ಗೆಳೆಯಾ, ನಾ ನಗುವ ಮೊದಲೇನೇ ಮಿನುಗುತಿದೆ ಯಾಕೋ ಹೊಸ ಮುಗುಳುನಗೆ….
ನನ್ನ ಬದುಕಿನ ನಾವಿಕನಿಗೆ ! ,
ನಂಗೆ ಗೊತ್ತಿತ್ತು ಇಂಥಾ ಒಂದು ದಿನ, ಇಂಥಾ ಒಂದು ಘಳಿಗೆ ನನ್ನ ಬಾಳಲ್ಲಿ ಖಂಡಿತಾ ಬಂದೇ ಬರಬಹುದೆಂದು... ಆದರೆ, ಆದರೆ ಇಂಥಾ ದಿನ ಹಾಗೂ ಘಳಿಗೆ ಇಷ್ಟು ಬೇಗ, ಹೀಗೆ 'ನಿನ್ನ' ರೂಪದಲ್ಲಿ ನನ್ನ ಬಾಳಲ್ಲಿ ಬರಬಹುದೆಂದು ಖಂಡಿತಾ ಗೊತ್ತಿರಲಿಲ್ಲ, ಆ ನಿರೀಕ್ಷೆಯೂ ಇರಲಿಲ್ಲ.... ಈಗ ಅದೆಲ್ಲಾ ಸುಳ್ಳಾಗಿದೆ. ನೀನು ನನ್ನ ಬಾಳಿಗೆ 'ರಂಗ ಪ್ರವೇಶ' ಮಾಡಿದ್ದೀಯಾ, ನಾನಾದರೋ ತುಂಬಾ ಪುಳಕಿತಗೊಂದಿದ್ದೇನೆ, ರೋಮಾಂಚಿತಗೊಂಡಿದ್ದೇನೆ, ನಿನ್ನಲ್ಲಿ ನನ್ನಷ್ಟಕ್ಕೇ ನಾನು ಕಳೆದು ಹೋಗಿದ್ದೇನೆ. ನಿನ್ನ ಗುಣ, ರೂಪ, ಮಾತು, ಮುಗ್ಧತೆ, ನವಿರು, ಹೊಳಪು, ಮಿಡಿತ, ಕಣ್ಣು, ನಗು, ನೋಟ, ಸರಳತೆ, ಸಜ್ಜನಿಕೆಗೆ ಮರುಳಾಗಿ ನಿನ್ನ 'ಪ್ರೇಮಪಾಶದಲ್ಲಿ' ಸಿಲುಕಿದ್ದೇನೆ. ಆದೀ , ಆ ಪ್ರೇಮಪಾಶದಿಂದ ನನ್ನನ್ನು ಬಿಡಿಸಿ ನಿನ್ನೆದೆಗೆ ನನ್ನ ಮೊಗವನ್ನು ಆನಿಸಿ, ನಿನ್ನ ಬಾಹುಗಳಿಂದ ನನ್ನ ದೇಹವನ್ನು ಬಿಗಿಯಾಗಿ ಅಪ್ಪಿ ನಿನ್ನ ದೇಹದೊಳಗೆ ಬಂಧಿಸಿ 'ಶಾರೂ ನಂಗೆ ನೀನಂದ್ರೆ ತುಂಬಾ ಇಷ್ಟಾ ಕಣೇ, ನಾನು ನಿನ್ನ ತುಂಬಾ ಪ್ರೀತಿ ಮಾಡ್ತೀನಿ ಕಣೇ, ನಿನ್ನ ಕೈಹಿಡಿದು ನೂರ್ಕಾಲ ಜೀವಿಸುವಾಸೆ, ನಿನ್ನ ಜೊತೆ ಜೀವನ ಪರ್ಯಂತ ಬಾಳುವಾಸೆ, Please Marry me..’ ಅಂತ ಯಾವಾಗ ಹೇಳ್ತಿಯಾ ಅಂತ ಕಾಯ್ತಿದೀನಿ....!
ನಾ ನಗುವ ಮೊದಲೇನೇ ಮಿನುಗುತಿದೆ ಯಾಕೋ ಹೊಸ ಮುಗುಳುನಗೆ
ನಾ ನುಡಿವ ಮೊದಲೇನೇ ತೊದಲುತಿದೆ ಹೃದಯವಿದು ಒಳಗೊಳಗೆ
ಅಲ್ಲಾ ಕಣೋ, ಒಂದು ಮಾತು ಹೇಳು. ನನ್ನಕ್ಕನ ಮದುವೆ ದಿನ - ಅಲ್ಲಿದ್ದ ಅಷ್ಟೂ ಹೊತ್ತು ಬರೀ ನನ್ನನ್ನು, ನನ್ನ ಚಲನವಲನಗಳನ್ನು ನೋಡುತ್ತಾ ಕುಳಿತಿದ್ದೆಯಲ್ಲಾ, ನಿಜವಾಗ್ಲೂ ಹೇಳು ನೀನು ಬಂದಿದ್ದು ನನ್ನಕ್ಕನ ಮದುವೆಗಾ ಅಲ್ಲ ಅಲ್ಲಿ ನಿಂಗೆ ಹುಡುಗಿ ನೋಡೋಕಾ?!? ನಾನಾದರೋ ಆ ದಿನ ಸ್ವಲ್ಪ ಜಾಸ್ತಿ ಆ ಕಡೆ ಈ ಕಡೆ ಓಡಾಡ್ತಿದ್ದೆ. ನೀನು ಅದನ್ನೇ ನೆಪ ಮಾಡಿಕೊಂಡು ನನ್ನ ಓಡಾಟವನ್ನ, ನಾನು ಗಂಟೆಗೊಂದರಂತೆ ಡ್ರೆಸ್ ಬದಲಾಯಿಸಿ ಬೇರೆ ಬೇರೆ ವೇಷಗಳಲ್ಲಿ ಆ ಮದುವೆ ಹಾಲಿನಲ್ಲಿ ಅತ್ತಿತ್ತ ಓಡಾಡುತ್ತಿದ್ರೆ ನೀನು ನನ್ನನ್ನೇ ನೋಡ್ತಿದ್ದೆ. ನಾನು ಊಟಕ್ಕೆ ಮುಂಚೆ ಡ್ರೆಸ್ ಬದಲಾಯಿಸುತ್ತಿರುವಾಗ ಅದ್ಯಾರೋ ಹೇಳಿ ನೀನು ನನ್ನನ್ನೇ ಗಮನಿಸುತ್ತಿರುವ, ಅಬ್ಸರ್ವ್ ಮಾಡುತ್ತಿರುವ ವಿಷಯ ಗೊತ್ತಾಯ್ತು. ಆಗ ನನ್ನೊಳಗೆ ನಾನೇ ನನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಪಟ್ಟು ಯಾರದು ನೋಡೋಣ, ನಿನ್ನನ್ನ ಆಟ ಆಡಿಸಬೇಕು ಎಂದು ನಿರ್ಧರಿಸಿ ಹೊರ ಬಂದು ನಿನ್ನನ್ನ ಹುಡುಕುತ್ತಿರುವಾಗ, ನಾನು ಹೊರಬರಲು ಕಾಯ್ತಾ ಇದ್ದಂತೆ ನೀನು ನನ್ನ ಕಡೆಗೇ ನೋಡುತ್ತಿದ್ದೆ. ನಾನು ನಿನ್ನನ್ನೇ ನೋಡಿದಾಗ ನೀನು ನನ್ನೆಡೆಗೆ 'ಮುಗುಳ್ನಗೆ' ಬೀರಿದೆ. ಇಂಥಾ ಘಟನೆ ನಿರೀಕ್ಷಿಸದ ನಾನೂ ನಿನ್ನೆಡೆಗೆ ಅಂದು ಮುಗುಳ್ನಗೆ ಬೀರಿದ್ದು ಯಾಕೆ, ಹೇಗೆಂದು ನಂಗೇ ಗೊತ್ತಿಲ್ಲ. ನನ್ನ ಬಾಯಿಂದ ತಂತಾನೇ 'ಹಾಯ್' ಎನ್ನುವ ಶಬ್ದ ಬೇರೆ ಹೊರ ಬಿತ್ತು. ನನ್ನ ಒಂದು ಮುಗುಳ್ನಗೆಗೆ ಕಾಯುತ್ತಿದ್ದಿರಬೇಕು ನಿನ್ನ ಮನಸು. ನಾನು ನಕ್ಕಾಗ ನೀನು ಮೈಯೆಲ್ಲಾ ಪುಳಕಗೊಂಡು ಮುಗುಳ್ನಗೆ ಬೀರಿದ್ದನ್ನು ಹೇಗೆ ಮರೆಯಲಿ ಗೆಳೆಯಾ? ನಿನ್ನ ಒಂದೇ ಒಂದು ಮುಗುಳ್ನಗೆಯಿಂದ ನನ್ನನ್ನು ನಿನ್ನ ಬಾಳಸಂಗಾತಿಯನ್ನಾಗಿ ಮಾಡಿದ್ದೆ ಆ ದಿನ! ನಿನ್ನೆಲ್ಲಾ ಗುಣಗಳಿಗೆ ನಾನು ಮನಸೋತಿದ್ದೆ. ನೀನಂತೂ ನೇರವಾಗಿ ನನ್ನ ಹತ್ರ ಮಾತಾಡಿ ನನ್ನ ಮೊಬೈಲ್ ನಂಬರ್ ತಗೊಂಡು ಅದೇ ದಿನ ನಂಗೆ ಮೆಸೇಜ್ ಮೇಲೆ ಮೆಸೇಜ್ ಮಾಡಿ ನಂತರ ರಾತ್ರೆ ಕಾಲ್ ಮಾಡಿದ್ದನ್ನು ಹೇಗೆ ತಾನೇ ಮರೆಯಲಿ ಹೇಳು? ನಾವು ಆ ದಿನ ಅದೆಷ್ಟೋ ವರ್ಷಗಳ ಆತ್ಮೀಯ ಗೆಳೆಯರಂತೆ ನಡು ರಾತ್ರಿಯವರೆಗೆ ಹರಟೆ ಹೊಡೆದದ್ದು, ನೀನಾದರೋ ಮಾತನಾಡದೆ ಬರೀ ನನ್ನ ಮಾತನ್ನೇ ಆಲಿಸುತ್ತಿದ್ದುದು, ನಾನಾದರೋ ನೀನು ನನ್ನ ಪರಮಾಪ್ತನಂತೆ ನನ್ನಂತರಂಗದ ಮಾತುಗಳನ್ನು, ಭಾವನೆಗಳನ್ನು ನಿನ್ನ ಜೊತೆ ಹಂಚಿಕೊಂಡಿದ್ದು... ನಮ್ಮಿಬ್ಬರ ಸಂಭಾಷಣೆಯ ಆ 'ಮೊದಲ ರಾತ್ರಿ' ನನ್ನ ಕಣ್ಣ ಮುಂದೆ ಇನ್ನೂ ಹಾಗೆ ಇದೆ ಇನಿಯಾ.
ಈ ಸಂಭಾಷಣೇ ನಮ್ಮ ಈ ಪ್ರೇಮ ಸಂಭಾಷಣೇ
ಅತಿ ನವ್ಯ ರಸ ಕಾವ್ಯ ಮಧುರಾ ಮಧುರಾ ಮಧುರಾ…
ನನ್ನಷ್ಟಕ್ಕೇ ನಾನು ಅದೆಲ್ಲೋ ಕಳೆದು ಹೋಗಿದೀನಿ ಅಂತೆಲ್ಲಾ ತಿಳ್ಕೋಬೇಡ. ಹೇಳ್ತೀನಿ ಕೇಳು, ನಿನ್ನ ಪ್ರೀತಿ ಮಾಡೋಕೆ ಶುರು ಮಾಡಿದಾಗಿನಿಂದ ಬರಿ ನಿನ್ ಬಗ್ಗೆ ಯೋಚನೆ ಮಾಡೋದಷ್ಟೇ ಆಗಿದೆ ನನ್ನ ದಿನಚರಿ. ಆಫೀಸಲ್ಲಿ ಗೆಳತಿಯರೆಲ್ಲಾ ಕೇಳ್ತಿದ್ದಾರೆ ನನಗೆ ಏನೋ ಆಗಿದೆ, ನಾನು ಪ್ರೀತಿಯಲ್ಲಿ ಬಿದ್ದಿದ್ದೀನಿ ಅಂತ. ಅವರ್ಯಾರಹತ್ರಾನೂ ನಾನು ಇತ್ತೀಚಿಗೆ ಸರಿಯಾಗಿ ಮಾತಾಡ್ತಿಲ್ಲಾ. ನಿನ್ನನ್ನ ನೆನಪು ಮಾಡಿಕೊಳ್ಳೋಕೆ ನಂಗಿಲ್ಲಿ ಸಮಯ ಸಾಕಾಗ್ತಿಲ್ಲಾ, ಅಂಥಾದ್ರಲ್ಲಿ ಇನ್ಹೇಗೆ ಅವರನ್ನಾ ಮಾತಾಡಿಸಲಿ ನೀನೇ ಹೇಳು?!?
ಸರಿ, ಎಲ್ಲಾ ಬದಿಗಿಟ್ಟು ಈಗ ವಾಸ್ತವಕ್ಕೆ ಬರ್ತೀನಿ. ನೋಡು ನಾನೇನು ನಾವಿಬ್ರು ನಾಳೇನೇ ಮದ್ವೆ ಆಗೋಣ ಅಂತೆಲ್ಲಾ ಹೇಳ್ತಿಲ್ಲ. ನಂಗೊತ್ತು ತಂಗಿ ಮದುವೆ ಆದ ಮೇಲೇನೇ ನೀನು ನಿನ್ನ ಮದುವೆ ಬಗ್ಗೆ ಯೋಚನೆ ಮಾಡ್ತೀಯಾ ಅಂತ. ಆದ್ರೆ, ಆದ್ರೆ ನಿನ್ನ ತಂಗಿಗೆ ಬೇಗ ಮದುವೆ ಮಾಡಿಸು. ಒಳ್ಳೆ ನಮ್ಮದೇ ಜಾತಿಯ, ಅವಳಿಗೊಪ್ಪುವ, ಅನುರೂಪವಾದ, ಅವಳಿಗಿಂತ ರೂಪವಂತನಾದ ಹುಡುಗನನ್ನು ಹುಡುಕಿ ಬೇಗ ಮದುವೆ ಮಾಡಿಸು. ಆಮೇಲೆ ಒಂದು ಒಳ್ಳೆ ಮುಹೂರ್ತ ನೋಡಿ ನಾವಿಬ್ರೂ ಮದುವೆ ಆಗೋಣ. ನನ್ನ ಮನೆಯಲ್ಲಿ ಈಗಾಗಲೇ ನನ್ನ ಮದುವೆಗೆ ತಯಾರಿದ್ದಾರೆ, ಆದ್ರೆ ನಂಗೊತ್ತು ನಿಮ್ಮನೇನಲ್ಲಿ ನಿನ್ನ ತಂಗಿ ಮದುವೆ ಆಗದೆ ನಿನ್ನ ಮದುವೆಗೆ ಒಪ್ಪಿಗೆ ಕೊಡೊಲ್ಲಾ ಅಂತ. ಸರಿ ನಿನ್ನ ತಂಗಿ ಮದುವೆ ಆದ ಮೇಲೇನೇ ನಾವು ಮದುವೆ ಆಗೋಣ. ಅಬ್ಬಾ ನಾನಿನ್ನೂ ಇವಳನ್ನ ಒಪ್ಕೊಂಡಿಲ್ಲ ಅದಾಗಲೇ ಇವಳು ಮದುವೆ ಹಂತಕ್ಕೆ ಹೋಗಿ ಬಿಟ್ಲಾ ಅಂತೆಲ್ಲಾ ಹುಬ್ಬೆರಿಸಬೇಡ. ಇದೆಲ್ಲಕ್ಕಿಂತ ಮೊದಲು ನನ್ನನ್ನ, ನನ್ನ ಪ್ರೀತಿಯನ್ನ ಸ್ವೀಕರಿಸು, ನನ್ನನ್ನು ನಿನ್ನ ಬಾಳಸಂಗಾತಿಯಾಗಿ ಒಪ್ಪಿಕೋ. ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಡು. ಕೊಡ್ತೀಯಾ ತಾನೇ? ನಾನು ನಿನ್ನ ಪ್ರೀತಿಯಲ್ಲಿ ಸಂಪೂರ್ಣ ಬಂದಿ ಕಣೋ. ನಂಗೆ ಹೇಳಬೇಕಾಗಿರೋದು ಇಷ್ಟೇ - ನನಗೆಲ್ಲಾ ನೀನೇ ಆದೀ, I Love you so much.... Your Sweetness is my Weakness ಅಷ್ಟೇ!
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ ಹೂಸ ಭಾವ ಗೀತೆಯು ನೀನಾದೆ…..
ಇಂತಿ ನಿನ್ನ ಉತ್ತರಕ್ಕಾಗಿ ಕಾಯುತ್ತಿರುವ
ಶಾರು - ಎಂದೆಂದು ನಿನ್ನವಳು!
- ranaasa's blog
- Login or register to post comments
- 221 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: