ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕರ್ನಾಟಕ ಕ್ರಿಕೆಟ್ - ೩

ಯೆರೆ ಗೌಡ - ಇವರ ಪೂರ್ಣ ಹೆಸರು ಯೆರೆ ಕಾರೆಕಲ್ಲು ತಿಪ್ಪಣ್ಣ ಗೌಡ. ರಾಯಚೂರಿನಿಂದ ಉದ್ಭವಿಸಿದ ಅತ್ಯುತ್ತಮ ಸೆಲ್ಫ್ ಮೇಡ್ ಆಟಗಾರ. ಹೆಚ್ಚಿನ ಪ್ರತಿಭೆ ಇಲ್ಲದೆ ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ಕ್ರಿಕೆಟ್ ಜಗತ್ತಿನಲ್ಲಿ ಮೇಲೇರಿದ ಅಸಾಧಾರಣ ಶ್ರಮಜೀವಿ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿರುವ ಗೌಡರಿಗೆ ೩೫ ವರ್ಷ ವಯಸ್ಸು.

೯೦ ರ ದಶಕದಲ್ಲಿ ದಕ್ಷಿಣ ವಲಯದ ತಂಡಗಳ ನಡುವೆ ೨೩ ವರ್ಷದೊಳಗಿನವರಿಗಾಗಿ ಪಿ.ರಾಮಚಂದ್ರ ರಾವ್ ಟ್ರೋಫಿ ಪಂದ್ಯಾಟ ನಡೆಯುತ್ತಿತ್ತು. ೯೨-೯೩, ೯೩-೯೪, ಮತ್ತು ೯೪-೯೫ ಈ ೩ ಋತುಗಳಲ್ಲೂ ಕರ್ನಾಟಕ ಯೆರೆ ಗೌಡರ ನೇತೃತ್ವದಲ್ಲಿ ಪಿ.ರಾಮಚಂದ್ರ ರಾವ್ ಟ್ರೋಫಿಯನ್ನು ಗೆದ್ದಿತ್ತು. ಪ್ರತಿ ಋತುವಿನಲ್ಲೂ ಯೆರೆ ಗೌಡ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಹಾಗೇನೇ ಪ್ರತೀ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆ ಶತಕದ ಆಧಾರದ ಮೇಲೆ ಆಯ್ಕೆಯಾಗುತ್ತಿದ್ದರು. ಬರೀ ಆಯ್ಕೆ ಆಗುತ್ತಿದ್ದರು ಅಷ್ಟೆ, ಆಡಲು ಅವಕಾಶ ಸಿಗುತ್ತಿರಲಿಲ್ಲ.

೯೨-೯೩ ಮತ್ತು ೯೩-೯೪ ಋತುಗಳಲ್ಲಿ ಆಯ್ಕೆಗಾರರು ಯೆರೆ ಗೌಡರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಕೊಡಲಿಲ್ಲ. ಪಾನೀಯ ಹೊರುವುದು, ಪೆವಿಲಿಯನ್ ನಿಂದ ಬ್ಯಾಟಿಂಗ್ ಮಾಡುತ್ತಿದ್ದವರಿಗೆ ಸಂದೇಶ ರವಾನಿಸುವುದು, ಇವಿಷ್ಟೇ ಈ ೨ ವರ್ಷಗಳಲ್ಲಿ ಗೌಡರು ಮಾಡಿದ್ದು. ಗೌಡರಿಗಿಂತ ಕಡಿಮೆ ಅರ್ಹತೆ ಹೊಂದಿದ್ದ ಇತರ ಆಟಗಾರರು ಕರ್ನಾಟಕವನ್ನು ಈ ಅವಧಿಯಲ್ಲಿ ಪ್ರತಿನಿಧಿಸಿದರು. ಅದಾಗಲೇ ಯೆರೆ ಬಹಳಷ್ಟು 'ಫ್ರಸ್ಟ್ರೇಟ್' ಆಗಿದ್ದರು.

೯೪-೯೫ ರ ಋತುವಿನಲ್ಲಿ ಮೊದಲ ೩ ಪಂದ್ಯಗಳಲ್ಲಿ ಅಂತಿಮ ಹನ್ನೊಂದರಲ್ಲಿ ಮತ್ತೆ ಗೌಡರಿಗೆ ಸ್ಥಾನವಿಲ್ಲ. ನಾಲ್ಕನೇ ಪಂದ್ಯ ಹೈದರಾಬಾದ್ ವಿರುದ್ಧ ಬಿಜಾಪುರದಲ್ಲಿತ್ತು. ಉತ್ತರ ಕರ್ನಾಟಕದವರಾದ ಯೆರೆ ಗೌಡರನ್ನು ಆ ಭಾಗದಲ್ಲೇ ನಡೆಯುವ ಪಂದ್ಯದಲ್ಲಿ ಅಂತೂ ಕೊನೆಗೆ ಆಡಿಸಲಾಯಿತು. ಆದರೆ ಯೆರೆ ಕೇವಲ ೧೬ ಓಟ ಗಳಿಸಿದರು. ನಂತರ ಪಲಕ್ಕಾಡ್ ನಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ ಮತ್ತೆ ವೈಫಲ್ಯ. ಗಳಿಸಿದ್ದು ೦ ಮತ್ತು ೩೭. ನಂತರ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ನಡೆದ ಕ್ವಾ.ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಯೆರೆ ಗಳಿಸಿದ್ದು ೨೪ ಓಟ. ಕರ್ನಾಟಕ ಗಳಿಸಿದ್ದೇ ೧೭೧ ಓಟ. ಸುನಿಲ್ ಜೋಶಿಯ ೭೮ ರ ನಂತರದ ಮೊತ್ತವೇ ಗೌಡರದ್ದು. ಇದನ್ನು ವೈಫಲ್ಯವೆಂದು ಪರಿಗಣಿಸಲಾಗದು. ಆದರೆ ಆಯ್ಕೆಗಾರರು ಎಂಬ ಹಾಸ್ಯಗಾರರಿಗೆ ಇದೆಲ್ಲಿ ತಿಳಿಯಬೇಕು. ದ್ವೀತಿಯ ಇನ್ನಿಂಗ್ಸ್ ನಲ್ಲಿ ಯೆರೆ ಗಳಿಸಿದ್ದು ಅಜೇಯ ೧೬ ಓಟಗಳು. ೩ ಪಂದ್ಯಗಳಲ್ಲಿ ೨೩.೨೫ ಸರಾಸರಿಯಲ್ಲಿ ೯೩ ಓಟಗಳು.

ಹುಡುಗನಲ್ಲಿ ಕ್ಷಮತೆ ಇದೆ, ಸ್ವಲ್ಪ ಪ್ರೋತ್ಸಾಹ, ಉತ್ತೇಜನ ನೀಡಿದರೆ ಕರ್ನಾಟಕಕ್ಕೆ ಉತ್ತಮ ಆಟಗಾರನೊಬ್ಬ ಯೆರೆ ಗೌಡರ ರೂಪದಲ್ಲಿ ಸಿಗುತ್ತಾನೆ ಎಂಬ ದೂರದೃಷ್ಟಿ ಯಾವುದೇ ಆಯ್ಕೆಗಾರನಿಗೆ ಇರದೇ ಇದ್ದದ್ದು ಕರ್ನಾಟಕದ ದುರಾದೃಷ್ಟ. ತಾನು ಉದ್ಯೋಗದಲ್ಲಿದ್ದ ಬೆಂಗಳೂರಿನ 'ವ್ಹೀಲ್ ಎಂಡ್ ಎಕ್ಸೆಲ್' ಸಂಸ್ಥೆ ಇಂಡಿಯನ್ ರೈಲ್ವೇಸ್ ಗೆ ಸೇರಿದ್ದರಿಂದ, ಯೆರೆ ರೈಲ್ವೇಸ್ ಪರವಾಗಿ ಆಡಲು ಅರ್ಹರಾಗಿದ್ದರು. ಆದರೂ ಕರ್ನಾಟಕವನ್ನು ಪ್ರತಿನಿಧಿಸಬೇಕು ಎಂಬ ಬಲವಾದ ಹಂಬಲದಿಂದ ೩ ವರ್ಷ ಕಾದರು. ಎಷ್ಟೇ ವೈಫಲ್ಯ ಕಂಡರೂ ಆಡುತ್ತಿದ್ದ ಇತರರು ಮತ್ತು ೨ ವೈಫಲ್ಯ ಕಂಡ ತನಗೆ ತೋರಿಸುತ್ತಿದ್ದ ನಿರ್ಲಕ್ಷ್ಯದಿಂದ ಕಡೆಗೆ ಬೇಸತ್ತು ೯೫-೯೬ ಋತುವಿನಲ್ಲಿ ರೈಲ್ವೇಸ್ ಪರವಾಗಿ ಆಡಿದರು. ೧೧ ವರ್ಷಗಳವರೆಗೆ ಸತತವಾಗಿ ರೈಲ್ವೇಸ್ ತಂಡವನ್ನು ಹೆಮ್ಮೆಯಿಂದ ಪ್ರತಿನಿಧಿಸಿದರು. ಆ ತಂಡದ ಬ್ಯಾಟಿಂಗ್ ಬೆನ್ನೆಲುಬು ಆಗಿದ್ದರು ನಮ್ಮ ಯೆರೆ ಗೌಡ.

ಯೆರೆ ಗೌಡ ಆಕರ್ಷಕ ಆಟಗಾರನಲ್ಲ. ನೆಲಕಚ್ಚಿ ನಿಂತು ನಿಧಾನವಾಗಿ ಹೆಚ್ಚಿನ ಅವಧಿಯವರೆಗೆ ಆಡುವುದು ಅವರ ಶೈಲಿ. ಅವರೊಬ್ಬ 'ಆಕ್ಯುಮಲೇಟರ್ ಆಫ್ ರನ್ಸ್'. ಅವರ ಬ್ಯಾಟಿಂಗ್ ಶೈಲಿಯಿಂದ ಪ್ರೇಕ್ಷಕರು ಬಿಡಿ, ಕ್ಷೇತ್ರರಕ್ಷಣೆ ಮಾಡುವವರು ಕೂಡಾ ನಿದ್ರಾ ದೇವಿಗೆ ಶರಣಾಗುತ್ತಾರೆ ಎಂಬ ಜೋಕ್ ಇದೆ. ಆದರೆ ಅದೇ ಯೆರೆ ಬ್ಯಾಟಿಂಗ್ ಶೈಲಿ. ಕ್ಷೇತ್ರರಕ್ಷಣೆಗಾರರನ್ನು ನಿದ್ರಾ ದೇವಿಯ ಮೋಹಕ್ಕೆ ಒಳಪಡಿಸಿದ ನಂತರ ಕೆಲವೊಂದು ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸುವುದು. ಈ ಆಕರ್ಷಕ ಹೊಡೆತಗಳಿಗೆ ಅವರು ಎಚ್ಚೆತ್ತ ಬಳಿಕ ಮತ್ತೆ ನಿಧಾನವಾಗಿ ಆಡುವುದು. ಹೀಗೆ ಸಾಗುತ್ತದೆ ಗೌಡರ ಆಟ.

ಕಳೆದ ೬ ವರ್ಷಗಳಲ್ಲಿ ರೈಲ್ವೇಸ್ ೩ ಬಾರಿ ರಣಜಿ ಟ್ರೋಫಿ ಫೈನಲ್ ತಲುಪಿದ್ದು ೨ ಬಾರಿ ಗೆದ್ದಿದೆ. ರೈಲ್ವೇಸ್ ತಂಡದ ಈ ಸಾಧನೆಗೆ ಯೆರೆ ಗೌಡರ ಕೊಡುಗೆ ಅಪಾರವಾದದ್ದು. ಗೌಡರಲ್ಲೊಂದು ಸ್ಕಿಲ್ ಇದೆ. ಅದೆಂದರೆ ಬಾಲಂಗೋಚಿಗಳನ್ನು ಒಂದೆಡೆ ನಿಲ್ಲಿಸಿ ಆಡಿಸುವುದು. ಈ ಸ್ಕಿಲ್ ಅತೀ ಕಡಿಮೆ ಆಟಗಾರರಿಗೆ ಇರುತ್ತೆ. ಬೇಗನೆ ೫-೬ ಹುದ್ದರಿಗಳು ಉರುಳಿದರೆ, ಬಾಲಂಗೋಚಿಗಳ ಸಹಾಯದಿಂದ ತಂಡವನ್ನು ಉತ್ತಮ ಮೊತ್ತದೆಡೆ ಕೊಂಡುಯ್ಯುವುದನ್ನು ರೈಲ್ವೇಸ್ ಪರವಾಗಿ ಗೌಡರು ಕಳೆದ ದಶಕದಲ್ಲಿ ಮಾಡುತ್ತಾ ಬಂದಿದ್ದಾರೆ.

೨೦೦೪-೦೫ ರ ರಣಜಿ ಫೈನಲ್ ಪಂದ್ಯ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ. ನಾಲ್ಕನೇ ದಿನದ ಭೋಜನ ವಿರಾಮದವರೆಗೆ ರೈಲ್ವೇಸ್ ತನ್ನ ಎರಡನೇ ಬಾರಿಯಲ್ಲಿ ೬ ಹುದ್ದರಿಗಳನ್ನು ಕಳಕೊಂಡು ಒಟ್ಟಾರೆ ಕೇವಲ ೨೮೨ ಓಟಗಳಿಂದ ಮುಂದಿತ್ತು. ಇನ್ನೂ ಒಂದುವರೆ ದಿನಗಳ ಆಟ ಉಳಿದಿತ್ತು. ಆಗ ತನ್ನ ಸ್ಕಿಲ್ ತೋರ್ಪಡಿಸಿದ ಯೆರೆ ಮರುದಿನದ ಚಹಾ ವಿರಾಮಕ್ಕಿಂತ ಒಂದು ತಾಸು ಮೊದಲವರೆಗೆ ನೆಲಕಚ್ಚಿ ನಿಂತು ಆಡಿದರು. ಕೊನೆಯ ಹುದ್ದರಿ ಉರುಳಿದಾಗ ತಂಡದ ಒಟ್ಟಾರೆ ಮುನ್ನಡೆ ೫೧೭ ಓಟಗಳಷ್ಟು ಆಗಿತ್ತು. ಯೆರೆ ಗಳಿಸಿದ್ದು ಅಜೇಯ ೧೩೮ ಓಟಗಳನ್ನು. ಕೊನೆಯ ೪ ಹುದ್ದರಿಗಳೊಂದಿಗೆ ಸೇರಿಸಿದ್ದು ೨೩೫ ಓಟಗಳನ್ನು. ಪಂಜಾಬ್ ಗೆಲ್ಲುವ ಚಾನ್ಸೇ ಇರಲಿಲ್ಲ. ಇಂತಹ ಅನೇಕ ಬಾರಿಗಳನ್ನು ಯೆರೆ ರೈಲ್ವೇಸ್ ಗೆ ಆಡಿದ್ದಾರೆ. ಕಳೆದ ದಶಕದಲ್ಲಿ ಕರ್ನಾಟಕ ಕಳಕೊಂಡ 'ಕ್ಲಾಸ್ ಒನ್' ಆಟಗಾರ ಯೆರೆ.

೧೯೯೯-೨೦೦೦ ಋತುವಿನ ಬಳಿಕ ಕರ್ನಾಟಕ ರಣಜಿ ಟ್ರೋಫಿಯಲ್ಲಿ ವಿಫಲವಾಗುತ್ತಾ ಇತ್ತು. ಆತ್ತ ರೈಲ್ವೇಸ್ ಪರವಾಗಿ ಯೆರೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹಳೆಯ ಗೆಳೆಯರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್, ಯೆರೆ ಮತ್ತೆ ಕರ್ನಾಟಕಕ್ಕಾಗಿ ಆಡಬೇಕು ಎಂದು ಮುಕ್ತವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. ಮಧ್ಯ ಕ್ರಮಾಂಕದಲ್ಲಿ ಒಬ್ಬ ಉತ್ತಮ ಆಟಗಾರನ ಕೊರತೆ ಕರ್ನಾಟಕಕ್ಕೆ ಇತ್ತು. ವೈಯುಕ್ತಿಕವಾಗಿ ತನ್ನ ಈ ಹಳೆ ಗೆಳೆಯರಿಬ್ಬರು ಕರ್ನಾಟಕಕ್ಕೆ ಆಡುವಂತೆ ಕೇಳಿಕೊಂಡಾಗ, ಯೆರೆ ನಯವಾಗಿ ನಿರಾಕರಿಸಿದ್ದರು.

ಕರ್ನಾಟಕಕ್ಕೆ ಆಡಬೇಕು ಎಂಬ ಹಂಬಲ ಮನದಾಳದಲ್ಲಿದ್ದರೂ, ಹೆಸರು ಮತ್ತು ಯಶಸ್ಸು ತಂದುಕೊಟ್ಟ ರೈಲ್ವೇಸ್ ನ್ನು ಒಮ್ಮೆಲೆ ಬಿಟ್ಟುಬಿಡಲು ಗೌಡರು ತಯಾರಿರಲಿಲ್ಲ. ಯೆರೆಯನ್ನು ಎಲ್ಲರು ಮೆಚ್ಚುವುದು ಅವರ ಇದೇ ಗುಣಕ್ಕಾಗಿ. ಆದರೂ ಶ್ರೀನಾಥ್ ಪಟ್ಟು ಬಿಡಲಿಲ್ಲ. ಮತ್ತೆ ಮತ್ತೆ ತನ್ನ ಗೆಳೆಯನನ್ನು ಕೇಳಿಕೊಂಡರು. ಯೆರೆ ೨೦೦೩ ರಿಂದ ನಿರಾಕರಿಸುತ್ತಲೇ ಇದ್ದರು, ಶ್ರೀನಾಥ್ ಕೇಳುತ್ತಲೇ ಇದ್ದರು. ಅಂತೂ ಕೊನೆಗೆ ೩ ವರ್ಷಗಳ ಪ್ರಯತ್ನದ ಬಳಿಕ ಈ ಋತುವಿನಲ್ಲಿ ಕರ್ನಾಟಕಕ್ಕಾಗಿ ಆಡಲು ಯೆರೆ ಗೌಡ ಒಪ್ಪಿದರು. ಈ ಬಾರಿ ನಿರಾಕರಿಸಲಾಗದಂತಹ 'ಆಫರ್' ಅವರಿಗೆ ಕೊಡಬೇಕು ಎಂದು ನಿರ್ಧರಿಸಿದ ಕೆ.ಎಸ್.ಸಿ.ಎ, ಕರ್ನಾಟಕದ ನಾಯಕತ್ವದ 'ಆಫರ್' ನ್ನು ಅವರ ಮುಂದಿರಿಸಿದಾಗ, ಮೊದಲೇ ಗೆಳೆಯರ ವಿನಂತಿಗಳಿಗೆ ಅರ್ಧ ಸೋತಿದ್ದ ಯೆರೆ ಸಂಪೂರ್ಣವಾಗಿ ಸೋತರು.

ಒಂದೆರಡು ಪಂದ್ಯಗಳಿಂದ ಒಬ್ಬ ಆಟಗಾರನ ಗುಣಮಟ್ಟವನ್ನು ಆಳೆಯಲಾಗದು. ಆಯ್ಕೆಗಾರರು ಎನಿಸಿದವರಿಗೆ ದೂರದೃಷ್ಟಿ, ಪ್ರತಿಭೆಯನ್ನು ಗುರುತಿಸುವ ಕಲೆ ಮತ್ತು ಆ ಪ್ರತಿಭೆಯನ್ನು ಪ್ರೋತ್ಸಾಹಿಸುವ ದೊಡ್ಡ ಗುಣ ಇರದಿದ್ದರೆ ಏನಾಗುತ್ತದೆ ಎಂಬುದಕ್ಕೆ ಯೆರೆ ಗೌಡ ಉತ್ತಮ ಉದಾಹರಣೆ. ಕರ್ನಾಟಕಾಸ್ ಲಾಸ್ ಇನ್ ಲಾಸ್ಟ್ ಟೆನ್ ಇಯರ್ಸ್ ವಾಸ್ ರೈಲ್ವೇಸ್' ಗೈನ್.

ಈ ಋತುವಿನ ಮೊದಲ ಪಂದ್ಯದಲ್ಲಿ ಬರೋಡ ವಿರುದ್ಧ ಕರ್ನಾಟಕಕ್ಕೆ ಡಬಲ್ ಶಾಕ್. ಕರ್ನಾಟಕದ ಪರವಾಗಿ ಯೆರೆ ಗೌಡ ಆಡಲಿಕ್ಕೆ ರೈಲ್ವೇಸ್-ನ 'ನೋ ಒಬ್ಜೆಕ್ಷನ್ ಸರ್ಟಿಫಿಕೇಟ್', ಬಿ.ಸಿ.ಸಿ.ಐ ಗೆ ತಲುಪದಿದ್ದ ಕಾರಣ ಯೆರೆ ಮೊದಲ ಪಂದ್ಯವನ್ನು ಆಡಲಾಗಲಿಲ್ಲ. ಕರ್ನಾಟಕ ಈ ಪಂದ್ಯವನ್ನು ಹೀನಾಯವಾಗಿ ಸೋತಿತು. ನಂತರದ ಪಂದ್ಯಗಳಲ್ಲಿ ಆಂಧ್ರದ ವಿರುದ್ಧ ಸ್ವಲ್ಪ ಮೈ ಮರೆತದ್ದನ್ನು ಬಿಟ್ಟರೆ ನಮ್ಮ ಹುಡುಗರು ಗೌಡರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಗೌಡರು ಕೂಡಾ ಎರಡು ಸಮಯೋಚಿತ ಬಾರಿಗಳೊಂದಿಗೆ ಉತ್ತಮ ಆಟವನ್ನು  ಪ್ರದರ್ಶಿಸಿರುವವರಲ್ಲದೆ ಈಗಷ್ಟೆ ಕರ್ನಾಟಕದ ಪರವಾಗಿ ತನ್ನ ಪ್ರಥಮ ಶತಕವನ್ನೂ ದಾಖಲಿಸಿದ್ದಾರೆ.

ವೆಲ್ ಕಮ್ ಬ್ಯಾಕ್ ಯೆರೆ ಗೌಡ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಪ್ರ: ಯೆರೆ ಗೌಡ ಇದು ಕಾಕತಾಳೀಯವೇ

Sunil Jayaprakash's picture

ಅರೆ ರಾಜೇಶ್ ನಾಯ್ಕರವರೆ, ಅದೇನು ಕಾಕತಾಳೀಯ ಅಂತೀರಿ, ನೀವು ಇಲ್ಲಿ ಕರ್ನಾಟಕ ಕ್ರಿಕೆಟ್ - ೩ ಅಂತ ಯೆರೆ ಗೌಡರ ಬಗ್ಗೆ ಬರೆದಿದ್ದೀರಿ. ಸರಿಯಾದ ಹೆಸರು ತಿಳಿಯದ ನಾನು "ಔಟಾಗದೇ ಉಳಿದ ಯರ್ರೇ ಗೌಡ" ಅಂತ ಅವರ ಹೆಸರಿನಲ್ಲಿ ಟಿಪ್ಪಣಿ ಸೇರಿಸಿದ್ದೇನೆ.

ಗೌಡರು ರೈಲ್ವೇಸ್ ಪರ ಆಡಿದ್ದು ತಿಳಿದಿತ್ತು. ಆದರೆ ಅವರ ಇಷ್ಟೊಂದು ವಿಷಯ ತಿಳಿದಿರಲಿಲ್ಲ. ಸವಿಯೊದಗು.

rajeshnaik111 wrote:
ಅದೆಂದರೆ ಬಾಲಂಗೋಚಿಗಳನ್ನು ಒಂದೆಡೆ ನಿಲ್ಲಿಸಿ ಆಡಿಸುವುದು.

ಅಂದ ಹಾಗೆ, ಈ ಮಾತು ಅಕ್ಷರಶಃ ನಿಜ, ಸೌರಾಷ್ಟ್ರ ವಿರುದ್ಧ ಇಂದು ಅವರು ಔಟಾಗದ ೧೭೧ ರನ್ನುಗಳನ್ನು ಗಳಿಸಿದರು.

ಜೊತೆಯಾಟಗಳನ್ನು ನೋಡಿ.

ವಿಕೇಟು ಜೊತೆಗಾರ ರನ್ನುಗಳು ಹೆಚ್ಚು ಮಾತು

೫ ತಿಲಕ್ ನಾಯ್ಡು ೬೯ ನಮ್ಮ ವಿಕೆಟ್ ಕೀಪರ್
೬ ಬಿ. ಅಖಿಲ್ ೩೭ ವೇಗದ ಬೌಲರ್
೮ ಭಟ್ಕಳ್ ೬೪ ಮೊದಲ ರಣಜಿ ಪಂದ್ಯ
೧೦ ಯು.ಬಿ.ಪಟೇಲ ೧೧೨ ----------------

rajeshnaik111 wrote:
ಅವರ ಬ್ಯಾಟಿಂಗ್ ಶೈಲಿಯಿಂದ ಪ್ರೇಕ್ಷಕರು ಬಿಡಿ, ಕ್ಷೇತ್ರರಕ್ಷಣೆ ಮಾಡುವವರು ಕೂಡಾ ನಿದ್ರಾ ದೇವಿಗೆ ಶರಣಾಗುತ್ತಾರೆ ಎಂಬ ಜೋಕ್ ಇದೆ.

ಇದಂತು ನಿಜ ಬಿಡಿ. ಅವರು ೧೭೧ ಗಳಿಸಲು ತೆಗೆದುಕೊಂಡದ್ದು ೩೩೬ ಎಸೆತಗಳನ್ನು. ಒಟ್ಟಾರೆ ೬ ಘಂಟೆಗಳಿಗೂ ಹೆಚ್ಚು ಕಾಲ ಕ್ರೀಸಿನಲ್ಲಿದ್ದರು.

ಭಲೇ ಗೌಡ್ರೇ....... ತಲೆದೂಗಿದೆ, ನಿಜಕ್ಕೂ ಹೆಮ್ಮೆಯೆನಿಸಿತು. ರಾಜೇಶ್ ನಾಯ್ಕ ಅವರೇ, ನಿಮಗೆ ಮತ್ತೊಮ್ಮೆ ಸವಿಯೊದಗು ಕಣ್ರೀ, ಇಂತಹ ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕೆ.

Re: ಕರ್ನಾಟಕ ಕ್ರಿಕೆಟ್ - ೩

H.S.R.Raghavendra Rao's picture

ಖಂಡಿತವಾಗಿಯೂ ಯೆರೇಗೌಡರು `Poor Man's Dravid' ಎಂಬ ಬಿರುದಿಗೆ ಅರ್ಹರು. ಅವರನ್ನು ಆಡಿಸದೆ ಇದ್ದಿದ್ದು ಕರ್ನಾಟಕದ ಕ್ರಿಕೆಟ್ ನ ರಾಜಕಾರಣಕ್ಕೆ ಒಳ್ಳೆಯ ಉದಾಹರಣೆಗೆ. ಅತ್ಯುತ್ತಮ ಆಟಗಾರರು ಅಧಿಕಾರಕ್ಕೆ ಬಂದರ, ಎಲ್ಲವೂ ಸರಿಹೋಗುವುದಿಲ್ಲ ಎನ್ನುವುದಕ್ಕೆ ಸರಿಯಾದ ನಿದರ್ಶನ ಬ್ರಿಜೇಶ್ ಪಟೇಲ್. ಬಿನ್ನಿ. ಪಟೇಲ್ ತಮ್ಮ ತಮ್ಮ ಮಕ್ಕಳನ್ನು ಪ್ರೊಮೋಟ್ ಮಾಡುವ ಧಂದೆಗೆ ಇಳಿದಿದ್ದು ನಾಚಿಕೆಗೇಡು.

H.S.Raghavendra Rao

Re: ಕರ್ನಾಟಕ ಕ್ರಿಕೆಟ್ - ೩

ಶಿವ's picture

ನಿಮ್ಮ ಕರ್ನಾಟಕೆ ಕ್ರಿಕೆಟಿನ ಬಗ್ಗೆ ಬರೆದ ಲೇಖನಗಳನ್ನು ಓದುತ್ತಿದ್ದೇನೆ. ಎಷ್ಟೊಂಡು ವಿಷಯಗಳು ಗೊತ್ತಾಯಿತು..ಧನ್ಯವಾದಗಳು..