ಎಂಥ ನಾಡಿದು ಎಂಥ ಕಾಡಾಯಿತೋ
ಸಂಪದಕ್ಕೆ ಲಾಗ್ ಇನ್ ಆದಾಗಲೆಲ್ಲಾ, ರಂ . ಶ್ರೀ. ಮುಗಳಿಯವರ ಈ ಮಾತು 'ಅನುಭವಾಮೃತಗಳ'ಲ್ಲಿ ಕಣ್ಣಿಗೆ ಬೀಳುತ್ತಿತ್ತು. ಇದು ನನಗೆ ಬಹಳ ಪ್ರಿಯ ವಿಷಯಗಳಾದ ಕನ್ನಡ ಹಾಗೂ ಕರ್ನಾಟಕದ ಇತಿಹಾಸಗಳನ್ನು ನೆನಪಿಗೆ ತರುತ್ತಿದ್ದವು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಆಗಾಗ, ವಾಚನಾಲಯಗಳಲ್ಲಿ ಓದಿದ್ದ, ಕನ್ನಡ ನುಡಿ, ಸಾಹಿತ್ಯದ ಬಗೆಗಿನ ಪುಸ್ತಕಗಳಿಂದ ನಾನು ತಿಳಿಕೊಂಡದ್ದನ್ನು ಬರೆಯೋಣವೆನಿಸಿದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಮಯದಲ್ಲಿ, ಶ್ರೀಯುತರುಗಳಾದ, ರಂ. ಶ್ರೀ. ಮುಗಳಿ, ಶಂಬಾ ಜೋಶಿ, ಆಲೂರು ವೆಂಕಟರಾಯರುಗಳ ಕೆಲವು ಕೃತಿಗಳನ್ನು ಓದಿದ್ದೆ. ಅವುಗಳಲ್ಲಿ, 'ಕಂನುಡಿಯ ಹುಟ್ಟು', 'ಕರ್ನಾಟಕ ಪರಂಪರೆ' ಎಂಬೆರೆಡು ಪುಸ್ತಕಗಳ ಹೆಸರು ನೆನಪಿದೆ. ಈ ಕೃತಿಗಳಲ್ಲಿ ಕೃತಿಕಾರರುಗಳು ಕನ್ನಡದ ಪ್ರಾಚೀನತೆಯ ಬಗ್ಗೆ ಹಾಗೂ ಅದರ ಹರಹಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.
ಚಾಲುಕ್ಯ, ರಾಷ್ಟ್ರಕೂಟರ ಆಡಳಿತ ಇಂದಿನ ಮಹಾರಾಷ್ಟ್ರಕ್ಕೂ ವ್ಯಾಪಿಸಿತ್ತು ಎಂಬುದು ಸಾಕಷ್ಟು ತಿಳಿದಿರುವ ವಿಚಾರ. ಆದರೆ, ಆಗ ಈ ಪ್ರದೇಶದ ಜನರ ಆಡುನುಡಿಯೂ ಕನ್ನಡವೇ ಆಗಿತ್ತು ಎಂಬುದನ್ನು ಶಂಬಾ ಜೋಶಿಯವರು ಸಾಕಷ್ಟು ಐತಿಹಾಸಿಕ ಪುರಾವೆಗಳ ಮೂಲಕ ತೋರಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಅವರು ಬಹಳ ಮುಖ್ಯವಾಗಿ ಬಳಸಿರುವುದು, ಸ್ಥಳನಾಮಗಳನ್ನು. ಈ ದಿನದ ವರೆಗೂ ಮಹಾರಾಷ್ಟ್ರದ ಅನೇಕ ಊರುಗಳ ಹೆಸರು ಅಚ್ಚಕನ್ನಡದ್ದಾಗಿವೆ. ಅವರು ಕೊಡುವ ಕೆಲವು ಉದಾಹರಣೆಗಳು,
ಲಟ್ಟಲೂರು -> ಲಾತೂರು
ಸೊನ್ನಲಿಗೆ -> ಸೊಲ್ಲಾಪುರ
ಬೋರಿವಲಿ -> ಬೋರಿಹಳ್ಳಿ
ಕಾಂದಿವಲಿ -> ಕಾಂದಿಹಳ್ಳಿ
ಹೀಗೆ.....
ಅಷ್ಟೇ ಅಲ್ಲದೆ, ಔರಂಗಾಬಾದ್ ಜಿಲ್ಲೆಯಲ್ಲಿನ ಒಂದು ತಾಲ್ಲೂಕಿನ ಹೆಸರು 'ಕನ್ನಡ್' ಎಂದು. ಅಲ್ಲದೆ, ಊರು ಎಂಬ ಕನ್ನಡ ಸೇರಿದಂತೆ, ಇತರ ದ್ರಾವಿಡ ಭಾಷೆಗಳ ಸ್ಥಳವಾಚಕ, ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿದೆ. ಉದಾ:- ಶಿರೂರು, ಲಾತೂರು, ಯೇವೂರು ಇತ್ಯಾದಿ.
ಹಾಗಯೇ ಮರಾಠೀ ಭಾಷೆಯಲ್ಲಿಯೂ ಸಹ ಕನ್ನಡದ ಅನೇಕ ಶಬ್ಧಗಳು ಸೇರಿಕೊಂಡಿವೆ. ತುಪ್ಪ, ಅಕ್ಕ, ಅಪ್ಪ, ತಾಯಿ, ಅಣ್ಣ, ಅತ್ತೆ, ಅಜ್ಜ, ಅಜ್ಜಿ ಹೀಗೆ. ಹೀಗೇ, ಕನ್ನಡದಲ್ಲಿಯೂ ಅನೇಕ ಮರಾಠೀ ಶಬ್ಧಗಳು ಪ್ರಚಲಿತವಾಗಿವೆ. ಬಂಡುಕೋರ, ಬಂಡವಾಳ ಹೀಗೆ.
ಮುಂಬಯಿ ಬಳಿಯಿರುವ ಎಲಿಫೆಂಟಾದ ಗುಹಾಂತರ ದೇಗುಲಗಳೂ ಚಾಲುಕ್ಯರಿಂದಲೇ ನಿರ್ಮಿತವಾದವು. ಹಾಗೆ ನೋಡುವುದಾದರೆ, ಇಂದಿನ ಮಹಾರಾಷ್ಟ್ರದ ಹೃದಯಭಾಗಗಳೆಲ್ಲವೂ ಕನ್ನಡರ ಆಳ್ವಿಕೆಯಲ್ಲಿದ್ದವು. ಆದರೆ ನಂತರದ ಸಮಯಗಳಲ್ಲಿ, ಕನ್ನಡಿಗರ ರಾಜಕೀಯ ಶಕ್ತಿ ಕುಸಿದಂತೆ, ಕನ್ನಡ ನಾಡಿನ ಉತ್ತರ ಭಾಗಗಳೇ ಮರಾಠರ ಆಳ್ವಿಕೆಗೆ ಒಳಪಟ್ಟಿದ್ದು ವಿಪರ್‍ಯಾಸವಲ್ಲದೆ ಮತ್ತೇನು. ಇಷ್ಟೆಲ್ಲ ಆದಮೇಲೆ, ಮೊಟ್ಟ ಮೊದಲ ಮರಾಠ ರಾಜ್ಯವನ್ನು ಸ್ಥಾಪಿಸಿದ ಶಿವಾಜಿ ಮಹಾರಾಜನ ವಂಶದ ಮೂಲ ಪುರುಷನೂ ಕನ್ನಡಿಗನೇ ಆಗಿದ್ದ. ಹೀಗಿರುವಾಗ, ಮರಾಠಿಗರು ಬೆಳಗಾವಿಗಾಗಿ ಹಪಹಪಿಸುವುದು ಎಷ್ಟು ಹಾಸ್ಯಾಸ್ಪದ ಎನಿಸದಿರದು.

- Rohit ರವರ ಬ್ಲಾಗ್
- Login or register to post comments
- 1325 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ರಾಜ್ಯಗಳ ಮಧ್ಯೆ ಹಣಾಹಣಿ
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು, ಇನ್ಯಾವುದೋ ನಮಗೆ ಸೇರಬೇಕು ಎನ್ನುವುದು ಹುರುಳಿಲ್ಲದ್ದು. ಈಗಿರುವುದು ಸರಿಯಾಗಿಯೇ ಇದೆ.
"ಮರಾಠಿಗರು ಬೆಳಗಾವಿಗಾಗಿ ಹಪಹಪಿಸುವುದು" - ಇದಷ್ಟೇ ಅಲ್ಲ, ಉತ್ತರ ಕರ್ನಾಟಕದವರು 'ಬೇರೆ ರಾಜ್ಯ ಬೇಕು' ಎನ್ನುವುದೂ ನನಗೆ ವಿಚಿತ್ರವೆಂದು ತೋರುತ್ತದೆ. ಈಗಿರುವುದಕ್ಕೇನಾಗಿದೆ? ಹೈ ಕೋರ್ಟ್ ಒಂದು ದೂರವೆಂಬ ಮಾತ್ರ ನೆಪಕ್ಕೆ ಹೊಸ ರಾಜ್ಯ ಮಾಡಿ ಈಗಲೇ ಸೊರಗಿರುವ ಕನ್ನಡವನ್ನು ಒಡೆಯುವ ಪ್ರಮೇಯವೇಕೆ? ಉತ್ತರ ಭಾರತದಲ್ಲಾದದ್ದು ಬೇರೆ. ಅಲ್ಲಿ ಎಷ್ಟೋ ರಾಜ್ಯಗಳಲ್ಲಿ ಹಿಂದಿಯೇ ಆಡುಭಾಷೆ.
--
"ಹೊಸ ಚಿಗುರು, ಹಳೆ ಬೇರು"
ಉತ್ತರ ಕರ್ನಾಟಕದ ಕಥೆ ಬೇರೆ
ನಾಡಿಗರೆ,
ಉತ್ತರ ಕರ್ನಾಟಕದವರು ಬೇರೆಯ ರಾಜ್ಯ ಕೇಳುವುದಕ್ಕೆ ಕಾರಣವಿದೆ. ಅವರೇನು ತಮ್ಮನ್ನು ಕನ್ನಡೇತರರು ಎಂದು ಕಾಣುವುದಿಲ್ಲ.. ಮೈಸೂರು ಕರ್ನಾಟಕದವರು ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಅವರು ಕೊಡುವ ಕಾರಣ.. ಹಾಗು ಇದು ನಿಜವೂ ಹೌದು. ಹೆಸರಿಗೆ ಅಲ್ಲಿನ ರಾಜಕಾರಣಿಗಳು ಅಧಿಕಾರದಲ್ಲಿದ್ದಾರೆಯೇ ವಿನಹ ಅಲ್ಲಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಜನರೇ ಕಮ್ಮಿ, ಮಾತೆತ್ತಿದರೆ ಬೆಂಗಳೂರು ಮೈಸೂರು ಎನ್ನುವ ದೋರಣೆ ನಮ್ಮದು.
ಕನ್ನಡ ಸೊರಗಿರುವುದು ಸರಿಯೇ.. ಆದರೆ ಕನ್ನಡದ ಬಗ್ಗೆ ನಿಜವಾದ ಅಭಿಮಾನ ಇರುವುದು ಅಲ್ಲಿಯವರಿಗೇ.. ಏನೂ ಇಲ್ಲದೇ ಭಾಷಾಭಿಮಾನ ತೋರಿಸುವುದು ಕಷ್ಟವಲ್ಲವೇ
ನಿರ್ಲಕ್ಷ್ಯ
ನಿರ್ಲಕ್ಷ್ಯಕ್ಕೊಳಗಾಗಿರುವುದು ಒಪ್ಪಬೇಕಾದ ವಿಷಯ. ಆದರೂ, ದಕ್ಷಿಣದಲ್ಲೂ ಎಷ್ಟು ಜಿಲ್ಲೆಗಳು ನಿರ್ಲಕ್ಷ್ಯಕ್ಕೊಳಗಾಗದೇ ಇಲ್ಲ? ಕೆಲವು ಜಿಲ್ಲೆಗಳು ಸಮೃದ್ಧವಾಗಿರೋದ್ರಿಂದ ನಮ್ಮಗಳಿಗೆ ತಿಳಿದುಬರೋದಿಲ್ಲ. ಬೆಂಗಳೂರು ಮೈಸೂರು ಬಿಟ್ಟರೆ ಬಹುಪಾಲು ರಾಜ್ಯದ ಜಿಲ್ಲೆಗಳು (ಹಾಸನವನ್ನು ಹೊರತುಪಡಿಸಿ) ನಿರ್ಲಕ್ಷ್ಯಕ್ಕೊಳಗಾದವುಗಳೆ. (ಶಿವಮೊಗ್ಗದ ಕಡೆಯ ರೋಡುಗಳಲ್ಲಿ ನೀವೊಮ್ಮೆ ಸಂಚರಿಸಿ ನೋಡಬೇಕು)
--
"ಹೊಸ ಚಿಗುರು, ಹಳೆ ಬೇರು"
ಉತ್ತರ ಕರ್ನಾಟಕಕ್ಕೇ ಹೆಚ್ಚು ಅನ್ಯಾಯ
ನನ್ನ ಅಭಿಪ್ರಾಯದಲ್ಲಿ, ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಬಹಳ. ಧಾರವಾಡ - ಹುಬ್ಬಳ್ಳಿ ನಡುವಿನ ರಸ್ತೆಯಲ್ಲಿ ಒಮ್ಮೆ ಪಯಣಿಸಿದರೂ ಸಾಕು...ಪ್ರತ್ಯಕ್ಷ ಅರಿವಾಗುತ್ತದೆ. ರಾಜ್ಯದ ಎರಡನೆಯ ಅತಿ ದೊಡ್ಡ ನಗರಗಳಲ್ಲೇ ಈ ಪರಿಸ್ಥಿತಿಯಾದರೆ, ಇನ್ನು
ಉತ್ತರದ ಇತರ ನಗರಗಳು ಹೇಗಿರಬೇಡ ?
ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ
ನಾಡಿಗ್ ಅವರು ಕರ್ನಾಟಕದ ಎಲ್ಲ ಜಿಲ್ಲೆಗಳೂ ಹಿಂದುಳಿದವೇ ಎಂದರೂ, ಉತ್ತರ ಕರ್ನಾಟಕದ ಕಥೆ ತೀರ ಬೇರೆ. ಹೈದರಾಬಾದ್ ಕರ್ನಾಟಕ ಎಂದು ಕರೆಯುವ ನಾಲ್ಕು ಜಿಲ್ಲೆಗಳಿಗೆ ಸ್ವಾತಂತ್ರ್ಯ ಬಂದದ್ದು ಒಂದು ವರ್ಷ ತಡವಾಗಿ, ೧೯೪೮ರಲ್ಲಿ. ಅಲ್ಲಿನ ಜೀವನ ಕ್ರಮ, ಆಹಾರ ಪದ್ಧತಿ, ವ್ಯವಸಾಯದ ನೆಲ, ನೀರಿನ ಕೊರತೆ, ಬಡತನ, ಜಮೀನುದಾರರ ಅಟ್ಟ ಹಾಸ, ಇವೆಲ್ಲ ನಾವು ಊಹಿಸಿಕೊಳ್ಳುವುದೂ ಸಾದ್ಯವಿಲ್ಲ. ಅಷ್ಟೇ ಏಕೆ, ಧಾರವಾಡದ ಭಾಷೆ ನಮ್ಮ ಸಿನಿಮಾಗಳಲ್ಲಿ, ಬಹುತೇಕ ಬರವಣಿಗೆಗಳಲ್ಲಿ ಹಾಸ್ಯದ ಮೂಲವಾಗಿದೆಯಲ್ಲವೆ? ಶಿಕ್ಷಣವೂ ಅಷ್ಟೆ, ಬೆಳೆಯಬೇಕಾದದ್ದು ಬಹಳವಿದೆ. ಮುಖ್ಯವಾದ ಮಾತೆಂದರೆ ಕರ್ನಾಟಕದ ದಕ್ಷಿಣದ ಭಾಗದಂತೆ ಉತ್ತರದ ಭಾಗ ಆಧುನಿಕತೆಗೆ ಮತ್ತು ಪಾಶ್ಚಾತ್ಯ ಪ್ರಭಾವಗಳಿಗೆ ತೆರೆದುಕೊಂಡಿಲ್ಲ. ನಮಗೂ ಆ ಅವಕಾಶ ಕೊಡಿ ಎಂಬುದು ಅವರ ಬೇಡಿಕೆ.
Re: ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ
ನಿರ್ಲಕ್ಷ್ಯಕ್ಕೊಳಗಾಗಿರುವುದು ನಾನೀಗಾಗಲೇ ಹೇಳಿದಂತೆ ಒಪ್ಪಬೇಕಾದ ವಿಷಯ. ಆದರೆ ಪ್ರತ್ಯೇಕ ರಾಜ್ಯವೇ ಇದರ ಪರಿಹಾರವೇ?
--
"ಹೊಸ ಚಿಗುರು, ಹಳೆ ಬೇರು"
ಪ್ರತ್ಯೇಕ ಉತ್ತರ ಕರ್ನಾಟಕ ?
ಪ್ರತ್ಯೇಕ ರಾಜ್ಯ ಅವರಿಗೂ ಬೇಕಿರಲಿಕ್ಕಿಲ್ಲ...ಈ ರೀತಿಯ ಬೇಡಿಕೆ ಇಟ್ಟರಾದರೂ ನಮ್ಮ ಘನ ಸರ್ಕಾರ ಎಚ್ಚೆತ್ತುಕೊಳ್ಳಬಹುದೆಂದು ಅವರ ಯೋಚನೆಯಿದ್ದೀತು ಅಷ್ಟೆ.
ಇಷ್ಟು ಸಮಯ ಬೇಕೇ?
ನಮ್ಮ ಘನ ಸರ್ಕಾರದವರು ಎಚ್ಚತ್ತುಕೊಳ್ಳುವರು ಅಂತ ನನಗನ್ನಿಸುವುದಿಲ್ಲ. ರಾಷ್ಟ್ರ ಮಟ್ಟದ ಯಾವ ರಾಜಕೀಯ ಪಕ್ಷಗಳೂ ಈ ಪ್ರದೇಶಗಳ ಉನ್ನತಿಗೆ ಶ್ರಮಿಸುತ್ತಿಲ್ಲ. ಅದಕ್ಕೆ ಪ್ರತ್ಯೇಕವಾದ ಕನ್ನಡ ಪರ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ ಎಂದು ನನ್ನ ಅನಿಸಿಕೆ.
ಹೊಸೂರು, ಕಾಸರಗೋಡು, ಸೋಲಾಪುರ, ಕೊಲ್ಹಾಪುರಗಳಲ್ಲಿ ಆಗಿರುವ ಅಭಿವೃದ್ಧಿ, ಕರ್ನಾಟಕದ ಪ್ರದೇಶಗಳಲ್ಲಿ ಆಗಿಲ್ಲ. ಒಂದು ತಮಾಷೆಯ ವಿಷಯ ಅಂದರೆ, ಪ್ರಯಾಣ ಮಾಡುವಾಗ ಹಸುರು ಹಸುರಾಗಿರುವ ಭಾಗ ಮುಗಿದು ಬರಪೀಡಿತ ಪ್ರದೇಶ ಪ್ರಾರಂಭವಾದರೆ ಕರ್ನಾಟಕದ ಗಡಿಯೊಳಗೆ ಪ್ರವೇಶಿಸಿದ್ದೀವಿ ಅಂತ ತಿಳಿದುಕೊಳ್ಳಬಹುದು. ಮಹಾರಾಷ್ಟ್ರದ ಕಡೆಯ ಹಳ್ಳಿಯಾದ ದುಧನಿ ಮತ್ತು ಕರ್ನಾಟಕದ ಗಾಣಗಾಪುರಗಳನ್ನು ನೋಡಿದರೆ ವ್ಯತ್ಯಾಸ ತಿಳಿಯುತ್ತದೆ. ಒಂದು ಕಡೆ ಹಸಿರಾಗಿದ್ದರೆ ಇನ್ನೊಂದೆಡೆ ಬರ ಪೀಡಿತ ಪ್ರದೇಶ.
---
ತವಿಶ್ರೀನಿವಾಸ
ಹಾಗೇನಿಲ್ವಲ್ಲ
ಆದ್ರೆ ಬೆಳಗಾವಿ ಹತ್ರದ ಗಡಿ ನೋಡಿ. ಕರ್ನಾಟಕದ ಕಡೇನೆ ಹೆಚ್ಚು ಚೆನ್ನಾಗಿರೋದು.
ಕರ್ನಾಟಕಕ್ಕೆ ಸ್ಥಳೀಯ ಪಕ್ಷ ಅವಶ್ಯವಾಗಿ ಬೇಕು
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವಾಗ ಮಹಾರಾಷ್ಟ್ರ ಪ್ರವೇಶಿಸುತ್ತಿರುವಂತೆ, ಎಲ್ಲವೂ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಕುಲುಕುತ್ತ ಸಾಗುವ ಬಸ್ ಇದ್ದಕ್ಕಿದ್ದಂತೆ ಶಾಂತವಾಗಿ ಚಲಿಸತೊಡಗುತ್ತದೆ, ನಿದ್ದೆ ಮಾಡುವವರಿಗೂ ಬಸ್ ಮಹಾರಾಷ್ಟ್ರ ಪ್ರವೇಶಿಸಿದ್ದು ಗೊತ್ತಾಗುತ್ತದೆ. ಉತ್ತರ ಕರ್ನಾಟಕದವರು ಮಿರಜಿಗೆ ದವಾಖಾನೆಗೆ ಹೋಗುತ್ತಾರೆ, ನಮ್ಮ ನಾಡು ಅಭಿರುದ್ಧಿ ಕಾಣದಿರುವುದರಿಂದ ಮೊದಲಿಂದಲೂ ಅದು ಬೆಳೆದುಕೊಂಡು ಬಂದಿರುವ ರೂಢಿ, ಇಲ್ಲಿ ಮಿರ್ಜಿಯಲ್ಲಿ ಆಸ್ಪತ್ರೆಗಳಲ್ಲಿ ಕನ್ನಡಿಗರೆಂದರೆ ಅಸಡ್ಡೆ. ಉತ್ತರ ಕನ್ನಡಿಗರ ಗೋಳು ಅನೇಕ, ಆದರೆ ಸ್ಥಳೀಯ ಪಕ್ಷ ಕಟ್ಟಲು ಪ್ರಯತ್ನಿಸಿದವರೆಲ್ಲಾ ಕರ್ನಾಟಕದಲ್ಲಿ ಕೈ ಸುಟ್ಟುಕೊಂಡಿದ್ದಾರೆ.
ಬನ್ನಿ ಹೊಸ ನಾಡು ಕಟ್ಟೋಣ