ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
ಸ್ನೇಹಿತರೆ,
ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆಂದರೆ ಅತಿಶಯವಾಗುವುದಿಲ್ಲ. ಈಗಿನ ಜನಾಂಗದವರು ನಮ್ಮ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕು. ಸಂಪದ ಮತ್ತು ಇತ್ತೀಚೆಗೆ ನಡೆದಂತಹ ವಿಕಿಪೀಡಿಯ ಸಮಾರಂಭಗಳು ಈ ಪ್ರಯತ್ನಕ್ಕೆ ವೇದಿಕೆಯಾಗಬಹುದು. ದಯವಿಟ್ಟು ತಮ್ಮ ಅಮೂಲ್ಯವಾದ ಸಲಹೆಗಳನ್ನು ಈ ಬ್ಲಾಗ್ನಲ್ಲಿ ಮಂಡಿಸಬೇಕಾಗಿ ವಿನಂತಿ.
ನಾನು ನೋಡಿದಂತೆ ಸುಮಾರು ಕನ್ನಡಿಗರ ಮನೆಗಳಲ್ಲಿ ಇಂಗ್ಲೀಶಿನ ಗೀಳು ಹತ್ತಿ, ಕನ್ನಡ ಪುಸ್ತಕಗಳನ್ನು ಓದುವುದೇ ಕಡಿಮೆ ಆಗುತ್ತಿದೆ. ಹೀಗೆ ಹೇಳಿದ ಮಾತ್ರಕ್ಕೆ ಎಲ್ಲಾ ಕನ್ನಡಿಗರ ಮನೆಗಳಲ್ಲೂ ಹೀಗೇ ಇರುತ್ತೆ ಅಂತ ಅಲ್ಲ. ನಾನು ನೋಡಿರುವ ಸುಮಾರು ಮನೆಗಳಲ್ಲಿ ಈ ಪರಿಸ್ಥಿತಿ ಉಂಟು. ನಾವು ಮಾಡಬಹುದಾದ ಅಳಿಲು ಸೇವೆ ಏನೆಂದರೆ, ನಮ್ಮ ಸಾಹಿತಿಗಳ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ, ಅವರ ಜೀವನ ಚರಿತ್ರೆಯನ್ನು ಸಂಪದದಲ್ಲಿ ಪ್ರಕಟಿಸುವುದು ಮತ್ತು ಅವರ ಕೃತಿಗಳ ಬಗ್ಗೆ ಸಂಕ್ಷಿಪ್ತವಾಗಿ ಉಲ್ಲೇಖಿಸುವುದು.
ಕೆಲವು ತಿಂಗಳ ಹಿಂದೆ ನಾನು 'ಬಳ್ಳಾರಿ ಬೀಚಿ' ಎಂದೇ ಪ್ರಸಿದ್ಧರಾಗಿರುವ ಪ್ರಾಣೇಶ್ ಅವರ ಒಂದು ಭಾಷಣವನ್ನು ಕೇಳುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು 'ಏನು ನೀನು ಕೇಳುತ್ತಿರೋದು' ಅಂತ ಪ್ರಶ್ನೆ ಮಾಡಿದಾಗ ಪ್ರಾಣೇಶ್ ಮತ್ತು ಬೀಚಿಯವರ ಬಗ್ಗೆ ಹೇಳಿದೆ. ತಕ್ಷಣ ಬಂದ ಮತ್ತೊಂದು ಪ್ಪ್ರಶ್ನೆಯಿಂದ ನನಗೆ ನಿಜವಾಗ್ಲೂ ಆಶ್ಚರ್ಯವಾಯಿತು. ನನ್ನ ಸ್ನೇಹಿತ ಕೇಳಿದ ಪ್ರಶ್ನೆ: ಬೀಚಿ ಅಂದ್ರೆ ಯಾರು? ನನಗೆ ಭಾರಿ ಸಿಟ್ಟು ಬಂದ್ರೂ ಅದನ್ನ ತೋರಿಸ್ಕೊಳ್ಳದೆ ಬೀಚಿಯವರ ಬಗ್ಗೆ ಆತನಿಗೆ ಹೇಳಿದೆ.
ಅವತ್ನಿಂದ ನಮ್ಮ ಜನರಲ್ಲಿ ನಮ್ಮ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಹಂಬಲ ಶುರುವಾಗಿದೆ. ಈ ಒಂದು ಜವಾಬ್ದಾರಿ ನಮ್ಮದಾಗಿದೆ. ಈಗ ನಾವು ಏನಾದ್ರೂ ಪ್ರಯತ್ನ ಮಾಡಿದ್ರೆ ಮಾತ್ರ ನಮ್ಮ ಮುಂದಿನ ಪೀಳಿಗೆಯವರಿಗೆ ನಮ್ಮ ಭಾಷೆ, ನಮ್ಮ ಸಾಹಿತ್ಯ ಮತ್ತು ನಮ್ಮ ಸಾಹಿತಿಗಳ ಕೃತಿಗಳ ಬಗ್ಗೆ ಅರಿವು ಮತ್ತು ಒಲವು ಮೂಡಿಸಲು ಸಾಧ್ಯ.
ಇಂತಿ,
ರಮೇಶ್.

- ramesh1069 ರವರ ಬ್ಲಾಗ್
- Login or register to post comments
- 1062 hits
- Email this blog




RSS:
ಪ್ರತಿಕ್ರಿಯೆಗಳು
ವಿಕಿಪೀಡಿಯದಲ್ಲಿ ಬರೆಯಿರಿ!
ಇದಕ್ಕೆ ಸೂಕ್ತ ಪರಿಹಾರವೆಂದರೆ ವಿಕಿಪೀಡಿಯದಲ್ಲಿ ಬರೆಯುವುದು. ನಿಮಗೆ ತಿಳಿದ ಸಾಹಿತಿಗಳ ಬಗ್ಗೆ, ಸಾಹಿತ್ಯದ ಬಗ್ಗೆ ವಿಕಿಪೀಡಿಯದಲ್ಲಿ ಮಾಹಿತಿ ಶೇಖರಿಸಿಡಿ. ಮುಂದಿನ ಪೀಳಿಗೆಗೆ ಅದು ಅಮೂಲ್ಯವಾದ ಮಾಹಿತಿ ಭಂಡಾರವಾಗಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು?
ನಮ್ಮ ಮನೆಗೆ ಒಬ್ಬರು ಬಂದಿದ್ದರು. ಅವರೂ ಕನ್ನಡಿಗರೇ . ನಾನು ಸಿ ಅಶ್ವಥ್ ಮತ್ತು ರತ್ನಮಾಲಾ ಅವರ ಸುಮಧುರ ಭಾವ ಗೀತೆಗಳನ್ನು ನನ್ನ ಮ್ಯೂಸಿಕ್ ಸಿಸ್ಟಂ ಅಲ್ಲಿ ಹಾಕಿದ್ದೆ . ' ಯಾರು ಹಾಡಿದ್ದು ? ಚೆನ್ನಾಗಿದೆ? ' ಎಂದು ಕೇಳಿದರು . ' ಆಗ ' ಸಿ. ಅಶ್ವತ್ಥ ಅವರದು ' ಎಂದು ಹೇಳಿದರೆ ' ಕೇಳಿದರು; 'ಸಿ. ಅಶ್ವತ್ಥ ? ಯಾರದು?' ಈಗ ಕನ್ನಡದಲ್ಲಿ ಸ್ಟಾರ್ ಸ್ಟೇಟಸ್ ಅವರಿಗಿದೆ , ಕನ್ನಡವೇ ಸತ್ಯ ಕಾರ್ಯಕ್ರಮಕ್ಕೆ ಲಕ್ಷ ಜನ ಸೇರಿದ್ದರು ' ಎಂದಷ್ಟೆ ಹೇಳಿ ಬೇಸರಪಟ್ಟುಕೊಂಡೆ.
ನಾವು ಕನ್ನಡವನ್ನೇ ಓದಬೇಕು , ಕನ್ನಡ ಟಿವಿ ನೋಡಬೇಕು . ಮಕ್ಕಳಿಗೆ ಕನ್ನಡ ಹಾಡುಗಳನ್ನು ಕಲಿಸಬೇಕು ( ಈಗಿನ ಎಷ್ಟು ಮಕ್ಕಳಿಗೆ ಪುಣ್ಯಕೋಟಿ ಗೋವಿನ ಹಾಡು ಗೊತ್ತಿದೆ? ) ಚಂದಮಾಮಾ , ಅಮರಚಿತ್ರ ಕಥೆಯಂತಹ ಕನ್ನಡ ಪುಸ್ತಕಗಳನ್ನು ಪರಿಚಯಿಸಬೇಕು. ಅಂತರ್ಜಾಲದಲ್ಲಿ ಕನ್ನಡ ಬಳಸಬೇಕು , ಬೆಳೆಸಬೇಕು. ಕನ್ನಡ ಪತ್ರಿಕೆ , ಕನ್ನಡ ಪುಸ್ತಕ ಓದಬೇಕು. ಮುಖ್ಯ ನಾವು ಸಾಧ್ಯವಾದಷ್ಟು ಕನ್ನಡ ಬಳಸಬೇಕು.
-- ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಾವೇನು ಮಾಡಬಹುದು
ಕುವೆಂಪು ಯಾರು? ಬೇಂದ್ರೆ ಯಾರು? ಎಂದು ಕೇಳಿದರೂ ಆಶ್ಚರ್ಯ ಪಡದಂಥ ಸ್ಥಿತಿಗೆ ನಾವು ತಲುಪಿದ್ದೇವೆ. ನಮ್ಮ ಇತಿಹಾಸದಿಂದ ದೂರವಾಗುವ ಒಂದು ಪ್ರಕ್ರಿಯೆಯನ್ನು ನಾವು ಬಹಳ ಹಿಂದೆಯೇ ಆರಂಭಿಸಿದ್ದೇವೆ. ಸಾಮಾನ್ಯವಾಗಿ ನಾವೆಲ್ಲರೂ ರಾಮಾಯಣ, ಮಹಾಭಾರತಗಳನ್ನು ಓದಿ ತಿಳಿದುಕೊಳ್ಳುತ್ತಿರಲಿಲ್ಲ. ಟಿ.ವಿ ನೋಡಿಯೂ ಇವುಗಳನ್ನು ತಿಳಿದುಕೊಳ್ಳಬೇಕಿರಲಿಲ್ಲ. ಹಿರಿಯರು ಹೇಳುವ ಕತೆ, ನಾವೇ ನೋಡಿದ ಯಕ್ಷಗಾನ, ಬಯಲಾಟಗಳ ಮೂಲಕ ನಮ್ಮ ರಾಮಾಯಣ, ಮಹಾಭಾರತಗಳ ಜ್ಞಾನ ಬೆಳೆಯುತ್ತಿತ್ತು. ಇದರ ಜತೆಗೆ ಚಂದಮಾಮ, ಅಮರಚಿತ್ರ ಕತೆಗಳು ಈ ಜ್ಞಾನವನ್ನು ಹೆಚ್ಚು ಸ್ಪಷ್ಟಗೊಳಿಸುತ್ತಿದ್ದವು. ಪ್ರೌಢರಾದ ಮೇಲೆ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ತಿಳಿದುಕೊಳ್ಳಬೇಕು ಎಂದಾದಾಗ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದೆವು. ಈಗ ನಮ್ಮ ಮಕ್ಕಳಿಗೇ ನಾವು ಇಂಗ್ಲಿಷ್ ನಲ್ಲಿ ಬರೆದಿರುವ ರಾಮಾಯಣ, ಮಹಾಭಾರತದ ಕತೆಗಳನ್ನು ತಂದುಕೊಟ್ಟರೂ ಅವರು ಓದದಂಥ ಸ್ಥಿತಿ ಇದೆ. ನಮ್ಮ ಹಿರಿಯರು ನಮಗೆ ಪುರಾಣ, ಇತಿಹಾಸಗಳ ಬಗ್ಗೆ ಕಲಿಸಲು ಅನುಸರಿಸಿದ ತಂತ್ರಗಳನ್ನು ನಾವೇ ಮರೆತೇ ಬಿಟ್ಟಿದ್ದೇವೆ. ಅಥವಾ ಅದನ್ನು ಪಾಲಿಸುವಂಥ ವಾತಾವರಣ ನಮ್ಮ ಸುತ್ತ ಮುತ್ತ ಇಲ್ಲ.
ಕನ್ನಡದ ವಿಷಯವೂ ಅಷ್ಟೇ. ಮಗು ಹುಟ್ಟುತ್ತಲೇ ಅದನ್ನು ಡಾಕ್ಟರ್, ಇಂಜಿನಿಯರ್ ಅಥವಾ ಮ್ಯಾನೇಜರ್, ಸಿಇಓ ಮಾಡುವ ಧಾವಂತದಲ್ಲಿ ನಮಗೆ ಮಗು ಹಾವರ್ಡ್ ಬಿಸಿನೆಸ್ ರಿವ್ಯೂ ಓದಿದರೇ ಒಳ್ಳೆಯದು ಎನಿಸುತ್ತಿರುತ್ತದೆ. ಸಾಹಿತಿಗಳ ಮಾಹಿತಿಯನ್ನು ವಿಕಿಪೀಡಿಯಾದಲ್ಲಿ ಬರೆಯುವುದು ಮುಂತಾದ ಕೆಲಸಗಳ ಜತೆಗೇ ನಾವು ಈ ಜ್ಞಾನವನ್ನು ಪಡೆದುಕೊಂಡಂತೆ ನಮ್ಮ ಮಕ್ಕಳಿಗೂ ಇದನ್ನು ಒದಗಿಸಲು ಸಾಧ್ಯವೇ ಎಂಬುದರ ಬಗ್ಗೆ ಯೋಚಿಸಬೇಕು.
ಕನ್ನಡದ ಈಗಿನ ಕವಿಗಳು
ಈಗಿರುವ ಕನ್ನಡದ ಮೇರುಕವಿಗಳನ್ನು ಪಟ್ಟಿ ಮಾಡಲು ಹೊರಟರೆ, ನಮಗೆ ನಿರಾಶೆಯಾಗುವುದು. ಒಂದು ಕಾಲದಲ್ಲಿ ಕುವೆಂಪು, ಮಾಸ್ತಿ, ಬೇಂದ್ರೆ, ವಿನಾಯಕ, ಪುತಿನ, ಕಾರಂತ, ನರಸಿಂಹಸ್ವಾಮಿ ಮುಂತಾದ ಮಹಾಕವಿಗಳಿದ್ದರು. ಈಗ ಹೇಳಲು ಜೆಎಸ್ ಎಸ್, ಕಾರ್ನಾಡ್ ಮತ್ತು ಅನಂತ ಮೂರ್ತಿ ಮೂವರು ಮಾತ್ರ. ಇಲ್ಲವೆ ಈಗಿರುವ ಕನ್ನಡ ಬರಹಗಾರರ ಪರಿಚಯವೇ ನಮಗಿಲ್ಲ. ಇದಕ್ಕೆಲ್ಲ ಕಾರಣ, ಕನ್ನಡದ ಕೃತಿಗಳನ್ನೋದುವವರು ಕಡಮೆಯಾಗಿದ್ದಾರೆ. ಕನ್ನಡಿಗರಿಗೆ ಬೇಕಾದ ಕೃತಿಗಳು ಹೊರಬರುತ್ತಿಲ್ಲವೇನೋ?
ಅಥವಾ ನಾವೆಲ್ಲರೂ ಬೇರೆ ಭಾಷೆಯ ಸಾಹಿತ್ಯವನ್ನೆ ಹೆಚ್ಚೋದುವುದೇನೋ. ನನ್ನ ವಿಷಯದಲ್ಲಿದು ನಿಜವೆ. ನಾನು ಕನ್ನಡಕ್ಕಿಂತ ಸಂಸ್ಕೃತದ ಮತ್ತು ಇಂಗ್ಲೀಷಿನ ಕೃತಿಗಳನ್ನು ಹೆಚ್ಚೋದಿದ್ದೇನೆ.
ನನ್ನ ಗೆಳೆಯರೆಲ್ಲರೂ ಕೂಡ ಹಾಗೆ. ಯಾವುದೆ ಹೊಸ ಇಂಗ್ಲೀಷ್ ಕಾದಂಬರಿ ಬರಲಿ ಓದಿ ನಮಗೆ ಚೆನ್ನಾಗಿದೆ, ಇಲ್ಲವೆಂದು ಹೇಳುವರು. ಆದರೀ ರೀತಿ ಕನ್ನಡಕೃತಿಗಳ ಬಗ್ಗೆ ಮಾಡುವವರು ಬಹಳ ಕಡಮೆ.
ಕನ್ನಡಕೃತಿಗಳನ್ನೋದುವುದರ ಜೊತೆಗವು, ಚೆನ್ನಾಗಿದೆ, ಇಲ್ಲವೆಂದು ಬೇರೆಯವರಿಗೆ ಹೇಳಿದರೆ, ಕನ್ನಡಕೃತಿಗಳ ಪ್ರಚಾರ, ಪ್ರಸಾರಕ್ಕೊಳಿತೆಂದು ನನ್ನ ಭಾವನೆ.
ಇಂತಿ,
ಮಹೇಶ
ನಮ್ಮ ಮನೆಯಿಂದಲೇ ಶುರುಮಾಡೋಣ
ಕನ್ನಡವನ್ನೂ ಓದಿರಪ್ಪಾ ಎಂದು ಕೇಳಿಕೊಳ್ಳುತ್ತಾ ಬಂದ ನಮ್ಮವರ ತಾಳ್ಮೆ ಸ್ವಲ್ಪ ಅತಿಯೇ ಆಯಿತು; ಕನ್ನಡವನ್ನೇ ಓದಿ ಎನ್ನುವ ಕಾಲ ಬರಲೇ ಬೇಕಾಗಿದೆ. ಮೊದಲು ನಾವೆಲ್ಲರೂ ಮಾಡಬೇಕಾದ ಕೆಲಸ, ನನಗೆನಿಸುವಂತೆ:
೧. ನಾವು ಚೆನ್ನಾಗಿ ಸರಿಯಾದ ಕನ್ನಡವನ್ನು ಓದಿ, ಬರೆದು, ತಿಳಿದುಕೊಳ್ಳುವುದು.
೨. ನಮ್ಮ ಬಂಧು-ಮಿತ್ರರು, ಮಕ್ಕಳು, ಹಿರಿಯರೊಡನೆ ನಾಚಿಕೊಳ್ಳದೆ ಕನ್ನಡದಲ್ಲೇ ಮಾತನಾಡುವುದು.
೩. ಅದೇನೇ ಆಗಲಿ, ನಮ್ಮ ಹಾಗೂ ಬಂಧು-ಮಿತ್ರರ ಮಕ್ಕಳನ್ನು ಕನಿಷ್ಠಪಕ್ಷ ಪ್ರಾಥಮಿಕಶಾಲೆಯವರೆಗಾದರೂ ಕನ್ನಡ ಮಾಧ್ಯಮದಲ್ಲಿ ಓದಿಸುವುದು; ಓದಲು ಪ್ರೇರೇಪಿಸುವುದು.
೪. ಮನೆಯಲ್ಲಿಯೇ (ಮೇಲಿನ ಕೆಲಸ ಸಾಧ್ಯವೇ ಇಲ್ಲವಾದಾಗಲೂ, ಹೊರನಾಡಿನಲ್ಲಿದ್ದರೂ) ಸ್ವ-ಇಚ್ಛೆಯಿಂದ ಕನ್ನಡ ಕಲಿಸುವುದು, ಆಸಕ್ತಿ ಮೂಡಿಸುವುದು.
೫. ಕನ್ನಡದ ಕಾವ್ಯ-ನಾಟಕ-ಸಂಗೀತಗಳ ರಸಾಸ್ವಾದದ ಜೊತೆಗೆ, ಪ್ರಚಾರಮಾಡುತ್ತಾ, ಕನ್ನಡದ ಕೃಷಿಗೆ ನೇರವಾಗಿ, ಹಿನ್ನೆಲೆಯಲ್ಲಿ ಪ್ರೋತ್ಸಾಹ ನೀಡುವುದು.
೬. ಅಳಿದುಹೋಗುವಂತಿರುವ ಎಲ್ಲ ಕನ್ನಡತನದ ಪ್ರಕಾರಗಳನ್ನೂ(ಅದು ಅಮ್ಮನ ಆರತಿ ಹಾಡೇ ಇರಲಿ, ಅಜ್ಜನ ಒಗಟೇ ಇರಲಿ) ಲಿಖಿತರೂಪದಲ್ಲಿ, ದೃಶ್ಯ-ಶ್ರವಣ ಮಾಧ್ಯಮದಲ್ಲಿ ಹಿಡಿದಿಟ್ಟು ರಕ್ಷಿಸುವುದು.
ಮೊದಲು ನಾವು ಸಂಪದಿಗರೇ ನಮ್ಮ ಮನೆಯಿಂದಲೇ ಶುರುಮಾಡೋಣ; ಕನ್ನಡ ವಿಕಿಪೀಡಿಯಾ ಇದಕ್ಕೆ ಒಳ್ಳೆಯ ವೇದಿಕೆಯಾಗಲಿ.
ಕನ್ನಡಂ ಕತ್ತುರಿಯಲ್ತೆ !
ನಿಮ್ಮವ
ಬೆನಕ
ಕನ್ನಡ ಸಾಹಿತ್ಯದ ಬಗ್ಯೆ ಅರಿವು..........!
ಬೆನಕರ ಮಾತುಗಳು ಇಲ್ಲಿ ಬಹಳ ಪ್ರಸ್ತುತ. ನಾವೆಲ್ಲಾ ಇನ್ನೇನೂ ಮಾಡದಿದ್ದರೂ, ಕನ್ನಡದಲ್ಲಿಯೆ ಮಾತಾಡುವುದು ಒಂದು ಅತಿ ಮುಖ್ಯ ವಿಶಯ.ಕನ್ನಡದಲ್ಲೂ ಇಂತಹ ಸಂಪದ್ಭರಿತ ಸಾಹಿತ್ಯ ಇದೆ ಅನ್ನೋದನ್ನು ನಾವು ನಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡಲು ನಮಗೆ ಮೊದಲು ಸಾಹಿತ್ಯದ ಬಗ್ಯೆ ಗೊತ್ತಿರಬೇಕು. ನಂತರ ಕುವೆಂಪು ಹಾಗೂ ಬೇರೆಯವರ ಬಗ್ಯೆ ತಿಳುವಳಿಕೆ ಕೋಡೋಣ.....
ಇನ್ನು ಕುವೆಂಪು, ಮಾಸ್ತಿ ಮತ್ತು ಹಲವರ ಬಗ್ಯೆ ಅವರಿಗೆ ಗೊತ್ತಿಲ್ಲ ಎಂದರೆ ಬೇಸರ ಬೇಡ. ನಮ್ಮ ವಯೋ ಮಿತಿಯ ಜನರನ್ನೇ ತೆಗೆದುಕೊಳ್ಳಿ. ಬೆಂಗಳೂರಿನಲ್ಲೇ ಬಹಳ ಜನ ನಿಮಗೆ/ನಮಗೆ ಸಿಗುತ್ತಾರೆ. ಶ್ರೀಕಾಂತ್ ಪ್ರಕಾರ ಸಿ.ಅಶ್ವಥ್ ಬಗ್ಯೆ ಗೊತ್ತಿಲ್ಲ. ಇದು ನಿಜ. ಹಾಗಿದೆ ಪರಿಸ್ತಿತಿ ! ಮೊದಲು ನಮ್ಮ ಮಕ್ಕಳು ಇರುವುದು ೨೧ ನೇ ಶತಮಾನದ ಪ್ರವೇಶ ದ್ವಾರದಲ್ಲಿ.ಅವರು ನೋಡುತ್ತಿರುವ ವಿಶ್ವದ ದರ್ಶನವೇ ಬೇರೆ. ಅವರಿಗಿರುವ ಸಮಸ್ಯೆಗಳನ್ನು ನೋಡಿದರೆ ಅವು ತೀರಭಿನ್ನ. ಅವರನ್ನು ನಾವು ಕುವೆಂಪು ಬಗ್ಯೆ ಪ್ರಚೋದಿಸಲು ಸಾಧ್ಯವೇ ? ನೋಡಿ. ಅವರು ಸಮಕಾಲೀನ ಸಾಹಿತ್ಯ ಓದಲಿ. ಅವರು ಕನ್ನಡ ಮಾಧ್ಯಮ ತೆಗೆದುಕೊಂಡರೆ ಮಾತ್ರ ಸುಲಭ ! ನಾನು ನೋಡಿದಂತೆ ಡಾ.ರಾಜ್ ನಮಗೆ ದೇವರು ! (ಶತಮಾನದಲ್ಲಿ ಒಮ್ಮೆ ಅಂಥಹವರು ಹುಟ್ಟುತ್ತಾರೆ; ಇದು ನಮಗೆಲ್ಲಾ ಗೊತ್ತು !) ಆದರೆ ಉತ್ತರದ ಎಷ್ಟು ಜನರಿಗೆ ಅವರ ಬಗ್ಯೆ ಗೊತ್ತಿತ್ತು. ಅವರೆಲ್ಲಾ ತಿಳಿದದ್ದು ಹಿಂದೀ ರಾಜ್ ಕುಮಾರ್ ಬಗ್ಯೆ ! ಬಹುಶಃ ವೀರಪ್ಪನಿಂದ ರಾಜ್ ಬಗ್ಯೆ ಸ್ವಲ್ಪ ತಿಳಿಯಿತು- ಪ್ರಚಾರವಾಯಿತು ! ದೇವೇ ಗೌಡರ ಕಾಲದಲ್ಲಿ ಸಿಕ್ಕ 'ಫಾಲ್ಕೆ ಪುರಸ್ಕಾರ ದೊರೆತಮೇಲೆ ಸ್ವಲ್ಪ ವಾಸಿ. ಇದು ನಿಜ. ಇದನ್ನು ನಾವು ಮನೆಯಲ್ಲಿ ಬದಲಾಯಿಸುವ ಸಾಧ್ಯತೆಗಳಿವೆ !!
ಕನ್ನಡದ ಈಗಿನ ಕವಿಗಳು !
ಮಹೇಶ್,
ನಿಮ್ಮ ಪ್ರಕಾರ ಮೇರು ಕೃತಿಗಳು ಬರುತ್ತಿಲ್ಲ ನಿಜ. ಇದು ನಿಮ್ಮ ನಮ್ಮ ಅಭಿಪ್ರಾಯ. ಕೃತಿಗಳೂ ಹೆಚ್ಚು ಗುಣಮಟ್ಟದ್ದಿಲ್ಲ ಅನ್ನಿಸುವುದು ನಿಜ. ಆದರೆ ಒಂದು ಕಾಲಘಟ್ಟ ದಲ್ಲಿ ನಿಂತು ವೀಕ್ಷಿಸಿದಾಗ ಅದು ಬೇರೆಯವರನ್ನು ನೋಡಿ ನಿರ್ಧರಿಸುವ ಮಾತು ! ನಾನು ಚಿಕ್ಕವನಾಗಿದ್ದಾಗ, ಶ್ರೀ ಎ.ಆರ್.ಕೃಷ್ಣ ಶಾಸ್ತ್ರಿ ಗಳು, ಶಿವಮೂರ್ತಿ ಶಾಸ್ತ್ರಿಗಳು, ದೇವುಡು, ಹಿರಿಯಣ್ಣ, ರಾಧಾಕೃಷ್ಣನ್, ವೀ.ಸೀ. ಇತ್ಯಾದಿಗಳಿದ್ದರು. ಕುವೆಂಪುರವರೇ ಅವರ ಕಣ್ಣಿನಲ್ಲಿ ಮೇಲೇಳಲು ಬಹಳ ವರ್ಷ ಕಾಯಬೇಕಾಯಿತು. ನನಗೆ ಇನ್ನೂ ನೆನಪಿದೆ. ಡೀ.ವೀ.ಜಿ.ಕುವೆಂಪು ರವರನ್ನು, ಸಂಭೋಧಿಸುತ್ತಿದ್ದದ್ದು ! (ಪುಸ್ತಕದಲ್ಲಿ ಅವರ ಕವನಗಳನ್ನು ಓದಿ ಪ್ರರಿಕ್ರಿಯಿಸಿದ್ದು)
ಹೆಚ್.ಎಸ್.ವಿ. ಇದ್ದಾರೆ.ಇನ್ನೂ ಎಲ್.ಎಸ್.ಶೇಶಗಿರೆರಾಯರು ಬದುಕಿದ್ದಾರೆ. ದಿವಾಕರ್ ,ಪ್ರಕಾಶ್, ಅಹಮತ್ ತರಿಕೆರೆ , ಅಮೂರ,ನೇಮೀಚಂದ್ರ ಇನ್ನೂ ಬೇಕಾದಷ್ಟು ಜನ ಇದ್ದಾರೆ. (ಕೆಲವರು ಅಂಕಣಕಾರರು, ಆದರೆ ಅವರು ಸಮರ್ಥರು, ಶ್ರೇಷ್ಟ ಕೃತಿಗಳನ್ನು ಅವರಿಂದನಿರೀಕ್ಷಿಸಬಹುದು !)
ಆದರೆ ಅವರು ತೆಗೆದುಕೊಳ್ಳುವ ವಿಷಯಗಳು ಬೇರೆ ಅಷ್ಟೆ. ದಿವಂಗತರಾದ ಮೇರು ವ್ಯಕ್ತಿ ಗಳ ಬಗ್ಯೆ ಎಲ್ಲರೂ ಹೇಳುವುದೇ ಹಾಗೆ.ಕೆಲವೇ ವರ್ಷಗಳಲ್ಲಿ ಆ ಜಾಗವನ್ನು ಇನ್ನೊಬ್ಬರು ತುಂಬುತ್ತಾರೆ. ಆದರೆ ಅವರು ಖಂಡಿತ ಕುವೆಂಪು, ಪು.ತಿ.ನ, ಆಗದಿರಲಿ ! "ಅವರ್ಯಾರೋ, ಅವರೇ ಆಗಲಿ " ಎಂದು ಹಾರೈಸೋಣ !
'ಥಟ್ಟನೆ ಹೇಳಿ ಕಾರ್ಯಕ್ರಮ'ದಲ್ಲಿ (ಟೀ.ವಿ) ಅದೆಷ್ಟು ಹೊಸ ಪುಸ್ತಕ ಬಂದಿವೆ ಎಂದು ಊಹಿಸುವುದೂ ಕಶ್ಟ ! ಅವುಗಳ ಗುಣಮಟ್ಟ ನಿರ್ಧರಿಸುವರು ....!