ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ravikreddy ರವರ ಬ್ಲಾಗ್

ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...

November 29, 2007 - 9:30am — ravikreddy

ಇದೇ ನವೆಂಬರ್ 24-25 ರಂದು ಕರ್ನಾಟಕದ ದೂರದರ್ಶನಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೋಕಾಯುಕ್ತರು ಮಾಡಿದೊಂದು ದಾಳಿಯದೆ ಸುದ್ದಿ. "ಶ್ರೀನಿವಾಸ ರೆಡ್ಡಿ ಎಂಬ ಸರ್ಕಾರಿ ನೌಕರ ತನ್ನ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾರೆ," ಎಂದು ಲೋಕಾಯುಕ್ತರು ಬಹಿರಂಗ ಪಡಿಸಿದ ಆ ನೌಕರನ ಮತ್ತವರ ಹೆಂಡತಿಮಕ್ಕಳ ಆಸ್ತಿ ವಿವರ ಹೀಗಿದೆ:
. ಮನೆಯಲ್ಲೇ ಪತ್ತೆಯಾದ ನಗದು ಹಣ ರೂ 33.7 ಲಕ್ಷ
. ಬ್ಯಾಂಕ್ ಖಾತೆಗಳಲ್ಲಿರುವ ಹಣ 1 ಕೋಟಿ ಒಂಬತ್ತು ಲಕ್ಷ
. ಷೇರುಗಳ ಮೇಲೆ ಹೂಡಿಕೆ ರೂ 15 ಲಕ್ಷ
. ಕೊಟ್ಟಿರುವ ಮುಂಗಡ ರೂ 1.5 ಕೋಟಿ
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂರು 40x60 ನಿವೇಶನಗಳು
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ 40x60 ಸೈಟುಗಳಲ್ಲಿರುವ 3 ಮನೆಗಳು
. ಆನೇಕಲ್ ತಾಲ್ಲೂಕಿನಲ್ಲಿ 14 ಎಕರೆ 33 ಗುಂಟೆ ಜಮೀನು
. ಹೆಗ್ಗಡದೇವನ ಕೋಟೆ ಯಲ್ಲಿ - 12 ಎಕರೆ ಕೃಷಿ ಜಮೀನು
. ಚಿನ್ನ 1.5 ಕೆ.ಜಿ.
. ಬೆಳ್ಳಿ 10 ಕೆ.ಜಿ.
. ಕಾರುಗಳು - 2
. ಇರುವ ಸಾಲ - 75 ಲಕ್ಷ

---

ಪ್ರಸಿದ್ಧ ನಾರಾಯಣ ಹೃದಯಾಲಯ, ಇತ್ತೀಚೆಗೆ ತಾನೆ ಲಕ್ಷ್ಮಿ ಎಂಬ ನಾಲ್ಕು ಕೈಗಳ ಪುಟ್ಟ ಮಗುವಿಗೆ ಸರ್ಜರಿ ಮಾಡಿ ಪ್ರಸಿದ್ಧಿಗೆ ಬಂದ ಸ್ಪರ್ಶ ಆಸ್ಪತ್ರೆ, ಎಂ.ಟಿ.ಆರ್.ರ ಉತ್ಪಾದನಾ ಘಟಕ, ರೇವಾ ಎಲೆಕ್ಟ್ರಿಕ್ ಕಾರಿನ ಫ್ಯಾಕ್ಟರಿ, ಮುಂತಾದ ಹತ್ತಾರು ವಿಶೇಷಗಳನ್ನು ತನ್ನ ನೂರಿನ್ನೂರು ಎಕರೆ ವಿಸ್ತೀರ್ಣದಲ್ಲಿ ಹಿಡಿದಿಟ್ಟಿಕೊಂಡಿರುವ ಊರು ನನ್ನೂರು, ಬೊಮ್ಮಸಂದ್ರ. ವಿಧಾನಸೌಧದಿಂದ ಕೇವಲ 22 ಕಿ.ಮೀ. ದೂರದಲ್ಲಿದೆ. ಇಪ್ಪತ್ತು ವರ್ಷಗಳ ಹಿಂದೆ ಇದೇ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಓದುತ್ತಿದ್ದಾಗ ನಮಗೆ ಮುಖ್ಯೋಪಾಧ್ಯಾಯರಾಗಿದ್ದವರು ರಾಮಚಂದ್ರಪ್ಪ ಎನ್ನುವವರು. ನಮ್ಮೂರಿಗಿಂತ ನಾಲ್ಕೈದು ಕಿ.ಮೀ. ದೂರದ ಊರು ಅವರದು. ಅಲ್ಲಿಂದ ಸೈಕಲ್‌ನಲ್ಲಿಯೇ ಬರುತ್ತಿದ್ದರು. ಸಜ್ಜನರು; ಪ್ರಾಮಾಣಿಕರು. ಮಕ್ಕಳಲ್ಲಿ ಆದರ್ಶದ ಗುಣಗಳನ್ನು ತುಂಬುತ್ತಿದ್ದ, ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದ ಅವರು ನನ್ನ ಮೆಚ್ಚಿನ ಗುರುಗಳೂ ಹೌದು. ಆಗಾಗ ಅವರು "ಫಾರಿನ್"ನಲ್ಲಿದ್ದ ತಮ್ಮ ಮತ್ತೊಬ್ಬ ಶಿಷ್ಯನ ಬಗ್ಗೆ, ಆತನ ಸರಳತೆ ಮತ್ತು ವಿನಯದ ಬಗ್ಗೆ ನಮಗೆ ಉದಾಹರಣೆ ಕೊಡುತ್ತ ಮೌಲ್ಯಗಳ ಕುರಿತು ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಆ ಶಿಷ್ಯನ ಹೆಸರು ಯಲ್ಲಾರೆಡ್ಡಿ ಎಂದು; ನಮ್ಮೂರಿಗಿಂತ ಮೂರು ಕಿ.ಮೀ. ದೂರದ ತಿರುಮಗೊಂಡನ ಹಳ್ಳಿಯವರು.

ನಾನು ಹೈಸ್ಕೂಲು, ಕಾಲೇಜು ಓದುತ್ತಿದ್ದಾಗ ಕೆಲವೊಮ್ಮೆ ಕೆಲವು ಕೆಲಸಗಳನ್ನು ಮಾಡಲು ಹಿಂಜರಿದರೆ, ನನ್ನ ಮತ್ತು ನನ್ನಣ್ಣನ ಅಹಂಕಾರದ ಮೊಟ್ಟೆ ಒಡೆಯಲು ನನ್ನಮ್ಮ, "ತಿರುಮಗೊಂಡನ ಹಳ್ಳಿಯ ಬಿಡ್ಡಾರೆಡ್ಡಿ ಮಗ ಯಲ್ಲಾರೆಡ್ಡಿ ಗೊತ್ತೇನ್ರೋ? ಅದೆಷ್ಟೋ ಓದವ್ನಂತೆ. ಫಾರಿನ್‌ನಲ್ಲಿದ್ದಾನಂತೆ. ಆದರೆ ಅಲ್ಲಿಂದ ಊರಿಗೆ ಬಂದ ತಕ್ಷಣ ಪ್ಯಾಂಟ್ ಬಿಚ್ಚಾಕಿ, ಚಡ್ಡಿ ಹಾಕ್ಕೊಂಡು, ನೇಗಿಲು ಎತ್ತುಕೊಂಡು ಹೊಲಕ್ಕೆ ಹೋಗ್ತಾನಂತೆ ಉಳೋದಿಕ್ಕೆ. ಇಲ್ಲಿರೋವಷ್ಟು ದಿನಾನೂ ಹೊಲದಲ್ಲಿ ಆಳುಗಳ ಸಮ ದುಡೀತಾನಂತೆ. ನಿಮಗೆಲ್ಲ ಎಷ್ಟ್ರೋ ಕೊಬ್ಬು?" ಎನ್ನುತ್ತಿದ್ದಳು. ನಮಗೆಲ್ಲ ಅಹಂಕಾರವಿಲ್ಲದ, ವಿನಯದ ಜೀವನ ಹೇಗೆ ಎಂಬ ಪಾಠ ಹಾಗೆ ಆಗುತ್ತಿತ್ತು. ಸುತ್ತಮುತ್ತಲ ಹಳ್ಳಿಗಳಲ್ಲಿ ಮನೆಗಳಲ್ಲಿಯ ಹಿರಿಯರು ಮಕ್ಕಳಿಗೆ ಯಾರದಾದರೂ ಉದಾಹರಣೆ ಕೊಡಬೇಕಿದ್ದರೆ ಯಲ್ಲಾರೆಡ್ಡಿಯವರ ಉದಾಹರಣೆ ಹೇಳುತ್ತಿದ್ದರು.

ಯಲ್ಲಾರೆಡ್ಡಿಯವರ ತಂದೆಯವರ ಹೆಸರು ಬಿಡ್ಡಾರೆಡ್ಡಿ ಎಂದು. ಕಳೆದ ವರ್ಷ ತಾನೆ ತಮ್ಮ ನೂರನೆ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಬಿಡ್ಡಾರೆಡ್ಡಿಯವರಿಗೆ ಈಗ 101 ವರ್ಷ ವಯಸ್ಸು. ದೃಷ್ಟಿ ಈಗಲೂ ಚೆನ್ನಾಗಿದೆ ಅನ್ನುತ್ತಾರೆ. ಮೊದಲಿನಿಂದಲೂ ಸ್ಥಿತಿವಂತರ ಕುಟುಂಬ ಇವರದು. ಆ ಕಾಲದಲ್ಲಿಯೇ ಆಷ್ಟಿಷ್ಟು ಓದಿಕೊಂಡ ಇವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ನಲವತ್ತು ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರೊಂಡನೆ ಸೇರಿಕೊಂಡು ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಕೇಂದ್ರಸ್ಥಳವಾಗಿದ್ದ ಚಂದಾಪುರದಲ್ಲಿ "ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ" ಸ್ಥಾಪಿಸಿದ್ದು ಇವರೆ. ಮಕ್ಕಳೆಂದರೆ ಅಪಾರ ಪ್ರೀತಿ ಇವರಿಗೆ. ಶಾಲೆಯಲ್ಲಿ ಅಧ್ಯಾಪಕರೇನಾದರೂ ಮಕ್ಕಳನ್ನು ಹೊಡೆದದ್ದು ಇವರಿಗೆ ಗೊತ್ತಾದರೆ ಅಧ್ಯಾಪಕರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ. ಜೀವನದಲ್ಲಿ ಒಂದಷ್ಟು ಮೌಲ್ಯಗಳನ್ನು, ಸಾಮಾಜಿಕ ಕಾಳಜಿಗಳನ್ನು ಇಟ್ಟುಕೊಂಡು ಬದುಕಿದವರು.

ಯಲ್ಲಾರೆಡ್ಡಿಯವರು ಬಿಡ್ಡಾರೆಡ್ಡಿಯವರ ಹಿರಿಯ ಮಗ. 35 ವರ್ಷಗಳ ಹಿಂದೆ ರಾಜ್ಯದ ಪ್ರತಿಷ್ಠಿತ ಯು.ವಿ.ಸಿ.ಇ. ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮತ್ತು ಎಂ.ಇ. ಮುಗಿಸಿ, ಪಿಎಚ್‌ಡಿ ಗಾಗಿ ಇಂಗ್ಲೆಂಡ್‌ಗೆ ಹೋದರು. ನಂತರ ಅಲ್ಲಿ ಸುಮಾರು 20 ವರ್ಷ ಅಧ್ಯಾಪಕರಾಗಿದ್ದು ಆರೇಳು ವರ್ಷದ ಹಿಂದೆ ತಮ್ಮ ಶ್ರೀಮತಿಯವರೊಡನೆ ತಿರುಮಗೊಂಡನ ಹಳ್ಳಿಗೆ ವಾಪಸ್ಸಾಗಿ, ತಮ್ಮ ಶತಾಯುಷಿ ತಂದೆಯವರೊಡನೆ ಇದ್ದಾರೆ. ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚಿನ್ನದ ಬೆಲೆ ಬಂದಿರುವ ತಮ್ಮ ಜಮೀನಿನಲ್ಲಿ ಈಗಲೂ ಸ್ವತಃ ತಾವೇ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರಿನ ಒಂದೆರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಿನ್ಸಿಪಾಲ್ ಆಗಿಯೂ ಡಾ. ಯಲ್ಲಾರೆಡ್ಡಿ ಕೆಲಸ ಮಾಡಿದ್ದಾರೆ. ಆಗೆಲ್ಲ ಬೆಳಿಗ್ಗೆ ಮತ್ತು ಸಾಯಂಕಾಲ ಹೊಲದಲ್ಲಿ ನೇಗಿಲು, ಸನಿಕೆ, ಗುದ್ದಲಿಗಳೊಡನೆ ಒಡನಾಟ; ಹತ್ತು ಗಂಟೆಯಾದ ಮೇಲೆ ನಗರದ ಕಾಲೇಜಿನಲ್ಲಿ ಅಧ್ಯಾಪನ ಮತ್ತು ಕಾಲೇಜು ಕೆಲಸ. ಮಧ್ಯೆ ತಂದೆಯವರ ಅಗತ್ಯಗಳನ್ನು ನೋಡಿಕೊಳ್ಳುವುದು. ಬಹುಶಃ ಕರ್ನಾಟಕದ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲರೊಬ್ಬರ ದಿನಚರಿ ಹೀಗೆ ಇದ್ದದ್ದು ಅನುಮಾನ. ಈ ನಡುವೆ ತಮ್ಮದೇ ಒಂದು ಟ್ರಸ್ಟ್ ಮಾಡಿಕೊಂಡು, ಬಡಮಕ್ಕಳನ್ನು ಓದಿಸುವ ಯೋಜನೆ ಹಾಕಿಕೊಂಡು ರಾಮನಗರ, ಮಾಗಡಿಗಳ ಕಡೆ ಓಡಾಡುತ್ತಿದ್ದಾರೆ.

ಕಳೆದ ವಾರ ಲೋಕಾಯುಕ್ತ ದಾಳಿಗೆ ಒಳಗಾದ "ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ" ಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಇದೇ ಯಲ್ಲಾರೆಡ್ಡಿಯವರ ತಮ್ಮ; ಒಂದಷ್ಟು ಮೌಲ್ಯಗಳೊಂದಿಗೇ ಬದುಕಿದ ಶತಾಯುಷಿ ಬಿಡ್ಡಾರೆಡ್ಡಿಯವರ ಕಿರಿಯ ಮಗ.


ಲೇಖನದ ವಿಡಿಯೊ ಪ್ರಸ್ತುತಿ

ಜನ ಹುಟ್ಟುತ್ತಾರೆ, ಸಾಯುತ್ತಾರೆ. ಕುಟುಂಬಗಳು, ಸಾಮ್ರಾಜ್ಯಗಳು ಬೆಳೆಯುತ್ತವೆ, ಕಾಲಕ್ರಮೇಣ ಅವನತಿಯಾಗುತ್ತವೆ. ಕೆಲವು ಮೋಸಗಾರರಿಗೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಕೆಲವು ಒಳ್ಳೆಯವರಿಗೆ ದುಷ್ಟ ಮಕ್ಕಳು ಹುಟ್ಟುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ಮೇಲಿನ ಪ್ರಸಂಗದಲ್ಲಿ ಒಂದೇ ಕುಟುಂಬದಲ್ಲಿನ ವೈರುಧ್ಯಗಳು ಎದ್ದು ಕಾಣಿಸುವುದೇನೋ ನಿಜ. ಆದರೆ, ಇಲ್ಲಿ ಅದಕ್ಕಿಂತ ಭೀಕರವಾದದ್ದು, ಯೋಚಿಸಬೇಕಾದ್ದು, ಇನ್ನೊಂದಿದೆ. ಅದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರಿನ ಸುತ್ತಮುತ್ತ ಹಾಗೂ ಬಹುಶಃ ಇಡೀ ದೇಶದಲ್ಲಿ ಮೌಲ್ಯಗಳು ಹೇಗೆ ಪಲ್ಲಟಗೊಂಡಿವೆ ಅನ್ನುವುದು. ಇದು ಎಷ್ಟು ಢಾಳಾಗಿದೆ ಎಂದರೆ, ಕಳೆದ ಹತ್ತು ವರ್ಷಗಳಲ್ಲಿ ನನ್ನ ಸುತ್ತಮುತ್ತಲಿನ ಹಳ್ಳಿಗಳಲ್ಲಿಯ ಬಹುಪಾಲು ಜನ ತಮ್ಮ ಮಕ್ಕಳಿಗೆ ಡಾ. ಯಲ್ಲಾರೆಡ್ಡಿಯ ಬಗ್ಗೆ ಹೇಳುತ್ತಿಲ್ಲ. ಬದಲಿಗೆ, "ಆ ಶ್ರೀನಿವಾಸರೆಡ್ಡೀನ ನೋಡ್ರೋ. ಬೆಂಗಳೂರಿನಲ್ಲಿ ಎರಡು ಮೂರು ಬಂಗ್ಲೆಗಳಿವೆ. ಇನ್ನೂ ಎಷ್ಟೋ ಸೈಟುಗಳಿವೆಯಂತೆ. ಇವತ್ತು ಏನಿಲ್ಲಾ ಅಂದರೂ ಐವತ್ತು, ನೂರು ಕೋಟಿಗೆ ಬಾಳ್ತಾನೆ. ಗೌರ್ನಮೆಂಟ್‌ನಲ್ಲಿ ಒಳ್ಳೆ ಕೆಲಸದಲ್ಲಿ ಇದ್ದಾನೆ. ಚೆನ್ನಾಗಿ ದುಡ್ಡು ಮಾಡವ್ನೆ!" ಎನ್ನುತ್ತಿದ್ದಾರೆ. ಇದು ಇಂದಿನ ವಾಸ್ತವ ಪರಿಸ್ಥಿತಿ.

ಇಲ್ಲಿ ಇದಕ್ಕಿಂತ ಹೊಟ್ಟೆಕಿವುಚುವಂತಹದ್ದು ಇನ್ನೊಂದಿದೆ. ಅದೇನೆಂದರೆ, ಹತ್ತಿಪ್ಪತ್ತು ವರ್ಷಗಳ ಹಿಂದೆ ಯಾರು ತಮ್ಮ ಮಕ್ಕಳಿಗೆ ಯಲ್ಲಾರೆಡ್ಡಿಯ ಉದಾಹರಣೆ ಕೊಡುತ್ತಿದ್ದರೊ ಅದೇ ಜನ ಇವತ್ತು ಶ್ರೀನಿವಾಸರೆಡ್ಡಿಯ ಮತ್ತು ಅವರಂತಹವರ ಉದಾಹರಣೆ ಕೊಡುತ್ತಿರುವುದು. ಸಹ್ಯ ಸಮಾಜದಲ್ಲಿ ಇರಲೇಬೇಕಾದ ಕೆಲವು ಕನಿಷ್ಠ ಮೌಲ್ಯಗಳು ಯಾವ ಪರಿ ಅಧೋಗತಿಗೆ ಇಳಿದಿವೆ ಎಂದರೆ, ಸ್ವತಃ ಬಿಡ್ಡಾರೆಡ್ಡಿಯವರೆ ಇವತ್ತು ತಮ್ಮ ಹಿರಿಯ ಮಗನಿಗೆ ತಮ್ಮ ಕಿರಿಯ ಮಗನ ಉದಾಹರಣೆ ಕೊಟ್ಟು, "ನೋಡೋ, ಅವನನ್ನು ನೋಡಿ ಕಲಿತುಕೊ," ಎಂದುಬಿಟ್ಟರೆ, ಅದರಿಂದೇನೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ, ಅಂತಹುದ್ದು ಇಂದು ಅನೇಕರ ಮನೆಗಳಲ್ಲಿ ಆಗುತ್ತಿವೆ. ಭ್ರಷ್ಟಾಚಾರ ಮಾಡಿ ಸಿಕ್ಕಿಹಾಕಿಕೊಳ್ಳುವುದು ಇವತ್ತು ಅವಮಾನದ ವಿಷಯವಲ್ಲ; ಕೆಲವು ದಿನಗಳ discomfort ಅಷ್ಟೆ. ಯಾವಯಾವ ಮೌಲ್ಯಗಳನ್ನು ಇಟ್ಟುಕೊಂಡು ದುಡಿಯಬೇಕು ಎನ್ನುವುದು ಇವತ್ತಿನ ಅಗತ್ಯ ಅಲ್ಲ. "ಏನಾದರೂ ಮಾಡಿ, ದುಡ್ಡು ಮಾಡಿ," ಎನ್ನುವುದು ಇವತ್ತಿನ ಅವಶ್ಯಕತೆ. ಪ್ರಾಮಾಣಿಕವಾಗಿ ಬದುಕುವವರು ಹುಚ್ಚರು, ಲೂಸರ್‌ಗಳು; ಅವರು ಬಡವರಾಗಿದ್ದರಂತೂ ಲೆಕ್ಕಕ್ಕೇ ಇಲ್ಲ. ಅದೇ ದುಡ್ಡಿರುವವನು ಮಾಡುವ ಹೀನಾತಿಹೀನ ಕೃತ್ಯವೂ ಇವತ್ತು ಸಮರ್ಥನೀಯ. ಹೇಗೆ ಮಾಡಿದ ಎನ್ನುವುದು ಮುಖ್ಯವಲ್ಲ. ಎಷ್ಟು ಮಾಡಿದ ಎನ್ನುವುದಷ್ಟೆ ಮುಖ್ಯ. ದುಷ್ಟರೂ, ಭ್ರಷ್ಟರೂ ಆಗಲಷ್ಟೆ ಈಗ ಪೈಪೋಟಿ.

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಏನಾಗಿ ಹೋಯಿತು ಈ ಸಮಾಜ? ಮೌಲ್ಯಗಳ ಪುನರ್‌ ಸ್ಥಾಪನೆ ಈಗ ತುರ್ತಾಗಿ ಆಗಬೇಕಿರುವ ಕೆಲಸಗಳಲ್ಲಿ ಒಂದು. ಇಲ್ಲವಾದಲ್ಲಿ ನಾವು ಶತಮಾನಗಳ ಕಗ್ಗತ್ತಲೆಯತ್ತ ಹೆಜ್ಜೆಯಿಡುತ್ತಿದ್ದೇವೆ.



ರಾಷ್ಟ್ರಕವಿಗಳಲ್ಲೂ ಅವನತಿಗೊಂಡ ಮೌಲ್ಯಗಳು
ಇವತ್ತು ಮೌಲ್ಯಗಳು ಜನಸಾಮಾನ್ಯರಲ್ಲಿಯಷ್ಟೇ ಅಲ್ಲ, ಯಾರು ಇಡೀ ಸಮಾಜದ ಸಾಕ್ಷಿಪ್ರಜ್ಞೆ ಆಗಬೇಕಿತ್ತೊ ಅವರಲ್ಲಿಯೇ ಅವನತಿ ಆಗಿಬಿಟ್ಟಿವೆ. ಜಿ.ಎಸ್.ಶಿವರುದ್ರಪ್ಪ ಅವರನ್ನು ಸರ್ಕಾರ ಕಳೆದ ವರ್ಷ "ರಾಷ್ಟ್ರಕವಿ" ಎಂದು ಘೋಷಿಸಿತು. ನಂತರದ ದಿನಗಳಲ್ಲಿ ಎಲ್ಲೆಲ್ಲೂ ಸನ್ಮಾನಕ್ಕೆ ತಲೆಬಾಗುತ್ತಿರುವ ಕವಿಶ್ರೇಷ್ಠರದೇ ಸುದ್ದಿಚಿತ್ರಗಳು! ರಾಷ್ಟ್ರಕವಿ ಎನ್ನುವುದು ಪದವಿಯೇ ಯಾಕಾಗಬೇಕು, ಅದು ಜವಾಬ್ದಾರಿಯೂ ಹೌದಲ್ಲವೆ ಎಂದುಕೊಳ್ಳದ ರಾಷ್ಟ್ರ(ಆಸ್ಥಾನ)ಕವಿಗಳು, ಮೊನ್ನೆ ಯಡ್ಡಯೂರಪ್ಪನವರ ಪ್ರಮಾಣವಚನ ಸಮಾರಂಭಕ್ಕೂ ಹಾಜರು. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಅನೈತಿಕ, ನಿರ್ಲಜ್ಜ ರಾಜಕೀಯ ಹೊಂದಾಣಿಕೆಗಳಿಗೆಲ್ಲ ತಮ್ಮ ಹಾಜರಿ ಮಾತ್ರದಿಂದಲೆ ಮಾನ್ಯತೆ ದೊರಕಿಸಿಕೊಟ್ಟುಬಿಟ್ಟ, ತಮ್ಮ ಉಪಸ್ಥಿತಿ ಕಾಲಾತೀತವಾಗಿ ಏನನ್ನು ಹೇಳುತ್ತದೆ ಎನ್ನುವುದನ್ನು ಯೋಚಿಸಲಾರದೆ ಹೋದ ಜಿಎಸ್ಸೆಸ್, ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಕವಿಯಾಗಲು ನಿಜಕ್ಕೂ ಅರ್ಹರೆ?

1949 ರಲ್ಲಿ ಕರ್ನಾಟಕ ಏಕೀಕರಣದ ಹೋರಾಟ ನಡೆಯುತ್ತಿತ್ತು. ದಕ್ಷಿಣದ ಕೆಲವು ಜಾತಿಗಳ ರಾಜಕಾರಣಿಗಳಿಗೆ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತರಿಗೆ ಅದು ಬೇಕಿರಲಿಲ್ಲ. ಕವಿ ಕುವೆಂಪು ಏಕೀಕರಣದ ಪರ ಒಮ್ಮೆ ಮಾತನಾಡಿದ್ದಕ್ಕೆ ಆಗಿನ ಸಚಿವರಿಂದ ಎಚ್ಚರಿಕೆಯ ನೋಟಿಸ್ ಬಂತಂತೆ. ಕುವೆಂಪು ಉತ್ತರ ಬರೆದರು.

  ಅಖಂಡ ಕರ್ಣಾಟಕ:
  ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ !
  ಇಂದು ಬಂದು ನಾಳೆ ಸಂದು
        ಹೋಹ ಸಚಿವ ಮಂಡಲ
  ರಚಿಸುವೊಂದು ಕೃತಕವಲ್ತೊ
  ಸಿರಿಗನ್ನಡ ಸರಸ್ವತಿಯ
        ವಜ್ರಕರ್ಣ ಕುಂಡಲ!
  ಅಖಂಡ ಕರ್ಣಾಟಕ:
  ಅಲ್ತೊ ನಮ್ಮ ನಾಲ್ಕುದಿನದ ರಾಜಕೀಯ ನಾಟಕ !

ಯಾವುದು ಸರಿ, ಯಾವುದು ಸರಿಯಲ್ಲ ಎಂಬ ಸ್ಪಷ್ಟ ಕಲ್ಪನೆಯಿದ್ದವರು ಕುವೆಂಪು. ಅವರು ಆಸ್ಥಾನಕವಿಯಲ್ಲ. ನಿಜವಾದ ರಾಷ್ಟ್ರಕವಿ. ಯುವರಾಜರಿಗೆ ಟ್ಯೂಷನ್ ಹೇಳಿಕೊಡಿ ಎಂಬ ಕೋರಿಕೆ ಅರಮನೆಯಿಂದ ಬಂದಾಗಲೂ ಅದನ್ನು ನಿರಾಕರಿಸಿದ್ದ ಸ್ವಾಭಿಮಾನಿ, ಕುವೆಂಪು. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಆತ್ಮಾಭಿಮಾನ ಇಟ್ಟುಕೊಂಡವರು.

ಕುವೆಂಪು ಅವರ ನೇರಶಿಷ್ಯರುಗಳಲ್ಲಿ ಶ್ರೇಷ್ಠಕವಿ ಎನ್ನಿಸಿಕೊಂಡವರು ಶಿವರುದ್ರಪ್ಪನವರು. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದಲ್ಲಿರಬೇಕಿದ್ದ ಆಸ್ಥಾನನಿಷ್ಠೆ ಇಟ್ಟುಕೊಂಡವರು.

ಮೌಲ್ಯಗಳಲ್ಲಿ ಎಂತಹ ಅಧೋಗತಿ ನೋಡಿ...

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 07, 2007 ರ ಸಂಚಿಕೆಯಲ್ಲಿನ ಬರಹ)

~.~
  • ravikreddy ರವರ ಬ್ಲಾಗ್
  • Login or register to post comments
  • 314 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 29, 2007 - 1:04pm — hamsanandi

ಉ: ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...

hamsanandi's picture

ಹೌದು ರವಿ - ನಾನೂ ಕೂಡಾ ಈ ಬದಲಾವಣೆಯನ್ನು ಗಮನಿಸುತ್ತ ಬಂದಿದ್ದೇನೆ. ಬರಹ ಸಮಯೋಚಿತವಾಗಿದೆ. ಈಗಿನ ಕೊಳ್ಳುಬಾಕ ಸಂಸ್ಕೃತಿಯೇ ಇದಕ್ಕೆ ಕಾರಣವೋ, ಅಥವಾ , ಈ ಬದಲಾವಣೆಯೇ ಮನುಷ್ಯನ ಹಣ ನೋಡಿ ಮಣೆ ಹಾಕುವ ಪರಿಸ್ಥಿತಿಗೆ ಕಾರಣವೋ ನಾನರಿಯೆ Sad

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2007 - 9:01pm — savithru

ಉ: ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...

savithru's picture

>>>>ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚಿನ್ನದ ಬೆಲೆ ಬಂದಿರುವ ತಮ್ಮ ಜಮೀನಿನಲ್ಲಿ ಈಗಲೂ ಸ್ವತಃ ತಾವೇ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರಿನ ಒಂದೆರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಿನ್ಸಿಪಾಲ್ ಆಗಿಯೂ ಡಾ. ಯಲ್ಲಾರೆಡ್ಡಿ ಕೆಲಸ ಮಾಡಿದ್ದಾರೆ.

ಯೆಲ್ಲಾ ರೆಡ್ಡಿಯವರ ಬಗ್ಗೆ ತಿಳಿಸಿದ್ದಕ್ಕೆ ವಂದನೆಗಳು.

ಇನ್ದೊಮ್ಮೆ ನನಗೆ ಶಿಕ್ಷಕ ನಾಗಬೇಕಮ್ಬ ಹುಚ್ಚು ತಲೆಗೇರಿತ್ತು. ಆಗ ನಾನು ಸ್ವಲ್ಪ ದಿನ ಹೆಸರ ಘಟ್ಟ ರಸ್ತೆ ( ಬೆಂಗಳೂರು) ಯಲ್ಲಿರುವ , ಸೋಲದೇವನಹಳ್ಳಿ ಬಳಿ ಇರುವ ಒಂದು engineering ಕಾಲೇಜಿನಲ್ಲಿ ಸ್ವಲ್ಪ ದಿನ ಕೆಲ್ಸಾ ಮಾಡಿದೆ
ಅಲ್ಲಿ ಆಗ ಈ ಯೆಲ್ಲಾ ರೆಡ್ಡಿಯವರೇ ಪ್ರಿನ್ಸಿಪಾಲ್ ಆಗಿದ್ದರು. ತುಂಬಾ ಸಲ ಹತ್ತಿರದಿಂದ ಮಾತಡಿಸಿದ್ದೇನೆ. ಸರಳ , ಸಜ್ಜನ ವ್ಯಕ್ತೀಗಳು. ಅವರು ಮಾಡುತ್ತಿರುವ ಇತರೆ ಒಳ್ಳೆಯ ಕೆಲಸಗಳು ನಮಾಗಾರಿಗೂ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ವಂದನೆಗಳು.

ನೀವು ಮೌಲ್ಯಗಳ ಬಗ್ಗೆ ಬರೆದಿದ್ದೆರಿ... ಹಾಗೆಯೇ ಇಂಜಿನಿಯರಿಂಗ್ ಕಾಲೇಜು , ಪ್ರಿನ್ಸಿಪಾಲ್ ಬಳಸಿದೆರಿ. ನನ್ನ ಸ್ವಂತ ಅನುಭವ ವನ್ನು ಇಲ್ಲಿ ಹೇಳಬೇಕು ಅನ್ನಿಸ್ತಾ ಇದೆ.

ನನಗೆ ಹತ್ತಿರ ಹತ್ತಿರ 2 ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿದ ಅನುಭವ ಇದೆ. ಎರಡು ಎಂಜಿನೀರಿಂಗ್ ಕಾಲೇಜುಗಳನ್ನು ತುಂಬಾ ಹತ್ತಿರದಿಂದ ಬಲ್ಲೆ. ( ನಾನು ಓದಿದ ಎರಡು ( degree, PG) ಕಾಲೇಜು ಬಿಟ್ಟು).

ಈ ಕಾಲೇಜುಗಳಲ್ಲಿ, ವ್ಯವಸ್ಥೆ ತುಂಬಾ ಕೆಟ್ಟು ಹೋಗಿದೆ. ನಾನು ಅದನ್ನು ವಿವರಿಸಲು ಆಗುವುದಿಲ್ಲ.

ಒಬ್ಬ ಹೊಟ್ಟೆಪಾಡಿಗೆ ಶಿಕ್ಷಕನಾದರೆ , ಅವನು ಯಾವತ್ತೂ ಒಬ್ಬ ಒಳ್ಳೆಯ, ಸಫಲ ಶಿಕ್ಷಕನಾಗಲು ಸಾಧ್ಯವಾಗೋದಿಲ್ಲ. ಅಲ್ಲಿನ ವ್ಯವಸ್ಥೆ ಅವನನ್ನು frustrated ವ್ಯಕ್ತಿಯ್ನಾಗಿಸುತ್ತೆ. ಅವನಿಗೆ ಕೊಡುವ ಸಂಬಳ , ಕಾಲೇಜಿನ ಆಡಳಿತ ವರ್ಗ ಅವನನ್ನು ನಡೆಸಿಕೊಳ್ಳುವ ರೀತಿ... ಸರಿಯಿಲ್ಲ. ನಿಜ ಹೇಳ್ತೀನಿ... ದುಡ್ಡಿಗೋಸ್ಕರ ಏನನ್ನಾದರೂ ತಿನ್ನಲು, ಯಾರನ್ನಾದರೂ ಅಡ ಇಡಲು ಈಿಗಿನ ವ್ಯವಸ್ಥೆ ಸಿದ್ದವಿದೆ. ಒಬ್ಬ ತನ್ನ ಹೊಟ್ಟೆಪಾಡಿಗಾಗಿ ಈ ವೃತ್ತಿಯನ್ನು ಆರಿಸಿಕೊಂಡರೆ ...ಆದಶ್ಟು ಬೇಗ ಆತ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತಾನೆ. ಮೌಲ್ಯಗಳನ್ನು ಕಳೆದುಕೊಣ್ದಾತ ಇತರರಲ್ಲಿ ಏನು ಮೌಲ್ಯವನ್ನು ತುಮ್ಬಿಯಾನು?

ಹಸಿದ ಹೊಟ್ಟೆಗೆ ಮೌಲ್ಯಗಳು ಹಿಡಿಸಲ್ಲ. ಈ ಕೊಳ್ಳುಬಾಕ ಸಂಸ್ಕೃತಿ ನಮ್ಮ ಹಸಿವನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ.! ಇದು ಕಟು ಸತ್ಯ...

ನಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ನಮಗೆ "ಬುದ್ದಿವಂತಿಕೆ"ಯ ಅವಶ್ಯಕತೆಯಿದೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂಥರಾ ಪ್ರೀತಿ...
  • ಸಂಗೀತ ಪಾಠದ ಮೊದಲ ಗೀತೆ
  • ಮೆಟ್ರೋ ರೈಲು ಸರಿ ಆದರೆ ಹಳಿ ತಪ್ಪು ದಾರಿ
  • ಕುಂಟನಿ ಎಂಬ ವಿಸ್ಮಯ
  • ಹೇಳೇ ನೀ ಒಮ್ಮೆ...
Syndicate content

ಲೇಖಕರು

ravikreddy's picture

ಪೂರ್ಣ ಹೆಸರು
ರವಿ ಕೃಷ್ಣಾ ರೆಡ್ಡಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 106 ಅತಿಥಿಗಳು ಆನ್ಲೈನ್ ಇರುವರು.


ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator