ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಅನಾಮಧೇಯರಾಗಿರುವ ಖುಷಿ!
ಒಮ್ಮೆ ಸುಮ್ಮನೇ ಯೋಚಿಸಿ ನೋಡಿ!
ನೀವು ಯಾವುದೋ ಜಾಗಕ್ಕೆ ಹೋಗುತ್ತೀರಿ. ಅಲ್ಲಿ ಜನ ನಿಮ್ಮನ್ನು ಮುತ್ತಿಕೊಳ್ಳುತ್ತಾರೆ. ನಿಮ್ಮ ಬಗ್ಗೆ ವಿಚಾರಿಸುತ್ತಾರೆ. ಆಟೊಗ್ರಾಫ್ ತೆಗೆದುಕೊಳ್ಳುತ್ತಾರೆ. ಫೋಟೊ ತೆಗೆಸಿಕೊಳ್ಳುತ್ತಾರೆ. ಕಾರ್ಯಕ್ರಮಗಳಿಗೆ ಬರುವಂತೆ ಒತ್ತಡ ಹೇರುತ್ತಾರೆ. ಅವರ ಪ್ರೀತಿ ಮೊದಮೊದಲು ಸಂತಸ ತಂದರೂ, ಕ್ರಮೇಣ ಕಿರಿಕಿರಿ ಶುರುವಾಗುತ್ತದೆ. ಯಾವ ಉದ್ದೇಶಕ್ಕೆ ನೀವು ಹೋಗಿರುತ್ತೀರೋ, ಅದನ್ನು ಬಿಟ್ಟು ಉಳಿದೆಲ್ಲದೂ ನಡೆಯುತ್ತಿರುತ್ತದೆ.
ಆದರೆ, ಈ ಜಾಗದಲ್ಲಿ ಇನ್ನೊಂದು ಚಿತ್ರಣ ಊಹಿಸಿ ನೋಡಿ!
ನೀವು ಹೋದ ಜಾಗದಲ್ಲಿ ಯಾರೂ ನಿಮ್ಮನ್ನು, ’ನೀವೇ’ ಎಂದು ಗುರುತಿಸುವುದಿಲ್ಲ. ನೀವು ಎಲ್ಲರನ್ನೂ ಸುಮ್ಮನೇ ಗಮನಿಸುತ್ತ ಹೋಗುತ್ತೀರಿ. ಅದರಲ್ಲಿ ಎಷ್ಟೋ ಜನರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೂ, ನೀವು ಅವರೊಂದಿಗೆ ಮಾತನಾಡುವುದಿಲ್ಲ. ಪರಿಚಯ ಮಾಡಿಕೊಳ್ಳುವುದಿಲ್ಲ. ಸುಮ್ಮನೇ ವಾತಾವರಣವನ್ನು ಅನುಭವಿಸುತ್ತ, ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುತ್ತ, ಹೋದ ಕೆಲಸವನ್ನು ಮುಗಿಸಿಕೊಂಡು ವಾಪಸ್ಸಾಗುತ್ತೀರಿ.
ಯಾವುದು ನಿಮಗೆ ಇಷ್ಟ?
ಆಯ್ಕೆ ನಿಮ್ಮದು. ನನ್ನನ್ನು ಕೇಳಿದರೆ, ಎರಡನೆಯದೇ ನನಗೆ ಇಷ್ಟ. ಜನ ಗುರುತಿಸುವುದು ಖುಷಿ ಕೊಡುತ್ತದೆ ನಿಜ. ಆದರೆ, ಕ್ರಮೇಣ ಅದು ನಮ್ಮ ಖಾಸಗಿತನವನ್ನು ಕಿತ್ತುಕೊಂಡು ಬಿಡುತ್ತದೆ. ಹಾಗಂತ, ಜನರಿಂದ ದೂರವಾಗಿ ಇರುವುದೂ ಸಾಧ್ಯವಿಲ್ಲ. ಪರಿಚಯದ ನಡುವೆ ಒಂದಿಷ್ಟು ಅನಾಮಧೇಯತೆ, ಸಂತೆಯೊಳಗೆ ಒಂಟಿತನ, ಗುಂಪಿನ ನಡುವೆ ಒಬ್ಬಂಟಿಯಾಗಿರುವುದು ಖುಷಿ ಕೊಡುತ್ತದೆ. ಯಾರೂ ನಮ್ಮನ್ನು ವಿಶೇಷವಾಗಿ ಗುರುತಿಸಲಿಲ್ಲ ಎಂಬ ನೋವಿಗಿಂತ, ಹಾಗೆ ದೂರವಾಗಿದ್ದುಕೊಂಡೇ ಎಲ್ಲವನ್ನೂ ಮನ ತಣಿಯೇ ಆಸ್ವಾದಿಸಬಹುದು.
ಏಕೋ ಇತ್ತೀಚೆಗೆ ಈ ವಿಚಾರವೇ ಮನಸ್ಸನ್ನು ತುಂಬಿಕೊಂಡಿದೆ.
ಯಾರೂ ಯಾರನ್ನೂ ವಿಶೇಷವಾಗಿ ಗುರುತಿಸುವುದು ಬೇಕಿಲ್ಲ ಅನಿಸುತ್ತದೆ. ಪರಿಚಯ ಇರಲಿ, ಗೌರವ ಇರಲಿ, ಆದರೆ ಅತ್ಯುತ್ಸಾಹ ಬೇಡ. ಅವರವರ ಖಾಸಗಿತನ ಅವರವರಿಗೆ ಇರಲಿ. ಅಭಿಮಾನ ವ್ಯಕ್ತಪಡಿಸಲು ಬೇರೆ ಮಾರ್ಗಗಳು ಸಾಕಷ್ಟಿವೆ.
ಟಿವಿ ತಾರೆಯರು, ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು ಅನಗತ್ಯ ಗಮನಕ್ಕೆ ಸಿಲುಕುತ್ತಾರೆ. ಅವರನ್ನು ಮುತ್ತಿಕೊಂಡು ಹಿಂಸಿಸುವುದಕ್ಕಿಂತ, ಅಭಿಮಾನ ಇದ್ದರೆ, ದೂರ ನಿಂತು ಮುಗುಳ್ನಗುವುದು ಉತ್ತಮವಲ್ಲವೆ?
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 327 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅನಾಮಧೇಯರಾಗಿರುವ ಖುಷಿ!
Nice.... Obbane tirugaadodu andre nangoo tumbaa ishta....
(sorry, nanna system yako Kannada support madta illa.. So "Kanglish" use madtaa iddene..)
ಉ: ಅನಾಮಧೇಯರಾಗಿರುವ ಖುಷಿ!
ಕನ್ನಡದಲ್ಲಿ ಬರೆಯೋದು ಸುಲಭ. ಸಂಪದದಲ್ಲಿ ಅದಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿ ಇದೆ. ವಿರಾಮವಾಗಿ ಹುಡುಕಿ.
ಒಬ್ಬರೇ ತಿರುಗೋದಕ್ಕಿಂತ, ಒಬ್ಬರೇ ಕೂತು ಕನ್ನಡ ಬರೆಯುವುದನ್ನು ರೂಢಿಸಿಕೊಳ್ಳಿ. ಇದು ನನ್ನ ಆತ್ಮೀಯ ಸಲಹೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಅನಾಮಧೇಯರಾಗಿರುವ ಖುಷಿ!
ತುಂಬ ಚೆನ್ನಾಗಿದೆ ವಿಷಯ.ಅದೆಷ್ಟು ಬಾರಿ ಹೀಗೆ ಅನಿಸಿದೆಯೋ.
ನಿಜ..ಯಾರ ಖಾಸಗಿತನಕ್ಕೂ ಅಡ್ಡಿ ಮಾಡುವ ಅಧಿಕಾರ ನಮಗಿಲ್ಲ.ನಾವೆಲ್ಲ ದಿನವೂ ಎಲ್ಲೆಲ್ಲೋ ಹೋಗಿ-ಬಂದು ಮಾಡುತ್ತಿರುತ್ತೇವೆ.ಯಾರದರೂ ಪರಿಚಯದವರು ಕಂಡರೆ ಮಾತು-ಕತೆ. ಇಲ್ಲಾ..ನಮ್ಮ ಪಾಡಿಗೆ ನಾವು ಸುತ್ತಲಿರುವ ಜನ,ವಾಹನ,ಮನೆಗಳು,ಗುಡಿ..ಹೀಗೆ ಕಂಡದ್ದೆಲ್ಲವನ್ನೂ ಆಸ್ವಾದಿಸುತ್ತಾ ನಡೆದುಬಿಡುತ್ತೇವೆ.ನಾನಂತೂ ಆಗಾಗ ಒಬ್ಬಂಟಿಯಾಗಿ ಇಷ್ಟವಾದ ಹಾಡು ಕೇಳುವ,ಇಷ್ಟವಾದುದನ್ನು ಮೆಲ್ಲುವ,ಮಳೆಯಲ್ಲಿ ನೆನೆಯುವ..ಹಲವಾರು ಅಮೃತಘಳಿಗೆಗಳನ್ನು ಆದಷ್ಟು ಆಸ್ವಾದಿಸುತ್ತಿರುತ್ತೇನೆ.
ಒಂದೊಮ್ಮೆ ನೆನೆಸಿಕೊಳ್ಳಿ..ಕೆಲಸ ಮುಗಿಸಿ ಮನೆಗೆ ಬಸ್ಸಿನಲ್ಲಿ ಹೋಗುತ್ತಿದ್ದೀರಿ ಹೊರಗೆ ಚೆಂದದ ಮಳೆ ಸುರಿಯುತ್ತಿದೆ.ಆಗ ತಾನೆ ಬರುತ್ತಿರುವ ಮಣ್ಣಿನ ವಾಸನೆ ಮನಸ್ಸಿಗೆ ಖುಷಿ ಕೊಡುತ್ತಿದೆ.ಮನೆ ಇನ್ನೂ ಸ್ವಲ್ಪ ದೂರವಿರುವಾಗಲೇ ಇಳಿಯುವ ಮನಸ್ಸಾಗುತ್ತದೆ.ರಸ್ತೆಯಲ್ಲಿ ನಿಮ್ಮ ಪಾಡಿಗೆ ನೀವು ಹಾಡು ಕೇಳುತ್ತಾ ಮಳೆಯಲ್ಲಿ ನೆನೆಯುತ್ತಾ ಪ್ರಕೃತಿಯನ್ನ ಆಸ್ವಾದಿಸುತ್ತಾ ನಡೆದುಬಿಡುತ್ತೀರಿ ನಿಮ್ಮ ಐಪಾಡ್ ನೆನೆಯುತ್ತಿದೆ ಎಂಬುದನ್ನೂ ಮರೆತು!!
ಅದೇ ರಸ್ತೆಯಲ್ಲೀಗ ದಿನವೂ ಸಿಗುವ ಗೆಳೆಯ ಸಿಕ್ಕು ಅದೇ ರಾಗ ಹಾಡತೊಡಗಿದರೆ ಸಹಜವಾಗಿಯೇ ಮನಸ್ಸಿಗೆ ಬೇಸರವಾಗುತ್ತದೆ.ಹೀಗಿರುವಾಗ ದಿನವೂ ನೂರಾರು ಜನರನ್ನು ಭೇಟಿ ಮಾಡುವ ಸ್ಟಾರ್ ಗಳಿಗೆ ಖಾಸಗೀಯತೆ ತುಂಬ ಬೇಕಿರುತ್ತದೆ.ಅವರ ಮನೆಗೆ ಕಾಲಿಟ್ಟು ಧೂಳು ಮಾಡುವುದು ಸರಿಯಲ್ಲ ಅಲ್ಲವೇ?
-ಸುಶೀಲ್.ಎಸ್.ಬಿ.
ಉ: ಅನಾಮಧೇಯರಾಗಿರುವ ಖುಷಿ!
ನಿಜ ಸುಶೀಲ್,
ಏಕೋ ಕೆಲವೊಮ್ಮೆ ಮೌನ ತುಂಬ ಇಷ್ಟವಾಗುತ್ತದೆ. ಮಾತು ಸುತಾರಾಂ ಬೇಡ ಅನ್ನಿಸುತ್ತದೆ. ಹಾಗೆ ಸುಮ್ಮನಿದ್ದಿದ್ದನ್ನು ತಪ್ಪು ತಿಳಿದುಕೊಂಡವರಿದ್ದಾರೆ. ಆದರೆ ಮೌನ ಎಂಬುದು ಎಂಥಾ ಸಮೃದ್ಧ ಭಾಷೆ ಗೊತ್ತಾ?
ಮನಸ್ಸು ಮುದುಡಿದರೆ, ಮೌನಕ್ಕಿಂತ, ಏಕಾಂತಕ್ಕಿಂತ ಉತ್ತಮ ಔಷಧ ಇನ್ನೊಂದಿಲ್ಲ. ನಿಮ್ಮ ವಿಚಾರಗಳು ಚೆನ್ನಾಗಿವೆ. ನಮ್ಮ ಹಾಗೆ ವಿಚಾರ ಮಾಡುವ ಜನರನ್ನು ಕಂಡಾಗ, ನನ್ನ ಬಗ್ಗೆಯೇ ಆತ್ಮವಿಶ್ವಾಸ ಮೂಡುತ್ತದೆ.
ಬರೆಯುತ್ತಿರಿ. ಪ್ರತಿಕ್ರಿಯೆಗಳನ್ನಷ್ಟೇ ಅಲ್ಲ, ಸ್ವಂತ ಬರಹಗಳನ್ನೂ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...