ಹುಟ್ಟಿದೂರಿನಲ್ಲೇ ನೆಲೆಸಿ, ಪ್ರಪಂಚವೆಲ್ಲವನ್ನು ನೋಡುವ ಮತ್ತು ಪ್ರಪಂಚಕ್ಕೆಲ್ಲಾ ನನ್ನೂರನ್ನು ತೋರಿಸುವ ಆಸೆಯಿಂದ ಹುಟ್ಟಿದುದೇ ಈ ಬ್ಲಾಗ್. ಸ್ವಂದಿಸುವ ಮನಸ್ಸಿಗೆ ಪ್ರತಿಸ್ಪಂದನವಿರುತ್ತದೆ.
ನಮಸ್ಕಾರ.
ಚಾರ್ವಾಕ ದರ್ಶನ-ಒಂದು ಚಿಂತನೆ
ನಾನಾರೆಂಬುದಕ್ಕೆ ಉತ್ತರವನ್ನು ಹುಡುಕಲೆತ್ನಿಸಿದವರು ಅನೇಕ. ಭೌತವಾದದ ಹಿನ್ನಲೆಯಲ್ಲಿ ಚಾರ್ವಾಕರ ದರ್ಶನದ ಸ್ವರೂಪವನ್ನು ನೋಡುವುದಾದರೆ, ದೇವರು, ಆತ್ಮದ ಅಸ್ತಿತ್ವ ನಿರಾಕರಿಸಿದ ಇವರು ಭೂಮಿ, ಜಲ, ಅಗ್ನಿ,ವಾಯು ಎಂಬ ನಾಲ್ಕು ಭೌತಿಕ ಅಂಶಗಳೇ ಜಗತ್ತಿನ ಮೂಲದ್ರವ್ಯವೆಂದರು. ಇವುಗಳ ಸಂಯೋಗದಿಂದಲೇ ಜ್ಞಾನವೆಂಬ ಚೈತನ್ಯ ಶಕ್ತಿ, ಮಿಕ್ಕ ಆಧ್ಯಾತ್ಮಿಕ ವಿದ್ಯಮಾನಗಳು ಮೊದಲಾಗುತ್ತವೆ. ಸಚೇತನವಾದ ಆತ್ಮವೆಂಬುದು, ನಿರ್ದಿಷ್ಟ ಸ್ಥಿತಿ, ಸನ್ನಿವೇಶದಲ್ಲಿ ಅಚೇತನ ಅಂಶಗಳ ತಾತ್ಕಾಲಿಕ ಸಂಯೋಜನೆಯಾಗಿ ಮೂಡಿಬರುತ್ತದೆ ಎಂದರು. ಈ ಪ್ರಮೇಯವನ್ನು ಪುಷ್ಟೀಕರಿಸುತ್ತಾ, ಚಾರ್ವಾಕಪಂಥದ ಭೀಷಣನೆಂಬುವನು ಹೀಗೆನ್ನುತ್ತಾನೆ...ಒಂದಿಷ್ಟು ಅಕ್ಕಿಯನ್ನೂ, ವಿಶೇಷವಾಗಿ ತಯಾರಿಸಲಾದ ಬೆಲ್ಲವನ್ನೂ ತಿನ್ನುವುದರಿಂದ ವ್ಯಕ್ತಿ ಮದೋನ್ಮತ್ತನಾಗಲಾರ. ಆದರೆ, ಅಕ್ಕಿ ಮತ್ತು ಬೆಲ್ಲದ ಮಿಶ್ರಣವನ್ನು ಬೆರೆಸಿ ತಯಾರಿಸಲಾದ ಮದ್ಯವನ್ನು ಕುಡಿದರೆ, ವ್ಯಕ್ತಿ ಖಂಡಿತವಾಗಿ ಮದೋನ್ಮತ್ತ ಆಗುತ್ತಾನೆ. ಹೀಗೆಯೇ ಚೇತನವೆಂಬುದು ಭೌತಿಕ ಅಂಶಗಳ ಸಂಯೋಜನೆಯ ಒಂದು ನಿರ್ದಿಷ್ಟ ಪ್ರಕ್ರಿಯೆಯ ಫಲಿತಾಂಶವಲ್ಲದೆ ಬೇರಲ್ಲವೆಂಬುದು ಇವರ ದೃಷ್ಟಿ.
ಆರೋಗ್ಯದಿಂದಿದ್ದು, ಐಶ್ವರ್ಯವಂತರಾಗಿ ಬಾಳುವುದೇ ಸ್ವರ್ಗಾನುಭವ. ರೋಗ, ದಾರಿದ್ರ್ಯ ಮೊದಲಾದ ಉಪದ್ರವಗಳೇ ನರಕ. ವ್ರತ, ಉಪವಾಸಗಳೇ ಮೊದಲಾದ ನಿಯಮಗಳನ್ನು ಪಾಲಿಸುವವರು ಮೂರ್ಖರು. ಕೃಷಿ, ವಾಣಿಜ್ಯ, ದಂಡನೀತ್ಯಾದಿಗಳ ಶಿಕ್ಷೆಯಿಂದ ಅರ್ಥಕಾಮಗಳನ್ನು ಸಂಪಾದಿಸಿ ತಾನು ಸುಖವಾಗಿದ್ದು, ಇತರರನ್ನೂ ಸುಖವಾಗಿರಿಸುವುದೇ ಮನುಷ್ಯಜನ್ಮದ ಮುಖ್ಯಪ್ರಯೋಜನ. ಈ ರೀತಿಯಾದ ವಿಚಾರವನ್ನು ಚಾರ್ವಾಕರು ನಮ್ಮಮುಂದಿಡುತ್ತಾರೆ.
ಮಹಾಭಾರತದ ಕಥೆಯೊಂದು ಇಂತಿದೆ....
ಪಟ್ಟಾಭಿಷಿಕ್ತನಾಗಿ ಧರ್ಮರಾಯ ಒಮ್ಮೆ ಸಭೆಯಲ್ಲಿರುವಾಗ ದುರ್ಯೋಧನನ ಮಿತ್ರ ಚಾರ್ವಾಕನೆಂಬ ರಾಕ್ಷಸನು ಧರ್ಮರಾಜನನ್ನು ತೆಗಳುತ್ತಾ,....ಯುದ್ಧದಲ್ಲಿ ಸತ್ತವರಿಗೆ ಸ್ವರ್ಗ ಬರುವುದೆಂದು ಪ್ರೋತ್ಸಾಹಮಾಡಿ ಪ್ರಪಂಚವನ್ನೇ ವಿನಾಶಮಾಡಿದೆ...ಎಂದು ಬಹುವಿಧವಾಗಿ ದೂಷಣೆಮಾಡಿದನು. ಅನಂತರ ಅಲ್ಲಿದ್ದ ಬ್ರಾಹ್ಮಣರು ಶಾಪದಿಂದ ಈ ರಾಕ್ಷಸನನ್ನು ಕೊಂದುಬಿಟ್ಟರು. ಈ ಕಥೆ ಏನೆಲ್ಲಾ ನೀತಿಯನ್ನು ಧ್ವನಿಸಿದರೂ ಮುಖ್ಯವಾಗಿ ತಾವು ಸುಖವಾಗಿದ್ದು, ಪ್ರಪಂಚವನ್ನೂ ಸುಖವಾಗಿಟ್ಟಿರಬೇಕೆಂಬ ಪ್ರಪಂಚಾನುಗ್ರಹ ದೃಷ್ಟಿಯನ್ನು ನಾವಿಲ್ಲಿ ಕಾಣಬಹುದು.
ಇಂತಹ ಚಾರ್ವಾಕಮತದ ದರ್ಶನ ಗ್ರಂಥಗಳನ್ನು ಅದರ ವಿರೋಧಿಗಳು ಸುಟ್ಟುಹಾಕಿದ ಪರಿಣಾಮ ಚಾರ್ವಾಕ ಸಾಹಿತ್ಯ ಇಂದು ನಮಗೆ ಅಲಭ್ಯವಾಗಿದೆ. ಪ್ರಮುಖ ಮಾರ್ಕ್ಸ್ವಾದಿ ವಿದ್ವಾಂಸ ದೇವೀಪ್ರಸಾದ್ ಚಟ್ಟೋಪಾಧ್ಯಾಯರು ಈ ಬಗೆಗೆ ಹೀಗೆ ನುಡಿದಿದ್ದಾರೆ.....ನಷ್ಟವಾಗಿ ಬಿಟ್ಟಿರುವ ಇಂಥ ಗ್ರಂಥಗಳ ಬಗೆಗಿನ ಉಲ್ಲೇಖಗಳು ಮಾತ್ರವಲ್ಲದೆ, ನಮಗೆ ಇಂದು ಮೂರ್ತರೂಪದಲ್ಲಿ ಲಭ್ಯವಾಗಿರುವುದೆಂದರೆ ಲೋಕಾಯತ ಸಿದ್ಧಾಂತವನ್ನು ಅವಹೇಳನಮಾಡಬಯಸಿದ ಹಾಗೂ ಖಂಡಿಸಬಯಸಿದ ವ್ಯಕ್ತಿಗಳ ಬರಹಗಳಲ್ಲಿ ಉಳಿದುಬಂದಿರುವ ಲೋಕಾಯತ ದೃಷ್ಟಿಕೋನದ ಬಗೆಗಿನ ಅಥವಾ ಲೋಕಾಯತರೆಂದು ಕರೆಯಲಾಗಿರುವ ಆ ಸಿದ್ಧಾಂತದ ಅನುಯಾಯಿಗಳ ಬಗೆಗಿನ ಕೆಲವೊಂದು ಬಿಡಿಬಿಡಿಯಾದ ಉಲ್ಲೇಖಗಳು. ತನ್ನ ವಿರೋಧಿಗಳ ಬರಹಗಳಿಂದಲೇ ತಿಳಿದುಬರುವ ದೌರ್ಭಾಗ್ಯ ಈ ತತ್ವಶಾಸ್ತ್ರದ್ದಾಗಿತ್ತು.....
(D.Chattopadhyaya : Lokayata - A study in Ancient Indian Materialism. Peoples Publishing House, NewDelhi,1959, P.71). ಹಾಗಾಗಿ ಚಾರ್ವಾಕದರ್ಶನದ ಸಂಪೂರ್ಣ ದೃಷ್ಟಿಯ ಅಲಭ್ಯತೆಯಿಂದ ನಮಗೆ ಹಲವು ವಿಷಯಗಳು ಸ್ಪಷ್ಟವಾಗದೇ ಇರಬಹುದು.
ಸ್ವಭಾವವಾದಿಗಳಾದ ಇವರು ಕಾರ್ಯಕಾರಣ ಸಂಬಂಧವನ್ನು ಒಪ್ಪುವುದಿಲ್ಲ. (ಬೀಜ ಮೊಳಕೆಯೊಡೆಯಲು ಯಾವುದೇ ನಿಮಿತ್ತಕಾರಣವು ಬೇಕಿಲ್ಲವೆಂಬುದು ಸ್ವಭಾವವಾದಕ್ಕೊಂದು ಉದಾಹರಣೆ). ಹಾಗಾಗಿ ಇವರ ಪ್ರಕಾರ ಸುಖದುಃಖಾದಿಗಳು ವಸ್ತುಸ್ವಭಾವದಿಂದ ಉಂಟಾಗುವುದೇ ವಿನಾ ಪುರುಷಪ್ರಯತ್ನದಿಂದಲ್ಲ. ಹೀಗಿರುವಾಗ ಪರರಲ್ಲಿ ದ್ವೇಷವೆಂಬುದೇ ಇರುವುದಿಲ್ಲ. ಪರರಲ್ಲಿ ರಾಗದ್ವೇಷಗಳನ್ನು ಅಡಗಿಸುವ ಈ ಚಾರ್ವಾಕ ದರ್ಶನ, ಅನೇಕ ದೂಷಣೆಗಳ ಹೊರತಾಗಿಯೂ ಆಪ್ತವಾಗುತ್ತದೆ.
ಚಾರ್ವಾಕ ದರ್ಶನದ ಹಿನ್ನಡೆ ಅದರ ಅಭಾವವಾದದಲ್ಲಿದೆ. ಇಂದ್ರಿಯವ್ಯಾಪ್ತಿಗೆ ಬರದ ಎಲ್ಲವನ್ನು ಇವರು ನಿರಾಕರಿಸಿದರು. ನಾಸ್ತಿಕತೆ ಎಂದರೆ ನಿರಾಕರಣೆ. ಇದು ಆತಂಕಕಾರಿಯಾದುದುದೆನಿಸುತ್ತದೆ. ಮಹಾಭಾರತದ ಒಂದು ಶ್ಲೋಕದ ತಾತ್ಪರ್ಯ ಹೀಗೆ ಹೇಳುತ್ತದೆ...ಇಲ್ಲವೆನ್ನುವುದು ನಿಜವಾಗಿಯೂ ಇಲ್ಲವಾದಲ್ಲಿ ಯಾವುದೇ ಆತಂಕವಿಲ್ಲ. ಆದರೆ ಇಲ್ಲವೆನ್ನುವುದು ಒಂದುವೇಳೆ ಅಸ್ತಿತ್ವದಲ್ಲಿದ್ದರೆ ಅದಕ್ಕಿಂತ ಆತಂಕಕಾರಿಯಾದುದು ಬೇರೊಂದಿಲ್ಲ. ಹಾಗಾಗಿ ಈ ಅಭಾವವಾದದಿಂದ ಚಾರ್ವಾಕ ಸಿದ್ಧಾಂತವು ಹಿನ್ನಡೆಯನ್ನನುಭವಿಸುತ್ತದೆ.

- prasad.nkn ರವರ ಬ್ಲಾಗ್
- Login or register to post comments
- 341 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಚಾರ್ವಾಕ ದರ್ಶನ-ಒಂದು ಚಿಂತನೆ
ಚನ್ನಾಗಿದೆ..
ಚಾರ್ವಾಕ ಪದ ಅರ್ತಯೇನು?
ನೀವೇ ಇದನ್ನು ಬರೆದಿರಾ.. ಈ ಕುರಿತಾದ ಕನ್ನಡದ ಹೊತ್ತಗೆಗಳನ್ನು ಅರುಹಿ.
ಅನಿವಾಸಿಗಳೇ.. ತುಸು ಗಮನಿಸಿರಿ...
ನಲ್ಮೆಯ ನನ್ನಿ(ಧನ್ಯವಾದ)
ಉ: ಚಾರ್ವಾಕ ದರ್ಶನ-ಒಂದು ಚಿಂತನೆ
ಮಹೇಶರೆ ಗಮನಿಸಿದೆ.
ಇನ್ನೊಂದು ಎಳೆಯಲ್ಲಿ ಈಗಾಗಲೇ ಕನ್ನಡದಲ್ಲಿ ಗೌರೀಶ ಕಾಯ್ಕಿಣಿಯರ 'ಚಾರ್ವಾಕ ದರ್ಶನ' ದ ಬಗ್ಗೆ ಮಿಶ್ರಿಕೋಟಿಯರು ಹೇಳಿದ್ದಾರೆ.
ಒಂದೆರಡು ಅನಿಸಿಕೆ-
ಚಟ್ಟೋಪಾಧ್ಯಾಯರ ಪುಸ್ತಕ ನನ್ನ ಬಳಿ ಇದೆ. ಒಮ್ಮೆ ತುಂಬ ಹಿಂದೆ ಓದಿ ಈಗ ರೆಫೆರ್ ಮಾಡಲು ಬಳಸುತ್ತೀನಿ. ಅದರಲ್ಲಿ ಗಣಪತಿಯ ಬಗ್ಗೆ ಇರುವ ಒಂದು ಭಾಗ ತುಂಬಾ ಚೆನ್ನಾಗಿದೆ. ಅದರಲ್ಲಿ ನಮ್ಮ ಪುರಾಣಗಳಲ್ಲಿರುವ ಪ್ರತಿಮೆಗಳು ಹೇಗೆ ಹಿಂದಿನ ಬುಡಕಟ್ಟುಗಳ 'totem'ಗಳ ಮುಂದುವರಿಕೆ ಎಂದು ತೋರಿದ್ದಾರೆ. ಆನೆ ಟೋಟೆಮಿನ, ಇಲಿಯ ಟೋಟೆಮಿನ ಬುಡಕಟ್ಟು ಜನರ ನಡುವಿನ ಜಗಳದ ಬಗ್ಗೆ ತುಂಬಾ ಕುತೂಹಲಕಾರಿ ಮಾತಿದೆ. (ಮೂಷಕವಾಹನ ಗಣೇಶ!) ಇದು ನೇರವಾಗಿ ಚಾರ್ವಾಕ ದರ್ಶನದ ಬಗ್ಗೆ ಅಲ್ಲವಾದರೂ, ಅಂದಿನ ತಾತ್ವಿಕ ಜಗಳಗಳ ಬಗ್ಗೆ, ಚಾರ್ವಾಕ ದರ್ಶನದ ಹಿಂದಿನ ಬೇರುಗಳ ಬಗ್ಗೆ ತುಂಬಾ ಮಾಹಿತಿ ನೀಡುತ್ತದೆ. ನಮ್ಮ ತತ್ವಶಾಸ್ತ್ರಗಳ ಹಿಂದಿನ ರಾಜಕೀಯವೂ ಅದರಲ್ಲಿ ಇರುವ ಮತ್ತೊಂದು ಎಳೆ.
ಮೇಲೆ ಹೇಳಿದ ಮಹಾಭಾರತದ ಉಲ್ಲೇಖದ ಮುಖ್ಯ ಭಾಗ ಹೇಳಬೇಕು. ಯುದ್ಧ ಗೆದ್ದು ಪಾಂಡವರು ರಾಜರಾಗುವ ವೇಳೆ. ಎಲ್ಲರೂ ಅವರನ್ನು ಹರಿಸಿದಾಗ ಚಾರ್ವಾಕ "ಅಣ್ಣ ತಮ್ಮಂದಿರನ್ನು ಕೊಂದ ನೀವು ಹಾರೈಕೆಗೆ ಅನರ್ಹರು" ಅಂದನಂತೆ. ಆಗ ಕೃಷ್ಣನ ಆದೇಶದ ಮೇಲೆ ಅವನನ್ನು ಸುಟ್ಟು ಕೊಂದರಂತೆ. ಸುಟ್ಟಿದ್ದು ಯಾಕೆಂದರೆ-ಚಾರ್ವಾಕನ ಪ್ರಕಾರ ಸತ್ತ ಮೇಲೆ ಬೂದಿಯಷ್ಟೇ ಉಳಿಯುವುದು ಎಂಬ ನಿಲುವಿನಿಂದಾಗಿ.
ಪ್ರಸಾದರೆ,
"ಚಾರ್ವಾಕ ದರ್ಶನದ ಹಿನ್ನಡೆ ಅದರ ಅಭಾವವಾದದಲ್ಲಿದೆ" ಇದು ನಿಮ್ಮ ಅನಿಸಿಕೆಯೆ? ಯೋಚಿಸುವಂತೆ ಮಾಡಿತು. ಮೊದಲ ನೋಟದಲ್ಲಿ ಒಪ್ಪಿಗೆಯಾಗಲಿಲ್ಲ.
ಚಟ್ಟೋಪಾಧ್ಯಾಯರು ತಮ್ಮ ಮುನ್ನುಡಿಯಲ್ಲೇ ಇವರ ಇತಿಹಾಸವನ್ನು 'ಪುನರ್ ರಚಿಸಬೇಕಾದ' ಅನಿವಾರ್ಯದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.
ಅಂದ ಹಾಗೆ ಚಾರ್ವಾಕ ಪದದ ಅರ್ಥ ನನಗೆ ನೆನಪಿಲ್ಲ. ಹಲವಾರು ಬೇರುಗಳಿದೆ ಎಂದು ಓದಿದ ನೆನಪು.
ಉ: ಚಾರ್ವಾಕ ದರ್ಶನ-ಒಂದು ಚಿಂತನೆ
"ಚಾರ್ವಾಕ ದರ್ಶನದ ಹಿನ್ನಡೆ ಅದರ ಅಭಾವವಾದದಲ್ಲಿದೆ"
ಏನಿದು ಅಭಾವವಾದ.. ಇಲ್ಲ-ಇಲ್ಲ ಅನ್ನೋದನ್ನ ಈ ಹೇಳೋದ?
ಹಾಗಾದ್ರೆ ಇದೆ-ಇದೆ ಅನ್ನೋ ವಾದಕ್ಕೆ ಏನು ಅಂತಾರೆ? ( ಭಾವವಾದ ಅಂದ್ರೆ ತಮಾಸೆ ಆಗ್ತದೆ )