ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಇದು ಬರಿ ಬೆಳಗಲ್ಲೋ...
ಎದ್ದ ಕೂಡಲೇ ಏನು ಮಾಡುತ್ತೀರಿ?
ಮುಖ ಮಾರ್ಜನ ಒತ್ತಟ್ಟಿಗಿರಲಿ, ಏನು ಯೋಚಿಸುತ್ತೀರಿ?
ನಾನಂತೂ, ಇಂದು ಮಾಡಬೇಕಾದ ಕೆಲಸಗಳನ್ನು ಮನಸ್ಸಿನ ಮುಂದೆ ತಂದುಕೊಳ್ಳುತ್ತೇನೆ. ನಿನ್ನೆ ಮಾಡದೇ ಉಳಿದ ಕೆಲಸಗಳನ್ನು ನೆನಪಿಸಿಕೊಳ್ಳುತ್ತೇನೆ. ಅವನ್ನು ಮಾಡಲು ನಾನು ಸಮರ್ಥಳಿದ್ದೇನೆ ಎಂದು ಹೇಳಿಕೊಳ್ಳುತ್ತೇನೆ. ’ಆಯಿತಲ್ಲ, ಇನ್ನೊಂದೈದು ನಿಮಿಷ ಹಾಗೇ ಅಡ್ಡಾಗೋಣ’ ಎಂದು ಎಳೆಯುತ್ತಿರುವ ಮೊಂಡ ಮನಸ್ಸನ್ನು ಪುಸಲಾಯಿಸಿ ಏಳುತ್ತೇನೆ. ಲೈಟ್ ಹಾಕಿದ ಕೂಡಲೇ ಕಾಣಬಹುದಾದ ರೂಮಿನ ಅವಾಂತರಗಳನ್ನು ಫಟಾಫಟ್ ಸರಿಪಡಿಸಿ, ಬೆಳಗಿನ ಕರ್ಮಗಳನ್ನು ಮುಗಿಸಿ, ಓದಲು ಕೂಡುತ್ತೇನೆ. ಸಾಮಾನ್ಯವಾಗಿ ಓದುವುದು, ಮನಸ್ಸು ಅರಳಿಸುವಂಥ ಪುಸ್ತಕಗಳನ್ನು. ಒಮ್ಮೊಮ್ಮೆ ಕವಿತೆಗಳೂ ಅದರಲ್ಲಿ ಸೇರುತ್ತವೆ.
ಅರ್ಧ ಗಂಟೆ ಓದಿದ ನಂತರ, ಹೊಸ ಹೊಸ ವಿಚಾರಗಳು ಬರುತ್ತವೆ. ಅವನ್ನು ಕೈಬರಹದಲ್ಲಿ ಒಂದೆಡೆ ಬರೆಯುತ್ತೇನೆ. ಬೆಳಿಗ್ಗೆ ಎದ್ದು ಕಂಪ್ಯೂಟರ್ ತೆರೆಯುವುದು ಕಡಿಮೆ. ಬರೆದಿದ್ದನ್ನು ಒಂದು ಸಾರಿ ಓದುತ್ತೇನೆ. ಎಷ್ಟೋ ಸಾರಿ, ಬರೀ ಹೆಡ್ಡಿಂಗ್, ಒಂದೆರಡು ವಿಚಾರಗಳು ಮಾತ್ರ ಇರುತ್ತವೆ. ಅಷ್ಟು ಸಾಕು, ನಂತರ ಅವನ್ನೆಲ್ಲ ಬರಹಗಳನ್ನಾಗಿ ಪರಿವರ್ತಿಸಬಹುದು.
ಅವ್ವ ಎದ್ದಿದ್ದಾಳೇನೋ ಎಂಬಂತೆ ಒಮ್ಮೆ ಸುಮ್ಮನೇ ಇಣುಕಿ ನೋಡುತ್ತೇನೆ. ಆಕೆ ಆಗಲೇ ಎದ್ದು ಅಡುಗೆ ಮನೆ ಸೇರಿರುತ್ತಾಳೆ. ಚಳಿ ಇದ್ದರೆ ಒಂದು ಬಿಸಿ ಕಾಫಿ ಕೂತಲ್ಲೇ ಬರುವ ಗ್ಯಾರಂಟಿ ಉಂಟು. ಮನಸ್ಸು ತನಗೆ ತಾನೆ ಪ್ರಫುಲ್ಲವಾಗುತ್ತದೆ. ಹೊರಗೆ ಮೋಡದ ರಾಶಿಯಲ್ಲಿ ಹುದುಗಿರುವ ಧಾರವಾಡ. ರಾತ್ರಿ ಸಣ್ಣ ಮಳೆ ಸುರಿದಿರಬೇಕು. ಡಾಂಬರು ರಸ್ತೆ ಕಪ್ಪಗೇ ಕಾಣುತ್ತದೆ. ನಿಂತ ಮರಗಳಲ್ಲಿ ತಂಪು ಉಸಿರು.
ಮಾತಿಲ್ಲದೇ ಅವ್ವ ತಂದುಕೊಟ್ಟ ಬಿಸಿ ಕಾಫಿ ಹೀರುತ್ತ ಕೂಡುತ್ತೇನೆ. ’ಇಷ್ಟು ಬೇಗ ಯಾಕೆ ಎದ್ದೆ ಪಲ್ಲೂ’ ಅನ್ನುತ್ತಾಳೆ ಅವ್ವ. ನಾನು ಉತ್ತರ ಕೊಡುವುದಿಲ್ಲ ಎಂಬುದು ಆಕೆಗೆ ಗೊತ್ತು. ಹೀಗಾಗಿ, ಸುಮ್ಮನೇ ಕಾಫಿ ಕುಡಿಯುತ್ತೇನೆ. ಆಕೆ ಸುಮ್ಮನೇ ನಿಂತಿರುತ್ತಾಳೆ. ಕಾಫಿ ಕುಡಿದು, ಕಪ್ ಕೈಗಿಡುವಾಗ ಆಕೆಗೊಂದು ಬಿಸಿ ಬಿಸಿ ಬೆಳಗಿನ ಮುತ್ತು. ಆಕೆಯೂ ಪ್ರಫುಲ್ಲ.
ಬಾಗಿಲು ತೆರೆದು ಒಂದೈದು ನಿಮಿಷ ಹೊರಗಿನ ತಂಪಿನಲ್ಲಿ ನೆನೆಯುತ್ತೇನೆ. ಎಂಥದೋ ಹಾಯ್! ಮತ್ತೆ ಬಂದು ಓದುತ್ತ ಕೂಡುತ್ತೇನೆ.
ನಿಧಾನವಾಗಿ ಬೆಳಕಾಗುತ್ತದೆ. ಅದೂ ಒಂಥರಾ ಮಂಕು. ಸೂರ್ಯ ಕಾಣುವುದು ಇನ್ನೂ ಎಷ್ಟೊತ್ತೋ! ಬರಲಿ ಸೂರ್ಯ, ಸೋಮಾರಿ ಎಂದು ಅಂದುಕೊಳ್ಳುತ್ತ ಸ್ನಾನ ಮುಗಿಸುತ್ತೇನೆ. ಮಳೆ ಬರುವ ಲಕ್ಷಣವಿದ್ದರೆ ಅಪ್ಪನ ಕಾರು, ಇಲ್ಲದಿದ್ದರೆ ಸ್ಕೂಟಿ ಸಾಕು, ಐದು ನಿಮಿಷದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುತ್ತೇನೆ. ಅಲ್ಲಿಂದ ಶಾಲ್ಮಲೆ ಒಡಲು ಸೇರಿಕೊಳ್ಳಲು ಐದು ನಿಮಿಷದ ವಾಕ್ ಸಾಕು.
ಮೂಡಣದಲ್ಲಿ ಎಲ್ಲೋ ಸೂರ್ಯ ನಾಚುತ್ತ ಬರುತ್ತಾನೆ. ಹೊಂಗಿರಣಗಳ ಮೊದಲ ಮುತ್ತು ಎತ್ತರದ ಮರಗಳ ತುದಿಗೆ. ದೂರದ ಬೆಟ್ಟಗಳ ತುದಿಯಲ್ಲಿ ಕಿರೀಟವಿಟ್ಟಂಥ ಮೋಡಗಳು. ಅವು ಓಡುತ್ತಿದ್ದರೂ ನಿಂತಂತೆ ಕಾಣುತ್ತವೆ. ನನ್ನಂತೆ ಬೆಳಿಗ್ಗೆ ವಾಕಿಂಗ್ ಬಂದವರಿಗೆ ಅದರತ್ತ ಗಮನವಿರುತ್ತದೋ ಗೊತ್ತಿಲ್ಲ. ನಾನು ಮಂತ್ರಮುಗ್ಧಳಂತೆ ಅದನ್ನೇ ನೋಡುತ್ತೇನೆ.
’ಮೂಡಣ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದಾ, ನುಣ್ಣನೆ ಎರಕವ ಹೊಯ್ದಾ
ಬಾಗಿಲು ತೆರೆದು, ಬೆಳಕು ಹರಿದು
ಜಗವೆಲ್ಲ ತೊಯ್ದಾ, ದೇವನು ಜಗವೆಲ್ಲಾ ತೊಯ್ದಾ’
ಎಂಬ ಬೇಂದ್ರೆಯವರ ಕವಿತೆ ಬಾಯಿಗೆ ಬರುತ್ತದೆ.
ಮುಕ್ಕಾಲು ಗಂಟೆಯ ವಾಕಿಂಗ್‌ನಲ್ಲಿ ಮನಸ್ಸು, ದೇಹ ಎರಡೂ ತಾಜಾ ಆಗಿಬಿಡುತ್ತವೆ. ಮನೆಗೆ ಮರಳುವಾಗ ಎಂಥದೋ ಖುಷಿ. ಮನಸ್ಸು ಮತ್ತೆ ಮತ್ತೆ ಹೇಳಿಕೊಳ್ಳುತ್ತದೆ:
ಇದು ಬರಿ ಬೆಳಗಲ್ಲೋ ಅಣ್ಣಾ !!
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 385 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಇದು ಬರಿ ಬೆಳಗಲ್ಲೋ...
ನಮಸ್ಕಾರ. ನಿಮ್ಮ ಬರಹ ಚೆನ್ನಾಗಿದೆ. ಮುಂಜಾವಿನ ಅನುಭವವೇ ಆದಂದಾಯಿತು. ನಿಮ್ಮ ವಯಸ್ಸಿನ ಹುಡುಗಿಯರು ಇಷ್ಟು ಬೇಗ ಏಳುತ್ತಾರೆಂಬುದು, ಬೆಳ್ಳಂಬೆಳಗ್ಗೆಯೇ ಇಂತಹ ನವಿರಾದ ಅನುಭವವನ್ನು ಪದಗಳಲ್ಲಿ ಮೂಡಿಸುವುದು ನಿಜಕ್ಕೂ ಆಶ್ಚರ್ಯದ, ಅಪರೂಪದ ಸಂಗತಿ. ನಿಮ್ಮ ಆಸಕ್ತಿ, ಅಭಿರುಚಿ ಮೆಚ್ಚುವಂತಹದ್ದು. ಹೀಗೇ ಬರೆಯುತ್ತಿರಿ. ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಉ: ಇದು ಬರಿ ಬೆಳಗಲ್ಲೋ...
ನಮಸ್ಕಾರ ಸಹೋದರಿ ಪಲ್ಲವಿ. ಕಣ್ಣನು ತೆರೆಯಲು ಮನಸು ಇರದ ಆ ಬೆಳಗಿನ ಸಮಯದ ,ಅನುಭವದ ಬಗ್ಗೆ ಬಹಳ ಚೋಲೊ ಬರದಿರಿ.
ನನಗು ಹಿ೦ಗ ಬೆಳಗಾವಿನ್ಯಾಗ ಇದ್ದಾಗ ಅಗಿತ್ತು.
ಆದರ ಇಗ ಇದು ನನ್ನ ಪಾಡಿಗೆ ಇಲ್ಲದ೦ಗ ಅಗ್ಯದ. ಅ೦ದ್ರ ನಾನು ರಾತ್ರಿ ಕೆಲಸಾ ಮಾಡುದ್ರಿ೦ದ ಬೆಳೆಗ್ಗೆ ಎಳು ಪ್ರಮೇಯ ಬರ೦ಗಿಲ್ಲ.
ನನಗಿ೦ತ ಮು೦ಚೆ ಒಬ್ಬರು ಕಾ೦ಮೆ೦ಟ ಬರದಾರಲಾ. ಅವರದ೦ಗ ಇ ರೀತಿ ಚೇನ್ನಾಗಿ ಬರಿಯೊದು ಕಷ್ಟ ಅ೦ತಾ. ಬೇ೦ದ್ರೆ ಹುಟ್ಟಿದ ನಾಡನ್ಯಗ ನೀವು ಹುಟ್ಟಿರಿ( ನಾನು ಮತ್ತ) , ನಮಗೆನ ಇದು ಕಷ್ಟ ಎನ್ ಅಲ್ಲ ಬಿಡ್ರಿ.
ಮತ್ತ ಚೋಲೊದ ಇನೊ೦ದ ಎನಾರ ಬರಿರಲಾ. ಮತ್ತ ಸಿಗತಿನಿ.
ಉ: ಇದು ಬರಿ ಬೆಳಗಲ್ಲೋ...
ಥ್ಯಾಂಕ್ಸ್ ಅನಂತ್ ಅವರೇ,
ಲಹರಿ ಹೋದಂಗ ಹಾಡು, ಮನಸ್ಸು ತಾಕಿದಂಗ ಬರಹ ನೋಡ್ರಿ. ಒಮ್ಮೊಮ್ಮೆ ಹಾಂಬ ಬರೀಬಹ್ದು. ಓದ ಖುಷಿ ಇದ್ದಂಗ ಬರಹ ಅಥವಾ ಬದುಕನ್ನ ನಾವು ನೋಡಿದ್ಹಾಂಗ ಬರೀಬಹ್ದು. ಎಲ್ರಿಗೂ ಅನಿಸೋದ ನಮಗೂ ಅನಿಸ್ತಿರ್ತದ. ಅದನ್ನ ಬರ್‍ಕೊಂತ ಹೋದ್ರಾತು.
ನಿಮ್ಮ ಪ್ರತಿಕ್ರಿಯೆ ಓದಿ ಖುಷಿ ಆತು. ಹಿಂಗ ಬರೀತಿರ್ತೀನಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇದು ಬರಿ ಬೆಳಗಲ್ಲೋ...
Hi pallavi sister.
just go through my blog link.
I have written a small story..
http://www.sampada.net/blog/anantshayan/13/04/2008/8335
Thanks,
ಉ: ಇದು ಬರಿ ಬೆಳಗಲ್ಲೋ...
ಖಂಡಿತ ಓದಿ ಪ್ರತಿಕ್ರಿಯೆ ನೀಡುವೆ ಅನಂತ. ಕನ್ನಡದಲ್ಲಿ ಬರೆಯುವುದನ್ನು ರೂಢಿ ಮಾಡಿಕೊಳ್ಳಿ. ತುಂಬಾ ಸುಲಭ ಅದು. ಒಮ್ಮೆ ಕನ್ನಡದಲ್ಲಿ ಶುರು ಮಾಡಿದ ಮೇಲೆ ಇಂಗ್ಲಿಷ್‌ನಲ್ಲಿ ಬರೆಯಲು ಮನಸ್ಸೇ ಬರುವುದಿಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇದು ಬರಿ ಬೆಳಗಲ್ಲೋ...
ನಿಮ್ಮ ಪ್ರತಿಕ್ರಿಯೆ ಓದಿ ನನಗೆ ಆಶ್ಚರ್ಯ ಆಯ್ತು.
ಏಕೆಂದರೆ, ನನ್ನ ವಯಸ್ಸಿನ ಹುಡುಗಿಯರು ಬೆಳಿಗ್ಗೆ ಬೇಗ ಏಳುವುದಿಲ್ಲ ಎಂದು ಏಕೆ ಭಾವಿಸಿದಿರಿ? ಈ ರೀತಿಯ ಭಾವನೆಗಳನ್ನು ಬರಹ ರೂಪದಲ್ಲಿ ಇಳಿಸಬಲ್ಲರು ಎಂಬುದರ ಬಗ್ಗೆ ನಿಮಗೇಕೆ ಅನುಮಾನ ಮೂಡಿತು? ಹುಡುಗಿಯರೆಂದರೆ ತೆಳು ವಿಷಯಗಳನ್ನಷ್ಟೇ ಬರೆಯುತ್ತಾರೆ ಎಂದು ದಯವಿಟ್ಟು ಭಾವಿಸಬೇಡಿ. ತುಂಬ ಜನ ಹಾಗೆ ಬರೆದಿರಬಹುದು. ಆದರೆ, ಎಲ್ಲರೂ ಅಲ್ಲ!
ತಪ್ಪು ಹುಡುಗಿಯರಲ್ಲೂ ಇದೆ. ಅಡುಗೆ, ಕುಟುಂಬ ಇತ್ಯಾದಿ ವಿಷಯಗಳ ಬಗ್ಗೆ ನಾವು ಈಗಾಗಲೇ ಬೇಸರ ಹುಟ್ಟಿಸುವಷ್ಟು ಬರೆದಿದ್ದೇವೆ. ಅದನ್ನು ಯಾರಾದರೂ ಟೀಕಿಸಿದರೆ ಬೇಸರ ಮಾಡಿಕೊಳ್ಳುತ್ತೇವೆ. ಹೀಗಾಗಿ ಮಹಿಳಾ ಸಾಹಿತ್ಯ ಎಂಬುದನ್ನು ವ್ಯಂಗ್ಯವಾಗಿ, ಸೀಮಿತಗೊಳಿಸಿದ ಬರವಣಿಗೆ ಎಂಬರ್ಥದಲ್ಲಿ ಬಳಸಲಾಗುತ್ತಿದೆ. ನಾವೂ ಅದನ್ನು ತಿದ್ದಿಕೊಳ್ಳಬೇಕಿದೆ.
ಅಂಥದೊಂದು ಪ್ರಯತ್ನವನ್ನು ಮಾಡಲು ಪ್ರಾರಂಭಿಸಿದ್ದೇನೆ. ತಕ್ಷಣ ಗಮನ ಸೆಳೆಯುವ ಬರವಣಿಗೆ ತುಂಬ ಸುಲಭ. ಆದರೆ, ಓದಿದ ನಂತರವೂ ಮನಸ್ಸಿನಲ್ಲಿ ಉಳಿಯುವಂಥ, ಬೆಳೆಯುವಂಥ ಬರವಣಿಗೆ ಕಷ್ಟದ್ದೇ. ನಿಮ್ಮೆಲ್ಲರ ಬೆಂಬಲವಿರಲಿ. ಎಲ್ಲದಕ್ಕಿಂತ ಮುಂಚೆ, ತಕ್ಷಣದ ಪ್ರೋತ್ಸಾಹ ನೆಚ್ಚಿಕೊಳ್ಳದೇ ಅಂಥವನ್ನು ಬರೆಯುವ ಶಕ್ತಿ ನನಗೂ ಬರಲಿ.
ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇದು ಬರಿ ಬೆಳಗಲ್ಲೋ...
ಪಲ್ಲವಿ
ಅಡುಗೆ ಕುಟುಂಬ ಇತ್ಯಾದಿ ವಿಷಯಗಳನ್ನು ಬರೆಯುವ ಮಹಿಳೆಯರು ವೈಚಾರಿಕ ಲೇಖನಗಳನ್ನೂ ಬರೆದಿದ್ದಾರೆ.ಅ ದಕ್ಕೆ ಜನ ಹೊಗಳಿಯೂ ಇದ್ದಾರೆ ಉಗಿದೋ ಇದ್ದಾರೆ, ಜೊತೆಗೆ ಹೊಡೆದೂ ಇದ್ದಾರೆ.
ಮಹಿಳಾ ಸಾಹಿತ್ಯವನ್ನು ಕೇವಲ ಮಹಿಳೆ ಮಾತ್ರ ಬರೆಯಬಲ್ಲಳು. ಅವಳ ಮನದ ಭಾವನೆ, ಬೇಗುದಿ, ಮಮತೆ, ಮಮಕಾರ ಇದೆಲ್ಲವನ್ನೂ ಯಾವ ಗಂಡಸೂ ಅನುಭವಿಸಿದಂತೆ ಬರೆಯಲಾರ.
ಹಾಗಾಗಿ ಮಹಿಳಾ ಸಾಹಿತ್ಯ ಎಂದು ಮೂಗು ಮುರಿಯುವ ಜನರ ನಡುವೆಯೇ ಅದನ್ನು ಅಚ್ಚು ಮೆಚ್ಚಿನಿಂದ ಎದೆಗೊತ್ತಿಕೊಳ್ಳುವ ಓದುಗರೂ ಅಸಂಖ್ಯಾತ .
ಇನ್ನೂ ಗಮನ ಸೆಳೆಯುವ ಲೇಖನಕೂ ಹೆಚ್ಚು ಕಾಲ ಮನಸಲ್ಲಿ ಉಳಿಯುವ ಲೇಖನಕ್ಕೂ ಅಂಥ ದೊಡ್ಡ ವ್ಯತ್ಯಾಸ ವೇನಿಲ್ಲ.
ಒಂದು ಬರವಣಿಗೆ ಗಮನ ಸೆಳೆಯುವಂತಹದಾದರೆ ಅದರ ಬರಹ ಮನಸು ತಟ್ಟಿದರೆ ಅದು ಖಂಡಿತಾ ಮನಸಲ್ಲಿ ಉಳಿಯುತ್ತದೆ ಎಂಬುದು ನನ್ನ ಭಾವನೆ.
http://thereda-mana.blogspot.com/
ರೂಪ
ಉ: ಇದು ಬರಿ ಬೆಳಗಲ್ಲೋ...
ಖಂಡಿತ ರೂಪಾ, ಮಹಿಳೆ ಮಾತ್ರ ತನ್ನ ಅನುಭವವನ್ನು ಸ್ಪಷ್ಟವಾಗಿ ಬರೆಯಲು ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ. ಹೊಸ ವಿಷಯಗಳ ಬಗ್ಗೆಯೂ ಆಕೆ ಗಮನ ಹರಿಸಲಿ ಎಂಬುದು ನನ್ನ ಆಸೆ.
ಇಲ್ಲದಿದ್ದರೆ, ರಾಜಕೀಯ, ಕ್ರೀಡೆ, ವಿಜ್ಞಾನ, ಸಾಹಿತ್ಯದ ವಿವಿಧ ಮಜಲುಗಳು, ಮನರಂಜನೆ, ಪತ್ರಿಕೋದ್ಯಮದಂತಹ ಕ್ಷೇತ್ರಗಳಲ್ಲಿ ಆಕೆ ಬೆಳೆಯುವುದು ಕಷ್ಟವಾಗುತ್ತಿತ್ತು.
ಗಮನ ಸೆಳೆಯುವ ಲೇಖನ ಮತ್ತು ಮನಸ್ಸಲ್ಲಿ ಉಳಿಯುವ ಲೇಖನದ ಬಗ್ಗೆ ನನ್ನ ನಂಬಿಕೆ ಹಾಗೇ ಇದೆ. World has lot of unread garbage. Do not add to it ಎಂದು ತರುಣ್ ತೇಜ್‌ಪಾಲ್ (ತೆಹೆಲ್ಕಾ ಸ್ಥಾಪಕ) ತನ್ನ Alchemy of Desire ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಈ ಮಾತು ಸತ್ಯ ಅನಿಸುತ್ತದೆ. ಗಮನ ಸೆಳೆಯುವುದು ಸಾಂದರ್ಭಿಕ. ಅಂತಹ ಬರಹಗಳಿಗೆ ಪುನರಾವರ್ತನೆ ಮೌಲ್ಯ ಇರುವುದಿಲ್ಲ. ಪದೆ ಪದೆ ಸೆಳೆಯುವುದು ಮಾತ್ರ ಸತ್ವ ಉಳ್ಳದ್ದು. ಅದಕ್ಕೆ ಚಿರಂತನ ಮೌಲ್ಯವಿರುತ್ತದೆ. ಬೇಕಾದರೆ ಪರೀಕ್ಷಿಸಿ ನೋಡಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇದು ಬರಿ ಬೆಳಗಲ್ಲೋ...
ಪಲ್ಲವಿಯವರೆ,
ನೀವು "ಹುಡುಗಿಯರೆಂದರೆ ತೆಳು ವಿಷಯಗಳನ್ನಷ್ಟೇ ಬರೆಯುತ್ತಾರೆ ಎಂದು ದಯವಿಟ್ಟು ಭಾವಿಸಬೇಡಿ. ತುಂಬ ಜನ ಹಾಗೆ ಬರೆದಿರಬಹುದು. ಆದರೆ, ಎಲ್ಲರೂ ಅಲ್ಲ! " ಎಂದು ಹೇಳಿದ್ದೀರಿ. ಮತ್ತೆ, ಮುಂದಿನ ಸಾಲಿನಲ್ಲಿ "ಹೀಗಾಗಿ ಮಹಿಳಾ ಸಾಹಿತ್ಯ ಎಂಬುದನ್ನು ವ್ಯಂಗ್ಯವಾಗಿ, ಸೀಮಿತಗೊಳಿಸಿದ ಬರವಣಿಗೆ ಎಂಬರ್ಥದಲ್ಲಿ ಬಳಸಲಾಗುತ್ತಿದೆ. ನಾವೂ ಅದನ್ನು ತಿದ್ದಿಕೊಳ್ಳಬೇಕಿದೆ. " ಎನ್ನುತ್ತೀರಿ.
ಹಾಗಾದರೆ, ಅಡುಗೆ, ಕುಟುಂಬ ಇವುಗಳು ನಿಮ್ಮ ಪ್ರಕಾರ ತೆಳು ವಿಷಯಗಳೆ?
ನಾನು ಅಡುಗೆ ಬಗ್ಗೆ ಬರೆಯಬಲ್ಲೆ. ಹಾಗೇನೆ ಮರಗೆಲಸ ಮಾಡಿ ಕಪಾಟು ತಯಾರಿಸುವ ಬಗ್ಗೆ ಬರೆಯಬಲ್ಲೆ. ಸಿನಿಮಾ ಪ್ರಪಂಚದ ಜೊತೆಗೆ ರಾಜಕೀಯದ ಬಗ್ಗೆಯೂ ಗಂಟೆಗಟ್ಟಲೆ ಹರಟೆ ಕೊಚ್ಚಬಲ್ಲೆ(ಕೇಳುವವರಿದ್ದರೆ!). ಏಕೆಂದರೆ, ಇವೆಲ್ಲ ನನ್ನ ಹವ್ಯಾಸಗಳು. ಇವುಗಳಲ್ಲಿ, ನಿಮ್ಮ ಪ್ರಕಾರ ಮರಗೆಲಸ ಮತ್ತು ರಾಜಕೀಯ ವಿಷಯಗಳು ತೂಕದ್ದೋ? ಏಕೆಂದರೆ ಸಾಮಾನ್ಯವಾಗಿ ಪುರುಷರಿಗೆ ಮಾತ್ರ ಇವುಗಳಲ್ಲಿ ಆಸಕ್ತಿಯಿರುತ್ತದೆಯೆಂಬ ಅಭಿಪ್ರಾಯವಿದೆ.
ನನಗೇನೋ ನೀವು, "ಸಮಾಜ ಮಹಿಳಾ ಲೇಖಕಿಯರನ್ನು ನೋಡುವ ದೃಷ್ಟಿಕೋನ ಬದಲಾಯಿಸುವಂತೆ ನಾನು ಬರೆಯುತ್ತೇನೆ" ಎಂದು ಬರೆಯಲು ಹೋಗುತ್ತಿರುವುದು ತಪ್ಪು ಎನ್ನಿಸುತ್ತಿದೆ. ಸಮಾಜದ ದೃಷ್ಟಿಕೋನದಲ್ಲಿ ಡೊಂಕಿಲ್ಲವೆಂಬುದಕ್ಕೆ ಏನು ಸಾಕ್ಷಿ?
ಬರೆಯಿರಿ, ಆದರೆ, ನಿಮ್ಮ ಆತ್ಮ ಸಂತೋಷಕ್ಕಾಗಿ ಮಾತ್ರ.
ಉ: ಇದು ಬರಿ ಬೆಳಗಲ್ಲೋ...
ಕಲ್ಪನಾ, ನಿಮ್ಮ ವಾದವನ್ನು ನಾನು ಒಪ್ಪುವುದಿಲ್ಲ. ಕುಟುಂಬ, ಅಡುಗೆ ವಿಷಯಗಳು ತೆಳು ವಿಷಯಗಳೇ. ಏಕೆಂದರೆ, ಮಹಿಳೆ ಅದರ ಬಗ್ಗೆ ತುಂಬ ಬರೆದಿದ್ದಾಳೆ. ಅವಳಿಗೆ ಆ ವಿಷಯದ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂಬ ಕಾರಣಕ್ಕೆ ಪ್ರಾರಂಭದಲ್ಲಿ ಬರೆದಿದ್ದನ್ನು ಒಪ್ಪಬಹುದು. ಆದರೆ, ಅದನ್ನೇ ವಿಶಿಷ್ಟ ಅಭಿವ್ಯಕ್ತಿ ಎಂದು ಈಗಲೂ ಭಾವಿಸುತ್ತಿರುವುದರ ಬಗ್ಗೆ ನನ್ನ ತಕರಾರಿದೆ. ಹೀಗಾಗಿ, ಮಹಿಳೆಯರ ನಿಜವಾದ ಸಾಮರ್ಥ್ಯ ಹೊರಬರುತ್ತಿಲ್ಲ ಎಂದು ಅಂದುಕೊಂಡಿದ್ದೇನೆ. ಒಂದಿಷ್ಟು ಕಾಲ ಇಂತಹ ವಿಷಯಗಳನ್ನು ಪಕ್ಕಕ್ಕಿಟ್ಟು ಇತರ ವಿಷಯಗಳ ಬಗ್ಗೆಯೂ ಮಹಿಳೆ ಬರೆಯಲಿ ಎಂಬುದು ನನ್ನ ಆಸೆ.
ಉದಾಹರಣೆಗೆ ಹೇಳುವುದಾದರೆ, ಅಡುಗೆ-ಕುಟುಂಬದಲ್ಲೇ ಮಹಿಳೆ ಸೀಮಿತವಾಗಿದ್ದರೆ, ವಿಜ್ಞಾನ, ತಂತ್ರಜ್ಞಾನ, ನಟನೆ, ಸಂಗೀತ ಮುಂತಾದ ಪ್ರಕಾರಗಳಲ್ಲಿ ಮಹಿಳೆ ಸಾಧನೆ ಮಾಡುವುದು ಹೇಗೆ ಸಾಧ್ಯವಾಗುತ್ತದೆ? ಅದಕ್ಕೆ ಹೆಚ್ಚಿನ ಗಮನ ಕೊಡಲು ಆದೀತೆ? ಹೊಸ ವಿಷಯಗಳ ಬಗ್ಗೆ ಆಸಕ್ತಿ ಹೊಂದುವುದು ಹೇಗೆ? ವಿಷಯಗಳ ತೂಕದ ಬಗ್ಗೆ ನಾನು ಮಾತನಾಡುತ್ತಿಲ್ಲ. ಪ್ರತಿಯೊಂದು ವಿಷಯಕ್ಕೂ ಅದರದೇ ಆದ ಮಹತ್ವವಿದೆ. ಆದರೆ, ಆದ್ಯತೆ ಕುಟುಂಬ-ಅಡುಗೆ ವಿಷಯಗಳಿಗೆ ಸೀಮಿತವಾಗಬಾರದು ಎಂಬುದು ನನ್ನ ಬರಹದ ಧ್ವನಿ. ಅಷ್ಟೇ.
ಮಹಿಳಾ ಲೇಖಕಿಯರು ಎಂದು ಬಹಳಷ್ಟು ಸಮಯದಲ್ಲಿ ಯಾವ ಅರ್ಥದಿಂದ ಹೇಳಲಾಗುತ್ತಿದೆಯೋ, ಆ ಭಾವನೆಯನ್ನು ಬದಲಾಯಿಸಲು ಯತ್ನಿಸುವುದು ಖಂಡಿತ ತಪ್ಪಲ್ಲ. ಸಮಾಜದ ದೃಷ್ಟಿಕೋನದಲ್ಲಿ ಖಂಡಿತ ಡೊಂಕಿದೆ. ಅದನ್ನು ಬದಲಾಯಿಸಲಾದರೂ ನಾವು ಸೀಮೋಲ್ಲಂಘನೆ ಮಾಡಬೇಕಾಗುತ್ತದೆ. ಆಯಾ ಕಾಲದ, ಆಯಾ ಸಂದರ್ಭದ ಅನಿವಾರ್ಯತೆ ಅದು.
ನೀವು ವಿವಿಧ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವುದು ಓದಿ ಸಂತೋಷವಾಯಿತು. ಹಾಗಿದ್ದರಿಂದಲೇ ನೀವು ಅಡುಗೆ-ಕುಟುಂಬದ ಬಗ್ಗೆ ಕೀಳರಿಮೆ ಹೊಂದಿಲ್ಲ. ಆದರೆ, ಅವೇನೂ ಇಲ್ಲದ, ಅಂಥ ವಿಷಯಗಳನ್ನು ಕಲಿಯಲಾಗದ ಮಹಿಳೆಯರ ಮನಃಸ್ಥಿತಿಯ ಬಗ್ಗೆಯೂ ಯೋಚಿಸಿ. ಅವಳಿಗೆ ಅನಿಸಿದ್ದನ್ನು ಚೆನ್ನಾಗಿ ಅಭಿವ್ಯಕ್ತಿಗೊಳಿಸುವ ಅವಕಾಶವನ್ನೂ ಒದಗಿಸುವುದು ನಮ್ಮ ಕರ್ತವ್ಯ. ಅಂತಹ ವಾತಾವರಣ ರೂಪಿಸುವ ಅವಶ್ಯಕತೆಯೂ ಇದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇದು ಬರಿ ಬೆಳಗಲ್ಲೋ...
ಪಲ್ಲವಿಯವರೇ,
ತುಂಬಾ ತಡವಾಗಿ ಪ್ರತಿಕ್ರಿಯಿಸುತ್ತಿರುವೆ. ಕ್ಷಮೆ ಇರಲಿ.
ಕಲ್ಪನಾ ಮೇಡಂ ಹೇಳಿದ ಹಾಗೆ ಮಹಿಳಾ ಲೇಖಕಿಯರು ಸಮಾನತೆ, ಸಾಧನೆ ಪದಗಳನ್ನು ತಪ್ಪಾಗಿ ಅರ್ಥಿಸಿಕೊಂಡು ಸೆಕೆಂಡ್ ಹ್ಯಾಂಡ್ ‘ಪುರುಷ’ರಾಗುವುದಕ್ಕೆ ಪ್ರಯತ್ನಿಸಬಾರದು. ಮಹಿಳೆಯರು ಅಡುಗೆ ಮೆನೆ, ಸೀರಿಯಲ್ಲುಗಳಲ್ಲೇ ಮುಳುಗಿ ಅದರಲ್ಲೇ ತಮ್ಮ ಆಸಕ್ತಿಯನ್ನು ಸೀಮಿತಗೊಳಿಸಿಕೊಂಡು ರಾಜಕೀಯದ ಬಗ್ಗೆ ಬರೆಯಲು ಮುಂದಾದರೆ ಅವರು ಕೇವಲ ಪುರುಷ ಆಸಕ್ತಿಯ ಅನುಕರಣೆ ಮಾಡಿದ ಹಾಗಾಗುತ್ತದೆ. ಅವರು ಬರೆಯುತ್ತಾರೆ ಎನ್ನುವುದಕ್ಕಾಗಿಯೇ ತಾನೂ ಬರೆಯಬೇಕು ಎಂದು ಹೊರಡುವುದು ಅನುಕರಣೆಯಾಗುತ್ತದೆ. ಆ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರೆ ಸಹಜವಾಗಿ ಹೆಣ್ಣು ಮಕ್ಕಳು ಬರೆಯುವ ಸಾಹಿತ್ಯದಲ್ಲಿ ಅಡುಗೆ, ಕುಟುಂಬ, ಭಾವುಕತೆಗಳ ಜೊತೆಗೆ ಬೇರೆಲ್ಲಾ ಸಂಗತಿಗಳೂ ಬಂದು ಹೋಗುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ ಈಗ ಪುರುಷರ ವ್ಯಾಖ್ಯೆಗಳು, ದೃಷ್ಟಿಕೋನಗಳು ಮೆರೆಯುತ್ತಿರುವಾಗ ಆ ಕ್ಷೇತ್ರದಲ್ಲಿ ಹೆಣ್ಣಿನ ಆಸಕ್ತಿ ವಿನಿಯೋಗವಾದರೆ ಹೊಸ ಆಯಾಮಗಳು ದೊರೆಯುತ್ತವೆ. ಇದು ನನ್ನ ಅನಿಸಿಕೆ.
ಇನ್ನು ನೀವು ಬೆಳಗಿನ ಸೊಬಗನ್ನು ಅನುಭವಿಸಿ ವರ್ಣಿಸಿಟ್ಟಿದ್ದೀರಿ... ನನ್ನಂಥ ಅಸಂಖ್ಯಾತ ಇಂಜಿನಿಯರಿಂಗ್ ಹುಡುಗರ ಬೆಳಗಿನ ಸುಮಧುರವಾದ ಗಾಢ ನಿದ್ದೆಯ ಕಥಾನಕವನ್ನು ಮುಂದೆಂದಾರೊಮ್ಮೆ ಬರೆಯುವೆ. ಇದು ಬರೀ ಸೋಮಾರಿತನವಲ್ಲೋ ಅಣ್ಣ, ಅಂತ ಬೆಳಗಿನ ಜಾವದ ಸಿಹಿ ನಿದ್ದೆಯ ಬಗ್ಗೆ ವರ್ಣಿಸುವೆ... ಬೆಳಿಗ್ಗೆ ಬೇಗನೆ ಎದ್ದು ಕೂರುವ ‘ಕೆಟ್ಟ’ ಅಭ್ಯಾಸವಿರುವವರು ಹೊಟ್ಟೆ ಕಿಚ್ಚು ಪಟ್ಟುಕೊಳ್ಳುವ ಹಾಗೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಇದು ಬರಿ ಬೆಳಗಲ್ಲೋ...
ಸುಪ್ರೀತ್ ಅವರೇ, ನನ್ನ ಪ್ರತಿಕ್ರಿಯೆಯ ನಿಜಾರ್ಥವನ್ನು ನೀವೆಲ್ಲ ಸರಿಯಾಗಿ ಗ್ರಹಿಸಿಲ್ಲ ಎಂಬ ಅಳುಕು ಕಾಡುತ್ತಿದೆ. ನಾವು ಸೆಕೆಂಡ್ ಹ್ಯಾಂಡ್ ಪುರುಷರಾಗುವುದಕ್ಕೆ ನನ್ನ ಕಟು ವಿರೋಧವಿದೆ. ಅಥವಾ ಇನ್ನೊಬ್ಬರು ಬರೆಯುತ್ತಾರೆ, ಅಥವಾ ಇನ್ನೇನೋ ಮಾಡುತ್ತಾರೆ ಎಂಬ ಒಂದೇ ಕಾರಣಕ್ಕೆ ಅದನ್ನು ನಾವೂ ಮಾಡಬೇಕು ಎಂಬುದೂ ನನ್ನ ಉದ್ದೇಶವಲ್ಲ.
ಇದುವರೆಗೆ ನಮ್ಮನ್ನು ಗುರುತಿಸಿರುವ ಕ್ಷೇತ್ರದಲ್ಲಿ ತೋರುವ ಆಸಕ್ತಿಗಿಂತ ಹೆಚ್ಚಿನದನ್ನು ಇತರ ವಿಷಯಗಳ ಬಗ್ಗೆಯೂ ತೋರಿಸಬೇಕಿದೆ ಎಂಬುದಷ್ಟೇ ನನ್ನ ಉದ್ದೇಶ. ಇದನ್ನು ಇನ್ನಷ್ಟು ವಿಸ್ತರಿಸಿ ವಾದಿಸುವುದು ಬೇಡ ಅನಿಸುತ್ತದೆ. Let us agree to disagree.
ಉಳಿದಂತೆ, ನಿಮ್ಮ ಅಪೂರ್ವ ಬೆಳಗು (ಸೂರ್ಯ ಪಶ್ಚಿಮದತ್ತ ಹೊರಳುವಾಗ ಕಂಡ ಬೆಳಕಿನ ಸೊಬಗು) ಓದಲು ನಾನು ಕಾತರಳಾಗಿದ್ದೇನೆ. ಬರೆಯಿರಿ. ಓದುತ್ತ, ಸಂಜೆ ಚಹ ಕುಡಿಯುವೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇದು ಬರಿ ಬೆಳಗಲ್ಲೋ...
ಪಲ್ಲವಿ..ಬೆಳಗ್ಗೆ ಎದ್ದಾಗ ಛಾಯ ಹಾಡಿರುವ "ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ" ಹಾಡು ಕೇಳಿ....ತುಂಬ ಹಿತವಾಗಿರುತ್ತೆ...ನಾನಂತು ಈ ಹಾಡನ್ನ ನನ್ನ ಅಲರಮ್ ಮಾಡ್ಕೊಂಡಿದ್ದೀನಿ...