ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್
ವರುಷ ಹಿಂದುರುಳಿದ ಬದುಕು
ಮುಂಜಾನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಹತ್ತು ಘಂಟೆಗೆ ಬಂದು ನನ್ನ ಕಾರನ್ನು ಸರ್ವೀಸ್ ಸ್ಟೇಶನ್ ಗೆ ಕೊಂಡೊಯ್ಯಲಿದ್ದವರ ಬಗ್ಗೆ ಮಾಹಿತಿ, ಬೇಕಾದ ಕಾಗದ ಇತ್ಯಾದಿಗಳಿಗೆ ಸಹಿ ಎಲ್ಲಾ ಕೊಟ್ಟು, ನನ್ನ ಮಾಮೂಲಿ ಲ್ಯಾಪ್ಟಾಪ್ ಬ್ಯಾಗ್ ಹಿಡಿಯದೆ, "ಛಂದ ಪುಸ್ತಕ"ದ ಸುಂದರ ಕೈಮಗ್ಗದ ಕೈಚೀಲಕ್ಕೇ ನನ್ನ ಲ್ಯಾಪ್ಟಾಪ್ ಇಳಿಬಿಟ್ಟು, ಅದರಲ್ಲಿ ಬಿ.ಜಿ.ಎಲ್ ಸ್ವಾಮಿಯವರ "ಮೈಸೂರು ಡೈರಿ" ಪುಸ್ತಕವನ್ನೂ ಹಾಕಿಕೊಂಡು ಬಾಗಿಲಿಂದಾಚೆ ಬಂದೊಡನೆ ವರುಷವೊಂದು ಹಿಂದಕ್ಕುರುಳಿತು.
ನನ್ನ ಕಾರ್ ನ ವರ್ಷಾಚರಣೆ, ಅದರ ಮೇಕಪ್ಪು, ಬಾಡಿ ವರ್ಕು ಇತ್ಯಾದಿಗಳನ್ನು ಮಾಡಿ ಮುಗಿಸಲೇಬೇಕಾಗಿರುವುದರಿಂದ ಅದಕ್ಕೆ ನನ್ನಿಂದ ಒಂದೆರಡು ದಿನಗಳ ಮಟ್ಟಿಗೆ ದೂರವಿರಬೇಕಾಗಿ ಬರುತ್ತಿರುವುದು ಅನಿವಾರ್ಯವಾಗಿದೆ.
ಹೊರನೆಡೆದು ಬಂದವನಿಗೆ ಚುಮು ಚುಮು ಚಳಿ, ಆಗ ತಾನೇ ಎದ್ದು ಕಸಗುಡಿಸುತ್ತಿರುವ ಪೊರಕೆಯ ಚರಚರ ಸದ್ದು, ಕೆಲಸಕ್ಕೆ ಸಾಗುತ್ತಿರುವವರ ದಂಡು, ಸೈಕಲ್, ಆಟೋ, ಅಗೋ! ದೂರದಲ್ಲಿ ಸಾಗಿ ಹೋದ ಬಿ.ಎಂ.ಟಿ.ಸಿ ಬಸ್ಸು ಅದರ ಸದ್ದು.. ಹೀಗೆ ಹತ್ತು ಹಲವಾರು ವಿಷಯಗಳು ಕಣ್ಮುಂದೆ ಮತ್ತೆ ಹಾದು ಹೋದಾಗ, ಅಯ್ಯೋ ಇವನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೀನಲ್ಲಾ ಪ್ರತಿದಿನ... ಇನ್ನಷ್ಟು ಯಾಂತ್ರಿಕವಾಗಿ ಹೋಗಿದೆಯಲ್ಲಾ ಜೀವನ ಎಂದೆನಿಸದಿರಲಿಲ್ಲ. ಮುಂದೆ ಬಸ್ ಸ್ಟಾಪಿನ ಬಳಿ ಸಾರುತ್ತಿರುವಾಗ ತಡವಾಗಿ ಬಂದವನೊಬ್ಬ ಬಸ್ಸಿನ ಹಿಂಬದಿಯಲ್ಲಿ ಓಡುತ್ತಿದ್ದುದು ಕಂಡು ನನಗೆ ಎಲ್ಲೋ ಕಚಗುಳಿ ಇಟ್ಟಂತಾಯಿತು... ನಾನೂ ವರ್ಷಗಟ್ಟಲೆ ಹೀಗೆ ಬಸ್ಸಿನ ಹಿಂದೆ ಓಡಿದ್ದ ನೆನಪಿನ ಝಲಕ್ ಆ ಕ್ಷಣ ಕಣ್ಮುಂದೆ ಸಾಗಿ ಹೋಯ್ತು. ಯಾಕೋ ಇಂದು ಓಡಿ ಬಸ್ ಹಿಡಿಯಬೇಕೆಂದೆನಿಸಲಿಲ್ಲ. ಎರಡೇ ನಿಮಿಷಗಳಲ್ಲಿ ಮತ್ತೊಂದು ಬಸ್ ಸಹಾ ಬಂತು... ಟಿಕೇಟು ಪಡೆದು ಸಾಗಿದ ನನಗೆ ಮತ್ತದೇ ಚಟ... ಕೂತೊಡನೆ ಒಳಗಿದ್ದ ಮೈಸೂರು ಡೈರಿ ಪುಸ್ತಕ ತೆರೆದು ಓದಲಾರಂಭಿಸಿದೆ. ಆಗಾಗ ಕಿಟಕಿಯ ಹೊರಗೊಂದು ಕಿರುನೋಟ. ಅದು ಬಿಟ್ಟರೆ ಬೇರಾವುದೇ ಚಿಂತೆಯಿಲ್ಲದ ಸುಖಕರ ಪ್ರಯಾಣ (ಕೂತಿದ್ದೆ ನೋಡಿ ಅದಕ್ಕೆ ಹೀಗೆನಿಸಿದ್ದು) ಇದೆಲ್ಲದರ ನಡುವೆ, ಮರೆಯಾಗಿ ನನ್ನ ಬ್ಯಾಗಿನಲ್ಲಿ ಅಡಗಿದ್ದ ಹೆಡ್ ಫೊನ್ ಮತ್ತೆ ಅದರ ಸ್ಥಳ ಆಕ್ರಮಿಸಿಕೊಂಡು ವಂದೇ ಮಾತರಂ, ದೇವರನಾಮ, ಭಕ್ತಿಗೀತೆ, ಚಿತ್ರಗೀತೆ, ನಂತರ ನನ್ನ ಮೊಬೈಲಿನಲ್ಲಿದ್ದ ಮತ್ತೊಂದಿಷ್ಟು ಗೀತೆಗಳನ್ನು ನನ್ನ ಕಿವಿಗೆ ರವಾನಿಸುತ್ತಿತ್ತು.
ಮೆಜೆಸ್ಟಿಕ್ ಹತ್ತಿರ ಬರುತ್ತಿದ್ದಂತೆ ಯರ್ರಾಬಿರ್ರಿ ಚಾಲನೆ ಮಾಡುತ್ತಿದ್ದ ಆಟೋ ಡ್ರೈವರ್ರುಗಳಿಗೆ ಬಯ್ದ ಬಸ್ ಡ್ರೈವರ್, ನಂತರ ಅಲ್ಲಿನ ಗೋಡೆಗಳ ಮೇಲಿದ್ದ ಪೋಸ್ಟರ್ರುಗಳ ಬಣ್ಣಗಳು, ಸರಸರನೆ ನೆಡೆಯುತ್ತಿದ್ದ ಜನಜಂಗುಳಿ, ಇನ್ನೇನು ಬಸ್ ಸ್ಟಾಪ್ ಬಂದೇ ಬಿಡ್ತು, ಇಳಿದು ಸರಾಗವಾಗಿ ನನಗೇನೂ ಮರೆತೇ ಇಲ್ಲವೆನ್ನುವಂತಹ ಮುಂದಿನ ನನ್ನ ಬಸ್ ಸ್ಟಾಪಿನ ಕಡೆ ಹೆಜ್ಜೆ ಇಟ್ಟಾಗಿತ್ತು. ಅಲ್ಲೇ ಇದ್ದ ವಜ್ರ ಧರಿಸಿದ ಕೆಂಪು ಸುಂದರಿ "ವೋಲ್ವೋ" ಮಡಿಲೇರಿ ಕುಳಿತು ಮಡಿವಾಳದ ಕೃಪಾನಿಧಿ ಕಾಲೇಜಿನ ಬಳಿ ಬಂದಿಳಿಯುವುದರ ಒಳಗೆ ಮೈಸೂರು ಡೈರಿಯ ೩೦-೩೫ ಪುಟಗಳ ಓದು ಮುಗಿದಿತ್ತು. ಹಾ.ಮಾ ನಾಯಕರ ಮುನ್ನುಡಿಯೇ ನಕ್ಕು ನಲಿಸಿತ್ತು ಒಂದು ವರ್ಷ ಹಿಂದುರುಳಿದ್ದ ನನ್ನ ಮನಸ್ಸನ್ನೂ ಕೂಡ. ಪುಸ್ತಕದಲ್ಲಿನ ಪ್ರಕೃತಿಯ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ೩೬೫ ದಿನಗಳ ಬಗ್ಗೆ ವಿವರಿಸಿರುವುದು, ಅಲ್ಲಿನ ಜನರ ಪರಿಚಯ ಮಾಡಿಸುವುದರ ಬಗೆ, ದೈನಂದಿನ ಚಟುವಟಿಕೆ, ಕೃತಿಯಲ್ಲಿ ಕಂಡುಬರುವ ವ್ಯಂಗ್ಯ, ಸತ್ಯ ಇತ್ಯಾದಿಗಳ ವಿಚಾರಗಳನ್ನು ಸುರುಳಿ ಸುರುಳಿಯಾಗಿ ವಿವರಿಸಿರುವ ಹಾ.ಮಾ ನಾಯಕರ ಬರಹ ಕೂಡ ತುಂಬಾ ಮೆಚ್ಚುಗೆ ಆಯಿತು. ಇದೆಲ್ಲದರೊಡನೆ ನನ್ನ ಈ ದಿನದ ಬಗ್ಗೆ ನನಗೇ ಏನೆನ್ನಿಸುತ್ತಿದೆ ಎಂದು ಯೋಚಿಸುವ ಅವಕಾಶ ಕೂಡ ಲಭಿಸಿತ್ತು. ಯಾವುದೇ ಟ್ರಾಫಿಕ್ ನ ಬವಣೆಗೆ ತಲೆಯೊಡ್ಡದೆ ಅಫೀಸಿನೆಡೆಗೆ ನಡೆದ ನನ್ನ ಪಯಣದಲ್ಲಿ ರಾಜಯೋಗ ಲಭಿಸಿದಂತೆ ಭಾಸವಾಯಿತು!
ಕೃಪಾನಿಧಿ ಕಾಲೇಜಿನ ಸ್ಟಾಪ್ ಹತ್ತಿರ ಬಂದಾಗ ಕೊಂಚ ಹೊತ್ತು ನಿಲ್ಲಿಸಿದ ಬಸ್ ನ ಡ್ರೈವರ್ ಬಳಿ ಸಾರಿ ಬಾಗಿಲು ತೆಗೆಯಿರೆಂದು ಕೇಳಿಕೊಂಡಾಗ (ಕಾರಣವಿದೆ) ಅವನಾಡಿದ ಕುಹಕದ ಮಾತಿಗೆ ಎದುರಾಡದೆ, ಕೆಳಗಿಳಿದೆ ಅವನಿಗೊಂದು ಸ್ಮೈಲ್ ಕೊಟ್ಟು ಹೊರಟ ನನ್ನನ್ನು ಅವ ಪಿಳಿಪಿಳಿ ಕಣ್ಬಿಟ್ಟು ಸಿಗ್ನಲ್ ಬದಲಾಗುವವರೆಗು ನೋಡಿದ್ದು ನನ್ನ ಗಮನಕ್ಕೆ ಬಂತು.. ನಂತರ ಅರ್ಧ ಕಿ.ಮಿ ನೆಡೆದು ಮುಂದಿನ ಬಸ್ ಸ್ಟಾಪ್ ನ ಬಳಿ ಸ್ವಲ್ಪ ಕಾದು ನಿಂತೆ.. ಮುಂದಿರುವ ಫೋಲಿಸ್ ಶಾಲೆಯ ಬೋರ್ಡ್ ಓದಿ ಮುಗಿಸುವಷ್ಟರಲ್ಲಿ ಬಂದ ಬಸ್, ಇಲ್ನೋಡಪ್ಪ ಇದೆ ಮಜಾ, ಇನ್ನು ಅಫೀಸಿನವರೆಗೆ ನಿಂತು ಸಾಗಬೇಕು ಎಂದು ಹತ್ತಿ ನಿಂತಾಯಿತು. ಒಂದೆರಡು ಸ್ಟಾಪುಗಳ ನಂತರ ಕೂರುವುದಕ್ಕೂ ಸ್ಥಳ ದೊರೆಯಿತು. ಗಡಿಯಾರ ನೋಡಿಕೊಂಡಾಗ ನನಗೇ ಆಶ್ಚರ್ಯ.. ಅರೆ ಕಾರಿನಲ್ಲೂ ಇಷ್ಟೇ ಸಮಯ ತೆಗೆದುಕೊಳ್ಳುತ್ತಿದ್ದೆನೇನೋ ಎಂದು...
ಅಫೀಸಿನ ಬಳಿ ಬಂದಾಗ ಗೇಟಿನ ಬಳಿಯಿದ್ದ ವಾಚ್ಮನ್ಗೂ ಆಶ್ಚರ್ಯ ಇವರ್ಯಾಕೆ ನೆಡೆದು ಬರ್ತಿದ್ದಾರೆ ಅಂತ... ಶುಭೋದಯ ಹೇಳಿ ಮುನ್ನಡೆದು, ಬಿಸಿ ಬಿಸಿ ಕಾಫಿ ಹೀರಿ ಕೂತು ಈ ಬ್ಲಾಗ್ ಬರೆಯುತ್ತಲೇ ಇಂದು ಮಾಡಿ ಮುಗಿಸಬೇಕಿರುವ ಕೆಲಸಗಳ ಪಟ್ಟಿ, ಮೈಲ್, ಮೆಸೆಂಜರುಗಳ ಸುದ್ದಿದಾಸ್ತಾನನ್ನು ಓದಿ ಮುಗಿಸಿಯಾಗಿದೆ... ಇನ್ನು ಕೆಲಸ ಶುರುಆಯ್ತು ಅಂತಾನೆ...
ಮುಂದುವರೆಯುತ್ತದೆ..
ಎಲ್ಲರಿಗೂ ಶುಭದಿನದ ಹಾರೈಕೆಗಳೊಂದಿಗೆ...
- omshivaprakash's blog
- Login or register to post comments
- 671 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ವರುಷ ಹಿಂದುರುಳಿದ ಬದುಕು
ಅನುಭವಿಸಿದ್ದಕ್ಕೆ ಅಕ್ಷರ ಕೊಡೋಕೆ ಬಂದ್ರೆ ಸಾಕೂ, ಬರಹ ಓದಿಸಿಕೊಂಡು ಹೋಗಿಬಿಡುತ್ತೆ. ನನ್ನ-ನಿಮ್ಮ ಜನರೇಶನ್ ಗ್ಯಾಪ್ ಇಷ್ಟೊಂದಿದ್ದರೂ ನಿಮ್ಮ ಬರಹ ತುಂಬಾ ಇಷ್ಟವಾಯ್ತು. ನಂದೂ ಹಳ್ಳೀ ಕತೆ-ನಿಮ್ದೂ ದಿಳ್ಳೀ ಕತೆ.ಎರಡೂ ಚೆಂದವೇ!!
ಉ: ವರುಷ ಹಿಂದುರುಳಿದ ಬದುಕು
ಬರಹ ಇಷ್ಟವಾದದ್ದು ಕೇಳಿ ಖುಷಿಯಾಯಿತು.. ನಿಮ್ಮ ಕತೆಯನ್ನೀಗ ಓದ್ತೇನೆ.. ಕೆಲಸದ ಮಧ್ಯೆ ಬರೆದೇ ತೀರಬೇಕೆಂದು ಬರೆದ ಈ ಲೇಖನ ಮನದಲ್ಲಿದ್ದುದ್ದನ್ನು ಹಾಗೇ ನಿಮ್ಮ ಮುಂದಿಟ್ಟಿದೆ. ಅನೇಕ ವಿಷಯಗಳನ್ನು ಬೇಕೆಂದರೂ ಹೇಳಲಾಗದಂತಹ ಪರಿಸ್ಥಿತಿಯಿಂದ ಕೊಂಚ ಹೊರಬಂದಿರುವ ನನಗೆ ಬರಹವೇ ಒಂದು ಸುಲಭ ಮಾರ್ಗವೆಂದು ತೋರುತ್ತಿದ್ದೆ. ಹೊಸ ಪ್ರಯೋಗಗಳೆಲ್ಲಾ ಹೀಗೆ ಧಾರೆಯಾಗಿ ಹರಿದು ಬಂದಾಗ ನಿಮ್ಮಂತಹವರು ತಪ್ಪನ್ನು ತಿದ್ದಿ ಹುರಿದುಂಭಿಸಿದರೆ ಮುಂದೆ ಇನ್ನೂ ಹೆಚ್ಚು ಬರೆಯಲ್ಲಿಕ್ಕೆ ಸಾಧ್ಯವಾಗುತ್ತದೆ.
ಉ: ವರುಷ ಹಿಂದುರುಳಿದ ಬದುಕು
ಛೇ ಛೇ ಛೇ!!
ಬೆಳಿಗ್ಗೆ ಬೆಳಿಗ್ಗೆ ಮೂಡ್ ಆಫ್......
ಭಾನುವಾರ ಶಿವು ಸರ್ ಪಾರ್ಟಿ ಅಂತ ಕಾಯ್ತಾ ಇದ್ರೆ ನೀವು ಹೀಗಾ ಮಾಡೋದು?? :( :(
ಹ್ಮ್ಮ್....
ಉ: ವರುಷ ಹಿಂದುರುಳಿದ ಬದುಕು
ಅದ್ಯೇನಾಯ್ತಕ್ಕೋ?
ಉ: ವರುಷ ಹಿಂದುರುಳಿದ ಬದುಕು
ಏನು ಇಲ್ಲ ಸ್ರೀದರಣ್ಣ..
ಸಿವಪ್ನೋರು ಪಾರ್ಟಿ ಕೊಡುಸ್ತಿನಿ ಅಂತ್ಯೋಳಿದ್ರು..
ಅವರ್ ಮಾತ ನಂಬ್ಕೊಂಡ್ ನಾನು ಬಾನುವಾರಕ್ಕೆ ಕಾಯ್ತ್ಲೆ ಇದ್ದೆ..
ಈಗ ನೋಡುದ್ರೆ ಕೈ ಎತ್ಬುಟವ್ರೆ..
ವತ್ತಾರೆ ನೋಡ್ದಾಗ ಆಮ್ಯಾಕಿಂದ ಕೊಡ್ತಿನಿ ಅಂತಾದ್ರು ಯೋಳಿದ್ರು...
ಈಗ ಅದೂ ಕಾಣ್ತಿಲ್ಲ... :(
ಉ: ವರುಷ ಹಿಂದುರುಳಿದ ಬದುಕು
ಅಯ್ಯೋ! ನೋಯಿಸಿದೆನೆ ನಾ ನಿನ್ನ ಮನವ.. ಬೇಸರ ಪಡದಿರು ದೃಶ್ಯ... ಪಾರ್ಟಿಗಳಿಗೇನು ನೂರೆಂಟಿವೆ... ಸಿಹಿ ಹಂಚುವುದಕ್ಕೆ ಭಾನುವಾರವೇ ಏಕೆ? ಅದನ್ನು ಸೋಮವಾರಕ್ಕೂ, ಮಂಗಳವಾರಕ್ಕೂ ಮುಂದೂಡಬಹುದು.... :)
ಉ: ವರುಷ ಹಿಂದುರುಳಿದ ಬದುಕು
ಕಾರಿನಿಂದ ಮತ್ತೆ ಬಸ್ಸಿಗೆ ಮರಳಿದ ಅನುಭವ ಚೆನ್ನಾಗಿ ಬರೆದಿದ್ದೀರ, ಶಿವು..
ಆದ್ರೆ ಏನಾಯ್ತು? ಕಾರಿಗೆ ಮೇಕಪ್ಪು, ಬಾಡಿ ವರ್ಕು, ನಿಮಗೆ ಡ್ರೈವರ್ ಬಾಗ್ಲು ತೆರಿಯೋದು? ಏನು ಮಾಡ್ಕೊಂಡ್ರಿ? :(
ಏನೂ ಹೆಚ್ಚು ಕಡ್ಮೆ ಆಗಿಲ್ಲ ತಾನೆ? :(
ಇತೀ, ಉಉನಾಶೆ
ಉ: ವರುಷ ಹಿಂದುರುಳಿದ ಬದುಕು
ಧನ್ಯವಾದ, ಏನಾಗಿಲ್ಲ.. ಬೇಗನೆ ಎಲ್ಲಿಗೋ ಹೋಗಬೇಕೆಂದು ನಿಲ್ಲಿಸಿದ್ದ ನನ್ನ ಚೆಲುವಿಯನ್ನ ರಿವರ್ಸ್ ತೆಗೆಯಲಿಕ್ಕೆ ಹೋಗಿ ಪಕ್ಕದಲ್ಲಿದ್ದ ಸಿಮೆಂಟ್ ರಿಂಗ್ ಗೆ ಅವಳ ಕೆನ್ನೆ ಸವರಿದ್ದೆ. ಅದೇ ನೋಡಿ ಈಗ ಮೇಕಪ್ಪು, ಡ್ರೆಸ್ಸಿಂಗು ಎಲ್ಲಾ ಮಾಡ್ಲಿಕ್ ಬಂತು..
ಬಸ್ ನ ಡ್ರೈವರ್ಗೆ ಸಿಗ್ನಲ್ ನಲ್ಲೇ ಇಳಿಸಿ ಬಿಡಪ್ಪಾ ಇಲ್ಲಾಂದ್ರೆ ಒಂದು ಕಿ.ಮಿ ನೆಡೆಯ ಬೇಕಾಗುತ್ತೆ ಅಂತ ಕೇಳಿಕೊಂಡೆ.. ಏನೋ ಗೊಣಗಿದ ಅವನನ್ನು ನೋಡಿ ನಕ್ಕು ಇಳಿದು ಬಂದೆ.. ಅವರಿಗೆ ಮರುಮಾತನಾಡುವುದೇಕೆ ಎಂದು...
ಉ: ವರುಷ ಹಿಂದುರುಳಿದ ಬದುಕು
ನೀವು ಸಿಗ್ನಲ್‍ನಲ್ಲಿ ಬಾಗಿಲು ತೆಗೆಯಲು ಹೇಳಿದ್ದು ಅಂತ ಅರಿವಾಗಲಿಲ್ಲ.....
ದಿನನಿತ್ಯದ ಕಚೇರಿ ಪ್ರಯಾಣ, ಬಸ್‍ನಲ್ಲಿ ಅಥವಾ ಆಟೋ ದಲ್ಲಿ ಮಾಡುವುದು ಸ್ವಂತ ಕಾರಿನಲ್ಲಿ ಓಡಾಡುವುದಕ್ಕಿಂತ ಉತ್ತಮ, ಅಂತ ನನ್ನ ಅನಿಸಿಕೆ.
ಇತೀ, ಉಉನಾಶೆ
ಉ: ವರುಷ ಹಿಂದುರುಳಿದ ಬದುಕು
ನೋಡುದ್ರ ಒಂದಿನ ಬಸ್ಸಲ್ಲಿ ಹೋಗಿದ್ದಕ್ಕೆ ಎಷ್ಟೆಲ್ಲ ಅನುಭವ........
ಉ: ವರುಷ ಹಿಂದುರುಳಿದ ಬದುಕು
ಸಿಕ್ಕಾಪಟ್ಟೆ ಮಾಲತಿ, ಅಫೀಸಿನಿಂದ ಹೊರಟು ಬಂದದ್ದೂ ಬರೀ ಬೇಕು..
ಬದುಕು ಅನುಭವಗಳ ಕಣಜ
ನಾನಿಲ್ಲಿ ಜೀರ್ಜಿಂಬೆ...
ಕಷ್ಟ ಸುಖಗಳ ಮಧ್ಯೆ ಹುಡುಕಿ
ಸವಿಯುಣುವ ತವಕದಲಿ
ಸಾಗಿಹುದೆನ್ನ ಜೀವನ ರಥ..
ಉ: ವರುಷ ಹಿಂದುರುಳಿದ ಬದುಕು
ಇಂದು ಇದು ೪ ನೆ ಲೇಕನ ಅನ್ಸುತ್ತೆ .
ತರ ತರದ ಅನುಭವಗಳು , ಕೊನೆಯ ಉತ್ತರ ಒಂದೇ "ಬದಲಾದ ಬದುಕು ಮತ್ತು ನಾವು ".
ಉ: ವರುಷ ಹಿಂದುರುಳಿದ ಬದುಕು
ತರತರದ ಅನುಭವಗಳ ಮಧ್ಯೆ
ತರಾವರಿ ಪ್ರಶ್ನೆ ಉತ್ತರಗಳು
ಬದುಕು ಬದಲಾದರೂ
ನಾವು ಬದಲಾದೇವೆಯೇ...
ಉತ್ತರ ಹುಡುಕುವ ತವಕದಲಿ
ಪ್ರಶ್ನೆಯೇ ಮರೆತು ಹೋದಲ್ಲಿ
ಉತ್ತರ ಕಂಡ ನಂತರದ ಬದುಕು
ದೇವಾ... ನೀನೇ ಮೆಚ್ಚಬೇಕು
ಉ: ವರುಷ ಹಿಂದುರುಳಿದ ಬದುಕು
ನೋಡಿ ಬಸ್ಸಲ್ಲಿ ಓಡಾಡಿದ್ರೆ ಎಷ್ಟೆಲ್ಲ ಅನುಭವಗಳು..
ಉ: ವರುಷ ಹಿಂದುರುಳಿದ ಬದುಕು
ನೆನಪಿನ ಬುಟ್ಟಿ ತೆಗೆದು ಅದರೊಳಗಿನ ಹಳೆದಿನಗಳ ನೆನೆದು, ಹೊಸ ಅನುಭವಗಳನ್ನ ಬುತ್ತಿ ಕಟ್ಟಿ ಎತ್ತಿಡಲಿಕ್ಕೆ ಬೇಕಾದಷ್ಟು :)
ಉ: ವರುಷ ಹಿಂದುರುಳಿದ ಬದುಕು
ಶಿವು ಸಾರ್.. ಬರೆದ ಶೈಲಿ ಸೂಪರ್... :)
ಚೆಲುವೆ ನೀ ಹೀಗೆ ಕೈಯ ಕೊಡುವುದೇ.. !!??
ಈ ಬರಹಕ್ಕೆ ದಾರಿಯಲ್ಲಿ ಅತ್ತ ಇತ್ತ ಕಣ್ಣು ಹಾಯಿಸಿದಾಗ ಕಂಡ.. ವರೇ..
ಸ್ಪೂರ್ತಿಯೋ..!!! :D ಸುಮ್ಮನೆ ತಮಾಷೆಗೆ.. :)
ಉ: ವರುಷ ಹಿಂದುರುಳಿದ ಬದುಕು
ಸೂಪರ್ ರೀ ಶಿವು,
ಒಂದು ಬಸ್ ಇಳಿದು ಮತ್ತೊಂದು ಬಸ್ಸು ಹೀಗೆ ಯಾವ್ಕಡೆ ಹೊರ್ಟಿದ್ರಿ ಅಂತ ಓದ್ತಾ ಹೋದೆ! ಏನೂ ಪ್ಲಾನ್ ಮಾಡದೇ ಒಂದಿನ ಎಲ್ಲಾರೂ ಹೋಗ್ಬರಣ ಅಂದ್ಕೊಂಡ್ರ್ಯಾ ಹೆಂಗೆ ಅಂತ ಯೋಚಿಸ್ತಿದ್ದೆ... ಆಮೇಲೆ ಆಫೀಸಿಗೇ ಬಂದು ನಿಂತಾಗ ಸಲ್ಪ ಬೇಸರ ಆಯ್ತು ;)
ಉ: ವರುಷ ಹಿಂದುರುಳಿದ ಬದುಕು
ಏನೂ ಪ್ಲಾನ್ ಮಾಡದೆ ಪ್ಲಾನ್ ರೆಡಿಯಾಗ್ಲಿಕ್ಕೆ ಸಂದರ್ಭವೊಂದೊದಗಿ ಬಂದಿದ್ದರೆ, ತಟ್ ಎಂದು ನನ್ನ ನಟರಾಜ ಸರ್ವೀಸ್ಗೆ ಇನ್ನೊಂದ್ ಸ್ವಲ್ಪ ಕೆಲಸ ಕೊಡಬಹುದಿತ್ತೇನೋ... :) ಆದ್ರೆ ಅಫೀಸಿಗೆ ಹೋದದ್ದು ಚೆಂದಾಯ್ತು.. ಮುಂದೆ ಬರೀತಿನಿ ನೋಡಿವಿಯಂತೆ...
ಉ: ವರುಷ ಹಿಂದುರುಳಿದ ಬದುಕು
ಸೊಗಸಾಗಿ ಬರೆದಿದ್ದೀರಿ ಶಿವು.