ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ತನ್ನ ೧೭ರ ಹರೆಯದಲ್ಲೇ ರಾಜ್ಯ ತಂಡಕ್ಕೆ ಆಡುವ ಮೂಲಕ ರಣಜಿಗೆ ಪಾದಾರ್ಪಣೆ ಮಾಡಿದವರು ರಾಬಿನ್ ಉತ್ತಪ್ಪ. ಫರೀದಾಬಾದಿನಲ್ಲಿ ಹರ್ಯಾನ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ೩೨ ಎಸೆತಗಳನ್ನು ಎದುರಿಸಿ ೪೦ ಓಟಗಳನ್ನು ಗಳಿಸಿದರು. ಈಗಲೂ ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ರಾಬಿನ್ ಒಬ್ಬ ಶಾಟ್-ಲೆಸ್ ವಂಡರ್. ಈತನಲ್ಲಿರುವುದೇ ನಾಲ್ಕೈದು ರೀತಿಯ ಹೊಡೆತಗಳು. ಅದನ್ನೇ ಬಂಡವಾಳ ಮಾಡಿಕೊಂಡು ಈವರೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಆದರೆ ಇನ್ನು ಮುಂದೆ ತನ್ನ ಆಟವನ್ನು ಗಣನೀಯವಾಗಿ ಸುಧಾರಿಸದಿದ್ದರೆ, ಕ್ರಿಕೆಟಿಗನೊಬ್ಬನಿಗೆ ’ಬ್ರೆಡ್ ಎಂಡ್ ಬಟರ್’ ಎನ್ನುವ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಕೊಳ್ಳದಿದ್ದರೆ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲೇ ಜೀವನ ಕಳೆಯುವ ಸಾಧ್ಯತೆಗಳಿವೆ.
ರಾಜ್ಯ ತಂಡಕ್ಕೆ ಅರುಣ್ ಕುಮಾರ್ ನಂತರ ಒಬ್ಬ ಸಮರ್ಥ ಆರಂಭಿಕ ಆಟಗಾರನಾಗಿ ದೊರಕಿದವರು ರಾಬಿನ್. ಆಟದ ಶೈಲಿ ವೇಗವಾಗಿ ರನ್ ಗಳಿಸುವುದು. ಬೌಂಡರಿ ಮತ್ತು ಸಿಕ್ಸರ್ ಬಾರಿಸುವುದೇ ರನ್ ಗಳಿಸಲು ಇರುವ ಏಕೈಕ ದಾರಿ ಎಂಬ ಮನೋಭಾವ. ರಾಜ್ಯಕ್ಕೆ ಆಡಿದ ಆರಂಭದ ದಿನಗಳಲ್ಲಿ ’ಬೌಲರ್ಸ್ ಅಸ್ಸಾಸಿನ್’ ಎಂಬ ಹೆಸರು ಉತ್ತಪ್ಪನಿಗಿತ್ತು. ಈಗೀಗ ರಾಬಿನ್ ಆಡುತ್ತಿರುವ ಪರಿ ನೋಡಿದರೆ ಇದೇ ಬೌಲರುಗಳು ’ರಾಬಿನ್ಸ್ ಅಸ್ಸಾಸಿನ್ಸ್’ಗಳಾಗಿದ್ದಾರೆ ಎನ್ನಬಹುದೇನೋ.
ತನ್ನ ಮೊದಲ ರಣಜಿ ಋತುವಿನಲ್ಲಿ ಒಂದೇ ಪಂದ್ಯ ಆಡಿದ ರಾಬಿನ್, ೨ನೇ ಋತುವಿನಲ್ಲಿ ೨ ಪಂದ್ಯ ಆಡಿ ೮.೦೦ರ ಸರಾಸರಿಯಲ್ಲಿ ರನ್ನು ಗಳಿಸಿ ವೈಫಲ್ಯ ಕಂಡರು. ೩ನೇ ಮತ್ತು ೪ನೆ ಋತುಗಳಲ್ಲಿ ಕ್ರಮವಾಗಿ ೪೨.೦೦ ಮತ್ತು ೩೫.೦೦ ಸರಾಸರಿಯಲ್ಲಿ ಸಾಧಾರಣ ಆಟ ತೋರ್ಪಡಿಸಿದರು. ಇದೇ ಸಮಯದಲ್ಲಿ ತನ್ನ ಚೊಚ್ಚಲ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನೂ ಆಡಿದರು. ಆದರೆ ರಾಬಿನ್ ನಿಜವಾಗಿ ತನ್ನ ನೈಜ ಬ್ಯಾಟಿಂಗ್ ಸಾಮರ್ಥ್ಯ ತೋರ್ಪಡಿಸಿದ್ದು ೨೦೦೬-೦೭ರ ರಣಜಿ ಋತುವಿನಲ್ಲಿ. ಭರ್ಜರಿ ಫಾರ್ಮಿನಲ್ಲಿದ್ದ ರಾಬಿನ್, ೭ ಪಂದ್ಯಗಳಲ್ಲಿ ೬೬.೦೦ರ ಸರಾಸರಿಯಂತೆ ೮೫೪ ಓಟಗಳನ್ನು ಕಲೆಹಾಕಿದರು. ಇಲ್ಲಿದ್ದವು ೪ ಶತಕಗಳು. ಆಗ ರಾಬಿನ್ ಭಾರತ ತಂಡಕ್ಕೆ ಮತ್ತೆ ಆಯ್ಕೆಯಾದರು. ಹಾಗಾಗಿ ಆ ಋತುವಿನ ಸೆಮಿ-ಫೈನಲ್ ಪಂದ್ಯಕ್ಕೆ ರಾಬಿನ್ ಇರಲಿಲ್ಲ ಮತ್ತು ಕರ್ನಾಟಕ ಸೋತಿತು.
ನಂತರ ಒಂದು ವರ್ಷ ರಾಷ್ಟ್ರ ತಂಡದೊಡನೆ ರಾಬಿನ್ ಹನಿಮೂನ್! ಇದೇ ಸಮಯದಲ್ಲಿ ಟ್ವೆಂಟಿ೨೦ ವಿಶ್ವಕಪ್ ಗೆದ್ದ ತಂಡದಲ್ಲಿ ಉತ್ತಮ ಸಾಧನೆ. ನಂತರ ಆಸ್ಟ್ರೇಲಿಯ ಪ್ರವಾಸದಲ್ಲಿ ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಉತ್ತಮ ನಿರ್ವಹಣೆ. ಇಲ್ಲೇ ಎಡವಟ್ಟು ಆಗಿರಬಹುದು ಎಂದು ತೋರುತ್ತದೆ. ಆಸ್ಟ್ರೇಲಿಯ ವಿರುದ್ಧದ ೨ ಫೈನಲ್ ಪಂದ್ಯಗಳಲ್ಲಿ ಸಚಿನ್ ಜೊತೆ ಉತ್ತಪ್ಪನ ಆರಂಭಿಕ ಜೊತೆಯಾಟ ಭಾರತ ಎರಡೂ ಪಂದ್ಯಗಳನ್ನು ಗೆಲ್ಲಲು ಮುಖ್ಯ ಕಾರಣವಾಯಿತು. ಆದರೆ ಇಲ್ಲಿ ಉತ್ತಪ್ಪ ತನ್ನ ಎಂದಿನ ಬಿರುಸಿನ ಆಟವನ್ನು ತೋರ್ಪಡಿಸಿರಲಿಲ್ಲ. ವಿಕೆಟ್ ಕಳಕೊಳ್ಳದಂತೆ ನಿಧಾನವಾಗಿ ಆಡಿ ಉತ್ತಮ ಅಡಿಪಾಯ ಹಾಕುವ ರೀತಿಯಲ್ಲಿ ಆಡುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಅದೇ ರೀತಿಯಲ್ಲಿ ಉತ್ತಪ್ಪ ಆಡಿದರು ಕೂಡಾ. ಆ ಕ್ಷಣದಿಂದಲೇ ಉತ್ತಪ್ಪನ ಎಲ್ಲ ಹೊಡೆತಗಳು ಮಾಯವಾದಂತೆ ಭಾಸವಾಗತೊಡಗಿದವು.
ನಂತರ ನಡೆದ ಐಪಿಎಲ್ ಪಂದ್ಯಾಟದಲ್ಲಿ ಮುಂಬೈ ಪರ ಆಡಿದ ಉತ್ತಪ್ಪ ೩೦೦ಕ್ಕೂ ಹೆಚ್ಚಿನ ಓಟಗಳನ್ನು ಗಳಿಸಿದರಾದರೂ ನಿರೀಕ್ಷಿತ ಸಾಧನೆಯಾಗಿರಲಿಲ್ಲ. ವೇಗವಾಗಿ ರನ್ನು ಗಳಿಸಲು ಪರದಾಡತೊಡಗಿದರು. ಅದುವರೆಗೆ ತನ್ನ ಬತ್ತಳಿಕೆಯಲ್ಲಿದ್ದ ಸೀಮಿತ ಸಾಧನಗಳಿಂದ ರನ್ನುಗಳನ್ನು ಸೂರೆಗೊಳ್ಳುತ್ತಿದ್ದ ಉತ್ತಪ್ಪನಿಗೆ ಕಡಿವಾಣ ಹಾಕಲು ಬೌಲರುಗಳು ಕಲಿತುಬಿಟ್ಟಿದ್ದರು. ಸೀಮಿತ ಹೊಡೆತಗಳಿದ್ದರೆ ಇದೇ ಅಪಾಯ. ಎಲ್ಲಾ ರೀತಿಯ ಹೊಡೆತಗಳನ್ನು ಆಡುವಲ್ಲಿ ನಿಸ್ಸೀಮರಾದ ಕ್ರಿಕೆಟಿಗರಿಗೆ ಕಡಿವಾಣ ಹಾಕುವುದು ಕಷ್ಟದ ಕೆಲಸ. ಆದರೆ ರಾಬಿನ್ ಅಂತಹ ಆಟಗಾರನಾಗಿರಲಿಲ್ಲ. ಇಂದಿಗೂ ಆಗಿಲ್ಲ. ಒಬ್ಬ ಯುವ ಕ್ರಿಕೆಟಿಗ ರಾಷ್ಟ್ರೀಯ ಕ್ರಿಕೆಟ್ ಇರಲಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್ ಇರಲಿ ಎಲ್ಲಾ ಪಂದ್ಯಗಳಲ್ಲೂ ಮತ್ತು ಯಾವಾಗಲೂ ಕಲಿಯುವ ಮನೋಭಾವ ಹೊಂದಿರಬೇಕು. ಆದರೆ ರಾಬಿನ್, ಏಳು ವರ್ಷಗಳ ಹಿಂದೆ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಹೇಗೆ ಆಡಿದರೋ, ಅದೇ ರೀತಿಯಲ್ಲಿ ಇಂದಿಗೂ ಆಡುತ್ತಿದ್ದಾರೆ. ಕಲಿತ ಹೊಸ ಹೊಡೆತವೆಂದರೆ ವಿಕೆಟ್ ಹಿಂದೆ ’ಸ್ಕೂಪ್’ ಮಾಡುವುದು ಮಾತ್ರ!
ರಣಜಿ ಪಂದ್ಯಗಳಲ್ಲಿ ದೆಹಲಿ ತಂಡವನ್ನು ಒಬ್ಬ ಯುವ ಕ್ರಿಕೆಟಿಗ ಪ್ರತಿನಿಧಿಸುತ್ತಿದ್ದ. ಉತ್ತಪ್ಪನಂತೆ ಆತನೂ ರಾಷ್ಟ್ರ ತಂಡದಲ್ಲಿ ಒಂದೆರಡು ಅವಕಾಶ ಪಡೆದಿದ್ದ ಮತ್ತು ಆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದರಲ್ಲಿ ವಿಫಲನಾಗಿದ್ದ. ೨೦೦೭ರ ವಿಶ್ವಕಪ್ ಪಂದ್ಯಾವಳಿಗೆ ಈ ಆಟಗಾರ ಮತ್ತು ಉತ್ತಪ್ಪನ ನಡುವೆ ಆರಂಭಿಕ ಆಟಗಾರನ ಸ್ಥಾನಕ್ಕೆ ಪೈಪೋಟಿಯಿತ್ತು. ಕೊನೆಗೂ ಉತ್ತಪ್ಪನೇ ಆಯ್ಕೆಯಾದ. ತುಂಬಾ ನಿರಾಶನಾದ ದೆಹಲಿಯ ಆ ಕ್ರಿಕೆಟಿಗ ಅದನ್ನು ಹೇಳಿಕೊಂಡ ಕೂಡ. ಆದರೆ ಉತ್ತಪ್ಪ ಅದೇ ಲೆವೆಲ್-ನಲ್ಲಿ ಇದ್ದುಬಿಟ್ಟರೆ, ಈತ ಮಾತ್ರ ತನ್ನ ಆಟವನ್ನು ಬಹಳ ಸುಧಾರಿಸಿಕೊಂಡ. ದೇಶೀಯ ಪಂದ್ಯಗಳಲ್ಲಿ ಮತ್ತೆ ರನ್ನುಗಳನ್ನು ಸೂರೆಗೈದ. ಅತ್ತ ಉತ್ತಪ್ಪ ವಿಶ್ವಕಪ್-ನಲ್ಲಿ ಹೀನಾಯವಾಗಿ ವೈಫಲ್ಯವನ್ನು ಕಂಡರು. ಉತ್ತಪ್ಪನನ್ನು ತಂಡದಲ್ಲಿಟ್ಟುಕೊಂಡೇ ಆಯ್ಕೆಗಾರರು ದೆಹಲಿಯ ಈ ಕ್ರಿಕೆಟಿಗನ ಸಾಧನೆಯನ್ನು ಗಮನಿಸಿ ಆತನಿಗೆ ಮತ್ತೊಂದು ಅವಕಾಶವನ್ನು ನೀಡಿದರು. ಸಿಕ್ಕ ಈ ಎರಡನೇ ಅವಕಾಶವನ್ನು ಗೌತಮ್ ಗಂಭೀರ್ ಯಾವ ಪರಿ ಬಳಸಿಕೊಂಡರೆಂಬುದು ಮತ್ತೆ ಹೇಳಬೇಕಾಗಿಲ್ಲ. ತನ್ನ ಆಟವನ್ನು ಬಹಳ ಸುಧಾರಿಸಿಕೊಂಡ ಎಲ್ಲ ಹೊಡೆತಗಳನ್ನು ಆಡುವ ಗೌತಮ್ ಗಂಭೀರ್ ಹೆಸರು ಈಗ ಎಲ್ಲಾ ರೀತಿಯ (೨೦-೨೦, ಏಕದಿನ, ಟೆಸ್ಟ್) ಪಂದ್ಯಗಳಲ್ಲಿ ಭಾರತ ತಂಡದ ಅಂತಿಮ ಹನ್ನೊಂದರ ಆಯ್ಕೆ ಮಾಡುವಾಗ ಮೊದಲಿಗೆ ಇರುತ್ತದೆ. ಕೇವಲ ೩ ವರ್ಷಗಳ ಹಿಂದೆ ಪ್ರತಿಸ್ಪರ್ಧಿಗಳಾಗಿದ್ದವರು ಉತ್ತಪ್ಪ ಮತ್ತು ಗಂಭೀರ್. ಈಗ ಗಂಬೀರ್ ಎಲ್ಲಿ... ಉತ್ತಪ್ಪ ಎಲ್ಲಿ? ಹೋಲಿಕೆಯೇ ಇಲ್ಲ.
ಆನ್ ಡ್ರೈವ್, ಕವರ್ ಡ್ರೈವ್ ಮತ್ತು ಸ್ಟ್ರೈಟ್ ಡ್ರೈವ್ ಈ ೩ ಹೊಡೆತಗಳಿಲ್ಲದಿದ್ದರೆ ಒಬ್ಬ ಕ್ರಿಕೆಟಿಗ ಆಗಲು ಹೇಗೆ ಸಾಧ್ಯ. ರಾಬಿನ್ ಅಪರೂಪಕ್ಕೊಮ್ಮೆ ಕವರ್ ಡ್ರೈವ್ ಆಡುತ್ತಾರೆ ಎಂಬುದನ್ನು ಹೊರತುಪಡಿಸಿದರೆ ಅವರಲ್ಲಿ ಈ ಹೊಡೆತಗಳ ಕೊರತೆಯಿದೆ. ಅವರು ಆಡುವುದು ’ಲಾಫ್ಟೆಡ್ ಆನ್ ಡ್ರೈವ್’ ಮಾತ್ರ. ಈ ಹೊಡೆತಕ್ಕೇ ಎಷ್ಟೋ ಸಲ ತಮ್ಮ ವಿಕೆಟ್ ಕಳಕೊಂಡಿದ್ದಾರೆ. ಒಂದೆರಡು ಹೆಜ್ಜೆ ಮುಂದೆ ಬಂದು ಚೆಂಡನ್ನು ಎತ್ತಿ ಬಾರಿಸುವ ಕೆಟ್ಟ ಹೊಡೆತ ಇದ್ದೇ ಇದೆ. ಅಡ್ಡ ಬ್ಯಾಟಿನ ಹೊಡೆತಗಳೇ ರಾಬಿನ್ ಆಟದಲ್ಲಿ ತುಂಬಿಹೋಗಿವೆ. ಬರೀ ಸ್ಟೈಲ್ ಮಾಡಿಕೊಂಡು, ಒಂದು ಸಲ ಕ್ರಾಸ್ ತೋರುವ ಹಾರ ಹಾಕಿಕೊಂಡು ಮತ್ತೊಂದು ಸಲ ಇನ್ನೊಂದೇನೋ ತೋರುವ ಹಾರ ಹಾಕ್ಕೊಂಡು, ತಲೆ ಕೂದಲನ್ನು ಅಡ್ಡಡ್ಡ ಕತ್ತರಿಸಿಕೊಂಡು, ಲೇಟೇಸ್ಟ್ ಕಾರುಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಅಡ್ಡಾಡುತ್ತ, ’ಹ್ಯಾಪನಿಂಗ್’(!?) ಜಾಗಗಳಿಗೆ ಎಡತಾಕುತ್ತಾ, ಬೇಕಾಬಿಟ್ಟಿ ತಿನ್ನುತ್ತಾ ತೂಕ ಹೆಚ್ಚಿಸಿಕೊಳ್ಳುತ್ತಾ, ಹೊಟ್ಟೆ ಬೆಳೆಸಿಕೊಳ್ಳುತ್ತಾ, ಸಂಕಟ ಬಂದಾಗ ಕುಕ್ಕೆ ಸುಬ್ರಹ್ಮಣ್ಯ ಮತ್ತು ಇನ್ನಷ್ಟು ಸಂಕಟ ಬಂದಾಗ ಯೇಸುಕ್ರಿಸ್ತ ಎನ್ನುತ್ತಾ ಇರುವುದನ್ನು ಬಿಟ್ಟು ತನ್ನ ಆಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಅಭ್ಯಾಸ ಮಾಡುವುದು ಒಳ್ಳೆಯದು.
೨೦-೨೦ ವಿಶ್ವಕಪ್ ಪಂದ್ಯಾವಳಿಯ ಬಳಿಕ ಏಕದಿನ ಪಂದ್ಯವೊಂದರಲ್ಲಿ ಬ್ರೆಟ್ ಲೀ ಎಸೆತವೊಂದರಲ್ಲಿ ಉತ್ತಪ್ಪ ’ಬೀಟ್’ ಆದ ಬಳಿಕ ಲೀ, ’ಇಟ್ಸ್ ಅ ಡಿಫರೆಂಟ್ ಬಾಲ್ ಗೇಮ್ ಮೇಟ್’ ಅಂದಾಗ ರಾಬಿನ್, ’ಬಟ್ ಇಟ್ಸ್ ದ ಸೇಮ್ ಬ್ಯಾಟ್’ ಎಂಬ ಉತ್ತರ ನೀಡಿದ್ದರು. ಈಗ ಅದೇ ಬ್ಯಾಟಿನಿಂದ ರನ್ನುಗಳು ಬರುತ್ತಿಲ್ಲ. ಕಳೆದ ರಣಜಿ ಋತುವಿನಲ್ಲಿ (೨೦೦೮-೦೯) ರಾಬಿನ್ ೫೦ರ ಸರಾಸರಿಯಲ್ಲಿ ರನ್ನು ಗಳಿಸಿದರಾದರೂ ಪ್ರಬಲ ತಂಡಗಳ ವಿರುದ್ಧ ಮುಗ್ಗರಿಸಿದರು. ನಂತರ ನಡೆದ ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಪಂದ್ಯಾಟಗಳಲ್ಲೂ ಉತ್ತಪ್ಪನದ್ದು ನೀರಸ ಪ್ರದರ್ಶನ. ಉತ್ತಪ್ಪ ಲಯ ಕಳೆದುಕೊಳ್ಳುತ್ತಿರುವುದು ಎದ್ದು ಕಾಣುತ್ತಿತ್ತು. ಇದೆಲ್ಲವನ್ನು ಮನಗಂಡ ಮುಂಬೈ ಇಂಡಿಯನ್ಸ್, ಉತ್ತಪ್ಪನನ್ನು ಬೆಂಗಳೂರು ರಾಯಲ್ಸ್-ಗೆ ಸಾಗಹಾಕಿದರು. ಪಾರಂಪರಿಕ ಮತ್ತು ಹೊಸ ಕ್ರಿಕೆಟ್ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಿಕೊಂಡರೆ ಉತ್ತಪ್ಪನಿಗೆ ಉಳಿಗಾಲ. ಅವೇ ಹಳಸಲು ಅಡ್ಡ ಬ್ಯಾಟಿನ ಹೊಡೆತಗಳು, ಲಾಫ್ಟೆಡ್ ಆನ್ ಡ್ರೈವ್, ಸ್ಕೂಪ್, ಒಂದೆರಡು ಹೆಜ್ಜೆ ಮುಂದೆ ಬಂದು ಎತ್ತಿ ಹೊಡೆಯುವುದು ಇವಿಷ್ಟನ್ನೇ ಆಡುತ್ತಾ ಕೂತರೆ ದೇಶೀಯ ಕ್ರಿಕೆಟಿನಲ್ಲೂ ನಂತರ ಪರದಾಡಬೇಕಾಗುತ್ತದೆ. ಅಷ್ಟಕ್ಕೂ ರಾಬಿನ್ ಬಳಿ ಉತ್ತಮ ರಕ್ಷಣಾತ್ಮಕ ಆಟ ಆಡುವ ಕಲೆಯೂ ಇಲ್ಲ. ಇತ್ತ ತಾಳ್ಮೆಯೂ ಇಲ್ಲ. ಈ ಸನ್ನಿವೇಶದಿಂದ ಹೇಗೆ ಹೊರಬರುತ್ತಾರೋ ಕಾದು ನೋಡೋಣ.
- rajeshnaik111's blog
- Login or register to post comments
- 784 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ರಾಜೇಶ್ ನಾಯ್ಕರೇ,
ಉತ್ತಪ್ಪ ಅವರ ಕ್ರಿಕೆಟ್ ಕೌಶಲದ ಬಗ್ಗೆ ಉತ್ತಮ ವಿಶ್ಲೇಷಣೆ.
ಆದರೆ ಧರ್ಮದ ಬಗೆಗಿನ ಟಿಪ್ಪಣಿ ಬೇಕಿರಲಿಲ್ಲವೆಂದು ಅನಿಸಿತು.
--ಶ್ರೀ
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ರಾಜೇಶರೆ,
ಒಳ್ಳೆಯ ವಿಶ್ಲೇಷಣೆ. ವಂದನೆಗಳು. ಇವರೇಕೆ ಸೋಲ್ತಿದ್ದಾರೆ ಎಲ್ಲಾ ಕಡೆ ಎಂದು ಚಿಂತಿಸಿದ್ದೇ ಬಂದಿತ್ತು. ಈ ಒಳನೋಟಗಳು ಗೊತ್ತಿರಲಿಲ್ಲ.
- ಅರವಿಂದ
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ರಾಜೇಶ್ ರವರೆ , ನಿಮ್ಮ ಈ ಲೇಕನ ಉತ್ತಪ್ಪ ಎಲ್ಲೋ ಓದಿರಬೇಕು ಅನ್ಸುತ್ತೆ .
ಏನಂತೀರಿ ?
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಶ್ರೀನಿವಾಸ್,
ಧರ್ಮದ ಬಗ್ಗೆ ಅತಿಯಾಗಿ ’ಶೋ’ ಮಾಡಿದರೆ ಅದರ ಬಗ್ಗೆ ಬರೆಯಬೇಕಾಗುತ್ತದೆ. ಉತ್ತಪ್ಪ ಇತ್ತೀಚೆಗೆ ತನ್ನ ಟೀಮ್ ಶರ್ಟಿನ ಹಿಂಭಾಗದಲ್ಲೂ ಕ್ರಾಸ್ ಮಾರ್ಕ್ ಹಾಕಿರುವುದನ್ನು ತಮ್ಮಂತಹ ಸರ್ವಧರ್ಮಪ್ರಿಯರು ಗಮನಿಸಿರಬೇಕಲ್ಲವೇ!
ಅರವಿಂದ್,
ಥ್ಯಾಂಕ್ಸ್. ಉತ್ತಪ್ಪ ತನ್ನ ಆಟವನ್ನು ಸುಧಾರಣೆ ಮಾಡಿಕೊಳ್ಳಬೇಕು. ಕಾಲ ಮಿಂಚಿಲ್ಲ. ಇನ್ನೂ ಯುವಕ. ಮತ್ತೆ ಪ್ರಥಮ ದರ್ಜೆ ಕ್ರಿಕೆಟಿಗೆ ತೆರಳಿ ತನ್ನ ಟೆಕ್ನಿಕ್ ನ್ನು ಸುಧಾರಿಸಿಕೊಳ್ಳಬೇಕು.
ವಿನಯ್,
ಆತನಿಗೆ ಕನ್ನಡ ಓದಲಿಕ್ಕೆ ಬರುತ್ತದೋ? ಅಷ್ಟಕ್ಕೂ ಒಂದೆರಡು ಇನ್ನಿಂಗ್ಸ್ ಚೆನ್ನಾಗಿ ಆಡಿದ ಕೂಡಲೇ ಅಟ್ಟಕ್ಕೇರಿಸುವುದು ನಮ್ಮ ಚಾಳಿ ಅಲ್ಲವೇ? ನೀವೂ ಅದನ್ನೇ ಮಾಡುತ್ತಿದ್ದೀರಿ!
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಎಲ್ಲವನ್ನು ಋಣಾತ್ಮಕವಾಗೆ ಯಾಕೆ ಯೋಚಿಸುತ್ತಿರಿ .
ನಿಮ್ಮ ಪ್ರಕಾರ ಹೇಳುವದಾದರೆ ಈ ಕ್ರೀಡೆಯಲ್ಲಿರುವ ಹಲವರು ಧರ್ಮದ ಪ್ರಚಾರ ಮಾಡುತ್ತಿದ್ದಾರೆ ಅನ್ನೋ ಹಾಗಾಯಿತು .(ಹೆಸರು ಬೇಡ ನಿಮಗೆ ಗೊತ್ತಿರಬಹುದು ಯಾರ್ ಯಾರು ಏನೇನು ಧರಿಸಿ ಬರುತ್ತಾರೆಂದು ).
<<ಆತನಿಗೆ ಕನ್ನಡ ಓದಲಿಕ್ಕೆ ಬರುತ್ತದೋ? ಅಷ್ಟಕ್ಕೂ ಒಂದೆರಡು ಇನ್ನಿಂಗ್ಸ್ ಚೆನ್ನಾಗಿ ಆಡಿದ ಕೂಡಲೇ ಅಟ್ಟಕ್ಕೇರಿಸುವುದು ನಮ್ಮ ಚಾಳಿ ಅಲ್ಲವೇ?>>
ನಾನು ನಿಮ್ಮ ಮಾತು ಕೇಳಿದ ಅಂದೇನೆ ಹೊರತು ಅಟ್ಟಕ್ಕೆನು ಏರಿಸಲಿಲ್ಲ ಬಿಡಿ .
<<ರಾಜ್ಯ ತಂಡಕ್ಕೆ ಅರುಣ್ ಕುಮಾರ್ ನಂತರ ಒಬ್ಬ ಸಮರ್ಥ ಆರಂಭಿಕ ಆಟಗಾರನಾಗಿ ದೊರಕಿದವರು ರಾಬಿನ್>>
ಅಂದ ಮೇಲೆ ಅವನಿಗೆ ಕನ್ನಡ ಓದಲಿಕ್ಕೆ ಬರುತ್ತದೆ ಅನ್ನೋದು ನನ್ನ ಭಾವನೆ .
ನಿಂದಿಸಬೇಕು ಬೇಕು ನಿಜ ಆದರೆ ಈ ಪರಿ ತರವಲ್ಲ ಅನ್ನೋದು ನನ್ನ ಅಭಿಪ್ರಾಯ .ರಾಜ್ಯ>ಆತನಿಗೆ>
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ವಿನಯ್,
ರಾಬಿನ್ ’ಕ್ರಾಸ್’ ಇರುವ ಹಾರ ಹಾಕ್ಕೊಂಡಿದು ತಪ್ಪು ಎಂದು ನಾನು ಹೇಳ್ತಾ ಇಲ್ಲವಲ್ಲ. ಕ್ರಾಸ್ ಇರುವ ಹಾರವನ್ನು ಕ್ರೈಸ್ತನಾದವನು ಧರಿಸದೇ ಇನ್ಯಾರು ಧರಿಸಬೇಕು? ಅಷ್ಟಕ್ಕೂ ಈಗ ಕ್ರಾಸ್ ಕೇವಲ ಒಂದು ಕ್ರೈಸ್ತ ಸಂಕೇತವಾಗಿ ಉಳಿದಿಲ್ಲ. ಅದೊಂದು ’ಫ್ಯಾಷನ್’ ಸಂಕೇತವಾಗಿ ಬದಲಾಗಿದೆ. ಈ ನಿಟ್ಟಿನಲ್ಲೇ ನಾನು ಕ್ರಾಸ್ ವಿಷಯವನ್ನು ಎತ್ತಿದ್ದು. ’ಆತ ಆಟದ ಮೇಲೆ ಗಮನ ನೀಡುವುದನ್ನು ಬಿಟ್ಟು ಸ್ಟೈಲ್ ಮಾಡುತ್ತಾನೆ’ ಎಂದು ಲೇಖನದಲ್ಲಿ ಬರೆದಿದ್ದು. ಆ ಕ್ರಾಸ್ ಹಾರದ ನಂತರ ಆತ ಧರಿಸಿದ್ದು ಗೋಲ ಪೆಂಡೆಂಟ್ ತರಹ ಇದ್ದ ಹಾರವನ್ನು. ಅದೇನೆಂದೇ ತಿಳಿದಿರಲಿಲ್ಲ. ಅದಕ್ಕೆ ’ಇನ್ನೊಂದೇನೋ ತೋರುವ ಹಾರ’ ಎಂದು ಬರೆದದ್ದು. ಕ್ರಾಸ್ ವಿಷಯವನ್ನು ಫ್ಯಾಷನ್ ನಿಟ್ಟಿನಲ್ಲಿ ಎತ್ತಿದ್ದೇ ಹೊರತು ಧರ್ಮದ ನಿಟ್ಟಿನಲ್ಲಲ್ಲ. ನಂತರದ ವಿಷಯ ಟೀಮ್ ಷರ್ಟಿನದ್ದು. ಶ್ರೀನಿವಾಸ್ ಅವರ ಟಿಪ್ಪಣಿಗೆ ಉತ್ತರಿಸುತ್ತಾ ನಾನು ಬರೆದದ್ದು ಧರ್ಮದ ಬಗ್ಗೆನೇ. ಟೀಮ್ ಷರ್ಟ್ ಅಂದ ಮೇಲೆ ಅದು ಯಾವ ಧರ್ಮಕ್ಕೂ ಸೇರಿದ್ದಲ್ಲ. ಅದರ ಮೇಲೂ (ಹಿಂಭಾಗದಲ್ಲಿ) ರಾಬಿನ್ ಕುತ್ತಿಗೆಯ ಕೆಳಗೆ ಕ್ರಾಸ್ ಮಾರ್ಕನ್ನು ಹಾಕಿ ಆಡುತ್ತಿದ್ದರು. ತನ್ನ ಷರ್ಟ್ ಮೇಲೆ ಯಾವ ಮಾರ್ಕ್ ಬೇಕಾದರೂ ರಾಬಿನ್ ಹಾಕಿಕೊಳ್ಳಲಿ. ಆದರೆ ಟೀಮ್ ಷರ್ಟ್ ಅಂದ ಮೇಲೆ ಅದಕ್ಕೊಂದು ಸ್ಥಾನ, ಮಾನ, ಮರ್ಯಾದೆ ಇರುತ್ತದೆ. ಇಷ್ಟಕ್ಕೂ ರಾಯಲ್ ಚಾಲೆಂಜರ್ಸೇ ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಯಾರು? ವ್ಯಾಲಿಡ್ ಪ್ರಶ್ನೆ. ಆದರೆ ರಾಬಿನ್ ಟೀಮ್ ಷರ್ಟಿನ ಮೇಲೆ ಕ್ರಾಸ್ ಹಾಕಿದ್ದು ಸರಿ ಕಾಣಲಿಲ್ಲ. ಅದಕ್ಕೆ ಬರೆದೆ. ಇನ್ನು ಧರ್ಮದ ಹಿಂದೆ ಓಡಿ ಕ್ರಿಕೆಟ್ ಜೀವನವನ್ನೇ ಹಾಳುಮಾಡಿಕೊಂಡಿರುವ ಕನ್ನಡಿಗ ರೋಲಂಡ್ ಬ್ಯಾರಿಂಗ್ಟನ್ ಬಗ್ಗೆ ಸಂಪದದಲ್ಲೇ ನಾನು ಬರೆದಿದ್ದೇನೆ. ರಾಬಿನ್ ಹಾಗಾಗದಿರಲಿ ಎಂಬ ಉದ್ದೇಶ ಅಷ್ಟೇ.
ನಿಮ್ಮ ಟಿಪ್ಪಣಿ ("ನಿಮ್ಮ ಈ ಲೇಕನ ಉತ್ತಪ್ಪ ಎಲ್ಲೋ ಓದಿರಬೇಕು ಅನ್ಸುತ್ತೆ .ಏನಂತೀರಿ ?") ರಾಬಿನ್ ಮೊನ್ನೆ ಸರಿಯಾಗಿ ಆಡಿದ ಒಂದೇ ಪಂದ್ಯದ ಬಳಿಕ ಬಂದಿದ್ದರಿಂದ ನೀವು ಅಟ್ಟಕ್ಕೇ ಏರಿಸಿದ್ದೀರಿ ಎಂದು ತಿಳಿದುಕೊಂಡೆ. ನಾನು ಗ್ರಹಿಸಿದ್ದು ತಪ್ಪಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ.
ಆತನಿಗೆ ಕನ್ನಡ ಓದಲಿಕ್ಕೆ ಬರುತ್ತೋ ಇಲ್ಲವೋ ಎಂದು ಬರೆದದ್ದು ಸ್ವಲ್ಪ ಹೆಚ್ಚಿನ ವ್ಯಂಗ್ಯವಾಯಿತು ಎಂದು ಒಪ್ಪಿಕೊಳ್ಳುತ್ತೇನೆ.
ಲೇಖನದಲ್ಲಿ ರಾಬಿನ್-ನನ್ನು ಎಲ್ಲಿ ನಿಂದಿಸಿದ್ದೇನೆ ಎಂದು ಸ್ವಲ್ಪ ನಿಖರವಾಗಿ ಹೇಳುತ್ತೀರಾ? ಯಾರನ್ನೂ ನಿಂದಿಸುವ ಹಕ್ಕು ನನಗಿಲ್ಲ. ಮತ್ತು ನಿಂದಿಸಿಲ್ಲ ಕೂಡಾ. ವ್ಯಂಗ್ಯ ಮತ್ತು ನಿಂದನೆಗೆ ವ್ಯತ್ಯಾಸವಿದೆ. ರಾಬಿನ್ ಇತ್ತೀಚೆಗೆ ವೈಫಲ್ಯ ಕಾಣುತ್ತಿರುವ ವಿಷಯದ ಹಿಂದೆ ಇರುವ ಕಾರಣಗಳಷ್ಟೇ ಲೇಖನದಲ್ಲಿವೆ. ನಿಂದನೆ ತುಂಬಾ ದೊಡ್ಡ ಶಬ್ದ. ನಿಮ್ಮ ಈ ಅಪವಾದ ಅತಿಯಾಯಿತು ಮತ್ತು ನಾನು ಒಪ್ಪುವುದಿಲ್ಲ.
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
<< ’ಆತ ಆಟದ ಮೇಲೆ ಗಮನ ನೀಡುವುದನ್ನು ಬಿಟ್ಟು ಸ್ಟೈಲ್ ಮಾಡುತ್ತಾನೆ’ ಎಂದು ಲೇಖನದಲ್ಲಿ ಬರೆದಿದ್ದು>>
ಮಾಡಲಿ ಬಿಡಿ , ಕುದುರೆಯನ್ನು ಕೆರೆಯವರೆಗೆ ಕರೆದುಕೊಂಡು ಹೋಗಬಹುದು , ನೀರು ಕುಡಿಯುವುದು ಬಿಡುವುದು ಅದಕ್ಕೆ ಬಿಟ್ಟ ವಿಚಾರ .ಬಲವಂತವಾಗಿ ಕುಡಿಸುವುದು ವ್ಯರ್ಥ ಅಲ್ಲವೇ ?
<<ಟೀಮ್ ಷರ್ಟ್ ಅಂದ ಮೇಲೆ ಅದು ಯಾವ ಧರ್ಮಕ್ಕೂ ಸೇರಿದ್ದಲ್ಲ. ಅದರ ಮೇಲೂ (ಹಿಂಭಾಗದಲ್ಲಿ) ರಾಬಿನ್ ಕುತ್ತಿಗೆಯ ಕೆಳಗೆ ಕ್ರಾಸ್ ಮಾರ್ಕನ್ನು ಹಾಕಿ ಆಡುತ್ತಿದ್ದರು>>
ಈ ಪ್ರಶ್ನೆಗೆ ನೀವೇ ಉತ್ತರಿಸಿದ್ದಿರ ,ಯಾವ ಧರ್ಮಕ್ಕೂ ಸೇರಿದ್ದಲ್ಲವೆಂದ ಮೇಲೆ ಹಾಗಯೇ ಅದು ಸ್ಟೈಲ್ ಆಗಿರಬಹುದು ಎಂದ ಮೇಲೆ ,ಅದು ಧರ್ಮದ ಸಂಕೇತ ಅಂತ ನೀವೇಕೆ ಅರ್ಥಿಸಿಕೊಳ್ಳುತ್ತಿರಿ.
ನಿಮ್ಮ ಮಾತೆ ಒಪ್ಪಿಕೊಳ್ಳುತ್ತೇನೆ ,ಅದು ನಿಜವೇ ಅಂದುಕೊಳ್ಳಿ. ಅದರಿಂದ ಆ ಧರ್ಮದ ಪ್ರಚಾರ ಆಗುತ್ತದ ?
<<ಲೇಖನದಲ್ಲಿ ರಾಬಿನ್-ನನ್ನು ಎಲ್ಲಿ ನಿಂದಿಸಿದ್ದೇನೆ ಎಂದು ಸ್ವಲ್ಪ ನಿಖರವಾಗಿ ಹೇಳುತ್ತೀರಾ?>>
ನಾನು ನಿಖರವಾಗಿ ಹೇಳಲಿಲ್ಲ . ಬಹುಶಃ ನಿಮ್ಮ ವ್ಯಂಗ್ಯವನ್ನು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ ನಾನು ಅಂತ ಕಾಣುತ್ತೆ .ಲೇಖನದಲ್ಲಿ>ಟೀಮ್>>
ಕೊನೆಯದಾಗಿ ನೀವು ಕ್ಷಮೆ ಕೆಳುವಂತದ್ದು ಏನು ಬರೆದಿಲ್ಲ ಬಿಡಿ .
ನನ್ನನ್ನು ನೀವು ಎಂದು ಬೇಡ 'ನೀನು ' ಎಂದು ಸಂಭೋದಿಸಿ ಸಾಕು . ನಿಮಗಿಂತ ಬಹಳ , ಬಹಳ ಚಿಕ್ಕವನು ನಾನು .
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಕ್ರಾಸ್ ಮಾರ್ಕ್ ಭಕ್ತರೆಲ್ಲ 'ಶೋ' ಮಾಡಬೇಕೆಂಬುದಾಗಿ 'ಮೇಲಿಂದ' ಅಪ್ಪಣೆ ಆಗಿದೆಯಲ್ಲ ;)
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
:)
ಐಬಿಎನ್ ನಲ್ಲಿ ಒಂದು ಬ್ಲಾಗ್ ಓದುತ್ತಿದ್ದೆ... ಅದರ ತಲೆ ಬರಹ ಹೀಗಿದೆ "Catholic poll advice: communal parties greater evil than criminal candidates"....
ಆ ಬ್ಲಾಗ್ ಪೂರ್ತಿ ಓದಿದರೆ ಚೆನಾಗಿ ಅರ್ಥ ಆಗುತ್ತೆ, communal ಯಾರು ಎಂದು ..., ಇದು ಯಾವ ರೀತಿಯ ಸೇಕ್ಯುಲಾರಿಸಂ ಎಂದು ನಮ್ಮ ಪೀಠಿಗಳನ್ನ ಒಮ್ಮೆ ಕೇಳಬೇಕು :)
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಈ Catholic ಯಜಮಾನರ್ಯಾರು ಅಡ್ವೈಸ್ ಕೊಡಕ್ಕೆ ಅಂತನೇ ಮೊದಲು ಅರ್ಥ ಆಗಲ್ಲ. ರಾಮನವಮಿಗೂ ಇಮಾಮ್ ಸಾಹೇಬನಿಗೂ ಏನು ಸಂಬಂಧವೋ :D
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಭಾಸ್ಕರ್,
ಕ್ರೀಡೆಯಲ್ಲಿ ಹಾಗಾಗದಿರಲಿ ಎಂದು ಇನ್ನು ಪ್ರಾರ್ಥನೆ ಮಾಡ್ಬೇಕೇನೋ!
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಶ್ರೀನಿವಾಸ್,
ಹ್ಹ ಹ್ಹ ಸರಿಯಾದ ಮಾತು. ಆದರೆ ರಾಬಿನ್ ಹಾಗೆ ಮಾಡದಿರಲಿ. ಆದರೆ....?
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ರಾಜೇಶ್:
ನಿಮ್ಮ ಹಲವು ಬರಹಗಳನ್ನು ಓದಿದ್ದೇನೆ. ಕಂಡರೆ ಬಿಟ್ಟು ಮುಂದೆ ಹೋದದ್ದಿಲ್ಲ.
ಕೆಳಗಿನ ಸಾಲುಗಳಿಂದ ನಿಮ್ಮ ಬರಹದ ಮಟ್ಟ ಕಡಿಮೆಯಾಯಿತು ಅಂತ ನನಗನ್ನಿಸುತ್ತದೆ.
>>>
ಬರೀ ಸ್ಟೈಲ್ ಮಾಡಿಕೊಂಡು, ಒಂದು ಸಲ ಕ್ರಾಸ್ ತೋರುವ ಹಾರ ಹಾಕಿಕೊಂಡು ಮತ್ತೊಂದು ಸಲ ಇನ್ನೊಂದೇನೋ ತೋರುವ ಹಾರ ಹಾಕ್ಕೊಂಡು, ತಲೆ ಕೂದಲನ್ನು ಅಡ್ಡಡ್ಡ ಕತ್ತರಿಸಿಕೊಂಡು, ಲೇಟೇಸ್ಟ್ ಕಾರುಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಅಡ್ಡಾಡುತ್ತ, ’ಹ್ಯಾಪನಿಂಗ್’(!?) ಜಾಗಗಳಿಗೆ ಎಡತಾಕುತ್ತಾ, ಬೇಕಾಬಿಟ್ಟಿ ತಿನ್ನುತ್ತಾ ತೂಕ ಹೆಚ್ಚಿಸಿಕೊಳ್ಳುತ್ತಾ, ಹೊಟ್ಟೆ ಬೆಳೆಸಿಕೊಳ್ಳುತ್ತಾ, ಸಂಕಟ ಬಂದಾಗ ಕುಕ್ಕೆ ಸುಬ್ರಹ್ಮಣ್ಯ ಮತ್ತು ಇನ್ನಷ್ಟು ಸಂಕಟ ಬಂದಾಗ ಯೇಸುಕ್ರಿಸ್ತ ಎನ್ನುತ್ತಾ ಇರುವುದನ್ನು ಬಿಟ್ಟು
>>>
ಇತೀ,
ಉಉನಾಶೆ
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಉಮೇಶ್,
ನಿಮ್ಮ ಮಾತಿಗೆ ನನ್ನ ಗೌರವವಿದೆ. ಆದರೆ ಸತ್ಯ ಖಾರವಾಗಿರುತ್ತೆ. ರಾಬಿನ್ ಅದೇನು ಮಾಡುತ್ತಿದ್ದಾನೋ ಅದನ್ನೆ ಬರೆದಿದ್ದೇನೆ. ಕ್ರಾಸ್ ವಿಷಯವನ್ನು ನಾನು ಫ್ಯಾಷನ್ ನಿಟ್ಟಿನಲ್ಲಿ ಬರೆದದ್ದೇ ವಿನ: ಧರ್ಮದ ನಿಟ್ಟಿನಲ್ಲಲ್ಲ ಎಂದು ಮತ್ತೊಮ್ಮೆ ಸ್ಪಷ್ಟಗೊಳಿಸುತ್ತೇನೆ. ಇನ್ನು ನಾನು ಲೇಖಕನಲ್ಲ. ಅದಕ್ಕೆ ಈ ಬರಹಗಳು ಲೇಖನ ವಿಭಾಗದಲ್ಲಿರದೇ ಬ್ಲಾಗ್ ವಿಭಾಗದಲ್ಲಿದೆ. ಆದ್ದರಿಂದ ಬರಹದ ಮಟ್ಟ ಎಂದಿಗೂ ಕೆಳಗೇ ಇರುತ್ತದೆ. ಅಪರೂಪಕ್ಕೆ ಅದನ್ನು ಅಟ್ಟಕ್ಕೆ ಏರಿಸಿದರೆ ನಿಮಗೆ ನಾನು ಧನ್ಯ.
ಆದರೂ ಯಾರೂ ರಾಬಿನ್ ಬೇಗನೇ ಒಳ್ಳೆಯ ಆಟ ಆಡುವಂತಾಗಲಿ ಎಂದು ಹಾರೈಸದೇ ಬರೀ ಧರ್ಮ, ಕ್ರಾಸ್ ಈ ಶಬ್ದಗಳ ಮೇಲೆಯೇ ಗಮನ ನೀಡಿದ್ದು ಬೇಜಾರಾಗಿದೆ. ಎಲ್ಲರೂ ಕ್ರೀಡೆಯಲ್ಲಿ ಧರ್ಮ ನುಸುಳುವುದನ್ನು ವಿರೋಧಿಸುವ ಬದಲು ಲೇಖನದಲ್ಲಿ ಧರ್ಮ ನುಸುಳಿದೆ ಎಂದೇ ತಲೆಕೆಡಿಸಿಕೊಂಡಿದ್ದಾರೆ! ಇನ್ನು ನೀವೆಲ್ಲಾ ರೋಲಂಡ್ ಬ್ಯಾರಿಂಗ್ಟನ್ ಬಗ್ಗೆ ನಾನು ಬರೆದಿದ್ದನ್ನು ಓದಿದರೆ ನಾಡಿಗ್-ಗೆ ಸಂಪದದಿಂದ ನನ್ನ ಲೇಖನಗಳನ್ನು ಕಿತ್ತೊಗೆಯಲು ಶಿಫಾರಸು ಮಾಡುತ್ತಿರೇನೋ!
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಲೇಖಕರೇ ಧನ್ಯವಾದಗಳು. ತಾವು ರಾಬಿನ್ ಉತ್ತಪ್ಪ ಬಗ್ಗೆ ಮಾಹಿತಿ ಸಿಕ್ಕಿತ್ತು ಹಾಗೇ ಅವರು ಇತ್ತಿಚೀನ ದಿನಗಳಲ್ಲಿ ಕೀಪಿಂಗ್ ಮಾಡುತ್ತಿದ್ದಾರೆ. ಅವರು ಆಟದಲ್ಲಿ ಸನ್ನಿವೇಶ ನೋಡಿಕೊಂಡು ಆಡಿದರೆ ಉತ್ತಮ ಅಲ್ವಾ?
ಉ: ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ
ಪ್ರಿಯ ರಾಜೇಶ್,
cricinfo ದಲ್ಲಿ "As a batsman he (ರಾಬಿನ್ ಉತ್ತಪ್ಪ) has always been attractive to watch, hard-hitting, with every shot in the book, unafraid to hit the ball in the air" ಅಂದಿದ್ದಾರೆ.
"with every shot in the book" ಕುರಿತು ನೀವು ಒಪ್ಪುವುದಿಲ್ಲ ಅಲ್ವಾ; cricinfo ದವರು ಹಾಗೇ ಬರೆಯಲು ಕಾರಣ ಏನಿರಬಹುದು?