ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
ಭಾಗ-೧
ಒಂದು ವಾರದ ಬೆಳವಣಿಗೆಗಳು ಒಂದಕ್ಕಿಂತ ಒಂದು ಆಘಾತಕಾರಿಯಾಗಿವೆ.
ರಸಗೊಬ್ಬರ ಗಲಾಟೆ ಧಾರವಾಡದ ಮಟ್ಟಿಗೆ ಖಂಡಿತ ಹೊಸದಲ್ಲ. ಆದರೆ, ಅದು ದೊಂಬಿಯ ರೂಪಕ್ಕೆ ತಿರುಗಿದ್ದು ತೀರಾ ಅಪರೂಪ. ನಾನು ಚಿಕ್ಕವಳಿದ್ದಾಗಿಂದ ನೋಡಿದ್ದೇನೆ. ಪ್ರತಿ ವರ್ಷ ಮೊದಲ ಮಳೆ ಬೀಳುತ್ತಲೇ ಸಿಬಿಟಿ (ಸಿಟಿ ಬಸ್ ಟರ್ಮಿನಸ್) ಸುತ್ತಮುತ್ತಲಿನ ಗೊಬ್ಬರ ಹಾಗೂ ಬಿತ್ತನೆ ಬೀಜ ಮಾರುವ ಅಂಗಡಿಗಳಲ್ಲಿ ರೈತರ ದಂಡು ಕಂಡು ಬರುತ್ತಿತ್ತು. ಒಮ್ಮೆಮ್ಮೆ ಬೇಕಾದ ಬಿತ್ತನೆ ಬೀಜದ ಕೊರತೆಯಿಂದಾಗಿ, ರೈತರು ಹಾಗೂ ಅಂಗಡಿಕಾರರ ನಡುವೆ ವಾಗ್ಯುದ್ಧ ನಡೆಯುತ್ತಿತ್ತು. ಆದರೆ, ಅದು ಗಲಾಟೆಯಾದ ಸಂದರ್ಭಗಳು ತೀರಾ ಅಪರೂಪ.
ಆಗ ರಸಗೊಬ್ಬರದ ಹುಚ್ಚೂ ಇಷ್ಟೊಂದು ಕಂಡು ಬರುತ್ತಿದ್ದಿಲ್ಲ. ಬಂಡಿಗೊಬ್ಬರ ಎಂದು ಕರೆಯಲ್ಪಡುವ ಕೊಟ್ಟಿಗೆ ಗೊಬ್ಬರದ ಮೇಲೆಯೇ ರೈತರು ಹೆಚ್ಚು ಅವಲಂಬಿತರಾಗಿದ್ದರು. ಉಳ್ಳ ರೈತರು ಮಾತ್ರ ರಸಗೊಬ್ಬರ ಬಳಸುತ್ತಿದ್ದರು.
ಆದರೆ, ಪರಿಸ್ಥಿತಿ ಈಗ ಏನಾಗಿದೆ ನೋಡಿ! ಹೆಚ್ಚುಕಡಿಮೆ ಎಲ್ಲ ರೈತರು ರಸಗೊಬ್ಬರವೊಂದೇ ಪರಿಹಾರ ಎನ್ನುವಷ್ಟರ ಮಟ್ಟಿಗೆ ದಾಸರಾಗಿ ಹೋಗಿದ್ದಾರೆ. ಏನಾದರೂ ಮಾಡಿ ಹೆಚ್ಚು ಬೆಳೆಯಬೇಕು, ಲಾಭ ಗಳಿಸಬೇಕು ಎಂಬ ದುರಾಸೆಗೆ ಬಿದ್ದಿದ್ದಾರೆ. ದುರಾಸೆ ಎಂಬ ಶಬ್ದ ಬಳಸಿದ್ದೇಕೆಂದರೆ, ಹಾಗೆ ಬೆಳೆಯಲು ಏನು ಬೇಕಾದರೂ ಮಾಡಲು ರೈತರು ಸಿದ್ಧರಾಗಿದ್ದಾರೆ. ಭೂಮಿಗೆ ವಿಷ ಉಣಿಸಿಯಾದರೂ ಸರಿ ಹೆಚ್ಚು ಬೆಳೆಯಬೇಕು. ಲಾಭ ಗಳಿಸಬೇಕು ಎಂಬುದು ದುರಾಸೆಯೇ ಎಂಬುದು ನನ್ನ ವೈಯಕ್ತಿಕ ನಂಬಿಕೆ.
ಹೀಗಾಗಿ, ಒಂದೇ ರೀತಿಯ ಬೆಳೆ, ವಾಣಿಜ್ಯ ಬೆಳೆಗಳು ರೈತರಿಗೆ ಪ್ರಿಯವಾದವು. ಬೆಳೆದರೆ ಎಲ್ಲರೂ ಉಳ್ಳಾಗಡ್ಡಿ (ಈರುಳ್ಳಿ) ಅಥವಾ ಮೆಣಸಿನಕಾಯಿ, ಇಲ್ಲವೇ ಹತ್ತಿ ಅಥವಾ ಸೋಯಾಬೀನ್ ಬೆಳೆಯುವುದು ಚಾಲ್ತಿಗೆ ಬಂದಿತು. ಇದನ್ನೇ ಕಾಯುತ್ತಿದ್ದವರಂತೆ ದಲ್ಲಾಳಿಗಳು ಬೆಳೆ ಕೈಗೆ ಬರುವ ಸಮಯಕ್ಕೆ ಸರಿಯಾಗಿ ಬೆಲೆ ಇಳಿಸುತ್ತಿದ್ದರು. ಸರ್ಕಾರದ ಬೆಂಬಲ ಬೆಲೆ ಘೋಷಣೆ ಉದ್ದೇಶಪೂರ್ವಕವಾಗಿ ಪ್ರತಿ ವರ್ಷ ತಡವಾಗಿಯೇ ಬರುತ್ತದೆ. ಇದೆಲ್ಲ ಒಂದು ಕೆಟ್ಟ ವ್ಯವಸ್ಥೆಯಂತೆ ಬೆಳೆಯುತ್ತ ಹೋಯಿತು.
ಅದೆಲ್ಲದರ ಅಭಿವ್ಯಕ್ತಿಯಾಗಿ ಧಾರವಾಡದ ಹಿಂಸಾಚಾರ ಮೂಡಿ ಬಂದಿತು. ಶಾಂತವಾಗಿದ್ದ ನನ್ನ ಫೇಡೆ ನಾಡು, ಶಾಲ್ಮಲೆ ಬೀಡು ಬೆಂಕಿ ಮತ್ತು ಆಕ್ರೋಶದಿಂದ ತತ್ತರಿಸಿತು.
ಆ ದಿನ ನನಗಿನ್ನೂ ನೆನಪಿದೆ.
(ಮುಂದಿನ ಭಾಗಕ್ಕೆ)
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 288 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
ಇಡಿ blog ದಾಗ್ ಇದೊಂದ್ quote ಸರಿ ಅನಸಲ್ಲಿಲ್ಲ್ ನನಗ್... ಈಗ್ ಇಪ್ಪತ್ತ್ ಮೊವತ್ತ್ ವಷ್ರದ್ ಹಿಂದ್ ರೈತ್ ಹತ್ತ್ ಚಿಲಾ ಜೊಳ್ ಇಲ್ಲಾ ಗೊಧಿ ಮಾರಿ, 10 ತೊಲಿ ಬಂಗಾರ್ ತೊಗೊತಿದ್ದ , ಆದರ್ ಇಗ್ ಅಂವ್ ಬೆಳದ್ ಬೆಳಿಗೆ ಸರಿಯಾದ್ ರೊಕ್ಕ ಸಿಗವಲ್ಲತ್... ಅದಕ್ ಅಂವ್ ವಾಣಿಜ್ಯ ಬೆಳೆ ಬೆಳೆಯಾಕ್ ಸುರು ಮಡಿದಾ....
ನನಗೆನೊ, ರೈತ್ ದುರಾಸೆಕ್ ಬಿದ್ದಾನ್ ಅನಸೊದಿಲ್ಲಾ
--
ಪ್ರಶಾಂತ್ ಸಿ
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
ವಿಚಾರ ಮಾಡಿ ನೋಡಿ ಪ್ರಶಾಂತ್! ಇವತ್ತಿನ ಜೋಳ, ಗೋದಿ, ಅಕ್ಕಿ, ತರಕಾರಿ, ಕೊನೆಗೆ ವರ್ಷಕ್ಕೊಮ್ಮೆ ಬರುವ ಮಾವಿನ ಹಣ್ಣುಗಳು ಮೊದಲಿನಷ್ಟು ರುಚಿಯಾಗಿ ಉಳಿದಿವೆಯೆ? ವೀಳ್ಯದೆಲೆಗೂ ಮೊದಲಿನ ರುಚಿಯಿಲ್ಲ. ಪ್ರತಿಯೊಂದರಲ್ಲೂ ರಾಸಾಯನಿಕ ಮಿಶ್ರವಾಗುತ್ತ ಆಗುತ್ತ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಮೂಲ ಬೀಜಗಳ ಗುಣ ಹೈಬ್ರಿಡ್ ಬೀಜಗಳಲ್ಲಿ ಇಲ್ಲ. ಈ ಕುರಿತು ಬೇಕಾದಷ್ಟು ಸಾಹಿತ್ಯ ಕನ್ನಡದಲ್ಲಿದೆ. ದಯವಿಟ್ಟು ನೋಡಿ, ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ.
ಇವತ್ತು ರೈತ ಆತ್ಮಹತ್ಯೆ ಮಾಡಿಕೊಳ್ಳಲು ಇತರ ಎಲ್ಲ ಕಾರಣಗಳಿಗಿಂತ ಹೆಚ್ಚಿನದು, ಆತ ಚಟಕ್ಕೆ ಬಿದ್ದಿರುವುದು. ಕುಡಿತಕ್ಕೆ, ಇಸ್ಪೀಟಿಗೆ, ದುಬಾರಿ ಬದುಕಿಗೆ, ಹಾಗೂ ಇತರ ಹವ್ಯಾಸಗಳಿಗೆ ರೈತ ಮಾರು ಹೋಗಿದ್ದಾನೆ. ಇದರಿಂದಾಗಿ ಹೆಚ್ಚು ಬೆಳೆಯುವ ಅನಿವಾರ್ಯತೆಗೆ, ಪುಕ್ಕಟೆ ವಿದ್ಯುತ್‌ಗೆ, ಸಬ್ಸಿಡಿ ದರದ ಗೊಬ್ಬರ, ಬೀಜಕ್ಕೆ, ಬೆಂಬಲ ಬೆಲೆಗೆ ರೈತ ಸಿಲುಕಿದ್ದಾನೆ. ಇವುಗಳಲ್ಲಿ ಯಾವುದಾದರೂ ಒಂದು ದೊರೆಯದೇ ಹೋದರೂ ಆತ ಬೀದಿಗಿಳಿಯುತ್ತಾನೆ. ಇಲ್ಲದಿದ್ದರೂ, ನಮ್ಮ ಪುಢಾರಿಗಳು, ಸಂಘಟನೆಗಳು ಅವನನ್ನು ಬೀದಿಗೆ ಇಳಿಸುತ್ತವೆ.
ತುಂಬ ಯೋಚಿಸಿ ’ದುರಾಸೆ’ ಶಬ್ದ ಬಳಸಿದ್ದೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
ರೈತರು ದುರಾಸೆಗೆ ಬಿದ್ದಿದ್ದಾರೆ ಅಥವ ರೈತರು ಚಟಕ್ಕೆ ದಾಸರಾಗಿದ್ದಾರೆ ಅನ್ನುವ ಮಾತನ್ನು ಹೀಗೆ ಜನರಲೈಸ್ ಆಗಿ ಹೇಳೋದನ್ನು ನಾನು ಒಪ್ಪೋದಿಲ್ಲ ಪಲ್ಲವಿ. ಕುಡಿತದಂತಹ ಚಟ ಸಾಮಾಜಿಕ ಪಿಡುಗೆ ಹೊರತು ಕೇವಲ ರೈತರ ಚಟವಲ್ಲ. ನೀವು ಹೇಳಿದಂತೆ ಆತ ವಾಣಿಜ್ಯ ಬೆಳೆಗಳತ್ತ, ಅಥವ ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಯಲು ಆಸೆ ಪಡುತ್ತಿರಬಹುದು, ಆದರೆ ಇದಕ್ಕೆ ನಮ್ಮ ಈ ಸಮಾಜ ಹಾಗು ಅದು ಸಾಗುತ್ತಿರುವ ದಿಕ್ಕೂ ಸಹ ಕಾರಣ. ಏರುತ್ತಿರುವ ಹಣದುಬ್ಬರ, ಎಲ್ಲೆಲ್ಲೂ ಇರುವ ಪೈಪೋಟಿ ಇದಕ್ಕೆ ಕಾರಣ. ಈ ಸಮಾಜದಲ್ಲಿ ಆತನಿಗೂ ನಮ್ಮೆಲ್ಲರಂತೆ ಬದುಕಬೇಕೆಂಬ ಹಂಬಲ ಇರಬಾರದೆ! ವರ್ಷದಿಂದ ವರ್ಷಕ್ಕೆ ಅಪ್ರೈಸಲ್‍ಗಾಗಿ ಕಾಯುವುದನ್ನು ಸರಿಯಾದ ಅಪ್ರೈಸಲ್ ಸಿಗದೆ ಹೋದಲ್ಲಿ ಕೆಲಸವನ್ನೇ ಬದಲಾಯಿಸುವುದನ್ನು ದುರಾಸೆ ಎಂದು ಕರೆಯುತ್ತೇವೆಯೆ!!? ನಾವು ಇನ್ನು ನೀವು ಆ ಕಾಲದ ಬಗ್ಗೆ ಮಾತಾಡಿದಿರಿ, ಆದರೆ ಆಗ ಮಳೆ ನಿರೀಕ್ಷಿಸಿದ ಸಮಯಕ್ಕೇ ಆಗುತ್ತಿತ್ತು, ಆದರೆ ಈಗ ಎಲ್ಲವೂ ಅಕಾಲಿಕ!ಇದಲ್ಲದೆ ಇನ್ನಿತರೆ ಪ್ರಕೃತಿ ವಿಕೋಪದಿಂದಾಗಿ ರೈತರಿಗೊಂದುನಿಶ್ಚಿತ ಆದಾಯವಿರುವುದಿಲ್ಲ. ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಹೆಚ್ಚಿನ ರೀತಿಯಲ್ಲಿ ಸುರಕ್ಷಿತರಾದ ನಾವು ಅವರನ್ನು ದೂಷಿಸುವುದು ಎಷ್ಟು ಸೂಕ್ತ!?
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
ರೈತರು ದುರಾಸೆಗೆ ಬಿದ್ದಿದ್ದಾರೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡ್ತೀನಿ ಪ್ರಸಾದ್.
ನಿತ್ಯ ಕೂಲಿ ಮಾಡಿ ಬದುಕುವ ಜನ ಈ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಜಟಕಾ ಇಟ್ಟು ಬದುಕುವವರು, ಚಪ್ಪಲಿ ಹೊಲಿದು ಜೀವನ ಹೊರೆಯೋರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅತ್ಯಂತ ನತದೃಷ್ಟಕರ ಸ್ಥಿತಿಯಲ್ಲಿರುವ ಜನ ಕೂಡ ಹೇಗೋ ಬದುಕು ಸಾಗಿಸುತ್ತಾರೆಯೇ ಹೊರತು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹೀಗಿರುವಾಗ, ಕೇವಲ ರೈತ ಏಕೆ ಆತ್ಮಹತ್ಯೆ ಬಗ್ಗೆ ಇಷ್ಟೊಂದು ಆಕರ್ಷಿತನಾಗಿದ್ದಾನೆ?
ತನ್ನ ಮಿತಿಗಿಂತ ಹೆಚ್ಚಿನ ಬದುಕನ್ನು ಹುಡುಕಿಕೊಂಡು ಹೊರಟಾಗ ಹೀಗೆ ಆಗುತ್ತದೆ. ನಿಶ್ಚಿತ ಆದಾಯವಿಲ್ಲದ ಕೋಟ್ಯಂತರ ಜನ ಬದುಕಲು ಯತ್ನಿಸುತ್ತಿದ್ದಾರೆಯೇ ಹೊರತು ಸಾಯಲು ಅಲ್ಲ. ಕೃಷಿಯನ್ನು ಕಡಿಮೆ ಖರ್ಚಿನಲ್ಲಿ ಹಾಗೂ ಲಾಭದಾಯಕವಾಗಿ ಮಾಡುವ ದಾರಿಗಳು ಸಾಕಷ್ಟಿರುವಾಗ, ಅತ್ತ ಗಮನ ಹರಿಸದ ರೈತರು, ಪ್ರತಿಯೊಂದಕ್ಕೂ ಸರ್ಕಾರವನ್ನೇ ಅವಲಂಬಿಸಿ, ಅದಕ್ಕಾಗಿ ಸರ್ಕಾರಗಳನ್ನು ದೂಷಿಸುವುದು ಖಂಡಿತ ಸರಿಯಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...