26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಿನುಗೆಲೆ ಮಿನುಗೆಲೆ ಮಿಣುಕು ಹುಳ

April 18, 2011 - 4:43pm
sasi.hebbar

ಮಳೆಗಾಲದ ಒಂದು ರಾತ್ರಿ. ಮಳೆಯ ಕಾರ್ಮೋಡಗಳಿದ್ದರೂ, ಮಳೆ ಆಗ ತಾನೆ ನಿಂತಿತ್ತು. ತಂಗಾಳಿ ಬೀಸುತ್ತಿತ್ತು. ಕಾಡಿನ ಕಿಬ್ಬದಿಯಾದ್ದರಿಂದ ಸುತ್ತಲೂ ಕತ್ತಲು. ಅನತಿ ದೂರದ ಮರವೊಂದರಲ್ಲಿ ಜಗಮಗನೆ ಬೆಳಕು! ಏನದು? ಸೀರಿಯಲ್ ಸೆಟ್ ಬೆಳಕಿನಂತೆ, ಆಗಾಗ ಬೆಳಕಾಗಿ ಪುನ:ಕತ್ತಲಾಗುತ್ತಿರುವ ಮೋಹಕ ನೋಟ. ನಾಲ್ಕಾರು ಸೆಕೆಂಡುಗಳ ವಿರಾಮದ ನಂತರ ಪುನ: ಝಗ್ಗನೆ ಮರವಿಡೀ ಬೆಳಗುವ ದೃಶ್ಯ. ಈ ರೀತಿ ಸುಮಾರು ಅರ್ಧ ಗಂಟೆಯ ಬೆಳಕಿನಾಟದ ನಂತರ ಕ್ರಮೇಣ ಮತ್ತೆ ಮಾಮೂಲಿ ಕತ್ತಲು. ಮಳೆ ನಿಂತರೂ ನಿಲ್ಲದ ಹನಿಗಳಂತೆ, ಅಲ್ಲಲ್ಲಿ ನಾಲ್ಕಾರು ಮಿಣುಕು ಬೆಳಕುಗಳು ಹಾರುತ್ತಾ ಬೆಳಕು ಬೀರುತ್ತಿದ್ದವು. ಇದು ಆ ರಾತ್ರಿಯ ಕೌತುಕದ ನೋಟ. ಕೊನೆಗೂ ಮಿಂಚು ಹುಳ ಅಥವಾ ಮಿಣುಕು ಹುಳಗಳ ಸಭೆ ಮುಗಿದಿತ್ತು. ಮಳೆಗಾಲದ ರಾತ್ರಿಗಳಲ್ಲಿ ಮಾತ್ರ ನಡೆಯುವ ಈ ಸಭೆಯನ್ನು ಕಂಡು ನಮಗೆ, ಮಕ್ಕಳಿಗೆ ಭಾರೀ ಅಚ್ಚರಿ.

ಕರಾವಳಿಯ ಹಳ್ಳಿಗಳಲ್ಲಿ ಒಂದು ನಂಬಿಕೆ ಇದೆ. ರಾತ್ರಿಯ ವೇಳೆ ಬೆಳುಕು ಬೀರುತ್ತಾ, ಗದ್ದೆ-ತೋಟಗಳಲ್ಲಿ, ಹಾಡಿಗಳಲ್ಲಿ ಹಾರಾಡುವ ಮಿಂಚು ಹುಳಗಳಲ್ಲಿ ಕೆಲವು ಹುಳಗಳು ನಮ್ಮ ಪೂರ್ವಜರ ಆತ್ಮದ ರೂಪ ಆಗಿರಬಹುದು ಎಂದು. ಆಕಸ್ಮಿಕವಾಗಿ ಮನೆಯೊಳಕ್ಕೆ ಹಾರುತ್ತಾ ಬರುವ ಮಿಂಚು ಹುಳ ಸದಾ ಕುತೂಹಲದ ಕೇಂದ್ರ. ಮಕ್ಕಳಿಗಂತೂ ಅವು ಅಚ್ಚುಮೆಚ್ಚು. ದೊಡ್ಡವರಿಂದಲೂ, " ಅಗಾ!! ಮಿಂಚುಳ ಮನೆ ಒಳ್ಗೇ ಬಂತು, ಕಾಣಿ " ಎಂಬ ಉದ್ಗಾರ. ನೋವಾಗದಂತೆ ಅದನ್ನು ಹಿಡಿದು, ತೆಳ್ಳನೆಯ ಬಟ್ಟೆಯೊಂದರಲ್ಲಿ ಬಿಗಿದಿಡುತ್ತಾರೆ. ಆ ಮಿಂಚು ಹುಳ ಬೆಳಗಿನ ತನಕ ಆ ಬಟ್ಟೆಯ ಗಂಟಿನಲ್ಲೇ ಉಳಿದುಕೊಂಡಿದ್ದರೆ, ಅದು ಮಾಮೂಲಿ ಮಿಂಚುಹುಳ. ಬೆಳಗಿನ ವೇಳೆಗೆ ಆ ಬಟ್ಟೆಯ ಗಂಟಿನಿಂದ ಕಣ್ಮರೆಯಾಗಿದ್ದರೆ, ಅದು ನಮ್ಮ ಪೂರ್ವಜರ ಆತ್ಮ ಎಂಬ ಭಾವ - ಇದು ಅಲ್ಲಿದ್ದ ಜಾನಪದ ನಂಬಿಕೆ, ಅಷ್ಟೆ.
ಅದೇನಿದ್ದರೂ, ಮಿಣುಕು ಹುಳಗಳು ಬೆಳಕನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ ಮಾತ್ರ ಅದ್ಭುತವಾದದ್ದು. ಉಷ್ಣತೆಯನ್ನು ಉತ್ಪಾದಿಸದೆ, ಶಕ್ತಿಯನ್ನು ಪೂರ್ತಿಯಾಗಿ ಬೆಳಕಿಗೆ ಪರಿವರ್ತಿಸುವ ಮಿಣುಕು ಹುಳುಗಳ ತಾಕತ್ತಿನ ರಹಸ್ಯವನ್ನು ಆಧುನಿಕ ಜಗತ್ತು ಇನ್ನೂ ಪೂರ್ತಿಯಾಗಿ ಅರ್ಥಮಾಡಿಕೊಂಡಿಲ್ಲ ಎನ್ನಬಹುದು. ಒಂದು ವೇಳೆ ಆ ರಹಸ್ಯವನ್ನು ಬೇಧಿಸಿದರೆ, ಈಗಿರುವ ಬಲ್ಬು, ಸಿ.ಎಲ್.ಎಫ್., ಟ್ಯೂಬ್ ಲೈಟ್ ಗಳು ಬೀರುವ ಬೆಳಕಿನ ಪ್ರಮಾಣವನ್ನು ಮತ್ತಷ್ಟು ಉತ್ತಮಗೊಳಿಸಬಹುದಾದ ಸಾಧ್ಯತೆ ಇದೆ. ಏಕೆಂದರೆ, ಇಂದು ಬಳಕೆಯಲ್ಲಿರುವ ಬೆಳಕು ಬೀರುವ ವಸ್ತುಗಳೆಲ್ಲವೂ, ಬೆಳಕಿನ ಜೊತೆಜೊತೆಗೇ ಸಾಕಷ್ಟು ಶಾಖವನ್ನೂ ಉತ್ಪಾದಿಸಿ, ಅಷ್ಟರಮಟ್ಟಿಗಿನ ಶಕ್ತಿಯನ್ನು ಅನಾವಶ್ಯಕವಾಗಿ ವ್ಯಯಮಾಡುತ್ತವೆ. ಮಿಣುಕುಹುಳುಗಳು ತಾವು ವ್ಯಯಿಸುವ ಶಕ್ತಿಯ ಸುಮಾರು ಶೇ.೧೦೦ ರಷ್ಟನ್ನು ಬೆಳಕಾಗಿ ಉತ್ಪಾದಿಸುವುದರಿಂದ, ಅವುಗಳ ಈ ಪ್ರಕ್ರಿಯೆಯು ಇಂದಿಗೂ ಒಂದು ಅಚ್ಚರಿಯಾಗೇ ಉಳಿದುಕೊಂಡಿದೆ. ವಿಕಾಸವಾದದ ಹಿನ್ನೆಲೆಯಲ್ಲಿ ಈ ಶಕ್ತಿ ಬೆಳೆದುಬಂದ ಬಗೆಯನ್ನು ವಿವರಿಸುವುದು ಜಟಿಲವೆಂದು ತಿಳಿಯಲಾಗಿದೆ.


ನಮ್ಮ ಸಹ್ಯಾದ್ರಿಯ ಕಾಡುಗಳಲ್ಲಿ ಮತ್ತು ಕಾಡಿನಂಚಿನ ಊರುಗಳಲ್ಲಿ ,ಮಿಂಚುಹುಳಗಳಂತೆಯೇ, ಬೆಳಕನ್ನು ಉತ್ಪಾದಿಸಬಲ್ಲ ಇನ್ನೂ ಹಲವಾರು ಜೀವಿಗಳಿವೆಯೆಂದರೆ ಅಚ್ಚರಿಯೆ? ಗಾಳಿಯಲ್ಲಿ ಹಾರಾಡುವ ಚಿಕ್ಕ ಚಿಕ್ಕ ಕೀಟಗಳಾದ ಮಿಂಚು ಹುಳಗಳು ಹೆಚ್ಚು ಪರಿಚಿತವಾದರೆ, ನೆಲದ ಮೇಲೆ ವಾಸಿಸುವ ಮಿಂಚು ಹುಳಗಳೂ ಹಲವು ಇವೆ. ಕೆಲವು ಅಣಬೆಗಳೂ ಬೆಳಕನ್ನು ಬೀರುತ್ತವೆ. ತುಂಬ ಹಳೆಯದಾದ ಮರದ ಮೇಲೆ ಬೆಳೆಯಬಲ್ಲ ಈ ಅಣಬೆಗಳು, ಕೆಲವು ಬಾರಿ ಇಡೀ ಮರವನ್ನು ಆಕ್ರಮಿಸಿ, ಮರಕ್ಕೆ ಮರವೇ ಜಗಮಗನೆ ಹೊಳೆಯುವ ಭ್ರಮೆಯನ್ನು ಮೂಡಿಸಬಹುದು. ದಟ್ಟಕಾಡಿನಲ್ಲಿ, ಕಗ್ಗತ್ತಲ ರಾತ್ರಿಯಲ್ಲಿ, ಮೈಪೂರ್ತಿ ಬೆಳಗುವ ಹಳೆಯ ಮರವೊಂದರ ದೃಶ್ಯವನ್ನು ಕಂಡವರಿಗೆ ಯಾರಿಗಾದರೂ, ಎದೆ ಜಗ್ ಎನ್ನಲೇಬೇಕು. ಲಡ್ಡು ಮರದ ಮೇಲೆ ಬೆಳೆದ ನೂರಾರು ಅಣಬೆಗಳಿಂದಾಗಿ ಈ ಬೆಳಕು ಎಂದು ಅರಿವಾಗಲು ಬೆಳಗಿನ ತನಕ ಕಾಯಬೇಕು!


ಬೆಳಕನ್ನು ಉತ್ಪಾದಿಸಬಲ್ಲ ಇನ್ನೊಂದು ಜೀವಿ ಎಂದರೆ, "ಸರಸ್ವತಿ ಚೇಳು". (ಬೇರೆ ಬೇರೆ ಪ್ರಾಂತ್ಯದಲ್ಲಿ ಬೇರೆ ಹೆಸರಿರಲೂಬಹುದು). ನಾಲ್ಕಾರು ಸೆಂಟಿಮೀಟರ್ ಉದ್ದ ಇರುವ ದಟ್ಟ ಹಸಿರು ಬಣ್ಣದ ತೆಳ್ಳನೆಯ ಈ ಹುಳು ನೋಡಲು ಎರೆಹುಳವನ್ನು ಹೋಲುತ್ತದೆ. ರಾತ್ರಿ ಹೊತ್ತು ಮನೆಯೊಳಗೆ ಬಂದ ಇದನ್ನು ಅಕಸ್ಮಾತ್ ಮುಟ್ಟಿದರೆ ಅಥವಾ ಕಡ್ಡಿಯಿಂದ ದೂಡಿದರೆ, ಅದರ ದೇಹದ ಆ ಭಾಗ ಬೆಳಕು ಬೀರಲು ಆರಂಬಿಸುತ್ತದೆ. ಅದೊಂದು ಸಂರಕ್ಷಣೆಯ ತಂತ್ರವಿರಬಹುದೆ? ಪೊರಕೆಯ ಸಹಾಯದಿಂದ ಅದನ್ನು ಹೊರೆಗೆ ಎಸೆಯುವಾಗ, ಪೊರಕೆ ತಾಗಿದಲ್ಲೆಲ್ಲಾ ಬೆಳಕು ಬೀರಲು ಶುರುವಾಗಿ, ಅದರ ದೇಹವಿಡೀ ಮಿನುಗುತ್ತದೆ. ವಿದ್ಯುತ್ ದೀಪಗಳ ಬಳಕೆ ಬಂದ ನಂತರ, ಹೊಳೆಯುವ ಮೈನ ಸರಸ್ವತಿ ಚೇಳಿನ ನೋಟ ಅಪರೂಪವಾಗುತ್ತಿದೆ. ಈ ಸರಸ್ವತಿ ಚೇಳಿನ ಕುರಿತು ಜನರಲ್ಲಿ ಪೂಜ್ಯ ಭಾವನೆ ಇದ್ದು, ಮನೆಯೊಳಗೆ ಬಂದ ಅದನ್ನು ಸಾಯಿಸಬಾರದು ಎನ್ನುತ್ತಾರೆ.ಅದು ನಿರುಪದ್ರವಿ ಸಹಾ.


ಸಮುದ್ರದಲ್ಲಿರುವ ಕೆಲವು ಜೀವಿಗಳು ಬೆಳಕನ್ನು ಬೀರಬಲ್ಲವಂತೆ. ಒಂದು ಜಾತಿಯ ಪಾಚಿ, ಕೆಲವು ಮೀನುಗಳು ಬೆಳಕುಬೀರುವ ಜಲವಾಸಿಗಳು.

 

ಇಲ್ಲಿ ಮತ್ತೊಂದು ವಿಚಾರವನ್ನು ಪ್ರಸ್ತಾಪ ಮಾಡಿದರೆ ಅಪ್ರಸ್ತುತವಾಗಲಾರದೇನೊ. ನಮ್ಮ ನಾಡಿನ ವಿದ್ಯಾರ್ಥಿಗಳನ್ನು ಕೇಳಿ ನೋಡಿ - ಕರ್ನಾಟಕದಲ್ಲಿರುವ ಮಿಂಚು ಹುಳಗಳ ಬಗ್ಗೆ ಅವರಿಗೇನು ಗೊತ್ತು?ಎಂದು. ಅವರಿಗೆ ಈ ಕುರಿತು ಹೆಚ್ಚಿನ ತಿಳುವಳಿಕೆ ಇಲ್ಲ. ಏಕೆಂದರೆ, ನಮ್ಮ ಪಠ್ಯಪುಸ್ತಕಗಳಲ್ಲಿ ಈ ಕುರಿತು ಬಗ್ಗೆ ಜಾಸ್ತಿ ವಿವರಣೆ ಇಲ್ಲ. ಸಹ್ಯಾದ್ರಿ ಕಾಡುಗಳಲ್ಲಿ, ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಮಿಂಚು ಹುಳುಗಳ ಕುರಿತು ಪಾಠಗಳು ಪ್ರಾಥಮಿಕ ತರಗತಿಗಳಲ್ಲಿದ್ದರೆ, ನಮ್ಮ ಮಕ್ಕಳಿಗೆ ಆ ವಿಚಾರದ ತಿಳುವಳಿಕೆ ನೀಡಿದಂತಾಗುತ್ತದೆ.


ಕಗ್ಗತ್ತಲ ರಾತ್ರಿಯಲ್ಲಿ, ಮೆಲ್ಲಗೆ ಹಾರಾಡುತ್ತಾ ಕತ್ತಲ ತೆರೆಯಮೇಲೆ ಅಮೂರ್ತ ಚಿತ್ರಗಳನ್ನು ಬರೆದು, ಮನಸ್ಸಿನಲ್ಲಿ ಅದೇನೋ ಹೇಳಲಾಗದ ಅನುಭೂತಿಯನ್ನು ಹುಟ್ಟಿಸುವ ಮಿಣುಕು ಹುಳುಗಳು , ಬಾಲ್ಯಕಾಲದಲ್ಲಿ ನಮ್ಮಲ್ಲಿ ಮೂಡಿಸಿದ ಬೆರಗು ಇಂದೂ ಮನದ ಮೂಲೆಯಲ್ಲಿ ಅಚ್ಚಳಿಯದ ಪುಟ್ಟ ಕವನದಂತಿದೆ.

-ಶಶಿಧರ ಹೆಬ್ಬಾರ ಹಾಲಾಡಿ.

ಚಿತ್ರ ಕೃಪೆ:members.fortunecity.com

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ನಂದೀಶ್ ಬಂಕೇನಹಳ್ಳಿ on

ಹೌದು,ಮಿಂಚುಹುಳಗಳು ಕಾಡಿನ ನಕ್ಷತ್ರಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sasi.hebbar on

ನಿಮ್ಮ ಊರಲ್ಲೂ ಸಾಕಷ್ಟು ಮಿಂಚು ಹುಳುಗಳು ಇರಬೇಕು. ಕ್ಲಿಕ್ ಮಾಡಿ ಚಿತ್ರ ಒದಗಿಸುವಿರಾ?ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Aravind M.S on

ಶಶಿಯವರಿಗೆ ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.

ವಿಶೇಷವಾಗಿ ಅಮಾವಾಸ್ಯೆ ರಾತ್ರಿಯ ಕಾರ್ಗತ್ತಲಿನಲ್ಲಿ ಇವುಗಳ ಬೆಳಕು ಕತ್ತಲಲ್ಲಿ ಅಲ್ಲಲ್ಲಿ ಬೆಸೆದು ಎದ್ದು ಕಂಡು ಗಂಭೀರವಾಗಿ, ಪ್ರಕೃತಿಯ ನಿಗೂಢ ಸೃಷ್ಟಿಯ ಅಗಾಧ ಶಕ್ತಿಯ ಅನುಭವ ಉಂಟುಮಾಡುತ್ತದೆ.

- ಅರವಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Manjunatha D G on

ಶಶಿಧರ್ ರವರೇ, ನಿಮ್ಮ ಮಿಣುಕು ಹುಳು, ಮಿಡಿ ಮಾವಿನ ಉಪ್ಪಿನ ಕಾಯಿ, ರಂಜದ ಹೂ, ಈ ಎಲ್ಲ ಪ್ರಬಂಧಗಳಲ್ಲಿ ಗ್ರಾಮೀಣ ಸೊಗಡಿದೆ. ನೀವು ಇವೆಲ್ಲವನ್ನೂ ಬಾಲ್ಯದ ದಿನಗಳಲ್ಲಿ ಅನುಭವಿಸಿದ್ದೀರಿ. ಬರಿ ಪುಸ್ತಕದ ಬದನೆ ಕಾಯಿ
ವಿಧ್ಯೆಯಾಗಲಾರದು. ಪರಿಸರವನ್ನು ಹತ್ತಿರದಿಂದ ವೀಕ್ಷಿಸುವುದು, ಅನುಭವಿಸುವುದು, ಸಂತಸ ಪಡೆಯುವುದು ಸಹ ವಿಧ್ಯಾಭ್ಯಾಸದ ಒಂದು ಭಾಗವೇ ಸರಿ. ಇಂತಹದೇ ಹಲವು ಲೇಖನಗಳು ನಿಮ್ಮಿಂದ ಸಂಪದದಲ್ಲಿ ಮೂಡಿಬರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sasi.hebbar on

ಮಂಜುನಾಥ್, ಒಳ್ಳೆಯ ಪ್ರೋತ್ಸಾಹದ ನುಡಿಗಳನ್ನು ನನಗೆ ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.