ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ರವೀ ಎನ್ನೆಸ್
ಪರಿಚಯ
ಹೊಟ್ಟೆ ಪಾಡಿಗಾಗಿ ಬೆಂಗಳೂರಿನ ಸಣ್ಣ ಕಂಪೆನಿಯೊಂದರಲ್ಲಿ ಉದ್ಯೋಗಿ. ಸಮಯ ಸಿಕ್ಕಾಗ ಮನಸಿಗೆ ತೋಚಿದ್ದನ್ನು ಗೀಚುವುದು ನನ್ನೊಳಗಿನ ಉತ್ತಮ ಹವ್ಯಾಸಗಳಲ್ಲೊಂದು. ನನ್ನ ಹುಟ್ಟೂರು ಕೇರಳದ ಕಾಸರಗೋಡಿನ ಒಂದು ಪುಟ್ಟ ಗ್ರಾಮ. ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್!
ಸೀತಾ ನದೀ ತೀರದಲ್ಲಿ ಮನ ಕದ್ದು, ಕೊನೆಗೆ ಸದ್ದಿಲ್ಲದೇ ಎದ್ದು ಹೋದ 'ಚೆಂದುಳ್ಳಿ'ಗೆ...!!!
ಕಳೆದೊಂದು ವಾರದಿಂದ ಮನಸು ಎಂದಿನಂತಿಲ್ಲ. ಯಾಕೋ ಓಲಾಡುತಿದೆ, ಹಾರಾಡುತಿದೆ. ಜೀವನದ ಪಯಣದಲ್ಲಿ ಅದೆಲ್ಲೋ ಸಣ್ಣ ಗುರುತು ಹಾಕಿ ಹೋದವಳು ಯಾಕೋ ಕಾಡುತ್ತಿದ್ದಾಳೆ. ನಾನು ಅವಳನ್ನು ಕೊನೆಯದಾಗಿ ನೋಡಿದ್ದು ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಕಡೆಯ ಪರೀಕ್ಷೆಯಾದ ಕನ್ನಡ ಪರೀಕ್ಷೆಯಂದು. ಅನಂತರ ಎಲ್ಲಿ ಹೋದಳೋ, ಹೇಗಿದ್ದಾಳೋ, ಈಗ ಎಲ್ಲಿದ್ದಾಳೋ ಒಂದೂ ಗೊತ್ತಿಲ್ಲ. ಆಕೆಯ ಸುಳಿವಂತೂ ಇಲ್ಲವೇ ಇಲ್ಲ. ಅಂದು ಕನ್ನಡ ಪರೀಕ್ಷೆ ಮುಗಿಸಿ ಬಂದ ದಿನ ಒಂದು ಮುಗುಳ್ನಗೆ ಬೀರಿ 'ನಾಳೆ ಬಳಗ್ಗೆ ಹತ್ತೂವರೆಗೆ ಮಾಮೂಲಿ ಜಾಗದಲ್ಲಿ ಸಿಗೋಣ ಕಣೋ, ನಿನ್ನ ಹತ್ರ ತುಂಬಾ ಮತಾಡ್ಬೇಕಿದೆ' ಅಂತ ಹೇಳಿ ಮತ್ತೆ ನಂಗೆ ಸಿಗದೇ ನನ್ನ ಜೀವನದಿಂದ ಮರೆಯಾಗಿ ಎದ್ದುಹೋದ, ಹುಡುಗೀ ನೀನ್ಯಾಕೆ ಮತ್ತೆ ನನಗೆ ನೆನಪಾದೆ? ನೀನ್ಯಾಕೆ ಮತ್ತೆ ನಂಗೆ ಸಿಗದೇ ಹೋದೆ? ಎಲ್ಲಿ ನನ್ನೆದುರಿಂದ ಕಣ್ಮರೆಯಾಗಿ ಹೋದೆ? ಈ ಪ್ರಶ್ನೆಗಳನ್ನು ಕಾಲೇಜು ದಿನಗಳಲ್ಲಿ ಅದೆಷ್ಟು ಬಾರಿ ನನಗೆ ನಾನೇ ಕೇಳಿಕೊಂಡಿದ್ದೇನೋ?
ಅಂದು ನಾವೆಲ್ಲಾ ಮಳೆಗಾಲದ ಅಬ್ಬರದ ದಿನಗಳಲ್ಲಿ ಬಾರಕೂರಿನ ಆ ನೇಶನಲ್ ಪಿಯು ಕಾಲೇಜಿನ ಎಂಟನೇ ತರಗತಿಯಲ್ಲಿ (ಅದು ಕಾಂಪೋಸೈಟ್ ಕಾಲೇಜು) ಕುಳಿತು ಜ್ಯೋತೀ ಟೀಚರ್ರ ಜೀವಶಾಸ್ತ್ರ ಪಾಠ ಕೇಳುತ್ತಿದ್ದಾಗ ನೀನು ‘ಎಕ್ಷ್ ಕ್ಯೂಸ್ ಮೀ ಮೇಡಂ, ಮೇ ಐ ಕಂ ಇನ್?’ ಎಂದು ಕ್ಲಾಸಿನ ಬಾಗಿಲ ಬಳಿ ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿ ಬಂದು ನಿಂತಿದ್ದ ಆ ಭಂಗಿಯನ್ನು ಹೇಗೆ ಮರೆಯಲಿ ಹೇಳೇ ಚೆಂದುಳ್ಳಿ? (ನಿನ್ನನ್ನು ನಾನು ಪ್ರೀತಿಯಿಂದ ಕರೆಯುತ್ತಿದ್ದುದು ಹಾಗೆ ತಾನೇ?) ಅಡಿಯಿಂದ ಮುಡಿಯವರೆಗೆ ಒದ್ದೆಯಾಗಿ ನಡುಗುತ್ತಾ, ತಿಳಿ ನೀಲಿ ಬಣ್ಣದ ಚೂಡಿದಾರ ಹಾಕಿ ಬಂದಿದ್ದ ನಿನ್ನನ್ನು ಮೊದಲ ನೋಟದಲ್ಲೇ ಕಣ್ಣು ಹಾಗು ಮನ ಸೆರೆಹಿಡಿದಿತ್ತು ತನ್ನ ಪಟಳದೊಳಗೆ. ನಿಮ್ಮಪ್ಪನಿಗೆ ಹಠಾತ್ ನಮ್ಮೂರಿಗೆ ಟ್ರಾನ್ಸ್ ಫರ್ ಆಗಿದ್ದು ಬಹುಶಃ ನನಗೋಸ್ಕರವೇ ಇರಬೇಕೇನೋ?!?
ಮೊದಮೊದಲು ತುಂಬಾ ರಿಸರ್ವ್ ಹುಡುಗಿ ಎಂದು ಅನಿಸಿದರೂ ಆಮೇಲೆ ನಿಧಾನ ನಮ್ಮಿಬ್ಬರ ನಡುವೆ ಮಾತು ಶುರುವಾದದ್ದು... ಮುಂದೊಂದು ದಿನ ಅದ್ಯಾವುದೋ ಪಾಠದ ನೋಟ್ಸ್ ಬಾಕಿ ಇದೆ ಎಂದು ನನ್ನ ನೋಟ್ ಬುಕ್ ಕೇಳಿದ್ದೆಯಲ್ಲ, ಆ ದಿನ ಅದ್ಯಾಕೋ ತುಂಬಾ ಥ್ರಿಲ್ ಆಗಿದ್ದೆ... ನೀನು ಅದ್ಯಾಕೋ ಮೂರು ದಿನ ಶಾಲೆಗೆ ಬಾರದಿದ್ದಾಗ ಗಾಬರಿಗೊಂಡಿದ್ದೆ. ಯಾಕೆ ಬರಲಿಲ್ಲವೆಂದು ನಾಲ್ಕನೇ ದಿನ ಕಾರಣ ಕೇಳಿದಾಗ ‘ನಿಮಗೆ ಹುಡುಗರಿಗೆ ಅದೆಲ್ಲ ಗೊತ್ತಾಗಲ್ಲ ಸುಮ್ನಿರೋ’ ಎಂದು ನೀನು ನಾಚಿಕೆಯಿಂದ ಗದರಿಸಿದ್ದು.... ಅದೇನು ಕಾರಣ ಇರಬಹುದೆಂದು ಯೋಚಿಸಿ ಅದ್ಹೇಗೋ 'ಆ' ಕಾರಣದಿಂದ ನಿನಗೆ ಹೊಟ್ಟೆ ಮತ್ತು ಸೊಂಟ ನೋವು ಆಗಿತ್ತೆಂದು ಆಮೇಲೆ ಹೇಗೋ ನಂಗೆ ತಿಳಿದು ಅದನ್ನೇ ನಿನ್ನಲ್ಲಿ ಹೇಳಿದಾಗ ನೀನು ಹುಸಿ ಮುನಿಸು ಮಾಡಿದ್ದು.. ನಾನು ಜ್ವರದಿಂದ ಒಂದು ವಾರ ಮನೆಯಲ್ಲಿ ಮಲಗಿದಾಗ ನೀನು ಅದೇ ಸದವಕಾಶ ಎಂದು ತಿಳಿದು ನಮ್ಮ ಮನೆಗೆ ಆಗಾಗ ಬರುತ್ತಿದ್ದುದು... ನಮ್ಮಮ್ಮನಲ್ಲಿ ಸಲುಗೆ ಬೆಳೆಸಿ ಅವರ ಸ್ನೇಹ ಸಂಪಾದಿಸಿದ್ದು... ನನ್ನ ನೋಟ್ಸ್ ಬರೆದು ಕೊಟ್ಟಿದ್ದು, ಸ್ಕೂಲ್ ಡೇ ದಿನ ಇಬ್ಬರೂ ಜೊತೆಯಲ್ಲಿ ಓಡಾಡಿದ್ದು, ನಿಂಗೆ ನಾನು ನಿನ್ನಿಷ್ಟದ ಸ್ಟ್ರಾಬೆರಿ ಐಸ್ ಕ್ರೀಮ್ ಕೊಡಿಸಿದ್ದು, ಅದೇ ದಿನ ನೀನು ನನ್ನ ಕೈ ಕೈ ಹಿಡಿದು ನಡೆದದ್ದು.... ಎಂಟನೇ ತರಗತಿಯ ಪರೀಕ್ಷೆಗೆ ಉರು ಹೊಡೆದು ಓದಿದ್ದು...ನನ್ನನ್ನು ಇಷ್ಟೊಂದು ಹಚ್ಚಿಕೊಂಡಿದ್ದ, ನನ್ನೊಂದಿಗೆ ಸಾವಿರಾರು ಕನಸುಗಳನ್ನು ಹಂಚಿಕೊಂಡಿದ್ದ ನೀನು ಅದ್ಯಾಕೆ ಹಾಗೆ ಎದ್ದು ಹೋದೆ? ಕಾರಣವಿಲ್ಲದೆ? ಕಾರಣ ಹೇಳದೇ??
ಅಂದು ನಿನ್ನ ಹುಟ್ಟಿದ ಹಬ್ಬಕ್ಕೆ ನಾನೊಂದು ಹೃದಯದ ಚಿತ್ರವಿರುವ ಕೀ ಚೈನ್ ಉಡುಗೊರೆಯಾಗಿ ಕೊಟ್ಟಿದ್ದು.. ಅದರಲ್ಲಿ ನೀನು ನಿನ್ನ ಮತ್ತು ನನ್ನ ಹೆಸರು ಬರೆಸಿ ಮುಂದಿನ ತಿಂಗಳು ನನ್ನ ಹುಟ್ಟು ಹಬ್ಬದಂದು ನಂಗೆ ಕೊಟ್ಟಿದ್ದು.. ನನ್ನ ಹಟಕ್ಕೆ ಶರಣಾಗಿ ನೀನು ಸಂಗೀತ ಕ್ಲಾಸು ಸೇರಿದ್ದು.. ಮುಂದೊಂದು ದಿನ ಇಂಟರ್-ಸ್ಕೂಲ್ ಸ್ಪರ್ಧೆಯಲ್ಲಿ ಹಾಡಿ ಬಹುಮಾನ ಗಿಟ್ಟಿಸಿದ್ದು... ನೀನು ಹಾಡಿದ ಹಾಡು ನನಗಿನ್ನೂ ನೆನಪಿದೆ ಕಣೇ... ಅದೇ ಗಾಳಿ ಮಾತು ಚಿತ್ರದಲ್ಲಿ ಲಕ್ಷ್ಮಿ ಹಾಡಿದ್ದಳಲ್ಲಾ 'ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ... ‘ಅಂತ.... ಈ ನೆನಪುಗಳನ್ನು ಹೇಗೆ ಮರೆಯಲಿ ಹೇಳು ಚೆಂದುಳ್ಳಿ...
ಹತ್ತನೇ ತರಗತಿಯಲ್ಲಿ ಒಂದು ದಿನ ಮನೆಯವರಿಗೆ ಸುಳ್ಳು ಹೇಳಿ ನಾವಿಬ್ಬರೂ ಊರ ಪಕ್ಕದ ಸೀತಾ ನದಿಯ ಬಳಿ ಸೈಕಲ್ಲಿನಲ್ಲಿ ಹೋಗಿ ಬಂದದ್ದು... ಆ ನದೀ ತೀರದಲ್ಲಿ ನಾವಿಬ್ಬರೂ ಗಂಟೆಗಳ ಕಾಲ ಮಾತಾಡಿದ್ದು.... ಮತ್ತೆ ಸಮಯ ಸಿಕ್ಕಾಗಲೆಲ್ಲ ಅಲ್ಲಿಗೆ ಹೋಗಿ ಕುಳಿತುಕೊಂಡು ನಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದುದು, ಮತ್ತೊಂದು ದಿನ ಊರಿನ ಜಾತ್ರೆಯಂದು ನಮ್ಮಿಬ್ಬರ ಮನೆಯವರ ಎದುರಲ್ಲೇ ಕದ್ದು ಕದ್ದು ಕಡ್ಲೆ, ಮಿಟಾಯಿ, ಲಾಲಿ ಪಾಪ್ ತಿಂದಿದ್ದು, ಜೊತೆ ಜೊತೆಯಾಗಿ ಓಡಾಡಿದಾಗ ನಿನ್ನ ತಮ್ಮನಿಗೆ ಸಂದೇಹ ಬಂದಿದ್ದು.... ಹೇಗೆ ಮರೆಯಲಿ ಚಿನ್ನ ನಿನ್ನ ಜೊತೆ ಕಳೆದ ಮಧುರ ನೆನಪುಗಳನ್ನ???
ಹೀಗಿದ್ದ ನೀನು ಹತ್ತನೇ ಕ್ಲಾಸಿನ ಕೊನೆಯ ಪರೀಕ್ಷೆಯ ದಿನ ಅಪ್ಪನಿಗೆ ವರ್ಗಾವಣೆಯಾದ ಊರಿಗೆ ಒಂದು ಸಣ್ಣ ಸುಳಿವು ಕೊಡದೇ ಎದ್ದು ಹೋದದ್ದು... ಸುದ್ದಿ ಕೇಳಿ ತುಂಬಾ ಆಘಾತಗೊಂಡಿದ್ದೆ ಆ ದಿನ... ನಿನ್ನ ಮೇಲಿನ ಬೇಸರ, ಸಿಟ್ಟು ಆಕ್ರೋಶ ಎಲ್ಲ ನನ್ನ ಮುಖದಲ್ಲಿತ್ತು. ಸೀದಾ ಹೋಗಿ ನಾವು ಲೆಕ್ಕವಿಲ್ಲದಷ್ಟು ಬಾರಿ ಹೋಗಿ ಕುಳಿತ ಆ ಸೀತಾ ನದಿಯ ದಡದ ಬಂಡೆಯ ಮೇಲೆ ಕುಳಿತು ಮನಬಂದಷ್ಟು ಹೊತ್ತು ರೋದಿಸುತ್ತಾ ಕೂತಿದ್ದೆ. ನೀನು ಬಿಟ್ಟು ಹೋದದ್ದಕ್ಕೆ ಆ ನದಿ ನೀರಿನ ಬಳಿ ಸಾಕ್ಷ್ಯ ಕೇಳಿದ್ದೆ, ಯಾಕೆಂದರೆ ನಾನು ಮತ್ತು ನೀನು ಅದೆಷ್ಟು ಗಾಢವಾಗಿ ಪ್ರೀತಿ ಮಾಡುತ್ತಿದ್ದೆವೆಂದು ನಮ್ಮಿಬ್ಬರ ಹೊರತಾಗಿ ಆ ಸೀತಾ ನದಿಗೆ ಮಾತ್ರ ಗೊತ್ತಿತ್ತು. ನದಿಯಾದರೋ ಎಂದಿನಂತೆ ಹರಿಯುತ್ತಿತ್ತು, ತನಗೇನೂ ಆಗಿಲ್ಲವೆಂಬಂತೆ, ನನ್ನ ಕಣ್ಣೀರಿಗೆ ಪ್ರತಿಸ್ಪರ್ಧಿಯಾಗಿ... ಆದರೆ ಅಂದೇ ಸಂಜೆ ಆ ನದೀ ತೀರವನ್ನು ಬಿಟ್ಟು ಬರುವಾಗ ಇನ್ಯಾವತ್ತೂ ನಿನ್ನ ಬಗ್ಗೆ ಕನಸಲ್ಲೂ ಯೋಚಿಸಬಾರದೆಂದು ನಿರ್ಧರಿಸಿ ಬಂದಿದ್ದೆ, ನಿನ್ನನ್ನು, ನಿನ್ನ ನೆನಪುಗಳನ್ನು ಶಾಶ್ವತವಾಗಿ ಅಲ್ಲೇ ಬಿಟ್ಟು ಬಂದಿದ್ದೆ. ಇದೆಲ್ಲ ಕಳೆದು ಈಗ ಸುಮಾರು ಒಂದು ದಶಕವೇ ಸದ್ದಿಲ್ಲದೆ ನಮ್ಮಿಬ್ಬರ ಬಾಳಲ್ಲೂ ಕಳೆದು ಹೋಗಿದೆ...
ಮೊನ್ನೆ ಅದೇ ಸೀತಾನದಿಯ ಹತ್ತಿರ ಅಕಸ್ಮಾತಾಗಿ ಸಿಕ್ಕ ಹೈಸ್ಕೂಲ್ ಗೆಳತಿಯೊಬ್ಬಳು ಹೇಳಿದಳು, 'ಹೇಯ್ ಆದಿ ಅದೇ ನಮ್ಮ ಕ್ಲಾಸ್ ಮೆಟ್ ‘ಶಾರು’ ಇದ್ಳಲ್ಲಾ, ಅವಳೇ ಕಣೋ ನಿನ್ನ 'ಚೆಂದುಳ್ಳಿ', ಅವಳೀಗ ಓದು ಮುಗಿಸಿ ಒಂದು ಸಣ್ಣ ಸ್ವಂತ ಕಂಪೆನಿ ಇಟ್ಟುಕೊಂಡಿದ್ದಾಳಂತೆ, ಜೊತೆಗೆ ಅದ್ಯಾರೋ ಅವಳ ದೂರದ ಸಂಬಂಧಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನನ್ನ ಮದುವೆಯಾಗಿ ಒಂದು ಮಗು ಕೂಡ ಇದೆಯಂತೆ' ಅಂತಂದಾಗ ‘ನನ್ನ ಒಂದು ಕಾಲದ ಗೆಳತಿ, 'ಚೆಂದುಳ್ಳಿ' ಎಲ್ಲಿದ್ದರೂ ಸುಖವಾಗಿರಲಿ ಅಷ್ಟೇ’ ಎಂದು ಮನದಲ್ಲೇ ಅಂದುಕೊಂಡೆ. ನಾನು 'ಚೆಂದುಳ್ಳಿ'ಯ ಬಗ್ಗೆ ಹೆಚ್ಚಿನ ವಿವರವೇನೂ ಕೇಳಲಿಲ್ಲ, ಅವಳೂ ನನ್ನ ಮುಖಭಾವ ಅರಿತು ಹೆಚ್ಚೇನೂ ಹೇಳಲಿಲ್ಲ. ಇಬ್ಬರೂ ಒಂದು ಪೇಲವ ನಗು ವಿನಿಮಯ ಮಾಡಿಕೊಂಡು ಸುಮ್ಮನಾದೆವು. ನದಿ ಎಂದಿನಂತೆ ಹರಿಯುತ್ತಿತ್ತು, ತನಗೆ ಇದ್ಯಾವುದರ ಅರಿವೆಯೇ ಇಲ್ಲವೆಂಬಂತೆ... ಆ ಹರಿಯುವ ನೀರಿನ ಸದ್ದಿನ ನಡುವೆಯೂ ಅಲ್ಲೊಂದು ಮೌನ ಸೃಷ್ಟಿಯಾಗಿತ್ತು, ಆ ಮೌನವೇ ಎಲ್ಲವನ್ನೂ ಮಾತಾಡುತ್ತಿತ್ತು - ನನ್ನ ಮತ್ತು 'ಚೆಂದುಳ್ಳಿ'ಯ ವಿಷಯವೊಂದನ್ನು ಬಿಟ್ಟು...!?!
ಪ್ರೀತಿಯಿಂದ,
*ರವೀ*
- ranaasa's blog
- Login or register to post comments
- 361 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಸೀತಾ ನದೀ ತೀರದಲ್ಲಿ ಮನ ಕದ್ದು, ಕೊನೆಗೆ ಸದ್ದಿಲ್ಲದೇ ಎದ್ದು ಹೋದ ...
ರವಿ,
ನಿಮ್ಮ ಶಾಲಾ ಲವ್ ಕತೆ ಚೆನ್ನಾಗಿತ್ತು.ನಿಮ್ಮ ಮನಸ್ಸು ಈಗ ಶಾಂತವಾಗಿರಬೇಕಲ್ಲ !!!
ಉ: ಸೀತಾ ನದೀ ತೀರದಲ್ಲಿ ಮನ ಕದ್ದು, ಕೊನೆಗೆ ಸದ್ದಿಲ್ಲದೇ ಎದ್ದು ಹೋದ ...
ಶಶಿ,
ಇದೊಂದು ಕಾಲ್ಪನಿಕ ಬರಹ ಅಷ್ಟೇ... ನೀವಂದುಕೊಂಡಂತೆ ಆ ಥರಹದ್ದೇನೂ ನಡೆದಿಲ್ಲ ನನ್ನ ಹೈಸ್ಕೂಲ್ ಜೀವನದಲ್ಲಿ... It is just a blog, thats it....ಪ್ರತಿಕ್ರಿಯೆಗೆ ಥಾಂಕ್ಸ್...
*ರವೀ*
ಉ: ಸೀತಾ ನದೀ ತೀರದಲ್ಲಿ ಮನ ಕದ್ದು, ಕೊನೆಗೆ ಸದ್ದಿಲ್ಲದೇ ಎದ್ದು ಹೋದ ...
ರವೀ , ಮನ ಮುಟ್ಟುವಂತಿದೆ ನಿಮ್ಮ ಲೇಖನ. ಪ್ರೀತಿ ಬಹಳ ಭಾವನಾತ್ಮಕವಾದುದು. ಆ ಭಾವನಾತ್ಮಕ ಮಧುರ ಅನುಭವಕ್ಕೆ ಸರಿಸಾಟಿ ಇಲ್ಲ.
ಉ: ಸೀತಾ ನದೀ ತೀರದಲ್ಲಿ ಮನ ಕದ್ದು, ಕೊನೆಗೆ ಸದ್ದಿಲ್ಲದೇ ಎದ್ದು ಹೋದ ...
ತೇಜಸ್ವೀ,
<ಮನ ಮುಟ್ಟುವಂತಿದೆ ನಿಮ್ಮ ಲೇಖನ.>
ಧನ್ಯವಾದಗಳು.....
<ಪ್ರೀತಿ ಬಹಳ ಭಾವನಾತ್ಮಕವಾದುದು. ಆ ಭಾವನಾತ್ಮಕ ಮಧುರ ಅನುಭವಕ್ಕೆ ಸರಿಸಾಟಿ ಇಲ್ಲ.>
ಖಂಡಿತಾ, ಒಪ್ಪಬೇಕಾದ, ಒಪ್ಪಬಹುದಾದ ಮಾತು.... ಹೆತ್ತವರ ಮತ್ತು ಮನೆಯವರ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ....
*ರವೀ*