" ಇವ ನಮ್ಮವ ಇವ ನಮ್ಮವನೆಂದೆಣಿಸಯ್ಯಾ"
"ಅರಿತೂ ಅರಿಯೆನೆಂದೆಂಬವರನೆಚ್ಚರಿಸಿ"
rameshbalaganchi ರವರ ಬ್ಲಾಗ್
"ಭಿಷ್ಟಿ ಪೊಡೇ ಟಪುರ್ ಟುಪುರ್"
June 3, 2008 - 10:13pm — rameshbalaganchiಮಳೆಯಿಲ್ಲದೆ ಮಳೆನೀರ ಹನಿಯ ಸದ್ದು.
ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು.
ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿದ್ಯೋ ಗೊತ್ತಿಲ್ವಲ್ಲ!!. ಇಲ್ಲಿ ತೀರ್ಥಳ್ಳೀಲಿ ಏಪ್ರಿಲ್ ತಿಂಗ್ಳಲ್ಲಿ ಸ್ವಲ್ಪ ಮುಖಹಾಕಿ,"ತಡೀರಿ, ಬರ್ತೀನಿ" ಅಂದಿದ್ದೆ ಅದೆಲ್ಲಿಗ್ಹೋಯ್ತೋ? ಹೆಚ್ಚಿನಂಶ ಮಲೆನಾಡ ಅಡಿಕೆ ಬೆಳೆಗಾರ್ರ ಹಿಡಿಶಾಪಕ್ಕೆ ರೋಸಿ ಎಲ್ಲೋ ಗುಳೇ ಹೋಗಿರ್ಬೇಕು.
ಬೆಂಗ್ಳೂರು ಬೇಡ ಅಂತ ಬಯಸಿ ಬಯ್ಸಿ ನಾನು ಇಲ್ಲಿಗೆ ಬಂದಾಗ ಏನು ಜಲಸಿರಿ!! ಅಬ್ಬಾ ನೆನಸ್ಕೊಂಡ್ರೆ ಮೈಯೆಲ್ಲ ಪುಳಕ ಬರತ್ತೆ! ನನ್ನ ಬಾಲ್ಯಕಾಲದ ಅನೇಕ ನೆನೆಪುಗ್ಳು ಮಳೆ, ಪ್ರವಾಹ, ಮಳೆನೀರಿನ ಸದ್ದು, ಕೊಚ್ಚೆರಾಡಿ ಇವುಗ್ಳ ಜೊತೇನೇ ತೆಕ್ಕೆಯಾಗಿವೆ. ಬಾಲ್ಯಕಾಲದಲ್ಲಿ ಶಿವಮೊಗ್ಗಾದಲ್ಲಿ ಎಷ್ಟು ಮಳೆ ಬರಿತ್ತು ಅಂದ್ರೆ ಹೇಳೋದೇ ಬೇಡ. ದಿನ ಬಿಟ್ದಿನ ಶಾಲೆಗೆ ರಜೆ ಇರ್ತಿತ್ತು. ನದಿ ದಡ್ದಲ್ಲಿ ನಿಂತು ದಡ ಕೊರೀತಾ ಕೆಂಪು ರಾಡಿಯಾಗಿ ಹರಿಯೋ ತುಂಗೆ ನೋಡಿದ್ರೆ ಅದ್ಯಾವ ಪುಣ್ಯಾತ್ಮ "ತುಂಗಾ ಪಾನಂ" ಅಂದ್ನೋ ಅನ್ಸೋದು. ನಮ್ಮ ಮನೆಯ ಹತ್ರಾನೇ ಇದ್ದ ಒಂದು ದೊಡ್ಡ ಮೋರಿ- ವೈತರಣಿ ಅಂತ್ಲೇ ಕರೀತಿದ್ವಿ ಅದನ್ನ- ತುಂಬಿ ನೀರೆಲ್ಲ ಅಕ್ಕ ಪಕ್ಕದ ವಠಾರಕ್ಕೆ ನುಗ್ಗಿ ಒಳ್ಳೇ ಫಜೀತಿ. ನಮ್ಮೂರ ದೇವರ ಅರ್ಚಕರಾದ ರಾಂಭಟ್ರು ತಮ್ಮ ಧಡೂತಿ ಹೆಂಡ್ತೀನ ಅನಾಮತ್ತಾಗಿ ತೋಳಲ್ಲಿ ಬಳಸಿ ಎತ್ಕೊಂಡು ಸೊಂಟಮಟ್ಟ ನೀರಲ್ಲಿ ಅವ್ರನ್ನು ಸುರಕ್ಷಿತ ಜಾಗಕ್ಕೆ ಕರ್ಕೊಂಡ್ಹೋಗ್ತಿದ್ದ ದೃಶ್ಯ ಯಾವತ್ಗೂ ಮರ್ಯೋದೇ ಇಲ್ಲ. ಸೀಗೇಹಟ್ಟಿ ಅನ್ನೋ ಶಿವಮೊಗ್ಗದ ಎಕ್ಸ್‌ಟೆನ್ಶನ್ ಸದಾ ಮಳೆಗಾಲದಲ್ಲಿ ಸುದ್ದಿಯಲ್ಲಿರ್ತಿತ್ತು. ನಾಲ್ಕಾಣೆ ಕೊಟ್ರೆ ಸಾಕು ಪ್ರೈವೇಟ್ ಬಸ್ನೋರು ಗಿಟ್ಟಿಗಿರಿದು ಜನತುಂಬ್ಕೊಡು ಸೀಗೇಹಟ್ಟಿ, ಹರಕೆರೆ, ಗಾಜನೂರು ಎಲ್ಲ ಕಡೆ ಪ್ರವಾಹದ ದೃಶ್ಯ ತೋರ್ಸೋರು. ಮುಂದೆ ಓದಿ »

ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
May 17, 2008 - 7:17pm — rameshbalaganchiಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು
ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ
ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕ
ಯ್ವೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರದೊಳ್ ಮುಂದೆ ಓದಿ »

ಅಂಬರಕ್ಕೆ ಹಾರಿತಯ್ಯೋ!!
April 16, 2008 - 5:07am — rameshbalaganchiಸರಿ ಸುಮಾರು ಎರಡು ವರ್ಷದ ಹಿಂದಿನ ಬೇಸಿಗೆ ಇರಬೇಕು, ಕುಟುಂಬದ ಜೊತೆ ಬೆಂಗಳೂರಿಗೆ ಹೋದವನು "ನಮ್ಮೂರೇ ಚಂದ" ಅಂದ್ಕೋತಾ "ಉಸ್ಸಪ್ಪಾ" ಅಂದು ಮನೆಗೆ ಬಂದು ಬಿದ್ದೆ! ಮಳೆ ಇನ್ನೂ ಮೊದಲಿಟ್ಟಿರ್ಲಿಲ್ಲ. ಯಾತಕ್ಕೂ ಮನಸ್ಸು ಬಾರದ ಹಾಗೆ ವಿಪರೀತ ಧಗೆ!!ಮನೆ ಹೊರಗೆ ಬಂದು ಜಗಲಿ ಮೇಲೆ ಕೂತ್ರೆ ಹಾಯನ್ಸೋ ಹಾಗೆ ಗಾಳಿಮರದ ತಂಪುಗಾಳಿ. ಮೇಲೆ "ಕುಹೂ ಕುಹೂ" ಕರ್ಣರಸಾಯನ ಬೇರೆ. ಜೊತೆಗೆ ಕಾಗೆ ಕೋಗಿಲೆಗಳ ಜೂಟಾಟ ನೋಡ್ತಾ ಮೈಮರೆತಿದ್ದೆ. ಚಿತ್ತ ಏನೂ ನೇಯದೆ ನಿರುಮ್ಮಳವಾಗಿತ್ತು. ಅಷ್ಟರಲ್ಲಿ "ಅಪ್ಪ, ಅಪ್ಪ, ಇಲ್ನೋಡ್ಬಾರಪ್ಪಅಂತ ಉಸಿರುಬಿಡದೆ ಮಗಮಹಾರಾಯನ ತುರ್ತಿನ ಕಿರಿಚಾಟ. ಮನಸ್ಸಿಲ್ಲದ ಮನಸ್ಸಿಂದ ಎದ್ದು ಹೋಗಿ ನೋಡಿದ್ರೆ ನಮ್ಮ ಗರಾಜ್‌ನಲ್ಲಿ ಬಟ್ಟೆ ಹರವಕ್ಕೆ ಹಾಕಿರೋ ಪ್ಲಾಸ್ಟಿಕ್ ವೈರ್‌ಗಳು ಸೇರೋ ಕಡೆ ಪುಟ್ಟದೊಂದು ಹಕ್ಕಿಗೂಡು!!! ಸಾಧಾರಣವಾಗಿ ಯಾರಿಗೂ ಕಾಣದ ಹಾಗೆ ಮರದಲ್ಲಿ ಎಲೆಯ ಸಂದಿನಲ್ಲಿ ಗೂಡು ಕಟ್ಟುವ ಹಕ್ಕಿ, ನಾವೆಲ್ಲ ಹದಿನೈದು ದಿನ ಮನೆಯಲ್ಲಿ ಇಲ್ಲದಿದ್ದಾಗ ಮನೆ ಬಿಟ್ರು ಅಂದ್ಕೊಂಡ್ತೋ ಏನೋ, ತೀರಾ ಅಪರೂಪಕ್ಕೆ ನಮ್ಮ ಗರಾಜನ್ನ್ನು ಆರಿಸಿಕೊಂಡಿತ್ತು.
ಯಾವ ಹಕ್ಕೀದು ಈ ಗೂಡು ಅಂತ ಪುಸ್ತಕದಲ್ಲಿ ತಲಾಶ್ ಮಾಡುತ್ತಿದ್ದಾಗ ಅದು ಬುಲ್‍ಬುಲ್ ಹಕ್ಕೀದು ಅಂತ ಗೊತ್ತಾಯ್ತು. ಮರುದಿನ ಬಚ್ಚಲುಮನೆಯಿಂದ ಊಟದ ಮನೆಗೆ ಗರಾಜ್ ಹಾದು ಬರುತ್ತಿರುವಾಗ ಬರ್ರ್ರ್ ಅನ್ನೋ ರೆಕ್ಕೆಯ ಸಡಗರದ ಸದ್ದು. ನನ್ನ ಹೆಜ್ಜೆಸದ್ದಿಗೆ ಹೆದರಿದ ಹೆಣ್ಣು ಬುಲ್‌ಬುಲ್ ಹೊರಗೆ ಹಾರಿ ಗೇಟಿನ ಹತ್ತಿರ ಗಣೆ ಬೇತಾಳನ ಹಾಗೆ ಬೆಳಿದು ನಿಂತಿದ್ದ ದಾಸವಾಳದ ಗಿಡದ ಕೊಂಬೆಯ ಮೇಲೆ ಕೂತು "ಶನಿ ತೊಲಗಿತೋ ಇಲ್ವೋ" ಅಂತ ಗರಾಜಿನ ಸಂದಿನಲ್ಲಿ ಹಣಕುತ್ತಾ ಇತ್ತು. ನಾನು ಊಟದ ಮನೆಯಕಡೆ ಹೋದಹಾಗೆ ಮಾಡಿ ಬಾಗಿಲ ಸಂದಿನಿಂದ ಹಣಕಿದರೆ ತಾಯಿ ಹಕ್ಕಿ ಬಾಯಲ್ಲಿ ಒಂದು ಹಣ್ಣೆಲೆ ಕಚ್ಕೊಂಡು ಗೂಡು ಪೂರ್ತಿ ಮಾಡಕ್ಕೆ ಹಾಜರ್!! ಮುಂದೆ ಓದಿ »





RSS: