅದರ ಪಾಡಿಗೆ ಅದು ಹರಿಯುತ್ತಿರುತ್ತದೆ. ಅದಕ್ಕೆ ಮಡಿವಂತೆ ದೊಣೆನಾಯಕರ ಅಪ್ಪಣೆ ಬೇಡ ಅಲ್ಲವೆ?
ಆದರೂ ತೀರ ತಪ್ಪು ತಪ್ಪಾಗಿ ಭಾಷೆ ಬಳಸಬಾರದು ಅನ್ನುವುದು ಕೂಡ ನಿಜವೇ. ದಯವಿಟ್ಟು ಗಮನಿಸಿ, ಅನಕ್ಷರಸ್ಥರು ಕೂಡ, ಎಂದೂ ವ್ಯಾಕರಣ ಓದದೆ ಇರುವವರು ಕೂಡ ತಪ್ಪು ವಾಕ್ಯಗಳನ್ನು ಬಳಸುವುದಿಲ್ಲ. ಇರುವ ತೊಡಕೆಲ್ಲ ಬರವಣಿಗೆಗೆ ಬಂದಾಗ ಹುಟ್ಟಿಕೊಳ್ಳುತ್ತದೆ. ಬರವಣಿಗೆ ಕೃತಕ, ಮತ್ತು ಅಸಹಜ, ಆಡುಮಾತಿಗೆ ಹೋಲಿಸಿದರೆ. ಅದರದೇ ಬೇರೆ ನಿಯಮಗಳು. ಆಡುಮಾತಿನ ಬನಿಯನ್ನೆಲ್ಲ ಬರವಣಿಗೆಯಲ್ಲಿ ತರುವುದು ಕೂಡ ಸಾಧ್ಯವಿಲ್ಲ.
ಇರಲಿ, ಅದು ಬೇರೆ ವಿವರವಾದ ಚಿಂತನೆಗೆ ವಸ್ತು. ಇಷ್ಟೇ. ಇನ್ನೊಬ್ಬರ ಮಾತಿನಲ್ಲಿ ದೋಷಗಳನ್ನೇ ಹುಡುಕುವುದು ಅದೇ ದೊಡ್ಡ ದೋಷ. ಪ್ರೀತಿಯಿಂದ ಇರುವ ದೋಷಗಳನ್ನು ತಿದ್ದಬೇಕು. ತಪ್ಪೇ ಮಾಡದ ಮನುಷ್ಯರು, ತಪ್ಪನ್ನೇ ಬರೆಯದ ಲೇಖಕರು ಯಾರೂ ಇಲ್ಲ. ಹಾಗೆ ನೋಡಿದರೆ ಎಂಥ ವ್ಯಕ್ತಿಯಲ್ಲೂ ಎಂಥ ಬರವಣಿಗೆಯಲ್ಲೂ ದೋಷಗಳನ್ನು ಸುಲಭವಾಗಿಯೋ ಕಷ್ಟಪಟ್ಟೋ ಹುಡುಕಬಹುದು. ಆದರೆ ಅಂಥ ಕೆಲಸದಿಂದ ಮನಸ್ಸು ಮುರಿಯುತ್ತದೆ, ಪ್ರೀತಿ ಹುಟ್ಟುವುದಿಲ್ಲ.
ಕೊನೆಗೆ ಒಂದು ಮಾತು. ಶುದ್ಧತೆ ಅನ್ನುವುದು ನಿಸರ್ಗದಲ್ಲಿ ಇದೆಯೋ ಅಥವ ನಮ್ಮ ಮನಸ್ಸಿನ ಕಲ್ಪಿತವೋ? ಅತಿ ಶುದ್ಧತೆಯ ಆಸೆ ಅಸ್ಪೃಶ್ಯತೆಯಂಥ ಆಚರಣೆಗೆ ಕಾರಣವಾದದ್ದು ನಮಗೆಲ್ಲ ತಿಳಿಯದೇ! ತೀರ ಪರಿಶುದ್ಧ ಚಿನ್ನದಿಂದ ಆಭರಣ ಮಾಡಿಸಲು ಸಾಧ್ಯವೇ? ಸ್ವಚ್ಛತೆಯೇ ಬೇರೆ, ಮಡಿವಂತಿಕೆಯೇ ಬೇರೆ. ಸ್ವಚ್ಛತೆ ಅಪೇಕ್ಷಣೀಯ, ಅಗತ್ಯ. ಮಡಿವಂತಿಕೆ ಸಂಕುಚಿತ, ಭೀತ ಮನಸ್ಸಿನ ಲಕ್ಷಣ.
ಹೀಗೆ ಹೇಳುತ್ತಿರುವಾಗ ನಮ್ಮ ಮಾಧ್ಯಮಗಳ ಪ್ರಭಾವದಿಂದ ಕನ್ನಡ ಕುಬ್ಜವಾಗುತ್ತಿದೆಯೋ ಅನ್ನುವ ಅನುಮಾನ ಬರುತ್ತಿದೆ. ಹೊಸಗನ್ನಡದ ಮಹಿಮಾವಂತ ಲೇಖಕರು ಇದ್ದಾರಲ್ಲ ಅವರ ಕನ್ನಡವನ್ನು ಓದುವುದೇ ಒಂದು ಖುಶಿ. ಕನ್ನಡದಲ್ಲಿ ಹೀಗೆಲ್ಲ ಬರವಣಿಗೆ ಸಾಧ್ಯವಿದೆಯೆಲ್ಲ ಎಂಬ ಅಚ್ಚರಿ. ಗೊತ್ತಿರುವುದನ್ನು ಬರೆಯುವುದು ಒಂದು ಥರ, ಬರೆಯುತ್ತಲೇ ಗೊತ್ತುಮಾಡಿಕೊಳ್ಳುತ್ತ ಬರೆಯುವುದು ಇನ್ನೊಂದು ಥರ. ಗೊತ್ತಿರುವುದನ್ನು ಬರೆಯುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಗೊತ್ತುಮಾಡಿಕೊಳ್ಳುತ್ತ ಬರೆಯುವಾಗ ಆಗುವ ತಪ್ಪುಗಳೂ ಸೃಜನಶೀಲವಾಗುತ್ತವೆ. ನಮ್ಮ ನಮ್ಮ ಮಾತೃಭಾಷೆಗಳಲ್ಲಿ ತಪ್ಪು ಮಾಡುವುದು ನಮ್ಮ ಜನ್ಮಸಿದ್ಧ ಹಕ್ಕು. ಪರಭಾಷೆಗಳನ್ನು ಬಳಸುವಾಗ ಆ ಸ್ವಾತಂತ್ರ್ಯ ಇರುವುದಿಲ್ಲ. ಈ ಥರದ ಮಾತುಗಳನ್ನು ಒಮ್ಮೆ ರಾಜೀವತಾರಾನಾಥರು ಹೀಳಿದ್ದರು. ಕಲಿತ ವಾಕ್ಯಗಳ ಮಾದರಿಯಲ್ಲೇ ಬರೆಯುವ ಪರಭಾಷೆ ಹಳಿಗಳ ಮೇಲೆಯೇ ಸಾಗಬೇಕಾದ ರೈಲಿನಂತೆ. ಮಾತೃಭಾಷೆಯ ಬರವಣಿಗೆ ಹಕ್ಕಿಯ ಹಾರಾಟದಂತಿರಬೇಕು.
ತಪ್ಪುಗಳನ್ನು ಮಾಡುವ ಮೂಲಕವೇ ಭಾಷೆಯ ಸೃಜನಶೀಲ ಬಳಕೆಯನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳು ತಪ್ಪಿದಾಗ ಮನೆಯ ಹಿರಿಯರು ಹೇಗೆ ಪ್ರೀತಿಯಿಂದ ಮತ್ತೆ ಮತ್ತೆ ಸರಿ ಬಳಕೆಯನ್ನು ಹೇಳಿಕೊಡುತ್ತಾರೋ, ಸಹನೆಯಿಂದ ಕಲಿಸುತ್ತಾರೋ ಅಂಥದೇ ಸಹನೆ ಬರವಣಿಗೆಯನ್ನು ಕುರಿತೂ ಇರಬೇಕು. ಆದರೆ ನಮ್ಮ ಶಾಲೆಗಳನ್ನು ನೋಡಿ. ತಪ್ಪು ಮಾಡುವುದು, ತಪ್ಪು ಬರವಣಿಗೆ, ತಪ್ಪು ಉಚ್ಚಾರ ಇವುಗಳಿಗೆ ಶಿಕ್ಷೆಯೇ ಸೂಕ್ತ ಅನ್ನುವ ಧೋರಣೆ ಕಾಣುತ್ತದಲ್ಲವೆ. ತಪ್ಪು ಮಾಡದೆ ಏನನ್ನೂ ಕಲಿಯುವುದು ಸಾಧ್ಯವೇ ಇಲ್ಲ.
ಕಲಿಯುವ ಕಲಿಸುವ ಸಾಧ್ಯತೆಗಳು ಹಿಗ್ಗುವುದಕ್ಕೆ ಪ್ರೀತಿ, ಸಹನೆ, ತಾಳ್ಮೆಗಳು ಮುಖ್ಯ. ನಾವು ಅಸಹನೆಯ, ತಾಳ್ಮೆ ಇರದ ಬದುಕನ್ನೇ ಸಹಜವೆಂದು ಒಪ್ಪಿಕೊಂಡಾಗ ಭಾಷೆಯ ಬಗ್ಗೆಯೂ ಅಸಹನೆ, ಆತುರ, ಅಸಮಾಧಾನಗಳು ಹುಟ್ಟಿಕೊಳ್ಳುತ್ತವೆ. ಕೇವಲ ಮಾಹಿತಿ ತಿಳಿಸುವಂಥ, ನಿರ್ಜೀವ ವಾಕ್ಯರಚನೆಗಳನ್ನು ಕಲಿತರೆ ಸಾಕು ಅನ್ನಿಸತೊಡಗುತ್ತದೆ. ನಮ್ಮ ಭಾಷೆಯೂ ಕುಬ್ಜವಾಗತೊಡಗುತ್ತದೆ.
ಮಡಿಯಾದ ಭಾಷೆಯಲ್ಲಿ ತಪ್ಪುಗಳಿಗೆ ಅವಕಾಶವೇ ಇರುವುದಿಲ್ಲ. ಸತ್ತವರು ಯಾವ ತಪ್ಪನ್ನೂ ಮಾಡಲಾರರು, ತಾವು ಮಾಡಿದ್ದ ತಪ್ಪುಗಳನ್ನು ತಿದ್ದಿಕೊಳ್ಳಲೂ ಆರರು. ಮಡಿಯಲ್ಲದ ಭಾಷೆ ತನ್ನ ತಪ್ಪುಗಳ ಮೂಲಕವೇ ಜೀವಂತವಾಗಿರುತ್ತದೆ, ಬದುಕಿರುವ ಮನುಷ್ಯರು ತಪ್ಪುಗಳ ಮೂಲಕವೇ, ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕವೇ ಜೀವಂತವಾಗಿರುವಂತೆ. ತಪ್ಪುಗಳಿಗೆ ಜಯವಾಗಲಿ! ತಪ್ಪುಗಳ ಬಗ್ಗೆ ಹುಟ್ಟುವ ಎಚ್ಚರ ಜೀವಂತವಾಗಿರಲಿ! ತಪ್ಪು ಆಗುತ್ತಿರುವ ಕ್ಷಣದಲ್ಲೇ ಇದು ತಪ್ಪು ಇದ್ದೀತು ಅನ್ನುವ ಅರಿವು ಮೂಡುತ್ತಿರಲಿ! ತಪ್ಪು ತಿದ್ದುವಾಗ ಕೊಂಚ ಅನುಮಾನವೂ ಸಹನೆಯೂ ಮಿಡಿಯುತ್ತಿರಲಿ! ತಪ್ಪುಗಳಿಗೆ ಜೈ! ಮಡಿಗೆ ಧಿಕ್ಕಾರ!!

- olnswamy ರವರ ಬ್ಲಾಗ್
- Login or register to post comments
- 1512 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮಡಿ ಮಡಿಯಲಿ
ಚೆನ್ನಾಗಿ ಬರೆದಿದ್ದೀರಿ ಸಾರ್.
ನೀವು ಬರವಣಿಗೆ ಕುರಿತಂದ ಮಾತಲ್ಲಿ ಅದು ಕೃತಕ ಹಾಗೂ ಅಸಹಜ ಅಂದಿದ್ದು ಕಂಡು ಆಶ್ಚರ್ಯವಾಯಿತು. ಮಾತು ಹಾಗೂ ಬರವಣಿಗೆಗಳ ನಡುವೆ ಕಾಣುವ ವೈರುಧ್ಯ ಎಷ್ಟು ನಿಜ? ಅದೊಂದು ಬಗೆಯ ಕಟ್ಟುಕತೆಯಲ್ಲವೇ? ಬರವಣಿಗೆ ಭಾಷೆಯ ಒಂದು ತರದ ಉಪಯೋಗವಾಗಿದ್ದು ಮಾತಿಗಿಂತ ಬೇರೆಯದಾಗಿದೆ, ನಿಜ. ಆದರೆ ಮಾತಿನಲ್ಲಿಯೂ ಆಡು ಮಾತು ಹಾಗೂ ಔಪಚಾರಿಕ ಮಾತಿನಲ್ಲಿ ಇರುವ ಭೇಧ ಕೂಡ ಬರವಣಿಗೆಯ ಜತೆಯ ಅದರ ಬಿನ್ನತೆಯಂತಿಲ್ಲವೇ? ಆಡುಮಾತು ಹಾಗೂ ಬರವಣಿಗೆ ಹಾಗೂ ಔಪಚಾರಿಕ ಮಾತಿನ ನಡುವೆ ಇರುವ ಭಿನ್ನತೆಗಳನ್ನು ಸಹಜ - ಅಸಹಜ ಎನ್ನುವ ಚೌಕಟ್ಟಿನೊಳಗೆ ನೋಡುವಲ್ಲಿ ಅಷ್ಟೇನೂ ಲಾಭವಿಲ್ಲ ಎಂದು ನನ್ನೆಣಿಕೆ. ಯಾಕೆಂದರೆ, ಆಡುಮಾತು ಸಹಜ ಅನ್ನುವಾಗ ನಾವು ಭಾಷೆಯ ಕೆಲವು ಸ್ವಭಾವ/ ಗುಣಗಳನ್ನು ಮೌಲ್ಯೀಕರಿಸುತ್ತೇವೆ; ಬರವಣಿಗೆ ಅಸಹಜ ಅನ್ನುವಾಗ ಇನ್ನು ಕೆಲ ಗುಣ-ಸ್ವಭಾವಗಳನ್ನು ಅಪಮೌಲ್ಯೀಕರಿಸುತ್ತಿದ್ದೇವೆ. ಇವೆರಡೂ ನೋಟಗಳಲ್ಲಿ ಭಾಷೆ ಕುರಿತಾಗಿ ರಮ್ಯ ಭಾವನೆ ಇದೆಯಾ - ಅಂದರೆ ಭಾಷೆ ಮಾತಿನಲ್ಲಿ ಸತ್ಯಕ್ಕೆ, ಆಡುವವನ ಇಂಗಿತಕ್ಕೆ, ಅರ್ಥಕ್ಕೆ ಹೆಚ್ಚು ಹತ್ತಿರವಿರುತ್ತದೆ ಎಂಬ ನಂಬಿಕೆ?
ಆಡುಮಾತು ಹಾಗೂ ಬರವಣಿಗೆಗಳ ನಡುವೆ ಭಿನ್ನತೆಗಳು ಇಲ್ಲವೆಂದಲ್ಲ ನನ್ನ ಅಂಬೋಣ. ಆದರೆ, ಆ ಭಿನ್ನತೆಗಳನ್ನು ಮೌಲ್ಯೀಕರಣದ ಚೌಕಟ್ಟಿನಲ್ಲಿ ನೋಡುವುದರ ಕುರಿತು ನನ್ನ ಸಂದೇಹ.
ನಿಮ್ಮ ಘೋಷಣೆಯಾದ ತಪ್ಪುಗಳಿಗೆ ಜೈ, ಮಡಿಗೆ ಧಿಕ್ಕಾರ ಕ್ಕೆ ನನ್ನ ದನಿಯನೂ ಸೇರಿಸುವೆ.
ಕಮಲಾಕರ
ಸಹಜ ಮತ್ತು ಕೃತಕ
ನಿಮ್ಮ ನಿಲುವು ಆಧುನಿಕೋತ್ತರ ಚಿಂತನೆಯ ಪ್ರಕಾರ ಸಮರ್ಥನೀಯ. ಆದರೆ ಬರವಣಿಗೆಯ ಸಂಕೇತ ವ್ಯವಸ್ಥೆ ಆಡುಮಾತಿನ ಸಮಗ್ರತೆಯನ್ನು ಹಿಡಿಯಲಾರದು. ಮತ್ತೆ ಬರವಣಿಗೆಯ ಕೌಶಲವನ್ನು ಹೆಚ್ಚು ಪ್ರಯತ್ನಪೂರ್ವಕವಾಗಿಯೇ ಬೆಳೆಸಿಕೊಳ್ಳಬೇಕು. ಬರವಣಿಗೆ ದ್ವಿತೀಯ ಹಂತದ ಸಂಕೇತವ್ಯವಸ್ಥೆ. ಅಷ್ಟೆಲ್ಲ ತಾಂತ್ರಿಕವಾಗಿ ಹೇಳುವ ಬದಲಾಗಿ ಇಲ್ಲಿ ಹೆಚ್ಚು ಜನಕ್ಕೆ ಅರ್ಥವಾಗುವ ಡಿಸ್ಕೋರ್ಸನ್ನು ಬಳಸಿದ್ದೇನೆ. ಗಮನವಿಟ್ಟು ನೋಡಿದರೆ ನಮ್ಮ ವ್ಯಾಕರಣಗಳೆಲ್ಲ ದ್ವಿತೀಯ ಹಂತದ ಸಂಕೇತಗಳನ್ನು ಆಧಾರವಾಗಿಟ್ಟುಕೊಂಡೇ ಹುಟ್ಟಿವೆ ಎಂದು ತಿಳಿಯುತ್ತದೆ. ಸಂಜ್ಞೆ ಸೂಚಕ ಇತ್ಯಾದಿ ತಾಂತ್ರಿಕ ಚರ್ಚೆ ನೀವು ಸಿಕ್ಕಾಗ ಮಾಡೋಣ.
ಆಡುಮಾತಿನ ಮೇಲೆ ಅಪನಂಬಿಕೆ ಹುಟ್ಟಿದಾಗ ಬರವಣಿಗೆಗೆ ಪ್ರಾಮುಖ್ಯ ಬಂತೋ? ಆಡು ಮಾತು ಅಕ್ಷರಗಳಷ್ಟು ಸುಸ್ಥಿರವಲ್ಲದ್ದರಿಂದ ಬರವಣಿಗೆ, ಇತರ ಎಲ್ಲ ಮನುಷ್ಯ ನಿರ್ಮಿತ ವ್ಯವಸ್ಥೆಗಳಂತೆಯೇ, ಸ್ಥಿರತೆಯ ಭಾವನೆಯನ್ನು ಹುಟ್ಟಿಸಿತೋ? ಕೃತಕ-ನಿರ್ಮಿತವಾದದ್ದು ಅನ್ನುವ ಅರ್ಥದಲ್ಲಿ ಬರವಣಿಗೆ ಮಾತಿಗಿಂತ ಹೆಚ್ಚು ಕೃತಕ.
ನುಡಿ ಮತ್ತು ಬರೆಹ
ಭಾಷೆಗೆ ಸಂಬಂಧಿಸಿದ ಚರ್ಚೆ ಆರಂಭಿಸುವುದೆಂದರೆ ಹೆದರಿಕೆಯಾಗುತ್ತದೆ. ತುಂಬಾ ಲ್ಯಾಂಡ್ ಮೈನ್ಸ್ ಇರುವ ಸ್ಥಳ ಇದು. ಬರೆಹ ಮತ್ತು ಮಾತಿನ ಮಧ್ಯೆ ಇರುವ ವ್ಯತ್ಯಾಸಕ್ಕೆ ಬಹಳ ಮುಖ್ಯ ಕಾರಣವೊಂದಿದೆ. ನೇರವಾಗಿ ಸಂಭಾಷಿಸುವಾಗ ನಮ್ಮ ಧ್ವನಿಯ ಏರಿಳಿತ, ಬಾಡಿ ಲಾಂಗ್ವೇಜ್ ಕೂಡಾ ಕೆಲ ಹಂತದ ಸಂವಹನವನ್ನು ಸಾಧಿಸುತ್ತಿರುತ್ತದೆ. ದೂರವಾಣಿಯನ್ನು ಬಳಸುವಾಗ ಧ್ವನಿಯ ಏರಿಳಿತಗಳು ಮುಖ್ಯವಾಗುತ್ತವೆ. ಎದುರೆದುರು ಕುಳಿತು ಮಾತನಾಡುವಾಗ ಮಧ್ಯೆ ಇರುವ ಮೌನಕ್ಕೂ, ದೂರವಾಣಿಯಲ್ಲಿ ಮಾತನಾಡುವಾಗ ಬಳಕೆಯಾಗುವ ಮೌನದ ನಡುವೆ ವ್ಯತ್ಯಾಸವಿದೆಯಲ್ಲವೇ.
ಬರೆಹದಲ್ಲಿ ಧ್ವನಿಯ ಏರಿಳಿತಕ್ಕೆ ಅವಕಾಶವೇ ಇಲ್ಲ. ಪದಗಳನ್ನು ಅವುಗಳ ತಥಾಕಥಿತ ಪ್ರಮಾಣೀಕೃತ ಅರ್ಥಗಳಲ್ಲಿ ಮಾತ್ರ ಬಳಸಬೇಕಾಗುತ್ತದೆ. ಈ ವ್ಯತ್ಯಾಸವನ್ನು ಓಎಲ್ಎನ್ ಸಹಜ ಮತ್ತು ಕೃತಕ ಎಂದು ವಿಭಜಿಸಿದ್ದಾರೆಂದು ನನ್ನ ಭಾವನೆ.
-ಇಸ್ಮಾಯಿಲ್
ಆಡು ಮಾತು
ನೀವು ಹೇಳುತ್ತಿರುವುದು ನಿಜ. ವ್ಯಾಕರಣದ ಮತ್ತು ಬರವಣಿಗೆಯ ಪ್ರಾಮುಖ್ಯತೆಯ ಉತ್ಪತ್ತಿಯ ಕುರಿತು ನೀವನ್ನುವ ಮಾತುಗಳು ಅರ್ಥಪೂರ್ಣವಾಗಿವೆ. ಚರ್ಚೆಗೆಂದು ಮತ್ತೆ ಬರೆಯುತ್ತಿದ್ದೇನೆ, ಹಠವೆಂದು ತಿಳಿಯದಿರಿ.
ನಾನು ಬರವಣಿಗೆ ಎನ್ನುವುದನ್ನು ಹಾಳೆಯ ಮೇಲೆ ಮೂಡಿಸಿದ ಗುರುತುಗಳ ಹೊರತಾಗಿಯೂ ನೋಡುತ್ತ, ಮಾತಿನಲ್ಲಿ ಕೂಡ ಹೇಗೆ ಸುಸ್ಥಿರತೆಯ ಬಂಧವಿದೆ (ಬರವಣಿಗೆಯಂತೆ) ಎನ್ನುವುದರ ಕುರಿತು ಯೋಚಿಸುತ್ತಿದ್ದೆ. ಆಡು ಮಾತು ನಮಗೆ ಹತ್ತಿರವಾಗುವಾಗ (ಹೀಗೆ ಹತ್ತಿರವಾಗುವುದು ಸರಿಯೋ ತಪ್ಪೋ ಎನ್ನುವುದು ಪ್ರಸ್ತುತವಲ್ಲ ಇಲ್ಲಿ) ಅದು ಬರವಣಿಗೆ ತನ್ನ ವಿರುದ್ಧ ಪದವೆಂದು ಭಾವಿಸಿಕೊಳ್ಳುತ್ತದೆಯೇ? ಇವುಗಳ ನಡುವೆ ಪೈಪೋಟಿಯನ್ನು ನಾವು ಊಹಿಸಿಕೊಂಡರೆ ಆಗ ನಾವು ಆಡುಮಾತು ಹೆಚ್ಚು ಸಂವಹನ ಸಾಧಿಸುತ್ತದೆ ಇತ್ಯಾದಿ ವಿಚಾರಗಳಲ್ಲಿ ಸಿಲುಕಿಕೊಳ್ಳುತ್ತೇವೆಯೇ? ಮಾತು, ಆಡುಮಾತು, ಔಪಚಾರಿಕ ಮಾತು (ಭಾಷಣ ಇತ್ಯಾದಿ) ಗಳೆಲ್ಲ ಭಾಷೆಯ ಬೇರೆ ಬೇರೆ ತರನ ಉಪಯೋಗಗಳೆಂದುಕೊಂಡರೆ, ಅವುಗಳಲ್ಲಿ ಯಾವುದು ಮೊದಲು (ಹುಟ್ಟಿನಲ್ಲಿ ಅಥವಾ ಪ್ರಾಮುಖ್ಯತೆಯಲ್ಲಿ) ಎಂಬ ಪೈಪೋಟಿಗೆಡೆ ಮಾಡುವ ವಾದಗಳಿಂದ ಬಚಾವಾಗಬಹುದೇನೋ. ಬರವಣಿಗೆಗೆ ಸ್ಥಿರತೆ ಇದೆ ಎನ್ನುವುದು ಕೊಂಚ ಕಷ್ಟವೇ ಅಲ್ಲವೇ? ಅದಿದ್ದಿದ್ದರೆ, ವ್ಯಾಖ್ಯಾನದ (ಅರ್ಥವಿವರಣೆಯ) ಅವಶ್ಯಕ್ತೆಯೂ ಕಮ್ಮಿಯಿರುತ್ತಿತ್ತು. ಅದೇ ಬರವಣಿಗೆ ಅದು ಹೇಗೆ ಬೇರೆ ಕಾಲ ದೇಶ, ಓದುವ ಮನಸ್ಸಿನಲ್ಲಿ ಅದೆಷ್ಟು ಬಗೆಯ ರೂಪತಾಳುತ್ತದೆ ಎಂದರೆ ಅರ್ಥದ ಸ್ತರದಲ್ಲಿ ಸ್ಥಿರತೆ ಸಂದೇಹಾತ್ಮಕವೇ. ಆದರೆ, ಇದು ನಿಜ ಅದಕ್ಕೆ ಭೌತಿಕ ಸ್ತರದಲ್ಲಿ ಸ್ಥಿರತೆ ಇರುತ್ತದೆ, ಆಡುಮಾತಿಗೆ (ಆಡುತ್ತಿರುವಮಾತಿಗೆ) ಹಾಗಲ್ಲ. ಆದರೆ, ಆಡು ಮಾತನ್ನು ಬರೆಯಬಹುದಲ್ಲ.
ಅಂದಹಾಗೆ, ಇಸ್ಮಾಯಿಲ್ ರವರೆ, ಮಾತಿನಲ್ಲಿ ನಾವು ದೇಹಾಭಿನಯ, ಜೆಸ್ಚರ್ ಇತ್ಯಾದಿ ಬಳಸುವುದು ನಿಜ ಹಾಗೂ ಸಂವಹನದಲ್ಲಿ ಅವುಗಳ ಕೊಡುಗೆಯ ಕುರಿತು ನೀವನ್ನುವುದು ಸರಿ. ಆದರೆ ಅವು ಕೂಡ ಪ್ರತ್ಯೇಕ ಭಾಷೆಯಂತೆ, ಸಂಭಾಷಣೆಯ ಸಂದರ್ಭದಲ್ಲಿ ಸಹಕರಿಸುತ್ತವೆ. ಅಂತಹ ಸಹಕಾರ ಬರವಣಿಗೆ, ಔಪಚಾರಿಕ ಮಾತುಗಳಿಗೂ ತಮ್ಮದೇ ಇರುತ್ತವೆ. ಹಾಗಾಗಿ, ದೇಹಾಭಿನಯ, ಕಣ್ಸನ್ನೆ ಇತ್ಯಾದಿ ಹೆಚ್ಚುವರಿ ಸಾಧನಗಳು ಮಾತಿಗೆ ದೊರೆಯುತ್ತಿರುವುದು ಅದರ ಮೌಲ್ಯ ಹೆಚ್ಚಿಸುತ್ತದೆ ಎನ್ನುವ ಹೋಲಿಕೆ ಸಾಧುವಾದೀತೇ?
ಆಡು ಮಾತನ್ನು ಬರವಣಿಗೆಯಲ್ಲಿ ಉಪಯೋಗಿಸಿದಾಗ ಏನಾಗುತ್ತದೆ? (ಉಪಯೋಗಿಸಲಾದೀತೇ?) ಅಲ್ಲಿಯೂ ಇವೆರಡು ಚೌಕಟ್ಟುಗಳು ಲಭ್ಯವೇ? ಯಾಕೆಂದರೆ, ಆಡುಮಾತನ್ನು ಬರೆಯಲು (ಅಕ್ಷರೀಕರಿಸಲು) ಸಾಧ್ಯ. ಅಂದರೆ, ಬರವಣಿಗೆಯೊಳಗೇ ಆಡುಮಾತು ಸಾಧ್ಯವಿದೆ (ಸಾಹಿತ್ಯದಲ್ಲಿ ಕಾಣುತ್ತೇವೆ, ಉದಾ.). ಹಾಗೆಯೇ ಆಡುಮಾತಿನಲ್ಲಿ ಬರವಣಿಗೆ ಕೂಡ ಸಾಧ್ಯವೆನ್ನುವುದಕ್ಕೆ ಮಂತ್ರಗಳನ್ನು ಪಠಿಸುವ ಉದಾಹರಣೆ ನೋಡಬಹುದು; ಅಥವಾ ಉರುಹೊಡೆದು ಮರುಹೇಳುವ ಪದ್ಧತಿಯೆಡೆ ನೋಡಬಹುದು. ಮಂತ್ರಗಳನ್ನು (ಉದಾಹರಣೆಗೆ ಮಾತ್ರ) ಮೌಖಿಕವೆನ್ನುವುದು ಬರವಣಿಗೆಯನ್ನು ನಾವು ಹಾಳೆಯ ಮೇಲೆ ಬರೆಯುವದನ್ನಷ್ಟೇ ಬರವಣಿಗೆ ಎಂದುಕೊಂಡರೆ ಮಾತ್ರ. ಓ.ಎಲ್.ಎನ್. ಸ್ವಾಮಿಯವರು ಅನ್ನುವಂತೇ ಬರವಣಿಗೆಯನ್ನು ಅದರ ಸುಸ್ಥಿರ ಬಂಧದೊಂದಿಗೆ ಜೋಡಿಸಿದಾಗ ಹಲವು ಬಗೆಯ ಮೌಖಿಕತೆಗಳನ್ನೂ ಕೂಡ ಬರವಣಿಗೆಯಲ್ಲಿ ಕೂಡಿಸಿಕೊಳ್ಳ ಬೇಕಾಗುತ್ತದೆ ಎನಿಸುತ್ತದೆ.
ಕಮಲಾಕರ
ಮಾತು ಮೊದಲು, ಬರಹ ಆ ಮೇಲೆ
ನಿಮ್ಮ ಹಿಂದಿನ ಬರಹಕ್ಕೂ ಈ ಬರಹಕ್ಕೂ ಹೋಲಿಸಿದರೆ ಬಹಳ ಮನಸ್ಸಿಟ್ಟು, ಸಾಕಸ್ಟು ತಿಳಿದುಕೊಂಡು ಇದನ್ನು ಬರೆದಿದ್ದೀರಿ. ಅವರಿಗೂ, ಇವರಿಗೂ ಸರಿ ಅನ್ನಿಸುವಂತೆ, ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದೀರಿ.
1) ಇಂಗ್ಲೀಸು ಜಗತ್ತಿನ ಎಲ್ಲಾ ನುಡಿಗಳಿಂದಲೂ ಪದಗಳನ್ನು ತೆಗೆದುಕೊಂಡಿದೆ, ಆದರೆ ತನ್ನ ಹದ ಕೆಡಿಸಿಕೊಂಡಿಲ್ಲ. ಉದಾ: ಇತ್ತೀಚಿನ ದಿನಗಳಲ್ಲಿ ಇಂಗ್ಲಿಸ್ ಪದಕಣಜದಲ್ಲಿ 'bangalored' ಎಂಬ ಹೊಸ ಕೆಲಸಪದ ಸೇರಿಕೊಂಡಿತು. ಅಂದರೆ ಅಮೇರಿಗನೊಬ್ಬ, ಅವನ ಕೆಲಸ ಬಾರತಕ್ಕೆ ರವಾನೆಯಾಗಿ ಕೆಲಸ ಕಳೆದುಕೊಂಡರೆ, 'he was bangalored' ಅಂತ. ನೋಡಿ 'ಬೆಂದಕಾಳೂರು' ಎಂಬ ಅಚ್ಚ ಕನ್ನಡದ ಪದ ಇಂಗ್ಲೀಸಿಗೆ ಹೋಗಿ ಹೇಗೆ ಅದರದೇ ಪದವಾಗಿದೆ. ಅದು ಬ್ಯಾಂಗಲೂರ್ ಅಲ್ಲ, ಬೆಂಗಳೂರು ಅಂತ ಕುಳಿತಿದ್ದರೆ, ಅ ಪದ ಎಂದೂ ಇಂಗ್ಲೀಸಿಗೆ ಸಿಗುತ್ತಿರಲಿಲ್ಲ.
ಕನ್ನಡದಲ್ಲೂ ಇದೇ ಆಗಬೇಕಿದೆ. ಕನ್ನಡದ ಹುಟ್ಟಿಗೆ ಸಕ್ಕದ ಕಾರಣವಾಗಿಲ್ಲ ಎಂಬುದು, ಆಡುಮಾತಿಗೂ, ಬರವಣಿಗೆಗೂ ಇರುವ ವ್ಯತ್ಯಾಸ ನೋಡಿದರೆ ತಿಳಿದು ಬಿಡುತ್ತದೆ. 'ಭಾಷೆ' ಕನ್ನಡಿಗನ ಬಾಯಲ್ಲಿ 'ಬಾಸೆ' ಆಗಿದ್ದರೆ ಅದನ್ನು ಹಾಗೆ ಇರಲು ಬಿಡಬೇಕಿತ್ತು, ಅದು ಬಿಟ್ಟು 'ಭ', 'ಷ' ಗಳನ್ನು ಸೇರಿಸಬೇಕಿರಲಿಲ್ಲ.(ಸೇರಿಸುವ ಅವಸ್ಯಕತೆ ಇರಲಿಲ್ಲ). ಹೃದಯ 'ರುದಯ' ಆಗಿದ್ದರೆ ಅದನ್ನು ಇರಲು ಬಿಡಬೇಕಿತ್ತು, ಅದಕ್ಕಾಗಿ 'ಋ' ಸೇರಿಸಬೇಕಿರಲಿಲ್ಲ.
ಹ, ಮತ್ತು ಳ, ಕನ್ನಡ ತಾನೆ ತಾನಾಗಿ ಬೆಳೆದಂತೆ ಹುಟ್ಟಿದವುಗಳು. 'ಪ' ದಿಂದ 'ಹ' ಗೆ ಬದಲಾಗಿದೆ. ದ್ರಾವಿಡದ 'ಪಾಲು' ಕನ್ನಡದಲ್ಲಿ 'ಹಾಲು' ಆಗಿದೆ. ಕನ್ನಡದಲ್ಲಿ ಪಾಲು ಅಂದರೆ 'ಪಾಲಿಗೆ ಬಂದದ್ದು' ಅನ್ನುವ ಅರ್ತವಿದೆ. ಹಾಗಾಗಿ 'ಹ' ಕನ್ನಡದಲ್ಲಿಯೇ ಹುಟ್ಟಿದ್ದು ಅನ್ನಬಹುದು. 'ಹುಟ್ಟಿದ್ದು', 'ಉಟ್ಟಿದ್ದು' ಎರಡಕ್ಕೂ ಬೇರೆ ಬೇರೆ ಅರ್ತಗಳಿರುವುದರಿಂದ 'ಹ' ವನ್ನು 'ಅ' ಅನ್ನಬಾರದು.
ಹಾಗೆಯೇ ಳ, 'ಪಲ್ಲಿ' ಯಿಂದ 'ಹಳ್ಳಿ', 'ಪಳಿ' ಅಂದರೆ ಮರ ಕೊರೆದು ಮಾಡಿದ ವಸ್ತು. 'ನಲ್' ನಿಂದ 'ನಳ'. 'ಹಲ್ಲಿ' ಎಂದರೆ ಮನೆಯ ಗೋಡೆಯ ಮೇಲೆ ಹೆಚ್ಚಾಗಿ ಕಾಣಬರುವ ಒಂದು ಜೀವಿ. ಅದಕ್ಕಾಗಿ 'ನಲ್ಲಿ' ಗಿಂತ 'ನಳ' ಸರಿಗನ್ನಡ. 'ಕೇರಲ್' ದಿಂದ 'ಕೇರಳ'. 'ತಾಲ್' ದಿಂದ 'ತಾಳ', 'ಮೇಲ್' ದಿಂದ 'ಮೇಳ', ಇತ್ಯಾದಿ.
ಅದಕ್ಕಾಗಿ ಪದಗಳ ಗೊಂದಲವನ್ನು ಬಿಟ್ಟು ಬೇಗರಣವನ್ನು ತಿದ್ದುವ ಅವಸ್ಯಕತೆ ಇದೆ. ಮಹಾಪ್ರಾಣಗಳು ಬೇಡ. 'ಶ' ಮತ್ತು 'ಷ' ಗಳು ಬೇಕಿಲ್ಲ. 'ಋ' ವನ್ನು ಈಗಾಗಲೇ ತೆಗೆಯಲಾಗಿದೆ. ಇಸ್ಟಾದರೇ, ಕನ್ನಡ ತುಸು ಕೈಗೆ ಬಂದೀತು.
ಹೊಸ ನಾಡ ಕಟ್ಟೋಣ
ಪ ಮತ್ತು ಹ ಮತ್ತು ಉ
ಅಡ್ಡಗೋಡೆಯ ದೀಪ ಎರಡೂ ಕಡೆಗೆ ಬೆಳಕು ಚೆಲ್ಲೀತೆಂದು ಮಿಣುಕು ಆಸೆ! ಇರಲಿ. ಹಳಗನ್ನಡದ 'ಪ'ಕಾರಗಳೆಲ್ಲ 'ಹ'ಕಾರಗಳಾಗಿ ಬದಲಾಗಲಿಲ್ಲ. ಉದಾಹರಣೆಗೆ ಪಯಿರು ಪೈರು ಎಂದಾಗಿದೆಯೇ ಹೊರತು ಹಯಿರು, ಹೈರು ಎಂದಾಗಲಿಲ್ಲ. ಯಾವ 'ಪ'ಕಾರ ಮಾತ್ರ 'ಹ' ಆಗಿ ಬದಲಾಯಿತೆಂಬುದು ಭಾಷಾವಿಜ್ಞಾನಿಗಳ ಕುತೂಹಲ ಕೆರಳಿಸಿರುವ ಸಂಗತಿ. 'ಹುಟ್ಟು' 'ಉಟ್ಟು' ಇಂಥ ಪದಗಳಲ್ಲಿರುವ ಅರ್ಥವ್ಯತ್ಯಾಸ ಬರವಣಿಗೆಯಲ್ಲಿ ಸ್ಪಷ್ಟವಾಗುವುದಕ್ಕೆ ಬೇರೆ ಬೇರೆ ಸಂಕೇತಗಳು ಬೇಕು ಅನ್ನುವುದು ನಿಜ. ಆದರೆ ಆಡುಮಾತಿನಲ್ಲಿ 'ಉಟ್ದೋರೆಲ್ಲ ಸಾಯ್ಲೇಬೇಕು' ಅನ್ನುವ ವಾಕ್ಯ ಕೇಳಿದಾಗ ಸಂದರ್ಭಕ್ಕೆ ಅನುಗುಣವಾಗಿ ಜನ ಸರಿಯಾಗಿಯೇ ಅರ್ಥಮಾಡಿಕೊಳ್ಳುತ್ತಾರೆ. ಸುಶಿಕ್ಷಿತರಲ್ಲದ ಜನರ ಬಳಕೆಯಲ್ಲಿ ಮಹಾಪ್ರಾಣಗಳೂ ಕೇಳುವುದಿಲ್ಲ. ಆದರೂ ಕೇಳುಗರು ತಪ್ಪಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ಬರವಣಿಗೆಯ ಶುದ್ಧತೆಯೇ ಬೇರೆ, ಆಡುಮಾತಿನ ಶುದ್ಧತೆಯೇ ಬೇರೆ.
ಆಡುಮಾತಿನ ಅರ್ಥವಂತಿಕೆ ಜೀವಂತ ಸಂದರ್ಭದಲ್ಲಿರುತ್ತಾದ್ದರಿಂದ ಅಲ್ಲಿ ಮಡಿ ಮೈಲಿಗೆಯ ಪ್ರಶ್ನೆಯೈ ಇಲ್ಲ. ಬರಹದಲ್ಲಿ ಕೇವಲ ದೃಶ್ಯವಾಗಿ ಭಾಷೆಯನ್ನು ಬಳಸುವುದರಿಂದ ಅಪಾರ್ಥಕ್ಕೆ ಎಡೆಯಾಗದಿರಲೆಂದು ದೃಶ್ಯಸಂಕೇತಗಳ ವ್ಯತ್ಯಾಸ ಉಳಿಸಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯ. ಆಡುನುಡಿ ಮತ್ತು ಬರಹಗಳ ವ್ಯವಹಾರವನ್ನು ವಿವರಿಸುವುದು ತೀರ ತಾಂತ್ರಿಕವೆಂದು ಅದಕ್ಕೆ ಕೈ ಹಾಕಿಲ್ಲ. ಆಸಕ್ತಿ ಇರುವವರು ವಾಲ್ಟರ್ ಜೆ ಓಂಗ್ ಎಂಬ ವಿದ್ವಾಂಸ ಬರೆದಿರುವ ಒರಾಲಿಟಿ ಅಂಡ್ ಲಿಟರೆಸಿ ಪುಸ್ತಕವನ್ನು ನೋಡಬಹದು.
;-)
ವಿನಯದ ಕೊರತೆ
'ನಿಮ್ಮ ಹಿಂದಿನ ಬರಹಕ್ಕೂ ಈ ಬರಹಕ್ಕೂ ಹೋಲಿಸಿದರೆ ಬಹಳ ಮನಸ್ಸಿಟ್ಟು, ಸಾಕಸ್ಟು ತಿಳಿದುಕೊಂಡು ಇದನ್ನು ಬರೆದಿದ್ದೀರಿ.' ಎಂಬ ಸಂಗನಗೌಡರ ಈ ವಾಕ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಭಾಷೆಯ ಕುರಿತ ಚರ್ಚೆಯನ್ನು ಈವರೆಗೂ ಗಮನಿಸಿರುವ ನನಗೆ ಸಂಗನಗೌಡರು ತಮ್ಮ 'ಹಬಿಮಾನ'ದ ಜತೆಗೆ ಸ್ವಲ್ಪ ವಿನಯವನ್ನೂ ಸೇರಿಸಿಕೊಂಡು 'ಬಹಳ ಮನಸ್ಸಿಟ್ಟು, ಸಾಕಷ್ಟು ತಿಳಿದುಕೊಂಡು' ಬರೆಯಬೇಕು ಎನಿಸುತ್ತಿದೆ.
ಹೌದೌದು!
ಭಟ್ ಅವರ ಅಭಿಪ್ರಾಯವೇ ನನ್ನ ಮನಸ್ಸಿನಲ್ಲಿಯೂ mooಡಿದೆ. ಸ್ವಲ್ಪ ನಿಧಾನವಾಗಿ ಹೇಳುವುದು ಉಚಿತ.
ಗೌಡರು "ಮಾತು ಮೊದಲು, ಬರಹ ಆ ಮೇಲೆ" ಎನ್ನುವ ತಮ್ಮ ಪ್ರತಿಕ್ರಿಯೆಯಲ್ಲಿ ಅನೇಕ ಶಬ್ದಗಳನ್ನು ಗ್ರಾಮ್ಯಶೈಲಿಯ/ಆಡುಮಾತಿನ ಕನ್ನಡವೆಂದು ಭಾವಿಸಿ ಬಲವಂತದಿಂದ ಬರೆದಿದ್ದಾರೆ ಅನ್ನಿಸುತ್ತದೆ. ಮಾತನಾಡಿದಂತೆಯೇ ಬರೆಯಬೇಕು ಎನ್ನುವುದು ತಪ್ಪಲ್ಲದಿದ್ದರೂ, ಬರವಣಿಗೆಗೇ ಅಂತ ಒಂದು ಶಿಷ್ಟಾಚಾರವಿಲ್ಲದಿದ್ದರೆ ಅದೂ ಸಹ ಭಾಷೆಯ ಬೆಳವಣಿಗೆಗೆ ಅಡ್ಡವಲ್ಲವೇ? ಅದೂ ಅಲ್ಲದೇ ಉತ್ತರಕರ್ನಾಟಕದ ಹಳ್ಳಿಯ ಜನ ಅಲ್ಪಪ್ರಾಣ ಹಾಗು ಮಹಾಪ್ರಾಣಗಳನ್ನು ನೈಸರ್ಗಿಕವಾಗಿಯೇ ಬಳಸುತ್ತಾರೆ. ವ್ಯಾಕರಣ ಗೊತ್ತಿಲ್ಲದೇ ಹೋದರೂ ಪ್ರಯೋಗವಂತೂ ಇದ್ದೇ ಇದೆಯಲ್ಲ? ಹೀಗಾಗಿ ಅಕ್ಷರಗಳನ್ನು ತೆಗೆದು ಹಾಕುತ್ತಾ ಹೋದರೆ ಕನ್ನಡ ಉಳಿಯುತ್ತದೆನ್ನುವುದು ಸೂಕ್ತವಲ್ಲ. ಬೇಗರನವನ್ನು ತಿದ್ದುವುದು ಯಾಕೆ? ಸರಿಯಾಗಿಯೇ ಇದೆಯಲ್ಲ?
ಎನಗಿಂತ ಕಿರಿಯರಿಲ್ಲ
ಬಲವಂತಿಕೆ?
ನಂದನರ ಟಿಪ್ಪಣಿ:
ಗೌಡರು "ಮಾತು ಮೊದಲು, ಬರಹ ಆ ಮೇಲೆ" ಎನ್ನುವ ತಮ್ಮ ಪ್ರತಿಕ್ರಿಯೆಯಲ್ಲಿ ಅನೇಕ ಶಬ್ದಗಳನ್ನು ಗ್ರಾಮ್ಯಶೈಲಿಯ/ಆಡುಮಾತಿನ ಕನ್ನಡವೆಂದು ಭಾವಿಸಿ ಬಲವಂತದಿಂದ ಬರೆದಿದ್ದಾರೆ ಅನ್ನಿಸುತ್ತದೆ.
ನೀವು ಹೇಳುವುದು ಸರಿ, ನಾನು ಆಡುಮಾತಿನ ಕನ್ನಡವನ್ನು, ಕನ್ನಡವೆಂದು ತಿಳಿದಿದ್ದೇನೆ
. ಇದು ತಪ್ಪು ಎಂದು ನೀವು ಹೇಳುತ್ತಿದ್ದೀರಾ? ಯಾವುದೇ ನುಡಿಯನ್ನು ಹೇಳುವಂತೆ ಬರೆಯುತ್ತೇವೆ, ಬರೆಯುವಂತೆಯೇ ಹೇಳುತ್ತೇವೆ. ಇಂಗಲೀಸ್‍ನಲ್ಲಿ "I want eat" ಎಂಬುದನ್ನು ಇನ್ನೇನೋ ಆಗಿ ಬರೆಯುತ್ತೀರ? ಕನ್ನಡದಲ್ಲಿ "ನಾನು ಉಣ್ಣಬೇಕು" ಅನ್ನುವದನ್ನು "ನಾನು ಭೋಜನ ಅನುಗ್ರಹಿಸಬೇಕು" ಎಂದು ಬರೆಯುವುದು ಏಕೆ? "ಶಬ್ದ" ಇದಕ್ಕೆ "ಸದ್ದು", ಗ್ರಾಮ್ಯ - ಹಳ್ಳಿ , ಭಾವಿಸಿ - ತಿಳಿದು,ಅಂದುಕೊಂಡು. "ನನ್ನನ್ನು ಏನೆಂದು ತಿಳಿದಿದ್ದೀರಿ" ಎಂಬುದನ್ನು "ನನ್ನನ್ನು ಏನೆಂದು ಭಾವಿಸಿಕೊಂಡಿದ್ದೀರಿ" ಎಂದೇಕೆ ಬರೆಯುವುದು? ತಪ್ಪು ತಿಳಿಯಬೇಡಿ. ಹೀಗಳಿಕೆ ನನ್ನ ಉದ್ದೇಸವಲ್ಲ.
ಕಾರಣ
ನನ್ನ ಮನದ ಬಗ್ಗೆ ಸರಿಯಾಗಿ ತಿಳಿಸಿಬಿಡುತ್ತೇನೆ,
೧) ನನಗೆ ತೆಂಕಣದ ಕನ್ನಡವೇ 'ಕನ್ನಡ' ಎಂಬ ಹಮ್ಮು-ಬಿಮ್ಮು ಯಾವೂದೂ ಇಲ್ಲ. ಸಂಬಳವನ್ನು 'ಪಗಾರ' ಅನ್ನಬೇಕೆಂದು ನಾ ಹೇಳುತ್ತಿಲ್ಲ.
೨) ನನಗೆ ಒಳಗೊಂದು ಹೊರಗೊಂದು ತಿಳಿದಿಲ್ಲ, ಅದಕ್ಕಾಗಿ ಮನ್ನಿಸಿ. ಆದಟ್ಟು ಜತುನಪಡುತ್ತೇನೆ, ವಿನಯದಿಂದಿರಲು.
೩) ನಾನು ಬಡಗಣದಲ್ಲಿ ಇದ್ದವನಿದ್ದೇನೆ, ಇಲ್ಲಿಯ ಬಹಳ ಗೆಳೆಯರನ್ನು ಗಳಿಸಿದ್ದೇನೆ. ನಾನು ಕರುನಾಡನ್ನು ಇಡಿಯಾಗಿ ನೋಡುತ್ತೇನೆ.
೪) ಇಲ್ಲಿ ನಾನು ಬರೆದಿರುವ ಕನ್ನಡ ಎಲ್ಲರಿಗೂ ತಿಳಿಯುವ ಸರಳ ಕನ್ನಡ, 'ಖನ್ನಡ' ವಲ್ಲ.
೫) ನಾನು ಸಾಲೆಯಲ್ಲಿ ಕಲಿತ 'ಖನ್ನಡ', ಕನ್ನಡವಲ್ಲ ಎಂದು ತಿಳಿದ ಮೇಲೆ, ಕೋಪ ಬರದೆ ಇನ್ನೇನಾಗಬೇಕು.
ದಯಮಾಡಿ ನನ್ನ 'ಕನ್ನಡವನ್ನರಸುತ್ತಾ....' ಬಾಲಗ ಸೇರುಪಡೆಯನ್ನು ನೋಡಿ.
ಇದ್ಯಾವ ಪರಿ
ಅರೆರೆ, ಇದೇನಿದು? ಅತೀವ ಕಷ್ಟಪಟ್ಟು ಮಾತನಾಡುತ್ತಿರುವ ಹಾಗಿದೆ ನೀವು? ಕರುನಾಡನ್ನು ಇಡಿಯಾಗಿ ನೋಡುವುದಕ್ಕೂ, ದೈನಂದಿನ ರೂಢಿಯಲ್ಲಿಲ್ಲದ ಶಬ್ದಗಳನ್ನು ಮಾತನಾಡುವುದಕ್ಕೂ, ತಪ್ಪು ಶಬ್ದಗಳನ್ನೇ ನಿತ್ಯನೈಮಿತ್ಯಿಕವೆಂದು ಭ್ರಮಿಸಿರುವುದಕ್ಕೂ ಎತ್ತಣ ಸಂಬಂಧ? ನಮ್ಮತನವನ್ನು ಪ್ರೀತಿಸುತ್ತಲೇ ರೆಗ್ಯುಲರ್ ಆಗಿ ಇದ್ರೆ ಸಾಕಪ್ಪ.
ಎನಗಿಂತ ಕಿರಿಯರಿಲ್ಲ
ಬಾಸೆ
ದೈನಂದಿನ ರೂಢಿಯಲ್ಲಿಲ್ಲದ ಶಬ್ದಗಳನ್ನು ಮಾತನಾಡುವುದಕ್ಕೂ ತಪ್ಪು ಶಬ್ದಗಳನ್ನೇ ನಿತ್ಯನೈಮಿತ್ಯಿಕವೆಂದು ಭ್ರಮಿಸಿರುವುದಕ್ಕೂ ಎತ್ತಣ ಸಂಬಂಧ? ನಮ್ಮತನವನ್ನು ಪ್ರೀತಿಸುತ್ತಲೇ ರೆಗ್ಯುಲರ್ ಆಗಿ ಇದ್ರೆ ಸಾಕಪ್ಪ.
ಬಾಸೆ ದಿನ ದಿನವೂ ರೂಡಿಯೊಳಗಿಲ್ಲದಿದ್ದರೆ ಸಾಯುತ್ತದೆ. ಬರವಣಿಗೆ ಆಡುಮಾತಿಗೆ ಪೂರಕವಾಗಿರಬೇಕು. ಆಡು ಮಾತನ್ನು ಮರೆಸುವ ಕೆಲಸವನ್ನು ಬರವಣಿಗೆ ಮಾಡಬಾರದು. ಕೈ ಮುಗಿದೆ ಸಾಮಿ.
Quote: tksbhat
tksbhat ರ ಟಿಪ್ಪಣಿ :
'ನಿಮ್ಮ ಹಿಂದಿನ ಬರಹಕ್ಕೂ ಈ ಬರಹಕ್ಕೂ ಹೋಲಿಸಿದರೆ ಬಹಳ ಮನಸ್ಸಿಟ್ಟು, ಸಾಕಸ್ಟು ತಿಳಿದುಕೊಂಡು ಇದನ್ನು ಬರೆದಿದ್ದೀರಿ.' ಎಂಬ ಸಂಗನಗೌಡರ ಈ ವಾಕ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ.
OLN ರು ಆಡು ನುಡಿಗೂ, ಬರಹಕ್ಕೂ ಹೆಚ್ಚಿನ ಅಂತರವಿರಬಾರದೆಂದು ಹೇಳಿರುವುದು ಉಚಿತ, ಅದಕ್ಕೇ ಹಾಗೆಂದಿದ್ದು.
ನಂದನರ ಟಿಪ್ಪಣಿ :
ಬರವಣಿಗೆಗೇ ಅಂತ ಒಂದು ಶಿಷ್ಟಾಚಾರವಿಲ್ಲದಿದ್ದರೆ ಅದೂ ಸಹ ಭಾಷೆಯ ಬೆಳವಣಿಗೆಗೆ ಅಡ್ಡವಲ್ಲವೇ?
ಕನ್ನಡ ಬರೆವಣಿಗೆಗೆ ತನ್ನದೇ ಆದ ನೇಮಾವಳಿ ಇದೆ. ಅದನ್ನು ಬಿಟ್ಟು ಸಕ್ಕದದ ನೇಮಗಳನ್ನು ಅಳವಡಿಸಿಕೊಂಡಿರುವುದರಿಂದ, ನುಡಿಯನ್ನು ನಾವು ತಪ್ಪು ತಪ್ಪಾಗಿ ಬರೆಯುತ್ತಿದ್ದೇವೆ. ಮನುಜ, ನೇಮಗಳನ್ನು ಪಾಲಿಸದೇ ಹಾಳಾಗುತ್ತಾನೆ, ನುಡಿಗೂ ಸಹ ಇದು ಅನುವಹಿಸುತ್ತದೆ. ಯಾವ ನೇಮಗಳವು ಎಂದು ಕೇಳಿ, ಒಂದು ಸರಳ ನೇಮ "ಒತ್ತಕ್ಕರದ ಕಟ್ಟಳೆ" ಈ ಲಿಂಕಿನಲ್ಲಿ ಚೆನ್ನಾಗಿ ಬರೆದಿದೆ, ಓದಿ. ಇಲ್ಲಿ ನೀವು ಬಳಸಿರುವ 'ಶಿಷ್ಟಾಚಾರ' ಎಂದರೆ 'manners'. ಅಂದರೆ ನೇಮಾವಳಿ, ಶಿ'ಷ್ಟ' ಇಲ್ಲಿ ಒತ್ತಕ್ಕರದರ ನೇಮ ಮುರಿಯಲಾಗಿದೆ. ನೀವೇ ಮಾತನಾಡುವಾಗ ಶಿಷ್ಟಾಚಾರ ಪದವನ್ನು ಬಳಸುತ್ತೀರ?
ನಂದನರ ಟಿಪ್ಪಣಿ:
ವ್ಯಾಕರಣ ಗೊತ್ತಿಲ್ಲದೇ ಹೋದರೂ ಪ್ರಯೋಗವಂತೂ ಇದ್ದೇ ಇದೆಯಲ್ಲ? ಹೀಗಾಗಿ ಅಕ್ಷರಗಳನ್ನು ತೆಗೆದು ಹಾಕುತ್ತಾ ಹೋದರೆ ಕನ್ನಡ ಉಳಿಯುತ್ತದೆನ್ನುವುದು ಸೂಕ್ತವಲ್ಲ. ಬೇಗರನವನ್ನು ತಿದ್ದುವುದು ಯಾಕೆ? ಸರಿಯಾಗಿಯೇ ಇದೆಯಲ್ಲ?
ಇಲ್ಲ ಸರ್, ಕನ್ನಡಿಗರಿಗೆ ಬೇಗರಣ ಗೊತ್ತಿದೆ. ಆದರೆ ನಾವು ಈಗ ಬಳಸುತ್ತಿರುವುದು ಕನ್ನಡದ ಬೇಗರಣವನ್ನಲ್ಲ. ಆನೆಯ ಕಾಲಿಗೆ ಮರಿಯಾಗಿದ್ದಾಗಲೇ ಸರಪಳಿಯನ್ನು ಕಟ್ಟಿದರೆ, ನಿಂತಲ್ಲಿ ನಿಂತಿರುವುದೇ ರೂಡಿಯಾಗಿ, ನಂತರ ಸರಪಳಿ ತೆಗೆದರೂ ಅದು ನಿಂತೇ ಇರುವಂತಾಗಿದೆ ನಮ್ಮ ಸಂದಬ್ಬ.
ಘಂಟೆ - ಗಂಟೆ ಯಾದದ್ದು ತಪ್ಪಿನಿಂದಲೇ?
ಹೂಂ....
ನಿಮ್ಮ ಲಿಂಕು ಆಸಕ್ತಿಕರವಾಗಿದೆ.
ಎನಗಿಂತ ಕಿರಿಯರಿಲ್ಲ
ಉ: ಹೂಂ....
"ಯಾವುದೇ ಭಾಷೆ ತುಂಬ ಮಡಿಯಾದರೆ ಸತ್ತೇ ಹೋಗುತ್ತದೆ" ಅನ್ನ೦ಗಿದ್ರೆ ಈ ಲೇಖ್ನ "ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು!" ಅನ್ನೋದ್ರ ಬದ್ಲಾಗಿ "ಇದುನ್ನ ಕೊ೦ಚ ತು೦ಟ್‍ತನ್‍ದಿ೦ದ ಬರ್‍ದಿದ್ದೀನಿ, ತಮಾಶೀಗೆ ಸತ್ಯಾನ ಕಾಣ್‍ಸೋ ಶಕ್ತಿ ಇರತ್ತಲ್ವಾ..ಹ೦ಗ್ ನೋಡುದ್ರೆ ತಮಾಶೀನ್ನೋದು ಭಾಳ ಸೀರಿಯಸ್ ಮನಸ್ನಲ್ಲೇ ಹುಟ್ಟೋದು" ಅ೦ತ ಇರ್‍ಬೇಕಾಗಿತ್ತು, ಹ೦ಗೇನೇನೇನೇ ಮು೦ದುವರೀಬೇಕಾಗಿತ್ತು. ಇನ್ನೊಬ್ರುದು ಮಡಿಯಾದ್ರೆ ತಮ್‍ದೇನು ಮಹಾಸ್ವಾಮಿ......
______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು