21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ

November 29, 2008 - 8:19am
olnswamy
ಇಂದು ಓದಿದ ವಚನ

ರಸವನರಿವುದಕ್ಕೆ ಜಿಹ್ವೆಯಾಗಿ ಬಂದು
ಗಂಧವನರಿವುದಕ್ಕೆ ನಾಸಿಕವಾಗಿ ಬಂದು
ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು
ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು
ಸ್ಪರ್ಶವನರಿವುದಕ್ಕೆ ತ್ವಕ್ಕಾಗಿ ಬಂದು
ಇಂತೀ ಘಟದ ಮಧ್ಯದಲ್ಲಿ ನಿಂದು
ಪಂಚವಕ್ತ್ರನಾದೆಯಲ್ಲ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವೇ

[ಇದು ಶಿವಲೆಂಕ ಮಂಚಣ್ಣನ ವಚನ. ಈತ ಮೂಲತಃ ಕಾಶಿಯವನು, ಪಂಡಿತ ಪರಂಪರೆಗೆ ಸೇರಿದವನು. ಉರಿಲಿಂಗದೇವ ಎಂಬ ಮತ್ತೊಬ್ಬ ಶರಣನ ಗುರು. ಕಾಲ ಕ್ರಿಶ ೧೧೬೦. ಇವನ ೧೩೨ ವಚನಗಳು ಸಿಕ್ಕಿವೆ.
ಘಟ-ಮಡಕೆ, ಪಾತ್ರೆ, ದೇಹ; ಪಂಚವಕ್ತ್ರ-ಐದು ಮುಖಗಳಿರುವನು, ಶಿವ; ಸದ್ಯೋಜಾತ, ಅಘೋರ, ತತ್ಪುರುಷ, ವಾಮದೇವ, ಈಶಾನ ಇವು ಶಿವನ ಐದು ಮುಖಗಳ ಹೆಸರು] 
ದೇವರು ಹೊರಗೆ ಎಲ್ಲೋ ಇಲ್ಲ, ಇರುವುದು ನಮ್ಮೊಳಗೇ ಅನ್ನುವುದು ವಚನಕಾರರ ನಿಲುವು. ಇಲ್ಲಿಯೂ ಅಧೇ ಮಾತು ಇದೆ. ರುಚಿ ತಿಳಿಯುವ ನಾಲಗೆ, ವಾಸನೆ ಹಿಡಿಯುವ ಮೂಗು, ರೂಪವನ್ನು ಕಾಣುವ ಕಣ್ಣು, ಸ್ಪರ್ಶವನ್ನು ಅರಿಯುವ ಚರ್ಮವಾಗಿ ದೇವರು ಈ ಘಟದ ಮಧ್ಯದಲ್ಲಿ ಬಂದು ಪ್ರತ್ಯಕ್ಷನಾಗಿದ್ದಾನೆ.
ಅರಿವುದಕ್ಕೆ ಎಂದು ಮತ್ತೆ ಮತ್ತೆ ಬರುವ ಮಾತು ನೋಡಿ. ದೇವರಿಗೆ ರುಚಿ, ಪರಿಮಳ, ರೂಪ, ಶಬ್ದ, ಸ್ಪರ್ಶ ಇವೆಲ್ಲವೂ ಬೇಕು ಅನ್ನಿಸಿದ್ದರಿಂದ ದೇಹದೊಳಗೆ ಬಂದು ನೆಲೆಸಿದ್ದಾನೆ. ಅವನು ಹಾಗೆ ಬಯಸಿ ಬಂದು ನಿಂತು ಐದು ಇಂದ್ರಿಯಗಳೇ ತಾನಾದ ಕಾರಣ ಅವನು ಪಂಚಮುಖಿ ಆದ. ಶಿವನಿಗೆ ಐದು ಮುಖಗಳು ಅನ್ನುವ ಕಲ್ಪನೆಯನ್ನು ಮನುಷ್ಯನ ಐದು ಇಂದ್ರಿಯಗಳ ಸಾಮರ್ಥ್ಯದೊಂದಿಗೆ ಹೋಲಿಸಿರುವುದು ಚೆನ್ನಾಗಿದೆ.
ಇನ್ನು ಘಟ ಅನ್ನುವುದು ಮಡಕೆ. ಅದು ದುರ್ಬಲವೂ ಹೌದು, ತುಂಬಿಟ್ಟುಕೊಳ್ಳುವುದಕ್ಕೆ ಬಳಕೆಯಾಗುವುದೂ ಹೌದು. ಘಟದ ತುಂಬ ದೇವರೇ ಇರುವಾಗ ಇನ್ನು ಏನು, ಹೇಗೆ ತುಂಬಿಕೊಳ್ಳುವುದು! ಅಥವಾ ಕಾಣುವುದೆಲ್ಲವೂ ದೇವರ ಪ್ರಕಟರೂಪವೇ ಆಗಿದ್ದರೆ ನಮ್ಮೊಳಗೆ ತುಂಬಿಕೊಂಡದ್ದಕ್ಕೆಲ್ಲ ದೈವತ್ವದ ಗುಣ ಇದ್ದೇ ಇರುತ್ತದೆ!
ಇದು ಕೇವಲ ಬುದ್ಧಿಯ ಮಾತೋ? ’ಈ ಘಟಕ್ಕೆ ಬಂದು’ ಅನ್ನುವುದನ್ನು ನೋಡಿದರೆ ಶಿವಲೆಂಕ ಮಂಚಣ್ಣ ತನ್ನೊಳಗೇ ದೇವರನ್ನು ಅನುಭವಿಸಿ ಹೇಳಿರಬಹುದು ಅನ್ನಿಸುತ್ತದೆ. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by muralihr on
ಹೋ ! ಇದನ್ನು ಮೊನ್ನೆ ಕೊ೦ಡ ಹೊಸ ವಚನದ ಪುಸ್ತಕದಲ್ಲಿ ಓದಿದ್ದೆ . ಅರ್ಥ ಆಗಿರಲಿಲ್ಲಾ. ನೀವು ಹೇಳಿದ ಮೇಲೆ ಸ್ವಲ್ಪ ಅರ್ಥ ಆಯ್ತು . ಆದರೂ ಇದರ ಭಾವ ಇನ್ನು ತಿಳಿಬೇಕು.ಅಲ್ಲಮ್ಮ ಹೇಳಿದ ಹಾಗೇ ಎತ್ತಣ ಮಾಮರ ..ಎತ್ತಣ ಕೋಗಿಲೆ...ಇ೦ತಹ ಸ೦ಬ೦ಧ ನಮ್ಮ ಜೀವನದಲ್ಲಿ ಸೃಷ್ಟಿ ಆಗುವುದಕ್ಕೆ ಇದೊ೦ದು ನಿದರ್ಶನ. ತು೦ಬಾ ಥ್ಯಾ೦ಕ್ಸ್.. ಅಲ್ಲಮ್ಮನ "ಭಾಷೆ ಮಹಾಪಾತಕ" ಅನ್ನುವ ವಚನವನ್ನು ಮೌನದಿ೦ದ ಮೆಲುಕಾಗ್ತಾಯಿದ್ದೇನೆ.. ಅದರ ಬಗ್ಗೆ ಬರೆಯುವೆ. ಮುರಳಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಒಂದು ತಪ್ಪೊಪ್ಪು. ’ಅಲ್ಲಮ್ಮ’ ಅಲ್ಲ ಅದು ಅಲ್ಲಮ. ಅಲ್ಲಮಪ್ರಭು ಈಗಿನ ಶಿವಮೊಗ್ಗಜಿಲ್ಲೆಯ ಬಳ್ಳಿಗಾವಿಯಲ್ಲಿ ಹುಟ್ಟಿ ಮುಂದೆ ಕಲ್ಯಾಣಕ್ಕೆ ಹೋದ ಶಿವಶರಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಇಂದು ಓದಿದ ವಚನ ರಸವನಱಿವುದಕ್ಕೆ ಜಿಹ್ವೆಯಾಗಿ ಬಂದು ಗಂಧವನಱಿವುದಕ್ಕೆ ನಾಸಿಕವಾಗಿ ಬಂದು ರೂಪವನಱಿವುದಕ್ಕೆ ಅಕ್ಷಿಯಾಗಿ ಬಂದು ಶಬ್ದವನಱಿವುದಕ್ಕೆ ಶ್ರೋತ್ರವಾಗಿ ಬಂದು ಸ್ಪರ್ಶವನಱಿವುದಕ್ಕೆ ತ್ವಕ್ಕಾಗಿ ಬಂದು ಇಂತೀ ಘಟದ ಮಧ್ಯದಲ್ಲಿ ನಿಂದು ಪಂಚವಕ್ತ್ರನಾದೆಯಲ್ಲ ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವೇ ಇದು ಮೂಲರೂಪ. ಱಕಾರ ಇದ್ದ ಹಾಗೆ ಬೞಸಿದರೆ ನಮಗೆ ಅನುಕೂಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಸಾರ್‍ ಇಲ್ಲೂ ಒಂದು ಸಂಶಯವಿದೆಯೆನಗೆ.. ’ಈಶಾನ್ಯ ಮೂರ್ತಿ’ ಹೇಗೆ? ಶಿವನು ದಕ್ಷಿಣಾ ಮೂರ್ತಿ ಅಲ್ಲವೇ. ಇಷ್ಟೊಂದು ಸಂಸ್ಕೃತಪದಗಳಿಂದ ಭರಿತವಾದ ವಚನಗಳೂ ಇವೆಯೆಂದು ನನಗೆ ತಿಳಿದಿರಲಿಲ್ಲ. ನನ್ನ ವಚನ ಸಾಹಿತ್ಯ ಜ್ಞಾನ ಸಕ್ಕತ್ ಕಡಮೆ. ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by olnswamy on
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗ ಅನ್ನುವುದು ಶಿವಲಿಂಗ ಮಂಚಣ್ಣನ ವಚನಾಂಕಿತ. ಕೂಡಲಸಂಗಮ, ಗುಹೇಶ್ವರ ಇತ್ಯಾದಿ ಅಂಕಿತಗಳ ಹಾಗೆ. ನಾಗಭೂಷಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಅಂಕಿತನಾಮ ಎಂಬುದು ತಿಳಿಯಿತು.. ಆದರೆ ಈಶಾನ್ಯ ಮೂರ್ತಿ ಎಂಬು ಹೆಸರು ಬರಲು ಕಾಣವೇನು? ದಕ್ಷಿಣಾ ಮೂರ್ತಿ ಎಂಬು ಶಿವನು ಯಮನನ್ನು ಸುಟ್ಟು ಹಾಕಿದಕ್ಕೆ ಬಂದಿತೆಂದು ನನ್ನ ತಿಳಿವು. ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಈಶಾನ ಶಿವನ ಐದನೇ ಮುಖ .. ಈ ಈಶಾನ ನೆ ಇಲ್ಲಿ ಈಶಾನ್ಯ! ಮತ್ತು ಅದು ಓ ಎಲ್ ಏನ್ ಅಂದಂತೆ ಅಂಕಿತ ನಾಮ. ಹೇಗೆ ರಾಮ ಲಿಂಗ ವೋ , ಬ್ರಹ್ಮ ಲಿಂಗವೋ , ಹಾಗೆಯೇ ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗ ವಿರಬೇಕು?! ಶಿವನ ಪಂಚಮುಖಗಳಲ್ಲಿ ದಕ್ಶಿಣಾಮೂರ್ತಿ ಯನ್ನು ನಾನು ಎಲ್ಲೂ ಓದಿದ ನೆನಪಿಲ್ಲ. ಆಚಾರ್ಯ ಶಂಕರನ ದಕ್ಷಿಣಾ ಮೂರ್ತಿ ಸ್ತೋತ್ರ(?) ದಕ್ಷಿಣಾ ಮೂರ್ತಿ ರೂಪ ( ಅವತಾರ (?) ) ವನ್ನು ಈಶಾನ ನಿಗಿಂತ ಪ್ರಸಿದ್ದಿ ಮಾಡಿರಬಹುದು. ನನಗೆ ಅನಿಸಿದ ಮಟ್ಟಿಗೆ ಈ ಶಿವನ ಐದು ಮುಖಗಳ ಹೆಸರು ಗಳು ಅದೇ 'ಪರ ವಸ್ತು' ವಿನ ಐದು ತತ್ವಗಳನ್ನು ವಿವರಿಸುವ ತತ್ವ ಗಳಿರಬೇಕು. ಮತ್ತು ದಕ್ಷಿಣಾ ಮೂರ್ತಿ ಒಬ್ಬ ವ್ಯಕ್ತಿ ಇರಬೇಕು. ಅಷ್ಟಕ್ಕೂ ಈ ಪಂಚ ಮುಖಗಳ ಅರ್ಥ / ವ್ರುತ್ಪತ್ತಿ ಯನ್ನು ತಿಳಿದವರು ಬರೆಯಿರಿ. ಸವಿತೃ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಸವಿತೃ ಅವರೆ. ನನ್ನಿ.. ಅಂದ ಹಾಗೆ ಈಶಾನ್ಯ ದಿಕ್ಕಿಗೆ ದೇವತೆ ಈಶ್ವರನೇ ! ದಕ್ಷಿಣಕ್ಕೆ ಯಮ. ತಾನೆ? http://dli.iiit.ac.i... ಇನ್ನು ಶಿವಲೆಂಕ ಮಂಚಣ್ಣನ ವಚನಗಳನ್ನು ಓದಲು ಮೇಲಣ ಕೊಂಡಿಯನ್ನು ಹಿಡಿಯಿರಿ. ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಮಹೇಶ [quote] ಆದರೆ ಈಶಾನ್ಯ ಮೂರ್ತಿ ಎಂಬು ಹೆಸರು ಬರಲು ಕಾಣವೇನು? ದಕ್ಷಿಣಾ ಮೂರ್ತಿ ಎಂಬು ಶಿವನು ಯಮನನ್ನು ಸುಟ್ಟು ಹಾಕಿದಕ್ಕೆ ಬಂದಿತೆಂದು ನನ್ನ ತಿಳಿವು. [/quote] ದಕ್ಷಿಣಕ್ಕೆ ಮುಖ ಮಾಡಿ ರುವುದರಿಂದ ( ದಕ್ಷಿಣಕ್ಕೆ ಮುಖಮಾಡಿ ಕೂರಿಸುವನ್ತ ಏಕ ಮಾತ್ರ ದೇವರಂತೆ ಈ ದಕ್ಷಿಣಾ ಮೂರ್ತಿ !) ಈ ದೈವಕ್ಕೆ ದಕ್ಷಿಣಾ ಮೂರ್ತಿ ಅನ್ನೋ ಹೆಸರಂತೆ. http://en.wikipedia.... ಇನ್ನು ಶಿವ ಅನ್ನೋ ದೈವಕ್ಕೆ ಅನೇಕರನ್ನು ಜೋಡಿಸಿರುವಂತೆ ದಕ್ಷಿಣಾ ಮೂರ್ತಿಯೂ ಶಿವನ ರೂಪವನ್ನೇ ತಾಳಿರಬಹುದು. ( ಹೇಗೆ ರಾಮ , ಕೃಷ್ಣ, ಬುದ್ದ, ವೆಂಕಟೇಶರು ವಿಶ್ಣುವಾದರೋ ಹಾಗೆ!) ದಕ್ಷಿಣ ದಿಕ್ಪಾಲಕ ... ಯಮ . ದಕ್ಷಿಣ ದಿಕ್ಕಿಗೆ ಮುಖ ಮಾಡಿದವ .. ದಕ್ಷಿಣಾ ಮೂರ್ತಿ. ಮೃತ್ಯು ದಿಕ್ಕಿನ ಕಡೆಗೆ ಮುಖ ಅದೇನು symbolise ಮಾಡುತ್ತೋ ತಿಳಿದವರು ಹೇಳಬೇಕು. ಕೊಂಡಿಗೆ ನನ್ನೀ ಸವಿತೃ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಓ ಎಲ್ ಏನ್ ಅವರೇ ತುಂಬ ತುಂಬ ನನ್ನೀ. ..ಇಲ್ಲಿ ನಮ್ಮೊಂದಿಗೆ ನಿಮ್ಮ ವಚನಗಳ ಓದನ್ನು ಹಂಚಿ ಕೊಳ್ಳುತ್ತಿರುವದಕ್ಕೆ. ದಯವಿಟ್ಟು ವಚನಗಳ ಮೇಲೆ / ವಚನಕಾರರ ಮೇಲೆ ನಿಮ್ಮ ಒಳನೋಟವನ್ನು ಇಲ್ಲಿ ಹಾಕುತ್ತಾ ಇರಿ. ನಾನು ಕಂಡಂತೆ ವಚನಗಳಲ್ಲಿ ಘಟ ಅನ್ನುವ ಪದ ಮತ್ತೆ ಮತ್ತೆ ಬಳಕೆಯಾಗಿದೆ. ಇದರ ಅರ್ಥ ಮಡಕೆ ಅಷ್ಟೆ ಅಲ್ಲದೆ ಅದು ಒಂದು ರೂಪಕ ಪದವಾಗಿರಬಹುದು ಅನ್ನಿಸುತ್ತೆ. ಉಪನಿಷತ್ತುಗಳಲ್ಲಿ ಕಣ್ಣಾಡಿಸಿರುವವರು ಇದರ ಮೇಲೆ ಹೆಚ್ಚು ಬೆಳಕು ಚೆಲ್ಲಬಹುದು ಅಂತ ಕಾಯ್ತಾ ಇದ್ದೀನಿ. ಸವಿತೃ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.