ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ
ಕರ್ನಾಟಕದ ೨೦೦೬-೦೭ ಋತುವಿನ ರಣಜಿ ಅಭಿಯಾನ ಸೆಮಿಫೈನಲ್ ಹಂತದಲ್ಲಿ ಮುಕ್ತಾಯ ಕಂಡಿದೆ. ೭ ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಕರ್ನಾಟಕ ಅಲ್ಲೇ ಮುಗ್ಗರಿಸಿದೆ. ೧೯೯೯-೨೦೦೦ ದಲ್ಲಿ ವಿ.ವಿ.ಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಸೆಮಿಫೈನಲ್ ನಲ್ಲಿ ತಡೆಹಿಡಿದರೆ ಈಗ ೨೧ರ ಹರೆಯದ ಭಾರತ ಕಿರಿಯರ ತಂಡಕ್ಕೆ ಆಡಿರುವ ಯುವ ಪ್ರತಿಭಾವಂತ ಆಟಗಾರ ಮನೋಜ್ ತಿವಾರಿ ಅದೇ ಕೆಲಸ ಮಾಡಿದ್ದಾರೆ.
ಮೂರುವರೆ ದಿನಗಳ ಕಾಲ ಸತತವಾಗಿ ಹೋರಾಡಿದ ಬಳಿಕ ನಮ್ಮ ಹುಡುಗರಲ್ಲಿ ನಾಲ್ಕನೇ ದಿನ ಹೋರಾಡಲು ಶಕ್ತಿಯೇ ಉಳಿದಿರಲಿಲ್ಲ ಎಂದು ಕಾಣುತ್ತೆ. ಆದರೂ ಪ್ರಥಮ ಬಾರಿಯಲ್ಲಿ ೮೯ಕ್ಕೆ ಕುಸಿದು ನಂತರ ಉತ್ತಮ ಹೋರಾಟ ನಡೆಸಿ ಬಂಗಾಲಕ್ಕೆ ಸ್ವಲ್ಪವಾದರೂ ಬೆವರು ಇಳಿಸಿದ್ದು ನಿಜಕ್ಕೂ ಪ್ರಶಂಸನೀಯ. ಹೋರಾಡಿ ಸೋಲುವುದು ಹೋರಾಡದೆ ಸೋಲುವುದಕ್ಕಿಂತ ಎಷ್ಟೋ ಪಟ್ಟು ಮೇಲು.
ಈ ಋತುವಿನಲ್ಲಿ ಯುವ ಆಟಗಾರರದ್ದೇ ಕಾರುಬಾರು. ರಾಬಿನ್ ಉತ್ತಪ್ಪ ಓಟಗಳನ್ನು ಸೂರೆಗೈದು ರಾಷ್ಟ್ರೀಯ ತಂಡಕ್ಕೆ ಮತ್ತೆ ಆಯ್ಕೆಯಾದರು. ಈ ಋತುವಿನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಗರಬಡಿದವರಂತೆ ಆಡುತ್ತಿದ್ದ ಭರತ್ ಚಿಪ್ಲಿ ಕೊನೆಗೂ ಒಂದು ಉತ್ತಮ ಬಾರಿಯನ್ನು ಆಡಿದರು. ಅವರಿಂದ ಬಹಳ ನಿರೀಕ್ಷೆಯಿದೆ. ಬ್ಯಾರಿಂಗ್ಟನ್ ಸೆಮಿಫೈನಲ್ ನಲ್ಲಿ ಗಳಿಸಿದ ಶತಕಾರ್ಧದಿಂದ ಮುಂದಿನ ಋತುವಿನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದು. ಆದರೆ ಮುಂದಿನ ಋತುವಿನಲ್ಲಿ ಅವರು ಈ ಪ್ರಸಕ್ತ ಋತುವಿನಲ್ಲಿ ಆಡಿದಂತೆ ಆಡಿದರೆ ಗೇಟ್ ಪಾಸ್ ಸಿಗುವ ಎಲ್ಲಾ ಸಂಭವಗಳಿವೆ. ಚಂದ್ರಶೇಖರ್ ರಘು ಕರ್ನಾಟಕದ 'ಪ್ಲೇಯರ್ ಆಫ್ ದಿ ಸೀಸನ್'. ಈ ಹಿಂದಿನ ೩ ಋತುಗಳಲ್ಲಿ ಒಂದೆರಡು ಪಂದ್ಯ ಆಡಿ ವಿಫಲರಾಗುತ್ತಿದ್ದ ರಘು ಈ ಬಾರಿ ಕರ್ನಾಟಕದ ಬ್ಯಾಟಿಂಗ್ ಆಧಾರವಾಗಿ ಪ್ರಶಂಸನೀಯ ನಿರ್ವಹಣೆ ತೋರಿದ್ದಾರೆ. ಪವನ್ ಉತ್ತಮ ಪ್ರತಿಭೆ. ಮುಂದಿನ ಋತುವಿನಲ್ಲಿ ಉತ್ತಮ ನಿರ್ವಹಣೆ ಇವರಿಂದ ಎದುರುನೋಡಬಹುದು. ದೀಪಕ್ ಚೌಗುಲೆ ಸಿಕ್ಕ ಅವಕಾಶಗಳನ್ನು ಸದುಪಯೋಗಗೊಳಿಸುವಲ್ಲಿ ವಿಫಲರಾದರು. ತಿಲಕ್ ನಾಯ್ಡು ಅಂತೂ ಕೊನೆಗೆ ತಮ್ಮ ನಿದ್ರಾಸನದಿಂದ ಎಚ್ಚೆತ್ತು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೇವರಾಜ್ ಪಾಟೀಲ್ ರಣಜಿ ತಂಡಕ್ಕೆ ಸತತವಾಗಿ ೨ನೇ ಋತುವಿನಲ್ಲೂ ಆಯ್ಕೆಯಾಗಿದ್ದು, ಈ ಬಾರಿ ಉತ್ತಮ ಪ್ರದರ್ಶನ ನೀಡದಿದ್ದರೆ ಕಷ್ಟವಿದೆ ಎಂಬುದನ್ನು ಅರಿತು ತಿಲಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಯೆರೆ ಗೌಡರ ಬ್ಯಾಟಿಂಗ್ ಮತ್ತು ನಾಯಕತ್ವದ ಬಗ್ಗೆ ತಕರಾರೇ ಇಲ್ಲ. ಮುಂದಿನ ಋತುವಿನಲ್ಲೂ ಅವರು ಆಡಿದರೆ ಕರ್ನಾಟಕಕ್ಕೆ ಒಳ್ಳೆದು. ಯುವ ಆಟಗಾರರ ನಡುವೆ ಒಬ್ಬ ಅನುಭವಿಯ ಅವಶ್ಯಕತೆ ಇರುತ್ತೆ.
ಬೌಲಿಂಗ್ ವಿಭಾಗದಲ್ಲಿ ಅಯ್ಯಪ್ಪ ಮೊದಲ ಪಂದ್ಯದ ಬಳಿಕ ಗಾಯಗೊಂಡು ಹೊರಗೆ ಉಳಿದದ್ದು ಕರ್ನಾಟಕದ ದುರಾದೃಷ್ಟ. ಅಖಿಲ್ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಧನಂಜಯ ತನ್ನ ಚೊಚ್ಚಲ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಸುನಿಲ್ ಜೋಶಿಗೆ ಇರುವ ಅನುಭವಕ್ಕೆ ಹೋಲಿಸಿದರೆ ಅವರ ಪ್ರದರ್ಶನ ಸಾಧಾರಣವಾಗಿತ್ತು. ಬ್ಯಾಟಿಂಗ್ ನಲ್ಲಂತೂ ಅವರು ಹಾಜರಿ ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಸ್ವಲ್ಪವಾದರೂ ರನ್ನುಗಳನ್ನು ಸುನಿಲ್ ಗಳಿಸಿದಿದ್ದರೆ ಕರ್ನಾಟಕಕ್ಕೆ ಬಹಳ ಪ್ರಯೋಜನವಾಗಿತ್ತಿತ್ತು. ರಾಜು ಭಟ್ಕಳ್ ಮಲ್ಲೇಶ್ವರಮ್ ಜಿಮ್ಖಾನ ಪರವಾಗಿ ಆರಂಭಿಕ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುವ ದಾಂಡಿಗ. ಉಪಯುಕ್ತ ಮಧ್ಯಮ ವೇಗದ ಎಸೆಗಾರನೂ ಹೌದು. ಆಡಿದ ೨ ಪಂದ್ಯಗಳಲ್ಲಿ ಚೆನ್ನಾಗಿಯೇ ನಿರ್ವಹಣೆ ತೋರಿದ್ದಾರೆ. ಕೆ.ಪಿ.ಅಪ್ಪಣ್ಣ ಕರ್ನಾಟಕದ 'ಬೌಲರ್ ಆಫ್ ದಿ ಸೀಸನ್'. ೨೧ ಹುದ್ದರಿಗಳನ್ನು ತನ್ನ ಚೊಚ್ಚಲ ಋತುವಿನಲ್ಲೇ ಗಳಿಸಿದ್ದು ೧೮ರ ಹರೆಯದ ಅಪ್ಪಣ್ಣನ ಸಾಧನೆ. ಆದರೆ ವಿನಯ್ ಕುಮಾರ್ ಪ್ರಮುಖ ಪಂದ್ಯಗಳಲ್ಲಿ ನಿರಾಸೆಗೊಳಿಸಿದರು. ತಮಗಿದ್ದ ಅನುಭವ ಮತ್ತು ಪ್ರತಿಭೆಯಿಂದ ಅವರು ಇನ್ನಷ್ಟು ಉತ್ತಮ ನಿರ್ವಹಣೆ ತೋರಬಹುದಾಗಿತ್ತು.
ಏನಿದ್ದರೂ ಈ ಋತುವಿನಲ್ಲಿ ಕರ್ನಾಟಕ ಉತ್ತಮ ನಿರ್ವಹಣೆಯನ್ನೇ ತೋರಿದೆ. ಮತ್ತೆ ನವಂಬರ್ ವರೆಗೆ ಕಾದು ಮುಂದಿನ ಋತುವಿನಲ್ಲಿ ಮತ್ತೆ ಕ್ರಿಕೆಟ್ ಸುದ್ದಿಗಳನ್ನು ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳೋಣ.

- rajeshnaik111 ರವರ ಬ್ಲಾಗ್
- Login or register to post comments
- 1364 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ
ನೆನ್ನೆ ನಾವು ಕೆಲವು ನೆಂಟರಿಷ್ಟರು ತಲಕಾವೇರಿಗೆ ಹೋಗಿದ್ದೆವು. ಎಲ್ಲಾದರು ಸಿಗ್ನಲ್ ಸಿಕ್ಕಿದರೆ ಸ್ಕೋರು ಕೇಳೋಣ ಅಂದರೆ, ಹಾಳಾದ್ದು ರಿಲಯನ್ಸ್ ಎಲ್ಲಿಯೂ ನೆಟ್ವರ್ಕೇ ಇಲ್ಲ.
ಸರಿ ಅಂತ ಕೊನೆಗೆ ೪:೦೦ ಘಂಟೆಗೆ ಸ್ಕೋರು ವಿಚಾರಿಸಿದಾಗ, ಅಲ್ಲಿ ರಾಬಿನ್ ಉತ್ತಪ್ಪ ಭರ್ಜರಿ ಆಟವಾಡಿ ಔಟಾಗಿದ್ದಾರೆ ಎಂದು ತಿಳಿಯಿತು. ಇಲ್ಲಿ ರಣಜಿ ಅರಿಕೆಗಳನ್ನು ಕೇಳಿದಾಗ, ಕರ್ನಾಟಕದವರು ಸೋತ ವಿಚಾರ ತಿಳಿಯಿತು. ಏನು ಮಾಡುವುದು ಮೊದಲ ಇನ್ನಿಂಗ್ಸಿನಲ್ಲಿ ನೆಲಕಚ್ಚಿ ಆಡುವ ಧೈರ್ಯ ಮಾಡಿದ್ದರೆ, ಇನ್ನೂ ಉತ್ತಮ ಹೋರಾಟ ನಿರೀಕ್ಷಿಸಬಹುದಿತ್ತು. ಅಥವಾ ನೀವಂದು ಹೇಳಿದಂತೆ, ನಾಲ್ಕು ವೇಗದ ಬೌಲರುಗಳನ್ನು ಇಟ್ಟುಕೊಂಡು, ಬೌಲಿಂಗ್ ಆಯ್ಕೆ ಮಾಡದಿದ್ದುದು "ಎರರ್ ಇನ್ ಜಡ್ಜ್ಮೆಂಟ್"ಏ ಸೋಲಿಗೆ ಕಾರಣವಿರಬೇಕು.
ಹಾಗೆಯೇ, ನೀವೆಂದಂತೆ,
ಇನ್ನೇನಿದ್ದರೂ, ಮುಂಬೈ ಮತ್ತು ಬಂಗಾಳದ ನಡುವೆ ರಣಜಿಯ ಫೈನಲ್. ನೋಡೋಣ, ಅದೂ ಕೂಡ ಕುತೂಹಲಕಾರಿಯಾಗಿದೆ.
ಹೌದು, ರಣಜಿಯಲ್ಲಿ ಒಂದು ದಿನದ ಪಂದ್ಯಾವಳಿಗಳನ್ನು ಆಡಿಸುತ್ತಿದ್ದಾರೆ, ಅಲ್ಲವೇ ?
Re: ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ
ರಣಜಿ ಏಕದಿನದ ಪಂದ್ಯಗಳನ್ನು ಕಳೆದ ೪ ಋತುವಿನಿಂದ ಆಡಿಸಲಾಗುತ್ತಿದೆ. ಅದಕ್ಕೂ ಮೊದಲು ದಕ್ಷಿಣ ವಲಯದಲ್ಲಿ ಸುಬ್ಬಯ್ಯ ಪಿಳ್ಳೆ ಟ್ರೋಫಿಗಾಗಿ ವಲಯದ ೬ ತಂಡಗಳ ನದುವೆ ಏಕದಿನದ ಪಂದ್ಯಾಟ ನಡೆಯುತ್ತಿತ್ತು. ಉಳಿದ ವಲಯಗಳಲ್ಲಿ ಒಂದೆರಡು ಕಡೆ ಮಾತ್ರ ಏಕದಿನದ ಪಂದ್ಯಗಳು ನಡೆಯುತ್ತಿದ್ದವು. ಅದರೆ ದಕ್ಷಿಣ ವಲಯದಲ್ಲಿ ೯೦ರ ದಶಕದ ಆರಂಭದಿಂದಲೂ ಸುಬ್ಬಯ್ಯ ಪಿಳ್ಳೆ ಟ್ರೋಫಿಗಾಗಿ ವಲಯದ ೬ ತಂಡಗಳು ಸೆಣೆಸುತ್ತಿದ್ದವು. ಆಯಾ ತಂಡಗಳ ನಡುವಿನ ರಣಜಿ ಪಂದ್ಯ ಮುಗಿದ ಎರಡನೇ ದಿನದಂದು ಏಕದಿನದ ಪಂದ್ಯವನ್ನು ಆಡಲಾಗುತ್ತಿತ್ತು.
೨೦೦೨-೦೩ ರಿಂದ ರಾಷ್ಟ್ರೀಯ ಮಟ್ಟದಲ್ಲಿ ರಣಜಿ ಟ್ರೋಫಿ ಏಕದಿನ ಪಂದ್ಯಗಳನ್ನು ಜಾರಿಗೊಳಿಸಲು ನಿರ್ಧರಿಸಲಾಯಿತು. ಅಯಾ ವಲಯದ ಪ್ರಥಮ ೨ ತಂಡಗಳು ನಾಕ್ ಔಟ್ ಹಂತಕ್ಕೆ ತೇರ್ಗಡೆ ಹೊಂದುತ್ತವೆ. ಕಳೆದ ಋತುವಿನಲ್ಲಿ ಕರ್ನಾಟಕ ವಲಯದ ಎಲ್ಲಾ ಪಂದ್ಯಗಳನ್ನು ಗೆದ್ದು ದಕ್ಷಿಣ ವಲಯದ ಪ್ರಥಮ ಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿತ್ತು. ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾನವನ್ನು ಸೋಲಿಸಿದ ಬಳಿಕ ಕ್ವಾರ್ಟರ್ ಪೈನಲ್ ನಲ್ಲಿ ಉತ್ತರ ಪ್ರದೇಶಕ್ಕೆ ಶರಣಾಯಿತು.
ಪ್ರಸಕ್ತ ಋತುವಿನ ದಕ್ಷಿಣ ವಲಯದ ರಣಜಿ ಏಕದಿನದ ಲೀಗ್ ಪಂದ್ಯಗಳು ಫೆಬ್ರವರಿ ೧೦ ರಂದು ಅನಂತಪುರದಲ್ಲಿ ಆರಂಭವಾಗಲಿವೆ. ಎಲ್ಲಾ ಪಂದ್ಯಗಳೂ ಅಲ್ಲೇ ನಡೆಯಲಿವೆ.
Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ
ರಣಜಿ ಏಕದಿನ ಟ್ರೋಫಿಗಾಗಿ ದಕ್ಷಿಣ ವಲಯದ ಲೀಗ್ ಪಂದ್ಯಗಳು ಫೆಬ್ರವರಿ ೧೦ ರಿಂದ ಅನಂತಪುರದಲ್ಲಿ ನಡೆಯಲಿವೆ. ಎಲ್ಲಾ ೧೫ ಪಂದ್ಯಗಳೂ ಅನಂತಪುರದಲ್ಲೇ ನಡೆಯಲಿವೆ. ಕರ್ನಾಟಕದ ಪಂದ್ಯಗಳು ಈ ಕೆಳಗೆ ತಿಳಿಸಿರುವ ದಿನಾಂಕಗಳಂದು ನಡೆಯಲಿವೆ.
ಫೆಬ್ರವರಿ ೧೦ - ಕೇರಳದ ವಿರುದ್ಧ
ಫೆಬ್ರವರಿ ೧೧ - ಗೋವಾದ ವಿರುದ್ಧ
ಫೆಬ್ರವರಿ ೧೩ - ತೆಮಿಳುನಾಡಿನ ವಿರುದ್ಧ
ಫೆಬ್ರವರಿ ೧೪ - ಆಂಧ್ರ ಪ್ರದೇಶದ ವಿರುದ್ಧ
ಫೆಬ್ರವರಿ ೧೬ - ಹೈದರಾಬಾದ್ ವಿರುದ್ಧ
ಯೆರೆ ಗೌಡ ಆಡುವುದಿದ್ದಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದನ್ನು ನೋಡಬೇಕು. ವೇಗವಾಗಿ ಓಟಗಳನ್ನು ಗಳಿಸುವುದು ಅವರ ಆಟವಲ್ಲ. ಹಿಂದೆ ರೈಲ್ವೇಸ್ ಪರವಾಗಿ ಆಡುತ್ತಿರುವಾಗ ಹೆಚ್ಚಿನ ಏಕದಿನ ಪಂದ್ಯಗಳಿಂದ ಅವರನ್ನು ಹೊರಗಿಡಲಾಗುತ್ತಿತ್ತು. ಕಳೆದ ಋತುವಿನಲ್ಲಿ ರೈಲ್ವೇಸ್ ಫೈನಲ್ ತಲುಪಿ ಸೋತಿತ್ತು. ೮ ಪಂದ್ಯಗಳಲ್ಲಿ ಗೌಡರನ್ನು ಕೇವಲ ೩ ಪಂದ್ಯಗಳಲ್ಲಿ ಆಡಿಸಲಾಗಿತ್ತು.
ಕರ್ನಾಟಕದ ಪರವಾಗಿ ಕಳೆದ ಋತುವಿನಲ್ಲಿ ಚಂದ್ರಶೇಖರ್ ರಘು ೨ ಶತಕಗಳೊಂದಿಗೆ ೫೭.೦೦ರ ಸರಾಸರಿಯಲ್ಲಿ ೩೪೨ ಓಟಗಳನ್ನು ಕಲೆ ಹಾಕಿದ್ದರಲ್ಲದೇ ಬೌಲಿಂಗ್ ನಲ್ಲಿ ೨೭.೧೬ ಸರಾಸರಿಯಲ್ಲಿ ೬ ಹುದ್ದರಿಗಳನ್ನು ಕೆಡವಿ 'ಟಾಪ್ ಪರ್-ಫಾರ್ಮರ್' ಆಗಿದ್ದರು. ಇದೇ ಪ್ರದರ್ಶನದ ಆಧಾರದಲ್ಲಿ ಚ್ಯಾಲೆಂಜರ್ ಟ್ರೋಫಿಗೆ ಆಯ್ಕೆಯಾಗಿದ್ದ ರಘುನನ್ನು ಒಂದೇ ಪಂದ್ಯದಲ್ಲಿ ಆಡಿಸದೇ ಇದ್ದದ್ದು ಅವರ ಬ್ಯಾಡ್ ಲಕ್.
ಉಳಿದ ಆಟಗಾರರ ಪೈಕಿ ಬ್ಯಾಟಿಂಗ್ ನಲ್ಲಿ ತಿಲಕ್ ನಾಯ್ಡು ೪೨.೩೩ ರ ಸರಾಸರಿಯಲ್ಲಿ ೧೨೭, ರಾಬಿನ್ ಉತ್ತಪ್ಪ ೩೮.೧೬ ಸರಾಸರಿಯಲ್ಲಿ ೨೨೯, ಅಖಿಲ್ ೩೦.೬೬ ಸರಾಸರಿಯಲ್ಲಿ ೧೮೪ ಓಟಗಳನ್ನು ಗಳಿಸಿದ್ದರು.
ಬೌಲಿಂಗ್ ನಲ್ಲಿ ವಿನಯ್ ಕುಮಾರ್ ೧೭.೩೩ ಸರಾಸರಿಯಲ್ಲಿ ೧೨ ಹುದ್ದರಿಗಳನ್ನು, ಸುನಿಲ್ ಜೋಶಿ ೧೮.೭೨ ಸರಾಸರಿಯಲ್ಲಿ ೧೧, ಅಯ್ಯಪ್ಪ ೨೨.೪೫ ಸರಾಸರಿಯಲ್ಲಿ ೧೧ ಮತ್ತು ಅಖಿಲ್ ೧೯.೦೦ ಸರಾಸರಿಯಲ್ಲಿ ೮ ಹುದ್ದರಿಗಳನ್ನು ಕೆಡವಿದ್ದರು.
ಗಮನಿಸಬೇಕಾದ ವಿಷಯವೆಂದರೆ ಸ್ಟುವರ್ಟ್ ಬಿನ್ನಿಯನ್ನು ಕರ್ನಾಟಕ ಆಡಿದ ಎಲ್ಲಾ ೭ ಪಂದ್ಯಗಳಲ್ಲೂ ಆಡಿಸಲಾಯಿತು. ೨೮.೫೦ ಸರಾಸರಿಯಲ್ಲಿ ೧೧೪ ಓಟಗಳು ಮತ್ತು ೪೨.೬೬ ಸರಾಸರಿಯಲ್ಲಿ ೩ ಹುದ್ದರಿಗಳು ಆತನ ಸಾಧನೆ. ಅಂತೆಯೇ ಉದಿತ್ ಪಟೇಲ್ ಆಡಿದ ೨ ಪಂದ್ಯಗಳಲ್ಲಿ ೭ ಓವರ್ ಎಸೆದು ಯಾವುದೇ ಮೇಡನ್ ಗಳಿಲ್ಲದೆ ೪೯ ಓಟಗಳನ್ನು ನೀಡಿ ಯಾವುದೇ ಹುದ್ದರಿ ಕೆಡವಲಿಲ್ಲ. ಈ ಸಲವೂ ಈ ಇಬ್ಬರನ್ನು ಆಡಿಸಲಾಗುತ್ತದೆಯೋ? ವೆಂಕಿ ಮತ್ತು ರಘುರಾಮ್ ಭಟ್ ಹಾಗಾಗಲು ಆಸ್ಪದ ನೀಡಲಾರರು.
ತಂಡಕ್ಕೆ ಶುಭ ಹಾರೈಕೆಗಳು.
Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ
ರಣಜಿ ಏಕದಿನ ಟ್ರೋಫಿಯಲ್ಲಿ ದಕ್ಷಿಣ ವಲಯ ಲೀಗ್ ನ ತನ್ನ ಪ್ರಥಮ ೨ ಪಂದ್ಯಗಳಲ್ಲಿ ಕರ್ನಾಟಕ, ಕೇರಳ ಹಾಗೂ ಗೋವಾ ವಿರುದ್ಧ ವಿಜಯ ದಾಖಲಿಸಿದೆ. ಸಂಕ್ಷಿಪ್ತ ಸ್ಕೋರುಗಳು ಹೀಗಿವೆ.
ಕೇರಳ ವಿರುದ್ದ ೯ ಹುದ್ದರಿಗಳಿಂದ ಗೆಲುವು: ಕೇರಳ ೪೭.೨ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೨೦೬ ಓಟಗಳು (ಅಖಿಲ್ ೩೧ಕ್ಕೆ ೪ ಹುದ್ದರಿಗಳು ಮತ್ತು ಧನಂಜಯ ೫೦ಕ್ಕೆ ೨ ಹುದ್ದರಿಗಳು). ಕರ್ನಾಟಕ ೩೫.೧ ಓವರ್ ಗಳಲ್ಲಿ ೧ ಹುದ್ದರಿ ನಷ್ಟಕ್ಕೆ ೨೦೯ ಓಟಗಳು (ಗೌರವ್ ಧೀಮನ್ ೯೪ ಅಜೇಯ ಮತ್ತು ರೋಲಂಡ್ ಬ್ಯಾರಿಂಗ್ಟನ್ ೧೦೧ ಅಜೇಯ).
ಗೋವಾ ವಿರುದ್ಧ ೮ ಹುದ್ದರಿಗಳಿಂದ ಗೆಲುವು: ಗೋವಾ ೪೯.೩ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೨೨೪ ಓಟಗಳು (ವಿನಯ್ ಕುಮಾರ್ ೩೮ಕ್ಕೆ ೩ ಹುದ್ದರಿಗಳು, ಅಖಿಲ್ ೩೬ಕ್ಕೆ ೩ ಹುದ್ದರಿಗಳು ಮತ್ತು ಸುನಿಲ್ ಜೋಶಿ ೪೧ಕ್ಕೆ ೩ ಹುದ್ದರಿಗಳು). ಕರ್ನಾಟಕ ೩೨.೪ ಓವರ್ ಗಳಲ್ಲಿ ೨ ಹುದ್ದರಿಗಳ ನಷ್ಟಕ್ಕೆ ೨೨೬ ಓಟಗಳು (ಭರತ್ ಚಿಪ್ಲಿ ೧೦೨ ಅಜೇಯ ಮತು ರೋಲಂಡ್ ಬ್ಯಾರಿಂಗ್ಟನ್ ೧೦೨ ಅಜೇಯ).
ಮುಂದಿನ ಪಂದ್ಯ ಬಲಶಾಲಿ ತಮಿಳು ನಾಡು ವಿರುದ್ಧ. ಇದೇ ರೀತಿ ಆಟ ಕರ್ನಾಟಕ ಪ್ರದರ್ಶಿಸಲಿ.
ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ
ರಣಜಿ ಏಕದಿನ ಟ್ರೋಫಿಗಾಗಿ ಸಿಕಂದರಾಬಾದ್ ನಲ್ಲಿ ನಡೆದ ತನ್ನ ೩ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡನ್ನು ೫ ಹುದ್ದರಿಗಳಿಂದ ಮಣಿಸಿ ಸತತ ೩ನೇ ವಿಜಯವನ್ನು ದಾಖಲಿಸಿ, ೧೪ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನುಳಿದ ೨ ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಸಾಕು, ಕರ್ನಾಟಕ ನಾಕ್ ಔಟ್ ಹಂತ ಪ್ರವೇಶಿಸಿದಂತೆ. ತಮಿಳುನಾಡಿನ ವಿರುದ್ಧದ ಪಂದ್ಯದ ಸಂಕ್ಷಿಪ್ತ ಸ್ಕೋರ್ ವಿವರ:
ತಮಿಳುನಾಡು ೪೮.೨ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೧೯೪ ಓಟಗಳು (ವಿನಯ್ ಕುಮಾರ್ ೩೩ಕ್ಕೆ ೩ ಹುದ್ದರಿಗಳು, ಅಖಿಲ್ ೨೩ಕ್ಕೆ ೧ ಹುದ್ದರಿ, ಸುನಿಲ್ ಜೋಶಿ ೪೭ಕ್ಕೆ ೧ ಹುದ್ದರಿ ಮತ್ತು ಭರತ್ ಚಿಪ್ಲಿ ೧೨ಕ್ಕೆ ೧ ಹುದ್ದರಿ).
ಕರ್ನಾಟಕ ೪೪ ಓವರ್ ಗಳಲ್ಲಿ ೫ ಹುದ್ದರಿಗಳ ನಷ್ಟಕ್ಕೆ ೧೯೫ ಓಟಗಳು (ಭರತ್ ಚಿಪ್ಲಿ ೨೭, ಗೌರವ್ ಧೀಮನ್ ೯, ರೋಲಂಡ್ ಬ್ಯಾರಿಂಗ್ಟನ್ ೪, ಚಂದ್ರಶೇಖರ್ ರಘು ೬೪ ಅಜೇಯ, ದೀಪಕ್ ಚೌಗುಲೆ ೩೪, ತಿಲಕ್ ನಾಯ್ಡು ೨೮ ಮತ್ತು ಯೆರೆ ಗೌಡ ೧೪ ಅಜೇಯ)
ಕರ್ನಾಟಕಕ್ಕೆ ೫ ಹುದ್ದರಿಗಳಿಂದ ಜಯ.
ಮುಂದಿನ ಪಂದ್ಯ ನಾಳೆ (ಫೆಬ್ರವರಿ ೧೪) ಆಂಧ್ರಪ್ರದೇಶದ ವಿರುದ್ಧ.
ಕರ್ನಾಟಕಕ್ಕೆ ಸತತ ೪ನೇ ಜಯ
ರಣಜಿ ಏಕದಿನ ಟ್ರೋಫಿಯ ಪಂದ್ಯಾಟಗಳಲ್ಲಿ ದಕ್ಷಿಣ ವಲಯ ಲೀಗ್ ಪಂದ್ಯಗಳಲ್ಲಿ ಕರ್ನಾಟಕ ಇಂದು ಆಂಧ್ರಪ್ರದೇಶವನ್ನು ಸೋಲಿಸಿ ತನ್ನ ಸತತ ನಾಲ್ಕನೇ ವಿಜಯವನ್ನು ದಾಖಲಿಸಿದೆ. ಇದರಿಂದ ಕರ್ನಾಟಕ ನಾಕ್ ಔಟ್ ಹಂತ ತಲುಪುವುದು ಖಚಿತಗೊಂಡಿದೆ. ನಾಕ್ ಔಟ್ ಹಂತದಲ್ಲಿ ಎದುರಾಳಿ ಯಾರು ಎಂಬುದನ್ನು ಕಾದು ನೋಡಬೇಕು. ಅಂಧ್ರಪ್ರದೇಶದ ವಿರುದ್ಧದ ಪಂದ್ಯದ ಸಂಕ್ಷಿಪ್ತ ಸ್ಕೋರು ವಿವರ:
ಕರ್ನಾಟಕ ೫೦ ಓವರುಗಳಲ್ಲಿ ೮ ಹುದ್ದರಿಗಳ ನಷ್ಟಕ್ಕೆ ೨೪೪ ಓಟಗಳು (ಭರತ್ ಚಿಪ್ಲಿ ೦, ಗೌರವ್ ಧೀಮನ್ ೫, ರೋಲಂಡ್ ಬ್ಯಾರಿಂಗ್ಟನ್ ೯೭, ಚಂದ್ರಶೇಖರ್ ರಘು ೧೦, ದೀಪಕ್ ಚೌಗುಲೆ ೮೩, ತಿಲಕ್ ನಾಯ್ಡು ೧, ಅಖಿಲ್ ೫, ವಿನಯ್ ಕುಮಾರ್ ೦, ಯೆರೆ ಗೌಡ ೮ ಅಜೇಯ ಮತ್ತು ಸುನಿಲ್ ಜೋಶಿ ೧೫ ಅಜೇಯ).
ಆಂಧ್ರಪ್ರದೇಶ ೪೧.೩ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ೧೬೦ ಓಟಗಳು (ವಿನಯ್ ಕುಮಾರ್ ೨೩ಕ್ಕೆ ೨ ಹುದ್ದರಿಗಳು, ಧನಂಜಯ ೪೯ಕ್ಕೆ ೨ ಹುದ್ದರಿಗಳು, ಸುನಿಲ್ ಜೋಶಿ ೩೮ಕ್ಕೆ ೩ ಹುದ್ದರಿಗಳು ಮತ್ತು ಚಂದ್ರಶೇಖರ್ ರಘು ೩೪ಕ್ಕೆ ೩ ಹುದ್ದರಿಗಳು).
ಕರ್ನಾಟಕಕ್ಕೆ ೮೪ ಓಟಗಳಿಂದ ಜಯ.
ಕರ್ನಾಟಕದ ಮುಂದಿನ ಪಂದ್ಯ ಹೈದರಾಬಾದ್ ವಿರುದ್ಧ ಫೆಬ್ರವರಿ ೧೬ ರಂದು.
ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ
ರಣಜಿ ಏಕದಿನ ಟ್ರೋಫಿಗಾಗಿ ನಡೆಯುತ್ತಿರುವ ದಕ್ಷಿಣ ವಲಯ ಲೀಗ್ ಪಂದ್ಯಗಳಲ್ಲಿ ಕರ್ನಾಟಕ ಇಂದು ಹೈದರಾಬಾದ್ ತಂಡವನ್ನು ಸೋಲಿಸಿ ತನ್ನ ಸತತ ೫ನೇ ಗೆಲುವನ್ನು ದಾಖಲಿಸಿ ದಕ್ಷಿಣ ವಲಯದಲ್ಲಿ ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೆ (ನಾಕ್ ಔಟ್) ತೇರ್ಗಡೆ ಹೊಂದಿದೆ. ದ್ವಿತೀಯ ಸ್ಥಾನಿಯಾಗಿ ತಮಿಳುನಾಡು ತೇರ್ಗಡೆ ಹೊಂದಿದೆ. ಹೈದರಾಬಾದ್ ವಿರುದ್ಧದ ಪಂದ್ಯದ ಸಂಕ್ಷಿಪ್ತ ಸ್ಕೋರು ವಿವರ:
ಹೈದರಾಬಾದ್ ೫೦ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ೧೮೯ (ವಿನಯ್ ಕುಮಾರ್ ೩೯ಕ್ಕೆ ೧ ಹುದ್ದರಿ, ಧನಂಜಯ ೫೩ಕ್ಕೆ ೨ ಹುದ್ದರಿಗಳು, ರಾಜು ಭಟ್ಕಳ್ ೨೦ಕ್ಕೆ ಯಾವುದೇ ಹುದ್ದರಿಯಿಲ್ಲ, ಸುನಿಲ್ ಜೋಶಿ ೧೮ಕ್ಕೆ ೨ ಹುದ್ದರಿಗಳು, ಚಂದ್ರಶೇಖರ್ ರಘು ೩೨ಕ್ಕೆ ೨ ಹುದ್ದರಿಗಳು ಮತ್ತು ಭರತ್ ಚಿಪ್ಲಿ ೧೭ಕ್ಕೆ ೧ ಹುದ್ದರಿ).
ಕರ್ನಾಟಕ ೪೬.೫ ಓವರುಗಳಲ್ಲಿ ೪ ಹುದ್ದರಿಗಳ ನಷ್ಟಕ್ಕೆ ೧೯೦ ಓಟಗಳು (ಭರತ್ ಚಿಪ್ಲಿ ೪೫, ಕೆ.ಬಿ.ಪವನ್ ೨, ರೋಲಂಡ್ ಬ್ಯಾರಿಂಗ್ಟನ್ ೩೬, ಚಂದ್ರಶೇಖರ್ ರಘು ೪೫, ದೀಪಕ್ ಚೌಗುಲೆ ೪೪ ಅಜೇಯ ಮತ್ತು ದೇವರಾಜ್ ಪಾಟೀಲ್ ೧೧ ಅಜೇಯ)
ಕರ್ನಾಟಕಕ್ಕೆ ೬ ಹುದ್ದರಿಗಳಿಂದ ಜಯ.
ನಾಕ್ ಔಟ್ ಹಂತದ ಮೊದಲ ಪಂದ್ಯದ ದಿನಾಂಕ ಮತ್ತು ಎದುರಾಳಿ ಇನ್ನೂ ನಿರ್ಧಾರವಾಗಿಲ್ಲ. ನೋಡೋಣ ರಾಜ್ಯ ತಂಡದ ವಿಜಯದ ಓಟ ಎಲ್ಲಿಯವರೆಗೆ ಮುನ್ನಡೆಯುತ್ತದೆ ಎಂದು.....
ಸೇಡು ತೀರಿಸುವ ಅವಕಾಶ
ರಣಜಿ ಟ್ರೋಫಿ (೪ - ೫ ದಿನಗಳ ಪಂದ್ಯ) ಸೆಮಿಫೈನಲ್ ನಲ್ಲಿ ಬಂಗಾಲ, ಕರ್ನಾಟಕವನ್ನು ಸೋಲಿಸಿದ್ದು ಎಲ್ಲರಿಗೂ ತಿಳಿದಿರುವುದು. ಈ ಸೋಲಿಗೆ ಸೇಡು ತೀರಿಸುವ ಅವಕಾಶವೊಂದು ತಾನಾಗಿಯೇ ಕರ್ನಾಟಕವನ್ನು ಹುಡುಕಿಕೊಂಡು ಬಂದಿದೆ. ರಣಜಿ ಏಕದಿನ ಟ್ರೋಫಿಯಲ್ಲಿ ಕರ್ನಾಟಕ ದಕ್ಷಿಣ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದಂತೆ, ಬಂಗಾಲ ಪೂರ್ವ ವಲಯದ ದ್ವಿತೀಯ ಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದ್ದು, ಈಗ ಮಾರ್ಚ್ ೧೩ ರಂದು ಧರ್ಮಶಾಲಾದಲ್ಲಿ ನಡೆಯಲಿರುವ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಕರ್ನಾಟಕ ಮತ್ತೆ ಬಂಗಾಲವನ್ನು ಎದುರಿಸಲಿದೆ. ನಮ್ಮ ಆಟಗಾರರು ಈ ಅವಕಾಶದ ಸದುಪಯೋಗ ಮಾಡಿಕೊಳ್ಳಲಿ ಎಂಬ ಶುಭ ಹಾರೈಕೆ - ೧೫ ದಿನ ಮುಂಚಿತವಾಗಿಯೇ.
ಮಾರ್ಚ್ ೧೨ರಂದು ಕನ್ನಡಿಗ ಅರುಣ್ ಕುಮಾರ್ ನೇತೃತ್ವದ ಪೂರ್ವ ವಲಯದ ಅಗ್ರಸ್ಥಾನಿ ಅಸ್ಸಾಮ್, ದಕ್ಷಿಣ ವಲಯದ ದ್ವಿತೀಯ ಸ್ಥಾನಿ ತಮಿಳುನಾಡನ್ನು ಧರ್ಮಶಾಲಾದಲ್ಲೇ ಎದುರಿಸಲಿದೆ. ಅರುಣ್ ಮತ್ತು ಆನಂದ್ ಕಟ್ಟಿಗೆ ಶುಭ ಹಾರೈಕೆಗಳು.