ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಎರೆಡು ಪತ್ರಗಳು
ಪತ್ರ ಒಂದು
ಪ್ರೀತಿಯ ಅಪ್ಪನಿಗೆ.
ನೆನ್ನೆ ನಿನ್ನ ಫೋನಿಂದ ಮನಸ್ಸು ಕದಡಿಹೋಗಿದೆ. ನೀವು ನೋಡಿದ ಹುಡುಗ ಅಲ್ಲ ಬೇರೆ ಯಾವ ಹುಡುಗನೊಡನೆಯೂ ಮದುವೆ ಎಂಬ ಬಂಧನಕ್ಕೆ ಬೀಳಲು ನಾನು ಸಿದ್ದ ಇಲ್ಲ.ದಯವಿಟ್ಟು ಕ್ಷಮಿಸು.
ಯಾವದೋ ಗುರುತಿರದ ವ್ಯಕ್ಸ್ತಿಯ ಜೊತೆ ನನ್ನ ಬಾಳನ್ನೆಲ್ಲಾ ಕಳೆಯಲು ನನಗೆ ಇಷ್ಟ ಇಲ್ಲ . ನೀನು ಅಮ್ಮ ಬದುಕುತ್ತಿರಬಹುದು. ಅಮ್ಮನಿಗೆ ಯಾವದೇ ಸಿದ್ದಾಂತವಿರಲಿಲ್ಲ .ಆದರೆ ನನಗೆ ನನ್ನದೇ ಆದ ಗುರಿ ಇದೆ. ಹೊಸ ಹೊಸ ಪ್ರಯೋಗಕ್ಕೆ ಮನ ತುಡಿಯುತ್ತಿರುತ್ತದೆ.
ಇಲ್ಲಿ ನನ್ನ ಫ್ರೆಂಡ್ ಆಕಾಶ್ ಅದಕ್ಕೆ ಒತ್ತಾಸೆಯಾಗಿ ನಿಂತಿದ್ದಾನೆ. ನನ್ನ ರೀತಿ ಅವನಿಗೂ ಮದುವೆಯಲ್ಲಿ ನಂಬಿಕೆ ಇಲ್ಲ. ಸಾಂಸರಿಕ ಕಮಿಟ್‍ಮೆಂಟ್ ಇಲ್ಲದ ಜೀವನ ನಮಗಿಬ್ಬರಿಗೂ ಬೇಕಿದೆ ಹಾಗಾಗಿ ನಾವಿಬ್ಬರೊ ಲೀವ್ - ಇನ್ ರೀತಿಯಲ್ಲಿ ಬಾಳಲು ಯೋಚಿಸಿದ್ದೇವೆ. ಬಾಳ ದಾರಿ ಸ್ವಷ್ಟ ವಾಗಿಯೀ ಇದೆ.
ದಯವಿಟ್ಟು ನಮ್ಮ ದಾರಿಗೆ ಅಡ್ಡವಾಗಿ ಬರಬೇಡಿ. ಅಪ್ಪ ಅಮ್ಮನಾಗಿ ನಿಮ್ಮ ಕರ್ತವ್ಯ ನೀವು ಮಾಡಿದ್ದೀರ. ಇನ್ನು ನಾನು ಸ್ವತಂತ್ರವಾಗಿ ಹಾರಲು ಅವಕಾಶ ಮಾಡಿಕೊಡಿ. ನಾನು ಜೀವನದಲ್ಲಿ ಸುಖವಾಗಿ ಇರುತ್ತೇನೆ ಎಂಬ ನಂಬಿಕೆ ನನಗಿದೆ. ನನಗಾಗಿ ಅಳಬೇಡಿ. ಹಾಗು ನನಗಾಗಿ ಹುಡುಕಬೇಡಿ.
ಮುಂದೆ ನನ್ನನ್ನು ಇದೇ ರೀತಿಯಲ್ಲಿ ಒಪ್ಪಿಕೊಳ್ಳುವ ಮನಸ್ಥಿತಿ ನಿಮಗಿಬ್ಬರಿಗೂ ಬಂದ ಮೇಲೆ ನಾನಾಗೆ ಬರುತ್ತೇನೆ
ನಿಮ್ಮ ಮುದ್ದಿನ ಸಾಧನ
ಪತ್ರ ಎರೆಡು
ಪ್ರೀತಿಯ ಅಪ್ಪನಿಗೆ(ಹಾಗೆ ಕರೆಯಲು ಅವಕಾಶವಿದೆಯಾ?)
ಅಪ್ಪ ಎರೆಡು ವರ್ಷಗಳಾದ ಮೇಲೆ ಅಪ್ಪ ನಿನ್ನನ್ನು ನೋಡಿ ಓಡಿ ಬಂದು ನಿನ್ನ ಕಾಲಿಗೆ ಬಿದ್ದು ಜೋರಾಗಿ ಅಳಬೇಕೆಂದು ಅನಿಸಿತು. ಆದರೆ ಯಾವ ಮುಖ ಹೊತ್ತಿ ಬರಲಿ.ಹಾಗಾಗಿ ನಿನ್ನನ್ನು ನೋಡಿದ ಕೂಡಲೆ ಅವಿತುಕೊಂಡೆ. ಆದರೂ ನೀನು ನನ್ನನ್ನು ಹುಡುಕಿಕೊಂಡು ಬಂದೆ . ನನ್ನ ರೀತಿಯನ್ನು ಒಪ್ಪಿಕೊಂಡು ಇರುವಿರೆಂದು ಹೇಳಿದಿರಿ.
ಆದರೆ ಅಪ್ಪ ನಾನು ಈ ಎರೆಡು ವರ್ಷಗಳಲ್ಲಿ ಏನಾಗಿದ್ದೇನೆಂದು ನಿಮಗೆ ತಿಳಿದಿದೆಯಾ?
ನಿಮ್ಮನ್ನು ದಿಕ್ಕರಿಸಿ ಬಂದ ನನಗೆ ಆಕಾಶ್ ಜೀವವಾಗಿದ್ದ. ಸಂಸಾರ ಬೇಡವೆಂದವಳಿಗೆ ಆಕಾಶ್ ಇಷ್ಟವಾಗತೊಡಗಿದ. ನನ್ನ ಹೊಟ್ಟೆಯಲ್ಲಿ ಅವನ ನನ್ನ ಪ್ರೀತಿಯ ಫಲ ಚಿಗುರಿದಾಗ ಅದನ್ನು ಚಿವುಟಲು ಹೇಳಿದ. ನಾನು ಅದಕ್ಕೆ ಒಪ್ಪಲಿಲ್ಲವೆಂದಾಗ ನಮ್ಮ ಲೀವ್-ಇನ್ ಟುಗೆದರ್ ಮುರಿದು ಬಿತ್ತು. ನಮ್ಮಲ್ಲಿ ಯಾವದೇ ಕಮಿಟ್‍ಮೆಂಟ್ ಇರಲಿಲ್ಲವಲ್ಲ. ನನ್ಗೆ ಬಾಯ್ ಹೇಳಿ ಬೇರೆಡೆ ಹೋದ. ಆದರೆ ಅವನಿಗೂ ಮದುವೆ ಬೇಕಿತ್ತೇನೋ ಹಾಗೆ ಹೋಗಿ ಎರೆಡೇ ತಿಂಗಳಲ್ಲೇ ಬಹಳ ವಿಜ್ರಂಭಣೆಯಿಂದಲಿ ಮದುವೆಯಾದ. ನನಗೂ ಅಹ್ವಾನ ಪತ್ರಿಕೆ ಬಂದಿತ್ತು. ಆದರೆ ನಾನು ಹೋಗಲಿಲ್ಲ
ಹೊಟ್ಟೆಯಲ್ಲಿ ಮಗು, ಕತ್ತಿನಲ್ಲಿ ತಾಳಿ ಇಲ್ಲವೆಂದಾಗ ಸಹೋದ್ಯೋಗಿಗಳು ನಗಲು ಆರಂಭಿಸಿದರು. ನಾವೆಷ್ಟೆ ಮುಂದುವರಿದರೂ ನಮ್ಮದು ಭಾರತೀಯ ಮನಸು,ಪ್ರಜ್ನೆ ಅದು ಬದಲಾಗಲು ಸಾಧ್ಯವೇ ಇಲ್ಲ.
ಹಾಗು ಹೀಗೊ ನಿನ್ನ ಮೊಮ್ಮಗಳು ಭೂಮಿಗೆ ಬಂದಳು . ಆ ಸಮಯದಲ್ಲಿ ನಾ ಪಟ್ಟ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ಆದರೆ ಈ ವಿಷಯ ನಿಮ್ಗೆ ತಿಳಿಸಬಾರದು ಎಂದು ನಾನು ಪಣ ತೊಟ್ಟಿದ್ದೆ. ಈಗ ಅವಳೇ ನನ್ನ ಜೀವ
ಈಗ ನನಗೆ ಹಣದ ವಿಷಯವಾಗಿ ಯಾವದೇ ತೊಂದರೆ ಇಲ್ಲ . ಆದರೆ ನನ್ನ ಕಾವ್ಯ ನಿಮ್ಮ ಮೂಮ್ಮಗಳು ಅಪ್ಪ. ನಿಮ್ಮ ಜೊತೆಯಲ್ಲಿಯೇ ಬೆಳೆಯಲಿ ಎಂಬುದು ನನ್ನ ಆಸೆ. ಸಾಧ್ಯವಾದರೆ ಈಡೇರಿಸು. ನಾನು ತಪ್ಪು ಮಾಡಿದಾಗಲೆಲ್ಲ ಬೈತಿದ್ದೆ . ಆದರೆ ನನ್ನನೆಂದು ದೂರ ಮಾಡಲಿಲ್ಲ ನೀನು. ಈಗಲೂ ಹಾಗೇ ಇರುವೆ ಎಂದು ಭಾವಿಸಲಾ ನಾನು?
ಅಪ್ಪ ನನ್ಗೆ ಒಂದು ವಿಷ್ಯ ಅರ್ಥವಾಗಿದೆ. ನೀನು ಅಮ್ಮ ಆಗಲಿ ಮದುವೆಯಾದ ಬೇರೆಯವರಾಗಲಿ ಸಂಸಾರವನ್ನು ಬಂಧನವೆಂದು ಪರಿಗಣಿಸದೆ ಅದನ್ನು ಸ್ವರ್ಗವೆಂದು ಭಾವಿಸಿ ಅದನ್ನೆ ಪ್ರೀತಿಸಿದಿರಿ. ಆದರೆ ನಾನು ಹಕ್ಕಿಯಾಗಿ ಹಾರಾಡುತ್ತೇನೆಂದುಕೊಂಡು ಬಾಳಿನ ಬಿಸಿಲಲ್ಲಿ ಸುಸ್ತಾಗಿ ರೆಕ್ಕೆ ಮುರಿದುಕೊಂಡು ಬಿದ್ದಿದ್ದೇನೆ. ನನಗೆ ಒಂದಷ್ಟು ಪ್ರೀತಿ ಅಕ್ಕರೆ. ಸಾಂತ್ವಾನ ಬೇಕಾಗಿದೆ . ಕೊಡುತೀರ ಎಂದು ಭಾವಿಸುತಾ ಈ ಭಾನುವಾರ ಮನೆಗೆ ಬರುತಿದ್ದೇನೆ.
ನನ್ನನ್ನು ಸ್ವೀಕರಿಸುತ್ತೀರಲ್ಲಾ?
ನಿಮ್ಮ ಮಗಳಾಗೇ ಉಳಿಯಬಯಸುವ
ಸಾಧನ.

- roopablrao ರವರ ಬ್ಲಾಗ್
- Login or register to post comments
- 409 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಎರೆಡು ಪತ್ರಗಳು
ಗುರುರಾಜ ಕೊಡ್ಕಣಿ
ತು೦ಬಾ ಚೆನ್ನಾಗಿದೆ ರೂಪಾ ಅವರೇ.ನನಗೆ ಆಶ್ಛ್ರ್ಯರ್ಯವಾದುದು,ಎಷ್ಟು ಜನ ಒ೦ದೇ ವಿಚಾರವನ್ನು ಏಕಕಾಲದಲ್ಲಿ ಯೋಚಿಸುತ್ತಾರೆ೦ಬುದು.ಇದೇ ಕಾನ್ಸೆಪ್ಟನ ಮೇಲೆ ನಾನೂ ಕೂಡಾ ಬರೆಯೋಣವೆ೦ದಿದ್ದೆ. ಅದಾಗಲೇ ತಾವು ಬರೆದು ಬಿಟ್ಟಿದ್ದೀರೀ.ಅಷ್ಟೇ ಅದ್ಭುತವಾಗಿಯೂ ಬರೆದಿದ್ದೀರಿ
ಉ: ಎರೆಡು ಪತ್ರಗಳು
ಧನ್ಯವಾದಗಳು
ಬಹುಶ ನೀವು ಬರೆದಿದ್ದರೆ ಇನ್ನೂ ಚೆನ್ನಾಗಿ ಬರುತಿತ್ತೇನೋ ಅನ್ನಿಸುತಿದೆ
ಉ: ಎರೆಡು ಪತ್ರಗಳು
ಎರಡು(ಎರೆಡು?) ಪತ್ರಗಳು ಓದಿದೆ. ಎರಡನೇ ಪತ್ರ ಓದಿ ಕರುಳು ಚುರ್ ಎಂದಿತು.
ಸಾಧನಾಳಿಂದ ಆತ್ಮಹತ್ಯೆ ಮಾಡಿಸಿದ್ದರೆ ಟಿವಿ೯,ಸುವರ್ಣ,ಈಟಿವಿ..ಯವರೆಲ್ಲಾ ಹಾಜರಾಗುತ್ತಿದ್ದರು.
ಚೆನ್ನಾಗಿ ಬರೆದಿದ್ದೀರಿ.
ಗಣೇಶ.
ಉ: ಎರೆಡು ಪತ್ರಗಳು
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ದಾರಿಯಲ್ಲ ಅಲ್ಲವಾ?
ಧನ್ಯವಾದಗಳು
ಉ: ಎರೆಡು ಪತ್ರಗಳು
ರೂಪಾ ಅವರೆ , ನಿಮ್ಮ ಎರಡು ಪತ್ರಗಳು, ನಿಮ್ಮ ನಿರೂಪಣಾ ಶೈಲಿಗೆ, ಒಳ್ಳೆಯ ಉದಾಹರಣೆ , ಗಂಭೀರ ವಿಷಯವನ್ನು ಸರಳ ಶೈಲಿಯಲ್ಲಿ ಮನಮುಟ್ಟುವಂತೆ ವಿವರಿಸಿದ್ದೀರಿ. ಯುವ ಮನಸ್ಸುಗಳು ಸ್ವಾತಂತ್ರದ ಹುಚ್ಚಿನಲ್ಲಿ, ಜವಾಬ್ದಾರಿಗಳನ್ನು ಮರೆತೇ ಬಿಡುವುದು ದುರಂತವೇ . ಈ ಮದುವೆ , ಬಂಧನ ಇವೆಲ್ಲಾ ಮಾನವ ಸಮಾಜ ಸಾವಿರಾರು ವರ್ಷಗಳ ಪ್ರಯೋಗದ ಫಲವಾಗಿ ಕಂಡುಹಿಡಿದ ಸಾಮಾಜಿಕ ರಕ್ಷಣೆಯ ಸಾಧನಗಳು . ಕ್ರಾಂತಿಕಾರಕವಾಗಿ ಒಂದೇ ದಿನದಲ್ಲಿ ಇವನ್ನೆಲ್ಲಾ ಮುರಿದು ಹಾಕುತ್ತೇನೆ ಎನ್ನುವುದು ಅಪರಿಪಕ್ವ ಮನಸ್ಸುಗಳ ಭ್ರಮೆ. ಆದರೂ ಇಲ್ಲಿ ಮನುಷ್ಯನ ಮಾನವೀಯ ಗುಣಗಳು, ಗಂಡು,ಹೆಣ್ಣುಗಳ ನಡುವಣ ವಿಶ್ವಾಸ , ಪ್ರೀತಿ, ನಂಬಿಕೆ, ಪರಸ್ಪರರಿಗೆ ದ್ರೋಹ ಬಗೆಯದಿರುವ ಗುಣ. ಇವೆಲ್ಲಾ ಇದ್ದಾಗ ಮಾತ್ರ , ಮದುವೆಯೂ ಸೇರಿದಂತೆ ಎಲ್ಲ ಕೌಟುಂಬಿಕ ವ್ಯವಸ್ಠೆಗಳಿಗೂ ಅರ್ಥ ಬರುತ್ತದೆ.ಮೊದಲು ತಿದ್ದಬೇಕಾಗಿರುವುದು ಮನುಷ್ಯನ ಮನಸ್ಸನ್ನು . ಇದೆಲ್ಲಾ ಏನೇ ಇರಲಿ ನಿಮ್ಮ ಬರವಣಿಗೆ ಚಿಕ್ಕದಾದರೂ ವಿಚಾರಪ್ರಚೋದಕವಾಗಿರುತ್ತದೆ. ನೀವು ಹೆಚ್ಚು ಹೆಚ್ಚು ಬರೆಯಿರಿ .
ಉ: ಎರೆಡು ಪತ್ರಗಳು
ಪ್ರಸ್ತುತ ಹೈಟೆಕ್ ಜೀವನವನ್ನು ಪತ್ರದ ಮೂಲಕ ಚಿಕ್ಕದಾಗಿ ಮತ್ತು ಚೊಕ್ಕವಾಗಿ ನಿರೂಪಿಸಿದ್ದೀರಿ.
ಧನ್ಯವಾದಗಳು.
ಇತಿ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.