19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ

November 30, 2008 - 6:44am
olnswamy
ದೊರಕೊಂಡಂತೆ ತಣಿದಿಹ ಮನದವರ ತೋರಾ
ದುಃಖಕ್ಕೆ ದೂರವಾಗಿಹರ ತೋರಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ
ಸಕಳೇಶ್ವರ ದೇವಾ 
ಎನಗಿದೇ ವರವು ಕಂಡಾ ತಂದೇ

[ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರಿನ ಅರಸ. ತಂದೆಯ ಹೆಸರು ಮಲ್ಲಿಕಾರ್ಜುನ. ನಂತರದ ಕಾಲದಲ್ಲಿ ಬಂದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕ ಎಂಬ ಕವಿಗಳು ಇವನ ವಂಶದವರು. ಮಾದರಸನ ೧೩೩ ವಚನಗಳು ದೊರೆತಿವೆ]

ಈ ವಚನವನ್ನು ಇವತ್ತು ಓದಿದಾಗ ’ದರ್ಶನ’ ಅನ್ನುವ ಮಾತಿನ ಇನ್ನೊಂದು ಅರ್ಥ ಹೊಳೆಯಿತು. 
ಏನು ದೊರೆಯುತ್ತದೆಯೋ ಅದರಲ್ಲೇ ತಣಿವನ್ನು, ತೃಪ್ತಿಯನ್ನು ಪಡೆದಿರುವವರನ್ನು ತೋರಿಸು. ದುಃಖಕ್ಕೆ ದೂರವಾಗಿರುವವರನ್ನು ತೋರಿಸು. ಸದಾ ಆನಂದದಲ್ಲಿ ಅಥವಾ ಸತ್ (ದೇವರು, ಸತ್ಯ) ಆನಂದದಲ್ಲಿ ಇರುವವರನ್ನು ತೋರಿಸು. ಇದೇ ನೀನು ಕೊಡಬಹುದಾದ ದೊಡ್ಡ ವರ.
ವಚನಕಾರ ಹೇಳುವ ಗುಣಗಳಿರುವವರು ಅಪೂರ್ವವೇ ಅಲ್ಲವೇ! ನೋಡುವುದಿದ್ದರೆ ಅಂಥವರನ್ನು ನೋಡಬೇಕು! ಆದರೆ ಅಂಥವರು ಎಷ್ಟು ಅಪೂರ್ವವೆಂದರೆ ಸ್ವತಃ ದೇವರೇ ನಮಗೆ ವರಕೊಟ್ಟು ಅವರು ಕಾಣುವ ಹಾಗೆ ಮಾಡಬೇಕು. ಅಂಥ ಗುಣಗಳು ಇರುವವರು ಇದ್ದರೆ ಅವರೇ ದೇವರು ತಾನೇ! ದೇವರಿಗೆ ಬಯಕೆ ಇಲ್ಲ, ದುಃಖವಿಲ್ಲ, ಅವನು ಸದಾನಂದ ಸ್ವರೂಪಿ ಅನ್ನುವ ಮಾತುಗಳು ಇವೆಯಲ್ಲ. ನಾವು, ನಮ್ಮಲ್ಲಿಲ್ಲದವನ್ನು, ಇರಬೇಕಾದವನ್ನು, ದುಃಖ ರಹಿತ, ತೃಪ್ತ, ಆನಂದ ಗುಣವನ್ನು ಒಟ್ಟಾಗಿಸಿ ದೇವರ ಕಲ್ಪನೆ ಮಾಡಿಕೊಂಡಿದ್ದೇವೆ. ಕಲ್ಪನೆಯ ದೇವರನ್ನು ಕಾಣುವುದಕ್ಕಿಂತ ಈ ಗುಣ ಇರುವ ಮನುಷ್ಯರನ್ನೇ ಕಂಡರೆ ಅದೇ ದೊಡ್ಡದು. 
’ದರ್ಶನ’ ವೆಂದರೆ ಇದೇ ಅಲ್ಲವೇ? ದೈವತ್ವವನ್ನು ಕಾಣುವುದು, ಅದೂ ನಮ್ಮ ಜೊತೆಯಲ್ಲೇ ಇರುವ ಮನುಷ್ಯರಲ್ಲಿ.
ಗೆಳೆಯ, ಕನ್ನಡದ ಮುಖ್ಯ ಕವಿ ಎಸ್. ಮಂಜುನಾಥ, ಇತ್ತೀಚೆಗೆ ’ಮಗಳು ಸೃಜಿಸಿದ ಸಮುದ್ರ’ ಎಂಬ ಕವನ ಸಂಕಲನ ತಂದವರು, ಒಮ್ಮೆ ಹೇಳಿದರು. ’ಶ್ರೀಮಂತಿಕೆ ಅಂದರೆ ಏನು? ನನಗೆ ಬೇಕಾದದ್ದು ಬೇಕಾದಾಗ ಸಿಕ್ಕರೆ ನಾನೇ ಶ್ರೀಮಂತ. ಹಸಿವಾದಾಗ ಊಟ, ಮಾತಾಡಿಸಬೇಕು ಅನ್ನಿಸಿದಾಗ ಗೆಳೆಯರು, ಬಿಸಿಲಲ್ಲಿ ನಡೆಯುವಾಗ ನೆರಳು, ದಣಿದಾಗ ನಿದ್ರೆ-ಬೇಕಾದಾಗ ಸಿಕ್ಕರೆ ಸಾಕು. ಬೇಕಾದದ್ದು, ಬೇಕಾದ ಹೊತ್ತಿನಲ್ಲಿ ಯಾರಿಗೆ ದೊರೆಯುವುದೋ ಅವರೇ ಶ್ರೀಮಂತರು.’ ಬೇಡವಾದದ್ದನ್ನೆಲ್ಲ ಬೇಕು ಅಂದುಕೊಳ್ಳುತ್ತಾ ಅವನ್ನು ಪಡೆಯುವುದಕ್ಕೆ ’ಶ್ರೀಮಂತ’ರಾಗಲು ಹೆಣಗುತ್ತೇವಲ್ಲವೇ. ಮಾದರಸ ಹೇಳುವಂಥವರು ಕಂಡರೆ ಪುಣ್ಯ. ನಾವೇ ಹಾಗಾದರೆ ಬಲು ದೊಡ್ಡ ಭಾಗ್ಯ. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ramaswamy on
ಪ್ರಿಯ ಒ.ಎಲ್.ಎನ್ ಅವರಲ್ಲಿ ನಮಸ್ಕಾರ. ದಯೆಯಿಟ್ಟು ’ಇಂದು ಓದಿದ ವಚನ’ ತಪ್ಪದೇ ಪ್ರಕಟಿಸಿ. ಬಸವ, ಅಕ್ಕ ಅಲ್ಲಿ ಇಲ್ಲಿ ಸಿಕ್ಕಬಹುದಾದರೂ ಇಂಥ ವಚನಕಾರರು ಸುಲಭಕ್ಕೆ ಸಿಕ್ಕುವವರಲ್ಲ. ಅಲ್ಲಮನನ್ನು ನೀವು ತೆರೆದು ತೋರಿಸುವ ಹಾಗೆ ಸ್ವಂತ ಓದಿಗೆ ಅವನು ದಕ್ಕುವುದಿಲ್ಲ. -ಡಿ.ಎಸ್.ರಾಮಸ್ವಾಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on
ಓಎಲ್‌ಎನ್‌ರವರೆ, ಅಪೂರ್ವ ವಚನಗಳ ಜತೆಗಿರುವ ನಿಮ್ಮ ಟಿಪ್ಪಣಿಯೂ ಅಪೂರ್ವ! ವಚನ ದಕ್ಕುವುದಕ್ಕೆ ತುಂಬಾ ನೆರವಿಗೆ ಬರುತ್ತದೆ. ಥ್ಯಾಂಕ್ಸ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಒಯೆಲೆನ್ ಸ್ವಾಮಿಯವರೆ.. ನನಗೆ ಕೆಲವು ವ್ಯಾಕರಣದ ಸಂಶಯಗಳಿವೆಯಿಲ್ಲ.. ಪ್ಲೀಸ್ ಪರಿಹರಿಸಿರಿ ೧)ತಣಿದಿಹರ, ಆಗಿಹರ ಈ ಬಳಕೆಗಳ ನಡುವೆ ’ಆಗಿಪ್ಪವರ’ ಎಂಬ ಬಳಕೆಯಿದೆ. ಆಗಿಹ ಮತ್ತು ಆಗಿಪ್ಪ ಗಳ ನಡುವೆ ಏನಾದು ಅರ್ಥವ್ಯತ್ಯಾಸವಿದೆಯೇ? ೨) ’ಎನಗಿದೇ ವರವು ಕಂಡಾ ತಂದೇ’ ಈ ಸಾಲು ನನಗೆ ಅರ್ಥವಾಗಲಿಲ್ಲ.. ಇಲ್ಲಿ ’ಕಂಡಾ’ ಎಂದರೆ ಏನು? ಮಿಶ್ರಕೋಟಿಗಳೇ ನಿಮ್ಮ ಮುಂದಿನ ಸುಲಭಗನ್ನಡಿಗೆ ಒಂದು ಸೇರಿಕೆ ತೃಪ್ತಿ = ತಣಿವು ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by olnswamy on
೧) ಇಪ್ಪರು-ಇಹರು ವ್ಯತ್ಯಾಸದ ಕುರಿತು ಇನ್ನೊಮ್ಮೆ ತಿಳಿಸುವೆ. ಸದ್ಯಕ್ಕೆ ಇವು ನೋಡಿ ಅಲ್ಲಮನ ವಚನದ ಉದಾ. ಅ) ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು ಇಪ್ಪ ಭಕ್ತರ ಕಾಣೆನಯ್ಯ ಆ) ನೀನೆನ್ನದೆ ನಾನೆನ್ನದೆ ಇಪ್ಪ ಸುಖವ ಭಿನ್ನವಿಲ್ಲದೆ ಅರಿಯಬಲ್ಲಡೆ ಇಹರು-ಇಪ್ಪರು ನಡುವೆ ವ್ಯತ್ಯಾವಿದ್ದರೆ ಇಂಗ್ಲಿಶಿನ ‍perfect tense ಸೂಚಿಸುವ ಪದಗಳಿಗೂ ಸರಳವಾಗಿ ಭೂತ, ವರ್ತಮಾನವನ್ನು ಸೂಚಿಸುವ ಪದಗಳಿಗೂ ಇರುವಂಥ ವ್ಯತ್ಯಾಸ ಇದೆ ಅನ್ನಿಸುತ್ತದೆ. ಇನ್ನಷ್ಟು ಉದಾಹರಣೆಗಳನ್ನು ಹುಡುಕಿ ಆಮೇಲೆ ಬರೆಯುತ್ತೇನೆ. ೨) ಕಂಡಾ-ಕಂಡೆಯಾ ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಅಲ್ಲಮನ ಈ ಉದಾಹರಣೆಗಳನ್ನು ನೋಡಿ: ಅ) ದೇವ ಕಂಡಾ ಭಕ್ತ ಕಂಡಾ ಮರಳಿ ಮರಳಿ ಶರಣೆಂಬ ಕಂಡಾ ಆ) ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ ಸಾವನ್ನಕ್ಕರ ಸರಸ ಉಂಟೆ ಗುಹೇಶ್ವರ ಇ) ಹೊತ್ತಾರೆ ಪೂಜಿಸಲು ಬೇಡ ಕಂಡಾ ಬೈಗೆ ಪೂಜಿಸಲು ಬೇಡ ಕಂಡಾ ಉ) ಮನದಲ್ಲಿ ಉಣ್ಣು ಕಂಡಾ ಮನದಲ್ಲಿ ಉಣ್ಣು ಕಂಡಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಆಗಿಪ್ಪ ಮತ್ತು ಆಗಿಹ ಎರಡೂ past perfect ಗಳೇ ಅಲ್ಲವೇ.... ಕನ್ನಡ ಕಂದರೇ ತುಸು ನೀವೂ ಹೇಳಿ. ಮಾಹಿತಿಗೆ ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by olnswamy on
ಇಪ್ಪರು-ಇಹರು ವ್ಯತ್ಯಾಸವನ್ನು ಇಂಗ್ಲಿಶಿನ past/ continuous ಹಾಗೂ simple tense ಎಂಬ ವ್ಯತ್ಯಾಸದಂತೆಯೇ ತಿಳಿಯಬೇಕೆಂದು ತೋರುತ್ತದೆ. ವ್ಯತ್ಯಾಸವೆಂದರೆ ಅರ್ಥ ಛಾಯೆಯದು. ಮಾಡುತಿಪ್ಪರು, ನೋಡುತಿಪ್ಪರು ಅನ್ನುವ ಬಳಕೆಯನ್ನು ಮಾಡುತ್ತಾ ಇದ್ದಾರೆ, ಮಾಡುತ್ತಾ ಇರುತ್ತಾರೆ, ನೋಡುತ್ತಾ ಇರುತ್ತಾರೆ, ಇದು ಸಾಮಾನ್ಯವಾಗಿ ಹೀಗೆಯೇ ಅಲ್ಲವೇ ಅನ್ನುವ ಅರ್ಥಛಾಯೆಯಲ್ಲಿ ಬಳಕೆಯಾಗುತ್ತದೆ. ಇಹರು ಎಂಬುದು ಖಚತತೆಯನ್ನು ತೋರುವ ಅರ್ಥದಲ್ಲಿ ಬಳಕೆಯಾಗುತ್ತದೆ ಅನ್ನಿಸುತ್ತದೆ. ಹಳಗನ್ನಡದ ಒಳರ್ ಎಂಬ ಬಳಕೆಯನ್ನು ನೆನೆದುಕೊಳ್ಳಿ. ಇಹರು ಅನ್ನುವುದು ಖಚಿತಾರ್ಥದ ಬಳಕೆ ಅನ್ನುವುದು ನನ್ನ ಅನಿಸಿಕೆ. ವ್ಯಾಕರಣದ ಸೂಕ್ಷ್ಮಗಳನ್ನು ನನಗಿಂತ ಚೆನ್ನಾಗಿ ಬಲ್ಲ ಗೆಳೆಯರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ನೀಡುವೆ. ನಾಗಭೂಷಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಥ್ಯಾಂಕ್ಸ್‌ ನನ್ನ ದಿಟವಾಗದ ಗೊಂದಲ.. ಇರ್ಪ ( ಹೞಗನ್ನಡ ) => ಇಪ್ಪ => ಇಹ ( ನಡುಗನ್ನಡ ) => ಇರುವ( ಇದು ಮೈಸೂರು ಸೀಮೆಯ ಕವಲುಗನ್ನಡ.. ಕರಾಮಾ ಹೇಳುವಂತೆ ತೆಂಕಣದಲ್ಲಿ ಪ=>ವ ಆದರೆ ಬಡಗಣದಲ್ಲಿ ಪ=>ಹ ಆಗುವುದೆಂದು, ಇದು ತುಸು ತಮಿಳನ್ನೂ ಹೋಲುವುದು; ಹಂಸಾನಂದಿಗಳು ತಿದ್ದಿ ಇಲ್ಲಿ ) ಅಲ್ಲಿ ಸುಖವಾಗಿಪ್ಪ ಅಂದರೆ ಸುಖವಾಗುತ್ತಿರುವ ಎಂಬ ತಿಳಿವು ಬರುವುದೇ? ಈ ಗೊಂದಲವನ್ನು ನಮ್ಮ ಸಂಪದದ ಸೊಲ್ಲರಿಮೆಗಾರರ ಬಿಡುಸುವರೆಂದು ನಾನು ನಂಬಿದ್ದೀನಿ.. ನಿಮ್ಮ ತುಂಬಾ ನನ್ನಿ! -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ತಣಿದು+ಇರ್ಪರ->ಇಪ್ಪರ->ಇಹರ=ತಣಿದಿರುವವರ ಇರ್ಪರು->ಇಪ್ಪರು->ಇಹರು ಇದು ರೂಪಾಂತರ. ಹೞಗನ್ನಡದ ಇರ್ಪರ್->ಇಪ್ಪರ್ ಆಗುತ್ತದೆ ಇಪ್ಪರ್ ಈ ಶಬ್ದದ ಪಕಾರಕ್ಕೆ ಹಕಾರ ಬಂದಾಗ ಇಹರ್ ಆಗುತ್ತದೆ. ಇಹರು->ನಡುಗನ್ನಡ ರೂಪ. ಅದೇ ತೆಱನಾಗಿ ಆಗಿಹ-> ಆಗಿ+ಇರ್ಪ=ಆಗಿರ್ಪ->ಆಗಿಪ್ಪ+ಆಗಿಹ. ಇಲ್ಲಿ ಆಗಿ=ಭೂತಕೃದ್ವಾಚಿ ಇರ್ಪ->ಇಹ ವರ್ತಮಾನ/ಭವಿಷ್ಯತ್ಕೃದ್ವಾಚಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಅದು ತಿಳೀತು.. ಹಾಗಾದರೆ ಇಪ್ಪ ಮತ್ತು ಇಹಗಳ ನಡುವೆ ಯಾವುದೇ ಬೇರೆತನವಿಲ್ಲವೇ ಇಲ್ಲಿ? ’ಇರುವ’ ಇದು ನೋಡಿ ತಮಿಳ ಹಾಗೆ.. ತಮಿಳಲ್ಲಿ ಒರ್ವ = ಒರುವ, ಇರ್ಪ/ಇಪ್ಪ/ಇಹ/ಇರುವ present participle ಗಳು ಕೇೞಿರ್ಪು/ಕೇೞಿಪ್ಪ/ಕೇೞಿಹ/ಕೇೞಿರುವ = have heard. ಅಲ್ಲವೇ! ಕೇೞಿರ್ದ/ಕೇೞಿದ್ದ = had heard ತಾನೆ.. ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಕೇೞ್ ಅಲ್ಲ. ಕೇಳ್. ಆದರೆ ಹೇೞ್. ಕೇಳಿದ್ದ->ಕೇಳಿರ್ದ (past perfect) ಕೇಳಿರ್ಪ->ಕೇಳಿಪ್ಪ->ಕೇಳಿಹ(present perfect/future perfect). ಕನ್ನಡದಲ್ಲಿ ವರ್ತಮಾನ ಮತ್ತು ಭವಿಷ್ಯತ್‍ಗಳಿಗೆ ವರ್ತಮಾನ ರೂಪವನ್ನೇ ಬೞಸುತ್ತೇವೆ. ’ದಪ’ ವರ್ತಮಾನರೂಪ ಬೞಕೆ ಗ್ರಂಥಗಳಲ್ಲಿ ಮಾತ್ರ. ನಾನು ಬರುತ್ತೇನೆ(ವರ್ತಮಾನ/ಭವಿಷ್ಯತ್ ಭಾವ). ನಾನು ನಾಳೆ ಬರುತ್ತೇನೆ (ಭವಿಷ್ಯತ್ ಭಾವ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹೌದು.. ಈಗ ತಿಳಿಯಾಯಿತು. ಇಪ್ಪ ಮತ್ತ ಇಹ ಒಂದೇ ಎಂದು. ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಸ್ವಾಮಿಗಳೇ , ಶರಣು. ಹದುಳವೇ? ನಿಮ್ಮನ್ನು ಮತ್ತೆ ಇಲ್ಲಿ ನೋಡಿ ಸಂತಸವಾಯಿತು . ಹೊಸ ಹೊಸ ಹೊಳಹುಗಳಿಗೆ ಕಾದಿಹೆವು. "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ನಮಸ್ಕಾರ ಶ್ರೀಕಾಂತ್‍ರವರೇ, ಆರೋಗ್ಯವೆಂದು ಭಾವಿಸುತ್ತೇನೆ. ನಿಮ್ಮನ್ನು ಅಥವಾ ಧಾರವಾಡದವರೆಂದು ನಾವು ಕೆಣಕದಿದ್ದರೆ ನೀವು ನಮ್ಮ ಲೇಖನಗಳನ್ನೇ ಓದುವುದಿಲ್ಲ. :) ;) :D ಹದುಳದೊಂದಿಗೆ ಕನ್ನಡಕಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಹಂಗೇನಿಲ್ರೀ ... ಎಲ್ಲ ಲೇಖನಗಳು ನನ್ನ ತಲೆಗೆ ಹೋಗಬೇಕಲ್ಲ ? ನನ್ನ ಹಳೆಗನ್ನಡ / ವ್ಯಾಕರಣ ಜ್ಞಾನವು ಅಷ್ಟಕ್ಕಷ್ಟೇ . ಗೊತ್ತಿಲ್ಲದ್ದರಲ್ಲಿ ತಲೆ ಹಾಕುವುದು ಹೇಗೆ ? ಹಾಕಲೂಬಾರದು ಕೂಡ. ಬಾಕಿಯಂತೆ ದೊರಕೊಂಡಂತೆ ತಣಿದಿಹ ಮನದವನಾಗಿರ್ಪೆನು ! ದುಃಖಕ್ಕೆ ದೂರವಾಗಿಹೆನು !! ಸದಾನಂದದಲ್ಲಿ ಸುಖಿಯಾಗಿಪ್ಪೆನು !!! :) ಕುಶಲ ವಿಚಾರಿಸಿದ್ದಕ್ಕೆ ಧನ್ಯವಾದಗಳು. "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ದೊರಕೊಂಡಂತೆ ತಣಿದಿಹ ಮನದವರ ತೋಱಾ ದುಃಖಕ್ಕೆ ದೂರವಾಗಿಹರ ತೋಱಾ ಸದಾನಂದದಲ್ಲಿ ಸುಖಿಯಾಗಿಪ್ಪವರ ತೋಱಾ ಸಕಳೇಶ್ವರ ದೇವಾ ಎನಗಿದೇ ವರವು ಕಂಡಾ ತಂದೇ ನನ್ನ ಮನವಿ ಎಂದಿನಂತೆ. ಱಕಾರ ಉೞಿಸಿಕೊಳ್ಳಿ. ಉೞಿದಂತೆ ಒಳ್ಳೆಯ ವಚನ. ಮನುಷ್ಯ ಹೇಗೆ ನೆಮ್ಮದಿಯಿಂದ ಇರಬಹುದು ಎಂದು ಈ ವಚನ ಹೇೞುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಆದರೂ ನನ್ನ ಲೇಖನಗಳನ್ನು ಒದ್ತಾ ಇರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.