ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಕನ್ನಡ ಎಂದದ್ದಕ್ಕೆ
ನಾವು ಇಲ್ಲಿ ವೆಬ್ ಸೈಟ್‌ನಲ್ಲಿ ಕನ್ನಡದ ಪರವಾಗಿ ಹೋರಾಟ ತೀವ್ರವಾಗಿ ನಡೆಸುತ್ತಿದ್ದರೆ. ಮೊನ್ನೆ ನಮ್ಮ ಸಂಸ್ಥೆಯಲ್ಲಿ ಕನ್ನಡ ಎಂದಿದ್ದಕ್ಕೆ ಆದ ಘಟನೆ ಕೇಳಿ(ಓದಿ)
ಮೂನ್ನೆ ನಮ್ಮ ಸಂಗೀತ ಕ್ಲಾಸ್‌ಗೆ ಬರುವ ಪುಟಾಣಿಯೊಬ್ಬಳು ಬಂದು ವಿಚಾರಿಸಿದಳು. "ಮಿಸ್ ಟುಡೆ, ಡು ವಿ ಹ್ಯಾವ್ ಮ್ಯೂಸಿಕ್ ಕ್ಲಾಸ್?" ನಾನು ಅಲ್ಲೇ ಓಡಾಡುತ್ತಿದ್ದೇನಾದ್ದರಿಂದ (ಅದೇನು ಗ್ರಹಚಾರ ಕೆಟ್ಟಿತ್ತೋ ನನಗೆ) ಆಕೆಯನ್ನು ಕರೆದು ಕೇಳಿದೆ ." ನಿಮ್ಮ ಮನೇಲಿ ಯಾವ ಭಾಷೆ ಮಾತನಾಡುತ್ತೀರ ? " " ಮಮ್ಮಿ ಡ್ಯಾಡಿ ಎಲ್ಲ ಕನ್ನಡ ಮಾತಾಡ್ತಾರೆ."
"ಮತ್ತೆ ನೀನು"
"ಮಮ್ಮಿ ಹೇಳಿದಾರೆ ಇಂಗ್ಲೀಷ್‌ನಲ್ಲಿ ಮಾತಾಡು ಅಂತ. ಸ್ಕೂಲ್‌ನಲ್ಲೂ ಇಂಗ್ಲೀಷೆ ಮಾತಾಡೋದು" ಆಕೆ ಮುದ್ದು ಮುದ್ದಾಗಿ ಹೇಳಿದಾಗ ಅದೇನೋ ಉಪದೇಶ ಮಾಡೊ ಮೂಡು ಬಂತು ನನಗೆ. ಅವಳಿಗೆ ಕನ್ನಡದಲೇ ಮಾತಾಡುವಂತೆ ಹೇಳಿ ಮನವೊಲಿಸಿ ಕಳಿಸಿದೆ.
ರಾತ್ರಿಯಾಗುತಿದ್ದಂತೆ ನಂಗೆ ಫೋನ್ ಬಂತು. ಅದು ಆ ಮಗುವಿನ ತಾಯಿಯದು. "ಏನು ಮೇಡಮ್ ಇಂಗ್ಲೀಶ್ ಎಲ್ಲ ನಿಮ್ಮವರ ಗಂಟಾ. ನೀವು ಮಾತ್ರ ಹೀಗೆ ಮೇಲೆ ಬಂದಿದೀರ ನಮ್ಮ ಮಕ್ಕಳು ಕೂಡ ನಿಮ್ಮ ಹಾಗೆ ಆಗಬಾರದಾ?. ನಮ್ಮ ಸ್ವಪ್ನಂಗೆ ಇಂಗ್ಲಿಷ್ನಲ್ಲಿ ಮಾತಾಡೋದೆ ಬೇಡ ಅಂತೀರಂತೆ ನೀವು. ನಿಮ್ಮಂತಹವರು ಹೀಗೆ ಹೇಳಿಕೊಡಬಾರದು. "
ನನ್ನ ಯಾವ ಮಾತು ಅವಳ ಕಿವಿಗೆ ಬೀಳಲಿಲ್ಲ.
ಕೊನೆಗೊಮ್ಮೆ ಇನ್ನೊಮ್ಮೆ ಹೀಗೆ ಮಾಡಿದರೆ ಮಗಳನ್ನು ಕ್ಲಾಸ್ ಬಿಡಿಸುವುದಾಗಿ ಹೇಳಿ ಫೋನ್ ಕುಕ್ಕಿದಳು.
ಕನ್ನಡಕ್ಕಾಗಿ ಕೊರಳೆತ್ತಿದರೆ ಉರಳು ಎಂದುಕೊಂಡರೂ
ಹೋಗಲಿ ನನ್ನ ಮಗಳ ಬಾಯಾಲ್ಲಾದರೂ ಅಮ್ಮ ಅಪ್ಪ ಎಂದು ಕನ್ನಡವೇ ಬರುತ್ತದೆಯಲ್ಲ ಎಂದು ಖುಶಿ ಪಟ್ಟೆ.

- roopablrao ರವರ ಬ್ಲಾಗ್
- Login or register to post comments
- 696 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕನ್ನಡ ಎಂದದ್ದಕ್ಕೆ
ರೂಪ ಮೇಡಂ
ಬೇಜಾರ್ ಬೇಡ...
ಆಕೆಗೆ ಆಮೇಲೆ ತಿಳಿಯ್ತದೆ.. ನಿಮ್ಮ ಕೆಲಸಕ್ಕೆ ನನ್ನ ಅಬಿನಂದನೆ ಇದೆ.. ಒಳ್ಳೇ ಕೆಲಸ ಮಾಡಿದಿರಿ...
ಇನ್ನೊಂದ್ ಸರತಿ ಹೇಳುವಾಗ ತುಸು ನುಣುಚಿಕೊಳ್ಳುವ ಮಾತಲ್ಲಿ ಹೇಳಿ "ಹಾವು ಸಾಯಬೇಕು, ಕೋಲು ಮುರೀಬಾರದು"
ಉ: ಕನ್ನಡ ಎಂದದ್ದಕ್ಕೆ
ಈ ಸ್ಪರ್ಧಾತ್ಮಕ ಯುಗದಲ್ಲಿ ಅಪ್ಪ ಅಮ್ಮ ತಮ್ಮ ಮಕ್ಕಳು ಮುಂದಿರಲಿ ಎಂದು ಬಯಸುವುದು ಸಹಜ...
ಸಧ್ಯ ಅವರ ಮನೆಯಲ್ಲಿ ಕನ್ನಡ ಮಾತಾಡ್ತಾರಲ್ಲ, ಅಷ್ಟು ಸಾಕು. ಆ ಮಗುಗೆ ಕನ್ನಡ ಓದಲು ಬರೆಯಲು ಬಂದರೆ ಸಾಕು, ಅದು ಯಾವತ್ತು ಕನ್ನಡವನ್ನು ಮರೆಯೊಲ್ಲ..
-ವರುಣ ಭಟ್
ಉ: ಕನ್ನಡ ಎಂದದ್ದಕ್ಕೆ
^^ ವರುಣಭಟ್ರೇ
"ಹೀಗೆ ಇಶ್ಟು ಸಾಕು, ಅಶ್ಟು ಸಾಕು ಅನ್ನೋ ಆಟಿಟ್ಯೂಡ್ ಕನ್ನಡ ಬಗ್ಗೆ ಸರಿಯಲ್ಲ".....
ನಾವೆಲ್ಲ ಇಂಗ್ಲೀಶ್ ಮೀಡಿಯಮ್ಮಲ್ಲೇ ಓದಿರೋದು. ನಮಗೆಲ್ಲ ಏನು ಇಂಗ್ಲೀಶ್ ಬರಲ್ವೇ! ಹಂಗೆ ಕನ್ನಡವೂ ಬರಲ್ವೇ...
ಇಂಗ್ಲೀಶಲ್ಲಿ ಓದಲೀ.. ಆದ್ರೆ ಆಪೀಸು, ಶಾಲೆ, ಜಂಬಾರ/ಬಿಸಿನೆಸ್ಸು ಬಿಟ್ಟು ಮಿಕ್ಕ ಕಡೆ ಅಂದ್ರೆ ಮನೆ, ಗೆಳೆಯರು, ಸಿನಿಮ, ಕತೆ-ಕಾದಂಬರಿ ಕನ್ನಡವೇ ಹೆಚ್ಚು ಇರಬೇಕು..
ಗಳಿಕೆಗೆ ಇಂಗ್ಲೀಶಿರಲಿ, ಗುರುತಿಗೆ ಕನ್ನಡವೇ!
ಉ: ಕನ್ನಡ ಎಂದದ್ದಕ್ಕೆ
ಮಾಯ್ಸಣ್ಣ..ಮೊನ್ನೆ ನಮ್ಮ ಎದುರು ಮನೆ ಹುಡುಗ ಒಬ್ಬ ಪೆನ್ ಡ್ರೈವ್ ಕೇಳಿಕೊಂಡು ಬಂದಿದ್ದ..ಅವನು ಇಂಗ್ಲೀಶಿನಲ್ಲೆ ಮಾತಾಡುತ್ತಿದ್ದ.ನಾನು ಕನ್ನಡದಲ್ಲಿ ಉತ್ತರಿಸಿದ್ದಕ್ಕೆ,ನೀವು software engineeru ಅಲ್ವ ಮತ್ತೆ ಏನು ಕನ್ನಡದಲ್ಲಿ ಮಾತಾಡ್ತ ಇದ್ದೀರಾ ಅಂದ.ಏನೊ ಇಂಗ್ಲೀಶು ಬರದೆ ನಾನು software engineeru ಹೇಗೆ ಆದೆ ಅನ್ನುವ ಬಗೆಯಲ್ಲಿ.. ನಾನು ನಾನು ಕನ್ನಡದವಳು ಅದ್ಕೆ ಅಂದೆ..
ಅವನಿಗೆ ಸಂಪದಿಗರು ಗೊತ್ತಿಲ್ಲ ಅನ್ಸುತ್ತೆ..
ಉ: ಕನ್ನಡ ಎಂದದ್ದಕ್ಕೆ
Ashmya ಅಕ್ಕ..
ನೆನ್ನೆ ನಂಗೆ ಚನ್ನಯಿಂದ ಒಬ್ಬ ಕ್ರೆಡಿಟ್-ಕಾರ್ಡಿಗೆ ಪೋನ್ ಮಾಡಿ.. ತಮಿಳಲ್ಲಿ ಮಾತಾಡಿಸ್ದ...
ನಂಗೆ ಹೆಂಗೆ ಸಿಟ್ ಬಂತೂ ಅಂದ್ರೆ "speak in English or Kannada" ಎಂದು ೧೫-೨೦ ಚನ್ನಾಗಿ ಮಾತಾಡಿಸಿ ಆಮೇಲೆ "I am not interested" ಎಂದೆ.
ಅತ್ತ ಅವರು ಹಂಗೆ, ಇತ್ತ ನಮ್ ಕನ್ನಡದ ಕೆಲವರು ಹಿಂಗೆ..
ದಿಟವಾಗಿ ನೋಡಿ, ಈಗೀಗ ಹೆಚ್ಚೆಚ್ಚು ಮಂದಿ ಎಲ್ಲ ತೆರದೋರು ಕನ್ನಡದ ಬಗ್ಗೆ ಕಾಳಜಿ ಮಾಡ್ತಿದ್ದಾರೆ... ಕಳೆದ ತಿಂಗಳು ಸಿಟಿ ಬಸ್ಸಲ್ಲಿ ಒಬ್ಬ ಹಿಂದಿಯೋನು, ಇನ್ನೊಬ್ಬನ್ನ(ಕನ್ನಡದೋನು) ಎಲ್ಲಿ ಇಳಿಯೋದು ಅಂತ ಹಿಂದಿಯಲ್ಲಿ ಕೇಳಿದ್ದಕ್ಕೆ, ಅವರು ಉತ್ತರಾನೇ ಕೊಡದೇ, ಪಕ್ಕದೋರ ಹತ್ರ.. "ಹಿಂಗೆ ನಾವ್ ಹಿಂದಿ-ಇಂಗ್ಲೀಶಲ್ಲಿ ಉತ್ರ ಕೊಟ್ರೆ ನಮಗೆ ಕನ್ನಡಾನೇ ಮರೆತೋಗತ್ತೆ" ಅಂದ್ರು... ಪಾಪಾ ಅವರ ಮುಕದಲ್ಲಿ "ಕಾಳಿಜಿ" ದಿಟವಾಗಲೂ ಇತ್ತು..!
ಕನ್ನಡ ಅನ್ನೋಕ್ಕೆ ದಿಗಿಲ್ ಯಾಕೆ? ನಮ್ ನೆಲ, ನಮ್ ಇಶ್ಟ.! [ ಸದ್ಯ... ಕನ್ನಡಕ್ಕೆ ಅಂತ ಒಂದು ಸಕ್ಕತ್ ಸ್ಟ್ರಾಂಗ್ ಪಡೆ ಹುಟ್ಟಿಕೊಂಡಿರೋದು, ನಮ್ಗೆ ಆನೆಪಡೆಬಲ
]
ಉ: ಕನ್ನಡ ಎಂದದ್ದಕ್ಕೆ
ಗುರುರಾಜ
ಮಹೇಶ ನಿಮ್ಮ ಮಾತು ನಿಜ, ಮೇಲೆ ASHMYA ಅವರ ಅನುಭವ ನನಗೂ ಆಗಿದೆ.ನಿಜ ಕನ್ನಡ ಅನ್ನೋಕೆ ’ದಿಗಿಲು’ ಯಾಕೆ..?
ಉ: ಕನ್ನಡ ಎಂದದ್ದಕ್ಕೆ
ಅಶ್ಮ್ಯ ಕ್ಕ,
ನೀವು ಅಂತ ಹುಡುಗರಿಗೆ ಸಾದ್ಯವಾದಶ್ಟು ತಿಳಿ ಹೇಳಬೇಕು. ಕೆಲಸವೆಲ್ಲ ಇಂಗಳೀಸ್ ಆದರೆ ನಮ್ಮ ತಲೆ ಓಡುವುದು ಕನ್ನಡದಲ್ಲೆ ಅಂತ.
ನಾನು ನನ್ನ ಕಸೀನ್ ಗಳಿಗೆ ಹೇಳುತ್ತಿರುತ್ತೇನೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಎಂದದ್ದಕ್ಕೆ
ರೂಪಾ ಅವರೇ, ನಿಮ್ಮ ಕನ್ನಡ-ಪ್ರೇಮಕ್ಕೆ ಮೊದಲು ಎರಡೆರೆಡು ಚಪ್ಪಾಳೆ. ನಂತರ ನನ್ನ ಈ ಮಾತನ್ನು ಗಮನಿಸಿ.
ರೂಪಾ ಅವರೇ, ಈ ಮೇಲಿನ ವಾಕ್ಯದ ರೀತಿಯಲ್ಲಿ ಅನೇಕ ಪತ್ರಗಳು ವಾಚಕರ ವಾಣಿ, ಹಾಗು ಅಲ್ಲಲ್ಲಿ ಕೆಲವು ಪ್ರಕಟಣೆಗಳಲ್ಲಿಯೂ ಕಾಣುತ್ತಿರುತ್ತದೆ. ಇಲ್ಲಿ ಬೇಡವೆಂದರೂ ನಮ್ಮ ದೇಶವನ್ನು ಅಡ್ಡಡ್ಡ ಉದ್ದುದ್ದ ಸೀಳಿರುವ ಜಾತಿಯ ವಿಷಯ ಬರುತ್ತದೆ. ಇಂದು ವಾಚಕರ ವಾಣಿಯಲ್ಲಿ ಪ್ರಕಟವಾಗುವ ಈ ರೀತಿಯ ಪತ್ರಗಳಲ್ಲಿ ಈ ರೀತಿಯ ಟೀಕೆಗಳು ಇರುತ್ತವೆ.
೧. "ಹಿಂದೆ ಬ್ರಾಹ್ಮಣರು ನಮಗೆ ಸಂಸ್ಕೃತ ಕಲಿಸದೆ ಎಲ್ಲ ಜ್ಞಾನ ಅವರೇ ಇಟ್ಟುಕೊಂಡರು" ಎಂಬ ಸಂಶಯ ಅನೇಕರಲ್ಲಿದೆ.
೨. "ಈಗ ಎಲ್ಲ ಬ್ರಾಹ್ಮಣರೂ ಇಂಗ್ಲೀಷ್ ಕಲೀತಾರೆ, ಆದರೆ ಬೇರೆಯವರಿಗೆ ಮಾತ್ರ ಇಂಗ್ಲೀಷ್ ಕಲಿಯಬೇಡಿ ಅಂತಾರೆ" ಎಂಬುದು ಮತ್ತೊಂದು ಆರೋಪ.
೩. "ಬ್ರಾಹ್ಮಣರಿಗಾದರೆ ಸಂಸ್ಕೃತ, ಇಂಗ್ಲೀಷ್ ಎಲ್ಲ ಬೇಕು, ನಮಗೆ ಮಾತ್ರ ಬೇಡ್ವಾ ?" ಎಂಬುದು ಮತ್ತೊಂದು.
"ಒಂದನೇ ತರಗತಿಯಿಂದ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಸುವ" ಒಂದು ಒಳ್ಳೆಯ ಯೋಜನೆಯನ್ನು ಸರ್ಕಾರ ಆರಂಭಿಸಿದಾಗ ಕೆಲವು ಟ್ರೆಡೀಶನಲಿಸ್ಟುಗಳು ವಿರೋಧಿಸಿದರು. ಆದರೆ ದಲಿತ ಸಂಘಟನೆಗಳು ಬೆಂಬಲಿಸಿದವು. "ಇಂಗ್ಲೀಷೇನು ನಿಮ್ಮನೆ ಗಂಟಾ ?" ಎಂದು ಕೇಳುವುದರ ಹಿಂದೆ ಜಾತಿ ಅಲ್ಲದಿದ್ದರೂ, ಎಲ್ಲೋ ಒಂದು ಕಡೆ "ಜ್ಞಾನದ ಕೊಂಡಿಯನ್ನು ನಮಗೆ ನಿರಾಕರಿಸಲಾಗುತ್ತಿದೆ" ಎಂಬ ಭಾವನೆ ಮನೆ ಮಾಡಿಯೇ ಮಾಡುತ್ತದೆ.
"ಇಂಗ್ಲೀಷ್ ಬಿಟ್ಟು ಕನ್ನಡ ಮಾತಾಡು ಎಂದಾಗ, ತಮ್ಮ ಮಗು ಈ ಜಗತ್ತಿಗೆ ಬೇಕಾದ ಜ್ಞಾನ ಪಡೆಯೋಲ್ಲ" ಎಂಬುದಾಗಿ ಆ ಮಗುವಿನ ತಾಯಿಗೆ ಅನಿಸಿರುವುದೇ ಇಲ್ಲಿನ ದೊಡ್ಡ ಸಮಸ್ಯೆ. ಇಲ್ಲಿ ನೀವು ಉದಾಹರಿಸಿದ "ಆ ಒಂದು ತಾಯಿ-ಮಗು" ಒಂದು ನೆಪ ಅಷ್ಟೇ. ಆದರೆ ಇಂತಹ ಘಟನೆ ಎಷ್ಟೋ ಕುಟುಂಬಗಳಲ್ಲಿ ಇಂದು ನಡೀತಾ ಇದೆ. ನಮ್ಮ ನಮ್ಮ ಮನೆಗಳಲ್ಲಿ, ಅಕ್ಕಪಕ್ಕದ ಮನೆಗಳಲ್ಲಿ ಸ್ವಲ್ಪ ಕಣ್ಣುತೆರೆದು ನೋಡಿದರೆ ಇದು ಗೊತ್ತಾಗುತ್ತದೆ.
ಹಾಗಾಗಿ, ರೂಪಾ ಅವರೆ, ಆ ಮಗುವಿನೊಡನೆ, ಕನ್ನಡದ ಬಗ್ಗೆ ಎಮೋಶನಲ್ಲಾಗಿ ಮಾತನಾಡುವುದಕ್ಕಿಂತ ಬುದ್ಧಿವಂತಿಕೆಯಿಂದ, ಕನ್ನಡದಲ್ಲಿ ಯೋಚಿಸಿದರೆ ಹೇಗೆ ಹೆಚ್ಚು ಪ್ರಬುದ್ಧರಾಗಬಹುದು ಎಂಬುದನ್ನು ನಿರೂಪಿಸಿದಿರಾದರೆ ಆಗ ನಿಮಗೆ ೧೦೦೦೦೦ ಚಪ್ಪಾಳೆಗಳು ಸಿಗುತ್ತವೆ.
(ಈ ಕಾಮೆಂಟಿನಲ್ಲಿ ಜಾತಿಯ ಪ್ರಸ್ತಾಪ ಆಗುತ್ತಿರುವುದರಿಂದ ಯಾರಿಗಾದರೂ ಅಫೆನ್ಸೀವ್ ಎನ್ನಿಸಿದರೆ ಮನ್ನಿಸಿಬಿಡಿ. ಬೇಕಿದ್ದರೆ, ಪೇಟೆಯವರು ಮತ್ತು ಹಳ್ಳಿಯವರು ಎಂದುಕೊಳ್ಳಿ)
ಉ: ಕನ್ನಡ ಎಂದದ್ದಕ್ಕೆ
ಸುನಿಲ್‌ರವರೇ
ನಾನು ಚಪ್ಪಾಳೆಗೆ ಈ ಮಾತನ್ನು ಇಲ್ಲಿ ಬರೆದಿಲ್ಲ.
ಕನ್ನಡ ಬೆಳೆಸಬೇಕೆಂಬ ಯೋಚನೆಗೆ ಸಿಕ್ಕ ಬಹುಮಾನ ಯಾವುದು ಎಂದು ಹೇಳಿದೆ
" ಕನ್ನಡದಲ್ಲಿ ಯೋಚಿಸಿದರೆ ಹೇಗೆ ಹೆಚ್ಚು ಪ್ರಬುದ್ಧರಾಗಬಹುದು ಎಂಬುದನ್ನು ನಿರೂಪಿಸಿದಿರಾದರೆ "
ಖಂಡಿತ ನಾನು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಆದರೆ ಚಪ್ಪಾಳೆ ಗಿಟ್ತಿಸಿಕೊಳ್ಳುವುದಕ್ಕಲ್ಲ
ರೂಪ
ಉ: ಕನ್ನಡ ಎಂದದ್ದಕ್ಕೆ
ಅಯ್ಯೋ ಆ "ಚಪ್ಪಾಳೆ", ನೀವು ಆ ಮಗುವಿನಲ್ಲಿ ಕನ್ನಡದ ಪ್ರೇಮ ಬಿತ್ತಿದ್ದಕ್ಕಾಗಿ
'ಚಪ್ಪಾಳೆ' ಅಂದರೆ "ಸ್ಕೋಪು ತೊಗೊಳ್ಳೋದು ಅಂದ್ಕೋಬೇಡೀಮ್ಮ", ರೂಪಾ ಅವರೇ, ಪ್ಲೀಸ್.
ಸರಿ, ನಾನು ನನ್ನ ಮಾತನ್ನು ಹೀಗೆ ತಿದ್ದಿಕೊಳ್ಳುವೆ, "ನಾವುಗಳು, ಕನ್ನಡದಲ್ಲಿ ಯೋಚಿಸಿದರೆ ಹೇಗೆ ಹೆಚ್ಚು ಪ್ರಬುದ್ಧರಾಗಬಹುದು ಎಂಬುದನ್ನು ನಿರೂಪಿಸಿದೆವಾದರೆ, ಕನ್ನಡಕ್ಕೆ ನೈಜ ಕಾಣಿಕೆ ಸಲ್ಲಿಸಿದಂತಾಗುವುದು. ಕನ್ನಡತನ ಎಲ್ಲರಲ್ಲಿಯೂ ಮನೆಮಾಡುವದು".
ಉ: ಕನ್ನಡ ಎಂದದ್ದಕ್ಕೆ
ನೋಡಿ ವಿಪರ್ಯಾಸ. ಕನ್ನಡನಾಡಿನಲ್ಲಿ ಮಕ್ಕಳು ಇಂಗ್ಲಿಷನ್ನು ಮಾತನಾಡದಿದ್ದರೆ ’ಮುಂದೆ ಬರಲು’ ಆಗದು ಎಂದುಕೊಳ್ಳುವವರು ಒಂದು ಕಡೆ ಆದರೆ, ಪರದೇಶಿಗಳಾದ ನನ್ನಂಥ ಕೆಲವು ಹೆತ್ತವರು ಮಕ್ಕಳಿಗೆ ಕನ್ನಡದಲ್ಲಿ ಮಾತಾಡಿ ಎಂದು ದುಂಬಾಲು ಬೀಳಬೇಕಾಗುತ್ತದೆ
ರೂಪಾ ಅವರೆ, ನೀವು ಮಾಡಿದ್ದು ಒಳ್ಳೆಯ ಕೆಲಸವೇ. ಅದನ್ನು ಮಾಡಲು ಹಿಂಜರಿಕೆ ಬೇಡ. ಏಕೆಂದರೆ, ಎಲ್ಲಾದರೊಮ್ಮೆ ಆರಂಭಿಸಲೇಬೇಕಲ್ಲವೆ? ಹನಿ-ಹನಿಗೂಡಿದರೆ ತಾನೇ ಹಳ್ಳ?
ಗಚ್ಚತ್ಪಿಪೀಲಿಕಾ ಯಾತಿ ಯೋಜನಾನಾಂ ಶತಾನ್ಯಪಿ |
ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ ||
ಇರುವೆಯಾದರೇನು? ಹೋಗುತಿರಲು ದಾಟಬಹುದು ಯೋಜನ ನೂರು
ಗರುಡನಾದರೇನು? ಅಲುಗದಿರಲು ನಿಂತಲ್ಲೇ ತಾನೇ ನಿಲುವನು?
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಕನ್ನಡ ಎಂದದ್ದಕ್ಕೆ
ನನ್ನ ಒಂದು ಅನುಭವ ಹಂಚಿಕೊಳ್ಳುತ್ತೇನೆ.
ಇಲ್ಲಿಯ (ಮುಂಬಯಿ)ಯ ನನ್ನೊಬ್ಬ ಸಹೋದ್ಯೋಗಿ , ಅವರ ಹೆಂಡತಿ ಇಬ್ಬರೂ ಅಪ್ಪಟ ಕನ್ನಡಿಗರು. ಪರಸ್ಪರ ಕನ್ನಡದಲ್ಲಿಯೇ ಮಾತಾಡುವವರು.
ಆದರೆ ಬೆಳೆಯುತ್ತಿರುವ ಮಕ್ಕಳೊಂದಿಗೆ ಬರೀ ಇಂಗ್ಲೀಷು !! ಅವರ ಸಣ್ಣ ಮಗನೊಂದಿಗೆ ನಾನು ಬೇಕೆಂದೇ ಕನ್ನಡ ಮಾತನಾಡಲು ಶುರು ಮಾಡಿದೆ. ಈಗ ಸುಮಾರಷ್ಟು ಕಲಿತಿದ್ದಾನೆ. ನನ್ನ ನೋಡಿದಾಗಲೆಲ್ಲ ಕನ್ನಡದಲ್ಲಿಯೇ ಶುರು ಮಾಡುತ್ತಾನೆ.
ಉ: ಕನ್ನಡ ಎಂದದ್ದಕ್ಕೆ
ಅವಳು ಇಂಗ್ಲೀಷೆ ಕಲೀಲಿ ಬಿಡಿ. ಆಮೇಲೆ "ಫಾರಿನ್" ಗೆ ಹೋದಾಗ ನಮ್ಮಂತೆ ಕಷ್ಟಪಟ್ಟು ಕನ್ನಡದಲ್ಲಿ ಓದೋದು, ಬರೆಯೋದು ಮಾಡ್ತಾಳೆ
ನಮ್ಮ ದೇಶ, ಭಾಷೆ , ಜನ - ದುರ್ಲಭವಾದಾಗ ಮಾತ್ರ ನಮಗೆ ಅವುಗಳ ಮೌಲ್ಯ ಹೆಚ್ಚಾಗಿ ತಿಳಿಯುತ್ತೆ!