ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಲೇಖಕರು

ranaasa's picture

ಪೂರ್ಣ ಹೆಸರು
ರವೀ ಎನ್ನೆಸ್

ಪರಿಚಯ

ಹೊಟ್ಟೆ ಪಾಡಿಗಾಗಿ ಬೆಂಗಳೂರಿನ ಸಣ್ಣ ಕಂಪೆನಿಯೊಂದರಲ್ಲಿ ಉದ್ಯೋಗಿ. ಸಮಯ ಸಿಕ್ಕಾಗ ಮನಸಿಗೆ ತೋಚಿದ್ದನ್ನು ಗೀಚುವುದು ನನ್ನೊಳಗಿನ ಉತ್ತಮ ಹವ್ಯಾಸಗಳಲ್ಲೊಂದು. ನನ್ನ ಹುಟ್ಟೂರು ಕೇರಳದ ಕಾಸರಗೋಡಿನ ಒಂದು ಪುಟ್ಟ ಗ್ರಾಮ. ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್!

ಮತ್ತೆ ಕಾಡಿದ ಚೆಂದುಳ್ಳಿ...!?!

       ಕೆಹೆನಾ ಹೈ ಕೆಹೆನಾ ಹೈ ಆಜ್ ತುಂಸೆ  ಏ ಪೆಹೆಲೀ ಬಾರ್.... ಎಂದು ಪಕ್ಕದ ಮನೆಯ ಕಿಟಿಕಿಯೆದುರು ನಿಂತಿರುವ ಸಾಯಿರಾ ಬಾನುವಿಗೆ ಈ ಕಡೆ ಮನೆಯೊಳಗೆ ನಿಂತು ಸುನಿಲ್ ದತ್ ನ ಪರವಾಗಿ ಕಿಶೋರ್ ಕುಮಾರ್ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಆ ಹಾಡನ್ನು ಮತ್ತು ಆ ಸನ್ನಿವೇಶವನ್ನು ನೋಡಲು ಎರಡು ಕಣ್ಣುಗಳು ಸಾಲವು! ಎಪ್ಪತ್ತರ ದಶಕದ ದಾಖಲೆ ನಿರ್ಮಿಸಿದ ಪಡೋಸನ್ ಎಂಬ ಹಿಂದೀ ಸಿನೆಮಾದ ಸೂಪರ್ ಹಿಟ್ ಗೀತೆ ಅದು. ಪಕ್ಕದಮನೆ ಹುಡುಗಿಗೆ ತಾನೊಬ್ಬ ಹಾಡುಗಾರ ಎಂದು ಸುಳ್ಳು ಹೇಳಿ ಸ್ನೇಹ ಸಂಪಾದಿಸಿ ಪ್ರೀತಿಸಲು ಯತ್ನಿಸುವ ಕಥೆಯುಳ್ಳ ಚಿತ್ರ ಅದು....


       ಕಳೆದ ವಾರ ಊರಿಗೆ ಹೋಗುವ ಸಲುವಾಗಿ ಬೆಂಗಳೂರು ಸಿಟಿ ರೈಲು ನಿಲ್ದಾಣದ ಒಂಭತ್ತನೇ ಅಂಕಣದಲ್ಲಿ ಮಂಗಳೂರು ಎಕ್ಷ್ ಪ್ರೆಸ್ ಹತ್ತಿ S6 ಬೋಗಿಯೊಳಗೆ ಕುಳಿತುಕೊಂಡಿದ್ದೆ. ಆಗ ತಾನೇ ಆಫೀಸಿನಿಂದ ಓಡೋಡಿ ಬಂದು ರೈಲು ನಿಲ್ದಾಣ ತಲುಪಿದ್ದರಿಂದ ಮತ್ತು ಜೊತೆಗೆ ಸೆಖೆಯೂ ಜೋರಾಗಿದ್ದರಿಂದ ಹಣೆ ಮೇಲೆ ಬೆವರು ಹರಿದಾಡುತ್ತಿತ್ತು. ಸ್ವಲ್ಪ ಗಾಳಿ ಬರಲಿ ಎಂದು ಕಿಟಿಕಿ ತೆರೆದು ಹೊರಗೆ ನೋಡುತ್ತಿದ್ದೆ. ಹಿತವಾದ ತಂಪು ಗಾಳಿ ಬಂದು ಮುಖಕ್ಕೆ ಸೋಕಿದಾಗ ಒಂಥರಾ ಆರಾಮದಾಯಕ ಅನುಭವವಾಯಿತು.


       ರೈಲು ಹೊರಡಲು ಇನ್ನೂ ಸ್ವಲ್ಪ ಸಮಯವಿತ್ತು. ಹೀಗೆ ಕಿಟಿಕಿಯಿಂದ ಹೊರಗೆ ದೃಷ್ಟಿ ಹಾಯಿಸಿದಾಗ ಆ ಕಡೆ ಎಂಟನೇ ಅಂಕಣದಲ್ಲಿ ರಾಣಿ ಚೆನ್ನಮ್ಮ ಎಕ್ಷ್ ಪ್ರೆಸ್ಸಿನ ಬೋಗಿಗಳು ನಿಂತಿದ್ದವು. ಅದರೊಳಗಿನ ಸ್ಲೀಪರ್ ಕೋಚಿನೆಡೆಗೆ ಅಚಾನಕ್ ದೃಷ್ಟಿ ಹಾಯಿಸಿದೆ. ಅಲ್ಲೊಬ್ಬಳು ಸುಂದರಿ ತನ್ನ ಕಣ್ಣ ದೃಷ್ಟಿಯನ್ನು ನನ್ನೆಡೆಗೆ ಬಿಟ್ಟು ತದೇಕಚಿತ್ತದಿಂದ ನನ್ನನ್ನು ನೋಡುತ್ತಿರುವಂತೆ ಭಾಸವಾಯಿತು. ಅವಳೂ ನನ್ನಂತೆ ಆಗತಾನೆ ಓಡೋಡಿ ಬಂದು ರೈಲು ಹಿಡಿದಿದ್ದೆಂದು ಅವಳ ಹಣೆಯ ಮೇಲಿನ ಬೆವರಿನ ಹನಿಗಳು ಹೇಳುತ್ತಿದ್ದವು. ಆಕೆಯ ಎಡಕೈಯಲ್ಲಿದ್ದ ಕರ್ಚೀಫ್ ಹಣೆಯ ಮೇಲಿನ ಬೆವರನ್ನು ನಿಧಾನ ಒರಸುತ್ತಿದ್ದರೆ ಬಲಗೈ ಚೀಲದೊಳಗಿನಿಂದ ಅದೇನನ್ನೋ ತೆಗೆಯಲು ಹವಣಿಸುತ್ತಿತ್ತು. ಬಹುಷಃ ಮೊಬೈಲ್ ಇರಬಹುದೇನೋ ಅಂತ ಅಂದುಕೊಂಡೆ. 


       ನೇರಳೆ ಬಣ್ಣದ ಟಾಪ್ ಮತ್ತು ತಿಳಿ ನೀಲಿ ಜೀನ್ಸ್ ಹಾಕಿಕೊಂಡಿದ್ದ ಆಕೆಯನ್ನು ನೋಡುತ್ತಿದ್ದರೆ ಹಾಗೆ ನೋಡುತ್ತಲೇ ಇರುವಷ್ಟು ಮುದ್ದಾಗಿದ್ದಳು, ಸುಂದರವಾಗಿದ್ದಳು ಆ ಬೆಡಗಿ.  ಬೇಡ ಬೇಡವೆಂದರೂ ಕಣ್ಣುಗಳು ಆಕೆಯತ್ತಲೇ ತಮ್ಮ ದೃಷ್ಟಿಯನ್ನು ನೆಟ್ಟಿದ್ದವು. ಆಫೀಸಿನಿಂದ ಬಂದಾಗ ಮೆತ್ತಿಕೊಂಡಿದ್ದ ಧೂಳನ್ನು ಒರಸಿ ಕನ್ನಡಕವನ್ನು ಮತ್ತೆ ಹಾಕಿಕೊಂಡು ಅವಳನ್ನೇ ನೋಡುತ್ತಿದ್ದೆ. ಊರಿನ/ಹಳ್ಳಿಯ ಸಂಪ್ರದಾಯಕ್ಕನುಗುಣವಾಗಿ ತಲೆಯ ಮಧ್ಯದಿಂದ ಬೈತಲೆ ತೆಗೆದು ಬಾಚಿದ ನೀಳ ಜಡೆ, ಉರುಟಾದ ಬಿಳಿಹಣೆಗೊಪ್ಪುವ ಕೆಂಪು ಗುಲಾಬಿ ಬಣ್ಣದ ಶೃಂಗಾರ್ ಬಿಂದಿ, ಸಣ್ಣ ಬಿಳಿ ಹರಳು ಹೊಂದಿರುವ ಮೂಗಿನಲ್ಲಿ ಶೋಭಿಸುತ್ತಿರುವ ಚಿನ್ನದ ಮೂಗುತಿ, ಬಹುಷಃ ಕಳ್ಳ ಕಾಕರ ಭಯದಿಂದ ಚಿನ್ನಕ್ಕೆ ಬದಲಾಗಿ ಕಿವಿಗೆ ನೇತಾಡುತ್ತಿರುವ ರೋಲ್ದ್ ಗೋಲ್ಡ್  ಜುಮ್ಕಿಗಳು, ನುಣುಪಾದ ಬಿಳಿ ಕೆನ್ನೆಗಳು, ಇಡೀ ಮುಖಕ್ಕೆ ಶೋಭೆ ಕೊಡುವ ಗದ್ದದ ಎಡ ಭಾಗದ ಸಣ್ಣ ಕಪ್ಪು ಮಚ್ಚೆ, ಕೆಂದುಟಿ ಮತ್ತು ಅದರ ಮೇಲಿನ ಮುಗುಳ್ನಗು....


       ಹೀಗೆ ಪಡೋಸನ್ ಚಿತ್ರದ ಹೀರೋಇನ್ ಬಿಂದು ಪಾತ್ರದ ಸಾಯಿರಾ ಬಾನುವನ್ನು ಎಲ್ಲಾ angel ನಿಂದ ಹೋಲುತ್ತಿದ್ದ ಆಕೆಯನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ.... ರೈಲಿನ ಕಿಟಿಕಿಯಿಂದ ನಿಧಾನವಾಗಿ ಬರುತ್ತಿರುವ ಗಾಳಿ, ಬೆಳಗ್ಗೆ ಬಾಚಿದ್ದರೂ ಸ್ವಲ್ಪ ಹರಡಿಕೊಂಡಿದ್ದ  ಆಕೆಯ ಕೂದಲನ್ನು ಮತ್ತೂ ಚೆಲಾಪಿಲ್ಲಿಯಾಗಿಸುತ್ತಿತ್ತು. ಆ ನೀಳ ಕೂದಲು ಆಕೆಯ ಗಲ್ಲ ಸೋಕುತ್ತಾ ಮಧುರಾನುಭವ ಪಡೆಯುತ್ತಿತ್ತು. ಆಗಾಗ ತನ್ನ ಎಡಕೈ ಬೆರಳುಗಳಿಂದ ಕೂದಲನ್ನು ಕಿವಿಯ ಹಿಂದೆ ಸರಿಸಿ ನನ್ನೆಡೆಗೆ ನೋಡುತ್ತಿದ್ದಳು. ಆಗ ನನ್ನ ಮನದೊಳಗೆ ಅನ್ನಿಸಿದ್ದು, “ಬಹುಷಃ ಕನಸಲ್ಲಿ ಕಾಣಸಿಗುವ, ಬರೀ ಕನಸಲ್ಲಿ ಬಂದು ನನ್ನ ಕಾಡುವ ಚೆಂದುಳ್ಳಿ ಇವಳೇ” ಅಂತ! ಆಕೆ ನನ್ನೂರಿನ ರೈಲು ಹತ್ತಬಾರದಾಗಿತ್ತಾ ಅಥವಾ ಆಕೆ ಹತ್ತಿದ ರೈಲು ನಮ್ಮೂರು ಮಂಗಳೂರಿನೆಡೆಗೆ ಬರಬಾರದಾ ಎಂದೆಲ್ಲಾ ಯೋಚಿಸುತ್ತಾ ಕುಳಿತಿದ್ದೆ. ನನ್ನ ರೈಲು ಹೊರಡುವ ಸಮಯ ಸಮೀಪಿಸಿತ್ತು....


       ಹಾಗೇ ಕುಳಿತಿದ್ದಾಗ ಅದೆಲ್ಲೋ ಮೊಬೈಲ್ ರಿಂಗಣಿಸುವ ಶಬ್ದವಾದಂತಾದಾಗ ಕಣ್ಣು ಬಿಟ್ಟೆ. ಹಿಂದಿನ ಮೂರು ದಿನ ಊರಲ್ಲೆಲ್ಲಾ ತಂಗಿಯ ಮದುವೆ ಆಮಂತ್ರಣ ಪತ್ರಿಕೆ ಹಂಚಿ ದಣಿವಾದ್ದರಿಂದ ಕಣ್ಣ ತುಂಬಾ ನಿದ್ರೆ ಮತ್ತು ದಣಿವು ಹಾಗೇ ಇತ್ತು. ಹಿಂದಿನ ರಾತ್ರೆ ಬೆಂಗಳೂರಿಗ ಬರಲು ಮಂಗಳೂರಿನ ರೈಲು ನಿಲ್ದಾಣದಲ್ಲಿ ರೈಲು ಏರಿದಾಗ ಕಿವಿಗೆ ಹೆಡ್ ಫೋನು ಹಾಕಿ FM ಕೇಳುತ್ತಾ ನಿದ್ರೆಗೆ ಜಾರಿದ್ದು, ಆ ರಾತ್ರೆಯಲ್ಲಿ ವಿವಿಧ ಭಾರತಿ  ಚಾನೆಲ್ಲಿನಲ್ಲಿ ಪಡೋಸನ್ ಚಿತ್ರದ ‘ಕೆಹೆನಾ ಹೈ ಕೆಹೆನಾ ಹೈ ಆಜ್ ತುಂಸೆ  ಏ ಪೆಹೆಲೀ ಬಾರ್...' ಗೀತೆ ಪ್ರಸಾರವಾದದ್ದು, ನಾನು ಹಾಗೇ ಆ ಗೀತೆ ಕೇಳುತ್ತಾ ನಿ ನಿದ್ರೆಗೆ ಜಾರಿದ್ದು... ಹೀಗೆ ಎಲ್ಲ ನೆನಪಾಗಿ ಎದ್ದು ಕುಳಿತಾಗ ಅದಾಗಲೇ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಹೊರಡುವ ಸೂಚನೆಯಾಗಿ ಜೋರಾಗಿ ಹಾರ್ನ್ ಮಾಡುತ್ತಾ ಯಶವಂತಪುರದೆಡೆಗೆ ನಿಧಾನ ಹೊರಟಿತು   ನಾನಿದ್ದ ರೈಲು. ಎದ್ದು ಬಿದ್ದು ನನ್ನ ಬ್ಯಾಗ್ ಮತ್ತು ನೀರಿನ ಬಾಟಲಿ ಎತ್ತಿಕೊಂಡು ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದ ರೈಲಿನ ಬಾಗಿಲಿನಿಂದ ಪ್ಲಾಟ್ ಫಾರ್ಮಿಗೆ ಜಿಗಿದೆ.


       ರೈಲು ಹೊರಟು ಹೋದ ಮೇಲೆ ‘ನನ್ನ ಕನಸಲ್ಲಿ ಬಂದ ಚೆಂದುಳ್ಳಿ ಇರುವ ರೈಲು ಪಕ್ಕದ ಅಂಕಣದಲ್ಲೆಲ್ಲಾದರೂ  ಇರಬಹುದಾ?’ ಎಂಬ ಸಣ್ಣ ಆಸೆಯಿಂದ ಆಕಡೆ ಈಕಡೆ ಕಣ್ಣು ಹಾಯಿಸಿದೆ. ದೂರದಲ್ಲಿ ನಿಂತಿದ್ದ  ಲೇಡಿ TC ನನ್ನನ್ನೇ ದುರುಗುಟ್ಟಿ ನೋಡಿದಂತೆ ಭಾಸವಾಗಿ ಕಿವಿಗೆ ಹೆಡ್ ಫೋನ್ ಸಿಕ್ಕಿಸಿ FM ಕೇಳುತ್ತಾ ಅಲ್ಲಿಂದ ನಿಧಾನ ಮನೆ ಕಡೆ ಹೋಗುವ ಬಸ್ಸು ಹಿಡಿಯಲು ಹೊರಟು ಬಂದೆ. ಯಾವುದೋ ಒಂದು ರೇಡಿಯೋ ಚಾನೆಲ್ ನಲ್ಲಿ ಹಾಡೊಂದು ಬರುತ್ತಿತ್ತು...


ಚೌದ್ ವೀ ಕಾ ಚಾಂದ್ ಹೋ ಯಾ ಆಫ್ ತಾಬ್ ಹೋ... ಜೋ ಭೀ ಹೊ ತುಂ ಖುದಾsಕಿ ಕಸಂ ಲಾಜವಾಬ್ ಹೋ...


       ಖಂಡಿತಾ ಮೊಹಮ್ಮದ್ ರಫೀ ನನ್ನ ಚೆಂದುಳ್ಳಿಯ ಬಗ್ಗೇ ಈ ಹಾಡು ಹಾಡಿರಬೇಕು, ಅಥವಾ ನನ್ನನ್ನು ಕಾಡಿದಂತೆ ಈ ಹಾಡನ್ನು ಬರೆದ ಶಕೀಲ್ ಬದಯೂನಿಯ ಕನಸಲ್ಲೂ ಯಾರೋ ಒಬ್ಬಳು ರೂಪಸಿ ಕಾಡಿರಬೇಕು ಎಂದುಕೊಂಡು ಮನದೊಳಗೆ ನಗುತ್ತಾ 24ನೇ ಪ್ಲಾಟ್ ಫಾರ್ಮಿಗೆ ಬಂದು ಹೆಬ್ಬಾಳಕ್ಕೆ ಹೋಗುವ ಬಸ್ಸು ಹಿಡಿದು ಮನೆ ಸೇರಿಕೊಂಡೆ..... ಆಫೀಸಿಗೆ ಬಂದು ಕಂಪ್ಯೂಟರಿನ ಮುಂದೆ ಕೂತಿದ್ದರೂ ಮನದ ತುಂಬೆಲ್ಲಾ ಚೆಂದುಳ್ಳಿಯದೇ ಮಧುರ ನೆನಪು!?!


ಪ್ರೀತಿಯಿಂದ,


*ರವೀ*


 


 


 


 


 

No votes yet